ಆಶಯ-ಅಪಚಾರ

ಆಶಯ-ಅಪಚಾರ

ಧ್ಯೇಯ-ತತ್ವ-ಭಾವಗಳ
ಘನಮೌಲ್ಯ…
ಕಲ್ಯಾಣ ರಾಜ್ಯದ ಕನಸು ಹೊತ್ತ
ಆಶೋತ್ತರಗಳ ಸಮರ್ಥ ಪ್ರದರ್ಶನ…
ಸಂವಿಧಾನ…!

ನ್ಯಾಯ-ಸ್ವಾತಂತ್ರ್ಯ-ಸಮಾನತೆ
ಅಕ್ಷರಗಳ ಆದರ್ಶವಲ್ಲ…
ಅಧಿಕೃತ ಧೃಢಸಂಕಲ್ಪ..
ನಮಗೆ ನಾವೇ ಅರ್ಪಿಸಿಕೊಂಡ ಬದ್ಧತೆ…!
ಶತಮಾನಗಳ ದಾಸ್ಯದ
ಪಥ ಬದಲಿಸಿದ
ಜನಪ್ರಭುತ್ವದ ಚಾರಿತ್ರಿಕ ಹೆಜ್ಜೆ..!

ಸವೆದ ದಾರಿಯುದ್ದಕೂ
ಸಂವಿಧಾನದ ಮೆರವಣಿಗೆ
ಆದರ್ಶ-ಆಶಯಗಳು ಘೋಷಣೆ…
ಅಷ್ಟೇ..
ಜಾತಿ-ಧರ್ಮಗಳ
ಮಸಿ ಮೆತ್ತಿಕೊಂಡ ರಾಜಕೀಯ
ಮತೀಯ ಗಲಭೆಯಲಿ
ಹೊತ್ತಿ ಉರಿದ ಮಾನವ ಸಂಬಂಧ
ಬಿಡುಗಡೆ ಹೊಂದಿಲ್ಲ
ಮಹಿಳೆ-ದಲಿತ
ಅಸಮಾನತೆ-ಅಪಮಾನಗಳಿಂದ..

ಆಶ್ವಾಸನೆಗಳಲಿ ಸದ್ದುಮಾಡಿ
ಸುಮ್ಮನಾಗುತ್ತಿವೆ….
ಅನ್ನ-ಆರೋಗ್ಯ-ಉದ್ಯೋಗ..!
ಸತ್ಯಧರ್ಮವ ಸುತ್ತಿಟ್ಟ ಮಾಧ್ಯಮ
ಕೇವಲ ಉಪದೇಶಗಳಾಗಿ
ಗದ್ದುಗೆ ಏರಿ ಕುಳಿತಿವೆ
ನಿರ್ದೇಶಕ ತತ್ವಗಳು…!

ಅರೆ ಬರೆ ಸ್ವಾತಂತ್ರ್ಯದ
ಮೂಕ ಸಮಾಜ
ಮೌಲ್ಯಗಳ ಮಾರಾಟಕ್ಕಿಟ್ಟ
ಸ್ವಾರ್ಥ ಪ್ರಭುತ್ವ
ಕರ್ತವ್ಯ ಮರೆತ ಭ್ರಷ್ಟ ಅಧಿಕಾರಿ
ಇಂಥವರ ಹೊತ್ತು ಮೆರೆಸುತ್ತಿರುವ
ಸತ್ತ ಪ್ರಜೆ…!

ಪಲಾಯನಗೈದಿದೆ ಸಮಾಜವಾದ
ಬಡವರೇ ಇರುವ
ಶ್ರೀಮಂತರ ರಾಷ್ಟ್ರದಲಿ….!
ಬದಲಾಗಬೇಕು…
ಬದುಕಾಗಬೇಕು ಬರೆದ ಸಂವಿಧಾನ
ಭವ್ಯ ಭಾರತದ ಭದ್ರ ಬುನಾದಿಗೆ..!

 


ಪ್ರೊ ಜಯಶ್ರೀ. ಎಸ್.ಭಮಸಾಗರ(ಶೆಟ್ಟರ)
ಇಳಕಲ್ಲ

Don`t copy text!