ಬಣ್ಣದ ಬದುಕು
ಬಣ್ಣದ ಮಾತು
ಅಂದೊಂದು ದಿನ
ನೀವೇ ಹೇಳಿದಿರಿ ನನ್ನನು ಶೌರ್ಯ ತ್ಯಾಗ ಬಲಿದಾನದ
ಸಂಕೇತ…ಎಂದಿರಿ ||
ಮತ್ತೆ ಸಕಲ ಸಮೃದ್ಧಿಯ ಸಂಕೇತವೆಂದಿರಿ ಆಗಲೂ ನಾನು ಮೌನವಾಗಿಯೇ ಇದ್ದೆ ! ಸಮಯ ಸಾಧಕರಂತೆ ಮಾತನಾಡುವವರ ಕಂಡಿರಿ ಬಣ್ಣದ ಮಾತನಾಡಬೇಡವೆಂದಿರಿ ||
ಇಂದು ಇಲ್ಲಿ ನಾಳೆ ಎಲ್ಲೋ
ಇರುವವರ ಕಂಡಿರಿ
ಬಣ್ಣ ಬದಲಾಯಿಸಬೇಡವೆಂದಿರಿ ಆಗಲೂ ನಾನು
ಮೌನವಾಗಿಯೇ ಇದ್ದೆ! ||
ಬಟ್ಟೆಗಳಿಗೊಂದೊಂದು
ಬಣ್ಣ ಬಳಿದಿರಿ
ಸುಮ್ಮನಿರದೆ ಅದಕೊಂದು
ಧರ್ಮದ ತಳುಕು ಹಾಕಿದಿರಿ ||
ಈಗ ಹೇಳಿ
ಗೊಂದಲವಿರುವದು
ನನ್ನಲ್ಲಿಯೋ?
ನಿಮ್ಮ ನಿಮ್ಮ ವಿಚಾರಗಳಲ್ಲಿಯೋ ! ||
ಇದೊಂದನು ಬಿಟ್ಟು
ನಾ ಬೇರೆ ಮಾತನಾಡಲಾರೆ
ನನ್ನ ಸಹಜ ಧರ್ಮವಿದು
ನಾ ಸದಾ ಮೌನ ||
ನಾ
ಮಾತನಾಡಲಾರಂಭಿಸಿದರೆ ಉಳಿವದು ನಿಮ್ಮಲಿ
ಬರೀ ನೀರವ ಮೌನ!! ||
✍️ ಮಲ್ಲಯ್ಯ ಕೆಂಭಾವಿಮಠ