ಉರಿಯುಂಡ ಒಡಲು- ವಿದ್ಯೆಯಂಬ ತುಪ್ಪ ಸುರಿ

ಪುಸ್ತಕ ಪರಿಚಯ,   ಉರಿಯುಂಡ ಒಡಲು, ಕವನ ಸಂಕಲನ

ಕವಿ -.ಡಾ ಶಶಿಕಾಂತ ಕಾಡ್ಲೂರ್

ಪ್ರೊ ಸೂಗಯ್ಯ ಹಿರೇಮಠರು “ಅಂತರಂಗದ ಮೃದಂಗ” ಎಂಬ ವಿವರಣಾತ್ಮಕ ಮತ್ತು ಚೆಂದದ ಮುನ್ನಡಿಯನ್ನು ಹೊಂದಿರುವ ಮತ್ತು ಖ್ಯಾತ ಗಜಲ್ ಕವಿ ಅಲ್ಲಾ ಗಿರಿರಾಜ ಅವರ ಬೆನ್ನುಡಿ ಹೊಂದಿರುವ “ಉರಿಯುಂಡ ಒಡಲು” ಅನೇಕ ದಳ್ಳುರಿಯಲ್ಲಿ ಬೆಂದು ಬರೆದ ಕವಿತೆಗಳನ್ನೊಳಗೊಂಡಿದೆ.
ಒಡಲಿನ ಉರಿ ಆರಲು ಇಂಗಬೇಕು ಹಸಿವು,
ಆದರೆ
ಬಡತನ ಎಂಬ ಜ್ವಾಲೆ ಒಡಲನ್ನು ಸುಡುತ್ತದೆ. ಅಂತಹ ವಿಷಮ ಸ್ಥಿತಿಯಲ್ಲಿಯೇ ಒಡಲ ಉರಿಗೆ ವಿದ್ಯೆಯೆಂಬ ತುಪ್ಪ ಸುರಿದುಕೊಂಡು ಅದನ್ನೇ ಬೆಳಕಾಗಿಸಿಕೊಂಡು ಸುಮಾರ್ಗದಲ್ಲಿ ನಡೆದು ಈ ದಿನ ಮತ್ತೊಬ್ಬರ ಒಡಲ ಉರಿಯನ್ನು ತಂಪಾಗಿಸುವಷ್ಟರ ಮಟ್ಟಿಗೆ ಬೆಳೆದು ನಿಂತವರು…… ನೆಚ್ಚಿನ, ಸಜ್ಜನ, ಸರಳತೆಯ ವಾಮನ ಮೂರ್ತಿ ಡಾ ಶಶಿಕಾಂತ ಕಾಡ್ಲೂರವರು.
ಬಸವ ತತ್ವದನುಯಾಯಿ…..
ನಿಜ ಶರಣ ತತ್ವ ಪರಿಪಾಲಕರು…..
ಮಾತಿಗೆ ನಿಂತರೆ ಆಸೀನರಾದವರನ್ನು ಮಂತ್ರಮುಗ್ಧರನ್ನಾಗಿಸುವ ಕುಶಲಕರ್ಮಿಗಳು. ಅವರ ಪ್ರಥಮ ಕವನ ಸಂಕಲನ “ಉರಿಯುಂಡ ಒಡಲು” ಎಲ್ಲರ ಅಂತರಾಗ್ನಿಯನ್ನು ಬಡಿದೆಬ್ಬಿಸಿ ಹೊತ್ತಿಸುವಂತದ್ದಾಗಿದೆ. ಸಾಮಾಜಿಕ ಕಳಕಳಿ ಉಳ್ಳ ಕವಿತಾ ಸಂಕಲನ,


ಸ್ತ್ರೀ ಶೋಷಣೆಯನ್ನೂ ಧಿಕ್ಕರಿಸವಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ಕೊನೆಯಲ್ಲಿ ಓದುಗನಿಗೆ ಅನ್ನಿಸದೇ ಇರಲಾರದು. ಹೆಸರಿಗೆ ತಕ್ಕಂತೆ ಅನೇಕ ಕವಿತೆಗಳು ನೊಂದು ಬೆಂದ ಭಾವದಿಂದ ಹುಟ್ಟಿವೆಯಾದರೂ, ಬೇಸರವನ್ನು ವ್ಯಕ್ತಪಡಿಸುತ್ತವೆಯಾದರೂ, ನಿಂದನೆಯಿಂದ ಹೊರತಾಗಿಯೂ, ಆರೋಪದಿಂದ ಹೊರತಾಗಿಯೂ ಸಾಮಾಜಿಕ ಕಳಕಳಿ, ಹಾದಿ ತಪ್ಪುತ್ತಿರುವ ಯುವ ಸಮುದಾಯದ ಬಗೆಗೆ ದುಗುಡತೆ, ಬದಲಾಗಬೇಕಿದೆ ನಾವು ಎಂಬ ಭಾವ, ರೈತರ ಬಗೆಗಿನ ಅನುಕಂಪ..ಹೀಗೆ ಒಂದೊಂದು ಕವಿತೆಗಳೂ ಒಂದೊಂದು ಹೊಸ ಅನುಭವವನ್ನು ಓದುಗನಿಗೆ ನೀಡುತ್ತವೆ.
ಹದಿಹರೆಯದ ವಯಸ್ಸಿನಲ್ಲಿಯೇ ಚಿಗುರೊಡೆದ ಸಾಹಿತ್ಯಾಸಕ್ತಿಗೆ ಸಾಕ್ಷಿಯಾಗಿ ಹಲವಾರು ಕವನಗಳು ಪ್ರಸ್ತತ ಪರಿಸ್ಥಿತಿಗೂ ಅನ್ವಯವಾಗುವಂತಹವುಗಳಾಗಿ ಸಂಕಲನದಲ್ಲಿ ಕಾಣಸಿಗುತ್ತವೆ.
ಒಂದೊಂದು ಕವಿತೆಗಳೂ ವಿಭಿನ್ನವಾಗಿದ್ದು ಮತ್ತು ಬಳಸಿದ ಪದಗಳು ಕೇವಲ ಪದಗಳಲ್ಲವೆನಿಸುತ್ತಿದೆ. ನೊಂದ, ಕಷ್ಟ ಉಂಡ ಒಡಲ ಉರಿಯಿಂದ ಹುಟ್ಟಿದ ಕಿಡಿಗಳಾಗಿವೆ. ಅದಕ್ಕೆ ತಕ್ಕನಾದ ಶೀರ್ಷಿಕೆ ಪುಸ್ತಕದ ಬೆಲೆಯನ್ನು, ತೂಕವನ್ನು ಹೆಚ್ಚಿಸಿದೆ.

ಈ ಹೊತ್ತಿಗೆಯಲ್ಲಿನ ಅನೇಕ ಕವಿತೆಗಳು, ಅನುಸಂಧಾನ ಮಾಡುವುದಕ್ಕೂ ಬಿಡದೆ…… ಭಾವುಕತೆ ಹುಟ್ಟು ಹಾಕಿ… ಮೈ ಮರೆತು ಕೂಡುವಂತೆ ಮಾಡುತ್ತವೆ ಅದಕ್ಕೆ ತಕ್ಕ ಉದಾಹರಣೆಯ ಕವಿತೆಗಳೆಂದರೆ “ಮೂರು ಬಣ್ಣದ ಹಕ್ಕಿ”, “ಹೃದಯ”, “ಆಸೆ” ಮುಂತಾದವು…..
ಧರ್ಮಸೂಕ್ಷ್ಮದಲ್ಲಿ ಸಹಿಷ್ಣುತೆಯೂ ಇದೆ, ಯುದ್ಧಸಾರಿ ರಕ್ತ ಕುಡಿಯುವ ಅನಿವಾರ್ಯತೆಯೂ ಇದೆ. ಅದನ್ನು ಮನಗಂಡು ಕವಿಗಳು ಈ ರೀತಿ ಬರೆದಿದ್ದಾರೆ.
ಪಾಂಚಾಲಿಯ ಪಂಚ ಗಂಡರು,
ಅವಳ ವಸ್ತ್ರವನು ಸೆಳೆಯುವಾಗ
ಮೈಯಲ್ಲಿ ಕ್ರೋಧಾಗ್ನಿ ಉರಿದರೂ
ಕೈಕಟ್ಟಿ ಧರ್ಮ, ಧರ್ಮನ ಮಾತಿಗೆ ಬದ್ಧರಾಗಿ ಇದ್ದುದು; ಬಲು ಖೇದವೂ ಹೌದು; ಅಂತೆಯೇ ಹಿರಿಯಣ್ಣನ ಮಾತಿಗೆ ನೀಡಿದ ಗೌರವವೂ ಹೌದು, ಎಂಬಂತೆ ಪಾಂಚಾಲಿಯ ಪುರುಷರ ಬಗೆಗೆ ಉತ್ತಮವಾದ ಕವಿತೆ ಮೂಡಿಬಂದಿದೆ.
ಪ್ರಕೃತಿ ಸೌಂದರ್ಯದ ಸವಿಯನ್ನು ಅನುಭವಿಸಬೇಕು. ಅದನ್ನು ವಿಕೃತವಾಗಿ ಹಾಳುಗೆಡವಬಾರದು. ಹೂವಿನ ಮಕರಂದದ ಸವಿ, ಮತ್ತು ಅದರ ಬೆಲೆ ದುಂಬಿಗೇ ಗೊತ್ತು, ಹೂ ಹೃದಯಕೆ ಘಾಸಿ ಮಾಡದೆ ಹೀರಿಕೊಂಡು ಆಹ್ಲಾದತೆಯಲಿ ತೇಲುವ ದುಂಬಿಗಳು ನಾವಾಗ ಬೇಕೇ ಹೊರತು, ಹಿಸುಕಿ ರಸ ಹೀರಬಾರದೆಂಬುದನ್ನು ಕಾವ್ಯಾತ್ಮಕವಾಗಿ ಮೂಡಿಸಿದ ಕವಿಯ ಮನ, ಹೂವೂ ಹೌದು, ದುಂಬಿಯೂ ಹೌದು.
ಭಾರತಮ್ಮನ ಆಕ್ರಂದನವನ್ನು ನೆನದು, ನೋವಿನಿಂದ ಹುಟ್ಟಿದ ಕವನವೆನಿಸುತ್ತದೆ “ಭಾರತೀಯ ಬಾ(ಗೋ)ಳು”, ಭಾರತಮ್ಮನ ಬಾಳಿನ ಗೋಳನ್ನು ಆಲಿಸದ ಕಿವಿಗಳು ಕಿವುಡಾದರೇ ಒಳಿತು, ನೋಡದ ಕಣ್ಣುಗಳು ಕುರುಡೇ ಸರಿ.. ಆಹುತಿಯಾದ ನಮ್ಮ ಬಾವುಟದ ಕಿಡಿಯಾದರೂ ತಾಕಿ ಎಚ್ಚರಗೊಳ್ಳಬೇಕಿದೆ ನಿಶ್ಚಲ ಮನ ಎಂಬ ಭಾವ ಕವಿತ್ವಕ್ಕೆ ಸಾಕ್ಷಿ.
ನ್ಯಾಯ ದೇವತೆಯ ಅಂತರಂಗವನ್ನೂ ಮುಟ್ಟುವ ಕವಿತೆ “ತಕ್ಕಡಿಯ ಬಿಡು”, ಕಣ್ತೆರೆದು ನೋಡೊಮ್ಮೆ… ಕಣ್ಣ ತುಪಾಕಿಯಿಂದ ದ್ರೋಹ ಬಗೆಯುವ ಭ್ರಷ್ಟ ಹದ್ದುಗಳನ್ನು ಸುಡು ಎಂದು, ಕಿಚ್ಚಿನಿಂದ ನ್ಯಾಯದೇವತೆಯನ್ನು ಕರೆದಿದ್ದು, ಓದುಗನ ರೋಮ ನಿಮಿರುವಂತೆ ಮಾಡುತ್ತದೆ.
ಸತ್ಯವಾಗಿಯೂ…… ಮಾತು ಮತ್ತು ಕೃತಿ ಎರೆಡೂ ವಿಭಿನ್ನವಾಗಿರುತ್ತವೆ. ಉಪದೇಶಿಸಿದವರು ಉಪದೇಶದ ವಸ್ತುವಿನಂತೆ ಆಚರಣೆಮಾಡುವುದಿಲ್ಲ ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ಮತ್ತು ಅಂತರಾತ್ಮವನ್ನು ಪ್ರಶ್ನಿಸಿಕೊಳ್ನುವಂತೆ “ಹೃದಯ” ಎಂಬ ಕವಿತೆಯನ್ನು ರಚಿಸಿದ್ದಾರೆ.
ಕವಿಯ ವಿಭಿನ್ನ ದೃಷ್ಟಿ ಕೋನ, ಚಿಂತನೆ ಎಲ್ಲ ಆಯಾಮಗಳನ್ನು ತೆರೆದಿಡುತ್ತದೆ. ಆಗ ಹುಟ್ಟುವ ಕಾವ್ಯವು ಹೊಸರೂಪ ಪಡೆದುಕೊಳ್ಳುತ್ತದೆ. ಅಂತಹ ವಿಭಿನ್ನತೆ ನನಗೆ “ತಮ್ಮನ ಮಾತು” ಕವಿತೆಯಲ್ಲಿ ಕಂಡಿದೆ. ಸಂವಾದ ರೂಪದಲ್ಲಿ ಸಾಗುವ ಕವಿತೆಯ ಅಂತ್ಯ, ಸೂಕ್ಷ್ಮತೆಯನ್ನು ತಿಳಿಸಿ, ಸತ್ಯತೆಯನ್ನು ತೆರೆದಿಡುತ್ತದೆ.
ಪ್ರಕೃತಿಯು ಹಸಿದಾಗ ಅದರ ದಾವಾಗ್ನಿಗೆ ದಕ್ಕಿದ ಎಲ್ಲವನ್ನೂ ದಹಿಸಿಬಿಡುತ್ತದೆ. ಅಂತೆಯೇ ಮಾನವನ ಭಾವನೆಯ ಹಸಿವನ್ನು ಇಂಗಿಸಲು ಏನೂ ಸಿಗದಿದ್ದರೆ, ಚರಮಗೀತೆ ಹಾಡುತ್ತದೆ ಭಾವುಕತೆಯ ದನಿ.. ಎಂದು ಕವಿಗಳು ಮಾರ್ಮಿಕವಾಗಿ… ನುಂಗಿದ ಹಸಿವನ್ನು “ಹಸಿವು” ಕವಿತೆಯಲ್ಲಿ ಹೊರಹಾಕಿರುವರೆನಿಸುತ್ತದೆ. ಮುಂದುವರೆದು ಭೂ ಒಡಲಿಗೆ ಬಿದ್ದ ಕರಿನೆರಳ ಹಿಂದೆ ಇರುವುದೇನು ವಿಷವೋ? ಅಮೃತವೋ? ಪ್ರಸ್ತುತವಾಗಿಯೂ ನಿಗೂಢ ಎಂದಿದ್ದಾರೆ. ಇದು ಸಾರ್ವಕಾಲಿಕವಾಗಿಯೂ ಸತ್ಯವಾದುದೆಂಬುದನ್ನು ಎರಡು ದಶಕಗಳ ಹಿಂದೆಯೇ ಹೇಳಿದ್ದು ಕವಿಯ ದೂರದ ದೃಷ್ಟಿಕೋನಕ್ಕೆ ಕನ್ನಡಿಯೂ ಹೌದು.
“ದರ್ಬಾರಿನ(ಲ್ಲಿ)” ಕವಿತೆಯಂತೂ ಹೃದಯವನ್ನು ಹಿಂಡುತವಂತಹ ವಿಷಯವಸ್ತುವನ್ನು ಹೊಂದಿದೆ. ನಂಬಿಕೆಯಿಟ್ಟು ಕಷ್ಟಕ್ಕಾದಾರೂ, ಅಭಿವೃದ್ಧಿಗೆ ನಿಂತಾರು ಎಂದು ಮತ ಹಾಕಿದ ಹಸ್ತದಿಂದ ಬಂದ ಅರ್ಜಿಯ ಎದೆಗೆ ಚುಚ್ಚುತಿವೆ ಲಂಚದ ಭರ್ಚಿಗಳು ಎಂದಿರುವುದು… ಮತದಾರನ ಶೋಚನೀಯ ಸ್ಥಿತಿಯ ಕುರಿತಾದ ವೇದನೆಯ ಮಾತುಗಳು, ಓದುಗನ ಮನವನ್ನು ಅಳಿಸದೇ ಇರಲಾರವು.
“ನಾನು” ಸ್ವತಂತ್ರನಾದೊಡನೆ, ಸ್ವತಂತ್ರಗೊಳಿಸಿದ, ಮುದ್ದು ಮಾಡಿ ಸಲುಹಿದ ಹೆತ್ತವ್ವಳನ್ನು ದೂರಟ್ಟಿದ್ದೇನೆ. ಮೋಹಿಸಿದ ಮುಖಕ್ಕೆ ಮರುಳಾಗಿ ಕರುಳು ಕತ್ತರಿಸಿ ಜೀವ ನೀಡಿದವಳಿಗೆ ಉರುಲಾಗಿದ್ದೇನೆ …
ನಾನು ನಾನೇ ಆಗಿ ಮುಂದೇನು ಎಂದು ನಗುತಲಿದ್ದೇನೆ…. ಎಂಬಲ್ಲಿಗೆ ಮಕ್ಕಳು ಹೆತ್ತವರನ್ನು ಮುಪ್ಪಿನಲ್ಲಿ ಕೈ ಬಿಡುವುದು ಸರ್ವೇಸಾಮಾನ್ಯವಾದುದರ ಬಗೆಗೆ ಖೇದವನ್ನು ವ್ಯಕ್ತಪಡಿಸಿದ್ದಾರೆ.

ಕವಿ ಶಶಿಕಾಂತ ಕಾಡ್ಲೂರ್
ಬಿಸಿಲು ಮಳೆ ಬಿರಾಗಾಳಿಗಳಿಂದ ರಕ್ಷಣೆ ಇಲ್ಲದೆ, ಮಾನವರ ಹೊಲಸು ಕಾರ್ಯಕ್ಕೆ ತಾಣವಾಗಿದ್ದು… ನಾರುತ್ತಿರುವ “ಕೋಟೆಯ ಸ್ವಗತ” ಎಲ್ಲರ ಕಣ್ತೆರಿಸಬೇಕಿದೆ… ಮತ್ತು ಕವಿಯ ಸೂಕ್ಷ್ಮ ಮತಿಯನ್ನು ಮತ್ತು ಐತಿಹಾಸಿಕ ಪರಂಪರೆಯನ್ನು ಸಾರುವ ಸ್ಥಳಗಳ ಮೇಲಿನ ಕಾಳಜಿಯನ್ನು ತೋರುವ ಕವನವಿದು.
ಪದಗಳ ಬಳಕೆಯಲ್ಲಿ ಅತ್ಯಂತ ಕುಶಲತೆಯನ್ನು ತೋರುವ ಕವಿತೆ “ವಸಂತನಿಗೆ”
ದಿನಮಣಿಯ ದಂಡಿಗೆ ಸಿಕ್ಕು
ಹಸಿರೆಲ್ಲಾ ಅಂಗಾರವಾಗಿ
ಬಂಗಾರದಂಥ ಬನದೇವಿಯ
ಎದೆ ಬತ್ತಿದಾಗ
ಓದುತ್ತಿದ್ದರೆ ಹಾಗೆ ಕಳೆದುಹೋಗಿ ಆ ವಸ್ತು, ವಸ್ತು ಸ್ಥಿತಿ ಕಣ್ಣ ಮುಂದೆ ತರಿಸುವಂತಹ ಕವಿತೆ “ಬದುಕು”. ಬಸರಿ ಗಿಡಕ್ಕೆ ಬದುಕನ್ನು ಹೋಲಿಸಿ, ಬದುಕು ಹಂಬಲಿಸುವ ಪ್ರೀತಿ ಪ್ರೇಮಗಳನ್ನು ಬಸರೀ ಗಿಡ ತನ್ನಲ್ಲಿ ಆವಾಸ ಪಡೆಯುವ ಹಕ್ಕಿ ಪಿಕ್ಕಿಗಳ ಪ್ರೀತಿಗೆ ಹಂಬಲಿಸುವುದಕ್ಕೆ ಹೋಲಿಸಿದ್ದಾರೆ. ಆದರೂ ಬಸಿರೊಡೆದ ಚಿಗುರನ್ನು ಚಿವುಟುತ್ತಲೇ ಇರುವುದ ಕಂಡು ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ…
ಮೂವತ್ಮೂರು ಕೋಟಿ ಜೀವರಾಶಿಗಳಲ್ಲಿ, ಹುಟ್ಟಿದೊಡನೆ ಅಳುವ ಜೀವ ಮನುಷ್ಯ ಒಂದೆ. ನೂರು ಕೋಟಿ ದಾಟಿದ ಭಾರತಾಂಬೆಯ ಮಕ್ಕಳಲ್ಲಿ ಉತ್ತಮವಾಗಿ ಬದುಕುವವರಷ್ಟು ಕೋಟಿ,
ದಾರಿ ತಪ್ಪಿ ತುತ್ತು ಊಟಕ್ಕೂ ಪರದಾಡುವವರಷ್ಟು ಕೋಟಿ, ಹೆತ್ತವರಿದ್ದೂ ಅನಾಥರಂತಿರುವವರು ಮತ್ತಷ್ಟು ಕೋಟಿ…
—— ಹೀಗೆ ಭವಿಷ್ಯದ ನಾಯಕರ ವಿಭಿನ್ನ ಬದುಕನ್ನು ಸೂಕ್ಷ್ಮ ಮತಿಯಿಂದ ಕವಿತೆಯಲ್ಲಿ ಮೂಡಿಸಿದ್ದು, ಕವಿಯ ಕಾವ್ಯದ ಮೇಲಿನ ಹಿಡಿತಕ್ಕೆ ಕನ್ನಡಿಯಾಗಿದೆ…
ಜೀವಿತವ್ಯದ ಕಾಲಕ್ಕೆ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ತಿಳಿಸುವ ಕವಿತೆ “ಸಾಕು-ಬೇಕು” ಅಮೋಘವಾಗಿದೆ. “ಸಾಗುತಿದೆ ಪಯಣ” ಕವಿತೆ, ರಾಜಕೀಯದ ರೌದ್ರತೆಯನ್ನು ತೆರೆದಿಟ್ಟಂತೆ ಭಾಸವಾಗುತ್ತದೆ. ದೇಶದ ರಥವನ್ನು ಎಳೆಯುವವರು, ಮತದಾರನ ಕಣ್ಣಿಗೆ ಪಟ್ಟಿ ಕಟ್ಟಿ ಆಳುತ್ತಿದ್ದಾರೆ. ಭರವಸೆಯ ಮಾತುಗಳು ಮಾತಾಗೇ ಉಳಿಸಿ ತಾವು ನಡೆದದ್ದೇ ದಾರಿ, ಅವರು ಹೊಡೆದುಕೊಂಡು ಹೋದಲ್ಲಿಯೇ ರಥ ಸಾಗುತ್ತಿದೆ ಎಂದು ಮಾರ್ಮಿಕವಾಗಿ ಮತ್ತೂ ಪರೋಕ್ಷವಾಗಿ ರಾಜಕೀಯ ಚುಕ್ಕಾಣಿ ಹಿಡಿದವರ ಬೆನ್ನಿಗೆ ಚಾಟಿ ಏಟನ್ನು ನೀಡಿದ್ದಾರೆ.
ಮನುಷ್ಯನ ಬದುಕಿನಲ್ಲಿ ನೋವುಗಳೇ ಅಧಿಕವಾದರೂ ಕುಗ್ಗಬಾರದು, ಗತ ವರ್ಷದ ಕಹಿ ನೆನಪಗಳಿಗೆ ಸಿಕ್ಕು ಕೊರಗಬಾರದು…. ಮುಂದೆ ಎದುರಾಗಬಹುದಾದ ಎಡರು ತೊಡರುಗಳಿಗೂ ಜಗ್ಗದೆ ಎದೆಯೊಡ್ಡಿ ಸಾಗಬೇಕೆಂಬ ಉದಾತ್ತ ಭಾವವನ್ನು ಕವಿ, ಕವಿತೆ “ಹೊಸ ವರ್ಷದ ಹಾದಿಯಲ್ಲಿ” ಕಟ್ಟಿಕೊಡುತ್ತಾರೆ. ಏನಾದರೂ ಸರಿ ಧನಾತ್ಮಕವಾಗಿ, ಧೈರ್ಯದಿಂದ ಮುನ್ನುಗ್ಗಬೇಕೆಂಬ ಆಶಯವನ್ನು ಕವಿ ಹೊಂದಿರುವುದು… ಖುಷಿ ವಿಚಾರ..
ಸಿರಿವಂತ ಪ್ರೇಮಿಯಿಂದ ವಂಚಿತನಾದ ಹುಡುಗನ “ಆಸೆ”ಗವಿತೆ, ಸತ್ಯವಾಗಿಯೂ ಆದರ್ಶದ ಪ್ರತೀಕವಾಗಿದೆ.
ನಿನ್ನ ಅಗಲಿಕೆಯ ಉರಿಯಲ್ಲಿ ಸುಟ್ಟರೂ,
ನಾ ಮತ್ತೆ ಹುಟ್ಟುತ್ತೇನೆ,
ಆದರೆ
ನಿನ್ನಂತೆ ಸಿರಿಯಲ್ಲಿ ಹುಟ್ಟುವುದಿಲ್ಲ
ಅದರಲ್ಲಿ ನನಗೆ ನೆಚ್ಚಿಕೆಯೂ ಇಲ್ಲ
ಬದಲಾಗಿ ಹುಟ್ಟುತ್ತೇನೆ ಹೂವಾಗಿ,
ದುಂಬಿಯ ಹೊಟ್ಟೆಯನು ತುಂಬಿಸಲು,
ನನ್ನ ಬೆಳೆದ ರೈತನನ್ನು ಸಿರಿವಂತನಾಗಿಸಲು,
ಮಾರುವ ಹೂವಾಡಿಗನ ಬಡತನ ನೀಗಿಸಲು,
ಚೆಲುವೆಯ ಸೌಂದರ್ಯಕೆ, ದೇವರ ಪಾದಕ್ಕೆ, ಮದವಣಿಗರಿಗೆ,
ಕೊನೆಗೆ ಶವಕ್ಕೂ ಪ್ರಯೋಜನವಾಗುತ್ತೇನೆ ಹೊರತು ಸಿರಿತನಕ್ಕೆ ಬೆನ್ನು ಬೀಳುವುದಿಲ್ಲ ಎಂದು ತಮ್ಮ ಆಸೆಯನ್ನು ಪದಗಳಲ್ಲಿ ಅಭಿವ್ಯಕ್ತ ಪಡಿಸಿದ ಕವಿ ವಿಶೇಷವೆನಿಸುತ್ತಾರೆ.
” ಮೂರು ಬಣ್ಣದ ಹಕ್ಕಿ” ಕವಿತೆ ಓದತ್ತಿದ್ದಂತೆ ಸ್ವಾತಂತ್ರ್ಯದ ನೆನಪಲ್ಲಿ ಮಿಂದುಬಿಡುತ್ತೇವೆ.
ಚರಕವಿಡಿದ ತಾತನ ಕೈ
ಎಳೆ ಎಳೆಯಾಗಿ ಆತ್ಮವ ನೀಲುತ್ತಿತ್ತು
ಎಂದು ಆತ್ಮದ ಜೊತೆ ಆಂತರ್ಯದ ಅರಿವು ಸ್ವಾತಂತ್ರ್ಯ ಸಂಗ್ರಾಮದ ಸಿಹಿ ಕಹಿ ಘಟನೆಗಳ ಪರಾಮರ್ಶೆ ಮಾಡುತ್ತಿದೆ ಏನೋ ಎಂದು ಭಾಸವಾಗುತ್ತದೆ. ಈ ಕವಿತೆಯ ಅಂತರಂಗವು ಒಂದು ಕ್ಷಣ ಸೂಕ್ಷ್ಮವಾಗಿಯೇ ನಮ್ಮನ್ನು ಪರವಶರನ್ನಾಗಿಸುತ್ತದೆ.
“ಹೊನ್ನಿನ ಮಳೆಯು ಅಂಗಳಕ್ಕೆ
ಥಳಿಯ ಹೊಡೆದಿತ್ತು
ಬಾಂದಳದ ಚುಕ್ಕೆಗಳೆಲ್ಲ ಎದೆಯ ಮೇಲಿಳಿದು
ಬಾಳ ಕನಸಿಗೆ
ರಂಗೋಲಿಯ ರೂಪ ತಂದಿತ್ತು
ಎಂದು ಸೊಗಸಾದ ಹೋಲಿಕೆಗಳನ್ನು ನೀಡಿ ಓದುಗನನ್ನು ಕವಿತೆಯಲ್ಲಿ ಸೆರೆಹಿಡಿಯುತ್ತಾರೆ….
ಅನಾದಿ ಕಾಲದಿಂದಲೂ ಹೆಣ್ಣಿನ ಮೇಲೆ ಶೋಷಣೆ ನಡೆದು ಬಂದದ್ದು ಅದಕ್ಕೆ ಮೂಲವೂ ಹೆಣ್ಣೇ ಎಂದು ಕವಿ ಸತಿ”ಸಾವಿತ್ರಿಗೆ”
ನೀನೇಕೆ ಗಂಡನಿಗೆ ಮರುಜೀವ ಕೊಡಿಸಿದಿ,
ಬದುಕಿ ಬಂದವನು ನಿನಗೇನು ಕೊಟ್ಟ…..
ತಪ್ಪು ಮಾಡಿಬಿಟ್ಟೆ ಸಾವಿತ್ರಿ….
ನೀನು ಮರುಮದುವೆ ಆಗಿದ್ದರೆ ಬರುತ್ತಿತ್ತು…
ಮಹಾಸತಿ ಹೆಸರು ಪಡೆದು ಮುಂದಿನ ಎಲ್ಲ ಹೆಣ್ಣುಮಕ್ಕಳನ್ನ ಶೋಷಣೆಗೆ ಒಳಗಾಗುವಂತೆ ಮಾಡಿಬಿಟ್ಟಿ….,
ಸಾವಿತ್ರಿ ನೀ ತಪ್ಪು ಮಾಡಿಬಿಟ್ಟಿ
ಎಂದು ಹೆಣ್ಣಿನ ಶೋಷಣೆಯನ್ನು ಗಂಡಂದಿರ ದರ್ಬಾರನ್ನು ಖಂಡಿಸಿ…… ತಮ್ಮ ಕಳವಳನ್ನು ವ್ಯಕ್ತಪಡಿಸಿ ಸಾಮಾಜಿಕವಾಗಿ ಕಾವ್ಯ ನಿಲ್ಲುವಂತೆ ಮಾಡದ್ದಾರೆ.
ಪ್ರಕೃತಿಯ ರೌದ್ರಾವತಾರ, ಮಹಾ ಪ್ರವಾಹವನ್ನು ಕಂಡು… ಅದರಲ್ಲಿ ಕೊಚ್ಚಿ ಹೋದವರ ಕಣ್ಣೀರಾಗಿದ್ದಾರೆ, ಅಲ್ಲದೇ ಅದರ ಅವಕಾಶವನ್ನೇ ಬಳಸಿಕೊಂಡು, ಕೇವಲ ಭರವಸೆಯ ಪುಂಗಿ ಊದಿದ ಮಹಾತ್ಮರ ಕುರಿತಾಗಿ ವ್ಯಂಗ್ಯವನ್ನು “ಮುಗಿಲಿನ ವೃತ್ತಾಂತ” ದಲ್ಲಿ ಬರೆದು, ಕನಿಕರ ಬರುವುದಾದರೆ ಮುಗಿಲಿಗೇ ಬರಬೇಕು.. ಆಗ ಮಾತ್ರ ಕೊಚ್ಚಿಹೋದು ಬದುಕು ಕಟ್ಟಿಕೊಳ್ಳಲು ಸಾಧ್ಯ… ಎಂದು; ಮೈಕಿನಲ್ಲಿ ಭಾಷಣ ಬಿಗಿಯುವವರನ್ನು ನೆಚ್ಚಿಕೊಂಡರೆ ಬದುಕು ಸ್ಥಿರವಾಗದು ಎಂದು ತಮ್ಮ ಬೇಗುದಿಯನ್ನು ಹೊರಹಾಕಿದ್ದಾರೆ.
ಹಾಗಿ ವ್ಯಕ್ತಿಗಳ ಚಿತ್ರಣವನ್ನು ಅತ್ಯಂತ ವಿನಮ್ರ ಮತ್ತು ಗೌರವ ಪೂರ್ವಕವಾಗಿ ವ್ಯಕ್ತಿಗಳ ಶ್ರೇಷ್ಠತೆಯನ್ನು ಉತ್ಕೃಷ್ಟ ಪದಗಳೊಂದಿಗೆ ಕಾವ್ಯಕ್ಕೆ ಇಳಿಸಿದ್ದಾರೆ, “ಗಾನಯೋಗಿ” ಪುಟ್ಟರಾಜರ ಕುರಿತಾದ ಕವಿತೆ ಕೇಳಲು ಕೈ ಜೋಡಿಯಾಗುತ್ತವೆ…. ಅದಕ್ಕೆ ಸಮನಾಗಿ ನಿಲ್ಲುವ ಮತ್ತೊಂದು ಕಾವ್ಯ ಬರಹವೇ “ಭೃತ್ಯ ಚೇತನ” ತಮ್ಮ ಗುರುಗಳಾದ ಡಾ.ವಿ.ಜಿ. ಪೂಜಾರರ ಕುರಿತಾಗಿ ಬರೆಯುತ್ತ
ನುಡಿದರೆ ವಚನ
ನಡೆದರೆ ಸಂಶೋಧನ
ಸದಾ ಬಾಗಿದ ತಲೆಯ
ಮುಗಿದ ಕೈಯ ಭೃತ್ಯ ಚೇತನ ….. ಎಂದು ಬಣ್ಣನೆಗೂ ಸಿಗದ ಗುರುಗಳನ್ನು ನೆನೆದು ನಮನ ಸಲ್ಲಿಸಿ, ಶುಭ ಕಾಮನ ವ್ಯಕ್ತಪಡಿಸಿದ್ದು….. ಗುರುಗಳನ್ನು ಸದಾಕಾಲಕ್ಕೂ ಸ್ಮರಿಸಬೇಕೆಂಬ ಸಂಸ್ಕಾರವನ್ನು ಕವಿತೆ ಮೂಲಕ ಸಾರಿದ್ದಾರೆಂಬುದು ಹೆಮ್ಮೆಯ ವಿಷಯವೇ ಸರಿ.
ಹೀಗೆ ಈ ದಾರಿಯಲಿ, ಪ್ರೀತಿಗೆ, ಹರಕೆ, ಸ್ಥಿತಿ, ವಸಂತನಿಗೆ, ನಿರ್ಲಿಪ್ತತೆ, ನಿರೀಕ್ಷೆ ಮುಂತಾಗಿ ಒಟ್ಟು
40 ಕವನಗಳನ್ನು ವಿಧವಿಧ ಆಯಾಮಗಳಲ್ಲಿ ಚಿಂತಿಸಿ ಸ್ವಾನುಭವಗಳೊಂದಿಗೆ ಸಾಮಾಜಿಕ ಜವಾಬ್ದಾರಿಯನ್ನೂ ಕೂಡಿಸಿಕೊಂಡು ಯುವ ಸಮೂಹಕ್ಕೆ ಮೌಲ್ಯಗಳನ್ನು ಒದಗಿಸುವ ದೃಷ್ಟಿಕೋನದಿಂದಲೂ ಸೂಕ್ಷ್ಮವಾಗಿ ಕವಿತೆಗಳನ್ನು ಹೊಸೆದಿದ್ದಾರೆ.

ಉರಿಯುಂಡ ಒಡಲಿಂದ ಬಂದ ಅನೇಕ ರಸಗವಿತೆಗಳು ಕೆಂಡದುಂಡೆಗಳಾಗಿವೆ. ಸಮುದಾಯದಲ್ಲಿನ ಹೇಸಿಗೆತನವನ್ನು ಕಂಡು ಕಂಡು ಉರಿದ ಮನಸು ತನ್ನ ಅಕ್ಷರಾಗ್ನಿಯನ್ನು ಪಸರಿಸಿ ಸುಟ್ಟು ಹಾಕಿ, ಹಸನು ಮಾಡಿ ಪ್ರಪುಲ್ಲ ವಾತಾವರಣವನ್ನು ಸೃಷ್ಟಿಸಲು ಕವಿಮನಸು ಹಾತೊರೆದುದು ಇಡೀ ಸಂಕಲನದಲ್ಲಿ ಕಾಣಬಹುದಾಗಿದೆ.ಅಲ್ಲದೆ ಹಾಸ್ಯ, ವಿಡಂಬನೆ, ಮನಸಿನಲ್ಲುಂಟಾಗುವ ಗೊಂದಲ, ಪ್ರೀತಿ, ನೋವಿನ ಒಟ್ಟು 15 ಹನಿಗವಿತೆದಳನ್ನೂ ಸಂಕಲನವು ಹೊಂದಿದ್ದು; ಓದುಗರಿಗೆ ಮನೋರಂಜನೆಯನ್ನೂ ನೀಡುತ್ತದೆ.
ಅಂತಹವುಗಳಲ್ಲಿ
* ಸೃಷ್ಟಿಯ ಸಿಂಗಾರ
ಕಂಡ ನಿನ ಹೃದಯವೇಕೆ ಕಲ್ಲಾಗೈತಿ ಗೆಳತಿ
ಎಂದು ನಲ್ಲೆಗೆ ಕೇಳಿ, ಸೌಂದರ್ಯ ಕಂಡು ಖುಷಿಪಡುವುದು ಸಂತಸದ ಬದುಕಿನ ಗುಟ್ಟು ಎಂದು ನಲ್ಲೆಗೆ ಹೇಳುತ್ತಾರೆ.
* ಅಕ್ಷಕವೆಂಬುದು
ಅಂಧಕಾರವನ್ನು
ಕ್ಷಯಿಸುವ
ರವಿತೇಜ…. ಎಂದು ಅಕ್ಷರದ ಬೆಲೆಯನ್ನು ತಿಳಿಸುತ್ತಾರೆ.
* ಮಸೀದಿ, ಮಂದಿರ, ಚರ್ಚುಗಳನ್ನು ಕಟ್ಟುವವರು ಮನಸುಗಳನ್ನು ಕಟ್ಟುವುದಿಲ್ಲ,
ಮಸೀದಿ, ಮಂದಿರ, ಚರ್ಚುಗಳನ್ನು ಕೆಡುವವರು ದ್ವೇಷಗಳನ್ನು ಕೆಡುವುದಿಲ್ಲ
ಇದುವೇ ವಿಪರ್ಯಾಸ ಎಂದು ಸ್ವಾಸ್ಥ್ಯ ಸಮಾಜವನ್ನು ಬಯಸಿ ಮನಸುಗಳು ಜಾತ್ಯಾತೀತವಾಗಿ ಒಂದಾಗಬೇಕೆಂದು ಬಯಸುತ್ತಾರೆ…
* ನಮ್ಮ ನಾಯಕರು ಜನರನ್ನು ಹೇಗೆ ಯಾಮಾರಿಸುತ್ತಾರೆ ಎಂದು “ನಾಯಕರು” ಹನಿಗವಿತೆಯಲ್ಲಿ ವ್ಯಂಗ್ಯವಾಗಿ
ಎಲ್ಲರ ಚರಿತ್ರೆ ಬಿಚ್ಚಿಡುವ ನಾಯಕರು
ತಮ್ಮದನ್ನು ಬಚ್ಚಿಡುತ್ತಾರೆಂದು…
ಗಹಗಹಿಸಿ ನಗುವಂತೆ, ನಗುವಿನೊಂದಿಗೆ ಜಾಗೃತರಾಗುವಂತೆ ಜನರನ್ನು ಎಚ್ಚರಿಸುತ್ತಾರೆ.
* ರೈತರ ಸಂಕಷ್ಟಗಳ ಬಗ್ಗೆಯೂ ಬರೆಯುವ ಕವಿ, ಮಳೆರಾಯನ ಅವಕೃಪೆಯನ್ನು ನೆನೆದು ನೋಯುತ್ತಾರೆ.
* ಸತ್ತವರ ಮಣ್ಣಿಗೆ ಹೋಗಿ ಬಂದು ಮೈತೊಳೆಯುವ ನಾವು, ಮತ್ತೆಂದು ಆ ಕಡೆ ಸುಳಿಯುವುದಿಲ್ಲ. ಆದರೆ ಗೋಲಗುಮ್ಮಟ, ತಾಜಮಹಲ್ ಗೆ ಹೋಗಿ ಹೋಗಿ ಗೋರಿ ಮುಟ್ಟಿ ಬರುವ ನಾವು ಅದರ ಕರ್ಮ ಎಲ್ಲಿ ತೊಳೆಯೋದು ಎಂದು ಮಾರ್ಮಿಕವಾಗಿ… ಮನಸಿನ ಗೊಂದಲವನ್ನು ಹೊರಹಾಕುತ್ತಾರೆ.

* ಇಡೀ ಜಗತ್ತನ್ನೇ ಮತ್ತು ಜಗದಲ್ಲಿನ ಎಲ್ಲರ ಬಗ್ಗೆ ನಮ್ಮ ಅರಿವಿನಲ್ಲಿಟ್ಟುಕೊಂಡ ನಾವು… ಪಕ್ಕದ ಮನೆಯವರು ಯಾರೆಂಬುದನ್ನೇ ತಿಳಿಯದೇ ಹೋಗುತ್ತೇವೆ. ಇದುವೇ ನಮ್ಮ “ದೃಷ್ಟಿ”, ಸ್ವಂತದವರನ್ನು.. ಹತ್ತಿರವಿದ್ದವರನ್ನು ಅರ್ಥೈಸಿಕೊಂಡು ಬದುಕುವುದನ್ನು ಮರೆತು… ಪ್ರಪಂಚವನ್ನೇ ತಿಳಿಯಲು ಹೋಗುತ್ತೇವೆ ಎಂಬುದು ಶೋಚನೀಯ.. ಎಂದು ಮನುಷ್ಯಕ ಸ್ವಭಾವದ ಕುರಿತಾಗಿ ಬೇಸರ ವ್ಯಕ್ತಪಡಿಸುತ್ತಾರೆ…..

ಹೀಗೆ ಡಾ ಶಶಿಕಾಂತ ಕಾಡ್ಲೂರವರು, ತಮ್ಮ ಜೀವನದಲ್ಲಿ ಉಂಡ ನೋವು, ಕಂಡ ಸತ್ಯ, ಅನುಭವಿಸಿದ ಘಟನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಗಳನ್ನಾಗಿಸಿ ನಮ್ಮ ಓದಿಗೆ ನೀಡಿದ್ದಾರೆ.

ಒಬ್ಬ ವ್ಯಕ್ತಿಯ ನೋವು ಕೇವಲ ಅವನ ನೋವಲ್ಲ,
ಒಬ್ಬ ವ್ಯಕ್ತಿಗಾದ ಅನುಭವ ಕೇವಲ ಅವನ ಅನುಭವವಲ್ಲ ಎಲ್ಲರೂ ಒಂದಲ್ಲ ಒಂದು ಪರಿಸ್ಥಿತಿಯಲ್ಲಿ ನೋವು, ಸಂಕಟ, ಸಂತಸವನ್ನು ಅನುಭವಿಸಿಯೇ ಅನುಭವಿಸುತ್ತೇವೆ. ಆದರೆ ಎಲ್ಲರಿಗೂ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ, ವ್ಯಕ್ತಪಡಿಸಬೇಕೆಂದರೂ ಅವುಗಳಿಗೆ ಅಕ್ಷರ ರೂಪ ಕೊಡಲು ಅಸಾಧ್ಯವಾಗಿ ಸುಮ್ಮನಾಗಿಬಿಡುತ್ತಾರೆ. ಆದರೆ ಕವಿಗಳು ತಮ್ಮ ಸ್ವಾನುಭವಗಳನ್ನು ಕವಿತೆಯ ಮೂಲಕ ನಮ್ಮೊಂದಿಗೆ ಹಂಚಿಕೊಂಡಿದ್ದು ಅವುಗಳನ್ನು ಅರಿಯಬೇಕಾಗಿದೆ.
ಗೊತ್ತಿಲ್ಲದ್ದನ್ನು ತಿಳಿಯಬೇಕು,
ತಿಳಿದಿರುವುದರ ಬಗೆಗೆ ಅವಲೋಕಿಸಬೇಕು,
ಅವಲೋಕಿಸಿ ಅಂತರ್ಗತವಾಗಿಸಬೇಕು, ಅಂತರ್ಗತವಾದುದನ್ನು ಕಾರ್ಯರೂಪಕ್ಕೆ ತರಬೇಕು… ಎಲ್ಲವೂ ಆಗಬೇಕೆಂದರೆ ಬರೆದುದನ್ನು ಓದಬೇಕು…

ಲೇಖಕ- ವರದೇಂದ್ರ ಕೆ ಮಸ್ಕಿ,ಶಿಕ್ಷಕರು

_————————————————————————–ಆತ್ಮೀಯರೇ,

e-ಸುದ್ದಿ ಅಂತರಜಾಲ ಪತ್ರಿಕೆಯಲ್ಲಿ ಇದುವರೆಗೆ ಒಂದು ತಿಂಗಳಲ್ಲಿ ಸುದ್ದಿ, ವ್ಯಕ್ತಿ ಪರಿಚಯ ಸೇರಿದಂತೆ ೧೦೭ ಪೋಸ್ಟ್ ಗಳನ್ನು ಪ್ರಕಟಿಸಿದ್ದೇವೆ. ೧೫,೧೮೪ ಜನ ವೀಕ್ಷಿಸಿದ್ದಾರೆ. ಇದು ನಮಗೆ ಅಭಿಮಾನದ ಸಂಗತಿ.
ಈ ತಿಂಗಳ ಪೂರ್ತಿ ಸುದ್ದಿಯ ಜತಗೆ ಪುಸ್ತಕ ಪರಿಚಯ, ಕವಿ, ಕತೆಗಾರರು, ಬರಹಗಾರರು, ಸಾಧಕರ ಪರಿಚಯ ಮಾಡುವ ಪ್ರಯತ್ನ ಮಾಡುತ್ತೇವೆ. ನೀವು ಅಂತವರ ಹೆಸರುಗಳನ್ನು ಸೂಚಿಸಬಹುದು.
ನಿಮ್ಮ ಸಲಹೆ, ಸೂಚನೆ ಸಹಕಾರ ಅಗತ್ಯ.
– ಸಂಪಾದಕ

2 thoughts on “ಉರಿಯುಂಡ ಒಡಲು- ವಿದ್ಯೆಯಂಬ ತುಪ್ಪ ಸುರಿ

  1. ಅರ್ಥಪೂರ್ಣ ಪುಸ್ತಕ ಪರಿಚಯ…ಅಭಿನಂದನೆಗಳು ಈರ್ವರು ಲೇಖಕರಿಗೆ…ಹಾಗೂ ವ್ಯಕ್ತಿಚಿತ್ರಣ…. ಸಾಹಿತ್ಯದ ಕುರಿತಾದ ಹಲವು ಲೇಖನಗಳನ್ನು ಪ್ರಕಟಿಸುತ್ತಿರುವ ಸಂಪಾದಕರಿಗೆ

Comments are closed.

Don`t copy text!