ಕ್ರಾಂತಿಗ೦ಗೋತ್ರಿ ಶ್ರೀ ಅಕ್ಕನಾಗಲಾಂಬಿಕೆ

ಕ್ರಾಂತಿಗ೦ಗೋತ್ರಿ ಶ್ರೀ ಅಕ್ಕನಾಗಲಾಂಬಿಕೆ

ಮಹಾನುಭಾವ ಅಣ್ಣ ಶ್ರೀ ಬಸವಣ್ಣನವರು ಈಗಿನ ಪಾರ್ಲಿಮೆಂಟಿನ೦ತಿದ್ದ ಅನುಭವ ಮಂಟಪವನ್ನು ಸ್ಥಾಪಿಸಿ ಅದರ ಮೂಲಕ ಹರಿಸಿದ ವಿಚಾರಧರೆಗಳು ಬಹಳ ಪ್ರಗತಿಪರವಾಗಿದ್ದವು. ಅವು ಎಷ್ಟರಮಟ್ಟಿಗೆ ಪ್ರಗತಿಪರವಾಗಿದ್ದವೆಂದರೆ ಸುಮಾರು ೮೦೦ ವರ್ಷಗಳಷ್ಟು ಮುಂದಿದ್ದವು. ಇಂದಿನ ಇಪ್ಪತ್ತೊಂದನೇ ಶತಮಾನದಲ್ಲೂ ಕರ‍್ಯರೂಪಕ್ಕೆ ತರಲು ಅಸಾಧ್ಯವಾದ ಆಚಾರ ವಿಚಾರಗಳನ್ನು ಅಣ್ಣನವರು ತಮ್ಮ ಹನ್ನೆರಡನೆ ಶತಮಾನದಲ್ಲಿಯೇ ಕರ‍್ಯಾನ್ವಯಗೊಳಿಸಿದರು.

೧೨ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಮಹಿಳೆರಿಗೂ ಸಮಾನ ಸ್ಥಾನಮಾನವನ್ನು ನೀಡಿದ್ದರು. ಅಂತಹ ಮಹಾನ್ ಶಿವಶರಣೆಯರಲ್ಲಿ ವೀರಮಾತೆ ಅಕ್ಕನಾಗಲಾಂಬಿಕೆಯೂ ಒಬ್ಬರಾಗಿದ್ದರು.

ಬಾಗೇವಾಡಿಯ ಮಾದರಸ, ಮಾದಲಾಂಬಿಕೆಯರ ಚೊಚ್ಚಿಲ ಮಗಳು ಅಕ್ಕನಾಗಲಾಂಬಿಕೆ. ಅಣ್ಣ ಬಸವಣ್ಣವನರ ಅಕ್ಕ್ಕನಾದ ಅಕ್ಕನಾಗಲಾಂಬಿಕೆ ಬಸವಣ್ಣನವರಿಗೆ ಚಿಕ್ಕಂದಿನಿದ ಕೊನೆಯವರೆಗೂ ಅವರ ಎಲ್ಲ ಕ್ರಾಂತಿಕಾರಿ ವಿಚಾರಗಳ ನೀಲನಕ್ಷೆಗೆ ಪ್ರೋತಾಹಿಸಿ ಬೆಂಬಲವಾಗಿ ನಿಂತು, ಕಲ್ಯಾಣಕ್ರಾಂತಿಯ ನಂತರವೂ ಧೀರ ದಿಟ್ಟ ನಿಲುವಿನಿಂದ ಶರಣರ ಪ್ರಾಣ ಸ್ವರೂಪಿ ವಚನ ಸಂಪತ್ತನ್ನು ಉಳಿಸುವುದಕ್ಕಾಗಿ ಕಡೆತನಕ ಹೋರಾಡಿದ ವೀರ ಮಾತೆ ಅಕ್ಕನಾಗಮ್ಮ.

ಕಲ್ಯಾಣದ ಎಲ್ಲ ಶರಣ ಶರಣೆಯರು ಅನುಭವ ಮಂಟಪದಲ್ಲಿ ಒಟ್ಟುಗೂಡಿ ತಮ್ಮ ಅನುಭವ ಅನುಭಾವಗಳನ್ನು ಚರ್ಚಿಸಿ ಕೇಳಿ ತಿಳಿದು ಅನುಭವಿಸಿದ ಅನುಭಾವದ ಚಿಂತನೆಗಳನ್ನು ಬರೆದಿಡುತ್ತಿದ್ದರು. ಆದ್ಯರ ವಚನ ಪರುಷ ಕಂಡಯ್ಯ ಎಂಬ೦ತೆ ಅವುಗಳನ್ನು ಸಂಗ್ರಹಿಸಿ ಇಡುವ ವ್ಯವಸ್ಥೆಯನ್ನು ಅವರು ಮಾಡಿಕೊಂಡಿದ್ದರು. ಈ ಎಲ್ಲರ ಶರಣರ ಪ್ರಸಾದದ ವ್ಯವಸ್ಥೆಯನ್ನು ಅಕ್ಕನಾಗಮ್ಮನವರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.
ಎನ್ನ ಭವದ ಬೇರು ಹರಿದಿತ್ತಯ್ಯಾ

ಸಂಗನ ಬಸವಣ್ಣನ ಕಂಡೆನಾಗಿ

ಎನ್ನ ಮನದ ಶಪದ ಹಿಂಗಿತಯ್ಯಾ

ಚನ್ನಬಸವಣ್ಣನ ಪಡೆದೆನಾಗಿ

ಎನ್ನ ಅಂತರ೦ಗದ ಸಂದು ಸಂಶಯ

ತೊಲಗಿತ್ತೆಂದು ಬಸವಣ್ಣಪ್ರಿಯ ಚನ್ನಸಂಗಯ್ಯನಲ್ಲಿಎನ್ನ ಪರಮಗುರು

ಅಲ್ಲಮ ಪ್ರಭುದೇವರ ಶ್ರೀ ಚರಣವ ಕಂಡೆನಾಗಿ ಎನ್ನುತ್ತ

ಅಕ್ಕನಾಗಲಾಂಬಿಕೆಗೆ ಬಸವಣ್ಣ ತಂದೆಯೂ ಆಗಿದ್ದ, ಮಗನೂ ಆಗಿದ್ದ, ಧರ್ಮದ ನೇತಾರನೂ ಆಗಿದ್ದು ಆಕೆಗೆ ಗುರು ಸ್ಥಾನದಲ್ಲಿದ್ದಾನೆ. ಗುರು ಬೇರೆಯಲ್ಲ, ತಂದೆ ಬೇರೆಯಲ್ಲ, ಒಂದು ರೀತಿಯಲ್ಲಿ ತಂದೆಗಿ೦ತಲೂ ಗುರುವೂ ಅಧೀಕ. ಏಕೆಂದರೆ ತಂದೆ ಗುರುವನ್ನು ಮಾತ್ರ ತೋರಿಸುತ್ತಾನೆ. ಆದರೆ ಗುರುವು ಭವ ಬಂಧನವನ್ನು ಕಳೆದುಕೊಳ್ಳುವ ದಾರಿಯನ್ನೇ ತೋರಿಸುತ್ತಾನೆ. ಪಂಚಸದೃಶ್ಯ, ಪಂಚ ಸೂತಕಗಳನ್ನು ಕಳೆದುಕೊಂಡು ತಾನು ಬಸವಣ್ಣನೆಂಬ ಗುರುವಿನಿಂದ ಪರಿಶುದ್ಳಳಾಗಿದ್ದೇನೆ… ಎನ್ನುತ್ತಾರೆ ಅಕ್ಕನಾಗಮ್ಮ.

ಎನ್ನ ಕುಲಸೂತಕವ ಕಳೆದಾತ ಬಸವಣ್ಣ

ಎನ್ನ ಫಲ ಸೂತಕವ ಕಳೆದಾತ ಬಸವಣ್ಣ

ಎನ್ನ ತನು ಸೂತಕವ ಕಳೆದಾತ ಬಸವಣ್ಣ

ಎನ್ನ ನೆನಪು ಸೂತಕವ ಕಳೆದಾತ ಬಸವಣ್ಣ

ಎನ್ನ ಭಾವ ಸೂತಕವ ಕಳೆದಾತ ಬಸವಣ್ಣ

ಎನ್ನ ಕುರುಹು ಮರೆತಿಹ ಸಂದು ಸಂಶಯವ ಬಿಡಿಸಿದಾತ ಬಸವಣ್ಣ

ನಿಜದ ನಿರಮಯ ಬಾಗಿಲ ನಿಜವ ತೋರಿದಾತ ಬಸವಣ್ಣ

ಬಸವಣ್ಣಪರಿಯ ಚನ್ನಸಂಗನ ಹೃದಯದಲ್ಲಿ

ನಿಜನಿವಾಸಿಯಾಗಿ ಇರಿಸಿದ ಎನ್ನ ತಂದೆ ಸಂಗನ ಬಸವಣ್ಣ

ಅದರಂತೆ ಸಮಾಜ ಜೀವಿಗಳಿಗೂ ಮೌಲಿಕ ತತ್ವ ಆಧಾರಿತ ಕೆಲ ವಚನಗಳನ್ನು ಅಕ್ಕನಾಗಮ್ಮ ಬರೆದಿರುವರು. ಅದರಲ್ಲಿ ಒಂದು ವಚನ,

ಮನದೊಡೆಯ ಮಹಾದೇವ

ಮನವ ನೋಡಿಹೆನೆಂದು

ಮನುಜರ ಕೈಯಿಂದ ಒಂದೊ೦ದು ನುಡಿಸುವನು

ಇದಕೆ ಕಳವಳಿಸದಿರು ಮನವೆ

ಕಾತರಿಸದಿರು ತನುವೇ

ನಿಜವ ಮರೆಯದಿರು ಕಂಡಾ ನಿಶ್ವಿಂತವಾಗಿರು ಮನವೆ

ಬಸವಣ್ಣಪ್ರಿಯ ಚನ್ನಸಂಗನಯ್ಯನು

ಬೆಟ್ಟದಿನಿತಪರಾಧವನು ಒಂದು ಬೆಟ್ಟಿನಲಿ ತೊಡೆವನು.

ಎಂದು ಬರೆಯುತ್ತಾರೆ.

ನಮ್ಮ ಮನಸ್ಸನ್ನು ಪರೀಕ್ಷಿಸಲೆಂದು ಮಹಾದೇವ ಮನುಷ್ಯರಿಂದ ತರತರದ ಮಾತುಗಳನ್ನು ಆಡಿಸುವನು. ಯಾರು ಏನೇ ಅಡಿದರೂ ನಾವು ಬೇಸರಮಾಡಿಕೊಳ್ಳದೇ ನಮ್ಮ ಕಾಯಕವನ್ನು ಮಾಡುತ್ತಿರಬೇಕು. ಯಾವುದಕ್ಕೂ ಚಿಂತಿಸಬಾರದು. ದೇವನೊಬ್ಬನೇ ನಮಗೆ ನಿಜವಾದ ಸಂಗಾತಿ. ಕೊನೆಯಲ್ಲಿ ನಾವು ಸಾಧನೆಯ ಮುಖಾಂತರವೇ ಅವನಲ್ಲಿ ಕೂಡಬೇಕು ಎಂಬ ಸತ್ಯವನ್ನು ಹೇಳುತ್ತ ದೇವರ ಧ್ಯಾನದಲ್ಲಿ ನೀನು ನಿಶ್ಚಿಂತನಾಗರು ಎಂದಿದ್ದಾರೆ.

ದೇವರಿಗೆ ನಾವು ಪ್ರೀತಿ ಪಾತ್ರರಾಗಬೇಕಾದರೆ ವಿಷಯಾದಿ ವಿಷಯಗಳನ್ನು ತ್ಯಜಿಸಿ, ಅವಗುಣಗಳನ್ನು ತ್ಯಜಿಸಿ, ಸದ್ಗುಣ ಸಂಪನ್ನರಾಗಿ, ಸದಾಚಾರಿಗಳಾದಾಗ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. ಹೀಗೆ ನಮ್ಮ ನಡೆ ಇದ್ದಾಗ ನಮ್ಮಿಂದ ತಿಳಿಯದೇ ಆದ ತಪ್ಪುಗಳನ್ನು ಕ್ಷಮಿಸಿ ನಮ್ಮನ್ನು ಆ ದೇವನು ಎತ್ತಿಕೊಳ್ಳುವನು ಎಂಬ ಸಂದೇಶವನ್ನು ಈ ವಚನದಲ್ಲಿ ಅಕ್ಕನಾಗಮ್ಮನವರು ಸುಂದರ ಸರಳವಾಗಿ ತಿಳಿಹೇಳಿದ್ದಾರೆ.

ಅಕ್ಕನಾಗಮ್ಮ ತನ್ನ ತಮ್ಮ ಬಸವಣ್ಣನವರ ಬೆಂಗಾವಲಾಗಿ ಕೊನೆಯವರೆಗೂ ಆತನ ಸುಖ ದುಃಖ, ಆತನ ಶ್ರೇಯಸ್ಸುಗಳೇ ತನ್ನವೆಂದು ತಿಳಿದು ಬಾಗೇವಾಡಿ, ಮಂಗಳವೇಡಿ, ಕಲ್ಯಾಣದವರೆಗೂ ಒಂದು ದಿನವೂ ಅಗಲದೇ ಜೊತೆಗೆ ಇದ್ದರು.

ಆದರೆ ಕಲ್ಯಾಣ ಕ್ರಾಂತಿ ಮಾತ್ರ ಅಚ್ಚುಕಟ್ಟಾಗಿ ಮಾಡಿದ ಎಲ್ಲ ಕೆಲಸವನ್ನೂ ಚೆಲ್ಲಾಪಿಲ್ಲಿಯಾಗಿಸಿತು. ಅದೇನೇ ಇರಲಿ ಗುರು ಸ್ವರೂಪ, ತಂದೆ ಸ್ವರೂಪ, ಶಿಷ್ಯಸ್ವರೂಪನಾದ ತಮ್ಮನ ಅಗಲುವಿಕೆಗೆ ಅಕ್ಕನಾಗಮ್ಮ ಎದೆಗುಂದಲಿಲ್ಲ! ದೃತಿಗೆಡಲೂ ಇಲ್ಲ! ಪ್ರೀತಿಯ ಗಂಗಾಬಿಕೆ ಕಾದರವಳ್ಳಿಯ ಹತ್ತಿರ ಕಾದಾಡುತ್ತ ಮಡಿದರೂ ಕಣ್ಣೀರು ಹಾಕಿದವಳಲ್ಲ. ಅಷ್ಟೇ ಏಕೆ? ತನ್ನ ಕರುಳಕುಡಿ ಚನ್ನಬಸವಣ್ಣ ಶ್ರೀ ಕ್ಷೇತ್ರ ಉಳುವಿಯಲ್ಲಿ ದೇಹ ಬಿಟ್ಟಾಗಲೂ ನಿಟ್ಟುಸಿರುಗರೆದವಳಲ್ಲಾ!!.

ಇಷ್ಟೆಲ್ಲಾ ನೋಡಿದಾಗ ಕಲ್ಯಾಣದ ಶಿವಶರಣರ ಅಂತಿಮ ದಿನಗಳಲ್ಲಿ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದರೇನೋ ಎಂದೆನಿಸುತ್ತದೆ. ಅವರೆದುರು ಪೂರೈಸಬೇಕಾದ ಕರ್ತವ್ಯ ಬಿಟ್ಟರೆ ಬೇರೇ ದಾರಿಯೇ ಇರಲಿಲ್ಲ ಎನಿಸುತ್ತದೆ. ವಚನ ಸಾಹಿತ್ಯದ ರಕ್ಷಣೆಗೋಸ್ಕರ ಬಿಜ್ಜಳನ ಸೈನ್ಯದೊಂದಿಗೆ ಯುದ್ಧಕ್ಕೆ ಇಳಿದುದಾಗಿದೆ ಎಂದ ಮೇಲೆ ವಚನ ಸಾಹಿತ್ಯದ ರಕ್ಷಣೆ ಆಗಲೇಬೇಕೆಂದು ಶೂರತನದಿಂದ ಕೊನೆತನಕ ಹೋರಾಡುತ್ತಾ ಕೊನೆಯಲ್ಲಿ ಉಳವಿಯಲ್ಲಿ ಒಟ್ಟುಗೂಡಿದ ವಚನಗಳ ಪ್ರತಿಯ ಕಟ್ಟುಗಳನ್ನು ಅದೇ ಸ್ಥಳದಲ್ಲಿ ಅಡಗಿಸಿಟ್ಟರೆ ಅವು ಅಲ್ಲಿಯೇ ನಾಶವಾಗಬಹುದೆಂದು ಪುನರ್ ಪ್ರತಿ ಮಾಡಕೊಳ್ಳುವವರಿಗೆ ಇವುಗಳನ್ನು ತಲುಪಿಸಬೇಕೆಂದು ಕರ‍್ಯವನ್ನು ಬಹಳ ಶ್ರಮದಿಂದ ಮಾಡಿದವರು ಅಕ್ಕನಾಗಮ್ಮನವರು, ನೂಲಿಯ ಚಂದಯ್ಯ ಮೊದಲಾದ ಕೆಲವು ಶಿವಶರಣರು.

ಇನ್ನು ವಚನ ಸಾಹಿತ್ಯಕ್ಕೆ ನಾಶವಿಲ್ಲವೆಂಬ ಖಾತ್ರಿ ತನಗೆ ಆದ ಬಳಿಕವೇ ಅಕ್ಕನಾಗಮ್ಮನವರು ಇಂದಿನ ಚಿಕ್ಕ ಮಂಗಳೂರು ಜಿಲ್ಹೆಯ ಎಣೆಹೊಳೆ ಸಮೀಪದಲ್ಲಿ ತಮ್ಮ ಅರವತ್ತನೇ ವಯಸ್ಸಿನಲ್ಲಿ ಸಮಾಧಿ ಹೊಂದಿದರು. ಅವಿರತ ಯೋಗ ಸಾಧನೆಯಿಂದ ಲಿಂಗಾನುಸ೦ಧಾನದಿಂದ ನಮ್ಮ ಬಹಳಷ್ಟು ಶರಣರು ಇಚ್ಛಾಮರಣಿಗಳಾಗಿದ್ದರು !!

ಅಕ್ಕನಾಗಮ್ಮನವರಂತೂ ಚಿಕ್ಕಂದಿನಿದ ಲೇ ರೇಮಾ ಸಿದ್ದೇಶ್ವರರಿಂದ ಶಿವದೀಕ್ಷೆ ಪಡೆದು ಯೋಗಾಂಗ ಸಿದ್ದಿಯನ್ನು ಕರಗತ ಮಾಡಿಕೊಂಡಿದ್ದವರು.

ನಿಜವಾಗಿಯೂ ಅಕ್ಕನಾಗಮ್ಮನವರಂತಹ ಘನ ಗಂಭೀರೇ, ಲಿಂಗಧೀರೇ, ಶೂರೇ, ಕರ್ತವ್ಯಕಂದರೆ ಮತ್ತೊಬ್ಬರು ಹುಟ್ಟಲಿಲ್ಲ, ಹುಟ್ಟುವುದೂ ಇಲ್ಲವೆಂದರೆ ಆಶ್ಚರ್ಯವೇನಿಲ್ಲ.

 

ಶ್ರೀಮತಿ ಗಿರಿಜಾ ವಿ. ಮುಳುಗುಂದ
ಅಧ್ಯಕ್ಷರು, ಬಸವ ಅನ ಬಳಗ, ಬೆಳಗಾವಿ.

Don`t copy text!