ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ:
**
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.
**
ಮಹಿಳೆಯರಿಗೆ ಸುರಕ್ಷತೆ ಕೊಡುವ ಸಂಕಲ್ಪ ತೊಡಬೇಕು: ಪ್ರೊ. ವಿಜಯಲಕ್ಷ್ಮೀ ಪುಟ್ಟಿ.
e-ಸುದ್ದಿ ಮುಂಬೈ
ಮುಂಬೈ, ಮಾ :8- ” ಜನಪದ ಸಾಹಿತ್ಯ, ವಚನ ಸಾಹಿತ್ಯ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿರುವ ಸಾಹಿತ್ಯ ಸಂಪತ್ತನ್ನು ನಾವು ಅಳೆಯಲು ಸಾಧ್ಯವಿಲ್ಲ. ಜನಪದ ಗರತಿಯರು ಪ್ರಾಸಂಗಿಕವಾಗಿ ಹಾಡ್ತಾ , ಸ್ವಗತದಲ್ಲಿ ತಮ್ಮ ಭಾವನೆಗಳನ್ನು ಬಯಲು ಮಾಡಿದರು. ಸಾಹಿತ್ಯದ ಭಾಷೆ, ವ್ಯಾಕರಣ, ಛಂದಸ್ಸು ಗೊತ್ತಿಲ್ಲದೆ ಉತ್ಕೃಷ್ಟ ಸಾಹಿತ್ಯವನ್ನು ಅನುಭವದ ಮೂಸೆಗಳ ಮೂಲಕ ಕಟ್ಟಿಕೊಟ್ಟವರು ಜನಪದರು. ಜನಪದ ಗೀತೆಗಳಲ್ಲಿ ಸ್ವಗತವೂ ಇದೆ, ಸಂವಾದವೂ ಇದೆ. ವಚನಕಾಲದ ಮಹಿಳೆಯರು ವಚನಗಳನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಮಾಡಿಕೊಂಡು ಅಂದಿನ ಸಾಮಾಜಿಕ ವ್ಯವಸ್ಥೆಯನ್ನು, ಸ್ಥಿತಿಗತಿಗಳನ್ನು ಕಟ್ಟಿಕೊಟ್ಟರು . ಆವಾಗಲೇ ನೂರಾರು ವಚನಕಾರ್ತಿಯರು ಸ್ವಗತದಿಂದ ಸಂವಾದದೆಡೆಗೆ ಸಾಗಿದ್ದು. ಹೆಣ್ಣಿನ ಸಾಹಿತ್ಯ ಅಡುಗೆ ಮನೆ ಸಾಹಿತ್ಯವೆಂದು ಗೇಲಿ ಮಾಡಲಾಗುತ್ತದೆ, ಆದರೆ ಇಂದಿನ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಮುಖ್ಯವಾಹಿನಿಗೆ ಪರಿಚಯಿಸುವರು. ಸ್ತ್ರೀ – ರಂಗಭೂಮಿ, ಸಿನಿಮಾ, ರಾಜಕೀಯ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೈಯಾಡಿಸಿ ತಮ್ಮ ಛಾಪು ಮೂಡಿಸುವ ಪ್ರಯತ್ನ ಮಾಡ್ತಾರೆ. ಎಲ್ಲಾ ರಂಗಗಳಲ್ಲಿ ಅಸ್ಮಿತೆಯನ್ನು ಕಂಡುಕೊಳ್ಳುವ, ಪ್ರಭಾವವನ್ನು ಬೀರುವ ಪ್ರಯತ್ನ ನಾವು ಮಹಿಳೆಯರು ಮಾಡುತ್ತೇವೆ. ಸಮಾಜದಲ್ಲಿ ಎಲ್ಲರೂ ಮಹಿಳೆಯನ್ನು ಸುರಕ್ಷಿತರನ್ನಾಗಿರಿಸಿಕೊಳ್ಳುವ ಸಂಕಲ್ಪ ಮಾಡಬೇಕು ” ಎಂದು ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದ ಆಂಗ್ಲ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಜಯಲಕ್ಷ್ಮಿ ಪುಟ್ಟಿಯವರು ಅಭಿಪ್ರಾಯ ಪಟ್ಟರು. ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಝೂಮ್ ಅಂತರ್ಜಾಲ ವೇದಿಕೆಯಲ್ಲಿ ಆಯೋಜಿಸಿದ್ದ , ” ಮಹಿಳೆಯರು ಸ್ವಗತದಿಂದ ಸಂವಾದದೆಡೆಗೆ ” ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು . ತಮ್ಮ ಉಪನ್ಯಾಸದ ವಿಷಯಕ್ಕೆ ಪೂರಕವಾಗಿ ಅನೇಕ ಜಾನಪದ ಹಾಡುಗಳು ಹಾಗೂ ವಚನಗಳನ್ನು ಹಾಡಿ ತೋರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಆದ ಡಾ ಜಿ ಎನ್ ಉಪಾಧ್ಯರು, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ” ಮೂರು ಶತಮಾನಗಳ ಹಿಂದೆಯೇ ಸಂಚಿ ಹೊನ್ನಮ್ಮ ತನ್ನ ” ಹದಿಬದೆಯ ಧರ್ಮದಲ್ಲಿ, ‘ ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ‘ ಎಂದು ಸ್ತ್ರೀ ಪುರುಷರ ನಡುವಿನ ಅಸಮಾನತೆಯನ್ನು ಖಂಡಿಸಿದ್ದಾಳೆ. ಇಂದಿಗೂ ಆ ಚಾಳಿ ಕಮ್ಮಿ ಆಗಿಲ್ಲ. ಮಹಿಳೆಗೆ ಅತ್ತ ದರಿ ಇತ್ತ ಪುಲಿ ಎಂಬಂತಹ ಪರಿಸ್ಥಿತಿ ಇದೆ, ಸಮುದಾಯದಲ್ಲಿ ಆಕೆಗೆ ಬೇಕಾದ ಗೌರವ ಸಿಗಲಿಲ್ಲವೇನೋ ‘ ಎಂದು ವಿಷಾದಿಸಿದರು. ‘ ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲೇ ಹೆಣ್ಣು ಗಂಡಿನ ನಡುವೆ ಭೇದ ಇಲ್ಲ ಎಂಬ ಅರಿವನ್ನು ಮೂಡಿಸಬೇಕು. ಮಹಿಳಾದಿನ ಕಾಟಾಚಾರಕ್ಕೆ ಒಂದೇ ದಿನದ ಆಚರಣೆ ಆಗಬಾರದು, ಮಹಿಳೆಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ಸಿಗಬೇಕು ‘ ಎಂದರು.
ವಿಭಾಗದ ಸಂಶೋಧನ ಸಹಾಯಕರಾದ ಕಲಾಭಾಗ್ವತ್ ಅವರು ‘ಗೀತಗುಂಜನ’ದಲ್ಲಿ ಡಾ. ಜೀವಿ ಕುಲಕರ್ಣಿ ಹಾಗೂ ಡಿ. ಎಸ್. ಕರ್ಕಿಯವರ ಕವನಗಳನ್ನು ಹಾಡಿದರು. ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ಅವರು ‘ ಅಬಲರು ನಾವಲ್ಲ, ಸಬಲರು ನಾವೆಲ್ಲ ‘ ಎಂಬ ತಮ್ಮ ಲೇಖನ ವಾಚಿಸಿದರು.
ಕಾರ್ಯಕ್ರಮವನ್ನು ಸಂಯೋಜಿಸಿರುವ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ ಪೂರ್ಣಿಮಾ ಸುಧಾಕರ ಶೆಟ್ಟಿಯವರು ಉಪನ್ಯಾಸಕಾರರನ್ನು ಪರಿಚಯಿಸಿ ಸ್ವಾಗತಿಸಿದರು. ಶಶಿಕಲಾ ಹೆಗಡೆಯವರು ವಂದನಾರ್ಪಣೆಗೈದರು . ವಿಭಾಗದ ಸಂಶೋಧನ ವಿದ್ಯಾರ್ಥಿ ಜಯಾ ಸಾಲ್ಯಾನ್ ಅವರ ತಾಂತ್ರಿಕ ಸಹಾಯವಿತ್ತು. ದೇಶದ ವಿವಿಧೆಡೆಯಿಂದ ಆಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ-ಸವಿತಾ ಅರುಣ್ ಶೆಟ್ಟಿ
ಪ್ರಥಮ ಎಂ. ಎ .