ಸಮಾಜದಲ್ಲಿ ಸ್ತ್ರೀ
ಸುಣ್ಣವಿಲ್ಲದಾ ವೀಳ್ಯೆ, ಬಣ್ಣವಿಲ್ಲದ ಮನೆ
ಹೆಣ್ಣಿಲ್ಲದಾ ಸಂಸಾರ
ಮಣ್ಣಲ್ಲಿ ಎಣ್ಣೆ ಹೊಯ್ದಂತೆ ಸರ್ವಜ್ಞ.
ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದು ವರ್ಷಗಳ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಾವು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ನೋಡಲು ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಹಿಂದಿನ ಕಾಲದಲ್ಲಿ ಕೇವಲ ಮನೆಯ ನಾಲ್ಕು ಗೋಡೆಯ ಮಧ್ಯೆ ಸೀಮಿತವಾದ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಇರುವಿಕೆಯನ್ನು ಗೊತ್ತುಪಡಿಸಿದ್ದಾಳೆ. ಅದು ತಾಂತ್ರಿಕ ಕ್ಷೇತ್ರವಿರಬಹುದು, ಧಾರ್ಮಿಕ ಇರಬಹುದು. ಯಾವ ಕ್ಷೇತ್ರದಲ್ಲಾದರೂ ಮಹಿಳೆ ತನ್ನನ್ನು ತೊಡಗಿಸಬಲ್ಲಳು. ಇದು ಇಂದಿನ ಸಾಧನೆ. ಇದುವರೆಗೂ ಪುರುಷರಿಗಷ್ಟೇ ಸೀಮಿತವಾದ ಕ್ಷೇತ್ರಗಳಿಗೆ ಲಗ್ಗೆ ಹಾಕಿದ್ದಾಳೆ, ಮಾತ್ರವಲ್ಲ ಅದರಲ್ಲಿ ಯಶಸ್ಸು ಸಾಧಿಸಿದ್ದಾಳೆ ಎಂದರೆ ತಪ್ಪಾಗಲಾರದು.
ಇಷ್ಟಾದರೂ ಸಹ ಲಿಂಗಾಧಾರಿತ ತಾರತಮ್ಯಗಳಿವೆ. ಮಹಿಳೆಗೂ ರಾಜಕೀಯ, ಆರ್ಥಿಕ-ಸಾಮಾಜಿಕ ಧೋರಣೆಗೂ ನಿಕಟ ಸಂಬಂಧವಿದೆ. ” ರಾಜಕೀಯ ಅಧಿಕಾರ ಆಕೆಗೆ ಬೇಕಿಲ್ಲ. ಆರ್ಥಿಕ ಜವಾಬ್ದಾರಿಯನ್ನು ಆಕೆ ಹೊರಲಾರಳು” ಎಂಬ ಪುರುಷಪ್ರಧಾನ ಧೋರಣೆ ಒಂದು ಕಡೆ, ಮತ್ತೊಂದೆಡೆ ವರದಕ್ಷಿಣೆ ಎಂಬ ಅಮಾನವೀಯ ಬೇಡಿಕೆ, ದುಬಾರಿಯಾಗಿರುವ ಶಿಕ್ಷಣ, ಅಪಹರಣ ಮತ್ತು ಶೀಲಹರಣ ಹೀಗೆ ಮಹಿಳೆಯರನ್ನು ಒಂದು ವಸ್ತುವನ್ನಾಗಿ ಕಾಣುವ ರೀತಿ, ಜಾಗತೀಕರಣದಿಂದ ಉಂಟಾಗಿರುವ ಸ್ಪರ್ಧಾತ್ಮಕ ಬದುಕು — ಇವೆಲ್ಲವೂ ಮಹಿಳೆಯರ ಅಸ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ಮಹಿಳೆಗೆ ಆದ್ಯತೆ ನೀಡಿ ಸಂರಕ್ಷಿಸಬೇಕಾಗುತ್ತದೆ. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕಡ್ಡಾಯ ಮಾಡಬೇಕು.ವಿದ್ಯೆ ಇದ್ದಾಗ ಯಾವುದೇ ಕಷ್ಟ ಬಂದರೂ ನಿಭಾಯಿಸುವ ಧೈರ್ಯ ತಾನಾಗಿ ಬರುತ್ತದೆ. ಮಹಿಳೆ ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಹಿಂಜರಿಯಬಾರದು. ಆತ್ಮವಿಶ್ವಾಸ ಇದ್ದಾಗ ಯಾವ ಕೆಲಸವನ್ನಾದರೂ ಮಾಡಬಹುದು.” ಭಾರತೀಯ ಸ್ತ್ರೀ ಸುಶಿಕ್ಷಿತ ಳಾದರೆ, ಹಿಂದೂ ಸಮಾಜವನ್ನು ಉದ್ಧರಿಸಬಲ್ಲಳು, ಸ್ತ್ರೀಯರಿಂದಲೇ ಸ್ತ್ರೀಯರ ಉನ್ನತಿ ಸಾಧ್ಯ” ಎಂದು ಸ್ತ್ರೀ ಸಬಲತೆಯ ಬಗ್ಗೆ ಚಿಂತಿಸುತ್ತಿದ್ದ ಸ್ವಾಮಿ ವಿವೇಕಾನಂದರ ಮಹಿಳಾ ಸಬಲೀಕರಣದ ಬಗೆಗಿನ ಅವರ ಮಾತು ಅಕ್ಷರಶಃ ಸತ್ಯ. ಪುರುಷರಷ್ಟೇ ಧೃಡ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮಹಿಳೆಗೂ ಇದೆ. ಸ್ವಪ್ರಯತ್ನದಿಂದ ಮುನ್ನುಗ್ಗಿದಾಗ ಪ್ರತಿಕ್ಷೇತ್ರದಲ್ಲೂ ಉನ್ನತ ಸ್ಥಾನ-ಮಾನ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮಹಿಳೆ ಮತ್ತು ಪುರುಷ ಇಬ್ಬರು ಒಂದು ನಾಣ್ಯದ ಎರಡು ಮುಖವಿದ್ದಂತೆ. ಮಹಿಳೆ-ಪುರುಷರ ಬೆಂಗಾವಲಿನಿಂದಲೇ ಮುಂದೆ ಬಂದಿರುವುದು ಎಂಬುದನ್ನು ಮರೆಯಬಾರದು.ಆಕೆ ಅನುಮಾನಾಸ್ಪದ ಮನಸ್ಸು ತೊರೆದು ವಿಶಾಲ ಮನೋಭಾವ ಹೊಂದಿರಬೇಕು. ಸಂಕುಚಿತ ಮನೋಭಾವ ತೊರೆಯಬೇಕು. ಮಹಿಳೆ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪುರುಷನಷ್ಟೇ ಸಮರ್ಥಳು. ಮನೆಯ ಯಜಮಾನಿಯಾಗಿ, ಕೈಹಿಡಿದ ಪತಿಗೆ ಪ್ರೀತಿಯ ಪತ್ನಿಯಾಗಿ, ಮಕ್ಕಳ ಮಾರ್ಗದರ್ಶಿಯಾಗಿ, ತಂದೆತಾಯಿಯರ ಹೆಮ್ಮೆಯ ಪುತ್ರಿಯಾಗಿ, ಸಮಾಜದ ಕಣ್ಮಣಿಯಾಗುವತ್ತ ಶ್ರಮಿಸಬೇಕು.
ಕಾಲ ಬದಲಾದಂತೆ ಮಹಿಳೆಯರ ಏಳಿಗೆ ಜೊತೆಗೆ ಸಮಸ್ಯೆಗಳು ಹೊಸ ರೂಪ ತಾಳಿವೆ.ಇಂದು ಮಹಿಳೆ ಸತಿ ಸಹಗಮನ ಪದ್ಧತಿ ವಿರುದ್ಧ ಹೋರಾಡಬೇಕಿಲ್ಲ.. ವಿಧವಾ ವಿವಾಹ ಪದ್ಧತಿ ಕಡ್ಡಾಯವಿಲ್ಲ. ಅಕ್ಷರ ಕಲಿಯುವ ಹಕ್ಕಿಗೆ ಧಾರ್ಮಿಕ ನಿಷೇಧವಿಲ್ಲ. ವಿಚ್ಛೇದನ, ಮತದಾನ, ದತ್ತು ಸ್ವೀಕಾರ, ಆಸ್ತಿಯ ಹಕ್ಕು ಇವೆಲ್ಲ ಕಾನೂನುಬದ್ಧವಾಗಿ ನೀಡಲ್ಪಟ್ಟಿವೆ. ಆದರೆ ಆಧುನಿಕ ಮಹಿಳೆಯ ಸಮಸ್ಯೆಗಳು ಹೊಸ ರೂಪ ತಾಳಿ ನಿಂತಿವೆ. ಆಧುನಿಕತೆ ನೀಡಿರುವ ಮುಕ್ತತೆ ಪಿತೃಪ್ರಧಾನ ಹಾಗೂ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಆಚೆಗೆ ದಾಟಿಲ್ಲ. ಮಹಿಳೆ ಎಂಬ ಪರಿಕಲ್ಪನೆ, ಅವಳ ಕರ್ತವ್ಯ– ಜವಾಬ್ದಾರಿಗಳ ಕುರಿತು ಪರಿಕಲ್ಪನೆ ಬದಲಾಗಿಲ್ಲ.ಅವಳ ಜೈವಿಕ ಕರ್ತವ್ಯಗಳ ಹೊರತಾಗಿ ನಾಗರೀಕ ವ್ಯಕ್ತಿಯೆಂದು ಪರಿಗಣಿಸಲು ಸಾಧ್ಯವಾಗಿಲ್ಲ.ಸನಾತನ ಪಿತೃಪ್ರಧಾನ ಚೌಕಟ್ಟಿಗೆ ಮನಸ್ಸುಗಳು ಒಗ್ಗಿಕೊಂಡ ಮನಸ್ಸುಗಳು ಆಡಳಿತದಲ್ಲೂ, ನ್ಯಾಯಾಂಗ — ಪೊಲೀಸ್ ವ್ಯವಸ್ಥೆಯಲ್ಲೂ ಅಂತರ್ಗತವಾಗಿವೆ. ಹೀಗಾಗಿ ಇಂದಿಗೂ ಶಿಕ್ಷಣ ಉದ್ಯೋಗ ಅರಸಿ ಹೋಗುವ ಹೆಣ್ಣುಮಕ್ಕಳಿಗೆ ಸುರಕ್ಷತೆ ಪ್ರಥಮ ಆದ್ಯತೆಯ ವಿಷಯವಾಗಿದೆ. ಐಎಎಸ್ ಆಫೀಸರ್ ರೂಪನ್ ಬಜಾಜ್, ಏರ್ಫೋರ್ಸ್ ನ ಅಂಜಲಿಗುಪ್ತ,ಮಾತ್ರವಲ್ಲ ಸರ್ಕಾರದ,ಸಮಾಜ ಕಾರ್ಯಕರ್ತೆಯರು ಎಲ್ಲರೂ ಉದ್ಯೋಗ ಸ್ಥಳದ ಸುರಕ್ಷತೆಯ ಬಗೆಗೆ ಸಮನಾಗಿಯೇ ಯೋಚಿಸುವಂತಹ ಸ್ಥಿತಿಯಿದೆ. ಶಾಲೆಯ ಎಳೆಯ ಮಕ್ಕಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುವ ವರದಿಗಳನ್ನು ನೋಡುತ್ತಿದ್ದೇವೆ. ಜಾಗತೀಕರಣದ ದಿನಗಳಲ್ಲಿ ಸರಕು ಸಂಸ್ಕೃತಿಯ ಸರಕಿನ ಮಾರಾಟದ ವೇಗೋತ್ಕರ್ಷವಾಗಿ ಹೆಣ್ಣು ಬಳಕೆಯಾಗುತ್ತಾ, ಹಲವು ಆಮಿಷಗಳಿಗೂ ಗುರಿಯಾಗುತ್ತಿದ್ದಾಳೆ. ಹೀಗಿರುವಾಗ ಮಹಿಳೆ ಲೈಂಗಿಕ ದೌರ್ಜನ್ಯ, ವೃತ್ತಿ ಆಯ್ಕೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ತಾರತಮ್ಯ, ಧರ್ಮ– ಸಮಾಜ –ದಾಂಪತ್ಯದಲ್ಲಿ ಲಿಂಗತಾರತಮ್ಯ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ತಲಸ್ಪರ್ಶಿಯಾಗಿ ಅರಿಯಬೇಕಿದೆ. ಮಹಿಳೆಯರ ವರ್ತಮಾನದ ಸೂಕ್ಷ್ಮ ತಲ್ಲಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಮಹಿಳಾ ಅಧ್ಯಯನಗಳು ನಡೆಯಬೇಕಿದೆ ಮತ್ತೊಂದು ಬಹಳ ನೋವಿನ ಸಂಗತಿ ಎಂದರೆ ಇಂದು ಬಹುತೇಕ ಮಹಿಳೆಯರು ಪಾಶ್ಚಿಮಾತ್ಯ ದೇಶದವರನ್ನು ಅನುಸರಿಸುವಲ್ಲಿ ಎಲ್ಲರೂ ಮುಂದಾಗಿದ್ದೇವೆ. ಮದುವೆ ಬೇಡ, ದುಡ್ಡೇ ಮುಖ್ಯ, ಮಕ್ಕಳಿಲ್ಲದಿದ್ದರೆ ಏನು ಎಂಬ ಭಾವನೆ, ವಿವಾಹ ವಿಚ್ಛೇದನ, ಮಾದಕ ವಸ್ತುಗಳ ಸೇವನೆ ಇತ್ಯಾದಿಗಳು ಸೇರಿಕೊಂಡುಬಿಟ್ಟಿವೆ. ಆದರೆ ಪಾಶ್ಚಿಮಾತ್ಯರಲ್ಲಿ ಈಗ ಡೈವರ್ಸ ಕೇಸಗಳನ್ನು ಕಡಿಮೆ ಮಾಡಲು ಶ್ರಮಿಸುತ್ತಿದ್ದಾರೆ. ಕುಟುಂಬ ಮೌಲ್ಯಗಳ ತ್ತ ಗಮನ ಹರಿಸುತ್ತಿದ್ದಾರೆ. ಯೋಗಾಸನ ಆಯುರ್ವೇದ ಇನ್ನಿತರ ಭಾರತೀಯ ಸಂಸ್ಕೃತಿಯ ಒಲವು ತೋರಿಸಿದ್ದಾರೆ. ಗಂಡು ಮಕ್ಕಳಿಗೂ ಸಹ ತಂದೆ-ತಾಯಿಯರು ಮಾರ್ಗ ತೋರಿಸಬೇಕು ಕೇವಲ ಸಂಪಾದನೆಯೊಂದೇ ಸಾಲದು. ಆತ ಒಬ್ಬ ಸಮರ್ಥ ಮಾದರಿ ಪ್ರಜೆಯಾಗಿ ಬಾಳಬೇಕು. ಸಮಾಜದಲ್ಲಿ ಅನುಕರಣೀಯ ವಾಗಿರಬೇಕು. “ಮಹಿಳೆ ಎಂದಿಗೂ ಅಂಜುಕುಳಿ ಯಾಗದೆ ಆತ್ಮಶಕ್ತಿಯನ್ನು ಪ್ರಬಲ ಗೊಳಿಸಿ ಕೊಳ್ಳಬೇಕು” ಎಂದು ಮಹಾತ್ಮ ಗಾಂಧಿಜಿ ಹೇಳುತ್ತಿದ್ದರು. ಬಾಪೂಜಿಯವರ ವಿಚಾರಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮಾಧ್ಯಮಗಳು ಸರಿಯಾದ ರೀತಿಯಲ್ಲಿ ಮಹಿಳೆಯರ ವಿಚಾರಗಳನ್ನು ತಿಳಿಸುವುದರ ಜೊತೆಗೆ ಮಹಿಳೆಯ ಆತ್ಮಶಕ್ತಿ ಜಾಗೃತಿ ಪಡೆದುಕೊಳ್ಳುವಂತಹ ಹೆಚ್ಚೆಚ್ಚು ವಿಷಯಗಳನ್ನು ಸಮಾಜಕ್ಕೆ ನೀಡಿದಲ್ಲಿ ಸ್ತ್ರೀ ಸಬಲೆಯಾಗಿ ಕುಟುಂಬದ ಜೊತೆಗೆ ಸಮಾಜದ,ದೇಶದ ಶಕ್ತಿಯಾಗುವಲ್ಲಿ ಸಂಶಯವಿಲ್ಲ.
-ಶ್ರೀಮತಿ ರೇಖಾ ಪಾಟೀಲ
ರಾಯಚೂರು