ಅಕ್ಕಿಯವರ ನಾಟಕ ‘ಯಕ್ಷಪ್ರಶ್ನೆ’
ಕೇಂದ್ರ ಸರ್ಕಾರದ ರಾಷ್ಟ್ರ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಡಿ.ಎನ್.ಅಕ್ಕಿ’ ಎಂದೇ ಸಾಹಿತ್ಯಲೋಕದಲ್ಲಿ ಪ್ರಸಿದ್ಧಿ ಪಡೆದಿರುವ ದೇವೇಂದ್ರಪ್ಪ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಸಾಹಿತ್ಯಕವಾಗಿ ಅನೇಕ ಮೌಲ್ಯಿಕ ಕೃತಿಗಳನ್ನು ನೀಡಿದ ಸಂವೇದನಾಶೀಲರು. ಗೋಗಿಪೇಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ವಿಷಯ ಈಗ ಬಹಳ ಹಳೆಯದಾಗಿದೆ.
ಕಲಬುರಗಿಯಲ್ಲಿ ನಡೆದ ಸಾಹಿತ್ಯಕ ಕಾರ್ಯಕ್ರಮದಲ್ಲಿ ಡಿ.ಎನ್.ಅಕ್ಕಿಯವರ ಭೇಟಿ ಮತ್ತು ಅವರ ಕೃತಿಗಳನ್ನು ಪಡೆಯುವ ಅವಕಾಶ ದೊರಕಿತು. ಈ ಹಿರಿಯ ಜೀವದ ಸರಳತೆ, ಆತ್ಮೀಯತೆಗೆ ಮಾರು ಹೋದೆ. ಅವರದು ಮಾತಿಲ್ಲದ ಮೌನ ಸ್ವಭಾವ. ಶಬ್ದವಿಲ್ಲದ ನಿಶಬ್ದಕ್ಕೇ ಹೆಚ್ಚು ಮಹತ್ವ ನೀಡಿದ ಕಲಾವಿದ. ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನಾ ಬರಹಗಳಲ್ಲಷ್ಟೇ ಅವರು ಮೌನ ಮುರಿಯುತ್ತಾರೆ. ಪ್ರತಿಭೆಯ ಮೂಲಕವೇ ಮಾತಾನಾಡುವ ಕಲಾವಂತಿಕೆ ಅವರಲ್ಲಿದೆ.
ಶೈಕ್ಷಣಿಕ ಕ್ಷೇತ್ರದ ಮಾದರಿ ವ್ಯಕ್ತಿತ್ವ ಅವರದು. ಶಿಕ್ಷಕರಾಗಿದ್ದುಕೊಂಡು ಅಷ್ಟೇ ಅಚ್ಚುಕಟ್ಟಾದ ಶಿಸ್ತಿನ ಸರಳ ಜೀವನ ಸಾಗಿದವರು. ಅವರಲ್ಲಿರುವ ಕ್ರಿಯಾಶೀಲತೆ ಗುರುತಿಸಿ ಮೂವತ್ತೊಂದಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಜೀವನದುದ್ದಕ್ಕೂ ದೌಡಾಯಿಸಿ ಬಂದವು.
ಅಂತಹ ಐಡಿಯಲ್ ಪರ್ಸನಾಲಿಟಿಯ ಒಂದು ಕ್ರುತಿ ‘ಯಕ್ಷ ಪ್ರಶ್ನೆ’. ಇದನ್ನು ಓದುತ್ತ ಸಾಗಿದೆ. ಕೇವಲ ಅರ್ಧ ಗಂಟೆಯಲ್ಲಿ, ಒಂದೇ ಉಸುರಿಗೆ ಓದಿಸಿಕೊಂಡು, ಮಂತ್ರ ಮುಗ್ದಗೊಳಿಸಿತು. ಈ ಕ್ರುತಿ ಕಣ್ಣಿಗೆ ಕಾಣುವಂತೆ ಪುಟ್ಟ ಆಕ್ರುತಿಯ ಪುಸ್ತಕವಾದರೂ, ಮನುಷ್ಯರಿಗೆ ಮಹತ್ವದ ಸಂದೇಶ ನೀಡುತ್ತದೆ.
‘ನಾಟಕ’ ಸಾಹಿತ್ಯದ ಈ ಪ್ರಕಾರವನ್ನು ಇಷ್ಟೊಂದು ವಿಭಿನ್ನವಾಗಿ ಬಳಸಬಹುದಲ್ಲ! ಎನ್ನುವಷ್ಟು ಆಶ್ಚರ್ಯ ಮೂಡಿಸಿತು. ನಾಟಕ ರಚನೆಕಾರರಾಗಿ ಡಿ.ಎನ್.ಅಕ್ಕಿಯವರಿಗೆ ರಂಗ ಪ್ರದರ್ಶನ, ಬಾನುಲಿ ನಾಟಕ ಪ್ರಸಾರ, ಬೀದಿ ನಾಟಕಕ್ಕೆ ಅನುಕೂಲವಾಗುವಂತೆ ಬರಹದಲ್ಲಿ ಹಿಡಿದಿಡುವ ಚಾಕಚಕ್ಯತೆ ಇದೆ.
‘ಯಕ್ಷ ಪ್ರಶ್ನೆ’ಯಲ್ಲಿ ಡಿ.ಎನ್.ಅಕ್ಕಿಯವರು ವ್ಯಾಸಭಾರತದ ಒಂದು ಘಟನೆಯನ್ನು ವಸ್ತುವಾಗಿಸಿಕೊಂಡು, ಅದಕ್ಕೆ ಪ್ರಸ್ತುತ ಆಧುನಿಕ ಸಮಾಜ ವ್ಯವಸ್ಥೆಯ ಮೆರುಗನ್ನು ಅಳವಡಿಸಿ, ನಾಟಕದ ರೂಪ ನೀಡಿದ್ದಾರೆ. ಇದರ ವಿಡಂಬನಾತ್ಮಕ ನಿರೂಪಣಾ ಶೈಲಿ ಮೆಚ್ಚುವಂತಿದೆ. ಅಲ್ಲಿ ಇರುವ ಪಾತ್ರಗಳೇ ಇಲ್ಲಿಯೂ ಇದೆ. ಯಕ್ಷ, ಧರ್ಮರಾಯ, ಭೀಮಸೇನ, ಅರ್ಜುನ, ನಕುಲ, ಸಹದೇವ. ಈ ಪಾತ್ರಗಳು ಮತ್ತು ಘಟನಾ ಸ್ಥಳ ಪ್ರಾಚೀನವಾದರೂ, ಅವರ ಮಧ್ಯೆ ನಡೆಯುವ ಸಂಭಾಷಣೆಗೆ ಪ್ರಸ್ತುತದ ವ್ಯವಸ್ಥೆಯೇ ವಸ್ತು.
ಮಹಾಭಾರತದಲ್ಲಿ ಬರುವ ಈ ಘಟನೆಯ ಸಂಕ್ಷಿಪ್ತ ಸಾರಂಶ ಹೀಗಿದೆ_
ಪಾಂಡವರು ವನವಾಸಕ್ಕೆ ಹೋಗಿರುತ್ತಾರೆ. ಆ ಸಮಯದಲ್ಲಿ ಹನ್ನೊಂದುವರೆ ವರ್ಷ ಕಳೆದಿರುತ್ತದೆ. ಯಮ ಜಿಂಕೆಯ ವೇಷದಲ್ಲಿ ರುಶಿಗಳ ಅರಣಿಯನ್ನು ಅಪಹರಿಸುತ್ತಾನೆ. ಆ ರುಶಿ ಮುನಿಗಳ ಬೇಡಿಕೆ ಮೇರೆಗೆ, ಪಾಂಡವರು ಅರಣಿ ಹಿಂದಿರುಗಿ ಪಡೆಯಲು ಜಿಂಕೆಯನ್ನು ಹಿಂಬಾಲಿಸುತ್ತಾರೆ. ಅಂತೂ ಇಂತೂ ಬಹಳ ಪ್ರಯಾಸದಿಂದ ಜಿಂಕೆಯನ್ನು ಹಿಡಿದು, ಯಾಗಾಗ್ನಿಯ ಮರದ ಕೊರಡಾದ ಅರಣಿ ತೆಗೆದುಕೊಂಡು, ಮುನಿಗಳಿಗೆ ಕೊಡುತ್ತಾರೆ. ಇಷ್ಟು ಆಗುವವರೆಗೆ ಪಾಡವರು ದಣಿದು ಬಾಯಾರಿಕೆಯಿಂದ ಬಳಲುತ್ತಿರುತ್ತಾರೆ. ಆಗ ಯಮನಿಂದ ರಕ್ಷಣೆಗೊಳಗಾದ ಕ್ರುತಕ ಕೊಳ ಕಾಣಿಸುತ್ತದೆ. ಸರದಿಯಂತೆ ನೀರು ಕುಡಿದು, ನೀರು ತರಲು ಹೋದ ಸಹದೇವ, ನಕುಲ, ಭೀಮಸೇನ, ಅರ್ಜುನರು ಯಕ್ಷನ ಪ್ರಶ್ನೆಗೆ ಉತ್ತರಿಸಲಾಗದೆ, ಅವನ ಎಚ್ಚರಿಕೆಗೆ ಬೆಲೆ ಕೊಡದೆ, ಕೊಳದ ನೀರು ಕುಡಿದು ಎಚ್ಚರ ತಪ್ಪಿ ಬೀಳುತ್ತಾರೆ. ಕೊನೆಗೆ ಧರ್ಮರಾಯ ಬಂದು, ಯಮನ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ತ್ರುಪ್ತನಾದ ಯಮ ತಮ್ಮಂದಿರನ್ನು ಮತ್ತೆ ಬದುಕಿಸುತ್ತಾನೆ.
ಈ ಕತೆಯ ಆಧಾರ ಇಟ್ಟುಕೊಂಡು ‘ಯಕ್ಷಪ್ರಶ್ನೆ’ ನಾಟಕ ರಚನೆಯಾಗಿದೆ.
ಯಕ್ಷ ರೂಪದ ಯಮ ಮತ್ತು ಧರ್ಮರಾಯನ ನಡುವೆ ನಡೆಯುವ ಸಂಭಾಷಣೆಯೇ ನಾಟಕದ ಮೂಲದ್ರವ್ಯ. ಇವರಿಬ್ಬರು ಭೇಟಿಯಾಗುವವರೆಗೆ ಮೂಲ ಮಹಾಭಾರತದ ಆಧಾರ. ಅಲ್ಲಿಂದ ಮುಂದೆ ನಡೆಯುವ ಪ್ರಶ್ನೋತ್ತರಗಳು ನಾಟಕಕಾರ ಡಿ.ಎನ್.ಅಕ್ಕಿಯವರ ನೂತನ ಪರಿಕಲ್ಪನೆ. ಆಧುನಿಕ ಪ್ರಸಕ್ತ ಸಮಾಜ ವ್ಯವಸ್ಥೆಯ ಹಿನ್ನೆಲೆಯಲ್ಲಿ ಡೈಲಾಗ್ಸ್ ಮೂಡಿ ಬಂದಿದೆ.
ಮುನ್ನುಡಿಯಲ್ಲಿ ಪ್ರೊ.ಡಿ.ಲಿಂಗಯ್ಯನವರು ‘ಹಳೆಯ ವಿಚಾರಧಾರೆಯನ್ನು ಹೊಸತನಕ್ಕೆ ಮಣಿಸಿದ ರೀತಿ, ನಾಟಕದ ಆನ್ವಯಿಕತೆ ಎನ್ನಬಹುದು’ ಎಂದಿದ್ದಾರೆ. ಹಾಗೆಯೆ ಬೆನ್ನುಡಿ ಬರೆದ ಸಾಹಿತಿ ತಿರುಮಲೆ ಶ್ರೀರಂಗಾಚಾರ‌್ಯರು ಕೃತಿಯು ‘ಬೀದಿ ನಾಟಕದ ಲಿಖಿತ ರೂಪ ರಚಿಸಿದಂತಿದೆ. ಈ ನಾಟಕದಲ್ಲಿ ಪ್ರೇಕ್ಷಕರೇ ಸ್ವಯಂ ಪ್ರೇರಣೆಯಿಂದ ಪಾತ್ರಧಾರಿಯಾಗುತ್ತಾರೆ. ಇದೊಂದು ಸ್ತುತ್ಯ ಪ್ರಯತ್ನ’ ಎಂದಿದ್ದಾರೆ.
ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಅಧಿಕಾರದ ದಾಹ, ಮುಖವಾಡದ ವ್ಯಕ್ತಿಗಳು, ಹುಸಿ ಭರವಸೆ, ಮದಿರೆಯ ಚಟ, ಸ್ವಾರ್ಥ ರಾಜಕಾರಣ, ಬೆಲೆ ಏರಿಕೆ, ಹಣ ಗಳಿಸುವುದು, ಆಸ್ತಿ ಸಂಪಾದನೆ, ಚುನಾವಣೆ, ಕಲಬೆರಕೆಯ ಮೋಸ, ವಾಹನಗಳ ಅವ್ಯವಸ್ಥೆ, ಕಪ್ಪು ಹಣ, ಲಂಚ ಇತ್ಯಾದಿ ವಿಷಯಗಳು ಧರ್ಮರಾಯನ ಉತ್ತರವಾಗಿ ಹೊರ ಬರುವಾಗ ವಿಡಂಬನಾತ್ಮಕತೆ ತುಂಬಿರುತ್ತದೆ. ಸಂವಾದದಲ್ಲಿ ವ್ಯಂಗ್ಯವನ್ನು ಹರಿತವಾದ ಚಾಕುವಿನ ಇರಿತದಂತೆ ಬಳಸಿರುವುದು ಲೇಖಕರ ಸೂಕ್ಷ್ಮ ದ್ರುಶ್ಟಿಕೋನ.
ಅರ್ಜುನನ ಮಾತಿನಲ್ಲಿ ಗಗನಕ್ಕೇರುತ್ತಿರುವ ಬೆಲೆಯ ವ್ಯಂಗ್ಯ ಗಮನಸಬಹುದು. ‘ಅಲ್ಲಾ ಈ ಚಿಗರಿ ಅದ್ಹೆಂಗ ಸೊಂಯ್ ಸೊಂಯ್ ಅಂತ ಈ ದೇಶದ ಬೆಲೆಗಳು ಜಿಗಿದ್ಹಂಗ ಜಿಗ್ಕೋತ ಹೋಯಿತಂತಿನಿ.
ಸೂತ್ರಧಾರಿ, ಪ್ರೇಕ್ಷಕ, ಯಕ್ಷ, ಯುಧಿಷ್ಠಿರ, ಭೀಮಸೇನ, ಅರ್ಜುನ, ನಕುಲ, ಸಹದೇವರ ಮಾತುಗಳು ನಾಟಕದಲ್ಲಿ ಕಲಾತ್ಮಕವಾಗಿ ಅಷ್ಟೇ ಅಲ್ಲ ಕಾವ್ಯಾತ್ಮಕವಾಗಿಯೂ ಮೂಡಿ ಬಂದಿದೆ.
ಸೂತ್ರಧಾರ ಮತ್ತು ಪ್ರೇಕ್ಷಕನ ನಡುವೆ ನಡೆಯುವ ಸಂಭಾಷಣೆಯಲ್ಲಿ ಪ್ರೇಕ್ಷಕನ ಮಾತು ಹೀಗಿದೆ_
‘ಸೂತ್ರಧಾರ, ಕೌದಿದಾರ, ಹಿಂಗ ನೀ ಒದರ‌್ಕೋತ ನಿಂತಿ ಅಂದ್ರ; ಕುಂತ ಜನಾ ಹರಿದಾರು ನಿನ್ನ ಉಡುದಾರ, ಕತಿ ಹೇಳೋ ಸರದಾರ, ಬರಿ ನೀ ಬಡಿಬ್ಯಾಡ ನಿನ್ನ ಬಡಿವಾರ.’
ಹೀಗೆ ಇಡೀ ನಾಟಕದುದ್ದಕ್ಕೂ ಬಳಸಿದ ಭಾಶಾ ಶೈಲಿ ಪ್ರಾದೇಶಿಕ ಸೊಗಡಿನಿಂದ ಕೂಡಿದೆ. ಸಂವಾದವು ಕುತೂಹಲಕರವಾಗಿದ್ದು ಓದುಗನನ್ನು ಆಕರ್ಶಿಸುತ್ತದೆ.
ಡಿ.ಎನ್.ಅಕ್ಕಿಯವರು ವಸ್ತು ಆಯ್ಕೆ, ವಿಷಯ ನಿರೂಪಣೆ, ದ್ರುಶ್ಯದ ಪರಿಕಲ್ಪನೆ, ಪಾತ್ರ ಪೋಷಣೆ, ಸಂಭಾಷಣೆ, ಹಳೆಯ ವಸ್ತುವಿನ ನವೀಕರಣ, ಸಮಕಾಲೀನ ಸಮಸ್ಯೆಗೆ ಸ್ಪಂದನೆ, ವಿಂಡಬನೆ, ವ್ಯಂಗ್ಯ ಇತ್ಯಾದಿ ಎಲ್ಲವನ್ನೂ ಸಮರ್ಥವಾಗಿ ಬಳಸಲಾದ ಮಾದರಿ ನಾಟಕವಿದು. ಅವರ ಉಳಿದ ಕೃತಿಗಳನ್ನೂ ಓದುವ ಕುತೂಹಲ ಮೂಡಿಸಿದ.
–ಸಿಕಾ