ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಆಗ್ರಹಿಸಿ ಕೆಡಿಪಿ ಸಭೆಗೆ ಮುತ್ತಿಗೆ

ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಆಗ್ರಹಿಸಿ ಕೆಡಿಪಿ ಸಭೆಗೆ ಮುತ್ತಿಗೆ

e-ಸುದ್ದಿ ಮಸ್ಕಿ

ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಆಗ್ರಹಿಸಿ ಗ್ರಾಮಸ್ಥರ ಹೋರಾಟ ಸಮಿತಿ ಎಸ್ಎಫ್ಐ ಹಾಗೂ ವಿವಿಧ ಪ್ರಗತಿಪರ ಕನ್ನಡಪರ ದಲಿತಪರ ರೈತಪರ ಸಂಘಸಂಸ್ಥೆಗಳ ನೇತೃತ್ವದಲ್ಲಿ ಮಸ್ಕಿಯ ತಾಲೂಕು ಪಂಚಾಯ್ತಿಯಲ್ಲಿ ನಡೆದ ಕೆಡಿಪಿ ಸಭೆಗೆ ಮಕ್ಕಳ ಸಮೇತ ಮುತ್ತಿಗೆ ಹಾಕಲಾಯಿತು.

ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗಾಗಿ ಸುಮಾರು 4 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಶಿಕ್ಷಣ ಇಲಾಖೆ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಾ ಬಂದಿದ್ದಾರೆ.  ಪ್ರೌಢ ಶಾಲೆ ಮಂಜೂರಾಗದಂತೆ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಈಗಾಗಲೇ ನಿರ್ಮಿಸಿರುವ ಪ್ರೌಢಶಾಲಾ ಕಟ್ಟಡ ಪಾಳು ಬಿದ್ಧು ಕಿಡಿಗೇಡಿಗಳಿಂದ ಹಾನಿಗೀಡಾಗಿದ್ದು, ಕಟ್ಟಡಕ್ಕೆ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಕೆಡಿಪಿ ಸಭೆ ಅರ್ಧದಲ್ಲೇ ಮೊಟಕುಗೊಳಿಸಿ ಬಂದು ವಿದ್ಯಾರ್ಥಿಗಳು. ಗ್ರಾಮಸ್ಥರು ಸಂಘಸಂಸ್ಥೆಗಳ ಮುಖಂಡರನ್ನುದ್ದೇಶಿಸಿ ಮಾತನಾಡಿದ ಶಾಸಕ ಬಸನಗೌಡ ತುರ್ವಿಹಾಳ ಅವರು ಪ್ರತಿಭಟನೆಯನ್ನು ತಿಳಿಗೊಳಿಸಲು ಯತ್ನಿಸಿದರು.ಶಾಸಕರು, ಪ್ರತಿಭಟನಾಕಾರರು ಹಾಗೂ ಬಿಇಓ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಸಕರು ಬಿಇಓ ಅವರಿಗೆ ಸಮಸ್ಯೆ ಇತ್ಯರ್ಥಗೊಳಿಸುತ್ತೆವೆಂದು ಲಿಖಿತವಾಗಿ ಬರೆದುಕೊಡಲು ಸೂಚಿಸಿದರು.

ಬಿಇಓ ಹುಂಬಣ್ಣ ರಾಥೋಡ್ ಅವರು 2022-23 ನೇ ಶೈಕ್ಷಣಿಕ ವರ್ಷದಲ್ಲಿ 9 ನೇ ತರಗತಿ ಪ್ರಾರಂಭಗೊಳಿಸಲಾಗುವುದು. ಸೋಮವಾರದಿಂದಲೇ ಹೊಸ ಕಟ್ಟಡದಲ್ಲಿ 8 ನೇ ತರಗತಿ ಪ್ರಾರಂಭಿಸಲಾಗುವುದು ಎಂದು ಲಿಖಿತವಾಗಿ ಬರೆದುಕೊಟ್ಟ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.

ಈ ಸಂದರ್ಭದಲ್ಲಿ ಬುದ್ದಿನ್ನಿ ಎಸ್ ಗ್ರಾಮದ ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ, ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ. ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಕಾರ್ಮಿಕ ಮುಖಂಡ ಡಿ.ಹೆಚ್ ಕಂಬಳಿ, ಎನ್ನಾರ್ಬಿಸಿ 5ಎ ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಜಪ್ಪಗೌಡ ಹರ್ವಾಪೂರು, ಎಐಕೆಎಸ್ ನ ಚಂದ್ರಶೇಖರ್ ಕ್ಯಾತನಟ್ಟಿ, ಕೆಆರ್ ಎಸ್ ನ ಸಂತೋಷ ದಿನ್ನಿ, ಕಾರ್ಮಿಕ ಮುಖಂಡ ಬಸವರಾಜ್ ಎಕ್ಕಿ, ಎಸ್ಎಫ್ಐನ ಮಸ್ಕಿ ತಾಲೂಕಾಧ್ಯಕ್ಷ ಬಸವಂತ ಹಿರೇಕಡಬೂರ್, ಬಸವರಾಜ್ ದೀನ ಸಮುದ್ರ, ಶರಣಬಸವ, ಅಂಕುಶದೊಡ್ಡಿ ಗ್ರಾಪಂ ಅಧ್ಯಕ್ಷೆ ಚೆನ್ನಬಸಮ್ಮ ಭಜಂತ್ರಿ, ಸದಸ್ಯರಾದ ಗುರುರಾಜ್ ದೇಸಾಯಿ, ಇಲಾಲ್ ಪೂರು ಗ್ರಾಪಂ ಸದಸ್ಯ ಸಿದ್ದಪ್ಪ ಕುರುಬರ, ಎಸ್ಡಿಎಂಸಿ ಸದಸ್ಯರಾದ ಮೌನೇಶ ದೇವರಮನಿ, ಪಕೀರ್ ಸಾಬ್ ಪಿಂಜಾರ್, ರಮೇಶ ಭಜಂತ್ರಿ ಸೇರಿದಂತೆ ಬುದ್ದಿನ್ನಿ, ಹೂವಿನಬಾವಿ, ಬೆಂಚಮರಡಿ, ಮುದಬಾಳ, ಇಲಾಲ್ ಪುರ್ ಹರ್ವಾಪೂರು, ತುಪ್ಪದೂರ, ಸಾನಬಾಳ, ಕಾಟಗಲ್ ಗ್ರಾಮಸ್ಥರು ಇದ್ದರು.

Don`t copy text!