ಸಿದ್ದರಾಮ ಶರಣರು
ಧರ್ಮ ಎನ್ನುವುದು ಅತಿ ಸೂಕ್ಷ್ಮ ವಿಚಾರ. ಜಗತ್ತಿನೆಲ್ಲೆಡೆ ಅಗತ್ಯವಾಗಿರುವ ಎಲ್ಲರಿಗೂ ಅನ್ವಯವಾಗುವ ಜೀವನದ ಮೌಲ್ಯಗಳು. ಪೂರ್ಣರೂಪವಾದ ಶ್ರೇಷ್ಠ ಜೀವನ ವಿಧಾನವೇ ಧರ್ಮವಾಗಿದೆ. ಜೀವನದ ಪೂರ್ಣತೆಗೆ ಧರ್ಮ ಅನಿವಾರ್ಯ. ಆದರೆ ಧರ್ಮದ ಸ್ವರೂಪ ಇಲ್ಲಿ ಅತ್ಯಂತ ವ್ಯಾಪಕವಾಗಬೇಕಾಗುತ್ತದೆ. ಕೇವಲ ಭಾವುಕ ಆಚಾರಗಳು ಸಮುದಾಯವಲ್ಲ. ಬುದ್ದಿ ಹೃದಯಗಳ ಸಮತೋಲನ ಬೆಳವಣಿಗೆಗೆ ಸಹಾಯಕ ವಾಗಬಲ್ಲಂತಹುದೆ ಪೂರ್ಣ ಧರ್ಮವಾಗುತ್ತದೆ. ನಿಜವಾದ ಧರ್ಮ ವಿಚಾರದ ಒರೆಗಲ್ಲಿಗೆ ಉಜ್ಜಿದಷ್ಟು ಹೆಚ್ಚು ಹೊಳಪನ್ನು ಕೊಡುತ್ತದೆ.
ಶರಣರ ಧಾರ್ಮಿಕ ವಿವೇಚನೆಯಲ್ಲಿ ಆಧುನಿಕ ಯುಗ ಮನೋಧರ್ಮಕ್ಕೆ ಅತ್ಯಂತ ಮೆಚ್ಚುಗೆಯಾಗುವ ಅಂಶವೆಂದರೆ ಸ್ವತಂತ್ರ ವಿಚಾರಶೀಲತೆ ಸತ್ಯ-ಅಸತ್ಯವನ್ನು ಪ್ರತ್ಯಕ್ಷವಾಗಿ ಪ್ರಾಮಾಣಿಸಿಯಲ್ಲದೆ ನಿಶ್ಚಯವನಿರಿಯಬಾರದು ಎಂಬ ವಿವೇಕ ಚಿಂತನೆ ಶರಣರದಾಗಿತ್ತು. ಪಂಚಾಚಾರಗಳು ವಚನ ಸಾಹಿತ್ಯಕ್ಕೆ ನೈತಿಕ ತಳಹದಿಯನ್ನು ಹಾಕಿ ಕೊಟ್ಟಿವೆ . ಲೌಕಿಕ ಮತ್ತು ಆದ್ಯಾತ್ಮಿಕ ತಳಹದಿಯನ್ನು ಅನುಸಂಧಾನ ದ ಮೂಲಕ ಎಚ್ಚರಿಸಿವೆ.
1. ಲಿಂಗಾಚಾರ ಅಂಗದ ಶುದ್ಧಿ
2. ಸದಾಚಾರ ಮನದ ಶುದ್ಧಿ
3. ಶಿವಾಚಾರ ಧನದ ಶುದ್ಧಿ
4. ಗಣಾಚಾರ ನಡೆಯ ಶುದ್ಧಿ
5. ಭೃತ್ಯಾಚಾರ ನುಡಿಯ ಶುದ್ಧಿ
ಈ ಐದು ಆಚಾರಗಳಲ್ಲಿ ಶರಣರು ಪ್ರತಿಪಾದಿಸಿರುವ ನೈತಿಕ ನಿಷ್ಠೆ, ಪರಿಪೂರ್ಣ ದೃಷ್ಟಿಯ ಬದುಕನ್ನು ಕಂಡ ಸಮರ್ಥನೆಯಂದು ಸ್ಪಷ್ಟಪಡಿಸಬಹುದು. ಶಿವಾಚಾರಿ ಯಾದವನು ಶಿವನಿಂದೆಯ ಮಾಡಲಾಗದು. ಶಿವನಿಂದನೆಯ ಕೇಳಲಾಗದು. ಪರಧರ್ಮವನ್ನು ಹೀಯಾಳಿಸದೆ ಪರರನ್ನು ನಿಂದಿಸದೆ ಪರಶಿವನ ಮೆಚ್ಚುಗೆ ಪಡೆಯ ಬೇಕು. ಇಂಥಪ್ಪ ಶಿವನಿಂದೆಯಂ ಕೇಳಿದೊಡೆ ಆ ಊರು ಆ ದೇಶ ಕೋಶಗಳನ್ನೆಲ್ಲಾ ತ್ಯಾಗಮಾಡ ಬೇಕು.
ಗಣಾಚಾರ ನೈತಿಕ ಜೀವನ ಬೆಳವಣಿಗೆಯ ಸೂಕ್ಷ್ಮವಾದ ಒಳನೋಟಗಳು. ಇದಕ್ಕೆ ನೀತಿ ಎನ್ನುವ ವ್ಯಾಪಕ ಅರ್ಥ ಪಡೆಯುತ್ತದೆ. ಹೀಗೆ ಮಾಡು ಹೀಗೆ ಮಾಡಬೇಡ ಎಂಬ ವಿಧಿ ನಿಷೇಧಗಳಷ್ಟೆ ಅದು ಪರ್ಯವಸನಗೊಳ್ಳದೆ ಅವುಗಳನ್ನು ದಾಟಿದ ಆದ್ಯಾತ್ಮಿಕ ನಿಲುವನ್ನು ಸಹಜ ಸ್ಥಿತಿಯನ್ನಾಗಿ ಮಾಡುವುದಕ್ಕೆ ಇದು ತಳಹದಿಯಾಗಿ ಪರಿಣಮಿಸುತ್ತದೆ. ಆ ನೆಲೆಗಟ್ಟಿನ ಪಂಚಾಚಾರದ ಮೆಟ್ಟಿಲುಗಳನ್ನೇರಿ ಮುಂದೆ ನಡೆಯುತ್ತಾನೆ. ಸಂಸಾರದ ಸುಖ ದುಃಖಕ್ಕೆ ಜನನ ಮರಣಗಳಿಗೆ ಅಂಜದ ದಿಟ್ಟತನ ಅವನಲ್ಲಿ ಅಳವಡುತ್ತದೆ. ಹೀಗಾಗಿ ಗಣಾಚಾರವು ನೈತಿಕತೆಯ ಮೂಲಕ ಸಮಾಜಮುಖಿಯಾಗಿದೆ.
ನಾನೀಗ ಸಿದ್ದರಾಮೇಶ್ವರನ ವಚನಗಳಲ್ಲಿ ಗಣಾಚಾರದ ಕಾವ್ಯ ಮೀಮಾಂಸೆಯ ಮೂಲಕ ಚರ್ಚೆಗೆ ಎತ್ತಿಕೊಳ್ಳುತ್ತೇನೆ.
ಸಿದ್ದರಾಮೇಶ್ವರನು ಗಣಾಚಾರದ ಸಾಮಾಜಿಕ ವಾಸ್ತವಗಳನ್ನು ನೀತಿಯ ಪ್ರತಿಪಾದನೆಯನ್ನು ವಿಮರ್ಶೆಯ ಮೂಲಕ ಬಳಸಿಕೊಳ್ಳದೆ ರೂಪಾತ್ಮಕ ಮಾದರಿಯಲ್ಲಿ ಬಳಸಿ ಕೊಳ್ಳುತ್ತಾನೆ.
ಈ ವಚನದ ಹಿಂದಿರುವ ಗಣಾಚಾರದ ಗ್ರಹಿಕೆಯು ವಿಶಿಷ್ಟವಾದದ್ದು. ತಾತ್ವಿಕ ಭಾಷೆಯ ಕಲಿಕೆ ಅತ್ಯಂತ ಪ್ರಮುಖ ವಾದದ್ದು ಸಮಾಜಮುಖಿ ಸಾಧಕರು ಓದುಗನನ್ನು ಒಲವಿನ ಲೋಕಕ್ಕೆ ಕರೆದೊಯ್ಯಬಲ್ಲರು.
ಓದುವುದು ಸದ್ಗುಣಕ್ಕಲ್ಲದೆ | ಕಿವಿಯನೂದುಕ್ಕೇನು ||
ಮಾಡುವ ಭಕ್ತಿ ಮೋಕ್ಷಕ್ಕಲ್ಲದೆ | ಡಂಬಾಚಾರಕ್ಕೇನೊ ಅಯ್ಯಾ ||
ಆಡುವ ವೇಷ ದ್ರವ್ಯಕ್ಕಲ್ಲದೆ | ಜನರಾಡಂಬರಕ್ಕೇನೊ ಅಯ್ಯಾ ||
ಎಲೆ ಕಪಿಲಸಿದ್ದ | ಮಲ್ಲಿಕಾರ್ಜುನ || ಸ.ವ.ಸಂ: 1618 ||
ಸತತವಾದ ಅಬ್ಯಾಸ ವ್ಯಕ್ತಿಯ ಜ್ಞಾನ ಸಿಂಚನವನ್ನು ವಿಶಾಲವಾಗಿಸುತ್ತದೆ. ಒಳ್ಳೆಯ ಅಭ್ಯಾಸ ಕ್ರಮಗಳು ಅವನ ಸದ್ಗುಣಗಳ ವ್ಯಕ್ತಿತ್ವವನ್ನು ಸಮಾಜ ಗೌರವಿಸುತ್ತದೆ. “ವಿದ್ಯೆ ಎಂಬುದು ಅಬ್ಯಾಸಿಕನ ಕೈ ವಶ. ಅವಿದ್ಯೆ ಎಂಬುದು ಸರ್ವರಲ್ಲಿ ವಶ.”
ಭಕ್ತಿಯ ಭಾವುಕತೆಯು ಶಿವನಿಗೆ ತನ್ನನ್ನು ಅರ್ಪಿಸಿಕೊಳ್ಳುವ ನಿಷ್ಕಳಂಕ ಪ್ರೀತಿ. ಭಕ್ತಿಯಲ್ಲಿ ಏರಡು ವಿಧ:
೧. ವಿಶ್ವರೂಪೋಪಾಸಕರು.
೨. ಅಕ್ಷರೋಪಾಪಸಕರು.
ಭಕ್ತಿಯ ಫಲವೆ ಜ್ಞಾನ. ವಿಶ್ವರೂಪೋಪಾಸಕರೆನ್ನುವಲ್ಲಿ ಪ್ರಕೃತಿಯ ಆರಾಧನೆ ಇದೆ. ವಿಜ್ನಾನವಿದೆ. ಅಕ್ಷರೋಪಾಸಕರು ಎಂದಾಗ ಸತತವಾದ ಓದು ಬರವಣಿಗೆ ಜ್ಞಾನ ವನ್ನು ಪಡೆಯುವ ಹಂಬಲ ಉಳ್ಳವರು.
ಮಾಡುವ ಭಕ್ತಿ ಮೋಕ್ಷಕ್ಕಲ್ಲದೆ, ಮೋಕ್ಷವನ್ನು ಪಡೆಯುವುದು ಎಂದರೆ ಮುಕ್ತಿ ಹೊಂದುವುದು. ಮುಕ್ತಿ ಪ್ರತಿಯೊಬ್ಬನ ಪರಮೋಚ್ಚ ಗುರಿಯಾಗಿರುತ್ತದೆ. ಪರಮಾತ್ಮನಲ್ಲಿ ಐಕ್ಯವಾಗುವ ಸ್ಥಿತಿ ಸ್ವರ್ಗಕ್ಕಿಂತ ಶ್ರೇಷ್ಠವಾದದ್ದು. ಈ ಪರಿಕಲ್ಪನೆ ಅನಂತವಾದದ್ದು. ಆನಂದದಾಯಕವಾದದ್ದು. ಡಂಬಾಚಾರಕ್ಕೋಸ್ಕರ ಇನ್ನೊಬ್ಬರ ತೋರಿಕೆಗೋಸ್ಕರ ಮುಕ್ತಿ ಪಡೆಯುವುದಲ್ಲ. ಇದು ಕೃತಕತೆ ಎನಿಸುತ್ತದೆ. ಸಿದ್ದರಾಮೇಶ್ವರರ ಪ್ರಕಾರ ಆಡುವ ವೇಷ ದ್ರವ್ಯಕ್ಕಲ್ಲದೆ, ಸಮಾಜದ ವ್ಯವಸ್ಥೆಯಲ್ಲಿ ಸ್ವಾವಲಂಬಿ ಜೀವನದ ಅವಶ್ಯಕತೆ. ಕಾಯಕ ವೃತ್ತಿ ವೇಷವಾಗಬಾರದು. ಆಡಂಬರತೆ ವೈಭವಕ್ಕಲ್ಲ. ತಾನು ನಿಂತ ಸಮಾಜದಲ್ಲಿ ನಮ್ಮಲ್ಲಿಯ ಸಂಸ್ಕ್ರತಿಯ ಅಂತಃಶಕ್ತಿ ಗಟ್ಟಿಯಾಗಿರಬೇಕು. ಸಿದ್ದರಾಮೇಶ್ವರರಿಗೆ ಕರ್ಮಯೋಗಿ ಎನ್ನುತ್ತಾರೆ. ಭೋಗ ಭೂಮಿಯಲ್ಲಿ ಆಗದ ಸಿದ್ಧಿ ಕರ್ಮಯೋಗದಲ್ಲಾಗುತ್ತದೆ. ಕರ್ಮ ಎಂದಾಗ ಕಾಯಕ, ಕೆಲಸ. ಅಹಂಕಾರದಿಂದ ಮಾಡಿದ ಕೆಲಸಕ್ಕೆ ಏನೂ ಪ್ರತಿಫಲ ಸಿದ್ದಿಸುವುದಿಲ್ಲ. ಕಾಯಕ ನಿಷ್ಠೆಯೇ ಪ್ರತಿಫಲ.
ಮಹಾರಾಷ್ಟ್ರದ ಸೊನ್ನಲಿಗೆ ಈಗಿನ ಸೊಲ್ಲಾಪುರದ ಮುದ್ದಯ್ಯ ಮತ್ತು ಸುಗ್ಗವ್ವೆಯರ ಮಗ ಸಿದ್ದರಾಮರು. ಈ ದಂಪತಿಗಳಿಗೆ ಶಿವಯೋಗಿ ಜನ್ಮಿಸುವನೆಂದು ರೇವಣಸಿದ್ದರು ಆಶೀರ್ವದಿಸಿದ್ದರು. ಸಿದ್ದರಾಮನು ಶ್ರೀಶೈಲ ಮಲ್ಲಯ್ಯನ ಭಕ್ತನಾಗಿ ಅನೇಕ ಪವಾಡ ಸದೃಶ್ಯ ಸಮಾಜಮುಖಿಯಾಗಿ ಕೆಲಸ ಮಾಡಿದ್ದು ಗಮನಾರ್ಹವಾಗಿದೆ.
ಸ್ಸಿದ್ದರಾಮನ ವಚನಗಳ ಸಂಖ್ಯೆ 1965
ವಚನಾಂಕಿತ “ಕಪಿಲಸಿದ್ದ ಮಲ್ಲಿಕಾರ್ಜನ”
ಏಕನಿಷ್ಠೆ ಗಣಾಚಾರದಲ್ಲಿ ಕಂಡುಬರುವ ಬಹುಮುಖ್ಯವಾದ ಅಂಶ. ಶಿವನಿಂದೆಯ ಕೇಳದಿಹುದು ಅಷ್ಟಾವರಣಗಳ ಮೇಲೆ ಅನ್ಯರಿಂದ ಕುಂದು-ನಿಂದೆಗಳು ಬಂದು ತಟ್ಟಿದಲ್ಲಿ ಗಣ ಸಮೂಹದೊಡನೆ ಆ ಸ್ಥಳವನ್ನು ತ್ಯಜಿಸಬೇಕು. ಇದುವೇ ಗಣಾಚಾರ.
ಸಿದ್ದರಾಮೇಶ್ವರನಿಗೆ ಬಸವಣ್ಣನವರ ಮೂಲಕ ಶಿವನನ್ನು ಕಾಣುವ ತವಕ ಹಂಬಲ. “ಶ್ರೀ ಗುರುವೆ ಬಸವಯ್ಯ ಶ್ರೀ ಚರವೇ ಬಸವಯ್ಯ ಶ್ರೀ ಮಹಾ ಇಷ್ಟಲಿಂಗ ಬಸವಣ್ಣ”. ಬಸವಣ್ಣನವರ ಜೊತೆ ಪ್ರಮುಖವಾಗಿ ಗುರುತಿಸಿ ಕೊಂಡವರು. ಅನುಭವ ಮಂಟಪದ ಪ್ರಮುಖ ಶ್ರೇಷ್ಠ ವಚನಕಾರರಲ್ಲಿ ಸಿದ್ದರಾಮರೂ ಒಬ್ಬರು. ಜೀವನದುದ್ದಕ್ಕೂ ಯಾವುದೇ ಕಳಂಕವಿಲ್ಲದೆ ದುಡಿದ ಶ್ರೇಷ್ಠ ಯೋಗಿ. ಕರ್ಮಯೋಗದಿಂದ ಶಿವ ಯೋಗದ ಮೂಲಕ ಮೇಲೆ ಏರಿದವನು. “ಶಿವಾಚಾರ ಸಂಪನ್ನರಾಗಿ ಯೋಗ ನಿಲುವ ನಿಂದವರು. ನಿಮ್ಮ ಸೇವೆಯಿಂದ ಶುದ್ದದಿಂದ ಸಿದ್ದವನರಿತೆ. ಸಿದ್ದಿಯಿಂದ ಪ್ರಸಾದವರಿತೆ” ಎನ್ನುವ ಆತ್ಮೀಯ ಗೌರವದ ಸೇವಾ ಮನೋಭಾವ ಎಂದು ಸ್ಪಷ್ಟವಾಗುತ್ತದೆ.
ಭಸಿತನಿಟ್ಟಿಹೆ ರುದ್ರಾಕ್ಷಿಯ ಧರಿಸಿಹೆ | ನೀನೊಲ್ಲೆ ನೀನೊಲಿದೆ ||
ನಿನ್ನೊಲುಮೆ ಏಕೆ | ಎಲೆ ಅಯ್ಯಾ ||
ನಿನ್ನವರೊಲ್ಲರು ಆ ಒಲುಮೆ | ತಾನೆನಗೇಕೆ ಹೇಳಾ ಎಲೆ ಅಯ್ಯಾ ||
ಪುರುಷರಿಲ್ಲದ | ಸ್ತ್ರೀಯರ ಶೃಂಗಾರದಂತೆ ||
ನಿನ್ನೊಲುಮೆ | ಏಕೆ ಹೇಳಾ ||
ನಿಜ ಭಕ್ತಿಯಲ್ಲಿರಿಸಿ | ಸದ್ಭಕ್ತನೆಂದೆನಿಸಿ ||
ಸದಾಚಾರಿಗಳ ಸಂಗಡ | ಎನ್ನ ಹುದುವಿನಲ್ಲಿ ಕುಳ್ಳಿರಿಸಿ ||
ಓರಂತೆ ಮಾಡಾ | ಕಪಿಲ ಸಿದ್ದ ಮಲ್ಲಿಕಾರ್ಜುನ ||
ನೀನೊಲಿದುದಕ್ಜೆ ಕುರುಹು | ಅಲ್ಲದಿರ್ದಡೆ ಇದು ವೈಶಿಕ || ಸ.ವ.ಸಂ: 852 ||
ನಿಜವಾದ ಶರಣನಾದವನು ವಿಭೂತಿ ರುದ್ರಾಕ್ಷಿಯನ್ನು ಧರ್ಮದ ಅಭಿಮಾನದಿಂದ ಧರಿಸುತ್ತಾನೆ. ಕಾರಣ ಹಣೆಯ ಮೇಲೆ ವಿಭೂತಿ ಕೊರಳಲ್ಲಿ ರುದ್ರಾಕ್ಷಿಗಳು ಆಧ್ಯಾತ್ಮಿಕ ಶಕ್ತಿಯ ಮಹಾ ಚೇತನವಾಗಲು ಪ್ರೇರೇಪಿಸುತ್ತವೆ. ಧರ್ಮದ ಸಂಕೇತಗಳು ಇರದಿದ್ದರೆ ಅಮಂಗಲೆಯಂತೆ ಕಾಣುತ್ತಾರೆ. ವಿಭೂತಿ ರುದ್ರಾಕ್ಷಿಯನ್ನು ನಿಂದಿಸಿದವರ ಶಕ್ತಿ ಇದ್ದರೆ ಅವರನ್ನು ಸಂಹಾರ ಮಾಡುವ ಶಕ್ತಿ ಇಲ್ಲದಿದ್ದರೆ ಕಿವಿ ಕಣ್ಣನ್ನು ಮುಚ್ವಿಕೊಂಡು ಶಿವಮಂತ್ರವ ಜಪಿಸಬೇಕು. ಅಷ್ಟು ಆಗದಿದ್ದರೆ ಆ ಸ್ಥಳವನ್ನು ಬಿಡಬೇಕು. ಅಂಗ ಲಿಂಗ ಸಂಬಂದ ಭಾವನಾಮಯ. ಹೀಗಾಗಿ ಸದ್ವಿಚಾರಶೀಲ ಜನರ ಒಡನಾಟವಿರಬೇಕು. ಇವೆಲ್ಲಾ ಗಣಾಚಾರದ ದಾರ್ಶನಿಕ ನೈತಿಕಾರ್ಥಗಳು.
ಜಂಗಮ ವೇಷಧಾರಿಯಾಗಿ ಬಂದ ಮಲ್ಲಿಕಾರ್ಜುನನ ಸಾಮಿಪ್ಯದಿಂದ ಭಕ್ತನಾಗಿ ಯೋಗಿಯಾಗಿ ಮಾರ್ಪಡುತ್ತಾನೆ. ಶಿವದೀಕ್ಷೆ ಪಡೆದು ಸೊನ್ನಲಾಪುರಕ್ಕೆ ಬರುತ್ತಾನೆ. ಮುಂದೆ ಆಧ್ಯಾತ್ಮಿಕ ಕಾಯಕ ಯೋಗಿಯಾಗಿ ಸೊನ್ನಲಾಪುರವನ್ನು ಶ್ರೀ ಶೈಲ ಕ್ಷೇತ್ರ ವನ್ನಾಗಿಸಿ ಸಾಧಕನಾಗಿ ಬದಲಾಗುತ್ತಾನೆ.
ನೀನೊಲಿದದ್ದಕ್ಕೆ ಕುರುಹು ಇಲ್ಲದಿರ್ದಡೆ ವೈಶಿಕನೇ ನೀನು ಎಂಬ ಸಮರ್ಥನೆಯಲ್ಲಿ ಮಲ್ಲಿಕಾರ್ಜುನನ್ನು ವೈಯಕ್ತಿಕವಾಗಿ ನೀನು ವ್ಯವಹಾರಸ್ಥನಾಗಬೇಡ ಎಂದು ಎಚ್ಚರಿಕೆ ಕೊಡುತ್ತಾನೆ. ಸಾಧಕನಾದ ನಾನು ಭೋಗದ ಆಶೆಯನ್ನು ತ್ಯಜಿಸಿ ನಿನಗೆ ಶರಣಾಗಿದ್ದೇನೆ. “ಆಚಾರ ಸಹಿತ ಭಕ್ತ, ಅನಾಚಾರ ರಹಿತ ನರಕ”. ಆಚಾರ ಮುಖಿಯಾಗಿ ಧರ್ಮದ ಸವಾಲುಗಳನ್ನು ಸ್ವೀಕರಿಸಬೇಕು. ಈ ನಿಷ್ಠೆಯನ್ನು ಗಣಾಚಾರ ಒತ್ತಿ ಹೇಳುತ್ತದೆ. ಸಿದ್ದರಾಮೇಶ್ವರರು ಶರಣ ಧರ್ಮದ ಮೌಲ್ಯ ಕಾಯಕ ಯೋಗಿಯ ಆದರ್ಶಗಳು ಗಣಾಚಾರದ ವ್ಯಕ್ತಿ ವಿಶಿಷ್ಟ ಸಂದೇಶಗಳು ಮೌಲ್ಯಾಧಿಕ್ಯ ಎನ್ನಿವುದು ಗಮನಾರ್ಹ.
ಶ್ರೀ ಶೈಲದಿಂದ ಸೊನ್ನಲಾಪುರಕ್ಕೆ ಮರಳಿದ ಸಿದ್ದರಾಮರು ಪ್ರಭು ನನ್ನಿದೇವನ ಪಟ್ಟದರಸಿ ಮಹಾರಾಣಿ ಚಾಮಲಾ ದೇವಿ ನೀಡಿದ ನೂರು ಎಕರೆ ಭೂಮಿಯ ಕಾಯಕದಲ್ಲಿ ತೊಡಗಿ ಜ್ಞಾನ ದಾಸೋಹದ ಜೊತೆಗೆ ಅಲ್ಲಿ ಲಭ್ಯವಾದ ಸಂಪಾದನೆಯಿಂದ ಕೆರೆ ಕಟ್ಟೆ ಬಾವಿಗಳನ್ನು ಕಟ್ಟಿಸಿ ಜನರ ದಾಹ ತೀರಿಸುವ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರು. ದೇವಾಲಯಗಳ ನಿರ್ಮಾಣ, ಬಡವರ ಕಲ್ಯಾಣ, ಸಾಮೂಹಿಕ ವಿವಾಹ, ಸ್ತ್ರೀ ಪುರುಷರಲ್ಲಿ ಸಮಾನತೆಗಳು ಶಾಶ್ವತ ಸಮಾಜಮುಖಿ ಆದರ್ಶಗಳಾಗಿದ್ದವು.
ದೆಸೆ ವೀರಭಕ್ತಿಯ | ಎಸೆವ ಸುರಗಿಯ ಹಿಡಿದು ||
ದೆಸೆ ಗೆಡಿಸಿ | ಕೊಲುವನೀ ಮಾಯೆಯನ್ನು ||
ವಸುದೀಶ | ಮಲ್ಲಿಕಾರ್ಜುನನ ಮುಂದೆ ||
ಹಾಸ ಪರಿಯುವ | ಮಾಡುವೆನು ನೋಡಾ ಸಾಕು ||
ಈ ವಚನದಲ್ಲಿ ವೀರ ಭಕ್ತಿಯ ಗಣಾಚಾರದ ಪ್ರಮಾಣೀಕೃತ ಮೌಲ್ಯವನ್ನು ಎತ್ತಿ ತೋರಿಸುತ್ತದೆ. ಗಣಾಚಾರಿಯಾದವನು ವೀರಕಾಠಾರಿಯನ್ನು ಹಿಡಿದು ಮಾಯೆಯನ್ನು ಹೊಡೆದೋಡಿಸಬೇಕೆನ್ನುವನು. ಮಾಯೆ ಶರಣರ ಬದುಕಿಗೆ ಬೇಡವಾದ ಆವರಣ. ಶರಣರಿಗೆ ಸಂಸಾರವೇ ಒಂದು ಅಡಚಣಿಯಾಗಿತ್ತು. ಶಿವನೇ ಆತ್ಮ ಪರ ಆತ್ಮ (ಪರಮಾತ್ಮ) ಎಂದು ಅರಿವಾಗುವವರೆಗೂ ಮಾಯೆಯ ಆವರಣವನ್ನು ದಾಟುತ್ತಾರೆ. ಅಂತರಂಗ ಬಹಿರಂಗದ ಶುದ್ದಿಗೆ ಗಣಾಚಾರದ ಚಿಂತನೆ ಅವಶ್ಯವಾಗಿ ಬೇಕಾಗುವುದು. “ಯೋಗಿಗೆ ರೂಪವೆ ಮಾಯೆ ಜ್ಞಾನಿಗೆ ಮಿಥ್ಯೆಯೆ ಮಾಯೆ”.
ಸಿದ್ದರಾಮೇಶ್ವರನ ಭಾಷಾ ವಿಶ್ಲೇಷಣೆಯಲ್ಲಿ ಲೌಕಿಕ ಮೀಮಾಂಸೆಗೆ ಉಪಯುಕ್ತವಾದ ಗುಣಗಳಿದ್ದರೂ ಆದ್ಯಾತ್ಮ ದ ಶ್ರೇಷ್ಠತೆಯನ್ನು ಕಾಯಕ ತತ್ವವನ್ನು ಎತ್ತಿ ಹಿಡಿಯುತ್ತಾನೆ. ಈ ಹಿನ್ನೆಲೆಯಲ್ಲಿ ಸಿದ್ದರಾಮನು ತನ್ನ ಸಮಕಾಲೀನ ಹಿರಿಯ ಶರಣರ ಮಾರ್ಗವನ್ನು ಪರಿಣಾಮಕಾರಿಯಾಗಿ ಪ್ರತಿಮೆಯ ಮೂಲಕ ಹೊಗಳುತ್ತಾನೆ.
ಸೊನ್ನಲಾಪುರದಲ್ಲಿ ತನ್ನ ಕಾಯಕ ಯೋಗದಲ್ಲಿ ಲೀನವಾಗಿದ್ದ ಸಿದ್ದರಾಮನಿಗೆ ಆತ್ಮ ಜಾಗ್ರತೆಯ ಬೆಳಕಿನೆಡೆಗೆ ಕರೆದೊಯ್ದವರು ಚೆನ್ನಬಸವಣ್ಣನಾಗಿದ್ದ. ಅನುಭವ ಮಂಟಪದ ಶರಣ ತತ್ವಕ್ಕೆ ಮಾರುಹೋದ ಸಿದ್ದರಾಮನು ಚೆನ್ನಬಸವಣ್ಣನನ್ನೇ ಗುರುವಾಗಿ ಸ್ವೀಕರಿಸಿದ್ದನು. ಸಾಮಾಜಿಕ ಕ್ರಾಂತಿಯ ಮೂಲಕ ವಚನ ಕ್ರಾಂತಿಯಲ್ಲಿಯೂ ಮುಂದುವರಿದದ್ದು ಗಮನಿಸುವ ವಿಚಾರ.
ಗಣಾಚಾರ ಸಾಮಾಜಿಕ ಮುಖದಂತೆ ಅವರ ವೈಯಕ್ತಿಕ ಸ್ವರೂಪವನ್ನು ಗಮನಿಸ ಬೇಕು. ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯಸಂಗ ಭಂಗವೆಂದರಿಯರು ಕೂಡಲ ಚೆನ್ನಸಂಗಯ್ಯ. ಅವರತ್ತಲೂ ಇಲ್ಲ ಇತ್ತಲೂ ಇಲ್ಲ ಎನ್ನುತ್ತಾನೆ ಚೆನ್ನಬಸವಣ್ಣ. ಭವಿತನವನ್ನು ಬಿಟ್ಟು ಭಕ್ತನಾದ ಬಳಿಕ ಮತ್ತೆ ಭವಿತ್ವದ ಸಂಗವನ್ನು ಕಟ್ಟಿ ಕೊಳ್ಳಬಾರದು. ಇಲ್ಲಿ ಭವಿ ಎಂದರೆ ಲಿಂಗವನ್ನು ಕಟ್ಟದಿರುವುದು ಎಂಬ ಅಷ್ಟೇ ಅರ್ಥದಲ್ಲಿ ಅಲ್ಲ. ಲಿಂಗ ಕಟ್ಟಿದ್ದರೂ ಅದಕ್ಕೆ ಸರಿಯಾದ ನೆಲೆಯಿಲ್ಲದಿದ್ದರೆ ವ್ಯರ್ಥ.
ಲಿಂಗ ಪೂಜಿಸಿ | ಫಲವೇನಯ್ಯ ||
ಅಂಗನೆಯರೊಲವೆ | ಯೋಗದನ್ನಕ್ಕ ||
ಜಂಗಮ ಪೂಜಿಸಿ | ಫಲವೇನಯ್ಯ ||
ಮೋಕ್ಷಾಂಗನೆ | ಮೈ ಗೂಡದನ್ನಕ್ಕ ||
ಅಂಗಜ ಬಂದು || ಫಲವೇನಯ್ಯ ||
ನಾ ಮನ ಒಲಿದು || ರತಿಗೊಲಿಯದನ್ನಕ್ಕ ||
ಶರಣ ಸತಿ | ಲಿಂಗ ಪತಿ ಎಂಬ ವೀರತ್ವ ||
ಕೆಟ್ಟಿತ್ತೆನ್ನಲೆ | ಕಪಿಲಸಿದ್ದ ಮಲ್ಲಿಕಾರ್ಜುನ || (ಸ.ವ.ಸಂ: 971)
ಅಂಗನೆ ಎಂದರೆ ಶರಣ ಸತಿ ಲಿಂಗ ಪತಿ. ಶಿವ ಭಕ್ತನಾದ ಬಳಿಕ ಭವಿಯ ಸಂಗ ಬಯಸುವುದು ನರಕವಿದ್ದಂತೆ. ಭಕ್ತನೇ ಸತಿ ಲಿಂಗವೇ ಪತಿ ಎಂದು ಭಾವಿಸಿರುವ ಭಕ್ತನಿಗೆ ಹೆಣ್ಣಿನ ವ್ಯಾಮೋಹ ಘೋರ ಅಪರಾಧ. ಮೋಕ್ಷವನ್ನು ಪಡೆಯಲು ಮನದ ಹಂಗು ಹರಿಯಬೇಕು. ಭಕ್ತನೇ ಅಂಗಜನಾದಾಗ ಗಣಾಚಾರ ಕೆಟ್ಟಿತ್ತು ಎನ್ನುತ್ತಾನೆ.
ಇದಕ್ಕೆ ಸಂವಾದಿಯಾಗಿ ಅಕ್ಕನ ವಚನ ಗಮನಿಸಬೇಕು…. “ಒಳಗಣ ಗಂಡನಯ್ಯ ಹೊರಗಣ ಮಿಂಡನಯ್ಯ ಎರಡನ್ನೂ ನಡೆಸಲು ಬಾರದಯ್ಯಾ”.
ಈ ಗಣಾಚಾರವೆಂಬುದು ಶರಣರ ಸೃಜನಶೀಲ ಶಕ್ತಿ ಎಂಬುದು ಗಮನಾರ್ಹ. ಇದು ಸ್ವೀಕಾರ ಸಿದ್ದಾಂತದ ಘಟ್ಟವೂ ಹೌದು. ಸ್ವೀಕರಿಸಿದ್ದು ನಿರ್ದಿಷ್ಟ ಸಂಕೇತ. ಆಚರಣೆಗಳ ಸದಾಚಾರದ ಆಚರಣೆಯನ್ನು ಧಾರ್ಮಿಕ ಸಮತೆಯ ಲಾಂಛನ. ಇನ್ನೊಂದೆಡೆ ಅಂತರಂಗದ ಅರಿವಿನ ಕುರುಹಾಯಿತು.
ಕಲ್ಯಾಣದ ಕ್ರಾಂತಿಯ ನಂತರದ ಸಂದರ್ಭದಲ್ಲಿಯ ಸಮಯದಲ್ಲಿ ಬಸವಾದಿ ಪ್ರಮಥರು ಹೊರಗೆ ಬಂದರು. ಸಿದ್ದರಾಮನು ಕಲ್ಯಾಣವನ್ನು ತ್ಯಜಿಸಿ ಸೊಲ್ಲಾಪುರದಿಂದ ಚಡಚಣ, ಇಂಗಳೇಶ್ವರ, ಬನಹಟ್ಟಿ, ಪಟ್ಟದಕಲ್ಲು, ಚೆಳ್ಳಕೆರೆ, ಮಡಕಶಿರ, ಯಳನಾಡು ಹೀಗೆ ಅನೇಕ ಕಡೆ ಸಂಚರಿಸಿ ಸಾಮಾಜಿಕ ಕಾರ್ಯಗಳ ಹರಹನ್ನು ವಿಶಾಲವಾಗಿಸಿದನು. ನಂತರ ಸೊನ್ನಲಿಗೆಗೆ ಬಂದು ಐಕ್ಯನಾಗುತ್ತಾನೆ.
ಹೀಗೆ ಪಂಚಾಚಾರಗಳು ಕೇವಲ ಲಿಂಗಾಯತ ಧಾರ್ಮಿಕ ಪದ್ದತಿಗಳಲ್ಲ. ಲಿಂಗವಂತರ ವೈಚಾರಿಕ ಬದುಕಿನ ಕ್ರಮವಾಗಿದೆ. ಇವು ಕೇವಲ ಒಂದು ಧರ್ಮದ ಹಿನ್ನೆಲೆಯಲ್ಲಿ ಆಚರಿಸಬಹುದಾದ ವಿಚಾರಗಳಲ್ಲ. ಅವು ನಮ್ಮ ದೈನಂದಿನ ನಡೆಯಲ್ಲಿ ಅನುಸರಿಸ ಬಹುದಾದ ವಿಚಾರ ಸಂಹಿತೆಗಳು.
-ಡಾ. ಸರ್ವಮಂಗಳಾ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.