ಅರಿಬಿ, ಅಕ್ಷರ ಮತ್ತು ಅರಿವು
ಸಹೋದರ
ಯಾತಕ್ಕಾಗಿ ಈ ದ್ವೇಷ
ನಿನ್ನ ಹೆಗಲ ಮೇಲಿರುವ
ಕೇಸರಿ ಶಾಲನ್ನು ನನಗೆ ನೀಡು
ಅದನ್ನೇ ಹಿಜಾಬ್ ಆಗಿ ಕಟ್ಟಿಕೊಳ್ಳುವೆ
ನಾನು ಅಕ್ಷರಸ್ಥಳಾಗುವುದು
ನಿನಗೆ ಇಷ್ಟವಿಲ್ಲವೆ
ನಿನ್ನಿಂದಾಗಿ ನಾನು
ಅನಕ್ಷರಸ್ಥಳಾಗಬೇಕೆ,
ನನ್ನ ಅಣ್ಣ ಅಪ್ಪನಿಗೆ
ಮುಖಕ್ಕೆ ಮುಖಕೊಟ್ಟು ಮಾತಾಡದ ನಾನು, ಕತ್ತಲೆಯ ಕೋಣಿಯಲ್ಲಿದ್ದೇನೆ,
ಹೊಸ್ತಿಲು ದಾಟದ ನಾನು
ಈಗೀಗ
ಈ ಹಿಜಾಬ್ ಕಟ್ಟಿಕೊಂಡಾದರೂ
ಅಕ್ಷರ ಮತ್ತು ಅರಿವಿಗಾಗಿ
ನಿನ್ ಪಕ್ಕದಲ್ಲಿ ಕುಳಿತಿರುವೆ
ಇದಕ್ಕೆ ಕಲ್ಲಾಕಬೇಡ
ಅಂಗಳದ ಮಾತು ಬೇರೆ
ಎದೆಯಂಗಳದ ಮಾತು ಬೇರೆ
ಯೋಚಿಸಿನೋಡು…
ತಾಳ್ಮೆ ಇರಲಿ
ನಿನ್ನಾಸೆಯಂತೆ ಈ ಹಿಜಾಬ್
ತೆಗೆದುಬರುವ ಕಾಲವೊಂದು ಬರಲಿದೆ
ಅಲ್ಲಿಯವೆರೆಗೂ
ಈ ಸಹೋದರಿಗೆ ನೆರಳಾಗಿರು
ಅಕ್ಷರ ಕಲಿಕೆಗೆ ಉರುಳಾಗದಿರು
ಮತ್ತೊಮ್ಮೆ ಹೇಳುವೆ
ಅಂಗಳದ ಮಾತು ಬೇರೆ
ಎದೆಯಂಗಳದ ಮಾತು ಬೇರೆ..
–ಡಾ. ಶರೀಫ್ ಹಸಮಕಲ್