ಹೆಚ್ಚಿನ ವಚನಗಳೆಲ್ಲವೂ ಖೊಟ್ಟಿ ವಚನಗಳಲ್ಲ.

ಹೆಚ್ಚಿನ ವಚನಗಳೆಲ್ಲವೂ ಖೊಟ್ಟಿ ವಚನಗಳಲ್ಲ.

ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ನೇತೃತ್ವದಲ್ಲಿ ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ಭೇದ ರಹಿತ ಪುರೋಹಿತ್ಯ ರಹಿತ ಸಾಂಸ್ಥಿಕರಣವಲ್ಲದ ಮುಕ್ತ ಸ್ವತಂತ್ರ ಅವೈದಿಕ ಧರ್ಮವನು ಸ್ಥಾಪಿಸಿದರು.
ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಕಗ್ಗೊಲೆ ಹತ್ಯಾ ಕಾಂಡದ ನಂತರ ಶರಣರು ಬೇರೆ ಬೇರೆ ಕಡೆಗೆ ವಚನಗಳ ಕಟ್ಟನ್ನು ಹೊತ್ತು ಚದುರಿದರು. ವಚನ ಚಳುವಳಿಯು ಮೂರು ಶತಮಾನದವರೆಗೆ ಕಾಲ ಗರ್ಭದಲ್ಲಿ ಹೂತು ಹೋಗಿತ್ತು ಅಭಿನವ ಅಲ್ಲಮರೆಂದು ಪ್ರಸಿದ್ಧಿ ಪಡೆದ ತೋಂಟದ ಸಿದ್ಧಲಿಂಗ ಯತಿಗಳು ವಚನ ಸಾಹಿತ್ಯಕ್ಕೆ ಮರು ಜನ್ಮ ನೀಡಿ ಪರಿಷ್ಕರಿಸಿ ಪ್ರಕಟಗೊಳಿಸಿ ವಚನ ಚಳುವಳಿಯನ್ನು ಜೀವಂತವಾಗಿಟ್ಟರು.
ಮುಂದೆ ಪ್ರೌಢ ದೇವರಾಯರ ಕಾಲದಲ್ಲಿ ನೂರೊಂದು ವಿರಕ್ತರು ವಚನಗಳನ್ನು ಸಂಕಲಿಸುವ ಕಾರ್ಯವೆತ್ತಿಕೊಂಡರು. ಅಷ್ಟೋತ್ತಿಗಾಗಲೇ ಮುಕ್ತ ಸ್ವತಂತ್ರ ಕಾಯಕ ದಾಸೋಹ ಸಿದ್ಧಾಂತ ಹೊಂದಿದ ಶರಣ ಸಂಸ್ಕೃತಿಯಲ್ಲಿ ಕಲಬೆರಕೆಯಾಗಿ ಹೋಯಿತು. ಪರಿಣಾಮವಾಗಿ ಲಿಂಗಾಯತ ಧರ್ಮವು ಶಿವಾ ದ್ವೈತ ಮತ್ತು ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವೆಂದು ರೂಪಿಸ ಹತ್ತಿದರು. ಸಿದ್ಧಾಂತ ಶಿಖಾಮಣಿ ಶ್ರೀಕರ ಭಾಷೆಯ ಮೇಲೆ ಹೊಸ ಬೆಳಕು ಚೆಲ್ಲಿದ ಕುಂದಕೂರು ಡಾ ಶ್ರೀ ಇಮ್ಮಡಿ ಶಿವ ಬಸವ ಸ್ವಾಮಿಗಳು ಇಂತಹ ಕೃತ್ರಿಮ ಕಾರ್ಯವನ್ನು ಬಯಲಿಗೆಳೆದರು ಆದರೆ ಲಿಂಗಾಯತ ಸಮಾಜವು ಇಂತಹ ಶೈವೀಕರಣಗೊಂಡ ಲಿಂಗಾಯತ ಆಚರಣೆಯಿಂದ ಹೊರ ಬರಲೇ ಇಲ್ಲ ಹಾಗೂ ಅದನ್ನು ಪ್ರಶ್ನಿಸುವ ಮತ್ತು ಶುದ್ಧೀಕರಿಸುವ ಕಾರ್ಯಕ್ಕೂ ಪ್ರಯತ್ನ ಪಡಲಿಲ್ಲ .

ಏಕೋತ್ತರ ಸ್ಥಲಗಳು ಮಗ್ಗೆ ಮಾಯಿದೇವನ ಟೀಕೆಗಳು ಬಸವಣ್ಣನವರ ಶರಣರ ವಚನ ಚಳುವಳಿಯಿಂದ ಪ್ರೇರಿತಗೊಂಡಿದ್ದರೂ ಅವುಗಳು ಸಂಪೂರ್ಣ ಶೈವೀಕರಣಗೊಂಡಿವೆ.
ದ್ವೈತ , ಅದ್ವೈತ , ವಿಶಿಷ್ಟಾದ್ವೈತ , ಶಿವಾದ್ವೈತ , ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತಗಳಲ್ಲದ ಲಿಂಗಾಯತ ಧರ್ಮವು ತನ್ನ ಅರಿವು ಆಚಾರ ನಡೆ ನುಡಿ ಕಾಯಕ ದಾಸೋಹ ಸಿದ್ಧಾಂತಗಳ ಮೇಲೆ ಗಟ್ಟಿಗೊಳ್ಳಬೇಕು.

ಶಂಕಾರಾಚಾರ್ಯ ಮಧ್ವಾಚಾರ್ಯ ರಾಮಾನುಜಾಚಾರ್ಯ ನೀಲಕಂಠ ಶಾಸ್ತ್ರೀ ಅಪ್ಪಯ್ಯ ಶಾಸ್ತ್ರಿಗಳು ಪ್ರತಿಪಾದಿಸಿದ ಈ ಎಲ್ಲ ಸಿದ್ಧಾಂತಗಳು ಶರಣ ಸಿದ್ಧಾಂತಕ್ಕೆ ಸಂಪೂರ್ಣ ತದ್ವಿರುದ್ಧವಾಗಿವೆ.
ಯಾರೋ ಕಲಬೆರಕೆಮಾಡಿದ ಲಿಂಗಾಯತರ ಮೇಲೆ ಶುದ್ಧ ಶೈವೀಕರಣಗೊಂಡ ವೈದಿಕ ಆಚರಣೆಗಳು ಸವಾರಿ ಮಾಡುತ್ತಿವೆ , ಲಿಂಗಾಯತ ಧರ್ಮದಲ್ಲಿ ಇಂತಹ ಅನೇಕ ಶೈವ ಆಚರಣೆಗಳು ರೂಢಿಯಲ್ಲಿವೆ .ಇವುಗಳ ತಾತ್ವಿಕ ಸೈದ್ಧಾಂತಿಕ ಶುದ್ಧೀಕರಣ ಅಗತ್ಯವಾಗಿವೆ.

ವಚನಗಳು ಅನುಭಾವ ಸಾಹಿತ್ಯ ಬಡವರ ದಲಿತರ ಅಸ್ಪ್ರಶ್ಯರ ಮಹಿಳೆಯರ ಕಾರ್ಮಿಕರ ದಮನಿತರ ಸಂಘರ್ಷಪೂರ್ವಕ ಅಭಿವ್ಯಕ್ತಿಯೇ ವಚನ ಸಾಹಿತ್ಯದ ಹೆಗ್ಗುರಿ.
ಹೋರಾಟ ಪ್ರಗತಿಪರ ಸಮಾಜಮುಖಿ ಚಿಂತನೆಯಿಂದ ವಿಮುಖವಾದ ಕೆಲ ಪ್ರಕ್ಷಿಪ್ತ ವಚನಗಳು ಹದಿನಾರನೆಯ ಶತಮಾನದಲ್ಲಿ ಕಾಣುತ್ತೇವೆ ವೀರಶೈವ ಸಂಸ್ಕೃತ ಶ್ಲೋಕಗಳು ಮುಂತಾದ ಕಲಬೆರಕೆ ಕೆಲವು ವಚನಗಳಲ್ಲಿ ಕಾಣ ಬಹುದು. ಹಾಗಂತ ಎಲ್ಲಾ ಹೆಚ್ಚಿನ ವಚನಗಳು ಖೊಟ್ಟಿ ವಚನಗಳಲ್ಲ .ಅಲ್ಲಿನ ದೋಷಪೂರಿತ ಸೇರ್ಪಡೆ ಕಲಬೆರಕೆಯನ್ನು ಸರಿ ಪಡಿಸಿ ಶುದ್ಧೀಕರಿಸಿದರೆ ಮುಂಬರುವ ದಿನಗಳಲ್ಲಿ ವಚನ ಅಧ್ಯಯನಕಾರರಿಗೆ ಬಸವ ಧರ್ಮಿಯರಿಗೆ ಒಂದು ಸ್ಪಷ್ಟತೆ ದೊರೆಯುತ್ತದೆ.
ಸ್ವರ ವಚನಗಳು ಅಪ್ರಕಟಿತ ವಚನಗಳು ಹೆಚ್ಚಿನ ವಚನಗಳು ತಜ್ಞರ ಪರಾಮರ್ಶೆಗೆ ಒಳಪಡಲಿ. ತಾತ್ವಿಕ ಸೈದ್ಧಾಂತಿಕ ಆಶಯಗಳಿಗೆ ಪೂರಕವಾದ ವಚನಗಳನ್ನು ಆರಿಸುವ ಕಾರ್ಯವಾಗಬೇಕು.
ಅನೇಕ ಗೊಂದಲಗಳಿಂದ ಮುಕ್ತರಾಗಬೇಕು ಬಸವ ಭಕ್ತರು. ಕೆಲ ದೋಷಪೂರಿತ ಶಾಸನಗಳಾದ ತೆಲಗು ಶಾಸನ ಮತ್ತು ಕೆಳದಿ ಶಾಸನಗಳನ್ನು ಅವುಗಳ ಕಾಲ ನಿರ್ಣಯವನ್ನು ನಿರ್ಧರಿಸಿದರೆ ಲಿಂಗಾಯತ ಧರ್ಮಕ್ಕೆ ಇನ್ನಷ್ಟು ಪುರಾವೆ ಬಲಿಷ್ಠ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿದಂತಾಗುತ್ತದೆ.
ಲಿಂಗಾಯತ ಧರ್ಮದೇ ಮೇಲೆ ಶೈವರ ಸವಾರಿ ನಿಲ್ಲಲ್ಲಿ .ಪ್ರಗತಿಪರ ವೈಚಾರಿಕ ಲಿಂಗಾಯತ ಧರ್ಮವು ಜಾಗತಿಕ ಮಟ್ಟದಲ್ಲಿ ಪ್ರಚುರಗೊಳ್ಳಲಿ.
ಈ ಹಿನ್ನೆಲೆಯಲ್ಲಿ ಬಸವ ಸಮಿತಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ವಚನ ಅಧ್ಯಯನ ಅಕಾಡೆಮಿಯನ್ನು ಸ್ಥಾಪಿಸಿ ಬಸವ ಭಕ್ತರಲ್ಲಿ ಸತ್ಯ ಧರ್ಮದ ಪರಿಚಯಿಸುವ ಕಾರ್ಯವನ್ನು ಮಾಡಲಿ.
ಹೆಚ್ಚಿನ ವಚನಗಳಲ್ಲಿ ಕಲಬೆರಕೆ ಸಂಸ್ಕೃತ ಸೇರ್ಪಡೆ ಖೊಟ್ಟಿ ವಚನಗಳು ಸಿಗುತ್ತವೆ ಹಾಗಂತ ಎಲ್ಲವನ್ನೂ ಸಂಶಯದಿಂದ ನೋಡುವುದು ತಪ್ಪು. ಹೆಚ್ಚಿನ ಹಲವು ವಚನಗಳಲ್ಲಿ ವಚನಗಳ ಲಕ್ಷಣ ಕಾವ್ಯ ಧ್ವನಿ ಗಟ್ಟಿಯಾಗಿ ಕಂಡು ಬರುವದರಿಂದ ಅವುಗಳ ಪರಿಷ್ಕರಣೆ ಅತ್ಯಗತ್ಯವಾಗಿದೆ.


-ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
9552002338

Don`t copy text!