ಮನ ಬಸಿರಾದಾಗ… ಹೊರಲಾರದ ಹೊರೆಯ ಹೊತ್ತು

ವಾಸ್ತವದ ಒಡಲು

ಮನ ಬಸಿರಾದಾಗ…

ಹೊರಲಾರದ ಹೊರೆಯ ಹೊತ್ತು

ವಯಸ್ಸು ಇನ್ನೂ ಚಿಕ್ಕದಿರುವಾಗ, ಮುಗ್ದತೆ ಮುಖ ಮೈಯನ್ನೆಲ್ಲಾ ಆವರಿಸಿದ್ದಾಗ, ಯಾರು ಏನೇ ಅಂದರೂ ಕೂಡಲೆ ಅಳು ಬಂದು ಬಿಡುತ್ತಿತ್ತು. ಮತ್ತೊಂದು ಗಳಿಗೆಗೆ ಆಟ ಆಡುತ್ತಲೊ, ಊಟ ಮಾಡುತ್ತಲೊ, ಸ್ನೇಹಿತರೊಂದಿಗೆ ಸಮಯ ಕಳೆಯುತ್ತ, ಎಲ್ಲಾ ಮರೆತು ಹುಗುರಾಗಿ, ನಿರಾಳ ಮನಸ್ಥಿತಿ ಮತ್ತೆ ಮರಳಿದ್ದು ಗೊತ್ತೇ ಆಗುತ್ತಿರಲಿಲ್ಲ. ಅದೇ ಬಾಲ್ಯ ಅಲ್ಲವೆ? ಆ ದಿನಗಳು ಮತ್ತೆ ಮತ್ತೆ ಬರಲಾರವು ಎನ್ನುವ ಸತ್ಯ ಗೊತ್ತಿದ್ದರೂ, ‘ಅಕಸ್ಮಾತ್ತಾಗಿ ಬಾಲ್ಯದ ದಿನಗಳನ್ನು ಮತ್ತೆ ಪಡೆಯುವಂತಿದ್ದರೆ..’ ಹಾಗೆ ಅನಿಸುವುದೂ ಒಂದು ರೀತಿಯ ಸಂಭ್ರಮವೇ ಸರಿ.

ವಾಸ್ತವ ವಾಸ್ತವವೇ! ಅದನ್ನು ಹೀಗಲ್ಲ ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ, ಕೆಲವರು ಇದ್ದದ್ದನ್ನು ಇಲ್ಲದಂತೆ, ಇಲ್ಲದ್ದನ್ನು ಇದ್ದಂತೆ ಹೇಳುತ್ತಿರುತ್ತಾರೆ. ಇದು ಇದಲ್ಲ, ಇದು ಅದೇ ಎಂದು ಹೇಳಿ ಅದೆಷ್ಟೋ ಮನಸುಗಳ ಘಾಸಿಗೊಳಿಸುತ್ತಾರೆ.

ಈ ಬದುಕಿನಲ್ಲಿ ‘ನಾನು’ ಅನ್ನುವ ಶಬ್ದದ ಅಸ್ತಿತ್ವ ಏನೆಂದು ಎಲ್ಲರಿಗೂ ಚೆನ್ನಾಗಿ ಗೊತ್ತು. ಕ್ಷಣಿಕ ವೈರಾಗ್ಯದಿಂದ ವೇದಾಂತವಾಗಿ ಮಾತನಾಡಿ ದೊಡ್ಡ ವ್ಯಕ್ತಿಗಳಾಗುವುದು ಸುಲಭ ಎನಿಸಿ ಬೇಸರವಾಯಿತು. ಉದಾರ ಗುಣ, ಔದಾರ್ಯದ ಮನಸು, ವಿಶಾಲ ಹೃದಯ, ಹೊಂದಿಕೊಂಡು ಬಾಳಬೇಕು ಎನ್ನುವ ನಾನು, ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿರುವೆ ಎಂದು ಸ್ವವಿಮರ್ಶೆಗೆ ಒಡ್ಡಿಕೊಳ್ಳುವ ಪ್ರಸಂಗ ಎದುರಾಯಿತು.

ನಾನು ಯಾರು? ನಾನು ಯಾರಿಗಾಗಿ ಜೀವಿಸಿಸುತ್ತಿರುವೆ? ನನ್ನ ಜೀವನದ ವಿಸ್ತೀರ್ಣದಲ್ಲಿ ಯಾರ‌್ಯಾರಿದ್ದಾರೆ? ಅವರಿಗೆ ನಾನೇನು ಮಾಡುತ್ತಿರುವೆ? ಬದಲಿಗೆ ಅವರು ನನಗೇನು ತಿರುಗಿ ನೀಡುತ್ತಿದ್ದಾರೆ? ಮನಸು ಕೇಳುವ ಪ್ರತಿ ಪ್ರಶ್ನೆಯಲ್ಲೂ ನಾನು!!! ಮನಸು ಮೂಕವಾಗಿದ್ದರೂ ನಕ್ಕು ಬಿಟ್ಟಿತು. ಹೌದಲ್ಲವೆ? ಈ ಸಂಸಾರದಲ್ಲಿ ಇದ್ದ ಮೇಲೆ ನಾನು ನನ್ನದು ಕಡೆ ತನಕ. ಈ ಸತ್ಯ, ಈ ವಾಸ್ತವ ಮನಗಂಡಾಗ ಒಂದು ನಿಡಿದಾದ ಉಸಿರು ಹೊರ ಹಾಕಿದೆ.

ಅವ್ವನ ರುಣ ತೀರಿಸುತ್ತಿರುವೆ ಎನ್ನುವ ಭ್ರಮೆಯಲ್ಲೇ ಅವಳ ಜೀವದ ಕೊನೆಯುಸಿರು ಇರುವವರೆಗೂ ಅವಳೊಂದಿಗಿದ್ದೆ. ದೈಹಿಕವಾಗಿ ಪೂರ್ಣ ಪ್ರಮಾಣದಲ್ಲಿ ಇರದಿದ್ದರೂ, ಮಾನಸಿಕವಾಗಿ ಪ್ರತಿ ಕ್ಷಣವೂ ಅವಳೊಂದಿಗಿದ್ದೆ. ಅವಳ ಆರೋಗ್ಯದಲ್ಲಿ ಏರುಪೇರಾದಾಗ ಮೊದಲು ಗ್ರಹಿಸುತ್ತಿದ್ದುದೇ ನನ್ನ ಮನಸು. ಕೊನೆಗೆ ಅವ್ವ ಇಲ್ಲವಾದಾಗ ರುಣದ ಭಾರ ಹೇಗೆ ತೀರಿಸುವುದೆಂದು ತಿಳಿಯದಾಯಿತು. ಇದು ನನ್ನ ಸಮಸ್ಯೆಯಷ್ಟೇ ಅಲ್ಲ ಇಡೀ ಜಗತ್ತಿನದು ಎಂದಾಗ ಅದನ್ನು ಹೊತ್ತುಕೊಂಡೇ ಹೊರಟೆ.

ಸಂಸಾರ ಸಾಗರದಲಿ ಈಸಿದ್ದೇ… ಈಸಿದ್ದು… ಈಗ ದಡ ಸಿಗಬಹುದು, ಆಗ ದಡ ಸಿಗಬಹುದು, ಕೈಕಾಲುಗಳಲ್ಲಿ ಶಕ್ತಿ ಇರುವವರೆಗೂ ಬಡಿದಾಡಲೇ ಬೇಕು, ಹೀಗೇ ಈಜುತ್ತಿರು! ಹಾ ಹೀಗೆ! ನಿಲ್ಲಿಸಬೇಡ! ಮನಸು ಕೂಗಿ ಕೂಗಿ ಸ್ವಯಂ ಪ್ರೇರಣೆ ನೀಡುತ್ತಲೇ ಹೊರಟಿತು. ಹಾಗೇ ಸಾಗಿತು ಪಯಣವೂ ಕೂಡ. ಎಲ್ಲೂ ನಿಲ್ಲದೆ, ಎಲ್ಲೂ ಎಡವದೆ, ಎಲ್ಲೂ ಬೀಳದೆ, ಎಲ್ಲೂ ಸಿಕ್ಕಿ ಹಾಕಿಕೊಳ್ಳದೆ, ಬಲು ಜಾಣತನದಿಂದ ಸುಳಿಗಳ ದಾಟುತ್ತಿರುವ ಗೆಲುವೇ ಗೆಲುವು!

ನಾನು, ನನ್ನದು ಎಂದು ಚಿಂತಿಸದವಳೆಂದು ಹೇಳಿಕೊಳ್ಳುತ್ತ ಅದೇ ಸಂಸಾರದಲ್ಲಿ ಪ್ರೀತಿಯಿಂದ, ಪ್ರೇಮದಿಂದ, ಸಂತೋಷದಿಂದ, ಸಂಭ್ರಮದಿಂದ, ದುಃಖದಿಂದ, ಬೇಸರದಿಂದ, ಜಿಗುಪ್ಸೆಯಿಂದ, ಸಸಾರದಿಂದ, ತಾತ್ಸಾರದಿಂದ, ಒಮ್ಮೊಮ್ಮೆ ಒಂದೊಂದು ಭಾವದಿಂದ ಸ್ಪಂದಿಸಿದೆ. ಯಾವತ್ತೂ ನಿಲ್ಲದ ಈ ಜೀವನಕ್ಕೆ ‘ನಾನೇ ಚಲಿಸುವ ಜೀವನಕ್ಕೆ ಕಾರಣ’ ಎನ್ನುವ ಭ್ರಮೆಯಲ್ಲೇ ಕಳೆದೆ. ಹೋದವು ದಿನ ಹಾಗೇ, ಕಳೆದವು ವರುಷಗಳು ಹೀಗೇ. ನಾನೊಂದು ನಿಮಿತ್ತ ಎನ್ನುವುದು ಹೊಳೆದಿದ್ದರೂ, ತಿಳಿಯುವುದು ಕಠಿಣ.

ಬದುಕು, ಜೀವನ, ಸಂಬಂಧ, ಪ್ರೀತಿ, ಮಮಕಾರ, ವಾತ್ಸಲ್ಯ, ಎಲ್ಲವೂ ಎಳೆ ಎಳೆಯಾಗಿ ಬಿಚ್ಚಿಕೊಂಡು ಸುತ್ತಲೂ ಕಗ್ಗಂಟಾಗಿ ಆವರಿಸಿದೆ. ವೈರಾಗ್ಯ ಅದೆಲ್ಲೋ ದೂರದಲ್ಲಿ ನಿಂತು ನನ್ನ ನೋಡಿ ನಗುತ್ತಿರುವಂತೆ ಭಾಸವಾಯಿತು.

ಈ ಜಗತ್ತು ಕೆಟ್ಟದು, ಈ ಲೋಕ ಬಹಳ ಸ್ವಾರ್ಥಿ, ಈ ಜನ ಜಾತ್ರೆಯ ವ್ಯವಹಾರದಲ್ಲಿ ಬರೀ ಮೋಸ ಎಂದು ಹೇಳುವಾಗ ನಾನದರಲ್ಲಿಲ್ಲವೆ? ಎಂದು ನನ್ನ ಮನಸು ಪ್ರಶ್ನಿಸಿದಾಗ ಭೂಮಿಯಾಳಕ್ಕೆ ಇಳಿದ ಅನುಭವವಾಯಿತು. ಮುಖ ಮುಚ್ಚಿಕೊಂಡು ಸತ್ತೇ ಹೋಗಬೇಕು. ಬದುಕಿದ್ದಿನ್ನೇನು ಪ್ರಯೋಜನ ಎನಿಸಿತು.

ಇಷ್ಟೆಲ್ಲಾ ಆದರೂ ಮನದ ಮೂಲೆಯಲ್ಲಿ ಎಲ್ಲೋ ಒಂದು ಆಸೆ. ನಾ ಹೀಗೆ ಮಾಡಬಹುದೇನೊ? ನಾ ಹಾಗೆ ಮಾಡಬಹುದೇನೊ? ಅದೇ ಆಸೆಯ ಹೊತ್ತು, ಹೊತ್ತು ಹೊತ್ತಿಗೆ ಹೀಗೇ ಮಾಡುವೆ. ಇದು ಹೀಗೇ ಇರಲಿ. ಇದು ಹೀಗಾದರೆ ಒಳ್ಳೆಯದು. ಹೀಗೆಂದುಕೊಂಡು ಉಸಿರಾಡುತ್ತಲೇ ಸಾಗಿದೆ.

ಮುಗ್ದತೆ ಕಳೆದಿತ್ತು, ಬುದ್ಧಿ ಬಲಿತು ಹೋಗಿತ್ತು, ಪ್ರೌಡಿಮೆ ಆವರಿಸಿತ್ತು, ವೃದ್ದಾಪ್ಯ ಅಪ್ಪಿಕೊಂಡಿತ್ತು, ಸಾವು ಸಮೀಪದಲ್ಲೇ ಕಾಣುತ್ತಿತ್ತು…

ಆರಂಭದಿಂದಲೂ ಸಮಯ, ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡೆ, ಹೊಂದಾಣಿಕೆ ಮಾಡಿಕೊಂಡೆ. ಹೌದು ಹೊಂದಾಣಿಕೆ ಇದ್ದಾಗಲೇ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎನ್ನುವ ಲೋಕರೂಢಿಯ ಮಾತು ಸತ್ಯವೆನಿಸಿತ್ತು. ಒಮ್ಮೊಮ್ಮೆ ಈ ಹೊಂದಾಣಿಕೆ ನನಗೇ ಏಕೆ ಬೇಕು ಎಂದು ಮೊಂಡುತನದ ಪ್ರಶ್ನೆಯನ್ನೂ ಮಾಡಿತ್ತು. ಅದನ್ನು ಅಲ್ಲೇ ಅದುಮಿದೆ. ಹಾಗಲ್ಲ ಹೀಗೇ ನಡೆದುಕೊಳ್ಳಲು ಮನಸು ಹೆಜ್ಜೆ ಹೆಜ್ಜೆಗೂ ಹೇಳಿತ್ತು. ಆ ಮನಸಿನಂತೆಯೇ ಈ ದೇಹ, ಈ ಮನೆ, ಈ ಊರು, ಈ ಜಗತ್ತು ಎನಿಸಿದ್ದೂ ಸತ್ಯ.

ಇದೀಗ ಮನಸು ಹೇಳಿದ್ದನ್ನು ಕೇಳಿ ಕೇಳಿ ದೇಹ ದಣಿದಿದೆ. ದಣಿದ ದೇಹಕ್ಕೆ ದಣಿವಾರಿಸಿಕೊಳ್ಳುವ ಅಭ್ಯಾಸವೇ ಇಲ್ಲ. ಯಾಕೆ ಹೀಗೆ? ಯಾಕೆ ಹೀಗೆ? ಮನಸು ಕೂಗಿ ಕೂಗಿ ಕೇಳುತ್ತದೆ. ಬಗ್ಗಿದವರಿಗೇ ಗುದ್ದುವುದು ನಿಜ. ಗುದ್ದಿಸಿಕೊಳ್ಳುವವರು ದಣಿದಾಗ, ಗುದ್ದುವವರೂ ದಣಿದಿರಬೇಕಲ್ಲವೆ? ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ, ಸಿಗುವುದು ಬಹಳ ಕಷ್ಟ. ಅತಿಯಾಗಿ, ಗಂಭೀರವಾಗಿ, ಆಳವಾಗಿ ಆಲೋಚಿಸುತ್ತಲೇ ಕುಳಿತೆ…
ನಿಧಾನಕೆ ಕಣ್ಮುಚ್ಚಿದೆ…
ಮುಚ್ಚಿದ ಕಂಗಳಡಿಯಲ್ಲಿ ಕನಸುಗಳ ಮೆರವಣಿಗೆ ಹೊರಟಿತು… ಅದು ಸಾಮಾನ್ಯ ಕನಸಲ್ಲ, ಅಸಮಾನ್ಯ ಕನಸು!!!
ಬಸವಣ್ಣ ಗಡಿಪಾರಿಗೆ ಗುರಿಯಾಗಿ ಕಲ್ಲು ಮುಳ್ಳುಗಳ ದಾರಿಯಲಿ ರಕ್ತ ಸಿಕ್ತ ಪಾದಗಳನೂ ಲೆಕ್ಕಿಸದೆ ನಡೆಯುತ್ತಿದ್ದ…
ಮಹಾದೇವಿ ಉಟ್ಟ ಸೀರೆ ಕಿತ್ತು ಬಿಸಾಕಿ ಆಸೆಗಣ್ಣುಗಳಿಗೆ ಮಂಗಳಾರತಿ ಎತ್ತಿ, ದೇವನುಡಿಗೆಯಲ್ಲಿ ‘ಅಕ್ಕ’ನಾಗಿ ಧೀಮಂತಳಾಗಿ ನಡೆದಿದ್ದಾಳೆ…
ದುಡಿಯುವ ಕೈಗಳನು ಪ್ರೀತಿಸು ಎಂದು ಹೇಳುತ್ತಿದ್ದ ಪೈಗಂಬರ್, ತಾನೊಬ್ಬನೇ ದುಡಿಯುತ್ತಿದ್ದಾನೆ, ದುಡಿಯುತ್ತಲೇ ಇದ್ದಾನೆ…
ಲೋಕದ ಪಾಪವನ್ನೆಲ್ಲಾ ಹೊತ್ತ ಏಸು, ಶಿಲುಬೆಯನ್ನೂ ಹೊತ್ತು ಸಾಗಿದ್ದಾನೆ. ದಣಿದು ದಣಿದು ಹಾಗೇ ನಿಲ್ಲದೆ, ಮುಂದುವರೆಯುತ್ತ ನಡೆಯುತ್ತಿದ್ದಾನೆ…
ಇನ್ನು ‘ನಾನು’ ಯಾವ ಗಿಡದ ತಪ್ಪಲು ಎನಿಸಿ ಮಂಜಾದ ಕಂಗಳ ಒರೆಸಿಕೊಂಡೆ, ಎದೆ ಗಟ್ಟಿಗೊಳಿಸಿದೆ, ಅದೇ ಮನಸು ಮತ್ತೆ ಸಿದ್ಧವಾಯಿತು ಜಗದ ಯುದ್ಧಕ್ಕೆ!!! ಬದುಕುವೆ ಹೀಗೇ ಬದುಕುವೆ. ಎಷ್ಟೇ ಕಷ್ಟ ಬಂದರೂ ಎದೆ ಗುಂದದೆ ಮುನ್ನುಗ್ಗುವೆ. ಹಾಗೇ ಹೊರಟೆ ಹೊರಲಾರದ ಹೊರೆಯ ಹೊತ್ತು ಮುಂದೆ ಸಾಗಿದೆ. ಮುಂದೆ… ಮುಂದೆ… ಸಾಗುತ್ತಲೇ ಇದ್ದೆ.

ಸಿಕಾ ಕಲಬುರ್ಗಿ

Don`t copy text!