ಅನುಪಮ ವರಕವಿ ಡಾ. ದ. ರಾ. ಬೇಂದ್ರೆಯವರ ಬದುಕು ಬರಹ
“ಚೈತನ್ಯದ ಪೂಜೆ” ಮತ್ತು “ವಚನಗಳಲ್ಲಿ ಪೂಜೆ” ತುಲನಾತ್ಮಕ ಚಿಂತನೆ
ಚೈತನ್ಯದ ಪೂಜೆ ನಡೆದದ ನೋಡ ತಂಗಿ ಅಭಂಗದ ಭಂಗೀ || ಪ ||
ಸೌಜನ್ಯ ಎಂಬುದು ಮೊದಲನೆ ಹೂವು ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ ಶಿವಗರ್ಪಿತ ಇರಲಿ ಖಾತ್ರಿ || 1 ||
ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ || 2 ||
ಸೌಂದರ್ಯದ ಧ್ಯಾನಾ ಎದೆಯಲ್ಲಿ ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮವೇದಾ ಸರಿಗಮ ನಾದಾ || 3 ||
ಉದ್ಭವ ಉದ್ಭವ ಹೇ ಮಂಗಳ ಮೂರ್ತಿ ಅಲಲಾ ಆಹಹಾ ಅಮಮಾ
ಆತ್ಮಾ ಪರಮಾತ್ಮಾ ಅಂತರಾತ್ಮಾ ಘನವೋ ಘನ ನಿಮ್ಮಾ ಮಹಿಮಾ || 4 ||
(ಜ್ಞಾನಪೀಠ ಪುರಸ್ಕೃತ ಕೃತಿ “ನಾಕುತಂತಿ” ಕವನ ಸಂಕಲನದಿಂದ ಆಯ್ದ ಕವನ )
ಆಕಾಶವಾಣಿಯ ಒಂದು ಸಂದರ್ಶನದಲ್ಲಿ ನಿರೂಪಕರು ಅಜ್ಜಾರ “ನಿಮ್ಮ ಮಾತೃಭಾಷೆ ಮರಾಠಿಯಾದರೂ ಕನ್ನಡದಲ್ಲಿ ಉತ್ಕೃಷ್ಠವಾಗಿ ಬರಿತೀರಿ ಹೆಂಗ” ಅಂತ ಒಂದು ಪ್ರಶ್ನೆಯನ್ನು ಕೇಳತಾರ. ಅದಕ್ಕ ಬೇಂದ್ರೆ ಅಜ್ಜಾರು ಕೊಟ್ಟ ಅನುಪಮ ಉತ್ತರ ಕೇಳಿ ನಿರೂಪರು ಒಂದು ಕ್ಷಣ ಮೂಕವಿಸ್ಮಿತರಾದರು.
“ಕನ್ನಡದಾಗ ಚುಲೋತ್ನಂಗ ಬರೀತೇನಂದರ ಅದಕ ಕಾರಣ ಬರಿಯಾಕ ಕನ್ನಡಾನ ಅಷ್ಟು ಚುಲೋ ಐತಿ, ಅದಕ ಆ ಸಾಹಿತ್ಯ ಅಷ್ಟು ಉತ್ಕೃಷ್ಠ ಆಕ್ಕೇತಿ”
ಇಂಥ ಅದ್ಭುತ ಕಾವ್ಯ ಗಾರುಡಿಗ ಮತ್ತು ಕನ್ನಡಿಗರ ಮನೆ ಮಾತಾಗಿರುವ ಡಾ. ದ. ರಾ. ಬೇಂದ್ರೆಯವರ ಜನ್ಮದಿನ ಜನೇವರಿ 31. ಇದರ ಪ್ರಯುಕ್ತ ಈ ಲೇಖನ.
ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನವೆಂದು ಸಾರಿ ಸಾರಿ ಹೇಳಿ ಅದ್ಭುತವಾದ ಘನ ವ್ಯಕ್ತಿತ್ವವನ್ನು ಹೊಂದಿ ಬಾಳಿ ಬದುಕಿದವರು ನವೋದಯ ಸಾಹಿತ್ಯ ಕಾಲಘಟ್ಟದ ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು. ಧಾರವಾಡಕ್ಕೆ ಒಂದು ವಿಶಿಷ್ಠವಾದ ಸಾಹಿತ್ಯಿಕ ಅನುಪಮ ಚೆಲುವನ್ನು ತಂದು ಕೊಟ್ಟವರು ಡಾ. ದ. ರಾ. ಬೇಂದ್ರೆಯವರು. ಪಾತರಗಿತ್ತಿ ಪಕ್ಕಾ ನೋಡೀದೇನ ಅಕ್ಕಾ, ಶ್ರಾವಣಾ ಬಂತು ನಾಡಿಗೆ ಬಂತು ಬೀಡಿಗೆ, ಬಾರೋ ಸಾಧನಕೇರಿಗೆ, ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು, ಇಳಿದು ಬಾ ತಾಯಿ ಇಳಿದು ಬಾ, ಕುಣಿಯೋಣು ಬಾರಾ ಕುಣಿಯೋಣು ಬಾ ಎಂದು ನಮ್ಮನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ “ಅಂಬಿಕಾತನಯದತ್ತ” ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದ ವರಕವಿ ಬೇಂದ್ರೆಯವರು ಹುಟ್ಟಿದ್ದು ದಿನಾಂಕ 31.01.1896 ರಂದು ಧಾರವಾಡದ ಪೋತನೀಸ್ ಗಲ್ಲಿಯಲ್ಲಿರುವ ಗುಣಾರಿ ಮನೆತನದಲ್ಲಿ. ಅವತ್ತು ದತ್ತ ಜಯಂತಿ ಇದ್ದುದರಿಂದ ತಂದೆ ತಾಯಿ ಅವರಿಗೆ ದತ್ತಾತ್ರೇಯ ಅಂತ ಹೆಸರಿಟ್ಟರು. ತಂದೆ ಶ್ರೀ ರಾಮಚಂದ್ರ ಪಂತರು ಮತ್ತು ತಾಯಿ ಅಂಬಾಬಾಯಿ. ತಾಯಿಯ ಮುದ್ದಿನ ಮಗನಾದ ಬೇಂದ್ರೆಯವರು ಅವರ ಕಾವ್ಯನಾಮವನ್ನು ತಾಯಿಯ ಹೆಸರಿನೊಂದಿಗೆ ತಳುಕು ಹಾಕಿಕೊಂಡು ಅಂಬಿಕೆಯ ಮಗ ದತ್ತ ಎನ್ನುವ ಹಾಗೆ “ಅಂಬಿಕಾತನಯದತ್ತ” ಎಂದು ತಾಯಿಗೆ ಅತ್ಯಂತ ಗೌರವವನ್ನು ನೀಡಿದ್ದಾರೆ.
ಸರಿ ಸುಮಾರು 11 ವರ್ಷದವರಿದ್ದಾಗ ತಂದೆಯವರನ್ನು ಕಳೆದುಕೊಂಡಿದ್ದ ಬೇಂದ್ರೆಯವರು ಚಿಕ್ಕಪ್ಪ ಬಂಡೋಪಂತರ ಆಶ್ರಯ ಪಡೀತಾರೆ. ಅತ್ಯಂತ ಪ್ರೀತಿಯಿಂದ ತಾಯಿ ಅಂಬವ್ವ ಲಾಲನೆ ಪಾಲನೆ ಮಾಡತಾರೆ. ಮುಂದೆ ಬೇಂದ್ರೆಯವರು ತಮ್ಮ 28 ನೇ ವಯಸ್ಸಿನಲ್ಲಿದ್ದಾಗ ತಾಯಿಯನ್ನು ಕಳೆದುಕೊಳತಾರೆ.
ಸಾಹಿತ್ಯಿಕ ದೃಷ್ಟಿಯಿಂದ ನೋಡಿದಾಗ ಬನವಾಸಿ ಅಂದ ಕೂಡಲೆ ನಮಗ ನೆನಪಾಗೋದು ಆದಿಕವಿ ಪಂಪ. ಧಾರವಾಡ ಅಂದ ಕೂಡಲೇ ನಮಗ ನೆನಪಾಗೋದು ಬೇಂದ್ರೆ ಅಜ್ಜಾ. ಬೇಂದ್ರೆಯವರ ವ್ಯಕ್ತಿತ್ವಾನೇ ಅಂಥಾದ್ದು. ಮಂಗಳವಾರ ಪೇಟೆ, ಕಾಮನಕಟ್ಟಿಯಲ್ಲಿ ಆಡುತ್ತಾ, “ಅಂದ ತುಂಬಿತ್ತು ಹಾಲಗೇರಿ ತೆರಿ ಮ್ಯಾಲ ತೆರಿ ಅಲ್ಲೇ ಇದ್ದ ದತ್ತಾತ್ರೇಯ” ಅಂತ ಹಾಡುತ್ತಾ 1902 ರಲ್ಲಿ ಕನ್ನಡ ಶಾಲೆ ಪ್ರವೇಶಿಸಿದ ಬೇಂದ್ರೆಯವರು 1913 ರಲ್ಲಿ ಮ್ಯಾಟ್ರಿಕ್ ಪರೀಕ್ಷೆಯನ್ನು ಪೂರೈಸುತ್ತಾರೆ. ಬೇಂದ್ರೆಯವರು ಜಳಕಾ ಮಾಡತಿದ್ದ ಈ ಹಾಲಗೇರಿ ಈಗ ಇಲ್ಲ ಬಿಡರಿ. ಅದನ ಮುಚ್ಚಿ ಸಂತೀಪ್ಯಾಟಿ ಮಾಡ್ಯಾರ. ಇದು ದುರಂತ. ಆದರ ಏರಿಯ ಮೇಲೆ ಇದ್ದ, ಬೇಂದ್ರೆಯವರಿಗೆ ಸಂಸ್ಕಾರ ನೀಡಿದ ದತ್ತಾತ್ರೇಯ ಗುಡಿ ಮಾತ್ರ ಇನ್ನೂ ಉಳದೈತಿ. 1918 ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ಬಿ. ಏ ಪದವಿಯನ್ನು ಪಡೆಯುತ್ತಾರೆ. ಹುಬ್ಬಳ್ಳಿಯಲ್ಲಿ 1919 ರಲ್ಲಿ ಶ್ರೀ ವಾಸುದೇವ ಜೋಗಳೇಕರ ಅವರ ಮಗಳಾದ ರಂಗೂತಾಯಿಯವರನ್ನು ವಿವಾಹವಾಗುತ್ತಾರೆ. ಮದುವೆಯಾದ ಮೇಲೆ ರಂಗೂತಾಯಿ ಲಕ್ಷ್ಮೀಬಾಯಿಯಾಗಿ ಹೆಸರು ಬದಲಾವಣೆ ಆಗುತ್ತದೆ. ಒಟ್ಟು ಹುಟ್ಟಿದ 9 ಮಕ್ಕಳಲ್ಲಿ ಆರು ಮಕ್ಕಳು ಕಣ್ಣೆದುರಿನಲ್ಲೇ ಇಲ್ಲವಾದಾಗ ಬಹಳಷ್ಟು ಸಂಕಟವನ್ನು ಬೇಂದ್ರೆ ದಂಪತಿಗಳು ಅನುಭವಿಸುತ್ತಾರೆ. ಕೊನೆಗೆ ಉಳಿದದ್ದು ವಾಮನ ಮತ್ತು ಪಾಂಡುರಂಗ ಇಬ್ಬರು ಗಂಡು ಮಕ್ಕಳು ಹಾಗು ಒಬ್ಬ ಮಗಳು ಮಂಗಳ.
1918 ರಲ್ಲಿ ಬಿ ಏ ಪಾಸು ಮಾಡಿದ ಮೇಲೆ ಶಿಕ್ಷಕ ವೃತ್ತಿಯನ್ನು ಬೇಂದ್ರೆಯವರು ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಿಂದ ಪ್ರಾರಂಭ ಮಾಡಿದರು. ಮೂರು ವರ್ಷ ಈ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತಾರೆ. ರಾಷ್ಟ್ರೀಯ ಶಾಲೆ, ಸೊಂಡೂರು ಸಂಸ್ಥಾನಗಳಲ್ಲಿಯೂ ಕೂಡ ಕೆಲಸ ನಿರ್ವಹಿಸುತ್ತಾರೆ. ನಿರುದ್ಯೋಗಕ್ಕೂ ಬೇಂದ್ರೇಯವರಿಗೂ ಅವಿನಾಭಾವ ಸಂಬಂಧವಿದ್ದಂತೆ ಕಾಣತದೆ. ಒಂದೂರಿನಿಂದ ಇನ್ನೊಂದೂರಿಗೆ ಅವರ ಪಯಣ ನಿರಂತರವಾಗಿ ಸಾಗಿತ್ತು. 1925 ರಿಂದ 1932 ವರೆಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು ಬೇಂದ್ರೆಯವರು. ಅಣ್ಣ ಮಾಸ್ತಿ ಅವರ ಬೆಂಬಲದಿಂದ ‘ಜೀವನ’ ಪತ್ರಿಕೆಯ ಸಂಪಾದಕನೆಂಬ ಗೌರವ ವೃತ್ತಿಯನ್ನೂ ಕೈಗೊಂಡರು. ಒಂದು ವರ್ಷ ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ವೃತ್ತಿ. ನಂತರ ಮತ್ತೆ ಗದುಗಿನ ವಿದ್ಯಾದಾನ ಸಮಿತಿಯ ಚೌಹಾನ್ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. 1935 ರಿಂದ 1940 ರವರೆಗೆ ಸುಮಾರು 5 ವರ್ಷಗಳ ಕಾಲ ನಿರುದ್ಯೋಗವನ್ನು ಅನುಭವಿಸಿದ ಬೇಂದ್ರೆಯವರು ಪುಣೆಯ ಕಾಮರ್ಸ್ ಕಾಲೇಜಿನಲ್ಲಿ ಅರೆಕಾಲಿಕ ಕನ್ನಡ ಅಧ್ಯಾಪಕ ವೃತ್ತಿ ಮತ್ತು ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ.
ಮುಂಬೈ ವಿಶ್ವ ವಿದ್ಯಾಲಯದಿಂದ 1935 ರಲ್ಲಿ ಎಂ. ಏ ಪದವಿಯನ್ನು ಗಳಿಸುತ್ತಾರೆ. ಅನಂತರ 1944 ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡದ ಪ್ರಾಧ್ಯಾಪಕ ವೃತ್ತಿ. ಸುಮಾರು 12 ವರ್ಷಗಳ ಕಾಲ ಆ ಹುದ್ದೆಯಲ್ಲೇ ಇದ್ದು ಅಲ್ಲಿಯೇ ನಿವೃತ್ತಿ ಹೊಂದುತ್ತಾರೆ. ನಿವೃತಿ ಹೊಂದಿದ ಮೇಲೆ ಧಾರವಾಡಕ್ಕೆ ಮರಳಿದ ಬೇಂದ್ರೆಯವರು 1956 ರಲ್ಲಿ ಧಾರವಾಡದ ಆಕಾಶವಾಣಿಯಲ್ಲಿ ಸಲಹೆಗಾರರಾಗಿ ನೇಮಕಗೊಳ್ಳುತ್ತಾರೆ.
ಬೇಂದ್ರೆಯವರಿಗೆ ಅವರ ತಾಯಿ ಅಂಬಾಬಾಯಿಯವರು ತುಂಬಾ ಪ್ರಭಾವ ಬೀರಿದವರು. ಬಾಲ್ಯದಲ್ಲಿಯೇ ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ ಅವರಲ್ಲಿ ಸಾಹಿತ್ಯದ ಬಗ್ಗೆ ಕುತೂಹಲ ಮೂಡಿಸಿದವರು. ಅವರ ಕಾಕಾ ಬಂಡೋಪಂತರು ಬಾಲ್ಯದ ದಿನಗಳಲ್ಲಿ ಅವರಿಗೆ ಓದಿನ ಗೀಳನ್ನು ಹಚ್ಚಿದವರಲ್ಲಿ ಒಬ್ಬರು. ಶಿಕ್ಷಕರಾಗಿದ್ದ ಶ್ರೀ ಹುಯಿಲಗೋಳ ನಾರಾಯಣರಾವ್ ಅವರ ಪ್ರಭಾವ ಬೇಂದ್ರೆಯವರ ಮೇಲಾಗಿತ್ತು. ಪುಣೆಯ ಫರ್ಗ್ಯೂಸನ್ ಕಾಲೇಜಿನ ಇಂಗ್ಲೀಷ್ ಪ್ರೋಫೇಸರ್ ಪಟವರ್ಧನ್ ಅವರು ಬೇಂದ್ರೆಯವರಲ್ಲಿನ ಕವಿಯನ್ನು ಗುರುತಿಸಿ ನೀರೆರೆದು ಪೋಷಿಸಿದವರಲ್ಲಿ ಒಬ್ಬರು.
ಸಾಹಿತ್ಯದ ದೃಷ್ಟಿಯಿಂದ ಖಲೀಲ್ ಝಿಬ್ರಾನ್, ಜಾರ್ಜ್ ರಸೆಲ್, ಜಿಡ್ಡು ಕೃಷ್ಣಮೂರ್ತಿ, ಶ್ರೀ ಅರವಿಂದರು, ಸ್ವಾಮಿ ರಾಮದಾಸರಂಥ ಸಾಹಿತಿಗಳಿಂದ ಮತ್ತು ದಾರ್ಶನಿಕರಿಂದ ಪ್ರಭಾವಿತರಾಗಿದ್ದರು.
ಇಂಗ್ಲಿಷ್, ಕನ್ನಡ, ಸಂಸ್ಕೃತ ಮತ್ತು ಮರಾಠಿ ಸಾಹಿತ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಓದುತ್ತಿದ್ದ ಬೇಂದ್ರೆಯವರಲ್ಲಿ ಚತುರ್ಭಾಷಾ ಸಂಸ್ಕೃತಿಗಳ ಸಂಗಮವಾಗಿತ್ತು ಹಾಗೆಯೇ ನಗರ, ಗ್ರಾಮೀಣ ಹಾಗೂ ಜಾನಪದ ಸಂಸ್ಕೃತಿಗಳು ಸಮಾಗಮಗೊಂಡಿದ್ದವು. ಮರಾಠಿ ಬೇಂದ್ರೆಯವರ ಮಾತೃಭಾಷೆಯಾದರೂ ಅವರು ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ಬಿ. ಏ ನಲ್ಲಿ ಅವರ ಐಚ್ಛಿಕ ಭಾಷೆಗಳು ಇಂಗ್ಲೀಷ್ ಮತ್ತು ಸಂಸ್ಕೃತ. ಹಾಗಾಗಿ ಮಾತೃಭಾಷೆ ಮರಾಠಿ, ಕಲಿತದ್ದು ಕನ್ನಡ, ಬಿ ಏ ನಲ್ಲಿ ಇಂಗ್ಲೀಷ್ ಮತ್ತು ಸಂಸ್ಕೃತದಿಂದಾಗಿ ನಾಲ್ಕೂ ಭಾಷೆಗಳಲ್ಲಿ ಬೇಂದ್ರೆಯವರಿಗೆ ಹಿಡಿತವಿತ್ತು ಮತ್ತು ನಿರರ್ಗಳವಾಗಿ ಮಾತನಾಡುತ್ತಿದ್ದರು. ಸರಿ ಸುಮಾರು 12 ವರ್ಷ ಸೊಲ್ಲಾಪುರದಲ್ಲಿ ಕನ್ನಡವನ್ನು ಕಲಿಸಿದ್ದಾರೆ.
ಅವರ ಮನೆಯಲ್ಲಿರುವ ಗ್ರಂಥಗಳ ಸಂಗ್ರಹಣೆ ಸರಿ ಸುಮಾರು 16,000. ಅಗಾಧ ಓದುವ ಹುಚ್ಚು ಇದ್ದಿದ್ದರಿಂದ ಅನೇಕ ವಿಷಯಗಳನ್ನು ತಲೆ ತುಂಬ ತುಂಬಿಕೊಂಡಿದ್ದರು. ಹಾಗಾಗಿ 100 ಕ್ಕೂ ಹೆಚ್ಚು ವಿಷಯಗಳನ್ನು ಓದಿ ತಿಳಿದುಕೊಂಡಿದ್ದರು. ರಾಮಾಯಣ, ಮಹಾಭಾರತ, ಭಾಗವತ, ಬಸವಾದಿ ಶರಣರ ವಚನ ಸಾಹಿತ್ಯ, ದಾಸವರೇಣ್ಯರ ಕೀರ್ತನ ಸಾಹಿತ್ಯ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಖಗೋಳ ವಿಜ್ಞಾನ, ಉಪನಿಷತ್ತು, ಪಾಣಿಣಿಯ ವ್ಯಾಕರಣ, ಭೌತ ವಿಜ್ಞಾನ, ರಸಾಯನ ಶಾಸ್ತ್ರ, ವೈದ್ಯಕೀಯ ವಿಜ್ಞಾನ, ಗಣೀತ ಹೀಗೆ ಹತ್ತು ಹಲವಾರು ವಿವಿಧ ವಿಷಯಗಳ ಬಗ್ಗೆ ಓದಿದ್ದರು ಮತ್ತು ಅವುಗಳ ಬಗ್ಗೆ ಅಸ್ಖಲಿತವಾಗಿ ಮಾತನಾಡಬಲ್ಲವರಾಗಿದ್ದರು.
1914 ರಿಂದ 1918 ರವರೆಗೆ ಪುಣೆಯಲ್ಲಿದ್ದ ಕಾಲಘಟ್ಟದಲ್ಲಿ “ಶಾರದಾ ಮಂಡಲ” ಎನ್ನುವ ಗೆಳೆಯರ ಬಳಗವನ್ನು ಕಟ್ಟಿಕೊಂಡು ಅದರ ಮೂಲಕ ಸಾಹಿತ್ಯಿಕ ಚಟುವಟಿಕೆಗಳನ್ನು ಶುರು ಮಾಡಿದರು. 1921 ರಲ್ಲಿ ಧಾರವಾಡದಲ್ಲಿ “ಗೆಳೆಯರ ಗುಂಪು” ಹುಟ್ಟಿಹಾಕಿ ಅದರ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ವಿಸ್ತಾರ ಮಾಡಿಕೊಂಡರು. ಈ ವೇಳೆಯಲ್ಲಿ “ಜೇನುಹುಟ್ಟು” ಮತ್ತು “ಗೆಳೆಯ” ಎನ್ನುವ ಹಸ್ತಪ್ರತಿ ಪತ್ರಿಕೆಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಬರೆಯುವಂತೆ ಪ್ರೇರೇಪಣೆ ನೀಡುತ್ತಾರೆ. “ಜಯ ಕರ್ನಾಟಕ” ಎನ್ನುವ ಪತ್ರಿಕೆಯನ್ನು ಆಲೂರು ವೆಂಕಟರಾಯರು ಪ್ರಾರಂಭಿಸಿದಾಗ ಇದೇ ಗೆಳೆಯರ ಬಳಗ 1929 ರಲ್ಲಿ ಈ ಪತ್ರಿಕೆಯ ಸಾರಥ್ಯವನ್ನು ವಹಿಸಿಕೊಳ್ಳುತ್ತದೆ. ಮನೋಹರ ಗ್ರಂಥಮಾಲೆಯ ಶ್ರೀ ಜಿ ಬಿ ಜೋಶಿಯವರು ಜಯ ಕರ್ನಾಟಕ ಪತ್ರಿಕೆ ಪ್ರಕಟಿಸಲು ಅನುಕೂಲ ಮಾಡಿಕೊಟ್ಟರು. ಸಂಪಾದಕರಾಗಿ ಡಾ. ವಿನಾಯಕ ಕೃಷ್ಣ ಗೋಕಾಕ, ಶ್ರೀ ಮಧುರ ಚೆನ್ನ, ಶ್ರೀ ರಂಗನಾಥ ಶ್ರೀನಿವಾಸ ಮುಗಳಿ, ಶ್ರೀ ಬೆಟಗೇರಿ ಕೃಷ್ಣಶರ್ಮ ಮತ್ತು ಶ್ರೀ ಗೋವಿಂದ ಚುಳಕಿ ಮುಂತಾದವರ ದೊಡ್ಡ ಮಿತ್ರ ಮಂಡಳಿಯೇ ನೆರವಾಗುತ್ತದೆ.
“ಗರಿ” ಕವನ ಸಂಕಲನದಲ್ಲಿನ “ನರಬಲಿ” ಎನ್ನುವ ಕವನದಲ್ಲಿ ಬಂಗಾಲದಲ್ಲಿ ನಡೆದ ಹತ್ಯಾಕಾಂಡವನ್ನು ನಿರೂಪಿಸಿದ್ದಾರೆ ಎಂದು ಬ್ರಿಟೀಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾದರು. ಹಾಗಾಗಿ ಅವರನ್ನು 1932 ರಲ್ಲಿ ಬಂಧಿಸಿ ಮೂರು ತಿಂಗಳ ಕಾಲ ಬೆಳಗಾವಿಯ ಹಿಂಡಲಗಾ ಕಾರಾಗ್ರಹದಲ್ಲಿರಿಸಿದ್ದರು.
ಜೀವನದುದ್ದಕ್ಕೂ ನಿರುದ್ಯೋಗ-ಉದ್ಯೋಗಗಳೊಡನೆ ಹೋರಾಟ ನಡೆಸಿದ ಕವಿ ಚೇತನ ಬೇಂದ್ರೆಯವರು. ಈ ಮಧ್ಯೆಯೂ ಧೃತಿಗೆಡದ ವರಕವಿ ಬೇಂದ್ರೆಯವರು ಸಾಹಿತ್ಯದ ಗೀಳನ್ನು ಬದುಕಿನುದ್ದಕ್ಕು ಉಳಿಸಿಕೊಂಡು ಬೆಳೆಸಿಕೊಂಡು ಬಂದವರು. ಮದುವೆ ಆಗುವದಕ್ಕಿಂತಲೂ ಮುಂಚೆನೇ ಬೇಂದ್ರೆಯವರು ಕಾವ್ಯಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. 1918 ರಲ್ಲಿ ಅವರ ಮೊದಲ ಕವನ “ಪ್ರಭಾತ” ಎನ್ನುವ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದಾಚೆಗೆ ಅವರು ಕವನಗಳನ್ನು ಪ್ರಕಟ ಮಾಡುತ್ತಲೇ ಬಂದರು. ಅವರ ಪ್ರಪ್ರಥಮ ಕಾವ್ಯ ಸಂಕಲನ “ಕೃಷ್ಣಕುಮಾರಿ” 1922 ರಲ್ಲಿ ಪ್ರಕಟವಾಗುತ್ತದೆ. ಅಲ್ಲಿಂದ ಮುಂದೆ ಅವರ ಲೇಖನಿಯಿಂದ ಹರಿದು ಬಂದ ಪುಸ್ತಕಗಳ ಪಟ್ಟಿ ಬಹಳ ದೊಡ್ಡದಾಗಿದೆ. ಬೇಂದ್ರೆಯವರು ಬರೆದ ಒಟ್ಟು ಕವನಗಳು 1427. 3500 ಪುಟಗಳ “ಔದುಂಬರ ಗಾತ್ರಿ” ಯನ್ನು ಅವರ ಮಗ ಡಾ. ವಾಮನ ಬೇಂದ್ರೆಯವರು ಮತ್ತು ಪ್ರೊ. ಶರ್ಮಾರವರು ಸಂಪಾದಿಸಿದ 6 ಬೃಹತ್ ಸಂಪುಟಗಳನ್ನು ಬೇಂದ್ರೆ ಸಂಶೋಧನಾ ಕೇಂದ್ರದಿಂದ ಪ್ರಕಟಿಸಲಾಗಿದೆ. ಬೇಂದ್ರೆಯವರ ಸಾಹಿತ್ಯ ಕೃಷಿಯ ಒಂದು ಪಕ್ಷಿನೋಟ ಇಲ್ಲಿದೆ.
ಕವನ ಸಂಕಲನಗಳು :
1922 : ಕೃಷ್ಣಕುಮಾರಿ
1932 : ಗರಿ
1934 : ಮೂರ್ತಿ
1934 : ಕಾಮಕಸ್ತೂರಿ
1937 : ಸಖೀಗೀತ
1938 : ಉಯ್ಯಾಲೆ
1938 : ನಾದಲೀಲೆ
1943 : ಮೇಘದೂತ (ಕಾಳಿದಾಸನ ಮೇಘದೂತದ ಕನ್ನಡ ಅವತರಣಿಕೆ)
1946 : ಹಾಡುಪಾಡು
1951 : ಗಂಗಾವತರಣ
1956 : ಸೂರ್ಯಪಾನ
1956 : ಹೃದಯ ಸಮುದ್ರ
1956 : ಮುಕ್ತಕಂಠ
1957 : ಚೈತ್ರಾಲಯ
1957 : ಜೀವನ ಲಹರಿ
1957 : ಅರಳು ಮರಳು
1958 : ನಮನ
1959 : ಸಂಚಯ
1960 : ಉತ್ತರಾಯಣ
1961 : ಮುಗಿಲ ಮಲ್ಲಿಗೆ
1962 : ಯಕ್ಷ ಯಕ್ಷಿ
1964 : ನಾಕುತಂತಿ
1966 : ಮರ್ಯಾದೆ
1968 : ಶ್ರೀಮಾತಾ
1969 : ಬಾ ಹತ್ತರ
1970 : ಇದು ನಭೋವಾಣಿ
1972 : ವಿನಯ
1973 : ಮತ್ತೆ ಶ್ರಾವಣ ಬಂತು
1977 : ಒಲವೆ ನಮ್ಮ ಬದುಕು
1978 : ಚತುರೋಕ್ತಿ ಮತ್ತಿತರ ಕವಿತೆಗಳು
1982 : ಪರಾಕಿ
1982 : ಕಾವ್ಯ ವೈಖರಿ
1982 : ತಾ ಲೆಕ್ಕಣಕಿ ತಾ ದೌತಿ
1983 : ಬಾಲಬೋಧೆ
1986 : ಚೈತನ್ಯದ ಪೂಜೆ
ವಿಮರ್ಶೆ ಸಾಹಿತ್ಯ :
1940 : ಸಾಹಿತ್ಯ ಸಂಶೋಧನೆ
1945 : ವಿಚಾರ ಮಂಜರಿ
1954 : ಲಕ್ಷ್ಮೀಷ ಕವಿಯ ಜೈಮಿನಿ ಬಾರತಕ್ಕೆ ಮುನ್ನುಡಿ.
1959 : ಮಹಾರಾಷ್ಟ್ರ ಸಾಹಿತ್ಯ
1962 : ಕಾವ್ಯೋದ್ಯೋಗ
1968 : ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು
1974 : ಸಾಹಿತ್ಯದ ವಿರಾಟ್ ಸ್ವರೂಪ
1976 : ಕುಮಾರವ್ಯಾಸ ಪುಸ್ತಿಕೆ
1976 : ಮತಧರ್ಮ
1977 : ಆಧುನಿಕ ಮಾನವ
ನಾಟಕ :
1932 : ತಿರುಕನ ಪಿಡುಗು
1934 : ಉದ್ಧಾರ
1935 : ನಗೆಯ ಹುಗೆ
1936 : ಹುಚ್ಚಾಟಗಳು
1950 : ಹೊಸ ಸಂಸಾರ ಮತ್ತಿತರ ನಾಟಕಗಳು
1959 : ಸಾಯೋ ಆಟ (ನಾಟಕ)
ಕಥಾ ಸಂಕಲನ, ಪ್ರಬಂಧ ಮತ್ತು ಸಣ್ಣಕಥೆಗಳು :
1940 : ನಿರಾಭರಣ ಸುಂದರಿ
1971 : ಮಾತೆಲ್ಲ ಜ್ಯೋತಿ
ಅನುವಾದಗಳು :
1928 : ಉಪನಿಷತ್ ರಹಸ್ಯ (ರಾನಡೆಯವರ ಕೃತಿ)
1936 : ಭಾರತೀಯ ನವಜನ್ಮ (ಶ್ರೀ ಅರವಿಂದರ ಕೃತಿಗಳು)
1947 : ಅರವಿಂದರ ಯೋಗ, ಆಶ್ರಮ ಮತ್ತು ತತ್ವೋಪದೇಶ
1966 : ಗುರು ಗೋವಿಂದಸಿಂಗ್
1967 : ನೂರೊಂದು ಕವನ (ರವೀಂದ್ರನಾಥ ಟ್ಯಾಗೋರ್ ಅವರ ಕವನಗಳು)
1968 : ಕಬೀರರ ವಚನಾವಲಿ (ಕಬೀರರ ದೋಹೆಗಳು)
1972 : ಭಗ್ನಮೂರ್ತಿ (ಅ. ರಾ. ದೇಶಪಾಂಡೆಯವರ ಕೃತಿ)
ಸಂಪಾದನೆ :
ನನ್ನದು ಈ ಕನ್ನಡ ಹಾಡು
ಹಕ್ಕಿ ಹಾರುತಿದೆ
ಚಂದ್ರಹಾಸ
ಹೊಸಗನ್ನಡ
ಕಾವ್ಯಶ್ರೀ
ಕನಕದಾಸ ಚತುಃಶತಮಾನೋತ್ಸವ
ಮರಾಠಿ ಸಾಹಿತ್ಯ :
1965 : ಸಂವಾದಗಳು, ಕವನಗಳು, ವಿಮರ್ಶೆ ಮತ್ತು ಲೇಖನಗಳು.
1965 : ವಿಠ್ಠಲ ಸಂಪ್ರದಾಯ
1972 : ಶಾಂತಲಾ (“ಸಂವಾದʼ ಮರಾಠಿಗೆ ಅನುವಾದ)
ಪ್ರಶಸ್ತಿ ಮತ್ತು ಪುರಸ್ಕಾರಗಳು :
1930 : ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ಲೇಖಕರ ಗೋಷ್ಠಿ ಅಧ್ಯಕ್ಷತೆ
1935 : ಮುಂಬೈನ 21 ನೇ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಗೋಷ್ಠಿಯ ಅಧ್ಯಕ್ಷತೆ
1943 : ಶಿವಮೊಗ್ಗೆಯಲ್ಲಿ ನಡೆದ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
1954 : ಅರಳು ಮಲ್ಲಿಗೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1964 : ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸನ್ಮಾನ
1965 : ಸಂವಾದ ಎನ್ನುವ ಮರಾಠಿ ಕೃತಿಗೆ ಮಹಾರಾಷ್ಟ್ರದ ಕೇಳ್ಕರ್ ಪ್ರಶಸ್ತಿ.
1968 : ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್
1968 : ಮೈಸೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್
1968 : ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ
1972 : ಆದಮಾರು ಮಠದಿಂದ “ಕರ್ನಾಟಕ ಕವಿತಿಲಕ” ನೀಡಿ ಸನ್ಮಾನ
1974 : ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ.
1976 : ಕಾಶಿ ವಿದ್ಯಾಪೀಠ ವಾರಾಣಸಿಯಿಂದ ಗೌರವ ಡಾಕ್ಟರೇಟ್
ಬೇಂದ್ರೆಯವರ ಕವನ ಸಂಕಲನಗಳಲ್ಲಿ “ನಾಕುತಂತಿ” ಕವನ ಸಂಕಲನ ಅತ್ಯಂತ ಪ್ರಖ್ಯಾತಿಯನ್ನು ಪಡೆದಂಥ ಅನುಪಮ ಕೃತಿ. ಈ ಕೃತಿ ಡಾ. ದ ರಾ ಬೇಂದ್ರೆಯವರಿಗೆ 1973-74 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ. ಈ ಕೃತಿಯಲ್ಲಿನ “ಚೈತನ್ಯದ ಪೂಜೆ” ಎನ್ನುವ ಕವನವನ್ನು ವಚನ ಸಾಹಿತ್ಯದೊಂದಿಗೆ ತುಲನಾತ್ಮಕ ಅಧ್ಯಯನಕ್ಕೆ ಆರಿಸಿಕೊಳ್ಳಲಾಗಿದೆ.
ಚೈತನ್ಯದ ಪೂಜೆ ನಡೆದದ ನೋಡ ತಂಗಿ ಅಭಂಗದ ಭಂಗೀ
ಈ ಕವನದ ಪಲ್ಲವಿಯೇ ಒಂದು ಅದ್ಭುತ ಶಬ್ದ ಪ್ರಯೋಗ. “ಚೈತನ್ಯದ ಪೂಜೆ ನಡೆದದ ನೋಡ ತಂಗಿ ಅಭಂಗದ ಭಂಗೀ”. ಚೈತನ್ಯ ಅನ್ನುವುದು ಅಂತರಂಗದ ಅರಿವು, ಸಮಷ್ಠಿ ಪ್ರಜ್ಞೆ ಅಥವಾ ನಮ್ಮ ಸುತ್ತ ಮುತ್ತಲೂ ಇರುವ ಮತ್ತು ನಡೆಯುವ ಸಂಸ್ಕಾರದ ಬೆಳಕು. ಇಂಥ ಅರಿವಿನ ಪ್ರಜ್ಞೆಯ ಪೂಜೆಯನ್ನು ಇಲ್ಲಿಯೇ ತಂಗಿ ನೋಡಬೇಕು, ಮಾಡಬೇಕು ಎನ್ನುವ ಸಂದೇಶ. ಇಲ್ಲಿ ತಂಗಿ ಎನ್ನುವುದು ಸಹೋದರಿ ಅಲ್ಲಾ. ತಂಗುದಾಣ, ನೀನಿಲ್ಲಿ ಇರು, ನಿಲ್ಲು ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ಚೈತನ್ಯದ ಪೂಜೆ ನಡೆದದ ನೋಡ ತಂಗಿ, ಅಂದರ ಹುಟ್ಟಿದಾರಭ್ಯದಿಂದ ಮರಣದವರೆಗೆ ನಾವುಗಳು ಇಲ್ಲಿಯೇ ತಂಗಿ ಅಥವಾ ಇದ್ದು, ನಮ್ಮ ಇರುವಿಕೆಯನ್ನು ಈ ಅರಿವಿನ ಪೂಜೆ ಅಥವಾ ಸಾಧನೆಯನ್ನು ಸಮಷ್ಠಿಗೆ ತಿಳಿಸಬೇಕು. ಇಂಥ ಅರಿವಿನ ಪ್ರಜ್ಞೆ ಹಾಗೂ ಜಂಗಮ ಪ್ರಜೆಯನ್ನು ನಮ್ಮ ಬಸವಾದಿ ಶರಣರು ಬಹಳ ಸುಂದರವಾಗಿ ತಮ್ಮ ವಚನಗಳಲ್ಲಿ ಚಿತ್ರಿಸಿದ್ದಾರೆ. ದಿಟ್ಟ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರು ಚೈತನ್ಯ, ಸಮಷ್ಠಿ ಅಥವಾ ಜಂಗಮ ಪ್ರಜ್ಞೆಯನ್ನು ಉತ್ಕೃಷ್ಠವಾಗಿ ನಿರೂಪಣೆ ಮಾಡಿದ್ದಾರೆ.
ಅಷ್ಟಾವರಣದಲ್ಲಿ, ಗುರು ಮತ್ತು ಲಿಂಗದ ನಂತರ ಬರುವ ಜಂಗಮ ತತ್ವ ಒಂದು ಪ್ರಮುಖ ತತ್ವ. ಹಾಗಾದರೆ ನಮಗೆ ಎದುರಾಗುವ ಮೊಟ್ಟ ಮೊದಲನೇಯ ಪ್ರಶ್ನೆ ಅಷ್ಟಾವರಣದ ಮೂರನೇಯ ತತ್ವ “ಜಂಗಮ” ಅಂದರೆ ಯಾರು ?
ಯಾವುದಕ್ಕೆ ಚಲನೆ ಇದೆಯೋ ಅದೇ ಜಂಗಮ.
ಅದು ಗುರುವಿನ ರೂಪದಲ್ಲಿರಬಹುದು, ಗುರುವಿನ ಕೃಪೆ ಆಗಿರಬಹುದು, ಅಂತರಂಗದ ಅರಿವು ಇರಬಹುದು. ಅಂದರೆ ನಿರಂತರ ಪ್ರವಾಹದಂತೆ ಪ್ರತೀದಿನ ಹೊಸದನ್ನು ನೀಡುವ ಮತ್ತು ಅದರ ಮೂಲಕ ನಮ್ಮ ಅಜ್ಞಾನವನ್ನು ಕಳೆದು ಬೆಳಕು ನೀಡುವ ತತ್ವವೇ ಜಂಗಮ ತತ್ವ. ಜಂಗಮನು ಜ್ಞಾನಮೂರ್ತಿ. ಅನುಭವ ಜ್ಞಾನವನ್ನು ಪಡೆದವ. ಭಕ್ತನನ್ನು ಭವಸಾಗರದಿಂದ ದಾಟಿಸುವ, ಗಮ್ಯಸ್ಥಾನಕ್ಕೆ ಕೊಂಡೊಯ್ಯುವ ಮಹಾತ್ಮನೇ ಜಂಗಮನು. ಶ್ರೇಷ್ಠತೆಯಲ್ಲಿ, ಜೇಷ್ಠತೆಯಲ್ಲಿ ವಚನಕಾರರು ಜಂಗಮ ತತ್ವವನ್ನು ವಿವಿಧ ರೀತಿಯಲ್ಲಿ ಉಲ್ಲೇಖಿಸಿದ್ದನ್ನು ನಾವು ಕಾಣಬಹುದು.
ಪೃಥ್ವಿ ಶುದ್ಧವೆಂಬೆನೆ | ಪೃಥ್ವಿ ಶುದ್ಧವಲ್ಲ ||
ಜಲ ಶುದ್ಧವೆಂಬೆನೆ | ಜಲ ಶುದ್ಧವಲ್ಲ ||
ಅಗ್ನಿ ಶುದ್ಧವೆಂಬೆನೆ | ಅಗ್ನಿ ಶುದ್ಧವಲ್ಲ ||
ವಾಯು ಶುದ್ಧವೆಂಬೆನೆ | ವಾಯು ಶುದ್ಧವಲ್ಲ ||
ಆಕಾಶ ಶುದ್ಧವೆಂಬೆನೆ | ಆಕಾಶ ಶುದ್ಧವಲ್ಲ ||
ಗುರುವೇ ನೀ | ಕೇಳಯ್ಯಾ ||
ಹುಸಿ ನುಸುಳ | ಕಳೆದು ||
ಜ್ಞಾನವೆಂಬ | ಬೆಳಗ ಸಾಧಿಸಬಲ್ಲಡೆ ||
ಇದೊಂದೆ ಶುದ್ಧವೆಂದ | ನಂಬಿಗ ಚೌಡಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-963 / ವಚನ ಸಂಖ್ಯೆ-189)
ಇಲ್ಲಿ ಜ್ಞಾನ ಪ್ರಕಾಶವನ್ನು ಬೆಳಗಿಸಬಲ್ಲ ಜಂಗಮ ಮತ್ತು ಚೈತನ್ಯದ ಶುದ್ಧತೆಯ ಬಗ್ಗೆ ಶರಣ ಅಂಬಿಗರ ಚೌಡಯ್ಯನವರು ಹೇಳತಾರೆ. ಎಲ್ಲ ಪಂಚ ತತ್ವಗಳಲ್ಲೂ ಅಶುದ್ಧತೆಯನ್ನು ಕಾಣಬಹುದು. ಎಂಥ ದೃಷ್ಟಾಂತವನ್ನು ನಮ್ಮೆದುರಿಗೆ ಬಿಚ್ಚಿಡತಾರೆ. ಹುಸಿ ನುಸುಳ ಕಳೆದು ಅಂದರೆ ಮನದಲ್ಲಿರುವ ಅಂಧಕಾರವನ್ನು ಕಳೆದು ಜ್ಞಾನ ದೀವಿಗೆಯನ್ನು ಬೆಳೆಸುವದು ಜಂಗಮದ ಸಾಧನೆಯಾಗಬೇಕು ಎಂಬುದನ್ನು ಎಷ್ಟು ಅಲಂಕಾರಿಕವಾಗಿ ವರ್ಣಿಸತಾರೆ.
ನಮ್ಮ “ವಚನ ಮಂದಾರ” ವೇದಿಕೆಯ ಸದಸ್ಯೆ ಅಥಣಿಯ ಶರಣೆ ರೋಹಿಣಿ ಯಾದವಾಡ ಅವರು ಜಂಗಮ ತತ್ವದ ಬಗ್ಗೆ ಉತ್ತಮವಾಗಿ ಬರೆದಿದ್ದಾರೆ. ಜಂಗಮ ಅಥವಾ ಚೈತನ್ಯವು ನಿತ್ಯ ಚಲನಶೀಲ. ಇನ್ನೂ ಇದರ ಶ್ರೇಷ್ಠತೆ ಹೇಳಬೇಕೆಂದರೆ ಅಣ್ಣ ಬಸವಣ್ಣನವರು ಹೇಳಿದಂತೆ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎನ್ನುವುದನ್ನು ನೋಡಲಾಗಿ ಸ್ಥಾವರ ಎಂದರೆ ಜಡವಾದರೆ, ಜಂಗಮ ಚೈತನ್ಯ ಚಲನಸ್ವರೂಪಿ. ಜಂಗಮ ವ್ಯಾಪಕಾರ್ಥವುಳ್ಳದ್ದು. ಜಂಗಮನಿಗೆ ನೈತಿಕ ಮೌಲ್ಯಗಳ ಹಂಗೊಂದು ಬಿಟ್ಟರೆ ಇನ್ನಾವ ಹಂಗೂ ಇಲ್ಲವೆನ್ನಲಾಗುತ್ತದೆ.
ಶ್ರೀ ಗುರು ಲಿಂಗ ಜಂಗಮಕ್ಕೆ | ಅರ್ಥ ಪ್ರಾಣಾಭಿಮಾನವ ಕೊಟ್ಟು ||
ಅಹಂಕಾರವಳಿದಿಜಹಂತು | ಪುರಾತನರ ಮನೆಯಲ್ಲಿ ||
ಎತ್ತಾಗಿ ಹುಟ್ಟಿಸಯ್ಯ | ತೊತ್ತಾಗಿ ಹುಟ್ಟಿಸಯ್ಯ ||
ಬಾಗಿಲ ಕಾಯ್ದಿಪ್ಪಂತೆ | ಸೊಣಗನಾಗಿ ಹುಟ್ಟಿಸಯ್ಯ ||
ಜಂಗಮಲಿಂಗವೇ ಶಿವನೆಂದು | ನಂಬಿ ನಮಸ್ಕರಿಸುವ ||
ಪುರಾತನರ ಮನೆಯ ಬೇಲಿಯಾಗಿ | ಹುಟ್ಟಿಸಯ್ಯ ರಾಮನಾಥ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1285 / ವಚನ ಸಂಖ್ಯೆ-858)
ಇಲ್ಲಿ ಜಂಗಮ ಮಹತ್ವವನ್ನು ಸಾರಲಾಗಿದ್ದು, ಪರಮಾತ್ಮನ ಸಾಕಾರ ರೂಪಿಗಳಾದ ಗುರು, ಲಿಂಗ, ಜಂಗಮರಿಗೆ ಸಂಪತ್ತು ಪ್ರಾಣಾಭಿಮಾನವನ್ನು ಸಮರ್ಪಿಸಿದರೆ ಅವು ಶಿವನಿಗರ್ಪಿತವಾಗಿತ್ತವೆ. ಇದರಿಂದ ಅಹಂಕಾರ ನಿರಶನವಾಗಿ ಪೂಜ್ಯನಾಗುತ್ತಾನೆ. ಅಂಥವರೇ ಪುರಾತನರು. ಅಂತೆಯೇ ಭಕ್ತನು ಅವರ ಮನೆಯಲ್ಲಿ ಎತ್ತಾಗಿ, ತೊತ್ತಾಗಿ (ಸೇವಕ) ಬಾಗಿಲು ಕಾಯುವ ನಾಯಿಯಾಗಿ ಇಲ್ಲದೆ ಹೋದರೆ ಕೊನೆ ಪಕ್ಷ ಅವರ ಮನೆಯ ಬೇಲಿಯಾಗಿಯಾದರೂ ನನ್ನನ್ನು ಹುಟ್ಟಿಸು ಎಂದು ಭಕ್ತನಾದವನು ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾನೆ. ಜಂಗಮನನ್ನೆ ಶಿವನೆಂದು ಪರಿಭಾವಿಸುವ ಪರಿಯನ್ನು ಇಲ್ಲಿ ಕಾಣುತ್ತೇವೆ. ಇಂಥ ಚೈತನ್ಯದ ಪೂಜೆಯನ್ನು ಮಾಡಬೇಕೆನ್ನುವುದು ಡಾ. ದ. ರಾ. ಬೇಂದ್ರೆಯವರ ಈ ಚೈತನ್ಯದ ಪೂಜೆ ಎನ್ನುವ ಕವನದಲ್ಲಿ ವ್ಯಕ್ತವಾಗಿದೆ.
ಇನ್ನು ಅಭಂಗದ ಭಂಗಿ ಎನ್ನುವ ಅಪರೂಪದಲ್ಲಿ ಅಪರೂಪದ ಅನುಪಮ ಶಬ್ದದ ಉಲ್ಲೇಖ. “ವಾರಕರೀ” ಎನ್ನುವ ವಿಠೋಬನ ಭಕ್ತರು ನಡೆದುಕೊಂಡು ಪಂಢರಪುರಕ್ಕೆ ಹೋಗುವಾಗ ಈ ಅಭಂಗ ಎನ್ನುವ ಭಕ್ತಿಗೀತೆಗಳನ್ನು ಹಾಡಕೋತ ಹೋಗೋದು ಮೊದಲಿನಿಂದಲೂ ನಡೆದು ಬಂದ ವಿಶೇಷತೆ. ಯಾವುದು ಮನಸ್ಸು ಭಂಗ ಆಗಬಾರದೋ ಅದನ್ನು ಅಭಂಗ ಅಂತಾರ ಅಂತ ಬೇಂದ್ರೆಯವರು ನಿರೂಪಣೆ ಮಾಡತಾರೆ. ನಿಃಷ್ಕಲ್ಮಷ ಮನಸ್ಸಿನಿಂದ ಕೈಗೊಂಡ ಪೂಜೆಯೇ ಅಭಂಗ ಎನ್ನುವುದು ನಿತ್ಯ ಸತ್ಯ. ನಿರಾಕಾರ ಸ್ವರೂಪನಾದ ದೇವರು ನಮ್ಮನ್ನು ಬೇಡುವುದೆ ನಿಃಷ್ಕಲ್ಮಷ ಭಕ್ತಿ, ಕಾಯಕ ಮತ್ತು ದಾಸೋಹ. ಅದನ್ನೇ ಅಭಂಗದ ರೂಪದಲ್ಲಿ ಪ್ರಸ್ತುತ ಮಾಡತಾರೆ ವಿಠೋಬನ ಭಕ್ತರು. ಅಭಂಗದ ಮೇಲೆ ಬೇಂದ್ರೆಯವರು ಬರೆದ ಒಂದು ಕವನವನ್ನು ಇಲ್ಲಿ ಉಲ್ಲೇಖ ಮಾಡಬೇಕು.
ಟೊಂಕದ ಮೇಲೆ ಕೈ ಇಟ್ಟಾನ | ಭಕ್ತಿ ಸುಂಕ ಬೇಡತಾನ ||
ಡೊಂಕ ಇಲ್ಲಾ ಬಿಂಕ ಇಲ್ಲಾ | ಅಭಂಗ ಪದದವನು ||
ಅಂಗದಾಗ ಅನಂತಲೀಲಾ | ಸಂಗದಾಗ ಸಂತರ ಜಾಲ ||
ಯೋಗಕ್ಷೇಮ ನಡಸತಾನ | ಭಂಗ ಆಗದಂಗ ||
ವಿಠೋಬಾ | ಭಕ್ತಿ ಸುಂಕ ಬೇಡತಾನ ||
ವಚನ ಸಾಹಿತ್ಯದಲ್ಲಿಯೂ ಕೂಡ ಈ ಭಕ್ತಿ ದಾಸೋಹಕ್ಕೆ ಅತ್ಯಂತ ಮಹತ್ವವನ್ನು ನೀಡಿದ್ದಾರೆ ಬಸವಾದಿ ಶರಣರು. ಅದಕ್ಕೆ 12 ನೇ ಶತಮಾನದ ಕ್ರಾಂತಿಯನ್ನು ಭಕ್ತಿ ಚಳುವಳಿ ಅಂತಾನೂ ಉಲ್ಲೇಖ ಮಾಡತಾರೆ. ಭಂಗ ಆಗಲಾರದ ಭಕ್ತಿ ದಾಸೋಹವನ್ನು ಶರಣ ಜೇಡರ ದಾಸಿಮಯ್ಯನವರು ತಮ್ಮ ವಚನದಲ್ಲಿ ನಿರೂಪಿಸಿದ್ದಾರೆ.
ಅನುಭಾವವಿಲ್ಲದ ಭಕ್ತಿ | ತಲೆಕೆಳಗಾದುದಯ್ಯಾ ||
ಅನುಭಾವ | ಭಕ್ತಿಗಾಧಾರ ||
ಅನುಭಾವ | ಭಕ್ತಿಗೆ ನೆಲೆವನೆ ||
ಅನುಭಾವ | ಉಳ್ಳವರ ಕಂಡು ||
ತುರ್ಯ ಸಂಭಾಷಣೆಯ | ಬೆಸಗೊಳ್ಳದಿದ್ದಡೆ ||
ನರಕದಲ್ಲಿಕ್ಕಯ್ಯಾ | ರಾಮನಾಥ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1275 / ವಚನ ಸಂಖ್ಯೆ-723)
ಭಕ್ತಿಎಂಬುದು ಅನುಭಾವ ಮತ್ತು ಶುದ್ಧಮನಸ್ಸಿನಿಂದ ಮಾಡಬೇಕು. ಇಲ್ಲದಿದ್ದರೆ ಅಂತರಂಗದ ಅರಿವು ಮತ್ತು ಸುಜ್ಞಾನ ಪ್ರಜ್ವಲಿಸುವುದಿಲ್ಲ ಎನ್ನುವುದನ್ನು ಈ ವಚನ ಹೇಳುತ್ತದೆ. ಬಸವೇಶ್ವರರು ತಮ್ಮ ವಚನದಲ್ಲಿ ಭಕ್ತಿಯನ್ನು ಸಾಧನೆಯ ಶಿವಪಥಕ್ಕೆ ಹೋಲಿಸಿದ್ದಾರೆ.
ಭಕ್ತಿಯೆಂಬ ನಿಧಾನವ | ಸಾಧಿಸುವಡೆ ||
ಶಿವಪ್ರೇಮವೆಂಬ | ಅಂಜನವನೆಚ್ಚಿಕೊಂಬುದು ||
ಭಕ್ತನಾದವಂಗೆ | ಇದೇ ಪಥವಾಗಿರಬೇಕು ||
ನಮ್ಮ ಕೂಡಲಸಂಗನ ಶರಣರ | ಅನುಭಾವ ಗಜವೈದ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-29 / ವಚನ ಸಂಖ್ಯೆ-243)
ಭಕ್ತಿ ಎನ್ನುವುದನ್ನು ಸಾಧಿವುದಕ್ಕೆ ನಮಗೆ ಬೇಕಾಗಿರುವುದು ಶಿವಪಥವೆಂಬ ನಿಃಷ್ಕಲಷ ಮನಸ್ಸು, ಧೃಢನಿಷ್ಠೆ ಮತ್ತು ನಿಃಸ್ಕಲ್ಮಷ ಇಚ್ಛೆ. ಇದೇ ಕೂಡಲಸಂಗಮದೇವರನ್ನು ಕೂಡುವ ಸಾಧನೆಯ ಮಾರ್ಗ ಎನ್ನುವುದನ್ನು ಬಸವೇಶ್ವರರು ತಿಳಿಸಿದ್ದಾರೆ. ಇದನ್ನೇ ಬೇಂದ್ರೆಯವರು ಚೈತನ್ಯದ ಪೂಜೆ ನಡದದ ನೋಡ ತಂಗಿ ಅಭಂಗದ ಭಂಗಿ ಎನ್ನುವುದರ ಮೂಲಕ ವಿವರಿಸಿದ್ದಾರೆ.
ಹಾಗಾದರೆ ಇಂಥ ಚೈತನ್ಯದ ಪೂಜೆಯನ್ನು ಹೇಗೆ ಮಾಡಬೇಕು ಎನ್ನುವುದನ್ನು ಪ್ರಥಮ ಚರಣದಲ್ಲಿ ವಿವರಣೆ ನೀಡತಾರೆ ಬೇಂದ್ರೆಯವರು.
ಸೌಜನ್ಯ ಎಂಬುದು ಮೊದಲನೆ ಹೂವು | ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ | ಶಿವಗರ್ಪಿತ ಇರಲಿ ಖಾತ್ರಿ
ಸೌಜನ್ಯ ಅಂದರೆ ಇನ್ನೊಬ್ಬ ವ್ಯಕ್ತಿ ಅಥವಾ ಸಮಷ್ಠಿಯ ಬಗ್ಗೆ ದಯೆ, ಗಮನ, ಗೌರವ, ಉತ್ತಮ ನಡತೆ. ವ್ಯಕ್ತಿತ್ವವನ್ನು ಸೂಚಿಸಲು ಬಳಸುವ ಪದ. ಆದ್ದರಿಂದ, ಸೌಜನ್ಯ ಗೌರವ ಮತ್ತು ಶಿಷ್ಟಾಚಾರವನ್ನು ಸೂಚಿಸುವ ಮೂಲಕ ಉತ್ತಮ ಸಂಸ್ಕಾರ ವ್ಯಕ್ತವಾಗುತ್ತದೆ. ಹಾಗಾದರೆ ಬೇಂದ್ರೆಯವರು ಹೇಳುವ ಹಾಗೆ ಚೈತನ್ಯದ ಪೂಜೆಗೆ ಸೌಜನ್ಯ ಎನ್ನುವ ಹೂವನ್ನು ನಾವು ನೀಡಬೇಕು. ಪೇಟೆಯಲ್ಲಿ ಸಿಗುವ ಹೂವಿನಿಂದಲ್ಲ. ಅರಳೋಣ ನಾವು ನೀವು ಎಂದು ಹೇಳುವುದರ ಮೂಲಕ ಎಲ್ಲರನ್ನೂ ಗೌರವದಿಂದ ಕಾಣುವ ಮೂಲಕ ಸಮ ಸಮಾಜ ನಿರ್ಮಾಣದ ಹಂಬಲ ವ್ಯಕ್ತವಾಗುತ್ತದೆ. ಇದು ಈ ಪದಪುಂಜ ಪ್ರಯೋಗದ ವಿಶೇಷತೆ. ಸೌಜನ್ಯ ಎನ್ನುವ ತತ್ವ ವಚನ ಸಾಹಿತ್ಯದಲ್ಲಿ ವಿಪುಲವಾಗಿ ನಿರೂಪಣೆಯಾಗಿದೆ. ಸೌಜನ್ಯತೆಯನ್ನು ಬಸವೇಶ್ವರರು ತಮ್ಮ ವಚನದಲ್ಲಿ ಶರಣರ ನಡೆ ನುಡಿ ಹೇಗಿರಬೇಕೆಂಬುದರ ಮೂಲಕ ವಿವರಿಸಿದ್ದಾರೆ.
ಕಾಮವೇಕೊ | ಲಿಂಗಪ್ರೇಮಿಯೆನಿಸುವಂಗೆ? ||
ಕ್ರೋಧವೇಕೊ | ಶರಣವೇದ್ಯವೆನಿಸುವಂಗೆ? ||
ಲೋಭವೇಕೊ | ಭಕ್ತಿಯ ಲಾಭವ ಬಯಸುವಂಗೆ? ||
ಮೋಹವೇಕೊ | ಪ್ರಸಾದವೇದ್ಯನೆನಿಸುವಂಗೆ? ||
ಮದಮತ್ದರವುಳ್ಳವಂಗೆ | ಹೃದಯ ಶುದ್ಧವೆಲ್ಲಿಯದೊ? ||
ಹದುಳಿಗರಾದಲ್ಲಿಪ್ಪ | ಕೂಡಲಸಂಗಮದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-20 / ವಚನ ಸಂಖ್ಯೆ-118)
ಸೌಜನ್ಯದಿಂದ ನಡೆದುಕೊಳ್ಳುವವನು ಅರಿಷಡ್ವರ್ಗಗಳಿಂದ ದೂರವಾಗಿರಬೇಕು. ಆವಾಗಲೆ ನಿಃಸಂಶಯದಿಂದ, ಯಾವ ಭೀತಿಯೂ ಇಲ್ಲದೆ ಮತ್ತು ಆತ್ಮವಿಶ್ವಾಸದಿಂದ ಎಲ್ಲರನ್ನು ತನ್ನಂತೆ ತಿಳಿಯುವ ಸೌಜನ್ಯತೆ ಬೆಳೆಯುತ್ತದೆ. ತನ್ನ ಅಂತರಂಗದ ಅರಿವಿನ ಅನುಭಾವದ ಬೆಳಕನ್ನು ತನ್ನ ಸುತ್ತಲಿನ ವ್ಯಕ್ತಿಗಳ ಮೇಲೆ ಮತ್ತು ಸಮಾಜದ ಮೇಲೆ ಬೀರುವ ಕಾರ್ಯದಲ್ಲಿ ನಿರತನಾಗುತ್ತಾನೆ. ಈ ಸೌಜನ್ಯವಂತರಲ್ಲಿ ಕೂಡಲಸಂಗಮದೇವರು ಇರುತ್ತಾನೆ ಎನ್ನುವುದು ಈ ವಚನದ ಆಶಯ. ಯಾವಾಗ ಸೌಜನ್ಯೆತೆ ಶರಣರಲ್ಲಿ ಮೂಡುತ್ತದೆಯೋ ಆವಾಗ ಸಾಮರ್ಥ್ಯ ಅವನಲ್ಲಿ ಮೂಡುತ್ತದೆ. ಈ ಸಾಮರ್ಥ್ಯ ಎನ್ನುವ ಬಿಲ್ವ ಪತ್ರೆಯು ಶಿವನಿಗೆ ಅರ್ಪಿತವಾಗುತ್ತದೆ. ಎಂಥ ಸೊಗಸಾದ ನಿರೂಪಣೆ ಈ ಕವನದ ಮೊದಲನೆ ಚರಣದಲ್ಲಿ ವ್ಯಕ್ತವಾಗಿದೆ.
ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ
ನಮ್ಮ ಸುತ್ತಮುತ್ತ ಇರುವ ಚೈತನ್ಯ ಮತ್ತು ಸಮಷ್ಠಿಯನ್ನು ಕುರಿತು ನಿತ್ಯ ದೀಪವೆಂಬ ಸತ್ಯವೆನ್ನುವ ಶಬ್ದವನ್ನು ಪ್ರಯೋಗಿಸಿದ್ದಾರೆ ಬೇಂದ್ರೆಯವರು. ನಾವು ಕಾಣುವ ಸಮಷ್ಠಿಯನ್ನು ಬೆಳಗುವಂತೆ ದೀಪವನ್ನು ಹಚ್ಚಬೇಕೆನ್ನುವ ಸದಾಶಯವನ್ನು ನೀಡಿದ್ದಾರೆ. ಚೈತನ್ಯವೆನ್ನುವ ಪೂಜೆಗೆ ಸುತ್ತೆಲ್ಲಾ ಇರುವ ನಿರಾಕಾರ ಸ್ವರೂಪನಿಗೆ ಸತ್ಯವೆನ್ನುವ ದೀಪ ಹಚ್ಚಬೇಕು. ಇದನ್ನು ಬಸವಾದಿ ಶರಣರು ಅದ್ಭುತವಾಗಿ ಹೇಳಿದ್ದಾರೆ. ವಚನ ಸಾಹಿತ್ಯದಲ್ಲಿ ಕಾಯಕದಲ್ಲಿ ನಿಷ್ಠೆ ಮತ್ತು ದಾಸೋಹವೆಂಬ ಪರಿಕಲ್ಪನೆಯಿಂದ ಸಮ ಸಮಾಜವನ್ನು ಕಟ್ಟಿ ಬೆಳಗಿಸುವ ದೀಪವನ್ನು ಬೆಳಗಿಸಿದ್ದರು. ಕಾಯಕವೆನ್ನುವ ದೀಪವನ್ನು ಶರಣ ಮನಸಂದ ಮಾರಿತಂದೆಯವರು ತಮ್ಮ ಒಂದು ವಚನದಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಕಾಯವಿಡಿದಿಹನ್ನಬರ | ಶಿವಭಕ್ತಂಗೆ ಕಾಯಕವೆ ಕೈಲಾಸ ||
ಕಾಯಕವಿಲ್ಲದವನ | ಅರಿವು ವಾಯವಾಗಿತ್ತು ||
ಅಡುಗೂಲಿಯ |ಮನೆಯಂತೆ | ಗಡಿಗೆಯ ಗಂಜಿಯಾಸೆ ಬೇಡ ||
ಕೊಡುವರೆಂದೊಬ್ಬರ ಮನೆಗೆ | ಅಡಿಗಡಿಗೆ ಹೋಗಬೇಡ ||
ಇಂತಿವರಿಡಿಯ | ಕಾಬುದಕ್ಕೆ ಮೊದಲೆ ||
ಅಡಗಿದೆಯಲ್ಲಾ | ಮನಸಂದಿತ್ತು ಮಾರೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1462 / ವಚನ ಸಂಖ್ಯೆ-931)
ಶ್ರೇಣೀಕೃತ ಸಮಾಜದಲ್ಲಿ ಅತ್ಯಂತ ನಿಕೃಷ್ಠ ಸ್ಥರದಲ್ಲಿದ್ದ ಹಲವಾರು ರೀತಿಯ ಕಾಯಕ ಮಾಡುವವರು ಅನುಭಾವವನ್ನು ಅಳವಡಿಸಿಕೊಂಡು ವಚನಗಳನ್ನು ಬರೆಯುವ ಮಟ್ಟಕ್ಕೆ ಏರಿದ್ದರು ಎನ್ನುವುದನ್ನು ನಾವು ಗಮನಿಸಬೇಕು. ಅಲ್ಲಿ ಜ್ಞಾನ ಮತ್ತು ಕಾಯಕವೆಂಬ ದೀಪವನ್ನು ಹಚ್ಚಿದ್ದರು. ಕಮ್ಮಾರರು, ಬಡಿಗೇರರು, ಕುಂಬಾರರು, ಚರ್ಮ ಹದ ಮಾಡುವವರು, ಅಕ್ಕಿ ಆಯುವವರು, ಕೂಗು ಹಾಕುವವರು, ಹಾಸ್ಯ ಕಲಾವಿದರು ಇನ್ನು ಬೇಕಾದಷ್ಟು ಕಾಯಕಜೀವಿಗಳನ್ನು ಹೆಸರಿಸಬಹುದು. ಮೇಲ್ಜಾತಿಯವರಿಗಷ್ಟೇ ಸೀಮಿತವಾದ ಜ್ಞಾನ ಜ್ಯೋತಿಯಿಂದ ಕತ್ತಲೆಯಲ್ಲಿದ್ದಂಥ ಶರಣರು ಎಷ್ಟು ಪ್ರಭುದ್ಧ ವಚನಗಳನ್ನು ರಚಿಸಿದ್ದಾರೆ ಎನ್ನುವುದೇ ವಿಸ್ಮಯ. ಕಲ್ಯಾಣ ಕ್ರಾಂತಿಯ ಅದ್ಭುತ ಮಹಿಮೆಯಲ್ಲೊಂದು ಪರ್ವ ವಚನ ಕ್ರಾಂತಿ.
ಅಂಥ ಕ್ರಾಂತಿ ಜ್ಯೋತಿ ಜನ್ಮ ತಳೆದಿದ್ದು ಹೇಗೆ? ಸಮಷ್ಟಿಯನ್ನು ಮುಟ್ಟಿದ್ದು ಹೇಗೆ? ಎಲ್ಲಕ್ಕಿಂತ ಹೆಚ್ಚಾಗಿ ಅನಕ್ಷರಸ್ಥರು, ನಿಕೃಷ್ಠರನ್ನು ಎಚ್ಚರಿಸಿ ಅವರನ್ನು ಶರಣರ ಮಟ್ಟಕ್ಕೇರಿಸಿದ್ದು ಹೇಗೆ? ಇಂಥ ಹಲವಾರು ಚಿಂತನ ಮಂಥನಗಳನ್ನು ಒರೆಗೆ ಹಚ್ಚಿದಾಗ ಶರಣರು ಕಂಡ ಅದ್ಭುತ ಲೋಕದ ಅನಾವರಣ ಆಗಿ ಅರಿವಿನ ಬೆಳಕನ್ನು ನೀಡಿದಾಗ ಖಂಡಿತವಾಗಿಯೂ ತನ್ನಿಂದ ತಾನೇ ಸಮಾಜದಲ್ಲಿ ದೀಪ ಬೆಳಗುತ್ತದೆ. ಇದನ್ನು ಬೇಂದ್ರೆಯವರು ಸುತ್ತೆಲ್ಲಾ ಅವನದೇ ರೂಪ ಎನ್ನುವ ಸತ್ಯದ ಅನುಷ್ಠಾನದ ಬಗ್ಗೆ ಹೇಳಿದ್ದಾರೆ.
ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ.
ನೈವೇದ್ಯ ಅಥವಾ ಪ್ರಸಾದ ಇದು ಎಲ್ಲರ ಹೃದಯದ ಸಂವೇದ್ಯವೆನ್ನುವ ಅದ್ಭುತ ಕಲ್ಪನೆಯನ್ನು ಬೇಂದ್ರೆಯವರು ನೀಡುತ್ತಾರೆ. ಸಂವೇದ್ಯ ಎನ್ನುವುದು ಅನುಭವಕ್ಕೆ ಸಿಗುವಂಥಾದ್ದು ಅಥವಾ ಚೆನ್ನಾಗಿ ತಿಳಿಯಲ್ಪಡುವುದು ಎನ್ನುವ ಅರ್ಥ ನೀಡುತ್ತದೆ. ಅಂದರೆ ನಿರಾಕಾರ ಶಿವನಿಗೆ ಅರ್ಪಿತವಾಗಬೇಕಾದದ್ದು ಹೃದಯವನ್ನು ತಟ್ಟುವ ಮುಟ್ಟುವ ನಮ್ಮ ಅನುಭವಕ್ಕೆ ಬರುವ ಪ್ರಸಾದ ಅಥವಾ ನೈವೇದ್ಯ. ಈ ಪ್ರಸಾದ ತತ್ವವನ್ನು ವಚನ ಸಾಹಿತ್ಯದಲ್ಲಿ ವಿವರವಾಗಿ ಹೇಳಲಾಗಿದೆ.
ಗುರು-ಲಿಂಗ-ಜಂಗಮದ ಮೂಲಕ ಬಂದ ಆಶೀರ್ವಾದದ ಅನುಗ್ರಹ ಅಥವಾ ಅಂತರಂಗದ ಅರಿವು ಉಂಟಾದಾಗ ಆಗುವ ಅನುಭೂತಿಯ ಫಲವೇ ಪ್ರಸಾದ. ಇಂಥ ಪ್ರಸಾದದ ಅನುಗ್ರಹ ಆಗಬೇಕಾದರೆ ಭಕ್ತನ ಮೈಯೆಲ್ಲಾ ಕಣ್ಣಾಗಿ ನೋಡುವ ನೋಟ, ಮೈಯೆಲ್ಲಾ ಕಿವಿಯಾಗಿ ಕೇಳುವ ಮಾತುಗಳು, ಮೈಯೆಲ್ಲಾ ರಸನೇಂದ್ರಿಯಗಳಾಗಿ ಮಾಡುವ ಊಟಗಳೆಲ್ಲವೂ ನಿರಾಕಾರ ಲಿಂಗಮುಖಿಯಾಗಿ ಗುರು ಲಿಂಗ ಜಂಗಮಕ್ಕೆ ತಲುಪುವ ಹಾಗಿರಬೇಕು. ಅವನಿಗೆ ಸಲ್ಲಿಸುವ ಎಲ್ಲ ಕ್ರಿಯೆಗಳಿಗೆ ಕೃತಜ್ಞನಾಗಿರಬೇಕು. ಅಂದರೆ ಶುದ್ಧ ಪ್ರಸಾದವೆಂದರೆ ಮನಸ್ಸು ಶುದ್ಧವಾಗಿರಬೇಕು ಮತ್ತು ಶಾಂತತೆಯಿಂದ ಕೂಡಿರಬೇಕು. ಆವಾಗಲೇ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ, ಮನಸ್ಸು ಮತ್ತು ಆತ್ಮ ಶುದ್ಧವಾದಾಗ, ಎಲ್ಲ ಮನಸ್ಸಿನ ಕೊಳೆ ಹೋದಾಗ ಪ್ರಸಾದ ಸಿಗುವುದು ಎಂದು. ಇದೇ ಪ್ರಸಾದದ ನಿಜವಾದ ಅರ್ಥ ಮತ್ತು ಮಹತ್ವ.
ಹಸಿವಾಯಿತ್ತೆಂದು | ಅರ್ಪಿತವ ಮಾಡುವರಯ್ಯಾ ||
ತೃಷೆಯಾಯಿತ್ತೆಂದು | ಮಜ್ಜನಕ್ಕೆರೆವರಯ್ಯಾ ||
ಹಸಿವು ತೃಷೆ | ವಿಷಯಕ್ಕೆ ಬಳಲುವರಯ್ಯಾ ||
ಹಸಿವಾಯಿತ್ತೆಂದು | ಅರ್ಪಿತವ ಮಾಡಲಿಲ್ಲ ||
ತೃಷೆಯಾಯಿತ್ತೆಂದು | ಮಜ್ಜನಕ್ಕೆರೆಯಲಿಲ್ಲ ||
ಇದು ಕಾರಣ | ಕೂಡಲಸಂಗಮದೇವನ ಪೂಜಿಸಿ ||
ಪ್ರಸಾದವ | ಹಡೆದವರೊಬ್ಬರೂ ಇಲ್ಲ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-69 / ವಚನ ಸಂಖ್ಯೆ-767)
ತನ್ನನ್ನೇ ಸಂಪೂರ್ಣವಾಗಿ ಗುರು-ಲಿಂಗ-ಜಂಗಮಕ್ಕೆ ಅರ್ಪಣೆ ಮಾಡಿಕೊಳ್ಳುವುದು ಪ್ರಸಾದ ತತ್ವದ ಮಹತ್ವ. ಹಾಗಾದರೆ ಇಲ್ಲಿ ಬಸವಣ್ಣನವರು ಹೇಳಲಿಕ್ಕೆ ಹೊರಟಿರುವುದು ಏನನ್ನು? ಹಸಿವು, ತೃಷೆ, ವಿಷಯಂಗಳನ್ನು ಸಂಕೇತಗಳನ್ನಾಗಿ ಬಳಸಿಕೊಂಡು, ಈ ಭೌತಿಕವಾಗಿ ತನ್ನನ್ನು ತಾನು ಗುರು-ಲಿಂಗ-ಜಂಗಮಕ್ಕೆ ಅರ್ಪಿಸದೇ, ಅರಿವಿನ ಆಳದ ಮೂಲಕ ತನ್ನನ್ನು ತಾನು ಅರ್ಪಿಸಿಕೊಳ್ಳಬೇಕು. ಎಂಥ ಅನುಪಮ ಅದ್ಭುತ ಶಬ್ದಗಳ ಜೋಡಣೆ ನೋಡಿ. ಇಲ್ಲಿ ಅರ್ಪಿತ ಅನರ್ಪಿತ ಎಂಬ ತತ್ವದ ವಿಸ್ತಾರ ಹರಡಿದೆ. ಅಂಗದ ಹಸಿವು, ತೃಷೆ ವಿಷಯಂಗಳನ್ನು ಯಾರು ಬೇಕಾದರೂ ಅರ್ಪಿಸಬಹುದು ಮತ್ತು ಸ್ವೀಕರಿಸಬಹುದು. ಆದರೆ ಅಂತರಂಗದ ಅರಿವಿನ ಹಸಿವು ಮತ್ತು ತೃಷೆ ತೀರಿಸಬೇಕಾದರೆ ಪ್ರಸಾದ ರೂಪದಲ್ಲಿ ಅಂದರೆ ಬೆಳಕನ್ನು ಪಡೆಯಬೇಕಾದರೆ ತನು ಮನ ಶುದ್ಧವಾಗಿರಬೇಕು ಮತ್ತು ಅದನ್ನು ಪಡೆಯುವ ಅಂತರಂಗದ ಸಾಹಸ, ಸಹನಶೀಲತೆ ಮತ್ತು ದೃಷ್ಟೀನೂ ಬೇಕು. ಇಂಥ ಸತ್ಯ ಶುದ್ಧ ಪ್ರಸಾದವನ್ನು ಹೃದಯಾಂತರಾಳದ ಸಂವೇದ್ಯದಿಂದ ಅರ್ಪಿಸಬೇಕೆಂದು ಬೇಂದ್ರೆಯವರು ಹೇಳುತ್ತಾರೆ.
ಸೌಂದರ್ಯದ ಧ್ಯಾನಾ ಎದೆಯಲ್ಲಿ ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮವೇದಾ ಸರಿಗಮ ನಾದಾ
ಹಾಗಾದರೆ ಹೂವು ಪತ್ರೆ ನೈವೇದ್ಯವನ್ನು ಅರ್ಪಿಸಿದ ಮೇಲೆ ನಾವು ಮಾಡುವ ಭಜನೆ, ಪ್ರಾರ್ಥನೆ, ಮಂತ್ರ ಹೇಗಿರಬೇಕೆಂದು ಬೇಂದ್ರೆಯವರು ಈ ಚರಣದಲ್ಲಿ ನಿರೂಪಣೆ ಮಾಡಿದ್ದಾರೆ. ಸೌಂದರ್ಯದ ಧ್ಯಾನಾ ಎದೆಯಲ್ಲಿ ಮತ್ತು ಅಸ್ಪರ್ಷಾ ಚಿನ್ಮಯನಲ್ಲಿ ಅಂದರೆ ನಿರಾಕಾರ ಸ್ವರೂಪಿ ಶಿವನನ್ನು ಸ್ಪರ್ಷಿಸದೇ ಅವನಿಗೆ ತಲುಪುವ ಹಾಗೆ ನಮ್ಮ ಭಜನೆ ಅಥವಾ ಪ್ರಾರ್ಥನೆ ಇರಬೇಕು. ಆನಂದದಿಂದ ಭಜನೆ ಅಥವಾ ಪ್ರಾರ್ಥನೆ ಮಾಡಿದಾಗ ಸರಿಗಮದಂತೆ ನಾದದ ಅನುಭೂತಿಯಾಗುತ್ತದೆ.
“ಚಿತ್” ಎಂದರೆ ಅರಿವು, ಎಚ್ಚರ, ಪ್ರಜ್ಞೆ, ಜ್ಞಾನ. ಈ ‘ಚಿತ್’ಗೆ “ಮಯಟ್” ಎಂಬ ಪ್ರತ್ಯಯವು ಸೇರಿ, ಅನುನಾಸಿಕಸಂಧಿಯ ನಿಯಮದಂತೆ ‘ಚಿನ್ಮಯ’ ಎಂಬ ರೂಪವನ್ನು ಪಡೆಯುತ್ತದೆ. “ಮಯಟ್” ಪ್ರತ್ಯಯಕ್ಕೆ ಯುಕ್ತತೆ, ಹೊಂದಿರುವುದು, ಸೇರಿರುವುದು, ಎಲ್ಲೆಲ್ಲೂ ಹರಡಿರುವುದು, ಬೆರೆತಿರುವುದು, ಒಂದಾಗಿರುವುದು ಎಂಬ ಅರ್ಥಗಳಿವೆ. ಅದರಂತೆ, “ಚಿನ್ಮಯ” (ಚಿತ್+ಮಯ) ಎಂಬ ಪದಕ್ಕೆ ಜ್ಞಾನವನ್ನು, ಅರಿವನ್ನು, ಪ್ರಜ್ಞೆಯನ್ನು ಹೊಂದಿರುವ, ಪ್ರಜ್ಞೆಯು ಹಾಸುಹೊಕ್ಕಾಗಿರುವ, ಎಚ್ಚರ ಆಗಿರುವ, ತಿಳಿವಳಿಕೆಯಿಂದ ಕೂಡಿರುವ, ಪ್ರಜ್ಞಾಮಯವಾಗಿರುವ, ಚೇತನವಿರುವ, ಎಂದು ಅರ್ಥವಾಗುತ್ತದೆ. “ಚಿತ್” ಎಂಬುದರ ಮತ್ತೊಂದು ಮುಖವು “ಆನಂದ” ವಾದ್ದರಿಂದ, ಚಿನ್ಮಯತೆಯಲ್ಲಿ ಆನಂದಮಯತೆಯೂ ಸಮರಸವಾಗಿರುತ್ತದೆ.
ಈ ಪ್ರಾರ್ಥನೆ ಅಥವಾ ಮಂತ್ರದ ವ್ಯಾಖ್ಯಾನವನ್ನು ವಚನ ಸಾಹಿತ್ಯದಲ್ಲಿ ಅದ್ಭುತವಾಗಿ ಚಿತ್ರಣ ಮಾಡಲಾಗಿದೆ. ಅಂತರಂಗದ ಅರಿವಿನ ಸಾಕ್ಷಾತ್ಕಾರದ ಧ್ವನಿ ಪ್ರಸ್ಥಾನ ಅಥವಾ ಮಾಧ್ಯಮವೇ ಮಂತ್ರ. ಅಷ್ಟಾವರಣಗಳಲ್ಲಿ ಭಕ್ತಿಯ ಸೂತ್ರ ಮಂತ್ರವಾಗಿದೆ. ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ ಮಂತ್ರದ ವ್ಯಾಖ್ಯಾನವನ್ನು ನೀಡತಾರೆ.
ಪರಬ್ರಹ್ಮ ಮಂತ್ರವೆ | ಶಿವನ ದೇಹವೆಂದರಿವುದಯ್ಯ ||
ಶಿರವೆ ಈಶಾನ್ಯ | ಮುಖವೆ ತತ್ಪುರುಷ ||
ಹೃದಯವೆ ಅಘೋರ | ಗುಹ್ಯವೆ ವಾಮದೇವ ||
ಪಾದವೆ | ಸದ್ಯೊಜಾತ ಮಂತ್ರವಯ್ಯ ||
ಇಂತಿ ಪಂಚಮಂತ್ರ | ತನು ರೂಪದವ ||
ನೀನೆ | ಕೂಡಲ[ಚೆನ್ನಸಂಗಮದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-461 / ವಚನ ಸಂಖ್ಯೆ-1368)
ಚೆನ್ನಬಸವಣ್ಣನವರು “ನಮಃ ಶಿವಾಯ” ಎನ್ನುವ ಪಂಚಾಕ್ಷರಿ ಮಂತ್ರವೆ ಶಿವನ ದೇಹವಾಗಿದೆ ಅಂತ ಹೇಳತಾರೆ. ಈ ಪಂಚಾಕ್ಷರಿ ಮಂತ್ರವನ್ನು ಗುರುವಿನ ವಾಸ ಸ್ಥಾನವಾದ ಈಶಾನ್ಯ, ಕಾಯಕ ಪ್ರಧಾನ ತತ್ಪುರುಷ, ನಿರಾಕಾರ ಶಿವರೂಪ ವಾಮದೇವ. ಸರಳ ಸಂಪನ್ನನಾದ ಅಘೊರಿ, ದಕ್ಷಿಣವಾಹಿನಿಯ ಸದ್ಯೊಜಾತ ಎಂದು ವರ್ಣನೆ ಮಾಡಾತಾ ಹೋಗತಾರೆ.
ಬಸವಣ್ಣನವರು ತಮ್ಮ ವಚನದಲ್ಲಿ ಮಂತ್ರದ ಉಪಯೋಗವನ್ನು ಟೀಕಿನ ವಚನದ ಮೂಲಕ ಪ್ರಸ್ತುತ ಮಾಡಿದ್ದಾರೆ.
ವಶ್ಯವ | ಬಲ್ಲೆವೆಂದೆಬಿರಯ್ಯಾ ||
ಬುದ್ದಿಯನರಿಯದ | ಮನುಜರು ಕೇಳಿರಯ್ಯಾ ||
ವಶ್ಯವಾವು | ದೆಂದರಿಯದೆ ||
ಮರಳುಗೊಂಬಿರೆಲೆ | ಗಾವಿಲ ಮನುಜರಿರಾ ||
ಓಂ ನಮಃ ಶಿವಾಯ | ಎಂಬ ಮಂತ್ರ ||
ಸರ್ವ ಜನವಶ್ಯ | ಕೂಡಲ ಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-17 / ವಚನ ಸಂಖ್ಯೆ-78)
ಮಂತ್ರ ಹಾಕಿ ವಶ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಜನರನ್ನು ಬಸವಣ್ಣನವರು ಮೂಢ ಜನರು ನೀವು ಎಂದು ಟೀಕಿಸುತ್ತಾರೆ. ಓಂ ನಮಃ ಶಿವಾಯ ಎನ್ನುವ ಮಂತ್ರ ಜಪಿಸುತ್ತ ಹೋದರೆ ಸಮಷ್ಠಿಯ ಕಲ್ಪನೆ ಆಗುತ್ತದೆ ಎನ್ನುವುದನ್ನು ಸೂಚ್ಯವಾಗಿ ನಿರೂಪಿಸಿದ್ದಾರೆ.
ಒಟ್ಟಾರೆಯಾಗಿ ಮಂತ್ರ ಎಂಬ ಧ್ವನಿ ಪ್ರಸ್ಥಾನ ಶರಣರ ಅಂತರಂಗದ ಅಭಿವ್ಯಕ್ತಿಯ ಸಾಧನದಿಂದ ಅರಿವಿನತ್ತ ಪಯಣಿಸುವ ತತ್ವ. ಇದು ಭಕ್ತನನ್ನು ಶರಣನನ್ನಾಗಿ ಮಾಡುವ ಅತ್ಯಮೂಲ್ಯ ಸಾಧನ ಅಥವಾ ತತ್ವ. ಸೌಂದರ್ಯದ ಧ್ಯಾನಾ ಎದೆಯಲ್ಲಿ ಅಸ್ಪರ್ಷಾ ಚಿನ್ಮಯನಲ್ಲಿ ಎಂದು ಹೇಳುವ ಮೂಲಕ ಮಂತ್ರದ ಮಹತ್ವವನ್ನು ಬೇಂದ್ರೆಯವರು ತಿಳಿಸಿದ್ದಾರೆ.
ಉದ್ಭವ ಉದ್ಭವ ಹೇ ಮಂಗಳ ಮೂರ್ತಿ ಅಲಲಾ ಆಹಹಾ ಅಮಮಾ
ಇಂತಹ ಅಂತರಂಗದ ಅಭಿವ್ಯಕ್ತಿಯಿಂದ ಮತ್ತು ಚೈತನ್ಯ ಎನ್ನುವ ಸಮಷ್ಠಿಯ ಸಾಧನದಿಂದ ಪೂಜಿಸಿದಾಗ ಅರಿವಿನತ್ತ ಪಯಣಿಸುವದನ್ನು ಬೇಂದ್ರೆಯವರು ಸೂಚ್ಯವಾಗಿ ಈ ಚರಣದಲ್ಲಿ ವರ್ಣಿಸಿದ್ದಾರೆ. ಇದು. ಇಂಥ ಪೂಜೆಯಿಂದ ಭಕ್ತನನ್ನು ಶರಣನನ್ನಾಗಿ ಮಾಡುವಲ್ಲಿ ವಚನಕಾರರೂ ಕೂಡ ಸುಂದರವಾಗಿ ತಿಳಿಸಿದ್ದಾರೆ. ಪಾದೋದಕ ಮತ್ತು ಪ್ರಸಾದ ಸಿಗುವಂತೆ ಪೂಜಿಸುವದನ್ನು ತಿಳಿಸಿದ್ದಾರೆ.
ಪಾದೋದಕ ಒಂದು ಅಮೂಲ್ಯವಾದ ತತ್ವ. ನಿರಾಕಾರ ಶಿವನ ಆನಂದದಾಯಕ ಸ್ವಭಾವ ಪಾದವೆಂದೂ ಮತ್ತು ಆನಂದದಾಯಕ ಜ್ಞಾನವನ್ನು ಉದಕವೆಂದು ಹೇಳಲಾಗುತ್ತದೆ. ಇವೆರಡರ ಸಂಗಮ ಪಾದೋದಕ. ಹಡಪದ ಅಪ್ಪಣ್ಣನವರು ಎಷ್ಟು ಅದ್ಭುತವಾಗಿ ಪಾದೋದಕವನ್ನು ವಿಶ್ಲೇಷಣೆ ಮಾಡಿದ್ದಾರೆ.
ಪರಾಪರದಲ್ಲಿ ಹುಟ್ಟಿದ | ಪಾದೋದಕ ||
ಪರಬ್ರಹ್ಮದ ಪರಮ ಪ್ರಕಾಶವೇ | ಪಾದೋದಕ ||
ಪರಿಪೂರ್ಣವ ಪ್ರವೇಶಿಸಿ | ಕೊಂಡಿರ್ಪುದೇ ಪಾದೋದಕ ||
ಪರಮನಂಘ್ರಿ ಕಮಲದಲ್ಲಿ | ಹುಟ್ಟಿದುದೇ ಪಾದೋದಕ ||
ತರತರದ ಭಕ್ತ ಮಾಹೇಶ್ವರ | ಪ್ರಸಾದಿ ಪ್ರಾಣಲಿಂಗಿ ||
ಶರಣ ಐಕ್ಯದೊಳಡಗಿದ | ಪಾದೋದಕ ಅದಕ್ಕೆ ದೃಷ್ಟ ||
“ಪ” ಕಾರಂ ಪರಮ ಜ್ಞಾನಂ | “ದೋ” ಕಾರಮ್ ದೋಷ ನಾಶನಮ್ ||
“ದ” ಕಾರಂ ದಹತೇ ಜನ್ಮ | “ಕ” ಕಾರಮ್ ಕರ್ಮಛೇದನಮ್ ||
ಎಂದುದಾಗಿ ಇಂತಪ್ಪ | ಪಾದೋದಕವ ಕೊಂಡು ||
ಪರಿಣಾಮ ತೃಪ್ತಿಯನೆಯ್ದುವ | ಸದ್ಭಕ್ತಂಗೆ ನಮೋ ನಮೋ ಎಂಬೆ ||
ಬಸವಪ್ರಿಯ ಕೂಡಲಸಂಗಮದೇವಾ | ಮಾಮ್ ತ್ರಾಹಿ ತ್ರಾಹಿ ಕರುಣಾಕರನೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1726 / ವಚನ ಸಂಖ್ಯೆ-986)
ಪರಮ ಪವಿತ್ರವಾಗಿ, ನಿರಾಕಾರ ಬ್ರಹ್ಮ ಸ್ವರೂಪದ ಬೆಳಕಾಗಿ ಹುಟ್ಟಿದುದು ಪಾದೋದಕ. ತನುವಿನಲ್ಲಿ ಪರಿಪೂರ್ಣವಾಗಿ ಪ್ರವೇಶವಾಗುವದೇ ಪಾದೋದಕ. ಪುಣ್ಯ ಪಾದ ಕಮಲದಲ್ಲಿ ಹುಟ್ಟಿರುವುದೇ ಪಾದೋದಕ. ಪವಿತ್ರ ಷಟಸ್ಥಲಗಳಲ್ಲಿ ಪ್ರತ್ಯಕ್ಷವಾಗುವುದೇ ಪಾದೋದಕ. ಅಂದರೆ ಮಸ್ತಿಷ್ಕದಲ್ಲಿ ಹುಟ್ಟುವ, ತನುವಿನೊಳಗೆ ತುಂಬಿ ಪಾದದವರೆಗೂ ಪವಿತ್ರವಾಗಿ ಹರಿಯುವ ಜ್ಞಾನಗಂಗೆಯೇ ಪಾದೋದಕ. “ಪಾ” ಅಂದರೆ ಅಂತರಂಗದ ಅರಿವಿನ ಜ್ಞಾನ, “ದೋ” ಅಂದರೆ ಎಲ್ಲ ಕಲ್ಮಶಗಳನ್ನೂ ಕಳೆಯುವ, “ದ” ಅಂದರೆ ಜನನ ಮರಣಾದಿ ಸೂತಕಗಳನ್ನು ಕಳೆಯುವ, “ಕ” ಎಂದರೆ ಎಲ್ಲ ಕರ್ಮಾದಿಗಳಿಂದ ಮುಕ್ತಗೊಳಿಸುವ ಒಂದು ಸಾಧನ. ಪಾದೋದಕವೆಂದರೆ ನಮ್ಮಲ್ಲಿರುವ ಅಜ್ಞಾನವನ್ನು ಹೊಡೆದೋಡಿಸುವ ಎಲ್ಲ ಕಲ್ಮಶಗಳನ್ನೂ ನಿರ್ಮೂಲನೆಗೊಳಿಸುವ, ಎಲ್ಲ ಸೂತಕಗಳಿಂದ ಮುಕ್ತಗೊಳಿಸಿ ಜ್ಞಾನ ಪ್ರಕಾಶವನ್ನು ನೀಡುವಲ್ಲಿ ಸಹಕಾರ ನೀಡುತ್ತದೆ. ಇಂತಹ ಪಾದೋದಕವನ್ನು ಕಂಡ ಭಕ್ತರನ್ನು ಕಂಡು ತೃಪ್ತಿಯಾಗಿ ನಮಸ್ಕರಿಸುವೆನು ಎಂದು ಹಡಪದ ಅಪ್ಪಣ್ಣನವರು ಹೇಳಿದ್ದಾರೆ.
ಆತ್ಮಾ ಪರಮಾತ್ಮಾ ಅಂತರಾತ್ಮಾ ಘನವೋ ಘನ ನಿಮ್ಮ ಮಹಿಮಾ
ಆತ್ಮಾ ಪರಮಾತ್ಮಾ ಅಂತರಾತ್ಮಾ ಘನವೋ ಘನ ನಿಮ್ಮಾ ಮಹಿಮಾ ಎನ್ನುವ ವರಕವಿಗಳು ಅಂತರಂಗದ ಅನುಭೂತಿಯಾಗಿ ಆತ್ಮ ಪರಮಾತ್ಮಾ ಅಂತರಾತ್ಮಾ ಒಂದಾಗುವ ಪರಿಯನ್ನು ತಿಳಿಸಿದ್ದಾರೆ. ಎಂಥ ಅದ್ಭುತ ಪದಗಳ ಸಂಯೋಜನೆ. ಇದನ್ನು ವ್ಯೋಮಮೂರ್ತಿ ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ.
ಘನವ ಕಂಡು | ಮನ ಅವಗ್ರಾಹಕವಾಯಿತ್ತು ||
ಕಂಡು ಕಂಡು | ಮನ ಮಹಾಘನವಾಯಿತ್ತು ||
ತಲ್ಲೀಯವಾಯಿತ್ತು | ತದುಗತ ಶಬ್ದ ||
ಮುಗ್ಧವಾದುದನೇನೆಂಬೆ | ಗುಹೇಶ್ವರಾ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-191 / ವಚನ ಸಂಖ್ಯೆ-688)
ಅಂತರಂಗದ ಅರಿವಿನ ಮೂಲಕ ಸಮಷ್ಠಿಯ ಮತ್ತು ಚೈತನ್ಯದ ಪೂಜೆಯಿಂದ ನಮ್ಮಲ್ಲಿ ಮೂಡುವ ಘನಮಹಿಮನ ಸಾಕ್ಷಾತ್ಕಾರವಾಗುವ ಪರಿಯನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ಮೂಡಿಸಿದ್ದಾರೆ. ಅಷ್ಟಾವರಣದಲ್ಲಿ ಬರುವ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದಗಳು ಬೇಂದ್ರೆಯವರ ಈ ಚೈತನ್ಯದ ಪೂಜೆ ಎನ್ನುವ ಕವನದಲ್ಲಿ ಅದ್ಭುತವಾಗಿ ಎಲ್ಲ ವಿಸ್ತಾರಗಳೂ ಹರಡಿರುವದನ್ನು ಇಲ್ಲಿ ನಾವು ಕಾಣಬಹುದು.
ಇನ್ನು ಬೇಂದ್ರೆ ಅಜ್ಜಾವರ ಮತ್ತು ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಅವರ ಒಡನಾಟಗಳು ಒಬ್ಬ ಅಜ್ಜ-ಮೊಮ್ಮಗನಂತೆ ಇದ್ದವು. ಅವುಗಳ ಒಂದು ಇಣುಕು ನೋಟವನ್ನು ಇಲ್ಲಿ ಹಂಚಿಕೊಳ್ಳಬೇಕೆಂದು ಆಸೆಯಿಂದ ಬರೆದಿದ್ದೇನೆ. ವರ್ಷಕ್ಕೆ ಒಂದೆರಡು ಸರತಿ ನಮ್ಮ ಮನೆಗೆ ಬರುತ್ತಿದ್ದ ಬೇಂದ್ರೆ ಅಜ್ಜಾವರು ಇಡೀ ದಿನ ನಮಗೆಲ್ಲಾ ಸಾಹಿತ್ಯ, ಜಾನಪದ, ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಹೇಳುತ್ತಿದ್ದುದು ಸಣ್ಣವರಿದ್ದ ನಮಗೆಲ್ಲಾ ಕುತೂಹಲ ಮೂಡಿಸುತ್ತಿತ್ತು. ನಡು ನಡುವೆ ನಮ್ಮ ತಂದೆ ಲಿಂ. ಶ್ರೀ ಈಶ್ವರ ಕಮ್ಮಾರ ಮತ್ತು ಬೇಂದ್ರೆ ಅಜ್ಜನವರ ನಡುವೆ ನಡೆಯುತ್ತಿದ್ದ ಸಾಹಿತ್ಯದ ಬಗ್ಗೆ ಚರ್ಚೆ, ಜಗಳ, ವಾದ-ವಿವಾದ ಅತ್ಯಂತ ಪ್ರೀತಿಯ ಮತ್ತು ಅಪ್ಯಾಯಮಾನವಾದ ಚಟುವಟಿಕೆಯಾಗಿತ್ತು. ಕೆಲವೊಂದು ಸರತಿ ಬೇಂದ್ರೆ ಅಜ್ಜಾರ ಜೊತಿ ಶ್ರೀ ಚನ್ನವೀರ ಕಣವಿ, ಶ್ರೀ ಕೀರ್ತಿನಾಥ ಕುರ್ತಕೋಟಿ, ಡಾ. ಎಂ ಎಂ ಕಲಬುರ್ಗಿಯವರಂಥ ಸಾಹಿತ್ಯ ದಿಗ್ಗಜರು ಮನೆಗೆ ಬರತಿದ್ದರು. ಒಂದು ಸಾಹಿತ್ಯ ಚಿಂತನೆ ಗೋಷ್ಠಿಯೇ ನಮ್ಮ ಮನೆಯಲ್ಲಿ ನಡೀತಿತ್ತು. ಜೊತೆಗೆ ನಮ್ಮ ತಾಯಿ ಜನಪದ ಕಲಾವಿದೆ ಶ್ರೀಮತಿ ಮಲ್ಲಮ್ಮನವರ ರೊಟ್ಟಿ ಎಣಗಾಯಿ ಬದ್ನಿಕಾಯಿಪಲ್ಲೆಯ ಊಟ, ಒಟ್ಟಾರೆ ಸಂಭ್ರಮದ ವಾತಾವರಣ ನಿರ್ಮಾಣವಾಗಿ, ಆ ಕಾಲದ ನೆನಪುಗಳ ಮೆಲುಕು ಹಾಕುವುದಂದರೆ ಹಬ್ಬದ ದಿನಗಳು ಕಣ್ಮುಂದೆ ಬಂದಂಥಾ ಅನುಭವ.
“ನಿನ್ನ ಇರುವಿನ ಅರಿವು ನಿನಗ ಇರಲಿಲ್ಲ ಅಂದರ ಜ್ಞಾನದ ಹರಿವು ಹೆಂಗ ಆಗತದ ತಮ್ಮಾ” ಅಂತ ನನಗ ಹೇಳಿದ್ದರು ಬೇಂದ್ರೆ ಅಜ್ಜಾವರು. ಜ್ಞಾನ ಬೆಳಿಸಿಕೋಬೇಕಂದರ ಜ್ಞಾನವೆಂಬ ರೊಟ್ಟಿ ಮುರುದು ಅದನ ಕಚ ಕಚ ಕಡಿದು ತಿನಬೇಕಪಾ. ಎಷ್ಟ ಗಂಭೀರವಾದ ವಿಷಯವನ್ನು ಸುಲಭವಾಗಿ ತಿಳಿಸಿದ್ದರು ಬೇಂದ್ರೆ ಅಜ್ಜಾವರು. ಅಂಥ ಅಪರೂಪದಲ್ಲಿ ಅಪರೂಪದ ವರಕವಿಯನ್ನು ಬಹಳ ಹತ್ತಿರದಿಂದ ಕಂಡು ಮಾತಾಡಿಸಿದ್ದು ಮತ್ತ ಅವರ ಜೊತೆ ಪ್ರೀತಿಯಿಂದ ಆಟ ಆಡಿದ್ದು ನಮ್ಮ ಪೂರ್ವ ಜನ್ಮದ ಸುಕೃತವೇ ಸರಿ. ಇಂಥ ಅರಿವಿನ ಪ್ರಜ್ಞೆಯನ್ನು ಬಸವಣ್ಣನವರು ಸುಂದರವಾಗಿ ತಿಳಿಸಿದ್ದಾರೆ.
ಅರಿದಿಹೆನೆಂದರೆ | ಅರಿವಿಂಗಸಾಧ್ಯ ||
ನೆನೆದಿಹೆನೆಂದಡೆ | ನೆನಹಿಂಗಸಾಧ್ಯ ||
ಭಾವಿಸಿಹೆನೆಂದಡೆ | ಭಾವಕ್ಕಸಾಧ್ಯ ||
ವಾಙ್ಮನಕ್ಕಗೋಚರ ಲಿಂಗವ | ಅರಿವ ಪರಿಯಂತಯ್ಯಾ ||
ಗುರು | ತೋರದನ್ನಕ್ಕರ? ||
ಗುರುಶಿಷ್ಯರ ಮಥನದಲ್ಲಿ | ಸ್ವಯಂಜ್ಯೋತಿಲಿಂಗವು ||
ಉದಯಪ್ಪುದೆಂಬ | ಶೃತಿ ಹುಸಿಯೇ? ||
ಕೂಡಲಸಂಗಮದೇವಾ | ನಿಮ್ಮ ಮಹಾನುಭಾವರ ಮಥನದಿಂದ ||
ಎನ್ನಲ್ಲಿ ನಿಜವ | ನೆಲೆಗೊಳಿಸಾ ಪ್ರಭುವೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-90 / ವಚನ ಸಂಖ್ಯೆ-1010)
ಅರಿವಿನ ಪ್ರಜ್ಞೆ ನಮ್ಮ ನಮ್ಮಲ್ಲೇ ಹುಡುಕುವ ಪ್ರಕ್ರಿಯೆ. ಅದನ್ನು ಒಂದು ಚೌಕಟ್ಟಿನಲ್ಲಿ ಹಿಡಿದಿಟ್ಟುಕೊಳ್ಳುವುದು ಅಸಾಧ್ಯ. ಅಂತರಂಗದಲ್ಲಿ ಉಂಟಾಗುವ, ಸ್ಫುರಿಸುವ ಚೈತನ್ಯ. ಸಮರ್ಥವಾದ ಅಂತರಂಗದ ಅರಿವು ಅಥವಾ ತನ್ನೊಳಗಿನ ಗುರುವಿಗೆ ಮಾತ್ರ ಸಾಧ್ಯ. ಗುರು ಯಾವ ರೂಪಲ್ಲಾದರೂ ಬಂದು ಮಾರ್ಗ ತೋರುವರೋ ಬಲ್ಲವರಿಲ್ಲ. ಅಂತೂ ಕಲಿಯುವ ತುಡಿತ, ಸಾಧನೆ ಮಾಡುವ ಅದಮ್ಮಯ ಉತ್ಸಾಹ, ನಿಸ್ವಾರ್ಥ, ಶ್ರದ್ಧೆ ಇದ್ದರೆ ಈ ಅರಿವನ್ನು ನೆಲೆಗೊಳಿಸಿಕೊಳ್ಳಲು ಸಾಧ್ಯ. ಇಂಥ ಅರಿವಿನ ಪ್ರಜ್ಞೆಯನ್ನು ಬೇಂದ್ರೆ ಅಜ್ಜಾವರು ಎಷ್ಟು ಸುಲಭವಾಗಿ ತಿಳಿಸಿ ಕೊಟ್ಟದ್ದು ಮರೆಯಲಾಗದ ವಿಷಯ.
1975-76 ನೇ ಇಸ್ವಿ ಅನಸತದ. ನಾನಾಗ 7 ನೇ ತರಗತಿ ಮುಗಿಸಿದ್ದೆ. ಬೇಂದ್ರೆ ಅಜ್ಜಾರು ಈ ಸೂಟ್ಯಾಗ ರವಿವಾರ ಮನೀಗೆ ಬಂದರು. ಸಂಜೀಕ ಹೋಗೂ ಮುಂದ ನಿಮ್ಮೂರು ಯಾವುದ ಅಂದರು. ನಮ್ಮದ ಚೆನ್ನಮ್ಮನ ಕಿತ್ತೂರ ಹಂತೇಕ ಹಿರೇನಂದೀಹಳ್ಳಿ ಅಂದೆ. ಹಂಗಾದರ ಕಿತ್ತೂರ ಚೆನ್ನಮ್ಮನ ಬಗ್ಗೆ ಒಂದು ಪ್ರಬಂಧ ಬರಿ. ಮುಂದಿನ ರವಿವಾರ ಬರತೇನಿ ತೋರಸ ಅಂದು 2 ರೂಪಾಯಿ ಕೈಗೆ ಕೊಟ್ಟು ಹೊಸಾ ನೋಟ್ ಬುಕ್ ನ್ಯಾಗ ಬರೀ ಅಂತ ಹೇಳಿ ಹೋದರ. ಬೇಂದ್ರೆ ಅಜ್ಜಾ ಹೇಳ್ಯಾನ ಅಂದರ ನಮಗ ಅದ ದೊಡ್ಡ ಖುಶಿ. ಒಂದು 10 ಪೇಜ್ ಪ್ರಬಂಧ ಬರದಿದ್ದೆ. ಹೇಳಿದಂಗ ಅಜ್ಜಾರು ರವಿವಾರ ಬಂದರು. ಪ್ರಬಂಧ ತೋರಸಪಾ ಅಂದರ. ಒಂದಕ್ಷರಾನೂ ಬಿಡದಂಗ ಓದಿದ ಅಜ್ಜಾ ಶಬ್ಬಾಷ್ ಅಂದ ಕೂಡಲೇ ನನ್ನ ಮುಖ ಅರಳಿದ್ದು ನೋಡಿ ಅಜ್ಜಾರು ಜಾನಪದರಲ್ಲಿ ಕಿತ್ತೂರು ಚೆನ್ನಮ್ಮ ಅನ್ನೋ ವಿಷಯದ ಬಗ್ಗೆ ಹೇಳಾಕ ಶುರು ಮಾಡಿದರು. ನಮ್ಮ ಜನಪದರು ಓದಿದವರಲ್ಲಾ ಬರದವರಲ್ಲಾ. ಆದರ ಅವರ ಶಬ್ದ ಜೋಡಣೆ ಮತ್ತು ಶಬ್ದ ಪ್ರಯೋಗ ಎಷ್ಟು ಶುದ್ದ ಮತ್ತು ಸಂಸ್ಕಾರಯುತವಾಗಿದ್ದವು ಅನ್ನೋದನ್ನ ತಿಳಿಸಿದ್ದು ಇಂದಿಗೂ ಮನದಾಳದಿಂದ ಮರೆಯಾಗಿಲ್ಲ. ಎಂಥಾ ದೊಡ್ಡ ಕಥೀನೂ ಸಣ್ಣದಾಗಿ ಚೊಕ್ಕದಾಗಿ ಹೇಳತಿದ್ದರು ಅನ್ನೂದಕ್ಕ ಒಂದು ಆರು ಸಾಲಿನ ಜಾನಪದ ಹಾಡನ್ನು ನನ್ನ ಕೈಯಾರೆ ಬರೆಸಿದ್ದರು.
ಕಿತ್ತೂರ ಚೆನ್ನಮ್ಮ ಸುತ್ತೂರ ಒಡತ್ಯಾಗಿ
ಕತ್ತಿ ಕವಚನಗಳ ಉಡುಪುಟ್ಟು ಅಬ್ಬರದಿ
ಬತ್ತಲಗುದರಿಯ ಜಿಗದಾಳೋ
ಕೆಂಪುಮಾರಿಯ ದಂಡು ಸಿಂಪಾಗಿ ಸಿಡಿದಿತ್ತು
ರಪ್ಪ ರಪ್ಪನೆ ಓಡಿತ್ತೊ
ಅಮಟೂರ ಬಾಳಪ್ಪ ಗುಂಡಿಟ್ಟ ಠಾಕರೆಗೆ
ಅದಕ್ಕ ಅನಸತದ, ಧಾರವಾಡದಾಗ ಬೆಳೆದ ನಮಗೆ ವರಕವಿಗಳಂಥವರ ಹತ್ತಾರು ಸಾಹಿತ್ಯ ಮತ್ತು ಸಂಗೀತದ ದಿಗ್ಗಜರ ಆಶೀರ್ವಾದ, ಸಂಪರ್ಕ ಮತ್ತು ಒಡನಾಟದಿಂದ ನಾವೂ ಕೂಡ ಸಾಹಿತ್ಯದ ಸೇವೆ ಮಾಡುವಂತಾಗಿದ್ದು ಇಂದಿಗೂ ಸ್ಮರಣೆಗೆ ಬರತದ.
ಸರಸವೇ ಜನನ, ವಿರಸವೇ ಮರಣ ಸಮರಸವೇ ಜೀವನ ಎಂದು ತಮ್ಮ ಇಡೀ ಬದುಕನ್ನೇ ಕಾವ್ಯಮಯವಾಗಿಸಿಕೊಂಡಿದ್ದವರು ಬೇಂದ್ರೆ. ಇಂಥ ಶಬ್ದಗಾರುಡಿಗ, ಧೀಮಂತ ವರಕವಿಯವರನ್ನು ಕರೆದು ಸತ್ಕರಿಸದ ನಗರ ಕರ್ನಾಟಕದಲ್ಲಿ ಇಲ್ಲ ಎನ್ನುವಷ್ಟು ಬೆಳೆದು ನಿಂತ ಪರಿ ಅದ್ಭುತ ಮತ್ತು ರೋಚಕ. ದೀಪಾವಳಿಯ ನರಕ ಚತುರ್ದಶಿಯ ದಿನಾಂಕ 26.10.1981 ರಂದು ಮುಂಬೈನ ಹರಕಿಶನ್ ದಾಸ್ ಆಸ್ಪತ್ರೆಯಲ್ಲಿ ವಯೋಸಹಜ ಖಾಯಿಲೆಯಿಂದ ಕನ್ನಡ ಸಾಹಿತ್ಯ ಲೋಕದ ಧೃವತಾರೆ ಮಿಂಚಿ ಮರೆಯಾಯಿತು.
ಇಂಥ ಶಬ್ದಗಾರುಡಿಗ ಚೇತನಕ್ಕೆ ಈ ಲೇಖನದ ಮೂಲಕ ನಮ್ಮ ಸಾಷ್ಟಾಂಗ ನಮನಗಳು. ಸಮಾಜದ ಎಲ್ಲ ಶ್ರೇಣೀಕೃತ ವರ್ಗದವರನ್ನು ಅಪ್ಪಿಕೊಂಡು ಒಪ್ಪಿಕೊಂಡ ಬೇಂದ್ರೆಯವರನ್ನು ನೆನಪಿಸಿಕೊಳ್ಳುತ್ತಾ ಬಸವೇಶ್ವರರ ಈ ವಚನದ ಮೂಲಕ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಆವ ಕುಲವಾದಡೇನು? | ಶಿವಲಿಂಗವಿದ್ದವನೆ ಕುಲಜನು ||
ಕುಲವನರಸುವರೆ ಶರಣರಲ್ಲಿ | ಜಾತಿ ಸಂಕರನಾದ ಬಳಿಕ? ||
ಶಿವಧರ್ಮ ಕುಲೇ ಜಾತಃ | ಪುನರ್ಜನ್ಮ ವಿವರ್ಜಿತಃ ||
ಉಮಾ ಮಾತಾ ಪಿತ ರುದ್ರಃ | ಐಶ್ವರ್ಯಂ ಕುಲಮೇವಚ ಎಂದುದಾಗಿ ||
ಒಕ್ಕುದ ಕೊಂಬೆನವರಲ್ಲಿ | ಕೂಸ ಕೊಡುವೆ ||
ಕೂಡಲಸಂಗಮದೇವಾ | ನಂಬುವೆ ನಿಮ್ಮ ಶರಣನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-718)
ಕುಲವನರಸುವರೆ ಶರಣರಲ್ಲಿ ಜಾತಿ ಸಂಕರನಾದ ಬಳಿಕ? ಎಂದ ಬಸವೇಶ್ವರರು ಕಾಯಕ ಯೋಗಿಗಳನ್ನು ಒಟ್ಟುಗೂಡಿಸಿ ಅವರ ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ. ಎಲ್ಲ ಕುಶಲಕರ್ಮಿಗಳನ್ನು “ಆಯಗಾರರು” ಎಂಬ ವಿಶಿಷ್ಠ ಹೆಸರನ್ನು ಬಳಸಿದ ಬಸವೇಶ್ವರರು ಭಕ್ತಿ ಚಳುವಳಿಯ ಮೂಲಕ ತಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕ್ರಾಂತಿ ಇಡೀ ವಿಶ್ವದಲ್ಲಿಯೇ ಅತ್ಯದ್ಭುತ. ಎಲ್ಲರನ್ನೂ ಜಗತ್ತಿನ ಮೊದಲನೇ ಆಧ್ಯಾತ್ಮಿಕ ಪಾರ್ಲಿಮೆಂಟ್ ಎಂದು ಕರೆಯಿಸಿಕೊಂಡ ಅನುಭವ ಮಂಟಪಕ್ಕೆ ಕರೆ ತಂದರು.
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
“ಸವಿಚರಣ” ಸುಮತಿ ಸ್ಕೂಲ್ ಹತ್ತಿರ
ಕ್ಯಾತ್ಸಂದ್ರ, ತುಮಕೂರು – 572 104
ಮೋಬೈಲ್ ನಂ : 97413 57132 / 97418 89684
ಈ-ಮೇಲ್ : vijikammar@gmail.co
ಸಹಾಯಕ ಗ್ರಂಥಗಳು :
• Lives of Saints : Dr. Ujwala S. hiremath
• ನಾಕುತಂತಿ : ಅಂಬಿಕಾತನಯದತ್ತ
• ಉಯ್ಯಾಲೆ : ಅಂಬಿಕಾತನಯದತ್ತ
• ಬೆಂಗಳೂರಾಗ ಬೇಂದ್ರೆ : ಶ್ರೀ ಸುರೇಶ ಕುಲಕರ್ಣಿಯವರ ಪ್ರವಚನಗಳು
• ಬೇಂದ್ರೆ ಬದುಕು ಬರಹ : ಡಾ. ಜಿ ಎಸ್ ಸಿದ್ಧಲಿಂಗಯ್ಯ
• ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು-ಬೇಂದ್ರೆ : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
• ದ ರಾ ಬೇಂದ್ರೆ : ವಿಕಿಪೀಡಿಯಾ
• ವಚನ ನಿಧಿ : ಡಾ. ಹೆಚ್. ಚಂದ್ರಶೇಖರ
• ಶರಣ ಚರಿತಾಮೃತ : ಡಾ. ಸಿದ್ಧಯ್ಯ ಪುರಾಣಿಕ
• ಉತ್ತರ ಕರ್ನಾಟಕದ ಆಯಗಾರರು : ಡಾ, ಎಸ್. ಎಮ್. ವೃಷಭೇಂದ್ರಸ್ವಾಮಿ
• ಬಸವಯುಗದ ವಚನ ಮಹಾಸಂಪುಟ : ಡಾ. ಎಮ್. ಎಮ್. ಕಲಬುರ್ಗಿ
• ಬಸವಣ್ಣ ಹಾಗೂ ಲಿಂಗಾಯತ ಧರ್ಮ : ಹಿರೇಮಲ್ಲೂರ ಈಶ್ವರನ್
• ವಚನ ಸಾಹಿತ್ಯದಲ್ಲಿ ಸಮಾಜೋ-ಭಾಷಿಕ ಚಿಂತನೆಗಳು : ಡಾ. ವಿ. ಶಿವಾನಂದ