ಅನಾವರಣ

ಅನಾವರಣ
ಒಂದು ಅವಲೋಕನ…

ಡಾ.ಚನ್ನಬಸವಯ್ಯ ಹಿರೇಮಠ ಅವರ ಸಂಶೋಧನಾ ಪ್ರಬಂಧಗಳ ಸಂಕಲನ -ಅನಾವರಣ

೨೦೧೯ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ.
ವೀರಶೈವ ಅಧ್ಯಯನ ಕೇಂದ್ರ
ಗಚ್ಚಿನಮಠ ಚಾರಿಟೇಬಲ್ ಟ್ರಸ್ಟ್
ಮಸ್ಕಿ ಜಿಲ್ಲಾ: ರಾಯಚೂರು
ಇವರಿಂದ ಪ್ರಕಟಗೊಂಡ ಸಮಗ್ರ ಸಂಪುಟ.

ಡಾ.ಚನ್ನಬಸವಯ್ಯ ಹಿರೇಮಠ ಅವರ ಇದುವರೆಗಿನ ಬಿಡಿ ಬಿಡಿಯಾಗಿ ಅಲ್ಲಲ್ಲಿ ಪ್ರಕಟಿತವಾದ ಮತ್ತು ಅಪ್ರಕಟಿತ ಒಟ್ಟು ೮೦ ಸಂಶೋಧನಾ ಪ್ರಬಂಧಗಳು ಇಲ್ಲಿವೆ. ಕಲ್ಯಾಣ ಕರ್ನಾಟಕ ಶರಣರ ಬೀಡು ಹಾಗಾಗಿ ಸಹಜವಾಗಿಯೇ ಇಲ್ಲಿನ ಬಹುತೇಕ ಲೇಖನಗಳು ಶರಣರ ಕುರಿತದ್ದಾಗಿವೆ.
ಆಯ್ದಕ್ಕಿ ಮಾರಯ್ಯ ಕುರಿತ ಲೇಖನದಲ್ಲಿ ಆಯ್ದಕ್ಕಿ ಕುರಿತಾದ ಜನಮಾನಸದಲ್ಲಿರುವ ಮಿಥ್ಯೆಯನ್ನು ತೊಡೆದುಹಾಕುವ ಪ್ರಯತ್ನವನ್ನು ಇಲ್ಲಿ ಲೇಖಕರು ಮಾಡಿದ್ದಾರೆ ‘ ಮಾರಯ್ಯ ಬಿಜ್ಜಳನ ರಾಜ್ಯದಲ್ಲಿ ತೆರಿಗೆ ಸಂಗ್ರಹದ ಕೂಲಿಕಾರನಾಗಿದ್ದ.ತಾನು ಸಂಗ್ರಹಿಸಿದ ಆಯಕ್ಕೆ ಪ್ರತಿಫಲವಾಗಿ ಅಕ್ಕಿಯನ್ನು ಆಯದಾಯವಾಗಿ ಪಡೆಯುತಿದ್ದ ಅದಕ್ಕಾಗಿ ಆಯ್ದಕ್ಕಿ ಮಾರಯ್ಯ ಎಂದು ಕರೆಯಲಾಗಿದೆ’ ಎಂದು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ಇಲ್ಲಿ ಲೇಖಕರು ದಾಖಲಿಸಿದ್ದಾರೆ.
ಇಂದು ಜನಪ್ರೀಯವಾಗಿರು ಸಾಮೂಹಿಕ ವಿವಾಹ ಪದ್ದತಿಯು ಶರಣರ ಬಳುವಳಿ ಇದಕ್ಕೆ ಕಾರಣಿಪುರಷ ಶಿವಯೋಗಿ ಸಿದ್ದರಾಮ ಎಂದು ಇಲ್ಲಿನ ಇನ್ನೊಂದು ಲೇಖನದಲ್ಲಿ ಪ್ರಸ್ತುತ ಪಡಿಸಲಾಗಿದೆ.ಇದೇ ರೀತಿಯಲ್ಲಿ ಬಿಬ್ಬಿ ಬಾಚರಸ,ಜೇಡರ ದಾಸಿಮಯ್ಯ ಮುಂತಾದ ಕೆಲವು ಶರಣರ ಕಾಲ,ಸ್ಥಳ,ಕಾಯಕ ಕುರಿತು ಶಾಸನಗಳ ಆಧಾರಗಳಿಂದ ನಿಖರವಾಗಿ ಹೇಳುವ ಪ್ರಯತ್ನವನ್ನು ಡಾ.ಚನ್ನಬಸವಯ್ಯ ಅವರು ಇಲ್ಲಿ ಮಾಡಿದ್ದಾರೆ.
ಭತ್ತ ಗ್ರಾಮ ಎಂಬ ಲೇಖನ ತುಂಬಾ ಕುತೂಹಲಕಾರಿ ಆಗಿದ್ದು ಅಗ್ರಹಾರ ಶಿವಪುರಗಳ ಬಗ್ಗೆ ಒಂದು ನಿಶ್ಚಿತ ನಿಲುವಿಗೆ ಬಂದ ವಿದ್ವಾಂಸರು ಭತ್ತಗ್ರಾಮದ ಅರ್ಥವನ್ನು ನಿರ್ಣಯಿಸುವುದರಲ್ಲಿ ಎಡವಿದ್ದು ಭತ್ತ ಗ್ರಾಮ ಎಂದರೆ ಗೋಮಾಳ ಎಂಬ ಅಭಿಪ್ರಾಯವನ್ನು ಇಲ್ಲಿ ಲೇಖಕರು ವ್ಯಕ್ತಪಡಿಸುತ್ತಾ ದನಕರುಗಳ ಸಮೃದ್ದವಾಗಿ ತಿಂದುಂಡು ಯಥೇಚ್ಛವಾಗಿ ಹಾಲು ನೀಡಲೆಂದು ರಾಜರು ಹುಲ್ಲು ಬೆಳಸಲು ಸಾಕಷ್ಟು ಭೂಮಿಯನ್ನು ಮೀಸಲಾಗಿಡುತ್ತಿದ್ದರು ಹೀಗೆ ಮೀಸಲಾಗಿಟ್ಟ ಪ್ರದೇಶವನ್ನು ಭತ್ತ ಅಥವಾ ಬತ್ತ ಗ್ರಾಮ ವೆಂದು ಕರೆದರು ಎಂಬುದು ಲೇಖಕರ ಸ್ಪಷ್ಟ ಅಭಿಮತ.
ಎಡೆದೊರೆ ನಾಡಿನ ವ್ಯಾಪ್ತಿಯನ್ನು ಬಹಳವಾಗಿ ಚರ್ಚಿಸಿ ಅದರ ಮೇರೆಯನ್ನು ಗುರುತಿಸುವಲ್ಲಿ ಡಾ.ಹಿರೇಮಠ ಬಹುತೇಕ ಸಫಲರಾಗಿದ್ದಾರೆ ಹಾಗೇಯೆ ಎಡೆದೊರೆ ನಾಡಿನ ರಾಜಧಾನಿ ಮಸ್ಕಿ ಆಗಿತ್ತು ಎನ್ನವುದನ್ನೂ ಶಾಸನಗಳಾಧಾರಗಳಿಂದ ಇಲ್ಲಿ ಪ್ರಚುರಪಡಿಸಲಾಗಿದೆ.
ಇನ್ನು ದೇಶಗತಿ ಮನೆತನಗಳ ಬಗ್ಗೆ ಬರೆದಿರುವ ಲೇಖಕರು ಉದ್ಬಾಳ ನಾಡಗೌಡರ ಮನೆತನದ ಬಗ್ಗೆ ಹೇಳುತ್ತಾ..” ವಿಜಾಪುರದ ಆದಿಲ್ ಶಾಹಿ ಮನೆತನವು ಕ್ರಿ. ಶ.೧೬೮೬ ರಲ್ಲಿ ಔರಂಗಜೇಬನ ದಾಳಿಗೆ ತುತ್ತಾಗಿ ಅವನತಿ ಹೊಂದಿತು ಇವರ ಕೆಳಗೆ ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುತಿದ್ದ ಕೆಲವು ಹಿಂದೂ ಮನೆತನಗಳು ದಕ್ಷಿಣಕ್ಕೆ ವಲಸೆ ಬಂದವು.ಹೀಗೆ ಬಂದವರಲ್ಲಿ ಉದ್ಬಾಳ ನಾಡಗೌಡ ಮನೆತನವೂ ಒಂದು” ಎಂದು ಹೇಳುವ ಲೇಖಕರು ಈ ಮನೆತನದ ಸಮಗ್ರ ಚರಿತ್ರೆಯನ್ನು ಇಲ್ಲಿ ದಾಖಲಿಸಿದ್ದಾರೆ. ಅದೇ ರೀತಿ ಬೆಳ್ಳಿಗನೂರು,ಪೊತ್ನಾಳ,
ಪಾಮನಕಲ್ಲೂರು,ಜಾಲವಾಡಗಿ,
ಜೀನೂರು,ಮೆದಿಕಿನಾಳು ಹಾಗು ಜವಳಗೇರ ನಾಡಗೌಡ ಮನೆತನ ಬಗ್ಗೆ ಇಲ್ಲಿ ಮಾಹಿತಿಯನ್ನು ಒದಗಿಸಲಾಗಿದೆ.
ಒಟ್ಟಾರೆ ಡಾ.ಬಿ.ವಿ.ಶಿರೂರ ಅವರು ಹೇಳುವಂತೆರಾಯಚೂರಿನಂತ ನಿರ್ವಾತ ಪ್ರದೇಶದಲ್ಲಿ ಇದ್ದುಕೊಂಡು ಶಾಸನ,ಸಂಶೋಧನನೆಗಳಂತ ಕಲ್ಲು ಮುಳ್ಳಿನ ಹಾದಿಯಲ್ಲಿ ಕ್ರಮಿಸುತ್ತಿರುವ ಡಾ.ಚನ್ನಬಸವಯ್ಯ ಅವರನ್ನು ಅಭಿನಂದಿಸಿದ್ದಾರೆ.ಅಷ್ಟೇ ನಮ್ರತೆಯಿಂದ ಲೇಖಕರು ಕೂಡ ” ಇಲ್ಲಿ ಮಂಡಿತವಾದ ಅಭಿಪ್ರಾಯಗಳೇ ಅಂತಿಮವೆಂಬ ದಾಷ್ಠತೆ ನನಗಿಲ್ಲ.ಸಹೃದಯ ವಿದ್ವಾಂಸರು ನೀಡುವ ಆಧಾರ ಸಹಿತವಾದ ಪರ್ಯಾಯ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇನೆ” ಎಂದಿದ್ದಾರೆ.

ಶ್ರೀಶೈಲ ಜಾಲಿಹಾಳ ದಾವಣಗೇರಿ

 

Don`t copy text!