ದಿಟ್ಟ ಶರಣ ನುಲಿಯ ಚಂದಯ್ಯ
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು.
ಗುರುವಾದಡೂ ಚರಸೇವೆಯ ಮಾಡಬೇಕು.
ಲಿಂಗವಾದಡೂ ಚರಸೇವೆಯ ಮಾಡಬೇಕು.
ಜಂಗಮವಾದಡೂ ಚರಸೇವೆಯ ಮಾಡಬೇಕು
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು.
-ನುಲಿಯ ಚಂದಯ್ಯ
ಕಲ್ಯಾಣ ನಾಡಿನ ಶ್ರೇಷ್ಠ ಶರಣ ಅನುಭಾವಿ ವಚನಕಾರ . ಹುಲ್ಲು ತಂದು ಹಗ್ಗ ಹೊಸೆದು, ಮಾರಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದ ಚಂದಯ್ಯ ಒಬ್ಬ ಕಾಯಕಯೋಗಿ. ಬಿಜಾಪುರ ಜುಲ್ಲೆಯ ಶಿವಣಗಿ ಈತನ ಹುಟ್ಟೂರು. ಶೂನ್ಯಸಂಪಾದನೆ ಮತ್ತು ಪುರಾಣಗಳಲ್ಲಿ ಈತನ ಕಾಯಕನಿಷ್ಠೆಯ ಕಥೆ ವರ್ಣಿತವಾಗಿದೆ.
ಪುರಾಣವೊಂದರಲ್ಲಿ ತನ್ನ ಇಷ್ಟಲಿಂಗವು ಜಾರಿ ನೀರಲ್ಲಿ ಬೀಳುತ್ತದೆ ಅದನ್ನು ಕಡೆಗಣಿಸಿ ತನ್ನ ಕಾಯಕದೊಳಗೆ ನಿರತನಾಗುವ ಚಂದಯ್ಯ ಕೊನೆಗೆ ಲಿಂಗಕ್ಕೂ ಹಗ್ಗ ಹೊಸೆಯುವ ಕಾಯಕವನ್ನು ನೀಡಿ ಲಿಂಗಕ್ಕಿಂತ ಶ್ರಮಜೀವಿ ಭಕ್ತ ಶ್ರೇಷ್ಠ ಎಂದು ತೋರಿಸಿಕೊಟ್ಟಿದ್ದಾರೆ .
ಇದ್ಕಕೆ ಪೂರಕವಾದ ಒಂದು ವಚನವನ್ನು ನಾವು ಇಲ್ಲಿ ವಿಶ್ಲೇಷಿಸೋಣ
ಗುರುವಾದಡೂ ಕಾಯಕದಿಂದವೆ ಜೀವನ್ಮುಕ್ತಿ.
ಶರಣ ಸಿದ್ಧಾಂತದಲ್ಲಿ ಗುರುವೆಂಬುದು ವ್ಯಕ್ತಿಯಲ್ಲ ಅದು ಅರಿವಿನ ಸಂಕೇತ .ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ . ಅಂತಹ ಅರಿವಿನ ಪರಾಕಾಷ್ಠತೆ ಹೊಂದಿದ ಗುರುವು ಕೂಡಾ ಕಾಯಕದಿಂದಷ್ಟೇ ಮುಕ್ತಿಯನ್ನು ಪಡೆಯಬೇಕು. ಇಲ್ಲಿ ಪರೋಕ್ಷವಾಗಿ ಗುರು ವ್ಯಕ್ತಿ ಎಂಬುದನ್ನು ತಳ್ಳಿ ಹಾಕಿದ್ದಾರೆ ಚಂದಯ್ಯ ಶರಣರು. ಅರಿವನ್ನು ಬಂಡವಾಳ ಮಾಡಿಕೊಂಡು ವ್ಯವಹರಿಸುವ ಕಪಟ ವೇಷಧಾರಿಗಳು ನಿತ್ಯ ಕಾಯಕ ಮಾಡಿ ಮುಕ್ತಿ ಪಡೆಯಬೇಕೆಂಬ ಕಟ್ಟಾಜ್ಞೆ ಶರಣರದು.
ಲಿಂಗವಾದಡೂ ಕಾಯಕದಿಂದವೆ ವೇಷದ ಪಾಶ ಹರಿವುದು
ಲಿಂಗವೆಂಬುದು ವಸ್ತುವಲ್ಲ ಲಿಂಗವು ಆಚಾರದ ಪ್ರತೀಕ .ಆಚಾರವು ಸತ್ಯ ಶುದ್ಧ ಕಾಯಕದಿಂದ ಕೂಡಿರಬೇಕು.ಲಿಂಗ ಅರಿವಿನ ಕುರುಹು .ಅರುವಿನೊಂದಿಗೆ ನಡೆಸುವ ಅನುಸಂಧಾನಕ್ಕೆ ಲಿಂಗ ಸಾಧನ .ಲಿಂಗಕ್ಕಿರುವ ಕಂತೆ ಕವಚದ ಪರಿ ಹರಿಯುವುದು ಕಾಯಕದಿಂದ ಮಾತ್ರ.ಲಿಂಗವೆಂಬುದು ದೇವರಲ್ಲ ಭಕ್ತನ ಆತ್ಮದ ಚೈತನ್ಯ ಸ್ವರೂಪದ ಲಾಂಛನ . ಇಂತಹ ಲಾಂಛನದ ವೇಷದ ಪಾಶ ಹರಿಯುವದು ಕಾಯಕದಿಂದ..ಕಾರಣ ಲಿಂಗಧಾರಿಗಳು ಸತ್ಯ ಶುದ್ಧ ಕಾಯಕ ಮಾಡಬೇಕೆನ್ನುವುದು ಇವರ ಆಶಯ.
ಗುರುವಾದಡೂ ಚರಸೇವೆಯ ಮಾಡಬೇಕು.
ಗುರು ಎಂಬ ಪ್ರಜ್ಞೆಯು ಚಲನಶೀಲತೆ ಹೊಂದಿದ ಚರ ಜಗತ್ತಿನ ಸೇವೆ ಮಾಡಬೇಕು. ಕೃಷಿ ಕಾಯಕ ಕುಲುಮೆ ಕಾಯಕ, ಬಟ್ಟೆ ಮಡಿ ಮಾಡುವುದು .ಹೀಗೆ ಚರ ಜಂಗಮ ಸೇವೆ ಮಾಡುವುದು ಗುರುವಿಗೂ ಅನ್ವಯವಾಗವುದು. ಗುರು ಶ್ರೇಷ್ಠ ಭಕ್ತ ಕನಿಷ್ಠ ಎಂಬ ಶ್ರೇಣೀಕೃತವಲ್ಲದ ಪ್ರಜ್ಞೆಯನ್ನು ಚಂದಯ್ಯನವರು ನಿರೂಪಿಸಿದ್ದಾರೆ.ಚರ ಸೇವೆಯೇ ಶಿವನ ಸೇವೆ .
ಲಿಂಗವಾದಡೂ ಚರಸೇವೆಯ ಮಾಡಬೇಕು.
ಇಷ್ಟ ಲಿಂಗದ ಯೋಗದಲ್ಲಿ ನಿರತನಾಗುವವನು ಲಿಂಗಜೀವಿಯಾಗುತ್ತಾನೆ.ಆತನ ತನು ಶುದ್ಧ ಪ್ರಾಣ ಶುದ್ಧ ಭಾವ ಶುದ್ಧವಾಗಿರುತ್ತದೆ.ಅಂತಹ ಲಿಂಗಯೋಗಿಯು ಕೂಡ ಚರ ಜಂಗಮ ಸೇವೆಯನು ಮಾಡಬೇಕು. ಜೈವಿಕ ವಿಕಾಸಕ್ಕೆ ಚರ ಸೇವೆ ಮಾಡಿ ಕೆರೆ ಕಾವುಲಿ ನಿರ್ಮಿಸಿ ಕೃಷಿಕಾಯಕವನ್ನು ಪ್ರೇರೇಪಿಸಿ ಹಗ್ಗ ಹೊಸೆಯುವ ಉಪಕಾಯಕವನ್ನು ಮಾಡಿ ರೈತರಿಗೆ ಅನುಕೂಲವಾಗುವ ಶರಣ ನುಲಿಯ ಚಂದಯ್ಯ ವಸ್ತು ನಿಷ್ಠ ವಚನಕಾರನಾಗಿದ್ದಾನೆ. ಯಾರೇ ಆಗಲಿ ಅವರು ಕಾಯಕದಿಂದಲೇ ಮುಕ್ತಿ ಪಡೆಯಬೇಕೆನ್ನುವುದು ಅವರ ಆಶಯವಾಗಿದೆ..
ಜಂಗಮವಾದಡೂ ಚರಸೇವೆಯ ಮಾಡಬೇಕು
ಗುರು ವ್ಯಕ್ತಿಯಲ್ಲ ಲಿಂಗ ವಸ್ತುವಲ್ಲ ಜಂಗಮ ಜಾತಿಯಲ್ಲ. ಜಂಗಮ ಎಂಬುದು ಸಮಾಜ .ಸಮಷ್ಟಿಯ ಭಾವ.ಇಂತಹ ಜಂಗಮ ಸಮಾಜವು ತನ್ನ ಅಭಿವೃದ್ಧಿಗೆ ಸಾಮಾಜಿಕ ವಿಕಾಸಕ್ಕೆ ಸರ್ವಾಂಗೀಣ ಬೆಳವಣಿಗೆಗೆ ಚರ ಸೇವೆ ಮಾಡಬೇಕಾದದ್ದು ಅತ್ಯಂತ ಕಡ್ಡಾಯ ಹಾಗು ಕರ್ತವ್ಯವು ಕೂಡಾ. ಜಂಗಮವು ಚರಸೇವೆ ಮಾಡುವುದು ಜಾಗತಿಕ ಜೈವಿಕ ಸಮಕಳೆ ಊರ್ಜಿತಗೊಳಿಸುವ ಪ್ರಯತ್ನವಾಗಿರುತ್ತದೆ ಕಾರಣ ಚಂದಯ್ಯನವರು ಜಂಗಮವು ಕೂಡಾ ಚರ ಸೇವೆ ಮಾಡಬೇಕೆಂದು ಆಶಿಸುತ್ತಾರೆ.
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು
ಗುರು ಲಿಂಗ ಜಂಗಮ ಇವು ಕಾಯಗುಣಗಳು ಸಾಮಾಜಿಕ ಪರಿವರ್ತನೆಗೆ ಸೇವೆಗೆ ಬದ್ಧವಾಗುವ ಪರಿಣಾಮಕಾರಿ ತತ್ವಗಳು.ಇವುಗಳನ್ನು ಪ್ರತ್ಯೇಕವಾಗಿ ಬೇರ್ಪಡಿಸದೆ ಸಮಾಜಮುಖಿ ಸೇವೆಗೆ ಗುರು ಲಿಂಗ ಜಂಗಮ ತನ್ನನ್ನು ತೊಡಗಿಸಿಕೊಳ್ಳುವುದು ಚೆನ್ನ ಬಸವಣ್ಣನಪ್ರಿಯ ಚಂದಯ್ಯನವರ ಅರಿವು ಎಂದು ಹೇಳಿದ್ದಾರೆ .
ನುಲಿಯ ಚಂದಯ್ಯನವರಿಗೆ ಸಂಬಂಧಿಸಿದ ಶಿಲಾಶಾಸನಗಳು
ಬನವಾಸಿಯ ಮದುಕೆಶ್ವರ ದೇವಾಲಯದಲ್ಲಿ ಕಲ್ಲು ಮಂಟಪ ಇದೆ ಅದರಲ್ಲಿ ನುಲಿಯ ಚಂದಯ್ಯನವರ, ಅಗ್ಗವಣಿಯ ಹೊನ್ನಯ್ಯ ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣಾ ಜೇಡರ ದಾಸಿಮಯ್ಯ, ಆಯ್ದಕಿ ಮಾರಯ್ಯಯ, ಹಾಳಿನ ಹಂಪಣ್ಣ, ಬ್ರಹ್ಮಯಗಳ ಮೂರ್ತಿಗಳನ್ನ ಅವರವರ ಅಂಕಿತ ನಾಮದೊಡನೆ ಕೆತ್ತಿದ್ದಾರೆ.
‘ಚಂದೇಶ್ವರ’ ಅಂಕಿತದಲ್ಲಿ 48 ವಚನಗಳು ದೊರೆತಿವೆ. ಎಲ್ಲವೂ ಕಾಯಕ ಮೌಲ್ಯವನ್ನು ಎತ್ತಿ ಹಿಡಿಯುತ್ತವೆ. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವ ಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ. ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು ಮಾತ್ರ ಲಿಂಗಾರ್ಪಿತವಾಗುತ್ತದೆ. ಎಂಬಂಥ ಮಾತುಗಳಲ್ಲಿ ಈತನ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿದೆ.
ಕಲ್ಯಾಣ ಕ್ರಾಂತಿಯ ನಂತರ ನುಲಿಯ ಚಂದಯ್ಯ ಅಕ್ಕ ನಾಗಮ್ಮನವರ ತಂಡದಲ್ಲಿ ಸೇರಿಕೊಂಡು ವಚನಗಳ ಕಟ್ಟನ್ನು ಹೊತ್ತುಕೊಂಡು ರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಾರೆ.
ನಂತರ ಚಂದಯ್ಯನವರು (ಈಗಿನ ನುಲೆನೂರು) ಹೊಳಲಕೆರೆ ಹತ್ತಿರದ ಪದ್ಮಾವತಿ ಎಂಬ ಊರಿಗೆ ಬರುತ್ತಾರೆ ದುಮ್ಮಿರಾಯನ ಹೆಂಡತಿಯಾದ ಪದ್ಮಾವತಿ ಚಂದಯ್ಯನವರಿಂದ ಧರ್ಮೊಪದೆಶವನ್ನ ಪಡೆದು ಅವರ ಅಪ್ಪಣೆಯ ಪ್ರಕಾರ ಒಂದು ಕೆರೆಯನ್ನು ಕಟ್ಡಿಸುತ್ತಾರೆ ಆ ಕೆರೆಗೆ ಇಂದಿಗೂ ಪದ್ಮಾವತಿ ಅಂತಾನೆ ಸರಕಾರಿ ಕಚೇರಿಗಳಲ್ಲಿ ದಾಖಲೆಗಳುಂಟು. ಕೆರೆ ಸಿದ್ಧವಾದ ಮೇಲೆ ಕೆರೆಯ ಏರಿಯ ಮೇಲೊಂದು ಚಂದಯ್ಯನವರಿಗೊಸ್ಕರ ಮುರಂಕಣದ ಮಠವೊಂದನ್ನ ಕಟ್ಟಿಸಿಕೊಡುತ್ತಾರೆ ,ಆ ಮಠದಲ್ಲಿ ಚಂದಯ್ಯ ಶರಣರು ಕೊನೆಯವರೆಗು ಅನುಭಾವ ಗೋಷ್ಠಿ ನಡೆಸುತಿದ್ದರು ಅನ್ನುವುದು ತಿಳಿದು ಬರುತ್ತದೆ, ಕೆಲವು ವರ್ಷಗಳ ನಂತರ ಚಂದಯ್ಯನವರು ಲಿಂಗೈಕ್ಯರಾಗಲು ಅವರ ಕ್ರಿಯಾ ಸಮಾಧಿಯನ್ನು ಅವರ ಮಠದಲ್ಲೆ ಮಾಡಲಾಗಿತ್ತು ಅಂತ ತಿಳಿದು ಬರುತ್ತದೆ . ಲಿಂಗೈಕ್ಯದ ನಂತರ ಪದ್ಮಾವತಿಯನ್ನುವ ಊರು ಚಂದಯ್ಯನವರ ಕಾಯಕ ಸುಚಿಸುವ ನುಲೆನೂರು ಎಂದಾಗಿ ಕರೆಸಿಕೊಳ್ಳುತಿದೆ.
ಶರಣ ಚಂದಯ್ಯನವರು ನಿಷ್ಠಾವಂತ ನೇರ ನಿರ್ಭಿಡೆಯ ವಚನಕಾರ. ಕಾಯಕದ ಮಹತ್ವವನ್ನು ಇವರಿಂದಲೇ ತಿಳಿಯಬೇಕು. ಕಾಯಕವು ಇವರ ದೃಷ್ಟಿಯಲ್ಲಿ ಪವಿತ್ರ ಪಾವನವಾಗುವ ಕಾಯಕ ಯೋಗವಾಗಿದೆ.
–ಡಾ.ಶಶಿಕಾಂತ.ಪಟ್ಟಣ ರಾಮದುರ್ಗ