ಶಿವ – ಶಿವರಾತ್ರಿ

ಶಿವ – ಶಿವರಾತ್ರಿ

ಸಮಾಜದಲ್ಲಿ ನಡೆಯುವ ಅನ್ಯಾಯ, ಮೋಸ ವಂಚನೆಗಳಿಗೆ, ಶೋಷಣೆ ಹೀನಾಯಗಳಿಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಮೌಢ್ಯ ಕಂದಾಚಾರಗಳು ಜನರನ್ನು ಅಪಾರವಾಗಿ ಪ್ರಭಾವಿಸಿವೆ. ಶರಣರು ತಮ್ಮ ಅರಿವಿನ ಬೆಳಕಿನಲಿ, ವಿವೇಕದ ಒಳಗಣ್ಣಿನಲ್ಲಿ ಜನಸಮೂಹದ ದುಃಖ- ದುಮ್ಮಾನಗಳಿಗೆ ಅವರು ಪಾಲಿಸುವ ನಂಬಿಕೆ, ಸಂಪ್ರದಾಯಗಳು ಕಾರಣವೆಂದು ಕಂಡುಕೊಂಡರು. ಅರ್ಥಹೀನ, ತತ್ವರಹಿತ ಡಂಭಾಚಾರಗಳನ್ನು ನೋಡಿ ನೊಂದು ಶರಣ ಸಿದ್ಧರಾಮೇಶ್ವರರು ತಮ್ಮ ವಚನಗಳ ಮುಖಾಂತರ ಅರಿವು ಮೂಡಿಸುವ ಕಾರ್ಯ ಮಾಡಿದರು.

ತಿಳಿಯದೆ ಮಾಡುವ ಪೂಜೆ, ಜಪ,ವ್ರತ, ಉಪವಾಸಗಳಿಂದ ಯಾವುದೇ ಲಾಭವಿಲ್ಲ ದೇವನು ಸೃಷ್ಟಿಸಿದ ಎಲ್ಲ ದಿನಗಳೂ ಶುಭದಿನಗಳೇ. ಎಲ್ಲ ರಾತ್ರಿಗಳೂ ಶಿವರಾತ್ರಿಗಳೇ ಎಂಬ ಭಾವ ಅವರದು. ಮುಹೂರ್ತ, ಶುಭಗಳಿಗೆ, ಅಪಶಕುನ ಇವೆಲ್ಲ ಅವಿದ್ಯೆಗಳು.
ಶುಭಕ್ಕೆ ವಿಘ್ನವಲ್ಲದೆ ಅಶುಭಕ್ಕೆ ವಿಘ್ನವೇ ಅಯ್ಯಾ..?
ಅಭಿಮಾನಿಗೆ ಅಂಜಿಕೆಯಲ್ಲದೆ ಅಪಮಾನಿಗೆ ಅಂಜಿಕೆಯೇ ಅಯ್ಯಾ..?
ಶುಭಾಶುಭ ಶಿವಾರ್ಪಣವೆಂದು ನಂಬು ಮನವೇ
ಕಪಿಲಸಿದ್ಧಮಲ್ಲೇಂದ್ರನಾಲಯದಲ್ಲಿ.
ಮನುಷ್ಯನ ಶಕ್ತಿ, ದುಡಿಮೆ, ವಿಶ್ವಾಸ, ಕ್ರಿಯೆಗಳಲ್ಲಿ ವಿಶ್ವಾಸವಿಡುವ ಶರಣರು ಇಂಥ ಕಂದಾಚಾರಗಳ ಹೇಳಿಕೆಗಳನ್ನು ತಳ್ಳಿ ಹಾಕುತ್ತಾರೆ.
ನಿಜಶರಣ ಅಂಬಿಗರ ಚೌಡಯ್ಯನವರ ಒಂದು ವಚನವನ್ನು ಅವಲೋಕಿಸಿದಾಗ
ಸೋಮವಾರ ಹುಣ್ಣಿಮೆ ಅಮಾವಾಸ್ಯೆ
ಎಂದು ಉಪವಾಸವಿರ್ದು
ಶಿವನಿಗೆ ಅರ್ಪಿತ ಎಂದು ನುಡಿವರು
ಕಾಮಕ್ರೋಧ ಲೋಭ ಮೋಹ ಮದ ಮತ್ಸರವನಳಿಯರು
ಎನಗೆ ಗತಿ ಕೊಡುವ ಲಿಂಗವಿದೇ ಎಂದು ತಿಳಿಯದೆ
ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅಧಿಕವೆಂದು ಪೂಜಿಸಿ
ಅವಕ್ಕಿಕ್ಕಿದ ಕೂಳ ತಾ ತಿಂಬುವನು
ಇನ್ನು ಸೋಮಧರಗರ್ಪಿತವೆಂದು
ಭುಂಜಿಸುವವರ ತೆರನಂತೆ
ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು
ಅಮೇಧ್ಯವ ಭುಂಜಿಸಿದ ತೆರನಾಯಿತು
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
ಆ ವಾರ ಈ ವಾರ ಹುಣ್ಣಿಮೆ, ಅಮಾವಾಸ್ಯೆ ಎಂದೂ, ನೇಮವಲ್ಲದ ನೇಮ ಆಚರಿಸುತ್ತ ದಾರಿ ತಪ್ಪಿದವನು, ಸರಿಯಾದ ತಿಳಿವು ಮೂಡದೆ ಬದುಕನ್ನು ನಿರುಪಯುಕ್ತ ಮಾಡಿಕೊಳ್ಳುತ್ತಾನೆ ಎಂಬ ಸಂದೇಶ ಈ ವಚನದ ಮೂಲಕ ಹೇಳುತ್ತಾರೆ.

ಹಾಲನೇಮ ಹಾಲಕೆನೆಯ ನೇಮ
ಕೆನೆತಪ್ಪಿದ ಬಳಿಕ ಕಿಚ್ಚಡಿಯ ನೇಮ
ಬೆಣ್ಣೆಯ ನೇಮ ಬೆಲ್ಲದ ನೇಮ
ಅಂಬಲಿಯ ನೇಮದವರಾರನೂ ಕಾಣೆ
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.

ಅಂದರೆ ಸರಳತೆ, ನಿರಾಡಂಬರಗಳೇ ನಿಜವಾದ ನೇಮ ಎಂದು ಬಸವಣ್ಣನವರು ಹೇಳುತ್ತಾರೆ.
ಶಿವ ಎಂದರೆ ಮಂಗಳಕರ. ಕೇವಲ ಶಿವರಾತ್ರಿಯಂದೇ ಅವನನ್ನು ಸ್ಮರಣೆ ಮಾಡಬೇಕೇ..? ಅನು ಕ್ಷಣವೂ ಅವನು ನಮ್ಮಲ್ಲೇ ಇರುವಾಗ ವಿಶೇಷ ದಿನವೇಕೆ..? ಇದು ಶರಣರ ಪ್ರಶ್ನೆ ! ಅಂತರಂಗ-ಬಹಿರಂಗ ಶುದ್ಧಿ ಇಲ್ಲದ ವ್ರತ, ನೇಮ ನಿರರ್ಥಕ. ಪ್ರತಿ ದಿನವೂ ಶಿವದಿನ,ಪ್ರತಿ ರಾತ್ರಿಯೂ ಶಿವರಾತ್ರಿ. ಅಂದರೆ ಸದಾ ಮಂಗಳಮಯವೇ..ಎಂಬುದು ಶರಣರ ಅಭಿಪ್ರಾಯ. ನಿಜವಾದ ಭಕ್ತ ಎಂದರೆ ಅವನ ನಡೆ ಪವಿತ್ರ ,ನುಡಿ ತೀರ್ಥ, ಅವನ ದೇಹವೇ ಪುಣ್ಯಕ್ಷೇತ್ರ, ಅವನ ಮನೆಯ ಅಂಗಳವೇ ಕಾಶಿ – ಕೈಲಾಸ..! ಅಂಥವನ ಕರ್ತವ್ಯ ಎಂದರೆ ದಾಸೋಹ ಎನ್ನುವಂತೆ ಇರುತ್ತಾನೆ ಎಂದು ಶರಣ ಉರಿಲಿಂಗ ಪೆದ್ದಿ ಹೇಳುವ ಮಾತು ನಿಜಕ್ಕೂ ಅರ್ಥಪೂರ್ಣ.! ನಾನೇ ಶಿವನಾಗಿರುವಾಗ ನಿರಾಕಾರ ಚೈತನ್ಯ,ಅಂತರಾತ್ಮನನ್ನು ಸ್ಮರಿಸುವುದೇ ಶಿವ- ಶಿವರಾತ್ರಿ .

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!