ಷಟಸ್ಥಲಗಳು
ಜ್ಞಾನದಿಂದ ಅನುಪಮ ಸುಜ್ಞಾನದವರೆಗೆ ಕೊಂಡೊಯ್ಯುವ ಚಿಂತಾಮಣಿ
ಇಡೀ ಪ್ರಪಂಚ ಅರಿವಿನ ಕತ್ತಲೆಯಲ್ಲಿದ್ದಾಗ ಅದ್ಭುತ ತತ್ವ ಸಿದ್ಧಾಂತಗಳನ್ನು ನಾಡಿಗೆ ನೀಡಿ ಬೆಳಕನ್ನಿತ್ತ ಶಿವನ ಪ್ರಕಾಶ ಅದು 12 ನೇ ಶತಮಾನ. ಜಗತ್ತಿನಲ್ಲಿ ಭಾಷೆ ಎನ್ನುವುದು ಸಂಜ್ಞೆಗಳ ರೂಪದಲ್ಲಿದ್ದ “Creole” ನ ಕಾಲಘಟ್ಟದಲ್ಲಿ ಕನ್ನಡದಲ್ಲಿ ಅತ್ಯಂತ ಸಮೃದ್ಧ ಮತ್ತು ವಿಪುಲವಾದ ಸಾಹಿತ್ಯ ನಿರ್ಮಾಣವಾಗಿದ್ದು 12 ನೇ ಶತಮಾನದಲ್ಲಿ. ಆ ಕಾಲಘಟ್ಟದಲ್ಲಿದ್ದ ಶರಣ ಸಂಸ್ಕೃತಿ, ಶರಣ ಪರಂಪರೆ, ಶರಣರ ಸಾಮಾಜಿಕ ಜನ-ಜೀವನ ನೆನೆಸಿಕೊಂಡರೆ ಹೃದಯದಲ್ಲಿ ಒಂದು ತಂಗಾಳಿಯ ಸಿಂಚನ ಈಗಲೂ ಆಗುತ್ತದೆ. ಶ್ರೇಣೀಕೃತ ಸಮಾಜದಲ್ಲಿ ವಿವಿಧ ಸ್ಥರಗಳಲ್ಲಿದ್ದ ಶರಣರು ಅಂತರಂಗ ಮತ್ತು ಬಹಿರಂಗದ ಸದಾಚರಣೆಯಿಂದ ಜೀವನವನ್ನು ಬೆಳಗಿಸಿಕೊಂಡಿದ್ದರು. ಶರಣರ ಜೀವನವನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ ಏಕೆಂದರೆ ಅಂಥ ತತ್ವ ಸಿದ್ಧಾಂತಕ್ಕೆ ಶರಣರು ಯಾವಾಗಲೂ ಬದ್ಧರಾಗಿದ್ದರು.
ಶರಣ ಸಿದ್ಧಾಂತ ಮತ್ತು ನಡೆ-ನುಡಿಗಳು ಹಾಗು ಭಕ್ತಿ-ಜ್ಞಾನಗಳ ಸಾಮರಸ್ಯವನ್ನು ಜೋಡಿಸುವ ತತ್ವಗಳೇ “ಷಟಸ್ಥಲಗಳು”. 12 ನೇ ಶತಮಾನದ ಶರಣರು ಈ ದಾರಿಯಲ್ಲಿ ನಡೆದು ತಮ್ಮ ಗುರಿಯನ್ನು ಸಾಧಿಸಿದವರು. ಶ್ರೇಣೀಕೃತ ಸಮಾಜದಲ್ಲಿದ್ದ ವರ್ಣ-ವರ್ಗ ಭೇಧಗಳನ್ನು ಮೀರಿ ಈ ತತ್ವಗಳನ್ನು ಅಪ್ಪಿಕೊಂಡರು ಮತ್ತು ಒಪ್ಪಿಕೊಂಡರು. ಶರಣ ಸಿದ್ಧಾಂತದಲ್ಲಿ ಷಟಸ್ಥಲಗಳು ಅವಿಭಾಜ್ಯ ಅಂಗಗಳು ಮತ್ತು ಆತ್ಮೋನ್ನತಿಗೆ ಮಾರ್ಗದರ್ಶನ ನೀಡುತ್ತವೆ.
ಸಾಮಾಜಿಕ, ಆಧ್ಯಾತ್ಮಿಕ ಲೋಕದಲ್ಲಿ ಬರುವ ಅನೇಕ ದಾರ್ಶನಿಕ ಸಾಹಿತ್ಯಗಳಲ್ಲಿ ಕೆಲವೊಂದು ವಿಶಿಷ್ಠ ಪಾರಿಭಾಷಿಕ ಪದಗಳಿರುವಂತೆ ಶರಣ ಸಿದ್ಧಾಂತ ಮತ್ತು ವಚನ ಸಾಹಿತ್ಯದಲ್ಲಿಯೂ ಸಹ ವಿಶಿಷ್ಠ ಪಾರಿಭಾಷಿಕ ಶಬ್ದಗಳ ಬಳಕೆಯಾಗಿವೆ. ಹಾಗೆಯೇ ಷಟಸ್ಥಲದಲ್ಲಿ ಎರಡು ಪದಗಳಿವೆ. ಷಟ್ ಅಂದರೆ ಆರು ಮತ್ತು ಸ್ಥಲ ಅಂದರೆ ಮೆಟ್ಟಿಲು ಅಥವಾ ಹಂತ. literally, ಸಾಹಿತ್ಯಿಕವಾಗಿ ಸ್ಥಲ ಅಂದರೆ:
1. ನೆಲ, ಭೂಮಿ
2. ಜಮೀನು, ಹೊಲ
3. ಗ್ರಂಥದ ಒಂದು ಭಾಗ ಅಥವಾ ಪರಿಚ್ಛೇದ
4. ಮೆಟ್ಟಿಲು, ಹಂತ
ವಚನ ಸಾಹಿತ್ಯದಲ್ಲಿ ಸ್ಥಲದ ಪರಿಭಾಷೆ ಅನುಪಮವಾಗಿದೆ. ಸೃಷ್ಠಿ-ಸ್ಥಿತಿ-ಲಯ ಮತ್ತು ಸತ್-ಚಿತ್-ಆನಂದಗಳನ್ನು ಒಳಗೊಂಡ ಶಬ್ದವಾಗಿದೆ. “ಸ್ಥ” ಎನ್ನುವುದು ಸ್ಥಾನ ಸೂಚಕವಾದ ಸ್ಥಿತಿಯನ್ನು ಸೂಚಿಸಿದರೆ “ಲ” ಎನ್ನುವುದು ಲಯ ಸೂಚಕವಾಗಿದೆ. In the nut shell, ಷಟಸ್ಥಲಗಳು ಸಾಧಕನ ಹಾದಿಯಲ್ಲಿ ಬರುವ ಆಧ್ಯಾತ್ಮಿಕ ಅನುಭವದ ವಿಕಾಸದ ತಳಹದಿಯುಳ್ಳ ವಿವೇಚನಾಯುಕ್ತ ತತ್ವಗಳಾಗಿವೆ.
12 ನೇ ಶತಮಾನ ವಚನಗಳ ಸೃಷ್ಟಿಯ ಯುಗವಾದರೆ 15 ನೇ ಶತಮಾನ ವಚನಗಳ ಸಂಗ್ರಹ, ಸಂಕಲನ, ವ್ಯವಸ್ಥಿತವಾಗಿ ಜೋಡಿಸುವ ಕಾರ್ಯ ಮತ್ತು ವಚನಗಳನ್ನು ವ್ಯಾಖ್ಯಾನಿಸುವ ಯುಗವೆಂದು ಹೇಳಬಹುದು. ಹೀಗೆ ಸಂಗ್ರಹಿಸಿದ ವಚನಗಳ ಸಂಕಲನವನ್ನು ಷಟಸ್ಥಲಗಳ ಅನುಸಾರವಾಗಿ ಜೋಡಿಸಿದ್ದನ್ನು ನಾವು ಕಾಣಬಹುದು.
ಷಟಸ್ಥಲದಲ್ಲಿ ಆರು ತತ್ವಗಳನ್ನು ನಿರೂಪಿಸಿದ್ದಾರೆ.
1. ಭಕ್ತಸ್ಥಲ
2. ಮಾಹೇಶ್ವರಸ್ಥಲ
3. ಪ್ರಸಾದಿಸ್ಥಲ
4. ಪ್ರಾಣಲಿಂಗಿಸ್ಥಲ
5. ಶರಣಸ್ಥಲ
6. ಐಕ್ಯಸ್ಥಲ
ಶರಣ ಬಹುರೂಪಿ ಚೌಡಯ್ಯನವರ ಈ ವಚನ ಷಟಸ್ಥಲದ ವ್ಯಾಖ್ಯಾನವನ್ನು ನಿರೂಪಿಸುತ್ತದೆ.
ಷಡುಸ್ಥಲ ಷಡುಸ್ಥಲವೆಂದು|ನುಡಿವುತ್ತಿರ್ಪಿರಿ ಕೇಳಿರಣ್ಣಾ ||
ಒಬ್ಬ ರಾಯನ ಕೆಳಗೆ | ಆರು ಬಲ ಉಂಟಾಗಿಪ್ಪಂತೆ ||
ಆ ಪರಶಿವತತ್ವಕ್ಕೆ ಪ್ರಾಣಪದವಪ್ಪರು | ಭಕ್ತರುಂಟು ಆ ಭಕ್ತರಿಗೆ || ಗುರುಲಿಂಗಜಂಗಮದ | ದಾಸೋಹ ಪಾದೋದಕ ಪ್ರಸಾದ ||
ಪಂಚ ಸದಾಚಾರ|ಇಂತಿವೆಲ್ಲವೂ ಪ್ರಾಣಪದವಾಗಿಪ್ಪವು ||
ಇವರೆಲ್ಲರಿಗೆಯೂ | ಶರಣಸತಿ ಲಿಂಗಪತಿಗಳೆಂಬವೆ ||
ಪ್ರಾಣಪದವಾಗಿ ರೇಕಣ್ಣಪ್ರಿಯ|ನಾಗಿನಾಥನಲ್ಲಿ ನಿಂದರು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1375 / ವಚನ ಸಂಖ್ಯೆ-181)
ನಿರಾಕಾರ ಶಿವನನ್ನು ಆರಾಧಿಸಿ ಅಂತರಂಗದ ಅರಿವನ್ನು ಮೂಡಿಸುವ ಸಾಧನೆಯ ಹಾದಿಯಲ್ಲಿರುವ ರಾಯ ಅಂದರೆ ಸಾಧಕನಿಗೆ ಷಟಸ್ಥಲಗಳೆಂಬ ಆರು ಬಲಗಳಿವೆ ಅಥವಾ ಹಂತಗಳಿವೆ. ಈ ಹಂತಗಳ ಅನುಷ್ಠಾನಕ್ಕೆ ಪಂಚಾಚಾರ, ಅಷ್ಟಾವರಣಗಳೆಂಬ ತತ್ವಗಳನ್ನು ಮೈಗೂಡಿಸಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯುವುದೇ ಷಟಸ್ಥಲ. ಅಂತರಂಗದಲ್ಲಿ ಕರುಣಾಮೂರ್ತಿಯಾಗಿ ಅಂದರೆ ಸತಿಯಾಗಿ, ಬಹಿರಂಗದಲ್ಲಿ ಕಾಯಕ ನಿಷ್ಠನಾಗಿ ಅಂದರೆ ಪತಿಯಾಗಿ ತನ್ನನ್ನು ತಾನು ಸಾಧನೆಯ ಹಾದಿಯಲ್ಲಿ ನಡೆಯುವುದೇ ಷಟಸ್ಥಲ. ಇದು ಶರಣ ಬಹುರೂಪಿ ಚೌಡಯ್ಯನವರು ಈ ವಚನದ ಮೂಲಕ ಷಟಸ್ಥಲಕ್ಕೆ ಕೊಡುವ ವ್ಯಾಖ್ಯಾನ.
ಷಟಸ್ಥಲ ಕೇವಲ ಸಿದ್ಧಾಂತವಾಗಿ ಉಳಿಯದೇ ಉಜ್ವಲ ಸಾಧನೆಯಿಂದ ಜೀವಂತ ಶಕ್ತಿಯಾಗಿ ಪರಿಣಮಿಸಿತು. Continuous Process ಅಂದರೆ ತತ್ವಾನುಷ್ಠಾದ ಆಚರಣೆಯಲ್ಲಿ ಅಂತಿಮ ಗುರಿಯವರೆಗೂ ನಡೆಯುವ ನಿರಂತರ ಪ್ರಕ್ರಿಯೆ. ಈ ವಚನದ ಮೂಲಕ ಆಚಾರಕ್ಕೆ ಬಸವಣ್ಣನವರು ಎಷ್ಟು ಮಹತ್ವ ಕೊಟ್ಟಿದ್ದರೆನ್ನುವುದು ತಿಳಿದು ಬರುತ್ತದೆ.
ಆಚಾರವರಿಯಿರಿ | ವಿಚಾರವರಿಯಿರಿ ||
ಜಂಗಮಸ್ಥಲ | ಲಿಂಗ ಕಾಣಿರಯ್ಯಾ ||
ಜಾತಿಭೇದವಿಲ್ಲ ಸೂತಕವಿಲ್ಲ | ಅಜಾತಂಗೆ ಕುಲವಿಲ್ಲ ||
ನುಡಿದಂತೆ ನಡೆಯದಿದ್ದಡೆ | ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-41 / ವಚನ ಸಂಖ್ಯೆ-418)
ಶರಣ ಸಿದ್ಧಾಂತದ ಮೂಲ ಬೇರು ಆಚಾರ-ವಿಚಾರ, ನಡೆ-ನುಡಿಯಲ್ಲಿದೆ ಎನ್ನುವದನ್ನು ಈ ವಚನ ಸೂಚಿಸುತ್ತದೆ. ಕ್ರಿಯಾ ಸೂಚಕವನ್ನು ಬೆಳಗಿಸುವ ಶಿವನ ಪ್ರಕಾಶವೇ ಈ ತತ್ವಗಳು ಮತ್ತು ಷಟಸ್ಥಲದ ಮೂಲ ಸೆಲೆಗಳು.
ಕ್ರಿಯೆ ಮತ್ತು ಜ್ಞಾನ ಸಂಗಮದ ಸಾಮರಸ್ಯವಿರಬೇಕೆಂದು ಚೆನ್ನಬಸವಣ್ಣನವರ ಈ ವಚನ ನಿರೂಪಿಸುತ್ತದೆ.
ಕಂಥೆಯೊಳಗಣ ಕಪಟವ ಹರಿದಲ್ಲದೆ | ಕಾಯ [ನಿರ್ವಂಚಕ] ನಲ್ಲ || ಕಪ್ಪರದೊಳಗಣ ಅಪ್ಯಾಯನವ ಹರಿದಲ್ಲದೆ | ಜೀವ [ನಿರ್ಭಾವಕ] ನಲ್ಲ || ಕಣ್ಣಿನೊಳಗಣ ಕಾಳಿಕೆ ಹಿಂಗಿದಲ್ಲದೆ | ಜ್ಞಾನಾನುಭಾವಿಯಲ್ಲ ||
ಕಾಯದೊಳಗಿನ | ಕಟ್ಟಿಗೆ ಮುರಿದು ||
ಮಾಯದೊಳಗಣ | ಕಂಥೆಯ ಹರಿದು ||
ಮನದೊಳಗಣ | ಕಪ್ಪರವನೊಡೆದು ||
ಸುಳಿದಾಡುವ | ಕಣ್ಣ ಕಿತ್ತು ||
ನಿಶ್ಚಯ ನಿಜದಲ್ಲಿ | ಚರಿಸುವ ಜ್ಞಾನಜಂಗಮಕ್ಕೆ ||
ನಮೋ ನಮೋ ಎಂಬೆ | ಕೂಡಲಚೆನ್ನಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-423 / ವಚನ ಸಂಖ್ಯೆ-1118)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಕಂಥೆ : ದೇಹ, ತನು, ಜೋಳಿಗೆ, ಕಪನಿ, ಹರುಕು ಬಟ್ಟೆ
ಕಪ್ಪರ : ಊಟದ ತಟ್ಟೆ
ಅಪ್ಯಾಯ : ಹಿತಕರ
ಕಾಳಿಕೆ : ಕತ್ತಲೆ, ದೋಷ, ಕಪ್ಪು
ಚರಿ : ಜಂಗಮ, ಜ್ಞಾನ
ಕಂಥೆಯೊಳಗೆ ಅಂದರೆ ದೇಹ, ನಮ್ಮಲ್ಲಿ ಕಪಟ ವಂಚನೆಗಳ ವಿಚಾರಗಳು ಸುಳಿಯಬಾರದು. ಕಪ್ಪರ ಅಂದರೆ ಊಟದ ತಟ್ಟೆಯಲ್ಲಿನ ಭೋಜನವನ್ನು ಹಿತ-ಮಿತವಾಗಿ ತೆಗೆದುಕೊಳ್ಳಬೇಕು. ನಾವು ನೋಡುವ ದೃಷ್ಟಿ ಕಲುಷಿತವಾಗಿದ್ದರೆ ಜ್ಞಾನ ಸಿಗದು. ಇಂಥ ಕಲ್ಮಷರಹಿತವಾದ ಜೀವನ ಶರಣರದ್ದಾಗಿರಬೇಕು. ಆವಾಗಲೇ ನಿರಾಕಾರ ಶಿವನಾದ ಕೂಡಲಸಂಗಮದೇವನ ದರ್ಶನವಾಗಿ ಅಂತರಂಗದಲ್ಲಿ ಅರಿವು ಉಂಟಾಗುವುದು. ಇದು ಶರಣರ ನಡೆ-ನುಡಿಗಳ ನಿರೂಪಣೆ ಮತ್ತು ಷಟಸ್ಥಲಗಳನ್ನು ಅನುಷ್ಠಾನಕ್ಕೆ ತಯಾರು ಮಾಡಿಕೊಳ್ಳುವಲ್ಲಿನ ಮೂಲ ಹೆಜ್ಜೆಗಳು.
ಷಟಸ್ಥಲದ ಆರೂ ತತ್ವಗಳ ಗುಣ-ಲಕ್ಷಣಗಳನ್ನು ಶರಣ ಸಿದ್ಧರಾಮೇಶ್ವರರು ತಮ್ಮ ಈ ಕೆಳಗಿನ ಎರಡು ವಚನಗಳಲ್ಲಿ ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ.
ಭಕ್ತನಾದ ಬಳಿಕ | ಜಂಗಮದ ಗುಣವನರಸಲೇಕೋ? ||
ಮಹೇಶನಾದ ಬಳಿಕ | ವಿಷಯಕ್ಕೆಳಸುವುದದೇಕೋ? ||
ಪ್ರಸಾದಿಯಾದ ಬಳಿಕ | ಕಂಡುದಕ್ಕೆ ಕೈದುಡುಕುವುದೇಕೋ? ||
ಪ್ರಾಣಲಿಂಗಿಯಾದ ಬಳಿಕ | ಪ್ರಪಂಚದ ಹಂಗದೇಕೋ? ||
ಶರಣನಾದ ಬಳಿಕ | ಮೋಕ್ಷದ ಹಂಗೇಕೋ? ||
ಐಕ್ಯನಾದ ಬಳಿಕ | ಕಪಿಲಸಿದ್ಧಮಲ್ಲಯ್ಯನ ನಾಮಸ್ಮರಣೆಯದೇಕೋ? ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-669 / ವಚನ ಸಂಖ್ಯೆ-1172)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಕೈದುಡುಕು: ಕೈ ಹಾಕು
ಭಕ್ತ ಮಾಹೇಶ್ವರ | ಪ್ರಸಾದಿ ಪ್ರಾಣಲಿಂಗಿ ||
ಶರಣ ಐಕ್ಯನೆಂದು | ಹೆಸರಿಟ್ಟುಕೊಂಬಿರಿ ||
ಆರು ಪರಿಯಲ್ಲಿ | ಆರಾದವನರಿಯಿರಿ ||
ಭಕ್ತನಾದಡೇಕೆ | ಭವದ ಬೇರು? ||
ಮಾಹೇಶ್ವರನಾದಡೇಕೆ | ಪ್ರಳಯಕ್ಕೊಳಗಿಹ? ||
ಪ್ರಸಾದಿಯಾದಡೇಕೆ | ಇಂದ್ರಿಯವೈದ ಅನಿಗ್ರಹಿಯಾಗಿಹ? ||
ಪ್ರಾಣಲಿಂಗಿಯಾದಡೇಕೆ | ಉತ್ಪತ್ತಿ ಸ್ಥಿತಿ ಲಯಕೊಳಗಾಗಿಹ? ||
ಶರಣನಾದಡೇಕೆ | ಉಪಭೋಧೆಗೊಳಗಾಗಿಹ? ||
ಐಕ್ಯನಾದಡೇಕೆ | ಇಹ-ಪರವನರಿದಿಹ? ||
ಇವೆಲ್ಲ ಠಕ್ಕ | ಇವೆಲ್ಲ ಅಭ್ಯಾಸ ||
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ | ನಿಮ್ಮ ಷಡುಸ್ಥಲವಭೇದ್ಯ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-637 / ವಚನ ಸಂಖ್ಯೆ-829)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಠಕ್ಕ: ಮೋಸ, ವಂಚನೆ
“ಭಕ್ತ” ನಾಗಬೇಕಾದರೆ ಮೊಟ್ಟಮೊದಲು ಪೂರ್ವಾಶ್ರಯ ಕಳೆದುಕೊಳ್ಳುವುದರ ಜೊತೆಗೆ ಮಲತ್ರಯಗಳನ್ನು ವರ್ಜಿಸಿ ಭವದ ಬೇರನ್ನು ಕಡಿದುಕೊಳ್ಳಬೇಕಾಗುತ್ತದೆ.
ಅಂತರಂಗದ ಅರಿವಿನ ಮೂಲಕ ತಾನೇ “ಮಹೇಶ್ವರ” ನಾಗುವ ಪ್ರಕ್ರಿಯೆಯಲ್ಲಿ ಶರಣರು ಮನಃಶಾಂತಿಯನ್ನು ಕದಡುವ, ಸ್ವಾಸ್ಥ್ಯಕ್ಕೆ ಮುಳ್ಳಾಗುವ ಭಾವನೆಗಳ ಅರಿಷಡ್ವರ್ಗಗಳು ಅಂದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳನ್ನು ತ್ಯಜಿಸಬೇಕು.
“ಪ್ರಸಾದಿ” ಯಾಗಬೇಕಾದರೆ ನಮ್ಮಲ್ಲಿರುವ ಅತ್ಯಂತ ಸೂಕ್ಷ್ಮವಾದ ನಾಲ್ಕು ಇಂದ್ರಿಯಗಳಾದ ಮನಸ್ಸು, ಬುದ್ಧಿ, ಚಿತ್ತ, ಅಹಂಕಾರಗಳೆಂಬ ಕರಣ ಚತುಷ್ಟಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರಬೇಕು.
“ಪ್ರಾಣಲಿಂಗಿ” ಯಾಗಬೇಕಾದರೆ ಉತ್ಪತ್ತಿ ಸ್ಥಿತಿ ಲಯಕಾರಕಗಳಾದ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು, ಪೃಥ್ವಿಗಳನ್ನು ಗೌರವಿಸಬೇಕಾದದ್ದು ಶರಣರ ಕರ್ತವ್ಯ. ಪಂಚಸೂತಕಗಳಾದ ಜಾತಿ, ಮರಣ, ಉಚ್ಛಿಷ್ಟ (ಜಂಗಮರಿಗೆ ಅರ್ಪಿಸಿ ಉಳಿದದ್ದೆಲ್ಲವೂ ಎಂಜಲು ಎಂಬ ಭಾವ), ಜನನ, ರಜಗಳ ಆಚರಣೆಯನ್ನು ಮಾಡಬಾರದೆಂದು ಉಲ್ಲೇಖವಾಗಿದೆ. ಸೂತಕಗಳನ್ನು ನಿರಾಕರಿಸಿ, ಲಿಂಗಧಾರಣೆಯಿಂದ ಎಲ್ಲ ಮೈಲಿಗೆಗಳನ್ನೂ ಹೋಗಲಾಡಿಸುತ್ತದೆ ಎಂದು ಹೇಳಿರುವರು. ಹೀಗೆ ಅಂಧ ಶ್ರದ್ಧೆಗಳ ಅಡಿಯಲ್ಲಿ ನಡೆಯುವ ಶೋಷಣೆಯನ್ನು ತಪ್ಪಿಸಬೇಕು.
“ಶರಣ” ನಾಗುವ ಪಥದಲ್ಲಿ ಸಾಗುವವನು ಅಷ್ಟಮದಗಳಾದ ಕುಲಮದ, ಛಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ರಾಜಮದ, ತಪೋಮದಗಳನ್ನು ಜಯಿಸಿದವನಾಗಿರಬೇಕೆಂದು ಹೇಳಿದ್ದಾರೆ.
“ಐಕ್ಯ” ನಾಗುವ ಪಥದಲ್ಲಿ ಇಹ-ಪರವೆಂಬ ಮೋಹವನ್ನು ಬಿಡಬೇಕು. ಶರಣನು ಕ್ರೋಧರಹಿತ, ನಿರ್ಲೋಭಿ, ನಿರ್ಮೋಹಿ ಆಗಿರಬೇಕು. ಅಷ್ಟಮದಂಗಳನ್ನು ಮೆಟ್ಟಿನಿಲ್ಲುವವನಾಗಿರಬೇಕು. ಹೀಗೆ ಸಾಧಕನು ತನ್ನಲ್ಲಡಗಿದ ಅರಿಷಡ್ವರ್ಗಗಳ ಮೆಟ್ಟಿನಿಂತು, ಲೌಕಿಕದಲ್ಲಿ ಜೀವನಾಗಿ ಕಂಡರೂ ಅಲೌಕಿಕ ಸಿದ್ಧನಾಗಿ (ಶಿವಸ್ವರೂಪಿಯಾಗಿ) ತನ್ನ ಗುರಿಯನ್ನು ಮುಟ್ಟಬೇಕು.
ಅಂಗ ಆಚಾರದಲ್ಲಿ | ಸಂಗವಾಯಿತ್ತು ||
ಆಚಾರ ಪ್ರಾಣದಲ್ಲಿ | ಸಂಗವಾಯಿತ್ತು ||
ಪ್ರಾಣ ಲಿಂಗದಲ್ಲಿ | ಸಂಗವಾಯಿತ್ತು ||
ಪ್ರಾಣಕ್ಕೆ | ಪ್ರಾಣವಾಗಿ ||
ಉಭಯಪ್ರಾಣ | ಕೂಡಲಚೆನ್ನಸಂಗಮದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-335 / ವಚನ ಸಂಖ್ಯೆ-383)
ಸಾಧನೆಯ ಪಥದಲ್ಲಿ ಷಟಸ್ಥಲಗಳು ಕ್ರಮವಾಗಿ ಅನುಸರಿಸುವುದು ಸಾಮಾನ್ಯ ಮಾದರಿ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಇವು ಸಾಧಕನು ದಾರಿಯನ್ನು ಕ್ರಮಿಸುವ ಆರು ಹಂತಗಳು (Stages). ಗುರು-ಲಿಂಗ-ಜಂಗಮರಿಗೆ ತಾನು ಭೃತ್ಯನೆಂದು ಆಚರಿಸುವಾಗ ಭಕ್ತಸ್ಥಲದ ಅನುಷ್ಠಾನವಾಗುತ್ತದೆ. ಗುರು-ಲಿಂಗ-ಜಂಗಮದಲ್ಲಿ ನಿಷ್ಠೆ ಇರುವಾಗ ಮಹೇಶ್ವರ ಸ್ಥಲದ ಅನುಷ್ಠಾನವಾಗುತ್ತದೆ. ಗುರು-ಲಿಂಗ-ಜಂಗಮರಲ್ಲಿ ಸರ್ವಸ್ವವನ್ನು ಅರ್ಪಿಸಿದಾಗ ಪ್ರಸಾದಿಸ್ಥಲದ ನಿರೂಪಣೆಯಾಗುತ್ತದೆ. ಪರಿಪೂರ್ಣ ಸಮಷ್ಠಿಯಲ್ಲಿ “ಲಿಂಗಮಯಂ ಇದಂ ಜಗತ್” ಎಂದು ಲಿಂಗತತ್ವದ ಅರಿವುಂಟಾದಾಗ ಪ್ರಾಣಲಿಂಗಿಸ್ಥಲದ ಅನುಷ್ಠಾನವಾಗುತ್ತದೆ. ತಾನೇ ಲಿಂಗ ಸ್ವರೂಪಿಯಾಗಿದ್ದೇನೆ ಎಂಬ ಅಂತರಂಗದ ಅರಿವು ಅಥವಾ ಜ್ಞಾನವುಂಟಾದಾಗ ಶರಣಸ್ಥಲದ ಆರೋಹಣವಾಗುತ್ತದೆ. ಇನ್ನು ಅಂತಿಮವಾಗಿ ತಾನೇ ಲಿಂಗವಾಗಿದ್ದೇನೆ ಎನ್ನುವ ಭಾವ ಬಂದಾಗ ಐಕ್ಯಸ್ಥಲದಲ್ಲಿ ಸಾಧಕ ಸಂಚರಿಸುತ್ತಾನೆ. ಈ ರೀತಿಯಾಗಿ ಸ್ಥಲಗಳು ಬಹಿರಂಗದಲ್ಲಿ ಆಚರಣೆಯಲ್ಲಿದ್ದರೂ ಅಂತರಂಗದಲ್ಲಿ ಏಕರೂಪತೆ ಬೆಳೆದುಕೊಂಡು ಬರುತ್ತದೆ.
ಇದು ಇಷ್ಟಕ್ಕೆ ನಿಲ್ಲದೇ ಒಂದೊಂದು ಸ್ಥಲದಲ್ಲಿ ಮತ್ತೆ ಆರು ಉಪ ಸ್ಥಲಗಳನ್ನು ಹೇಳಿದ್ದಾರೆ. ಭಕ್ತನ ಭಕ್ತ, ಭಕ್ತನ ಮಾಹೇಶ್ವರ, ಭಕ್ತನ ಪ್ರಸಾದಿ, ಭಕ್ತನ ಪ್ರಾಣಲಿಂಗಿ, ಭಕ್ತನ ಶರಣ, ಭಕ್ತನ ಐಕ್ಯ ಹೀಗೆ ಆರು ಉಪಸ್ಥಲಗಳನ್ನು ನಿರೂಪಿಸಿದ್ದಾರೆ. ಹೀಗೆ ಒಟ್ಟು ಮೂವತ್ತಾರು ಸ್ಥಲಗಳ ವಿವರಣೆ ಬರುತ್ತದೆ.
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ಭಕ್ತ ಭಕ್ತನ
ಭಕ್ತಸ್ಥಲ ಭಕ್ತನ
ಮಹೇಶಸ್ಥಲ ಭಕ್ತನ
ಪ್ರಸಾದಿಸ್ಥಲ ಭಕ್ತನ ಪ್ರಾಣಲಿಂಗಿಸ್ಥಲ ಭಕ್ತನ ಶರಣಸ್ಥಲ ಭಕ್ತನ ಐಕ್ಯಸ್ಥಲ
ಮಹೇಶ ಮಹೇಶನ
ಭಕ್ತಸ್ಥಲ ಮಹೇಶನ
ಮಹೇಶಸ್ಥಲ ಮಹೇಶನ ಪ್ರಸಾದಿಸ್ಥಲ ಮಹೇಶನ ಪ್ರಾಣಲಿಂಗಿಸ್ಥಲ ಮಹೇಶನ ಶರಣಸ್ಥಲ ಮಹೇಶನ ಐಕ್ಯಸ್ಥಲ
ಪ್ರಸಾದಿ ಪ್ರಸಾದಿಯ
ಭಕ್ತಸ್ಥಲ ಪ್ರಸಾದಿಯ
ಮಹೇಶಸ್ಥಲ ಪ್ರಸಾದಿಯ ಪ್ರಸಾದಿಸ್ಥಲ ಪ್ರಸಾದಿಯ ಪ್ರಾಣಲಿಂಗಿಸ್ಥಲ ಪ್ರಸಾದಿಯ ಶರಣಸ್ಥಲ ಪ್ರಸಾದಿಯ ಐಕ್ಯಸ್ಥಲ
ಪ್ರಾಣಲಿಂಗಿ ಪ್ರಾಣಲಿಂಗಿಯ ಭಕ್ತಸ್ಥಲ ಪ್ರಾಣಲಿಂಗಿಯ ಮಹೇಶಸ್ಥಲ ಪ್ರಾಣಲಿಂಗಿಯ ಪ್ರಸಾದಿಸ್ಥಲ ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ ಪ್ರಾಣಲಿಂಗಿಯ ಶರಣಸ್ಥಲ ಪ್ರಾಣಲಿಂಗಿಯ ಐಕ್ಯಸ್ಥಲ
ಶರಣ ಶರಣನ ಭಕ್ತಸ್ಥಲ ಶರಣನ ಮಹೇಶಸ್ಥಲ ಶರಣನ ಪ್ರಸಾದಿಸ್ಥಲ ಶರಣನ ಪ್ರಾಣಲಿಂಗಿಸ್ಥಲ ಶರಣನ ಶರಣಸ್ಥಲ ಶರಣನ ಐಕ್ಯಸ್ಥಲ
ಐಕ್ಯ ಐಕ್ಯನ ಭಕ್ತಸ್ಥಲ ಐಕ್ಯನ ಮಹೇಶಸ್ಥಲ ಐಕ್ಯನ ಪ್ರಸಾದಿಸ್ಥಲ ಐಕ್ಯನ ಪ್ರಾಣಲಿಂಗಿಸ್ಥಲ ಐಕ್ಯನ ಶರಣಸ್ಥಲ ಐಕ್ಯನ ಐಕ್ಯಸ್ಥಲ
ಷಟಸ್ಥಲಗಳ Order of Sequential Steps ಅಂದರೆ ಅನುಕ್ರಮದಲ್ಲಿ ಬಸವಣ್ಣನವರಲ್ಲಿ ಮತ್ತು ಚೆನ್ನಬಸವಣ್ಣವರಲ್ಲಿ ಅಭಿಪ್ರಾಯ ಭೇಧವಿದ್ದಂತೆ ಕಾಣುತ್ತದೆ.
ಬಸವಣ್ಣನವರು ತಮ್ಮ ಈ ವಚನದ ಮೂಲಕ ಷಟಸ್ಥಲದಲ್ಲಿ ವಿಕಾಸದ ಒಂದೊಂದೇ ಹಂತಗಳನ್ನು ಹೇಳಿದ್ದಾರೆ. ಸ್ಥಲಗಳನ್ನು ಅನುಕ್ರಮವಾಗಿ ಒಂದರ ನಂತರ ಒಂದಾಗಿ ಅನುಷ್ಠಾನಗೊಳಿಸುತ್ತಾ, ಅಂದರೆ Following the Sequential Steps, ಅಂತಿಮವಾಗಿ ಐಕ್ಯಸ್ಥಲವನ್ನು ತಲುಪುವ ವಿಕಾಸದ ದಾರಿಯ ಕ್ರಮವನ್ನು ನಿರೂಪಿಸಿದ್ದಾರೆ.
ಮೆಲ್ಲಮೆಲ್ಲನೆ | ಭಕ್ತನೆನಿಸಿಕೊಂಬೆ ||
ಮೆಲ್ಲಮೆಲ್ಲನೆ | ಮಾಹೇಶ್ವರನೆನಿಸಿಕೊಂಬೆ ||
ಮೆಲ್ಲಮೆಲ್ಲನೆ | ಪ್ರಸಾದಿ ಎನಿಸಿಕೊಂಬೆ ||
ಮೆಲ್ಲಮೆಲ್ಲನೆ | ಪ್ರಾಣಲಿಂಗಿ ಎನಿಸಿಕೊಂಬೆ ||
ಮೆಲ್ಲಮೆಲ್ಲನೆ | ಶರಣನೆನಿಸಿಕೊಂಬೆ ||
ಮೆಲ್ಲಮೆಲ್ಲನೆ | ಐಕ್ಯನೆನಿಸಿಕೊಂಬೆ ||
ಮೆಲ್ಲಮೆಲ್ಲನೆ | ಷಟಸ್ಥಲವ ಮೀರಿ ||
ನಿರವಯ ಸ್ಥಲವನೆಯ್ದುವೆನಯ್ಯಾ | ಕೂಡಲಸಂಗಮದೇವಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-121 / ವಚನ ಸಂಖ್ಯೆ-1318)
ಅದನ್ನು ಚೆನ್ನಬಸವಣ್ಣನವರು ತಮ್ಮ ಈ ವಚನದ ಮೂಲಕ ಸಮ ವಿಕಾಸದ ಷಟಸ್ಥಲವನ್ನು ಅಂದರೆ Comprehensive Application and Implementation Model ನ್ನು ಪ್ರತಿಪಾದನೆ ಮಾಡಿರುವರು. ಎಚ್ಚರಿಕೆಯ ಘಂಟೆಯಂತೆ ಪ್ರತಿಯೊಂದು ಸ್ಥಲದಲ್ಲಿ ಪರಿಪೂರ್ಣತೆಯನ್ನು ಪಡೆಯಬೇಕೆಂಬುದು ಈ ವಚನದ ಆಶಯ. ಇಲ್ಲಿ ಒಂದನ್ನು ಸಾಧಿಸಿ ಮುಂದಿನ ತತ್ವವನ್ನು ಸಾಧಿಸಬೇಕೆಂಬ ಅಥವಾ ಒಂದಾದ ಮೇಲೊಂದು ತತ್ವಾನುಷ್ಠಾನದ ನಿಯಮವಿಲ್ಲ.
ಮೆಲ್ಲಮೆಲ್ಲನೆ ಭಕ್ತ | ಮೆಲ್ಲಮೆಲ್ಲನೆ ಮಾಹೇಶ್ವರ ||
ಮೆಲ್ಲಮೆಲ್ಲನೆ ಪ್ರಸಾದಿ | ಮೆಲ್ಲಮೆಲ್ಲನೆ ಪ್ರಾಣಲಿಂಗಿ ||
ಮೆಲ್ಲಮೆಲ್ಲನೆ ಶರಣ | ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು ||
ನಿಮ್ಮ ಶರಣರು ತಾವೇನು | ಮರುಜವಣಿಯ ಕೊಂಡರೆ? ||
ಅಮೃತ ಸೇವನೆಯ | ಮಾಡಿದರೆ? ||
ಆವ ಸ್ಥಲದಲ್ಲಿ | ನಿಂದರೂ ಆ ಸ್ಥಲದಲ್ಲಿ ||
ಷಡುಸ್ಥಲ | ಅಳವಡದಿದ್ದರೆ ||
ಆ ಭಕ್ತಿಯ ಬಾಯಲ್ಲಿ | ಹುಡಿಯ ಹೊಯ್ದು ||
ಹೋಗುವೆನೆಂದ | ಕೂಡಲಚೆನ್ನಸಂಗಮದೇವ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-490 / ವಚನ ಸಂಖ್ಯೆ-1546)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಹುಡಿ: ಸುಡುವ ನೀರು
ಎಂಥ ಅದ್ಭುತ ಅಂದರೆ ಷಟಸ್ಥಲದ ಅನುಷ್ಠಾನದ ಅನುಕ್ರಮದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಚೆನ್ನಬಸವಣ್ಣನವರು ತಮ್ಮ ಗುರುಗಳೆಂದು ಸ್ವೀಕರಿಸಿದ್ದ ಬಸವಣ್ಣನವರನ್ನು ಕುರಿತು ಹೀಗೆ ಹೇಳುತ್ತಾರೆ.
ಭಕ್ತ ಮಹೇಶ್ವರ ಪ್ರಸಾದಿ | ಪ್ರಾಣಲಿಂಗಿ ಶರಣ ಐಕ್ಯನೆಂದು ||
ಬೇರು ಮಾಡಿ ನುಡಿದು | ಬೇರು ಮಾಡಿ ನುಡೆವ ಭಿನ್ನನಲ್ಲ ||
ಭಿನ್ನವಿಲ್ಲದ ಅಂತರಂಗದಲ್ಲಿ | ಅರಿವು ಪರಿಪೂರ್ಣ ಬಸವಣ್ಣ ||
ಬಹಿರಂಗದಲ್ಲಿ | ದಾಸೋಹ ಸಂಪನ್ನ ಬಸವಣ್ಣ ||
ಮನ ವಚನ ಕಾಯದಲ್ಲಿ | ಸದ್ಭಕ್ತಿ ಸಂಪನ್ನ ಬಸವಣ್ಣ ||
ಎಡೆದೆರಹಿಲ್ಲದ | ಲಿಂಗಸಂಪನ್ನ ಬಸವಣ್ಣ ||
ಸರ್ವಾಂಗದಲ್ಲಿ | ಸರ್ವಾಚಾರ ಸಂಪನ್ನ ಬಸವಣ್ಣ ||
ಕೂಡಲಚೆನ್ನಸಂಗನಲ್ಲಿ | ಬಸವಣ್ಣನ ||
ಶ್ರೀಪಾದಕ್ಕೆ ನಮೋ | ನಮೋ ಎನುತಿರ್ದೆನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-475 / ವಚನ ಸಂಖ್ಯೆ-1464)
ಈ ವಚನದಲ್ಲಿ ಬರುವ ಶಬ್ದಗಳ ಪಾರಿಭಾಷಿಕ ಅರ್ಥ.
ಎಡೆದೆರಹು: ಸ್ಥಳಾವಕಾಶ, ಅಂತರ, ಭಿನ್ನಭಾವ
ಹೀಗೆ ಸಾಧನೆಯ ದಾರಿಯಲ್ಲಿ ಸರ್ವಾಚಾರ ಸಂಪನ್ನರಾದ ಬಸಣ್ಣನವರನ್ನು ಲಿಂಗಸ್ವರೂಪರು ಅಂತಾ ಚೆನ್ನಬಸವಣ್ಣನವರು ಹೇಳುತ್ತಾರೆ. ಬಸವಣ್ಣನವರನ್ನೊಳಗೊಂಡು ಎಲ್ಲ ಬಸವಾದಿ ಶರಣರು ಸರ್ವಾಚಾರ ಸಂಪನ್ನರಾದ್ದರಿಂದ ಅವರಲ್ಲಿದ್ದ ಆಚರಣೆಗಳೇ ಅವರ ಜೀವನದ ಮೂಲಸೆಲೆ.
ಶರಣ ಸಿದ್ಧರಾಮೇಶ್ವರರ ಒಂದು ವಚನದಲ್ಲಿ ಷಟಸ್ಥಲದ ಅನುಷ್ಠಾನ ಬಗ್ಗೆ ವಿವರಿಸಿದ್ದಾರೆ. ಅನುಷ್ಠಾನದ ಹಾದಿಯಲ್ಲಿ ಕಠಿಣ ಪರೀಕ್ಷೆಗೆ ಒಳಪಡಬೇಕಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.
ಷಡುಸ್ಥಳ ಸಮನಿಸದಯ್ಯಾ | ಎಲ್ಲರಿಗೆ ||
ಷಡುವೃತ ಸಮನಿಸದಯ್ಯಾ | ಎಲ್ಲರಿಗೆ ||
ಅರಿದರಿದು | ಗುರುಭಕ್ತಿ ||
ಅರಿದರಿದು | ಲಿಂಗಭಕ್ತಿ ||
ಅರಿದರಿದು | ಜಂಗಮಭಕ್ತಿ ||
ಅರಿದಯ್ಯಾ | ಸುಲಭವೆ ಎಲ್ಲರಿಗೆ? ||
ಅವ್ಯಯ ಕರುಣ | ಅಳವಟ್ಟವರಿಗಲ್ಲದೆ ||
ಗುರು-ಚರ-ಇಷ್ಟತ್ರಯ | ಅಳವಡದು ||
ವ್ರತವಾರರಲ್ಲಿ | ನಿಪುಣತೆಯಯ್ಯಾ ||
ನಿನ್ನ ಕೃಪೆ ಎತ್ತಾನೊಬ್ಬರಿಗಲ್ಲವೆ | ಕಪಿಲಸಿದ್ಧಮಲ್ಲಿಕಾರ್ಜುನ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-656 / ವಚನ ಸಂಖ್ಯೆ-1022)
Ordinary people created extra ordinary society in 12th Century. ಇದು ಕೇವಲ Statement ಅಲ್ಲ. ಸಾಮಾನ್ಯರಂತೆ ಬದುಕಿ ಅಸಾಮಾನ್ಯ ತತ್ವಗಳನ್ನು ಜಗತ್ತಿಗೇ ನೀಡಿ ಬೆಳಕನ್ನಿತ್ತ ಶರಣರ ಬದುಕು ಇಂದಿಗೂ ಆದರ್ಶಮಯ. ಇಂಥ ಆದರ್ಶಗಳನ್ನು ಮೌಲ್ಯಗಳನ್ನು ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಹಾಗಾಗಿ ಒಂದು ಆತ್ಮಾವಲೋಕನದಿಂದ ಶರಣರನ್ನು ಅರಿಯೋಣ ಅಂತ ಹೇಳತಾ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತೇನೆ.
ಶರಣು ಶರಣಾರ್ಥಿಗಳು.
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ, ತುಮಕೂರು – 572 104
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com
ಸಹಾಯಕ ಗ್ರಂಥಗಳು :
• ಶರಣ ಚರಿತಾಮೃತ : ಡಾ. ಸಿದ್ಧಯ್ಯ ಪುರಾಣಿಕ
• ಶಾಸನಗಳಲ್ಲಿ ಶಿವಶರಣರು : ಡಾ. ಎಮ್. ಎಮ್. ಕಲಬುರ್ಗಿ
• ಬಸವಯುಗದ ವಚನ ಮಹಾಸಂಪುಟ : ಡಾ. ಎಮ್. ಎಮ್. ಕಲಬುರ್ಗಿ
• ಕನ್ನಡ ಸಾಹಿತ್ಯದಲ್ಲಿ ಅಲ್ಲಮಪ್ರಭುದೇವ : ಡಾ. ಎಸ್. ಎಮ್. ವೃಷಭೇಂದ್ರಸ್ವಾಮಿ
• ಷಟ್ ಸ್ಥಲ ಪ್ರಭೆ : ಡಾ. ಆರ್. ಸಿ. ಹಿರೇಮಠ