ಅರಿವಿನ ಗುರು ಜಂಗಮ ಸಾಧಕ, ತೋಂಟದ ಡಾ ಸಿದ್ಧಲಿಂಗ ಶ್ರೀಗಳು
ಬಸವಾದಿ ಶರಣರ ವಚನ ಚಳುವಳಿಯ ನಂತರದ ಎರಡನೆಯ ಮಹತ್ತರ ಘಟ್ಟ ಹದಿನಾರನೆಯ ಶತಮಾನ ಅದು ಎಡೆಯೂರು ಶ್ರೀ ಸಿದ್ಧಲಿಂಗ ಶ್ರೀಗಳ ವಚನಗಳ ಸಂಕಲನ ಯುಗ. ಅಂತಹ ಉಚ್ಚ ಪರಂಪರೆಗೆ ಸೇರಿದ ಗದಗ ಡಂಬಳ ಸಂಸ್ಥಾನ ಮಠವೆಂದರೆ ತೋಂಟದ ಶ್ರೀ ಸಿದ್ಧಲಿಂಗ ಮಠ. ಚಿಲ್ಲಾಳ ಸಮಯಕ್ಕೆ ಸೇರಿದ ಮೂಲ ಮಠವು ವಚನ ಸಾಹಿತ್ಯದ ಧಾರ್ಮಿಕ ತಾತ್ವಿಕ ಸೈದ್ಧಾಂತಿಕ ತಿರುಳನ್ನು ಮನೆ ಮನೆಗೆ ಮುಟ್ಟಿಸುವ ನಿರಂತರ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ಗದಗ ಡಂಬಳ ತೋಂಟದ ಶ್ರೀ ಸಿದ್ಧಲಿಂಗ ಮಠವೆಂದರೆ ನಮಗೆ ಮೊದಲು ನೆನಪಾಗುವದು ಕನ್ನಡದ ಮೊದಲ ಜಗದ್ಗುರು ಡಾ ಸಿದ್ಧಲಿಂಗ ಸ್ವಾಮಿಗಳು. ಇವರ ನಡೆ ನುಡಿ ಭಾಷಣ ತುಂಬಾ ಜನರನ್ನು ಆಕರ್ಷಿಸುವ ಸೂಜಿಗಲ್ಲಿನಂತೆ. 1978 ಆಗ ನಾನು ಸೈನಿಕ ಶಾಲೆ ವಿಜಯಪುರ ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ ರಜೆಗೆಂದು ನಮ್ಮೂರು ರಾಮದುರ್ಗಕ್ಕೆ ಬಂದಿದ್ದೆ ,ನಮ್ಮೂರಿನ ಲಿಂಗಾಯತ ಸಮಾಜ ಅದರ ಉದ್ಘಾಟನೆಗೆ ಗದುಗಿನ ತೋಟದ ಮಠ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವವಾಗಿತ್ತು . ನಾನು ಪುಟ್ಟ ಬಾಲಕ ಅವರ ಮಾತು ಎಷ್ಟೊಂದು ನನ್ನ ಮೇಲೆ ಪ್ರಭಾವ ಬೀರಿತ್ತು ಎಂದರೆ ಬಸವಣ್ಣ ಮತ್ತು ವಚನ ಚಳುವಳಿಯ ಅರ್ಥಗರ್ಭಿತ ಚಿಂತನಾಕ್ರಮಗಳನ್ನು ಮೊದಲ ಬಾರಿಗೆ ಅವಲೋಕನ ಮಾಡಿಕೊಂಡಿದ್ದೆ.
1980 -81 ಕರ್ನಾಟಕದಲ್ಲಿ ಕನ್ನಡ ಚಳುವಳಿ ಅತ್ಯಂತ ತೀವ್ರವಾಗಿ ನಡೆದಿತ್ತು ಗೋಕಾಕ ವರದಿಗಾಗಿ ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕೂಗು ಎದ್ದಿತ್ತು .ಕನ್ನಡದ ನೆಲ ಜಲ ಭಾಷೆ ಸಂರಕ್ಷಣೆಗೆ ಡಾ ಸಿದ್ಧಲಿಂಗ ಶ್ರೀಗಳು ಕಠಿಣ ಉಪವಾಸಕ್ಕೆ ಕುಳಿತರು .
ಬಾಲಕರಿಂದ ಹಿಡಿದು ಮುಪ್ಪಿನ ಜನರಿಗೆ ಕನ್ನಡ ಭಾಷೆಯ ಕೆಚ್ಚನ್ನು ಹಚ್ಚಿದ ದಿಟ್ಟ ಕ್ರಾಂತಿಕಾರಿ ಜಗದ್ಗುರು . ಇವರ ಹೋರಾಟಕ್ಕೆ ಪ್ರಭಾವಿತರಾಗಿ ಕನ್ನಡದ ವಾರ ನಟ ಡಾ ರಾಜಕುಮಾರ ಮತ್ತು ಲೋಕೇಶ ವಿಷ್ಣುವರ್ಧನ ಮುಂತಾದ ಎಲ್ಲ ನಟರು ಗೋಕಾಕ ವರದಿಯ ಜಾರಿಗಾಗಿ ಆಗ್ರಹಿಸಿ ಹೋರಾಟ ನಡೆಸಿದ್ದರು ಅದು ಈಗ ಇತಿಹಾಸ .ಅವರು ತುಂಬಾ ಮುಗ್ಧ ಸ್ವಭಾವ ಎಲ್ಲರನ್ನು ತಮ್ಮೆಡೆಗೆ ಆಕರ್ಷಿಸಿತ್ತು . ಅವರ ನಡೆ ನುಡಿ ಸರಳ ಸಜ್ಜನಕೆಯಲ್ಲಿ ಎದ್ದು ಕಾಣುತ್ತಿತ್ತು .ಮಗುವಿನಂತಹ ಮನಸ್ಸು ಅಷ್ಟೇ ಕಠೋರವಾಗಿ ನಿರ್ಣಯ ತೆಗೆದುಕೊಳ್ಳುವ ವೈಚಾರಿಕತೆ ಅವರದ್ದಾಗಿತ್ತು. ವಚನ ಸಾಹಿತ್ಯದ ಜೊತೆಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹೊಂದಿದ ಕೆಲವೇ ಕೆಲವು ಶ್ರೀಗಳಲ್ಲಿ ಗದುಗಿನ ತೋಂಟದ ಡಾ ಸಿದ್ಧಲಿಂಗ ಶ್ರೀಗಳು. ಡಾ ಬೇಂದ್ರೆ ಮತ್ತು ಅನೇಕ ಪ್ರಮುಖ ಸಾಹಿತಿಗಳ ಜೊತೆಗೆ ನೇರ ಒಡನಾಟವನ್ನು ಇಟ್ಟುಕೊಂಡು ಅವರನ್ನು ತಮ್ಮ ಶ್ರೀ ಮಠಕ್ಕೆ ಕರೆಸಿಕೊಂಡು ಸತ್ಕರಿಸುವ ಪರಂಪರೆಯನ್ನು ಇಟ್ಟುಕೊಂಡಿದ್ದರು .
ಅವರಿಗೆ ದೊರೆತಿರುವ ಭಾವೈಕ್ಯತೆಯ ರಾಷ್ಟ್ರೀಯ ಪ್ರಶಸ್ತಿ ಅವರ ಸರ್ವ ಧರ್ಮ ಸಮನ್ವಯತೆಗೆ ಹಿಡಿದಿಟ್ಟ ಕನ್ನಡಿ . ಅವರ ಭಾಷಣವೆಂದರೆ ಉತ್ತರ ಕರ್ನಾಟಕದ ಜನರಿಗೆ ಒಂದು ಹಬ್ಬದ ಊಟವಿದ್ದಂತೆ, ಅವರಲ್ಲಿರುವ ಹಾಸ್ಯ ಪ್ರಜ್ಞೆ ನವಿರಾಗಿ ಟೀಕಿಸುವ ಕಲೆ ವಿಡಂಬನಾ ಚಾತುರ್ಯ ಅಘಾದವಾದದ್ದು. ಇತಿಹಾಸ ಪ್ರಜ್ಞೆ ಬದುಕಿನ ಮೌಲ್ಯಗಳ ಬಗ್ಗೆ ಇರುವ ಅವರ ಕಳಕಳಿ ಶ್ರೇಷ್ಠವಾದದ್ದು . ಒಬ್ಬ ಜಗದ್ಗುರುವಾಗಿ ಜನರೊಂದಿಗೆ ಅತ್ಯಂತ ಸರಳವಾಗಿ ಬೆರೆಯುವ ಮುಕ್ತ ಮತ್ತು ಮುಗ್ಧ ಮನಸ್ಸು ಅವರದ್ದಾಗಿತ್ತು.
ಹಲವಾರು ಘಟನೆಗಳು ನನ್ನ ಅವರ ಸಂಬಂಧಕ್ಕೆ ಪುರಾವೆಗಳು ಇದ್ದರೂ ಕೂಡ ನಾನು ಅತ್ಯಂತ ಕೆಲವುಗಳನ್ನು ಮಾತ್ರ ಇಲ್ಲಿ ಹೇಳಲಿಚ್ಛಿಸುವೆನು.
1997 ರ ಸಮಯ ಬೆಳಗಾವಿಯ ನಾಗನೂರು ಮಠದಲ್ಲಿ ಚಿತ್ರದುರ್ಗ ಮಠದ ಡಾ ಮುರುಘಾ ಶರಣರ ಬಸವ ಕೇಂದ್ರದ ಜಿಲ್ಲಾ ಶಕೆಯನ್ನು ಸ್ಥಾಪಿಸಲು ಮುಂದಾಗಿದ್ದು ಅವರಿಗೆ ಸಂಪೂರ್ಣ ಸಹಾಯ ಮತ್ತು ನೆರವು ನೀಡಿದ್ದು ಡಾ ಸಿದ್ಧಲಿಂಗ ಸ್ವಾಮಿಗಳು .ಅವರ ಸಲಹೆಯಂತೆ ಅಂದಿನ ನಾಗನೂರು ರುದ್ರಾಕ್ಷಿ ಮಠದ ಶ್ರೀಗಳಾದ ಮತ್ತು ಇಂದಿನ ಗದುಗಿನ ತೋಂಟದ ಶ್ರೀ ಮಠದ ಡಾ ಸಿದ್ಧರಾಮ ತೋಂಟದ ಶ್ರೀಗಳು ಮುಂದಾಳತ್ವ ವಹಿಸಿ ಬೆಳಗಾವಿ ಜಿಲ್ಲೆಯಲ್ಲಿ ಬಸವ ಕೇಂದ್ರಗಳನ್ನು ಸ್ಥಾಪಿಸಿದರು , ಆಗ ಡಾ ಸಿದ್ಧಲಿಂಗ ಶ್ರೀಗಳು ವಹಿಸಿದ ಶ್ರಮ ಪ್ರಯತ್ನ ಅಷ್ಟಿಷ್ಟಲ್ಲ . ಇಂದು ಹುಬ್ಬಳ್ಳಿ ಗದಗ ವಿಜಯಪುರ ಬಾಗಲಕೋಟೆ ಕಲಬುರ್ಗಿ ಬೀದರ ರಾಯಚೂರು ಬೆಳಗಾವಿ ಮತ್ತು ಸಮಗ್ರ ಉತ್ತರ ಕರ್ನಾಟಕದಲ್ಲಿ ಬಸವ ಕೇಂದ್ರ ಸಬಲವಾಗಿದ್ದರೆ ಅದಕ್ಕೆ ಮೂಲ ಕಾರಣ ಮತ್ತು ಪ್ರೇರಣೆ ಡಾ ಸಿದ್ಧಲಿಂಗ ಶ್ರೀಗಳು .ಅವರ ಜೊತೆಗೆ ಅಂದು ನಾನು ಲಿಂಗೈಕ್ಯ ಶ್ರೀ ಬಿ ವಿ ಕಟ್ಟಿ ಮುಂತಾದವರ ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಸಂಘಟನೆ ಮಾಡಿದ್ದು ಈಗ ನೆನಪು ಮಾತ್ರ.
2014 ರಲ್ಲಿ ಡಾ ಸಿದ್ಧಲಿಂಗ ಶ್ರೀಗಳು ಒಮ್ಮೆ ಬೈಲೂರಿನ ನಿಷ್ಕಲ ಮಂಟಪ ಶ್ರೀ ನಿಜ ಗುಣಂದ ಶ್ರೀಗಳ ಕಾರ್ಯಕ್ರಮಕ್ಕೆ ಬಂದಿದ್ದರು ಅಲ್ಲಿ ನೆರೆದ ಒಬ್ಬ ಅಕ್ಕನವರನ್ನು ಹೊಗಳುತ್ತಾ ಅವರು ಆಧುನಿಕ ಅಕ್ಕ ಮಹಾದೇವಿ ಎಂದು ಹೇಳಿದ್ದು ಮರುದಿನ ಪತ್ರಿಕೆಯಲ್ಲಿ ಬಂದಿತ್ತು ಇದನ್ನು ವಿರೋಧಿಸಿ ನಾನು ಅವರಿಗೆ ಪತ್ರ ಬರೆದಿದ್ದೆ. ಒಂದು ದಿನ ಮಧ್ಯಾಹ್ನ ನಾನು ರಾಮದುರ್ಗದಲ್ಲಿದ್ದಾಗ ಫೋನ್ ಮಾಡಿ ವಚನಕಾರ್ತಿ ಅಕ್ಕ ಮಹಾದೇವಿಯವರನ್ನು ಬೀದರ ಅಕ್ಕನವರಿಗೆ ಹೋಲಿಸಿದ್ದು ತಪ್ಪು ಮಾತಿನ ಭರಾಟೆಯಲ್ಲಿ ಹಾಗೆ ಹೇಳಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.
ಮಠದ ಪ್ರತಿ ಸೋಮವಾರ ಮತ್ತು ಮಾಸಿಕ ಕಾರ್ಯಕ್ರಮಗಳು ಎಂದರೆ ಗದುಗಿನ ಜನರಿಗೆ ಅನುಭಾವದ ಅಡುಗೆ ಬೇರೆ ಬೇರೆ ವಿಷಯಗಳ ಮೇಲೆ ಅವರು ಉಪನ್ಯಾಸವನ್ನು ಏರ್ಪಡಿಸಿ ಜನರನ್ನು ಪ್ರಭುದ್ಧ ಚಿಂತನೆಗೆ ಒಳಪಡಿಸುತ್ತಿದ್ದರು . ನಾನು ಬರೆದ ದೇವಲೋಕದ ಬಟ್ಟೆ ಎಂಬ ಪುಸ್ತಕವನ್ನು ನನ್ನ ತಮ್ಮ ಗದುಗಿನಲ್ಲಿರುವ ಪ್ರೊ ರವೀಂದ್ರ ಪಟ್ಟಣ ಅವರ ಮೂಲಕ ಕಳುಹಿಸಿ ಕೊಟ್ಟಾಗ ನನ್ನ ಲೇಖನ ಮತ್ತು ಬರವಣಿಗೆಯ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಅವರಲ್ಲಿರುವ ಡಾ ಶಂಕರ ಬಿದರಿ ಅವರ ಎರಡು ಸಿ ಡಿ ಮತ್ತು ನನ್ನ ತಮ್ಮನ ಮಗ ಪ್ರಣವನ ಕೈಯಲ್ಲಿ ನೂರು ರೂಪಾಯಿ ಕೊಟ್ಟು ಕಳುಹಿಸಿದ್ದು ಅವರ ಉದಾರ ಗುಣದ ನಿದರ್ಶನ.
ಗುರುಗಳಾದ ಡಾ ಎಂ ಎಂ ಕಲಬುರ್ಗಿ ಅವರ ಮೇಲಿನ ಅಪಾರವಾದ ಗೌರವ ಮತ್ತು ಪ್ರೀತಿ ಶ್ರೀಗಳಿಗಿತ್ತು. ಡಾ ಎಂ ಎಂ ಕಲಬುರ್ಗಿ ಅವರು ಸೃಜನೇತರ ಸೃಜನಶೀಲ ಮತ್ತು ಸಂಶೋಧನಾತ್ಮಕ ಬರಹಗಳಿಂದ ಪ್ರಸಿದ್ಧಿಯಾದಾರೂ ಸಹಿತ ಅವರಿಗೆ ಕೇಂದ್ರ ಜ್ಞಾನ ಪೀಠ ಪ್ರಶಸ್ತಿ ಬರದೇ ಇದ್ದಾಗ ಮತ್ತು ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗದೆ ಇದ್ದಾಗ
ಹೆಚ್ಚು ನೊಂದವರು ಡಾ ಸಿದ್ಧಲಿಂಗ ಶ್ರೀಗಳು. ಅವರು ಒಮ್ಮೆ ವಿಚಾರ ಮಾಡಿ ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಒಂದು ಕೋಟಿ ರುಪಾಯೀ ಹಣವನ್ನು ಇಟ್ಟು ಅದರ ಬಡ್ಡಿಯಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿ ಜ್ಞಾನ ಪೀಠದಷ್ಟೇ ಮೊತ್ತದ ಪ್ರಶಸ್ತಿಯನ್ನು ಘೋಷಿಸಲು ವಿಚಾರ ಮಾಡಿದಾಗ ,ಡಾ ಎಂ ಎಂ ಕಲಬುರ್ಗಿ ಗುರುಗಳು ಅದನ್ನು ನಿರಾಕರಿಸಿದರು. ಆದರೆ ಡಾ ಎಂ ಎಂ ಕಲಬುರ್ಗಿ ಅವರು ಹತ್ಯೆಯಾದಾಗ ಮಂಕು ಕವಿದವರ ಹಾಗೆ ತುಂಬಾ ನೋವನ್ನು ಅನುಭವಿಸಿದರು ಡಾ ಸಿದ್ಧಲಿಂಗ ಶ್ರೀಗಳು . ಡಾ ಎಂ ಎಂ ಕಲಬುರ್ಗಿ ಅವರ ಹತ್ಯೆಯಾದ ದಿನ ನಾನು ಡಾ ಸಿದ್ಧಲಿಂಗ ಶ್ರೀಗಳ ಹತ್ತಿರ ಧಾರವಾಡದ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿದ್ದೆ. ಅಂದು ಕಣ್ಣು ತುಂಬಾ ನೀರು ತುಂಬಿಕೊಂಡು ಬಸವ ಪ್ರಜ್ಞೆಯ ಸೂರ್ಯ ಮುಳುಗಿತು ಎಂದು ಗದ್ಗದಿತರಾಗಿ ಹೇಳಿದರು .
ಲಿಂಗಾಯತ ಧರ್ಮವು ಸಂಪೂರ್ಣ ಅವೈದಿಕ ಮತ್ತು ಪ್ರಗತಿಪರ ಚಿಂತನೆಗಳಿಂದ ಕೂಡಿದ ಸಿದ್ಧಾಂತವೆಂದು ಮನಗಂಡ ಡಾ ಸಿದ್ಧಲಿಂಗ ಶ್ರೀಗಳು ಹಲವಾರು ಬಾರಿ ಲಿಂಗಾಯತ ಧರ್ಮದಲ್ಲಿನ ಇಂದಿನ ಪೌರೋಹಿತ್ಯ ಮತ್ತು ಸಂಪ್ರದಾಯಗಳ ಬಗ್ಗೆ ತಮ್ಮ ಬಿಚ್ಚು ಮನಸ್ಸಿನ ನುಡಿಗಳನ್ನು ಹೇಳಿದಾಗ ,ಕೆಲ ಸಂಪ್ರದಾಯವಾದಿಗಳ ಕೋಪಕ್ಕೆ ಗುರಿಯಾಗಿದ್ದರು ಶ್ರೀಗಳು .ಹೀಗಾಗಿ ಒಂದು ಸಲ ಶಿವಯೋಗ ಮಂದಿರದ ಕಾರ್ಯಕ್ರಮವೊಂದರಲ್ಲಿ ಡಾ ಸಿದ್ಧಲಿಂಗ ಶ್ರೀಗಳ ಕಾರಿಗೆ ಕೆಲ ಜಾತಿವಾದಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ಕಲ್ಲು ಎಸೆದು ತಮ್ಮ ಸಣ್ಣತನವನ್ನು ತೋರಿದರು. ಇಂತಹ ಘಟನೆಯನ್ನು ಖಂಡಿಸುವ ನಾಡಿನ ಅನೇಕ ಪ್ರಗತಿಪರರು ಮುಂದಾದಾಗ ಡಾ ಸಿದ್ಧಲಿಂಗ ಶ್ರೀಗಳು ಇಂತಹ ಸಣ್ಣ ಕಾರಣಕ್ಕೆ ಪ್ರಚಾರ ನೀಡುವುದು ಸರಿಯಲ್ಲ ಎಂದು ಎಲ್ಲರಿಗು ಸಮಜಾಯಿಸಿ ಹೇಳಿದರು. ಆದರೆ ಕೆಲ ಪ್ರಭಾವಿ ಜಗದ್ಗುರುಗಳು ಬಸವ ತತ್ವ ಪ್ರಚಾರಕರು ಗದುಗಿನ ಶ್ರೀಗಳ ಕಾರಿಗೆ ಕಲ್ಲು ಎಸೆತ ಪ್ರಕರಣವನ್ನು ಒಂದು ವ್ಯಂಗ್ಯವಾಗಿ ಟೀಕಿಸಿ ತಮಗೆ ಮತ್ತು ತಮ್ಮ ಕಾರಿಗೆ ಎಂದು ಕಲ್ಲು ಬಿದ್ದಿಲ ಎಂದು ತಮ್ಮ ಸಾಚಾತನದ ಪ್ರದರ್ಶನ ಮಾಡಿದರು.
ಲಿಂಗಾಯತ ಧರ್ಮ ಮಾನ್ಯತೆಯ ಸಭೆಯಲ್ಲಿ ಉಗ್ರವಾಗಿ ತಮ್ಮ ತತ್ವ ಚಿಂತನೆ ಪ್ರತಿಪಾದನೆ ಮಾಡುವ ದಿಟ್ಟ ಧೀಮಂತ ನಾಯಕರು ,2017 ಮತ್ತು 2018 ಲಿಂಗಾಯತ ಧರ್ಮ ಚಿಂತನ ಸಭೆ ಬೆಂಗಳೂರಿನಲ್ಲಿಜರುಗಿದಾಗ ನಾಡಿನ ಬೇರೆ ಬೇರೆ ಬಸವ ಪರಂಪರೆಯ ಜಗದ್ಗುರುಗಳು ಹಿಂದೇಟು ಹಾಕಿದಾಗ ಅದರ ನೇತೃತ್ವ ವಹಿಸಿ ಹೋರಾಟವನ್ನು ಜೀವಂತವಾಗಿಟ್ಟ ಶ್ರೇಷ್ಠರು .
ರಾಗ ದ್ವೇಷ ಅಸೂಹೆ ಇವರ ಹತ್ತಿರ ಗಾವುದ ದೂರ ಚಿಕ್ಕವರಿರಲಿ ದೊಡ್ಡವರಿರಲಿ ಅತ್ಯಂತ ಸಲುಗೆ ಮತ್ತು ಪ್ರೀತಿಯಿಂದ ಮಾತನಾಡಿಸುತ್ತಿದ್ದರು . ಬಸವ ಟಿವಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ನೆರವು ನೀಡಿದರು ಅಲ್ಲದೆ ಬೆಂಗಳೂರಿನಲ್ಲಿ ಅದಕ್ಕೊಂದು ಉತ್ತಮ ವಿಶಾಲವಾದ ಜಾಗೆಯನ್ನು ಕೊಟ್ಟಿದ್ದು ಅವರ ಬಸವ ಭಕ್ತಿಗೆ ಉತ್ತಮ ನಿದರ್ಶನ .
ನಾಗಮೋಹದಾಸ ವರದಿಗೆ ಅನುಕೂಲವಾಗುವಂತೆ ಅಂದಿನ ಸಭೆಗೆ ಶ್ರೀ ಶಿವಾನಂದ ಪಟ್ಟಣಶೆಟ್ಟಿ ಅವರ ಮೂಲಕ ಹಲವಾರು ಪುಸ್ತಕ ಲಿಂಗಾಯತ ಧರ್ಮ ಮಾನ್ಯತೆಗೆ ಬೇಕಾದ ಆಧಾರ ಗ್ರಂಥಗಳನ್ನು ಕಳುಹಿಸಿಕೊಟ್ಟಿದ್ದರು. ತದ ನಂತರ ಡಾ ಪಿ ಬಿ ದೇಸಾಯಿಯವರ ಪುಸ್ತಕ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ನನಗೆ ಕಳುಹಿಸಿಕೊಡುತ್ತಿದ್ದರು .
ಕಪ್ಪತ್ತಗುಡ್ಡ ಉಳಿಸಿ ಪರಿಸರ ಪ್ರಜ್ಞೆ ಮತ್ತು ಸಮಾಜ ಮುಖಿ ಕಾರ್ಯಕ್ಕೆ ಮಠದ ಹೊಲಗಳನ್ನು ಕೊಟ್ಟ ಮಹಾ ಧೀಮಂತ ಚೇತನ.
ನಾನು ಅವರಿಗೆ ಒಬ್ಬ ಶ್ರೀಗಳು ಜಗದ್ಗುರು ಎನ್ನುವುದಕ್ಕಿಂತಲೂ ಬಸವ ತತ್ವಕ್ಕಾಗಿ ದುಡಿದ ಶ್ರೇಷ್ಠ ಮಹಾ ಮಾನವತಾವಾದಿ ಎಂದೇ ಪರಿಗಣಿಸಿದ್ದೇನೆ . ಅವರ ನೆನಪು ಮತ್ತು ಕಾರ್ಯ ಕ್ಷಮತೆ ನಮಗೆ ದಾರಿ ದೀಪ . ಡಾ ಸಿದ್ಧಲಿಂಗ ಶ್ರೀಗಳ ಜೀವನ ಮತ್ತು ಸಾಧನೆ ನಮ್ಮೆಲ್ಲರಿಗೂ ದಾರಿದೀಪವಾಗಿದೆ.
-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
9552002338