ಜುಲ್ ಕಾಫಿಯ ಗಜ಼ಲ್

ಜುಲ್ ಕಾಫಿಯ ಗಜ಼ಲ್

ಎದೆಯೊಳಗೆ ಕುದಿವ ಒಗಟುಗಳನು ಬಿಡಿಸುವವರಾರು ಹೇಳು
ಒಡಲ ಬೇಗೆಯಲಿ ಬೇಯುವ ಅಳಲುಗಳನು ಕೇಳುವವರಾರು ಹೇಳು

ತಣ್ಣಗೆ ಬಿಕ್ಕುವ ಮೌನ ದುಗುಡಗಳನ್ನೇನು ಮಾಡಲಿ
ಕಾಡು ಕುಸುಮದ ಪರಿಮಳವನು ಆಸ್ವಾದಿಸುವವರಾರು ಹೇಳು

ಬಚ್ಚಿಟ್ಟ ಬಯಕೆಗಳು ಕಿಚ್ಚು ಹಚ್ಚಿ ನರಳುತಿವೆ ನೋವಿನಲಿ
ಮುಚ್ಚಿಟ್ಟ ಆಸೆಗಳ ಮೊಗ್ಗುಗಳನು ಅರಳಿಸುವವರಾರು ಹೇಳು

ಕನಸುಗಳಿಗೆ ರಂಗು ಮೂಡಿ ರೆಕ್ಕೆ ಬಿಚ್ಚಿ ಹಾರಬಯಸುತಿರುವೆ
ಅಂಕೆಯಿಲ್ಲದೆ ಕುಣಿವ ಭಾವನೆಗಳನು ತಿಳಿಯುವವರಾರು ಹೇಳು

ಕಾಯುತಿರುವೆ ಬಂಧನಗಳ ಬಿಡಿಸುವವರಿಗಾಗಿ ಬೇಗಂ
ಒಲವ ದೀವಿಗೆ ಹೊತ್ತಿಸಿ ಬೆಳಕನು ಬೀರುವವರಾರು ಹೇಳು

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 🙏

Don`t copy text!