ಅಕ್ಕ ನೆನಪಾಗುತ್ತಾಳೆ
ತಿಕ್ಕಿ ತೀಡಿ ಮಡಿಸಿಟ್ಟ ಐದಡಿ
ಸೀರೆಯ ಬಿಡಿಸಿ ಉಡುವಾಗ
ಅಕ್ಕ ನೆನಪಾಗುತ್ತಾಳೆ
ಸೆರಗ ಹಿಡಿದೆಳೆವ ಪುರುಷ ಸಿಂಹನ
ಆಕ್ರಮಣದ ಕತೆ ಕೇಳಿದಾಗ
ಅಕ್ಕ ನೆನಪಾಗುತ್ತಾಳೆ
ನೊಂದವರ ನೋವ ಅರಿಯುವ
ತವಕದಲಿ ವಚನ ಸಾಲುಗಳ
ಸಾಂತ್ವನದಲಿ ಅಕ್ಕ ನೆನಪಾಗುತ್ತಾಳೆ
ಸ್ತುತಿ ನಿಂದನೆಗಳು ಧುತ್ತೆಂದು
ಮುತ್ತಿಕೊಂಡು ಕಂಗಾಲಾದಾಗ
ಹೆದರಿದಿರು ಮನವೆ ಎಂದು
ಹಾಡುವಾಗ ಅಕ್ಕ ನೆನಪಾಗುತ್ತಾಳೆ
ಕಾಣದ ಕೈಯೊಂದು ಕೈ ಹಿಡಿದು
ನಡೆಸಿ ಬೆನ್ನು ತಟ್ಟಿ ಧೈರ್ಯ
ತುಂಬುವ ಕಕ್ಕುಲಾತಿಯಲಿ
ಅಕ್ಕ ನೆನಪಾಗುತ್ತಾಳೆ
ನಾಡ ಮೃಗಗಳು ಕಾಡಿ
ಕೇಕೆ ಹಾಕಿ ನಗುವಾಗ
ಮುಖವಾಡಗಳು ದೆವ್ವದಂತೆ
ಕುಣಿದು ಕುಪ್ಪಳಿಸುವಾಗ
ಅಕ್ಕ ನೆನಪಾಗುತ್ತಾಳೆ
ಬೆಟ್ಟದ ಮೇಲಿರುವ ಮನೆ
ನೆನಪಿಸಿ ಮೃಗಗಳಿಗೆ ಅಂಜದಿರು
ಎಂಬ ಹಾಡಲಿ ಅಕ್ಕ ನೆನಪಾಗುತ್ತಾಳೆ
ದೇಹದಾಸೆಗೆ ಜೊಲ್ಲು ಸುರಿಸುವ
ಹೇಸಿ ಜೀವಗಳ ಕಳ್ಳ ನೋಟಕೆ
ಮನ ಬೆದರದೆ ನಾ ನೀನಾಗಿ
ಬದುಕ ದಡ ಸೇರುವಾಗ
ಅಕ್ಕ ನೆನಪಾಗುತ್ತಾಳೆ
ಸತ್ಯ ಶುದ್ಧ ಮನಕೆ
ಅಕ್ಕ ನಿತ್ಯ ನೂತನ
ದಿವ್ಯ ಚೇತನ
ಅಕ್ಕನ ನೆನಪೊಂದೇ
ಸಾಕು ನಾವು ನಾವಾಗಿ ಬದುಕಿ
ಬಾಳಲು ಬಾಳಿ ಬದುಕುವ
ಮಹಾ ಬೆಳಗ ಬೆಳಕಲಿ
ಅಕ್ಕ ಸದಾ ನೆರಳಂತೆ
ನೆನಪಾಗುತ್ತಾಳೆ
–ಸಿಕಾ
(ಕಾವ್ಯಶ್ರೀ ಮಹಾಗಾಂವಕರ)