ಒಳ್ಕಲ್ಲ ಒಡಲು ಕಾದಂಬರಿಯ ಒಡಲು
“ಒಳ್ಕಲ್ಲ ಒಡಲು” ಇದು ಕಾದಂಬರಿ, ‘ನೊಂದವರ ನೋವು…’ ಅದರ ಟ್ಯಾಗ್ ಲೈನ್. ಇದನ್ನು ‘ಸಿಕಾ’ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರು ರಚಿಸಿದ್ದಾರೆ. ಇದರಲ್ಲಿ ಹೆಣ್ಣಿನ ಮನೋರಂಗದ ಮಿಡಿತ – ತುಡಿತಗಳ ಸಂಗತಿಯನ್ನು ಅನಾವರಣಗೊಳಿಸಿದ್ದಾರೆ.
ಒಳ್ಕಲ್ಲ ಒಡಲು ಹೆಸರೇ ಸೂಚಿಸುವಂತೆ ಕಲ್ಲಿನ ಒಳ್ಳು ಎಷ್ಟೆಲ್ಲಾ ಪೆಟ್ಟು ತಿನ್ನುತ್ತಲೇ ಇರುತ್ತದೆ. ಒನಕೆ, ಹಾರಿ ಹೀಗೆ ಅವರವರ ಅನುಕೂಲಕ್ಕೆ ತಕ್ಕಂತೆ ಬಳಸುವರು. ಆದರೆ ಯಾರಿಗೂ ಗೊತ್ತಿಲ್ಲ ಅದರ ಅಂತರಂಗದ ನೋವು ಏನೆಂದು? ಅದರ ಒಡಲಿನ ಸಂಕಟ ಅರಿತವರಾರು? ಇದಕ್ಕೆ ರೂಪಕವಾಗಿ ಹೆಣ್ಣನ್ನು ತುಲನೆ ಮಾಡುತ್ತ ಅವಳು ಏನೆಲ್ಲಾ ತನ್ನ ಅಂತರಂಗದಲ್ಲಿ ಅನುಭವಿಸುತ್ತ, ಹೊರ ಜಗತ್ತಿಗೆ ಮುಖವಾಡವನ್ನು ಧರಿಸಿ ಬದುಕುವ ಒಬ್ಬ ಅತೃಪ್ತ ಮಹಿಳೆಯ ಚಿತ್ರಣವನ್ನು ಈ ಕಾದಂಬರಿಯಲ್ಲಿ ನೀಡಿದ್ದಾರೆ.
ಇದರ ಕಥಾ ನಾಯಕಿ ಲಯ ಸಂಗೀತವನ್ನು ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿರುತ್ತಾಳೆ. ಕಥಾ ನಾಯಕ ಅರಿವು ಕವಿ, ಕಲಾ ಪೋಷಕ ಮೇಲಾಗಿ ಹೃದಯವಂತ ಸಜ್ಜನ. ಅರಿವು ಬರೆದ ಕವನಕ್ಕೆ ಲಯ ಧ್ವನಿಯಾಗುವ ಬೇಡಿಕೆಯೊಂದಿಗೆ ಕಾದಂಬರಿ ಆರಂಭವಾಗುವುದು. ಆದರೆ ಲಯಳಿಗೆ ಆತನ ಒತ್ತಾಯ ಇಷ್ಟವಾಗದೆ ತನ್ನದೇ ವೈಯಕ್ತಿಕ ಜೀವನದ ಸಮಸ್ಯೆಯಲ್ಲಿ ತೊಳಲಾಡುತ್ತಿರುತ್ತಾಳೆ. ಹಾಗಂತ ಎರಡೂ ಪಾತ್ರಗಳು ಹದಿಹರೆಯದವರಲ್ಲ. ಬದುಕಿನಲ್ಲಿ ಮಾಗಿದವರು. ಅವಳಿಗೆ ಮೊಮ್ಮಗ ಹುಟ್ಟಿದ್ದರೆ, ಅರಿವು ಅವನು ಎರಡು ಮಕ್ಕಳ ತಂದೆ ಮೇಲಾಗಿ ವಿಧುರ. ಇಬ್ಬರಲ್ಲಿ ಸಾಮ್ಯತೆ ಎಂದರೆ ಇಬ್ಬರೂ ಸಾಹಿತ್ಯ, ಸಂಗೀತಾಸಕ್ತಿಯ ಸಹೃದಯಿಗಳು.
ಲಯಳ ಗಂಡ ವಿನೋದ ಅಪ್ಪಟ ಪುರುಷ ಷಾಹಿ ಮನಃಸ್ಥಿತಿಯುಳ್ಳವನು. ಹೆಂಡತಿಯಾದವಳು ತನ್ನ ಅಡಿಯಾಳು. ಅವಳಿಗೆ ಯಾವುದೇ ಭಾವನೆಗಳಿಲ್ಲದೆ ಯಂತ್ರದಂತಿರಬೇಕೆಂಬ ನಿರೀಕ್ಷೆ. ಆದರೆ ಲಯ ಬಾಲ್ಯದಲ್ಲಿ ತಂದೆಯಿಂದ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವಳು. ಸುಸಂಸ್ಕೃತ ಕುಟುಂಬದಿಂದ ಬಂದ ಇವಳಿಗೆ ಮದುವೆ ಅಕ್ಷರಶಃ ಬಂಧನವಾಗುತ್ತದೆ. ಗಂಡನದು ಸದಾ ಸಂಶಯದ ದೃಷ್ಟಿ. ಎಲ್ಲೂ ಅವಳನ್ನು ಹೊರಬಿಡದೆ ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ಕಾಯುವವ. ಮೊದಲ ಮಗು ಹೆಣ್ಣಾದಾಗ ಇನ್ನೂ ಹಿಂಸೆ ನೀಡಲು ಅವಕಾಶ ನೀಡಿತು. ಮುಂದಿನ ಆರು ಗರ್ಭವನ್ನು ಹೆಣ್ಣೆಂದೆ ತೆಗೆಸುವ ವಿಕೃತ ಮನಸ್ಸು. ತಾಯಿ ಹೇಳಿದ ಹಿತವಚನದಂತೆ ಅನುಸರಿಸಿ ಬಾಳಬೇಕು ಎಂದು ಹಾಗೆ ನಡೆಯುವಳು. ಕೊನೆಗೆ ಮಗಳ ಮದುವೆ ಬಾಣಂತನ ವಿದೇಶದಲ್ಲಿ ಅವಳು ನೆಲೆ ನಿಂತಾಗ ಇವಳಿಗೆ ನಿರುಮ್ಮಳ.
ದೇವರ ಮುಂದೆ ಸೀಮಿತ ವಾದ ಲಯಳ ಸಂಗೀತ ಮೂವತ್ತು ವರ್ಷದ ನಂತರ ವೇದಿಕೆ ಏರುತ್ತದೆ. ಅದಕ್ಕೆ ಜನ ಮನ್ನಣೆ ಕೂಡ ಸಿಗುವುದು ಗಂಡ ಮಾತ್ರ ದೂರವಾಗುತ್ತಾನೆ. ಇಬ್ಬರ ನಡುವೆ ಕಂದಕ ಉಂಟಾಗಿ ಅದು ಅವಳಿಗೆ ಬೇಕಾಗಿತ್ತು ಹಾಗಾಗಿ ಸಹ್ಯ ಎನ್ನಿಸುವುದು. ಸಂಗೀತವೇ ಸರ್ವಸ್ವ ಎಂದುಕೊಂಡ ಅವಳಿಗೆ ಪಾಟೀಲ್ ಎಂಬ ಕಾರ್ಯಕ್ರಮ ಸಂಯೋಜಕನ ಪರಿಚಯವಾಗಿ ಅವನ ಸೋಗಲಾಡಿತನ ತಿಳಿದು ಇನ್ನಷ್ಟು ಕುಗ್ಗಿ ಹೋಗುತ್ತಾಳೆ. ಪುರುಷ ಸಮುದಾಯವನ್ನು ಸಂಶಯದಿಂದ ನೋಡುವ ಮನಸ್ಥಿತಿಯಲ್ಲಿ ಅರಿವು ಪರಿಚಯವಾಗುತ್ತಾನೆ. ಆದರೆ ಅವನ ಸ್ನೇಹ ಒಪ್ಪದೆ ಒದ್ದಾಡುವಳು.
ಕಾಲ ಕಳೆದಂತೆ ಅರಿವು ಅವನ ನಿಷ್ಕಲ್ಮಶ ಪ್ರೀತಿ, ಸದಾ ಅವಳಿಗಾಗಿ ತುಡಿಯುವ ಮನ ಅವಳ ಆರಾಧಕನಾಗಿ ಕಾಣುತ್ತಾನೆ. ಅವಳಲ್ಲಿರುವ ಸಂಗೀತವನ್ನು ಪೋಷಿಸುವ ಬೆಳೆಸುವ ಗುರುವಾಗಿ, ಮಾರ್ಗದರ್ಶಕನಾಗಿ ಮುನ್ನಡೆಸುವ ರೂವಾರಿಯಾದಾಗ ಲಯ ಸಮಾಜದ ಎಲ್ಲ ಸಂಕೋಲೆಗಳನ್ನು ಕಿತ್ತೊಗೆದು ವಿದೇಶದಲ್ಲಿ ವಚನ ಸಾಹಿತ್ಯದ ಪ್ರತಿಪಾದಕರಾಗಿ ಇಬ್ಬರೂ ನೆಲೆ ನಿಲ್ಲುತ್ತಾರೆ. ಇದು ಕಥಾವಸ್ತು.
ಲಯ ಮತ್ತು ಅರಿವು ಸಾಧಿಸ ಹೊರಟಿದ್ದು ಬೌದ್ಧಿಕ ಸಾಹಚರ್ಯ. ಸಂಗಾತಿಗಳಲ್ಲಿ ಇರಬೇಕಾದದ್ದು ವೈಚಾರಿಕ ಸಮಾನತೆ. ಗಂಡು ಹೆಣ್ಣು ಎಂಬ ಜೈವಿಕ ವ್ಯತ್ಯಾಸ ಅಳಿಸಿ ಒಬ್ಬರಿಗೆ ಒಬ್ಬರು ಪೂರಕವಾಗಿ ಕಾಮದ ವಾಸನೆ ಮೀರಿ ಬೆಳೆಯುವ ಆಶಯ. ಹಾಗೆ ನಿರ್ಧರಿಸಿ ದಶಕಗಳ ಕಾಲ ಬದುಕಿದರು.
ಆದರೆ ಕಾದಂಬರಿಯಲ್ಲಿ ನಾಯಕ ನಾಯಕಿ ಅಂದರೆ ಈಗಾಗಲೇ ಹೇಳಿದಂತೆ ಇಬ್ಬರೂ ವಯಸ್ಕರು. ಅವರು ಭೇಟಿಯಾಗುವ ಸಂದರ್ಭದಲ್ಲಿ ಸಿನಿಮೀಯವಾಗಿ ಮೂಡಿಬಂದಿದೆ. ಓಡುವ ರೈಲಿನಲ್ಲಿ ಲಯ ಹತ್ತುವಾಗ ಅರಿವು ಕೈ ನೀಡಿ ಹತ್ತಿಸಿಕೊಳ್ಳುವುದು, ಕೊನೆಯಲ್ಲಿ ಇಬ್ಬರೂ ಒಂದೇ ವಿಮಾನದಲ್ಲಿ ಅಚಾನಾಕ ಆಗಿ ಭೇಟಿಯಾಗಿ ವಿದೇಶಕ್ಕೆ ಹಾರುವುದು ಎಲ್ಲವೂ ಕಾಕತಾಳೀಯವಾಗಿ ಕಂಡರು ಇದು ಸಾದ್ಯವೆ ಎನ್ನುವಂತಿದೆ. ಅರಿವು ಲಯಳಲ್ಲಿ ಇಟ್ಟಂತ ನಿಷ್ಕಾಮ ಪ್ರೇಮ, ಅವಳಿಗಾಗಿ ತನ್ನ ಬದುಕನ್ನೇ ಮುಡಿಪಾಗಿಡುವ ತನ್ನ ವೈಯಕ್ತಿಕ ಜವಾಬ್ದಾರಿ ತೊರೆದು ಅವಳೊಂದಿಗೆ, ಅವಳಿಗಾಗಿ ಬದುಕಬೇಕೆನ್ನುವ ತುಡಿತ ಎಲ್ಲವೂ ಅತಿರೇಕ ಅನ್ನಿಸದೆ ಇರದು. ಆದರೆ ಅಂತವರ ಅವಶ್ಯಕತೆ ಇದೆ.
ಕಲ್ಯಾಣ ಕರ್ನಾಟಕ ನಿಜಾಮರ ಆಳ್ವಿಕೆಗೆ ಒಳಪಟ್ಟು ಮಹಿಳೆಯನ್ನು ನೋಡುವ ಸಂಕುಚಿತ ಮನೋಭಾವವನ್ನು ಮಾತ್ರ ಸಮರ್ಪಕವಾಗಿ ಚಿತ್ರಿಸಿದ್ದು, ಇನ್ನೂ ಬದಲಾಗದ ಗಂಡ ಯಜಮಾನಿಕೆಯನ್ನು ವಿನೋದನ ಪಾತ್ರದ ಮೂಲಕ ಸಾಬೀತು ಪಡಿಸಿದ್ದಾರೆ. ‘ಹೀಗೂ ಉಂಟೆ?’ ಎಂದು ಕೇಳುವ ಜನಕ್ಕೆ ‘ನೊಂದವರ ನೋವ ನೋಯದವರೆತ್ತ ಬಲ್ಲರು?’ ಎನ್ನುವಂತೆ ಇಂದು ಈ ಭಾಗದ ಕೆಲ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವಿಲ್ಲ, ದೇಹದ ಮೇಲೂ ಕೂಡ.
ಕಾದಂಬರಿಯಲ್ಲಿ ಯಥೇಚ್ಛವಾಗಿ ಇಂಗ್ಲಿಷ್ ಪದ ಬಳಸಿದ್ದು ಹಿಂದಿ ಕೂಡ ಹಿಂದೆ ಬಿದ್ದಿಲ್ಲ. ಆಧುನಿಕ ತಂತ್ರಜ್ಞಾನದ ಬಳಕೆ ಕೃತಿಯಲ್ಲಿ ಹೆಚ್ಚಾಗಿ ಕಾಣಬಹುದು ವಾಟ್ಸ್ಆಪ್, ಟ್ವಿಟ್ಟರ್, ಮೇಲ್…..
ಇತ್ತೀಚೆಗೆ ನಡೆದ #ಮಿಟೂ ಅಭಿಯಾನ, ಲಿವಿಂಗ್ ರಿಲೆಷನ್‌ಷಿಪ್, ಪ್ರಸ್ತುತ ವಿಷಯಗಳನ್ನು ಕುರಿತು ಧ್ವನಿ ಎತ್ತಿದ್ದಾರೆ. ಕಾದಂಬರಿ ಉದ್ದಕ್ಕೂ ಅನೇಕ ಹೇಳಿಕೆ ನೀಡಿದ್ದಾರೆ. ಉದಾಹರಣೆಗೆ,
“ಮುಕ್ಕಾದ ವಸ್ತುಗಳನ್ನು ಎಸೆಯಬೇಕಾಗುತ್ತದೆ. ಆದರೆ.. ಮನುಷ್ಯ ಮನುಷ್ಯನ ನಡುವಿನ ಸಂಬಂಧ ಮುಕ್ಕಾದರೆ, ಬಾಂದವ್ಯ ನಶಿಸಿ ಹೋಗುವುದು.”
“ಯಾವುದೇ ಕಲೆಗಿರುವ ದೊಡ್ಡ ಶಕ್ತಿ ಎಂದರೆ ಅದು ಜೀವನ ಸಂಗಾತಿಯೇ ಆಗುವ ಪರಿ”
ಹೀಗೆ ಹಲವು ಹೇಳಿಕೆ ಲೇಖಕಿಯ ಅನುಭವ ವಿಸ್ತಾರ ತೋರಿಸುತ್ತದೆ.
ಕಾವ್ಯಶ್ರೀ ಅವರು ಕಾದಂಬರಿಯಲ್ಲಿ ಮಹಿಳೆಯ ಸೂಕ್ಷ್ಮ ಭಾವನೆಗಳನ್ನು, ಅವಳ ಒಳ ತುಡಿತಗಳನ್ನು ಅನಾವರಣ ಮಾಡುತ್ತ ಹೆಣ್ಣು ಬಯಸುವ ಜಗತ್ತಿನ ಕಲ್ಪನೆ ಕೂಡ ಸೂಚ್ಯವಾಗಿ ಹೇಳಿದ್ದಾರೆ. ಅದಕ್ಕಾಗಿ ಶರಣರ ವಚನಗಳು ಅಕ್ಕಮಹಾದೇವಿಯ ನಿಲುವನ್ನು ಆದರ್ಶವಾಗಿ ಉಲ್ಲೇಖಿಸಿದ್ದಾರೆ. ಹೆಣ್ಣು ಗಂಡಿನಲ್ಲಿ ಬೌದ್ಧಿಕ ಸಾಹಚರ್ಯ ಮುಖ್ಯ, ಅವರಿರ್ವರಲ್ಲಿ ಸಮಾನತೆ ಮೂಡಲಿ ಎಂಬ ಆಶಯದೊಂದಿಗೆ ಕಾದಂಬರಿ ಕೊನೆಗೊಂಡಿದೆ. ಅವರಂದುಕೊಂಡಂತೆ ಕಲ್ಯಾಣ ಸಮಾಜ ನಮ್ಮದಾಗಲಿ, ಮಹಿಳೆ ಮುಕ್ತವಾಗಿ ಉಸಿರಾಡಲಿ.
–ಡಾ.ಶೈಲಜಾ ಎನ್.ಬಾಗೇವಾಡಿ
ಕಲಬುರಗಿ