ಮಡಿವಾಳ ಲಿಂಗ

ಮಡಿವಾಳ ಲಿಂಗ

ಲಿಂಗ ಸಂಗನಿಗಿಂತ
ಬಸವಲಿಂಗನೇ ಮಿಗಿಲೆಂದ
ಮನದ ಮೈಲಿಗೆ ತೊಳೆದ
ನಮ್ಮ ಮಡಿವಾಳಲಿಂಗ……

ತೊಳೆದರೂ ಹೊಳೆಯದ
ಭವಿಯ ಬಟ್ಟೆಯ ಬಿಟ್ಟು
ಮುಗಿಲ ಬಟ್ಟೆಯ ತೊಟ್ಟ
ನಿರ್ಮಲ ಭಕ್ತನ
ಮನೆಯ ಊಳಿಗದವನೆಂದ
ನಮ್ಮ ಮಡಿವಾಳಲಿಂಗ……

ಸಕಲ ಜೀವರ ಲೇಸಿನ
ಕಲ್ಯಾಣದ ಮಹಾಮನೆಯ
ಕಾಯಕದ ಪರಿಣಾಮಿ
ನಮ್ಮ ಮಡಿವಾಳಲಿಂಗ……

ಮುಗಿಲೆತ್ತರದ ಗುಡ್ಡದ
ಮೇಲಿರುವ ಶಿವಲಿಂಗ
ನಮಗೆ ಎಂದೂ ದೇವರಲ್ಲ,
ಕಾಯಕದೊಳೇ ಪೂಜೆಗೈಯ್ವ
ಶರಣರ ಉಡಿಯೊಳಗಿರುವ
ಲಿಂಗಯ್ಯನೇ ಜಗದ ದೈವವೆಂದ
ನಮ್ಮ ಮಡಿವಾಳಲಿಂಗ……

ಗುರುವಿತ್ತ ಲಿಂಗವ
ಕಾಯಕದಿ ಪೂಜಿಸುತ
ಲೋಕವ ಪೊರೆವಾತನೇ
ಶರಣನೆಂದರುಹಿದ
ನಮ್ಮ ಮಡಿವಾಳಲಿಂಗ……

ಅಂಗೈಯೊಳಗಣ ಲಿಂಗಯ್ಯನೇ
ಸಾಕ್ಷಾತ್ ಸಂಗಯ್ಯನೆಂದರಿತು
ಕಾಯಕ-ದಾಸೋಹದಿ
ನಿರತನಾದ ಭಕ್ತನೇ
ನಿಜ ಶರಣನೆಂದಾತ
ನಮ್ಮ ಮಡಿವಾಳಲಿಂಗ……

ಕೆನೆಗಟ್ಟಿದ ಹಾಲಾದ
ಅರಿವು-ಅನುಭಾವದ
ಬಸವಾದಿ ಶರಣರ ಖ
ವಚನಗಳ ಓಲೆಯ
ಆಪೋಶನಕೆ ಹವಣಿಸಿದ
ದೊರೆಯ ದಂಡನು ಹಿಡಿದು
ದಂಡಿಸಿದ ದಿಟ್ಟ ಕಲಿದೇವ
ನಮ್ಮ ಮಡಿವಾಳಲಿಂಗ…..

ನಮ್ಮ ಮನವ ತೊಳೆಯೋ ಲಿಂಗ
ನಮ್ಮ ಬಾಳ ಬಟ್ಟೆಯ ತೊಳೆಯೋ ಲಿಂಗ
ಅಪ್ಪ ಬಸವಯ್ಯನೇ
ನೀ ನಮ್ಮ ಲಿಂಗ…….
ಬಾ…ಬಾ…..ಮನೆ ಮನಕೆ
ಮಡಿವಾಳಲಿಂಗ…..

-ಕೆ.ಶಶಿಕಾಂತ
ಲಿಂಗಸೂಗೂರ

Don`t copy text!