ಹೀಗೊಂದು ಸರ್ವ ಮನಸ್ಸುಗಳನ್ನೂ ಅರಳಿಸಿದ ಸೊಗಸಾದ ಸಾಹಿತ್ಯ ಸಂಜೆ….
ಕನ್ನಡ ಕಲಾ ಕೇಂದ್ರ ಮುಂಬಯಿ ಮತ್ತು ಮುಂಬಯಿ ಚುಕ್ಕಿ ಸಂಕುಲ ಜಂಟಿಯಾಗಿ ಆಯೋಜಿಸಿದ್ದ ಕವಿ ಲೇಖಕ ಅಂಕಣಕಾರ ಗೋಪಾಲ್ ತ್ರಾಸಿ ಸರ್ ಅವರ ಲಂಡನ್ ಟು ವ್ಯಾಟಿಕನ್ ಸಿಟಿ ಎಂಟು ದೇಶ ನೂರೆಂಟು ಭಾಷೆ ಕೃತಿ ಬಿಡುಗಡೆ ಸಮಾರಂಭ ಮತ್ತು ಕವಿಗೋಷ್ಠಿ ಕಾರ್ಯಕ್ರಮ ೨೬.೨.೨೦೨೨ ರ ಭಾನುವಾರ ಮಾಟು0ಗಾ ಮುಂಬೈ ಯ ಮೈಸೂರು ಅಸೋಸಿಯೇಷನ್ ನ ಕಾರ್ಯಕ್ರಮ ಅದಾಗಿತ್ತು.ಮೈಸೂರು ಅಸೋಸಿಯೇಷನ್ ತಲುಪಿದಾಗ ನಗುನಗುತ್ತಲೇ ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ(4.30) ಬಂದಿರುವಿರಿ ಎಂದು ಗೋಪಾಲ್ ಸರ್ ಮತ್ತು ಸಾ.ದಯಾ ಸರ್ ಅವರು ಸ್ವಾಗತಿಸಿದರು.
ಕನ್ನಡ ನುಡಿಯ ಸೊಗಡು ಸಾಹಿತ್ಯ,ಸಂಸ್ಕೃತಿ,ಕಲೆಗಳ ಆರಾಧಕರ ಹುರುಪು, ಹುಮ್ಮಸ್ಸು ಆ ಸಾಹಿತ್ಯ ಸಂಜೆಯನ್ನು ಸ್ಮರಣೀಯವಾಗಿಸಿತು.
“ನಕ್ಕು ಬಿಡೊಮ್ಮೆ ನೋವನ್ನೆಲ್ಲ ಮರೆತು,ಬಂದೊದಗುವ ಪುಟ್ಟ ಪುಟ್ಟ ಖುಷಿಗಳಲ್ಲಿ ಬೆರೆತು!” ಎನ್ನುವಂತೆ ಅಲ್ಲಿ ಸೇರಿದ ಅದೆಷ್ಟೊ ಮನಗಳ ಅಂತರಾಳದ ಸಂತೋಷ ನಗುವಾಗಿ ಇಡೀ ಸಭಾಂಗಣದಲ್ಲಿ ಆಗಾಗ ರಿಂಗಣಿಸುತ್ತಿತ್ತು.ಹಿರಿ ಕಿರಿಯರೆಂಬ ಬೇಧವಿಲ್ಲದೆ ಸಾಹಿತ್ಯದ ಆ ಸುಮಧುರ ಸಂಜೆಯನ್ನು ಅವರೆಲ್ಲ ಸಂಭ್ರಮಿಸಿದ ಪರಿ ನಿಜಕ್ಕೂ ಕಾರ್ಯಕ್ರಮಕ್ಕೆ ಶೋಭೆ ತಂದಿತ್ತು.
ಲಂಡನ್ ಟು ವ್ಯಾಟಿಕನ್ ಸಿಟಿ ಕೃತಿ ಕುರಿತು ಅದರೊಡಲಾಳದ ಭಾವನೆಗಳಿಗೆ ಜೀವ ತುಂಬಿ ನಮ್ಮ ಕಣ್ಮುಂದೆ ಸಂಪೂರ್ಣ ಕೃತಿಯ ಒಳನೋಟವನ್ನು ತೆರೆದಿಟ್ಟು ಒದಲೇಬೇಕಾದ ಪುಸ್ತಕವಿದು ಎಂದು ಕೃತಿಯನ್ನು ಓದಲೇಬೇಕೆಂದು ಮನಸ್ಸು ಹಠ ಮಾಡುವಷ್ಟು ಸೊಗಸಾಗಿ ಅಲ್ಪ ಸಮಯದಲ್ಲಿಯೇ ತಿಳಿಸುತ್ತ ಕೃತಿಕಾರರ ಜೊತೆಗೆ ಸಂವಾದದಲ್ಲಿ ಭಾಗಿಯಾದ ಜಿ.ಪಿ.ಕುಸುಮಾ ಮೇಡಂ ಮತ್ತು ಅಶೋಕ್ ವಳದೂರ ಸರ್ ಅವರಿಬ್ಬರು ಕೃತಿ ಮತ್ತು ಅದರ ಸೂಕ್ಷ್ಮತೆಗಳ ಬಗ್ಗೆ ಕವಿಗಳು ಅಲ್ಲಿ ಹೆಣೆದಿರುವ ಪದಗಳ ಕಸೂತಿಯನ್ನು ತಮ್ಮ ನುಡಿಗಳ ಚಿತ್ತಾರದಲ್ಲಿ ಬಿತ್ತರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಯೂನಿಯನ್ ಬ್ಯಾಂಕ್ ನ ಜನರಲ್ ಮ್ಯಾನೇಜರ್, ಕನ್ನಡಿಗರೂ ಆದ ವೆಂಕಟೇಶ್ ಸರ್ ಅವರ ನೇರ ದಿಟ್ಟ ಮತ್ತು ಸ್ಪಷ್ಟ ಕನ್ನಡ ಭಾಷೆ,ತಾಯ್ನಾಡು,ನೆಲ,ಜಲ ಹೀಗೆ ನಮ್ಮತನವೆಂಬ ಕನ್ನಡಾಭಿಮಾನದ ಅಂತರಾಳದ ಮಾತುಗಳು ಸರಳ,ಸುಂದರ ಮತ್ತು ಎಷ್ಟೊಂದು ಅರ್ಥಗರ್ಭಿತ ಆಗಿದ್ದವೆಂದರೆ ಹೃದಯ ಸ್ಪರ್ಶಿಸಿ ಮಳೆಯಾಗಿ,ಜೀವ ಜಲವಾಗಿ ಉಸಿರಿರುವವರೆಗೂ ಸದಾ ಹಸಿರಾಗಿ ಮನದಾಳದಲ್ಲಿ ಉಳಿದುಬಿಡುವಂತವು.ಹೌದು!…ಅಲ್ಲಿಯ ಭಾಷಣಗಳಾವುವೂ ದೀರ್ಘಸಮಯದ ಪಾಠಗಳಂತಿರದೆ ಹೊಗಳಿಕೆಯ ಬಳುವಳಿಯಂತಿರದೆ ಜ್ಞಾನದ ಗಳಿಕೆಯಂತಿದ್ದವು.ಮತ್ತಷ್ಟು, ಮಗದಷ್ಟು ಆಲಿಸಬೇಕೆಂಬ ಹಿತಮಿತ ನುಡಿಗಳಂತಿದ್ದದ್ದು ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ಚಿಕ್ಕ ಮತ್ತು ಚೊಕ್ಕವಾಗಿದ್ದದ್ದು ವಿಶೇಷ ಮತ್ತು ಸ್ವಾಗತಾರ್ಹ!
ಬಳಲಿಕೆಯನ್ನು ತೊಲಗಿಸುವ ಒಂದು ಅತ್ಯುತ್ತಮ ಸಾಧನವೆಂದರೆ ಈ ಕಲೆ,ಸೃಜನಶೀಲತೆ. ಮನಸ್ಸಿನಲ್ಲಿನ ಅನೇಕ ತಳಮಳ ತಲ್ಲಣಗಳನ್ನು, ಹೇಳಿಕೊಳ್ಳಲಾಗದ ಸುಖ ದುಃಖಗಳನ್ನು ಒಳಗವಿತಿರುವ ಭಾವನೆಗಳಿಗೆ ನಾವೊದಗಿ ಮೊದಮೊದಲು ಪದಗಳ ಜೊತೆಗೆ ಮೈತ್ರಿ ಏರ್ಪಡಿಸಿ ಶಬುದಗಳೊಂದಿಗಿನ ಅನುರಾಗದ ಅನುಸಂಧಾನವೇ ಕವನದ ಪ್ರಥಮ ಒಲವಾಗಮನಕ್ಕೆ ಕಾರಣವೆನ್ನಬಹುದು!.ಕಾವ್ಯ ಕನ್ನಿಕೆಯ ಮಿಲನ ಹೃದಯದೊಂದಿಗಾದಾಗ ಅದರನುಭವ ಅನನ್ಯ ಅಪರಿಮಿತಾನಂದದ ಶಿಖರ. ಬಲ್ಲವರೇ ಬಲ್ಲರು ಅದರಾನಂದ.ಅವಳ ಚೆಲುವಿಕೆಯನ್ನಿಲ್ಲಿ ವರ್ಣಿಸಿದಷ್ಟು ಕಡಿಮೆಯೇ!. ನವ್ಯಕ್ಕೆ ಹಾತೊರೆಯುವ ಕವಿತೆ ಒಮ್ಮೊಮ್ಮೆ ಆತುರಾತುರವಾಗಿ ಒಲಿವ ಆಕಸ್ಮಿಕ!… ಮತ್ತೊಮ್ಮೆ ಕಾಡಿಸುತ್ತ,ಬೇಸರಿಸುತ್ತ ಅಚ್ಚರಿ ಹುಟ್ಟಿಸುವ ಕಾತುರಗಾರ್ತಿ.
ಕವಿಮನಸ್ಸುಗಳೊಂದಾಗುವ ಸವಿ ಸಂಜೆಯ ಸುಸಮಯ
ಆ ನೇಸರನೂ ಬೇಕಂತಲೇ ತುಸು ತಡವಾಗಿಸುತ್ತಿದ್ದಾನೇನೋ ತನ್ನ ವಿರಮಿಸುವ ಕಾಯ! ಎಂಬಂತೆ ಆಗಾಗ ಕಿಟಕಿಯಿಂದಾಚೆಗೆ ಕಣ್ಣಾಯಿಸುವಾಗ ಆಕಾಶ ಶುಭ್ರವಾಗಿರುವಂತೆ ನನಗೆ ಭಾಸವಾಗುತ್ತಿತ್ತು.
ಜಿ.ಪಿ.ಕುಸುಮಾರವರ “ನಗರದ ಕಾಗೆ” ಕವಿತೆ ಹಾಸ್ಯದ ಜೊತೆ ಜೊತೆಗೆ ನಮ್ಮನ್ನೆಲ್ಲ ಚಿಂತನೆಗೆ ಪ್ರೇರೇಪಿಸಿತು.ವಳದೂರು ಸರ್ ಅವರ ಮಡಕೆ,ಅರುಷಾ ಶೆಟ್ಟಿ ಅವರ ನಾಲ್ಕು ಹನಿಗವನಗಳು,ಹೇಮಾ ಅಮೀನ್ ಮತ್ತು ಕಾರ್ಯಕ್ರಮದ ಉತ್ಸವ ಮೂರ್ತಿ ಲೇಖಕ,ಕವಿ ಗೋಪಾಲ್ ತ್ರಾಸಿ ಸರ್ ಅವರ ಕವಿತೆಗಳು ಗಮನಸೆಳೆದವು. ಕವಿಗೋಷ್ಠಿಯ ಪ್ರತಿ ಕವಿಗಳು ಸಾದರ ಪಡಿಸಿದ ಕವಿತೆಗಳೆಲ್ಲವೂ ಭಿನ್ನ, ವಿಭಿನ್ನ! ನೆರೆದ ಕವಿ ಮನಗಳನ್ನು ಸಾಹಿತ್ಯಾಸಕ್ತರನ್ನು ಕಂಡು ತುಂಬಾ ಸಂತಸವಾಗುತ್ತಿದೆ.ಕೊರೊನಾ ತೊಲಗಿ ಮತ್ತೇ ನಾವೆಲ್ಲರೂ ಈ ರೀತಿ ಸಾಹಿತ್ಯದ ಒಂದು ಸುಸಂದರ್ಭದಲ್ಲಿ ಸೇರಿರುವುದನ್ನು ಕಂಡು ಭಾವುಕಳಾಗಿರುವೆ ಎಂದು ಕವಿಗೋಷ್ಠಿಯ ಅಧ್ಯಕ್ಷತೆಯ ಸ್ಥಾನವನ್ನು ಅಲಂಕರಿಸಿದ್ದ ಅಡ್ವೊಕೇಟ್ ಅಮಿತಾ ಭಾಗ್ವತ್ ಅವರು ಎಲ್ಲ ಕವಿಮನಗಳ ಭಾವನೆಗಳ ದನಿಗೆ ಕಿವಿಯಾಗಿ ಎಲ್ಲರನ್ನಭಿನಂದಿಸಿ ಪ್ರೋತ್ಸಾಹಿಸುತ್ತ ಮತ್ತೆ ತಾವೂ ಕವಿಯಾಗಿ ತಮ್ಮದೊಂದು ಕವನ ವಾಚಿಸಿ ಹಾರೈಸಿದರು. ಕವಿ,ಲೇಖಕ ಸಾ.ದಯಾ ಸರ್ ಅವರ ದಕ್ಷ ಸಾರಥ್ಯದಲ್ಲಿ ಸಾಹಿತ್ಯಾಸಕ್ತ ಸಭಿಕರ ಚಪ್ಪಾಳೆಯ ಪ್ರೇರಣೆಯಲ್ಲಿ ಕವಿಗೋಷ್ಠಿ ಅದ್ಭುತವಾಗಿ ಮೂಡಿ ಬಂತು.
ಕನ್ನಡ ಕಲಾ ಕೇಂದ್ರ ಮತ್ತು ಮುಂಬಯಿ ಚುಕ್ಕಿ ಸಂಕುಲ ಬಳಗಗಳು ಜಂಟಿಯಾಗಿ ಏರ್ಪಡಿಸಿದ್ದ ಕವಿ ಲೇಖಕ ಅಂಕಣಕಾರ ಗೋಪಾಲ್ ತ್ರಾಸಿ ಸರ್ ಅವರ *ಲಂಡನ್ ಟು ವ್ಯಾಟಿಕನ್ ಸಿಟಿ* ಎಂಟು ದೇಶ ನೂರೆಂಟು ಭಾಷೆ ಕೃತಿ ಬಿಡುಗಡೆ ಮತ್ತು ಕವಿಸಮಯ ಎಂಬ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿಯ *ಸಾಹಿತ್ಯ ಸಂಜೆ* ಕಾರ್ಯಕ್ರಮದ ಕೆಲ ಸುಂದರ ಮತ್ತು ಮರೆಯಲಾರದ ಅನುಭವಗಳಿವು.ನಿಜ!… ಅಪ್ಪ ಕೂಡ ಬದಲಾಗಿದ್ದಾರೆ.ನಿಮ್ಮ ಕವಿತೆಯ ಸಾಲುಗಳು ಮನಮುಟ್ಟಿದವು! ಎಂದು ಎದುರಾದ ಪ್ರತಿಯೊಬ್ಬರೂ ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ!….ಅಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮಧುಸೂದನ್ ಸರ್ ಅವರ ಮಾತಿನಂತೆ ಆ ಸಡಗರ ಕಂಡು ಕೊಪ್ಪರಿಗೆಯಷ್ಟು ಖುಷಿ ನನಗೂ ಆದದ್ದಂತೂ ಸತ್ಯ! ಮಾಟು0ಗ ಸ್ಟೇಷನ್ ತಲುಪಿದ ಮೇಲೂ ಕೆಲ ಹಿರಿಯರು ತಮ್ಮ ಟ್ರೆನ್ ಹಿಡಿಯುವ ಅವಸರದಲ್ಲಿಯೂ ಓ!….ನೀವೇ ಅಲ್ಲವೇ ಅಪ್ಪ ಕವಿತೆ ವಾಚಿಸಿದ್ದು? ಅಪ್ಪನನ್ನು ಅದೆಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡು ಕವನದಲ್ಲಿ ಬಿಂಬಿಸಿದ್ದೀರಿ! ಕವನ ಕೇಳಿ ನಾವು ತುಂಬಾ ಭಾವುಕರಾದೆವು ಎಂದು “ಅಪ್ಪ ಬದಲಾಗಿದ್ದಾರೆ” ಎಂಬ ನನ್ನ ಸ್ವರಚಿತ ಕವಿತೆಯನ್ನ ಆಲಿಸಿ ಹರಸಿದ ಎಲ್ಲರನ್ನು ಸ್ಮರಿಸುತ್ತ ಒಂದು ಕ್ಷಣ ಮನ ಹೆಮ್ಮೆಯಿಂದ ಬೀಗುತ್ತಿರುವಾಗಲೇ ಕವಿಗೋಷ್ಠಿಗೆಂದು ಬೇರೆ ಕವಿತೆಯ ತಯಾರಿಮಾಡಿಕೊಂಡಿದ್ದು, ಕಾರ್ಯಕ್ರಮಕ್ಕೆ ಹೊರಡುವ ತರಾತುರಿಯಲ್ಲಿ ಮತ್ತೊಂದು ಕವಿತೆ ತಂದಿದ್ದು ಕಂಡು ಗಲಿಬಿಲಿಗೊಂಡು ಮೊಬೈಲ್ನಲ್ಲಿ ತಡಕಾಡಿದಾಗ ನನ್ನ ಕೈ ಹಿಡಿದು ಮುನ್ನಡೆಯುವಂತೆ ಮಾಡಿ ನನ್ನಿಂದ ಓದಿಸಿಕೊಂಡವರೇ ಈ ಬದುಕಿಗೆ ಮುನ್ನುಡಿ ಬರೆದ ನನ್ನೊಳಗಿನ ನನ್ನಪ್ಪ ! ಎಂದು ನೆನೆದಾಗ ಇಲ್ಲಿ ಗೆದ್ದದ್ದು ನೀನೂ ಅಲ್ಲ ನಿನ್ನ ಕವಿತೆಯೂ ಅಲ್ಲ ಇಲ್ಲಿ ಗೆದ್ದಿದ್ದು ಅಪ್ಪ ಎಂಬ ಹೃದಯ ಕೂಗಿಗೆ ಹೌದೆನ್ನುತ ದೈಹಿಕವಾಗಿ ನೂರಾರು ಕಿಲೋಮೀಟರ್ ದೂರದಲ್ಲಿದ್ದರು ಮಾನಸಿಕವಾಗಿ ಸದಾ ಹತ್ತಿರದಲ್ಲಿರುವ ಅಪ್ಪನ ಜೊತೆಗಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು.ಕೆಲವು ಸ್ಪರ್ಧೆಗಳಲ್ಲಿ ಬಹುಮಾನ ತಂದುಕೊಟ್ಟ ಅಪ್ಪ ಬದಲಾಗಿದ್ದಾರೆ! ಎಂಬ ಕವಿತೆ ಇಲ್ಲಿ ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಅಂದಿನ ಕಾರ್ಯಕ್ರಮದಲ್ಲಿ ಗೋಪಾಲ್ ಸರ್,ಸಾ.ದಯಾ ಸರ್,ಜಿ.ಪಿ ಕುಸುಮಾ ಮೇಡಂ,ಹೇಮಾ ಅಮೀನ್ ಹೀಗೆ ಒಂದಿಷ್ಟು ಕವಿ,ಕವಿಯತ್ರಿಯರಷ್ಟೇ ನನಗಲ್ಲಿ ಚಿರಪರಿಚಿತರು.ಉಳಿದಂತೆ ಅಲ್ಲಿ ಸೇರಿದವರೆಲ್ಲರೂ ಹೊಸ ಮುಖಗಳೆ. ಆ ಅಪರಿಚಿತರಲ್ಲಿಯೂ ಹೋದ ಕೆಲವೇ ಕ್ಷಣಗಳಲ್ಲಿ ತಮ್ಮ ಮುಗುಳ್ನಗೆಯಿಂದ ಆತ್ಮೀಯರಂತೆ ನೀವೂ ಕವಿತೆ ಓದುತ್ತಿರುವಿರಾ!?… ನಾನೇನಿದ್ರೂ ಪ್ರೇಕ್ಷಕಳು ಎಂದು ನನ್ನ ಹೆಸರು ಕೇಳಿ ಆಲ್ ದ ಬೆಸ್ಟ್ ಹೇಳಿದಾಗ ಧನ್ಯವಾದವೆಂದು ಪ್ರತಿಕ್ರಿಯಿಸಿ ಆಗಾಗ ಮಾತಿಗಿಳಿದು ನಗುವಿಗೂ ಜೊತೆಯಾಗಿ ಮನಸ್ಸಿಗೂ ಹತ್ತಿರದವರಾಗಿ ಅವರೂ ಅಪ್ಪ ಕವಿತೆಯನ್ನು ಮೆಚ್ಚಿಕೊಂಡು ಕೈ ಕುಲುಕಿ ಅಭಿನಂದಿಸಿದಾಗ ಅವರು ಪ್ರಸಿದ್ಧ ರಂಗಭೂಮಿ ಕಲಾವಿದೆ ಸುಧಾ ಶೆಟ್ಟಿ ಅಂತ ನಂತರ ತಿಳಿದು ಅವರ ಸರಳತನಕ್ಕೆ, ಮುಗ್ಧ ಮನಸ್ಸಿಗೆ,ಮುಗುಳ್ನಗೆಗೆ ಮಾರುಹೋಗಿ ಅವರ ಅಭಿಮಾನಿಯಾದೆ. ಕವಿಗೋಷ್ಠಿಯ ಮಾಹಿತಿ ಕೊಟ್ಟು ಕವಿತೆ ವಾಚಿಸಲು ಕರೆಯೋಲೆಯನ್ನಿತ್ತು ಇಂತಹ ಒಂದು ಅತ್ಯುತ್ತಮ, ಅತ್ಯದ್ಭುತ ಸೊಗಸಾದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸದಾವಕಾಶಕ್ಕೆ ಕಾರಣರಾದ ಸಾ.ದಯಾ ಸರ್ ಅವರಿಗೆ ಸಾವಿರದ ಶರಣು.ಕನ್ನಡ ಕಲಾ ಕೇಂದ್ರ ಮುಂಬಯಿ ಮತ್ತು ಮುಂಬಯಿ ಚುಕ್ಕಿ ಸಂಕುಲ ಉಭಯ ಸಂಸ್ಥೆಗಳ ಎಲ್ಲ ಪದಾಧಿಕಾರಿಗಳಿಗೆ, ಕಾರ್ಯಕ್ರಮದ ನಿರ್ವಾಹಕರಿಗೆ ಮನದಾಳದ ಅನಂತಾನಂತ ಧನ್ಯವಾದಗಳನರ್ಪಣೆ.
✍️ಸರೋಜಾ ಶ್ರೀಕಾಂತ್ ಅಮಾತಿ