ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು : ಡಾ.ಭೇರ್ಯ ರಾಮಕುಮಾರ್
e-ಸುದ್ದಿ ಕೃಷ್ಣರಾಜಸಾಗರ
ಮಹಿಳೆಯರಿಗೆ ಮೀಸಲಾತಿ ಕೊಡುವ ತಂತ್ರ ಸಾಕು.ವಿಶ್ವದಲ್ಲಿ ಪುರುಷರಷ್ಟೇ ಸಂಖ್ಯೆಯಲ್ಲಿರುವ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಕೃಷ್ಣ ರಾಜನಗರ ತಾಲ್ಲೂಕು ಘಟಕವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ಆಧುನಿಕ ಮಹಿಳೆಯರ ಮನದ ತುಡಿತಗಳು ಹಾಗೂ ಎದುರಿಸುತ್ತಿರುವ ಸವಾಲುಗಳು “ಎಂಬ ವಿಷಯದಡಿ ಅಂತರ್ಜಾಲ ಆಧಾರಿತ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.ಏರ್ಪಡಿಸಿದ್ದ ‘ಆಧುನಿಕ ಮಹಿಳೆ’ ಆನ್ಲೈನ್ ‘ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಪ್ರಾಚೀನ ಕಾಲದಿಂದಲೂ ಮಹಿಳೆಯರು ಸಾಮಾಜಿಕ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ ಅಕ್ಕ ಮಹಾದೇವಿ, ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ, ಝೂನ್ಸಿ ರಾಣಿ ಲಕ್ಷ್ಮಿಬಾಯಿ, ಬೆಳವಡಿ ಮಲ್ಲಮ್ಮ ,ರಾಣಿ ಅಬ್ಬಕ್ಕ ರಾಷ್ಟ್ರ ದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಕೆಚ್ಚು ತುಂಬಿದರು. ಪ್ರಧಾನ ಮಂತ್ರಿಯಾಗಿ ಬಡವರ, ದೀನ ದುರ್ಬಲರ ಅಭ್ಯುದಯಕ್ಕೆ ಶ್ರಮಿಸಿದ ಶ್ರೀಮತಿ ಇಂದಿರಾ ಗಾಂಧಿ, ಇನ್ಫೋಸಿಸ್ ಸಂಸ್ಥೆಗೆ ಧ್ವನಿಯಾಗಿರುವ ಶ್ರೀಮತಿ ಸುಧಾಮೂರ್ತಿ ಇಂದಿನ ಆಧುನಿಕ ಮಹಿಳೆಯರಿಗೆ ದಾರಿದೀಪವಾಗಬೇಕುಎಂದವರು ನುಡಿದರು.
1971 ರಲ್ಲಿ ತಮ್ಮ ದೀನ-ದುರ್ಬಲರ ಸೇವೆಗಾಗಿ ಭಾರತರತ್ನ ಪ್ರಶಸ್ತಿ ಪಡೆದ ಶ್ರೀಮತಿ ಇಂದಿರಾಗಾಂಧಿ,ಅನಾಥ ರೋಗಿಗಳ ಸೇವೆಗಾಗಿ 1980 ರಲ್ಲಿ ಭಾರತರತ್ನ ಪ್ರಶಸ್ತಿ ಪಡೆದ ಮದರ್ ಥೆರೆಸಾ, ತಮ್ಮ ಅಪ್ರತಿಮ ಸ್ವಾತಂತ್ರ್ಯ ಹೋರಾಟಕ್ಕಾಗಿ 1997 ರಲ್ಲಿ ಭಾರತರತ್ನ ಪ್ರಶಸ್ತಿ ಪಡೆದ ಅರುಣ ಅಸಫ್ ಆಲಿ, ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅತ್ಯಮೂಲ್ಯ ಸಾಧನೆ ಮಾಡಿದ ಶ್ರೀಮತಿ ಸುಬ್ಬಲಕ್ಷ್ಮಿ,ಅವರಿಗೆ 1998 ರಲ್ಲಿ ಹಾಗೂ ಸಂಗೀತ ಹಾಗೂ ಗಾಯನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಲತಾ ಮಂಗೇಶ್ಕರ್ ಅವರಿಗೆ 2001 ರಲ್ಲಿ ಭಾರತರತ್ನ ಪ್ರಶಸ್ತಿ ದೊರೆತಿದ್ದು ಮಹಿಳಾ ಸಾಧನೆಗೆ ರಾಷ್ಟ್ರ ನೀಡಿದ ಅತ್ಯುತ್ತಮ ಗೌರವವಾಗಿದೆ. ಇವರೆಲ್ಲರೂ ಆಧುನಿಕ ಮಹಿಳೆಯರಿಗೆ ಆದರ್ಶವಾಗಬೇಕೆಂದವರು ಕರೆ ನೀಡಿದರು.
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಕೃಷ್ಣ ರಾಜನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾದ ಶಿಕ್ಷಕಿ ಹಾಗೂ ಕವಯಿತ್ರಿ ಯಾದ ಶ್ರೀಮತಿ ಭಾರತಿ ಹೆಬ್ಬಾಳ್ ರವರು ಕವಿಗೋಷ್ಠಿಯನ್ನು ನಿರೂಪಿಸಿ ನಿರ್ವಹಣೆ ಮಾಡಿದರು. ಕವಿ ಮಂಜುನಾಥ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಯುವ ಕವಯಿತ್ರಿ ಕುಮಾರಿ ಅಂಕಿತ ರವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಆಶಾ ಯಮಕನಮರಡಿ ಅವರು ಮಾತನಾಡಿ ಹಿಂದೆ ಮಹಿಳೆಗೆ ಅಡುಗೆ ಮನೆಯೇ ವಿಶ್ವ ಆಗಿತ್ತು. ಇಂದಿನ ಆದುನಿಕ ಮಹಿಳೆಗೆ ವಿಶ್ವವೇ ಸಾಧನೆಯ ಬೀಡಾಗಿದೆ ಎಂದು ನುಡಿದರು. ನಿವೃತ್ತ ಉಪನಿರ್ದೇಶಕರು ಹಾಗೂ ರೀಡರ್ ಆದ ಶ್ರೀಮತಿ ಮಂಜುಳಾ ಅವರು ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ “ಯಾವುದೇ ಒಂದು ಸಮುದಾಯದ ಏಳಿಗೆ ಸಮುದಾಯದಲ್ಲಿನ ಮಹಿಳೆಯರ ಸ್ಥಿತಿಗತಿಯನ್ನು ಆಧರಿಸಿದೆ” ಎಂಬ ಮಾತುಗಳನ್ನು ಉಲ್ಲೇಖಿಸಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಪಾತ್ರ ಇಂದು ಬದಲಾಗಿದೆ. ವೃತ್ತಿ ಮತ್ತು ಸಂಸಾರ ಎರಡನ್ನೂ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ತೋರಿಸಿದ್ದಾಳೆ.ಆಧುನಿಕ ಮಹಿಳೆ ಸವಾಲುಗಳನ್ನು ಎದುರಿಸುವ ಮನಸ್ಥಿತಿಯನ್ನು ಹೊಂದಿದ್ದಾಳೆ. ಪ್ರಶ್ನಿಸುವ ಅವಕಾಶಗಳನ್ನು ದಕ್ಕಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಬೇಕು ಹೊರನೋಟದ ಆಧುನಿಕತೆಯಲ್ಲ, ಆಂತರ್ಯದಲ್ಲಿ ಬದಲಾವಣೆಯಾಗಬೇಕು.ಮಹಿಳೆಯೇ ಮಹಿಳೆಗೆ ಅವಕಾಶ ವಂಚಿಸುವ ಕೃತ್ಯಗಳು ನಿಲ್ಲಬೇಕು.ಸಮಸಮಾಜದ ನಿರ್ಮಾಣಕ್ಕೆ ಎಲ್ಲ ಮಹಿಳೆಯರೂ ಶ್ರಮಿಸಬೇಕು ಎಂದು ನುಡಿದರು.
ವೇದಿಕೆಯ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ನಾಗಭೂಷಣ ಅವರು ಮಾತನಾಡಿ ಹಿಂದೆ ಎಲ್ಲ ಯಶಸ್ವಿ ಪುರುಷರ ಹಿಂದೆ ಮಹಿಳೆಯ ಸಹಕಾರ ಇದೆ ಎಂಬ ಮಾತು ಇತ್ತು. ಇದೀಗ ಆಧುನಿಕ ಮಹಿಳೆಯರ ಎಲ್ಲ ಅಭ್ಯುದಯದ ಹಿಂದೆ ಪುರುಷರ ಬೆಂಬಲವಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ನುಡಿದರು.
ಕವಿಗೋಷ್ಟಿಯಲ್ಲಿ ಕವಯತ್ರಿಯರಾದ ಶ್ರೀಮತಿ ರಾಧಾಮಣಿ ಕೋಲಾರ, ರತ್ನಾ ಕೆ.ಭಟ್,ಶೋಭಾ ಸತೀಶ್,ಕಮಲಾ, ವಿದ್ಯಾ ಕುಲಕರ್ಣಿ, ಭಾಗ್ಯ ಗಿರೀಶ್,ಪಾರ್ವತಿ ಎಸ್. ಕಾಶೀಕರ್,ಲತಾ.ಡಿ.,ವೈಷ್ಣವಿ ಪುರಾಣಿಕ್,ಯಶೋಧಾ,ವೀಣಾ ಸಿ.ಅಸರ್., ಗುರೀಜಾ ಇಟಗಿ,ಪ್ರೇಮಾದೇವಿ, ಶಿವಲೀಲಾ, ಕವಿಗಳಾದ ಡಾ .ಸುರೇಶ್ ನೆಗಳಗುಳಿ,ಅಂಬರೀಷ್ .ಎನ್.ಶಿವಾನಂದ ಭಜಂತ್ರಿ, ಲಾಳನಹಳ್ಳಿ ಸೋಮಶೇಖರಯ್ಯ ಮೊದಲಾದ ಕವಿಗಳು ಈ ಕವಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.