ಎಚ್.ನರಸಿಂಹಯ್ಯ’ ಎಂಬ ವೈಚಾರಿಕ ಹಣತೆಗೆ ನೂರರ  ಸಂಭ್ರಮ

ಎಚ್.ನರಸಿಂಹಯ್ಯ’ ಎಂಬ ವೈಚಾರಿಕ ಹಣತೆಗೆ ನೂರರ  ಸಂಭ್ರಮ

ಬಹುಶಃ ಅವರು ಬದುಕಿರುತ್ತಿದ್ದರೆ ಇಂದು ತಮ್ಮ 100ನೇ ಹುಟ್ಟು ಹಬ್ಬ ಆಚರಿಸುಕೊಳ್ಳುತ್ತಿದ್ದರು. ಆದರೆ ಇಂದು ನಮ್ಮೊಂದಿಗೆ ಅವರಿಲ್ಲ. ಅವರ ವೈಚಾರಿಕ ಸಾಧನೆಯ ‘ಹೋರಾಟದ ಹಾದಿ’ ಮರೆಯಾಗದೇ ಎಂದೆಂದಿಗೂ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿರುವುದಂತೂ ಸತ್ಯ . ಜೂನ್ ತಿಂಗಳ ಬಂತೆಂದರೆ ಶಾಲೆಗಳು ಆರಂಭವಾಗಿ ಮಕ್ಕಳು ಉಲ್ಲಾಸದಿಂದ ಶಾಲೆಯ ಅಂಗಳಕ್ಕೆ ಹೆಜ್ಜೆಯಿಡುವ ಈ ಹೊತ್ತಿನಲ್ಲಿ ಈ ನೆಲದ ಸಾಕ್ಷಿ ಪ್ರಜ್ಞೆ , ಶಿಕ್ಷಣ ತಜ್ಞರಾಗಿದ್ದ ಮೇರು ವ್ಯಕ್ತಿತ್ವದ ಡಾ. ಎಚ್. ನರಸಿಂಹಯ್ಯನವರ ಎಲ್ಲ ನೆನಪುಗಳು ಮತ್ತೆ ಮತ್ತೆ ಒತ್ತರಿಸಿ ಬಂದು ಕಾಡುತ್ತವೆ.

ಡಾ. ಎಚ್‌. ನರಸಿಂಹಯ್ಯನವರು 6ನೇ ಜೂನ್ 1920 ರಂದು ಕೋಲಾರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಹೊಸೂರು ಎಂಬ ಗ್ರಾಮದ ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು.
ಡಾ. ಎಚ್.ಎನ್ ಅವರದು ಸರಳ ನಡೆ – ನುಡಿಯಾಗಿತ್ತು. ಭೌತಶಾಸ್ತ್ರದ ಬಿ. ಎಸ್‌ಸಿ.(ಆನರ್ಸ್) ಮತ್ತು ಎಂ. ಎಸ್‌ಸಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. 1946ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರಆಧ್ಯಾಪಕರಾಗಿದ್ದರು.
ನಂತರ ಬೆಂಗಳೂರು ವಿಶ್ವವಿದ್ಯಾಲಯದ
ಉಪಕುಲಪತಿಗಳಾಗಿ ಅನೇಕ ಮಹತ್ತರ ಕಾರ್ಯಗಳ ಸಾಧನೆ ಮಾಡಿದರು.

ಇತಿಹಾಸ ಎನ್ನುವುದು ಹಲವು ಸತ್ಯ ಸಂಗತಿಗಳ ಸಮಾಧಿಯ ಮೇಲೆ ಕಟ್ಟಿದ ಗೋರಿಯೇ ಆಗಿದ್ದರೂ ಅದು ಬಿಚ್ಚುಡುವುದಕ್ಕಿಂತ ಬಚ್ಚಿಡುವುದೇ ಹೆಚ್ಚು. ಎಚ್‌. ಎನ್. ಅವರ ಹುಟ್ಟು, ಬದುಕು ಮತ್ತು ಹೋರಾಟದ ಬಗ್ಗೆ ಸಮಾಜಕ್ಕೆ ಇನ್ನೂ ತಿಳಿಸಲು ಸಾಧ್ಯವಾಗದೆ ಇರುವುದು ವಿಪರ್ಯಾಸ. ಹಿಂದುಳಿದ ಬಡ ಕುಟುಂಬದಲ್ಲಿ ಹುಟ್ಟಿ ತನ್ನ ಅಂತರ್ಗತ ಅರಿವಿನಿಂದಲೇ ತನ್ನ ವ್ಯಕ್ತಿತ್ವ ರೂಪಿಸಿಕೊಂಡ ಅವರು ಸಾಮಾಜಿಕ , ಶೈಕ್ಷಣಿಕ, ವೈಚಾರಿಕ, ವೈಜ್ಞಾನಿಕ ಕ್ಷೇತ್ರಕ್ಕೆ ಇಂದಿಗೂ ಮಾರ್ಗದರ್ಶಿಯಾಗಿ ಉಳಿದಿರುವ ಅದಮ್ಯ ಚೇತನ ಎಂದೆನಿಸುಕೊಳ್ಳುತ್ತಾರೆ.

ವಿದ್ಯಾರ್ಥಿ ದೆಸೆಯಿಂದಲೇ ಗಾಂಧಿವಾದದ ದಟ್ಟ ಪ್ರಭಾವದಲ್ಲಿ ಬೆಳೆದು ಹೊಸ ಸಮಾಜ ಕಟ್ಟಲು ಗಾಂಧೀಜಿಯವರ ತತ್ವಸಿದ್ಧಾಂತಗಳಿಗೆ ಒಳದನಿಯಾದರು. ವಿಜ್ಞಾನ ವಿದ್ಯಾರ್ಥಿಯಾದ ಅವರು ವೈಚಾರಿಕ, ವೈಜ್ಞಾನಿಕ ಮನೋಭಾವದಲ್ಲಿ ಅಚಲವಾದ ನಂಬಿಕೆ ಇತ್ತು. ಬೆಂಗಳೂರಿನ ನ್ಯಾಶನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವರು ತಮ್ಮ ಕಛೇರಿ ಕುರ್ಚಿಯ ಹಿಂಬದಿ ಗೋಡೆಯ ಮೇಲೆ ಪ್ರಶ್ನೆಯ ಚಿಹ್ನೆ ಬರೆಸಿದರು. ಯಾವುದೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದೆಂದು ಪ್ರತಿಪಾದಿಸುತ್ತಿದ್ದರು.

“ವಿಜ್ಞಾನ ಹಾಗೂ ವೈಜ್ಞಾನಿಕ ವಿಧಾನದಲ್ಲಿ ನನಗೆ ದೃಢವಾದ ನಂಬಿಕೆ. ಸಮಾಜವನ್ನು – ಮುಖ್ಯವಾಗಿ ಧರ್ಮವನ್ನು ಪರಿಷ್ಕರಿಸಲು, ರೂಪಾಂತರಿಸಲು ವೈಜ್ಞಾನಿಕ ಮನೋಧರ್ಮ ಅತ್ಯಂತ ಪ್ರಬಲ ಸಾಧನ” ಎಂದು ಯೋಚಿಸುತ್ತಿದರು. ‘ಜನರಲ್ಲಿ ಆಳವಾಗಿ ಬೇರು ಬಿಟ್ಟಿರುವ ಕರ್ಮ ಸಿದ್ಧಾಂತ ಕಿತ್ತೊಗೆದು ಜನರಿಗೆ ಆತ್ಮವಿಶ್ವಾಸ ತುಂಬಬೇಕು. ಅವೈಚಾರಿಕ ಅಂಧಶ್ರದ್ಧೆಯ ಆಚರಣೆಗಳು ಹಾಗೂ ಪೂರ್ತಿ ಅವೈಜ್ಞಾನಿಕವಾಗಿರುವ ಜ್ಯೋತಿಷ್ಯದಲ್ಲಿನ ನಂಬಿಕೆ – ಇವೆಲ್ಲದರ ಹಿಡಿದ ನಮ್ಮ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿನ ಅಮೂಲಾಗ್ರ ಕ್ರಾಂತಿಕಾರಿ ಬದಲಾವಣೆಗೆ ಅಡ್ಡ ಬಂದಿದೆ’ ಎಂಬ ಸೂಕ್ಷ್ಮತೆಗಳ ನಿಗೂಢತೆ ಗಮನಿಸುತ್ತಾ ವೈಜ್ಞಾನಿಕ ಚಿಂತನೆಯ ಬೀಜ ಬಿತ್ತಲು ಮುಂದಾಗಿದ್ದರು.

ಡಾ. ಎಚ್.ಎನ್ ಅವರಿಗೆ ವೈಚಾರಿಕ, ವೈಜ್ಞಾನಿಕವಾಗಿ ಮನೋಧರ್ಮದ ಮೇಲೆ ಅಪಾರ ನಂಬಿಕೆ ಇತ್ತು. ಮೌಢ್ಯ ವಿರೋಧಿ ನಿಲುವು ತಮ್ಮ ಬದುಕಿನ ಭಾಗವಹಿಸಿಕೊಂಡು ಅನೇಕ ‘ಪವಾಡ ಪುರುಷ’ ಬಾಬಾಗಳ ಪವಾಡಗಳಿಗೆ ಸವಾಲೆಸೆದು ಮೌಢ್ಯ ಬಿತ್ತುವರ ನಿಜ ಬಣ್ಣ ಬಯಲು ಮಾಡಲು ಪ್ರಯತ್ನಿಸಿ ಸಫಲತೆ ಕೂಡ ಕಂಡುಕೊಂಡಿದ್ದರು. ಜಾತ್ಯತೀತ ನಿಲುವು ಪ್ರತಿಪಾದಿಸುವ ಪವಾಡ ಬಾಬಾಗಳು ಮೌಢ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಹೀಗಾಗಿ ಜಾತಿಯಂತೆ ಮೌಢ್ಯ ಕೂಡ ತುಂಬಾ ಅಪಾಯಕಾರಿ ಎಂದು ಕಟುವಾಗಿ ವಿರೋಧಿಸುತ್ತಿದ್ದರು.

“ನಾನು ನಾಸ್ತಿಕನಾದರೂ ಅಂಧ ಮೂರ್ತಿಭಂಜಕನಲ್ಲ.
ಮಾನವ ಕೇಂದ್ರಿತ ಧರ್ಮದಲ್ಲಿ ನನಗೆ ನಂಬಿಕೆ ಇದೆ. ಆದರೆ ಧರ್ಮ ಆಚರಣಾವಾದಿಯಾಗಬಾರದು, ನೀತಿವಾದಿ ಆಗಿರಬೇಕು” ಎನ್ನುವ ಎಚ್ಚೆನ್ ಅವರು ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟುಕೊಂಡ ಒಬ್ಬ ಪ್ರಾಮಾಣಿಕ ವಿಚಾರವಾದಿಗಳು ಕೂಡ ಹೌದು.

ಬುದ್ಧ, ಸ್ವಾಮಿ ವಿವೇಕಾನಂದ, ಗಾಂಧೀಜಿ, ನೆಹರು, ಮತ್ತು ಐನ್ ಸ್ಟಿನ್ ಅವರ ಪ್ರಭಾವಕ್ಕೆ ಒಳಗಾಗಿ ಹಲವು ವಿಚಾರಗಳನ್ನು ಕಲಿತ್ತಿರುವೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಸಾವು ಬದುಕಿನ ಕೊನೆಯೇ, ಬದುಕಿಗೊಂದು ಉದ್ದೇಶವಿದೆಯೇ, ಮರಣಾನಂತರ ವ್ಯಕ್ತಿತ್ವ ಉಳಿಯಬಲ್ಲುದೆ ???…‌‌‌ಮುಂತಾದ ತತ್ವಶಾಸ್ತ್ರದ ಪ್ರಶ್ನೆಗಳ ಕುರಿತು ಅಲೋಚಿಸುತ್ತಾ ‘ಬದುಕು ನನಗೇನು ಕಲಿಸಿದೆ?’ ಎಂಬ ತಮ್ಮನೇ ತಾವು ಸವಾಲು ಎಸೆದುಕೊಳ್ಳುತ್ತಿದ್ದರು.

ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯತೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು. “ಶಿಕ್ಷಣದಲ್ಲಿ ವೈಜ್ಞಾನಿಕ ಮನೋಧರ್ಮ ಇರಬೇಕು, ಇದು ಸಂವಿಧಾನದ ಆಶಯ” ಎಂದು ಯೋಚಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ಪವಾಡ ಬಯಲು ಸಮಿತಿ’ ರಚಿಸುವ ಮೂಲಕ ಮೌಢ್ಯ ಆಚರಣೆಗಳನ್ನು ದಿಕ್ಕರಿಸಿ ತಮ್ಮ ಕ್ರಿಯಾಶೀಲತೆ ಮೆರೆದರು.

ಹಲವು ವರ್ಷಗಳ ಕಾಲ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಜೊತೆ ಕಾರ್ಯ ನಿರ್ವಹಿಸಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅವರು ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದರು. ತಮ್ಮ ಇಡೀ ಜೀವನ ‘ಮೌಲ್ಯ ಶಿಕ್ಷಣ’ಕ್ಕಾಗಿ ಮೀಸಲಿಟ್ಟು ಶೈಕ್ಷಣಿಕ ಬದಲಾವಣೆಯ ಮಾರ್ಗಗಳ ಬಗ್ಗೆ ಹಲವು ವಿಚಾರಗಳು ಮಂಡಿಸಿದರು. “ಅನೇಕ ಶಿಕ್ಷಕರು ನಿರ್ಲಕ್ಷ್ಯ ಮನೋಭಾವದವರು, ಅಸಮರ್ಥರು, ಸ್ವಾರ್ಥಿಗಳು. ಇಂಥ ಅಯೋಗ್ಯ ಶಿಕ್ಷಕರಿಂದಾಗಿ ಎಂಥ ಒಳ್ಳೆಯ ಶಿಕ್ಷಣ ಪದ್ಧತಿಯೂ ಹಾಳಾಗುತ್ತದೆ” ಎಂದು
ಒಮ್ಮೊಮ್ಮೆ ಕಳವಳ ವ್ಯಕ್ತಪಡಿಸುತ್ತಿದ್ದರು.

ಚಿಕ್ಕವರಿದ್ದಾಗಲೇ ಗಾಂಧೀಜಿಯವರ ವಿಚಾರಧಾರೆಗಳಿಗೆ ಒಳಗಾಗಿ ರಾಷ್ಟ್ರೀಯತೆ ಪ್ರೇಮ ಬೆಳೆಸಿಕೊಂಡು ತಮ್ಮ ಬದುಕಿನ್ನುದ್ದಕ್ಕೂ ಖಾದಿ ತೊಟ್ಟು
ಸರಳತೆ, ನೇರ ನಡೆ – ನುಡಿಯ ಜೀವನಶೈಲಿ ಮೈಗೂಡಿಸಿಕೊಂಡಿದರು. ತನ್ನ ವೈಯಕ್ತಿಕ ಹಿತಾಸಕ್ತಿಸಾಧನೆಗಿಂತ ದೇಶಕ್ಕೆ ‌ಸಲ್ಲಿಸಬೇಕಾದ ಕರ್ತವ್ಯ ಮುಖ್ಯ ಎಂದು ನಿರ್ಧಾರಿಸಿ ಪದವಿ ಓದುವುದನ್ನು ಅರ್ಧಕ್ಕೆ ಬಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸ ಅನುಭವಿಸಿದರು. ಗಾಂಧೀಜಿರವರ ಸ್ವಾತಂತ್ರ್ಯ ಚಳುವಳಿ ಎಚ್ಚೆನ್ ಅವರಿಗೆ ದೇಶಪ್ರೇಮದ ಭಾವನೆಗಳನ್ನು ಮತ್ತಷ್ಟು ಹೆಚ್ಚಿಸಿತ್ತು.

ಎಚ್.ಎನ್ ಅವರು ‘ತೆರೆದ ಮನ’ ಎಂಬ ವೈಚಾರಿಕ ಬರಹಗಳ ಬುತ್ತಿ, ‘ಹೋರಾಟದ ಹಾದಿ’ ಎಂಬುದು ಅವರ ಆತ್ಮಕಥೆಯಾಗಿದೆ. ಸಾಂಸ್ಕತೀಕ ಸಂಘಟನೆ ಸೇರಿದಂತೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಎಚ್ಚೆನ್ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳಿಂದ ಪ್ರೀತಿಯ ‘ಎಚ್.ಎನ್. ಎಂದು ಕರೆಸಿಕೊಳ್ಳುತ್ತಿದ್ದರು. ಪವಾಡ ಬಯಲು ಮಾಡುವ ವೈಜ್ಞಾನಿಕ ವಿಚಾರವಾದಿಯಾದ ಡಾ.ಎಚ್.ಎನ್.ಅವರ ‘ಬದುಕೇ ಒಂದು ಪವಾಡ’ವಾಗಿ ಬಿಚ್ಚು ಮನಸ್ಸಿನ ‘ತೆರೆದ ಮನ’ ಹೃದಯವಂತಿಕೆ ಅವರದ್ದು. ಕರ್ನಾಟಕದ ಪ್ರಮುಖ ಶಿಕ್ಷಣ ತಜ್ಞರು, ಗಾಂಧಿವಾದಿ, ವೈಚಾರಿಕ ಚಿಂತಕ, ಸಾಮಾಜಿಕ ಬದಲಾವಣೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಿದ ಸಮಾಜ ಸುಧಾರಕರು…ಹೀಗೆ ತನ್ನ ಅಗಾಧ ಪ್ರತಿಭೆಯಿಂದಲೇ ಉನ್ನತ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಡಾ. ಎಚ್.ನರಂಸಿಹಯ್ಯ ಅವರು 31.01. 2005 ಗಾಂಧೀಜಿ ಹತ್ಯೆಯಾದ ತಿಂಗಳಲ್ಲಿಯೇ ನಿಧನರಾಗಿ ಗಾಂಧಿವಾದಕ್ಕೆ ಮತ್ತೊಮ್ಮೆ ಸಾಕ್ಷಿಯಾದರು.

ಸದಾ ಸಮುದಾಯದ ಕಾರ್ಯಕ್ರಮಗಳನ್ನು ಸಂಘಟಿಸಿ ಒತ್ತಾಸೆಯಾಗಿ, ಪ್ರೋತ್ಸಾಹಿಸುತ್ತಿದ್ದ ಹಿರಿಯ ವೈಚಾರಿಕ ಚಿಂತಕ ಡಾ.ಎಚ್‌.ನರಸಿಂಹಯ್ಯನವರು “ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡಿ” ಎನ್ನುವ ಸರಳ ಸಿದ್ಧಾಂತದ ಮೂಲಕ ನಾಡಿನಾದ್ಯಂತ ವೈಜ್ಞಾನಿಕ ಚಿಂತನೆಯ ಬೀಜ ಬಿತ್ತಿದರು. ನುಡಿದಂತೆ ನಡೆದ ಸರಳ, ಪ್ರಾಮಾಣಿಕ ಬದುಕಿನ ಎಚ್‌.ಎನ್‌. ಅವರ ಚಿಂತನೆಗಳು ವರ್ತಮಾನ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ.

ಡಾ.ಎಚ್.ನರಂಸಿಹಯ್ಯ ಎಂಬ ವೈಚಾರಿಕ ಹಣತೆ ಅಂದು,ಇಂದು ಎಂದೆಂದಿಗೂ ಹೀಗೆ ಬೆಳಗುತ್ತಿರಲಿ… !!

 

ಬಾಲಾಜಿ ಕುಂಬಾರ, ಚಟ್ನಾಳ

( ಇಂದು ಡಾ.ಎಚ್.ನರಂಸಿಹಯ್ಯ ಅವರ ಪುಣ್ಯಸ್ಮರಣೆಯ ದಿನದಂದು ಅವರ ಸ್ಮರಣೆಯಲ್ಲಿ ಈ ಲೇಖನ)

Don`t copy text!