ಮುಕ್ತಕಗಳು
ಸ್ವರವೆತ್ತಿ ಹಾಡುವೆನು ಈಶ್ವರನೆ ನಿನ್ನಡಿಯ
ಕರವೆತ್ತಿ ಮುಗಿಯುವೆನು ಶಿರಬಾಗಿ ನಮಿಸಿ
ಹರನೆಮಗೆ ಹರಸುತಿರು ಜಗವೆಲ್ಲ ಸುಖವಿರಲಿ
ವರವೊಂದು ಬೇಡುವೆನು ಸವಿಯಮನವೆ.
ಸವಿಯಾದ ಹಾಡೊಂದು ಹಾಡುವೆನು ನಾನಿಮಗೆ
ಕವಿಮನದಿ ಕುಣಿಯುತ್ತ ಒಲವಿಂದ ಕೂಡಿ
ರವಿಯಂತೆ ಹೊಳೆಯುತ್ತ ಜಗಕೆಲ್ಲ ಬೆಳಕಾಗಿ
ಸವಿಸುಖದಿ ನೀಬಾಳು ಸವಿಯಮನವೆ.
ಎತ್ತಲೋ ಉದಯುಸುವೆ ಸುತ್ತಲೂ ಪಸರಿಸುವೆ
ಹೋತ್ತೆಲ್ಲ ಏರುತಲಿ ಉರಿಬಿಸಿಲ ನೀಡಿ
ಮತ್ತಿಳಿದು ಮುಸ್ಸಂಜೆ ಕಡಲಿನಲಿ ಕರಗುವ
ನೇಸರಗೆ ನಮಿಸುವಾ ಸವಿಯಮನವೆ.
ರವಿನೀನು ಉದಯಿಸುತ ಹೊಂಬಣ್ಣ ಪಡೆಯುತಲಿ
ಕವಿಮನಕೆ ಕಾವ್ಯದಾ ಚೈತನ್ಯ ನೀಡಿ
ಭೂವಿಯನು ಬೆಳಗುತ್ತ ವನಹಸಿರು ಚಿಗುರಿಸುತ
ಸವಿಸುಖವ ನೀಡುವನು ಸವಿಯಮನವೆ.
ಮೂಡಣದಿ ಮೂಡುವನು ಚೆಂಬೆಳಕ ನೀಡುವನು
ಪಡುವಣದಿ ಸಾಗುತ್ತ ಪಡುಗಡಲ ಸೇರಿ
ಗೂಡನ್ನು ಸೇರುವವು ಖಗಮೃಗ ಕಲರವದಿ
ನಾಡಿನಾ ಬದುಕಿದುವೆ ಸವಿಯಮನವೆ.
–ಸವಿತಾ ಮಾಟೂರು ಇಲಕಲ್ಲ