ದೇವನಿಗೊಂದು ಮನವಿ

ದೇವನಿಗೊಂದು ಮನವಿ

ಜಗದೊಡೆಯ ಮೊರೆಯನಾಲಿಸು
ಜಗದ ಜನರ ಭ್ರಾಂತಿಯನು ನೀಗಿಸು
ಮತಿಹೀನರಾಗಿಹರು ಅಂಕೆಯಿಲ್ಲದೆ ಇಂದು
ಮರೆತು ಮಾನವತೆಯ ದಿಕ್ಕುಗಾಣದೆ ನಿಂದು..

ಜಾತಿ ಮತ ಪಂಥಗಳ ದಳ್ಳುರಿಯಲಿ
ಬೆಂದು ಹೋಗುತಿದೆ ಮಧುರ ಬಾಂಧವ್ಯವು
ವಂಚಕರ ಸಂಚಿಗೆ ಬಲಿಯಾಗುತಲಿ
ನರಳುತಿದೆ ನೋವಿನಲಿ ಸ್ನೇಹದಾ ಸೇತು..

ಭ್ರಷ್ಟರ ಅನೀತಿಯ ಕಾಳ ಮುಷ್ಠಿಯಲಿ
ನಲುಗುತಿದೆ ಸಾಮಾನ್ಯ ಜನರ ಬದುಕು
ದುಷ್ಟರ ವಿಷಮಯ ಚಕ್ರವ್ಯೂಹ ದಲಿ
ಸಿಲುಕಿ ಮುಲುಗುತಿದೆ ಸೌಹಾರ್ದ ಪ್ರೀತಿಯು…

ಬೇಡಿಕೊಳುವೆ ಪ್ರಭುವೆ ಶಿರಬಾಗಿ ಚರಣಕೆ
ಶಾಂತಿ ದಯೆ ಪ್ರೇಮದ ಸುಧೆಯ ಸುರಿಸು
ದ್ವೇಷ ಕಲಹಗಳ ಕರಿಯ ಪರದೆಯ ಸರಿಸಿ
ನಿರ್ಮಲ ಭಾವವನು ಹೃದಯದಲಿ ಸ್ಫುರಿಸು..

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!