ನೇತ್ಪ್ರೋಂಜ
ಹಗಲಿನ ಕುರುಡರ ಕಾನನದೊಳಗೆ
ಬದುಕಿನ ಕಾರ್ಪಣ್ಯಕೆ ಕರಗಿದವರ ಬಾಳಿಗೆ
ಬೆಂಗಾವಲಾಗಿ ಅವರ ಇರುಳತನಗಳಿಗೆ
ನಲುಮೆಯ ನೇತ್ಪ್ರೋಂಜರಾಗಿ ಜೀವಗಳಿಗೆ
ಅಮೃತದ ಸವಿಧಾರೆಯೆರೆದ ಗುರುವೇ ಶರಣಾರ್ಥಿ
ಜಗದ ಮಾಯೆ ಜಂಜಡದಲಿ ಮುಳುಗಿದವರ
ಜಗದ ಜ್ಯೋತಿಯಾಗುವ ಹಾದಿಯನು ಮುಚ್ಚಿದವರ
ಮನಮೆಚ್ಚಿ ಸಾಗಬೇಕೆಂದು ಸತ್ಕರಿಸಿದವರ
ಸರ್ವರನು ಏಕೋಭಾವದಿ ಕಣ್ಣು ತೆರೆಸಿದವರ
ಮನ ಮನೆಗಳಿಗೆ ಶಾಂತಿಯ ಚೇತನವಾದ ಗುರುವೇ ಶರಣಾರ್ಥಿ
ಜೋಳಿಗೆ ಹಿಡಿದು ಅಹಂಕಾರವನು ಅಳಿಸಿ
ದಾಸೋಹಂ ಭಾವದಿ ಸೋಹಂ ಎಂಬುದ ಅಳಿಸಿ
ದಾರಿಗಾಣದೇ ಮಬ್ಬಾದ ಜೀವಗಳಲಿ ಕಣ್ಣರಳಿಸಿ
ಬದುಕಿನ ಹಾದಿಗೆ ಹೆಗ್ಗುರಿಯ ಪಯಣ ನಿರ್ಮಿಸಿ
ನಾಡಿನ ನಡೆಗೆ ನರನಾಡಿಯಾದ ಗುರುವೇ ಶರಣಾರ್ಥಿ
ಏಳುಸ್ವರಗಳ ಮೂಲಕವೇ ಬದುಕಿನ ಭಿತ್ತಿಗೆ ಚಿತ್ರ ಕಂಡರಿಸಿದಾತ
ದಣಿವರಿಯದೇ ಗಾನ ಸುಧೆಯನು ಧರೆಗಿಳಿಸಿದಾತ
ತುಲಾಭಾರದ ನೆಪದಲಿ ಮಕ್ಕಳ ತುತ್ತೀನ ಚೀಲದ ಆಶ್ರಯದಾತ
ಪದಕ ಪದವಿಗಳಿಗೆ ಅಂಟಿಕೊಳ್ಳದ ಉತ್ತುಂಗದ ಪುಣ್ಯದಾತ
ಬದುಕಿನ ಹೆದ್ದಾರಿಗೊಂದು ದಿಕ್ಸೂಚಿಯಾದ ಗುರುವೇ ಶರಣಾರ್ಥಿ
ಡಾ. ಪಂಡಿತ ಪುಟ್ಟರಾಜ ಗವಾಯಿ ಗಳ ಕುರಿತು
(ಪೂಜ್ಯರ ಜನುಮದಿನದ ನೆನಪಿಗೆ)
–ಡಾ ನಾಹೀರಾ ಕುಷ್ಟಗಿ