ಕರ್ನಾಟಕದ ಮ್ಯಾಕ್ಸ ಮುಲ್ಲೆರ್ ವಚನ ಪಿತಾಮಹ ಡಾ ಫ ಗು ಹಳಕಟ್ಟಿ.-ಒಂದು ನೆನಪು.
ಕನ್ನಡದ ಕಣ್ವ ಕುವೆಂಪುರವರ ವಿದ್ಯಾ ಗುರುಗಳು ಶ್ರೇಷ್ಠ ಸಾಹಿತಿ ಡಾ ಬಿ ಎಂ ಶ್ರೀ ಕಂಠಯ್ಯನವರು ೧೯೩೮ ರಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿಜಯಪುರಕ್ಕೆ ಬಂದಿದ್ದರು.ಅವರನ್ನು ಅತ್ಯಂತ ಅದ್ಧುರಿಯಾಗಿ ಸ್ವಾಗತಿಸಿದ ವಿಜಯಪುರದ ಜನತೆ ಬಿ ಎಂ ಶ್ರೀ ಅವರಿಗೆ ವಿಜಯಪುರದ ಐತಿಹಾಸಿಕ ಜಾಗತಿಕ ಮಟ್ಟದ ಹೆಸರು ವಾಸಿಯಾದ ಗೋಳ ಗುಮ್ಮಟ ತೋರಿಸುವುದಾಗಿ ಕರೆದರು. ಆಗ ಬಿ ಎಂ ಶ್ರೀ ಅವರು ಅದಕ್ಕಿಂತಲೂ ಇನ್ನೊಂದು ದೊಡ್ಡ ಗುಮ್ಮಟವು ವಿಜಯಪುರದಲ್ಲಿದೆ ಅದನ್ನು ನೋಡಬೇಕು ಎಂದು ಆಶಯ ವ್ಯಕ್ತ ಪಡಿಸಿದರು.
ಆಗ ಜನತೆ ಗೊಳಗುಮ್ಮಟಕ್ಕಿಂತಲೂ ದೊಡ್ಡದಾದ ಗುಮ್ಮಟ ಬಗ್ಗೆ ತಬ್ಬಿಬ್ಬಾದರು. ಆಗ ನಸು ನಕ್ಕು ಬಿ ಎಂ ಶ್ರೀ ನನಗೆ ವಚನ ಪಿತಾಮಹ ಹಳಕಟ್ಟಿ ಅವರನ್ನು ಮೊದಲು ನೋಡಬೇಕು ಅವರು ವಚನ ಗುಮ್ಮಟವೆಂದು ಹೇಳಿದರು.
ಆಗ ಅಲ್ಲಿದ್ದ ಜನರು ವಿಜಯಪುರದ ಉಪಲಿ ಬುರುಜು ಹತ್ತಿರದ ಮುರುಕು ಬಾಡಿಗೆಯ ಮನೆಯಲ್ಲಿ ಹರುಕು ಚಾಪೆಯ ಮೇಲೆ ವಚನ ತಾಡೋಲೆಗಳನ್ನು ಹರವಿಕೊಂಡು ಒಡಕು ಕನ್ನಡಕದ ಮೂಲಕ ಮೊಳೆ ಜೋಡಿಸಿ ವಚನ ಸಂಪಾದನೆ ಮಾಡುತ್ತಿದ್ದ ಹಳಕಟ್ಟಿ ಅವರ ಮನೆಗೆ ಸಂಘಟಿಕರು ಬಿ ಎಂ ಶ್ರೀ ಅವರನ್ನು ಕರೆದು ಕೊಂಡು ಹೋದರು. ಬಿ ಎಂ ಶ್ರೀ ಅವರನ್ನು ಕಂಡ ಫ ಗು ಹಳಕಟ್ಟಿ ಅವರ ಆನಂದಕ್ಕೆ ಪರಿಮಿತಿವಿರಲಿಲ್ಲ.
ಇಬ್ಬರು ಮಹನೀಯರು ಅದೆಷ್ಟು ಹೊತ್ತು ಅನೇಕ ವಿಷಯ ಚರ್ಚಿಸಿ ಒಬ್ಬರಿಗೊಬ್ಬರು ಬಿಳ್ಕೊಟ್ಟರು.
೧೨ನೇ ಶತಮಾನದಲ್ಲಿ ಶರಣರು ಸಮಾಜಕ್ಕೆ ನೀಡಿದ ವಚನಗಳನ್ನು ಈ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಸಂಗ್ರಹಿಸಿ ನೀಡದಿದ್ದರೆ ಇಂದು ಕನ್ನಡಿಗರಿಗೆ ಅವುಗಳ ಮಾಹಿತಿಯೇ ಇರುತ್ತಿರಲಿಲ್ಲ.
.
ಫ.ಗು.ಹಳಕಟ್ಟಿ ಅವರು ಹುಟ್ಟಿದ್ದು ೧೮೮೦ರ ಜುಲೈ ೨ರಂದು ಧಾರವಾಡದಲ್ಲಿ. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಮ್ಮದೇವಿ ಇವರ ಗರ್ಭದಲ್ಲಿ ಲಿಂಗಾಯತ ನೇಕಾರ ಕುಟುಂಬದಲ್ಲಿ. ಫಕೀರಪ್ಪನವರದು ನೇಕಾರ ಕುಟುಂಬದಲ್ಲಿ ಹುಟ್ಟಿದ ಹಳಕಟ್ಟಿ ಮನೆತನ. ಈಗಿನ ಸವದತ್ತಿ (ಪರಸಗಡ) ತಾಲೂಕಿನಲ್ಲಿರುವ ಹಳಕಟ್ಟಿಯಿಂದ ಇವರ ಪೂರ್ವಜರು ಬಂದರೆಂದು ತಿಳಿದುಬರುತ್ತದೆ. ಕ್ರಮೇಣ ಇವರ ಪೂರ್ವಜರು ಧಾರವಾಡಕ್ಕೆ ಬಂದರು. ಹುಟ್ಟಿದ ಮೂರು ವರ್ಷ ಕಳೆಯುವುದರಲ್ಲೇ ಪ್ರೀತಿಯ ತಾಯಿ ಮಗನನ್ನು ತಬ್ಬಲಿ ಮಾಡಿ ಅಗಲಿದರು. ಈಗ ಬಾಲಕನ ರಕ್ಷಣೆ ಇವರ ಅಜ್ಜಿಯಾದ ಬಸಮ್ಮನವರ ಪಾಲಿಗೆ ಬಂದಿತು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ “ವಾಗ್ಭೂಷಣ”ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.
ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ ೧೮೯೬ ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬಯಿಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.
೧೮೯೬ ರಲ್ಲಿ ಅಂದರೆ ಫ ಗು ಹಳಕಟ್ಟಿ ಅವರ ೧೬ ನೇ ವಯಸ್ಸಿನಲ್ಲಿ ಅವರ ಸಹೋದರ ಮಾವ ತಮ್ಮಣಪ್ಪ ಚಿಕ್ಕೋಡಿ ಅವರ ಮಗಳು ಭಾಗೀರಥಿ ಅವರನ್ನು ಮದುವೆಯಾದರು. ತಮ್ಮಣಪ್ಪ ಚಿಕ್ಕೋಡಿ ಅಂದಿನ ಕನ್ನಡದ ಕಟ್ಟಾಳು. ಎಲ್ ಎಲ್ ಬಿ ಪದವಿ ಪೂರೈಸಿ ಮೊದಲು ತಮ್ಮ ವಕಾಲತ್ತನ್ನು ಬೆಳಗಾವಿಯಲ್ಲಿ ಆರಂಭಿಸಿದರು. ತಮ್ಮಣಪ್ಪ ಚಿಕ್ಕೋಡಿ ಅವರ ಆದೇಶದ ಮೇರೆಗೆ ಅವರು ೧೯೦೪ರಲ್ಲಿ ವಿಜಯಪುರಕ್ಕೆ ಆಗಮಿಸಿದ್ದರು. ವಕೀಲ ವೃತ್ತಿಯ ಜೊತೆ ಸಾರ್ವಜನಿಕರ ಸೇವೆಯೂ . ಇವರ ಪ್ರಮುಖ ಕಾಯಕವಾಗಿತ್ತು. ವಕೀಲ ವೃತ್ತಿಗಾಗಿ ೧೯೦೪ ರಲ್ಲಿ ಬಿಜಾಪುರಕ್ಕೆ ಬಂದ ಫ.ಗು. ಹಳಕಟ್ಟಿಯವರು ತಮ್ಮ ಕಡೆಯ ಉಸಿರಿರುವ ತನಕ ಬಿಜಾಪುರವನ್ನು ಕಾಯಕ ಭೂಮಿಯನ್ನಾಗಿಸಿಕೊಂಡರು.
ಒಂದು ದಿನ ರಬಕವಿಯ ಮಂಚಾಲೆಯುವರ ಮನೆಯಲ್ಲಿ ತಾಡೋಲೆಗಳ ಕಟ್ಟನ್ನು ಕಂಡು ಆಕರ್ಷಿತರಾದ ಫ ಗು ಹಳಕಟ್ಟಿ ಅವರು ಅವುಗಳನ್ನು ಸಂಗ್ರಹಿಸುವ ಸಂಪಾದಿಸುವ ಕಾರ್ಯಕ್ಕೆ ಮುಂದಾದರು.
೧೯೦೪ರಿಂದ ೧೯೬೪ ರವರೆಗೆ ೬0 ವರ್ಷಗಳ ಕಾಲ ನಾನಾ ಮಠ-ಮಂದಿರಗಳನ್ನು ಸುತ್ತಿ, ಭಕ್ತರ ಮನೆಗಳಿಗೆ ಅಲೆದಾಡಿ, ತಾಳೆ ಗರಿ, ಹಸ್ತಪ್ರತಿ ಸೇರಿದಂತೆ ನಾನಾ ರೂಪದಲ್ಲಿದ್ದ ವಚನಗಳನ್ನು ಸಂಗ್ರಹಿಸಿದರು. ಇವುಗಳ ಮುದ್ರಣಕ್ಕಾಗಿ ಮಂಗಳೂರಿನ ಬಾಶೆಲ್ ಮಿಷನ್ ಪ್ರಕಾಶನಕ್ಕೆ 500 ರೂಪಾಯಿ ಮುಂಗಡ ಹಣವನ್ನೂ ಕಳುಹಿಸಿದ್ದರು.ಆದರೆ ಆರು ತಿಂಗಳ ಕಾಲ ಪ್ರಕಾಶಕರು ಇವುಗಳನ್ನು ಇಟ್ಟುಕೊಂಡರೂ ಮುದ್ರಿಸದೇ ಹಿಂದಿರುಗಿಸಿದರು. ಅದು ಸಿದ್ಧಾಂತಗಳ ವಿಚಾರಗಳು ಸಾಮ್ಯ ಇರುವುದರಿಂದ ಪ್ರಕಟಣೆ ಸಾಧ್ಯವಿರಲಿಲ್ಲ ಎಂದು ಹೇಳಿ ೫೦೦ರೂಪಾಯಿ ಕೂಡ ಮರಳಿಸಿಕೊಟ್ಟರು. ಕಷ್ಟ ಪಟ್ಟು ೧೯೨೪ ರಲ್ಲಿ ಬೆಳಗಾವಿಯ ಮಹಾವೀರ ಚೌಗುಲೆ ಅವರ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ವಚನ ಶಾಸ್ತ್ರ ಭಾಗ -1 ಪ್ರಕಟಗೊಳಿಸಿದರು.
ಆದರೆ ಮುದ್ರಣ ಒಂದು ಸವಾಲು ಧೈರ್ಯಗೆಡದ ಹಳಕಟ್ಟಿ ಅವರು, ಮುದ್ರಣಕ್ಕೆ ಹಣ ಸಿಗದಿದ್ದಾಗ ಆಸ್ತಿ-ಪಾಸ್ತಿ ಸೇರಿದಂತೆ ಕೊನೆಗೆ ಇರುವ ಮನೆಯನ್ನೂ ಮಾರಿ ಮುದ್ರಣ ಯಂತ್ರ ಖರೀದಿಸಿ ಹಿತ ಚಿಂತಕ ಮುದ್ರಣಾಲಯ ಸ್ಥಾಪಿಸಿ ಸತತ ೩೪ವರ್ಷಗಳ ಕಾಲ ವಚನಗಳನ್ನು ಸಂಪಾದಿಸಿ ಮುದ್ರಿಸಿದ್ದರು.
ಅದುವರೆಗೆ ಕೇವಲ ೫೦ ವಚನಕಾರರ ವಚನಗಳು ಮತ್ತು ಹೆಸರು ಪ್ರಚಲಿತದಲ್ಲಿದ್ದವು. ಇವರ ಕಾರ್ಯದ ಬಳಿಕ 250(೨೫೦) ವಚನಕಾರರ ಸಹಸ್ರಾರು ವಚನಗಳು ಬೆಳಕಿಗೆ ಬಂದವು.
ಅಷ್ಟಕ್ಕೆ ತೃಪ್ತರಾಗದ ಹಳಕಟ್ಟಿ ಅವರು, ವಚನಗಳ ಪ್ರಸಾರಕ್ಕಾಗಿ ಶಿವಾನುಭವ ಪತ್ರಿಕೆ ಆರಂಭಿಸಿ ೩೪ ವರ್ಷಗಳ ಕಾಲ ಅದನ್ನು ಪ್ರಕಟಗೊಳಿಸಿ ಪ್ರಸಾರಗೊಳಿಸಿದರು. ಹಳಕಟ್ಟಿಯವರಿಗೆ ಮೂರು ಸಮಸ್ಯೆಗಳು ನಿರಂತರವಾಗಿದ್ದವು. ಬಡತನ, ಮನೆಯಲ್ಲಿ ಆಗಾಗ್ಗೆ ಸಂಭವಿಸುತ್ತಿದ್ದ ಸಾವುಗಳು ಮತ್ತು ಅನಾರೋಗ್ಯ. ಹಾಕಿದ ಅಂಗಿ ಹರಿದಿರುತ್ತಿದ್ದ ಕಾರಣ ಇತರರಿಗೆ ಕಾಣದಂತೆ ಸದಾ ಕರಿ ಬಣ್ಣದ ಕೋಟ್ ಹಾಕಿಕೊಂಡಿರುತ್ತಿದ್ದರು.
ಇಪ್ಪತ್ತನೇ ಶತಮಾನದ ಪ್ರಾರಂಭದ ಆ ದಿನಗಳಲ್ಲಿ ಆಂಗ್ಲರ ಆಡಳಿತ ಹಾಗೂ ಅವರು ತಂದಿತ್ತ ಶಿಕ್ಷಣದ ಸುಧಾರಣೆಗಳಿಂದ ಸಮಾಜದಲ್ಲಿ ಎಚ್ಚರಿಕೆ ಮೂಡುತ್ತಿದ್ದ ಕಾಲವಾಗಿತ್ತು. ಆಧುನಿಕ ಶಿಕ್ಷಣ ಪಡೆದಿದ್ದ ಹಳಕಟ್ಟಿ ಮನಸ್ಸು ಮಾಡಿದ್ದರೆ ಸರ್ಕಾರದಲ್ಲಿ ಘನತರವಾದ ಹುದ್ದೆ ಪಡೆಯಬಹುದಿತ್ತು. ಇಲ್ಲವೆ ತಮ್ಮ ವಕೀಲಿ ವೃತ್ತಿಯಿಂದ ಶ್ರೀಮಂತಿಕೆ ದಕ್ಕಿಸಿಕೊಳ್ಳ ಬಹುದಿತ್ತು. ಆದರೆ ಬಿಜಾಪುರಕ್ಕೆ ಬಂದ ಅವರು ಅಲ್ಲಿ ತಾಂಡವವಾಡುತ್ತಿದ್ದ ಬಡತನ, ಅನಕ್ಷರತೆ, ರೈತರು ಕೃಷಿ ಉತ್ಪನ್ನ ಮಾರಾಟಕ್ಕೆ ಪರದಾಡುತ್ತಿದ್ದ ಪರಿ ಇವೆಲ್ಲವನ್ನು ಮನಗಂಡು ಸಮಾಜ ಸೇವೆಗೆ ತಮ್ಮ ಬದುಕನ್ನು ಮೀಸಲಾಗಿಸಿದರು.
ತಮ್ಮ ತಂದೆಯಂತೆ ಬಿಜಾಪುರದಲ್ಲಿ , ಬಿಜಾಪುರ ಲಿಂಗಾಯಿತ ವಿದ್ಯಾಭಿವೃದ್ಧಿ ಸಂಸ್ಥೆ ಹುಟ್ಟುಹಾಕಿದರಲ್ಲದೆ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ಸಮಾಜ ಸೇವೆಯ ಜೊತೆ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಹಳಕಟ್ಟಿ ಮೊದಲಿಗೆ ಬಸವಣ್ಣನವರ ವಚನಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡುವುದರ ಮೂಲಕ ೧೯೨೨ (1922) ವಚನ ಸಾಹಿತ್ಯ ಸಂಗ್ರಹಣೆ, ಪ್ರಕಟಣೆಗೆ ಕೈಹಾಕಿದರು. ಮುಂದೆ ಈ ಪ್ರವೃತ್ತಿಯೇ ಅವರಿಗೆ ಧ್ಯಾನವಾಯಿತು. ಹನ್ನೆರಡನೇ ಶತಮಾನದ ಶಿವಶರಣರ ವಚನಗಳನ್ನು ಸಂಗ್ರಹಿಸುವುದು ಅವುಗಳಲ್ಲಿ ಇರಬಹುದಾದ ಧಾರ್ಮಿಕ ಹಾಗೂ ವೈಚಾರಿಕ ಮಹತ್ವದ ಚಿಂತನೆಗಳನ್ನು ಸಾದರಪಡಿಸುವುದು ಇದು ಫ.ಗು. ಹಳಕಟ್ಟಿಯವರ ಜೀವನ ಮಂತ್ರವಾಯಿತು.
೧೯೧೦ ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ, ೧೯೧೨ ರಲ್ಲಿ ಸಿದ್ದೇಶ್ವರ ಸಂಸ್ಥೆ, ೧೯೧೩ರಲ್ಲಿ ಸಹಕಾರಿ ಸಂಘ, ೧೯೧೪ ರಲ್ಲಿ ಸಿದ್ದೇಶ್ವರ ಹೈಸ್ಕೂಲು ಸ್ಥಾಪಿಸಿ ೧೯೧೯ ರಲ್ಲಿ ಬಿಜಾಪುರದ ನಗರಸಭಾ ಸದಸ್ಯರಾಗಿ, ೧೯೨೦ ರಲ್ಲಿ ಮುಂಬೈ ವಿಧಾನಸಭಾ ಸದಸ್ಯರಾಗಿ ಹಳಕಟ್ಟಿಯವರು ಕಾರ್ಯ ನಿರ್ವಹಿಸಿದ್ದರೂ ಸಹ ಎಲ್ಲೆಡೆ ತಮ್ಮ ಶುದ್ಧ ಹಸ್ತ ಮತ್ತು ಪ್ರಾಮಾಣಿಕ ಹಾಗೂ ಪಾರದರ್ಶಕ ಬದುಕಿನೊಂದಿಗೆ ಗುರುತಿಸಿಕೊಂಡರು.
೧೯೨೩ ರಲ್ಲಿ ‘ವಚನಶಾಸ್ತ್ರಸಾರ’ ಎಂಬ ಬೃಹತ್ ವಚನ ಸಂಕಲನವನ್ನು ಹೊರತರುವ ಮೂಲಕ ವಚನಗಳ ಸಂಗ್ರಹಕ್ಕೆ ಕೈಹಾಕಿದ ಹಳಕಟ್ಟಿಯವರು ಇವುಗಳ ಪ್ರಕಟಣೆಗಾಗಿ ೧೯೨೬ರಲ್ಲಿ ‘ಹಿತಚಿಂತಕ’ ಎಂಬ ಮುದ್ರಣಾಲಯ ಪ್ರಾರಂಭಿಸಿ ‘ಶಿವಾನುಭಾವ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.
೧೯೨೬ರಲ್ಲಿ ಬಳ್ಳಾರಿಯಲ್ಲಿ ಜರುಗಿದ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯದ ಹೊಸ ದಿಕ್ಸೂಚಿಯಾದ ವಚನ ಸಾಹಿತ್ಯದ ಪರಿಚಯಗೊಳಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅಚ್ಚರಿ ಮೂಡಿಸಿದರು .
೧೯೨೬ರಿಂದ ೧೯೬೧ರವರೆಗೆ ನಿರಂತರವಾಗಿ ಈ ಪತ್ರಿಕೆಯಲ್ಲಿ ವಚನಗಳ ಬಗ್ಗೆ, ಶಿವಶರಣರ ಬಗ್ಗೆ ಹಳಕಟ್ಟಿಯವರು ಬರೆದ ಲೇಖನಗಳ ಸಂಗ್ರಹಗಳು ಒಟ್ಟು ୭೩ ಕೃತಿಗಳಾಗಿ ಹೊರಹೊಮ್ಮಿವೆ. ಇವುಗಳ ಜೊತೆ ಅನ್ಯರ ಕೃತಿಗಳು ಸೇರಿ೧೦೫ ಕೃತಿಗಳನ್ನು ಪ್ರಕಟಿಸಿದ್ದಾರೆ. ಎಂದೂ ವ್ಯವಸ್ಥೆಯೊಂದಿಗೆ ರಾಜಿಯಾಗದೆ ವಚನಗಳಲ್ಲಿ ಅಡಗಿರುವ ಶಿವಶರಣರ ತತ್ವ ಮತ್ತು ಚಿಂತನೆಗಳನ್ನು ಜನತೆಗೆ ತಿಳಿಸುವುದೇ ಜೀವನದ ಪರಮ ಗುರಿ ಎಂದು ನಂಬಿಕೊಂಡಿದ್ದ ಹಳಕಟ್ಟಿಯವರು ತಮ್ಮ ಜೀವಿತದ ಕೊನೆಯವರೆಗೂ ಬಿಜಾಪುರದಲ್ಲಿ ಸ್ವಂತ ಮನೆ ಮಾಡಿಕೊಳ್ಳದೆ ಫಕೀರನಂತೆ ಬದುಕಿಬಿಟ್ಟರು. ತುಂಬ ಕಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆಗೆ ಯಾರಾದರು ೨ರೂ ಸಹಾಯಧನ ಮಾಡಿದರೆ ಅದನ್ನು ಅವರ ಹೆಸರಿನೊಂದಿಗೆ ಪ್ರಕಟಿಸಿ ಕೃತಜ್ಞತೆ ಅರ್ಪಿಸುತ್ತಿದ್ದರು.
ತಾವು ಈ ರೀತಿ ಕಷ್ಟಗಳ ಸರಮಾಲೆಯ ನಡುವೆ ಬದುಕಿದ್ದರ ಬಗ್ಗೆ ಅವರು ಎಂದೂ ವಿಷಾದ ಪಡಲಿಲ್ಲ. ತಮ್ಮ ‘ನನ್ನ ୭೫ ವರ್ಷಗಳು’ ಎಂಬ ಕೃತಿಯಲ್ಲಿ ತನ್ನ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತ ತಂದೆ ಗುರುಬಸಪ್ಪ ಹಾಗೂ ಹೆಣ್ಣು ಕೊಟ್ಟ ಮಾವ ತಮ್ಮಣ್ಣಪ್ಪ ಇವರನ್ನು ಹಳಕಟ್ಟಿಯವರು ತುಂಬು ಹೃದಯದಿಂದ ಸ್ಮರಿಸಿದ್ದಾರೆ.
ಇವತ್ತಿನ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಲಭ್ಯವಾಗುತ್ತಿರುವ ಸಮಗ್ರ ವಚನ ಸಾಹಿತ್ಯದ ಹಿಂದೆ ಫ.ಗು. ಹಳಕಟ್ಟಯವರ ಅರ್ಧ ಶತಮಾನದ ಶ್ರಮವಿದೆ. ಈ ಕಾರಣಕ್ಕಾಗಿ ಕನ್ನಡ ನಾಡು ಅವರನ್ನು *ವಚನ ಪಿತಾಮಹ* ಎಂಬ ಬಿರುದು ನೀಡಿ ಗೌರವಿಸಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಬಿಜಾಪುರ ನಗರ ಸಭೆ, ಅಲ್ಲಿನ ಒಂದು ರಸ್ತೆಗೆ ಹಳಕಟ್ಟಿಯವರ ಹೆಸರಿಡಲು ಸಭೆ ಸೇರಿ , ಅವರು ವಾಸವಾಗಿದ್ದ ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಫ.ಗು. ಹಳಕಟ್ಟಿಯವರು ಬಿಜಾಪುರದ ಎಲ್ಲಾ ಬಡಾವಣೆಗಳಲ್ಲೂ ಒಂದು ಅಥವಾ ಎರಡು ವರ್ಷ ವಾಸವಾಗಿದ್ದರು. ಮನೆಯ ಬಾಡಿಗೆ ಹೆಚ್ಚಾಗುತ್ತಿದ್ದಂತೆ, ತಮ್ಮ ವರಮಾನಕ್ಕೆ ತಕ್ಕಂತೆ ಬಾಡಿಗೆ ಮನೆ ಹುಡುಕಿ ಹೊರಡುತ್ತಿದ್ದರು.
ಹಳಕಟ್ಟಿ ಅವರ ಸಾಹಿತಿಕ ಕೊಡುಗೆಗಳು
ಅವರ ಕೊಡುಗೆ ಅಪಾರ -ಸಂಪಾದನೆ ಸಂಶೋಧನೆ ಪ್ರಕಟಣೆ ಪತ್ರಿಕೋಧ್ಯಮ ಹೀಗೆ ತಮ್ಮನ್ನು ಸಮಗ್ರವಾಗಿ ಕನ್ನಡದ ಕೆಲಸಕ್ಕೆ ತೊಡಗಿಸಿಕೊಂಡಿದ್ದರು.
ಶ್ರೀ. ಬಸವೇಶ್ವರನ ವಚನಗಳು , (1926).೧೯೨೬
ಮಹಾದೇವಿಯಕ್ಕನ ವಚನಗಳು , (1927).೧೯೨୭
ಪ್ರಭುದೇವರ ವಚನಗಳು , (1931).೧೯೩೧
ದೇವರ ದಾಸಿಮಯ್ಯನ ವಚನಗಳು , (1939)೧೯೩೯
ಸಕಲೇಶ ಮಾದರಸನ ವಚನಗಳು , (1929).೧೯೨೯
ಶೂನ್ಯ ಸಂಪಾದನೆ (ಗೂಳೂರು ಸಿದ್ಧವೀರನಾಚಾರ್ಯ ), (1930).೧೯೩೦
ಸಿದ್ದರಾಮೇಶ್ವರನ ವಚನಗಳು , (1932).೧೯೩೨
ಹರಿಹರನ ರಗಳೆಗಳು , ಭಾಗ 1-ಭಾಗ 4, (1933).೧೯೩೩
ಹರಿಹರನ ರಗಳೆಗಳು , ಭಾಗ 5 – ಭಾಗ 7, (1935–40).೧೯೩೫-೪೦
ಆದಯ್ಯನ ವಚನಗಳು , (1930).[2]೧೯೩೦
ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು ೧೯೨೦ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು. ಆ ಕಾಲದಲ್ಲಿದು ಶರಣರ ನಾಡಿನಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು. ಆ ನಂತರ ಹಸ್ತಪ್ರತಿ ರೂಪದಲ್ಲಿದ್ದ ಈ ವಚನಸಂಪತ್ತನ್ನು ಸಂಪಾದಿಸಿ ಮುದ್ರಿಸಿ ಪುಸ್ತಕರೂಪದಲ್ಲಿ ಹೊರತರಲು ಮುಂದಾದ ಇವರು ಇದಕ್ಕಾಗಿ ೧೯೨೫ ರಲ್ಲಿ ತಮ್ಮ ಸ್ವಂತಮನೆ ಮಾರಿ *ಹಿತಚಿಂತಕ* ಮುದ್ರಣಾಲಯ”ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಯಿತು. ನಿಜಕ್ಕೂ ಆಗ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು. ಇವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನದ ಕೃತಿಯೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ ೫೦ ವಚನಕಾರರನ್ನು ಮಾತ್ರ. ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ ೨೫೦ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ ೪೨ ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ.
ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ “ವಚನ ಸಾಹಿತ್ಯ ಸಾರ”ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ ೧೯೨೪ ರಿಂದ ೧೯೩೯ ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು ೧୭೫ ಕ್ಕೂ ಹೆಚ್ಚೆಂದರೆ ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಯಾರು ಬೇಕಾದರೂ ಊಹಿಸಬಹುದು.
ಸಂದ ಗೌರವಗಳು
೧೯೨೯ ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ, ೧೯೨೬ ರಲ್ಲಿ ಬಳ್ಳಾರಿಯಲ್ಲಿ ನಡೆದ ೧೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೨೮ ರಲ್ಲಿ ಜರುಗಿದ ೩ ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ, ೧೯೩೧ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, ೧೯೩೩ ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ, ೧೯೫೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.
ಪತ್ರಿಕೋದ್ಯಮದಲ್ಲಿ ಫ ಗು ಹಳಕಟ್ಟಿ ಅವರ ಸಾಧನೆ
ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು ೧೯೨೬ರಲ್ಲಿ ಸಂಶೋಧನೆಗಾಗಿ ಮೀಸಲಾದ ‘ಶಿವಾನುಭವ’ ಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು ೧೯೫೧ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ ೧೯೨೭ರಲ್ಲಿ ‘ನವ ಕರ್ನಾಟಕ’ ಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದೇ.
ಕರ್ನಾಟಕ ಮ್ಯಾಕ್ಸ ಮುಲ್ಲೆರ್ , ರಾಬಹಾದ್ದೂರ ,ರಾವ್ ,ಸಾಹೇಬ, ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಈ ಶತಮಾನವು ಕಂಡ ಶ್ರೇಷ್ಠ ಸಂಶೋಧಕ ಸಾಹತಿ ಸಂತ ದಾರ್ಶನಿಕ . ೧೯೫೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಸಮರಾಂಭ. ಡಾ.ಪಾವಟೆಯವರು ಕುಲಪತಿಗಳಾಗಿದ್ದರು, ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಚನ ಸಾಹಿತ್ಯದ ಪಿತಾಮಹನೆಂಬ ಬಿರುದಿಗೆ ಪಾತ್ರರಾಗಿದ್ದ ಫ. ಗು. ಹಳಕಟ್ಟಿಯವರಿಗೆ ಗೌರವ ಡಾಕ್ಟರೇಟ್ ನೀಡಿದ ದಿನ. ಘಟಿಕೋತ್ಸವ ಕಾರ್ಯಕ್ರಮದ ನಂತರ ಅತಿಥಿಗಳಿಗೆ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಲು ಕೋಟು, ಕಚ್ಚೆ , ಪೇಟ ಧರಿಸಿ ಬಂದಿದ್ದ ಹಳಕಟ್ಟಿಯವರು ಔತಣಕೂಟದಲ್ಲಿ ಪಾಲ್ಗೊಂಡು ಊಟಕ್ಕೆ ಕುಳಿತರು. ಆಗ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಡಾ.ಪಾವಟೆಯವರು ರಿಜಿಸ್ಟ್ರಾರ್ ಆಗಿದ್ದ ಪ್ರೊ ಎಸ್ ಎಸ್ ಒಡೆಯರರವರನ್ನು ಕರೆದು ಡಾ ಫ ಗು ಹಳಕಟ್ಟಿ ಅವರಿಗೆ ಕೋಟು ಕಳೆದು ಊಟ ಮಾಡಲು ಸೂಚಿಸಿದರು. ಪ್ರೊ ಎಸ್ ಎಸ್ ಒಡೆಯರ ಅವರು ಹಳಕಟ್ಟಿಯವರನ್ನು ಉದ್ದೇಶಿಸಿ “‘ಸಾರ್ ಸೆಖೆ ಬಾಳಾ ಇದೆ. ಕೋಟ್ ತೆಗೆದು ಆರಾಮಾಗಿ ಊಟ ಮಾಡ್ರಲಾ’ ಎಂದರು. ಆಗ ಹಳಕಟ್ಟಿಯವರು ಒಡೆಯರ್‌ರವರನ್ನು ಹತ್ತಿರ ಕರೆದು ‘ತಮ್ಮಾ ಕೋಟಿನ ಒಳಗ ಅಂಗಿ ಪೂರಾ ಹರಿದು ಹೋಗದ, ಅದಕ್ಕ ನಾ ಕೋಟ್ ಹಾಕ್ಕಂಡಿದೀನಿ. ನಾನು ಸಖೆ ತಡಕೋತೀನಿ ತಮ್ಮಾ ,ಆದರ ಅವಮಾನ ತಡಿಯಾಕಾಗುದಿಲ್ಲ ಎಂದಾಗ ಒಡೆಯರ್ ಮೂಕ ವಿಸ್ಮಿತರಾಗಿ ನಿಂತರು.
ಬಡತನ ,ಅನಾರೋಗ್ಯ ,ಆರ್ಥಿಕ ಸಂಕಟ ,ಮನೆಯಲ್ಲಿನ ನಿರಂತರ ಸಾವು ನೋವು ಹಳಕಟ್ಟಿ ಅವರನ್ನು ಜರ್ಜರಿತವನ್ನಾಗಿ ಮಾಡಿದರೂ ಅವರ ಚೈತನ್ಯದ ಚಿಲುಮೆ ಕುಗ್ಗಲಿಲ್ಲ. ದೆಹಲಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಮಗ ಅಪಘಾತಕ್ಕೆ ತುತ್ತಾಗಿ ತೀರಿಕೊಂಡಾಗ ಟೆಲೆಗ್ರಾಮ ಸ್ವೀಕರಿಸಿ ಮುದ್ರಣಾಲಯಕ್ಕೆ ರಜೆ ಕೊಡದೆ ಪತ್ರಿಕೆ ಪ್ರಿಂಟ್ ಮಾಡಿ ಪೋಸ್ಟ್ ಮಾಡಿ, ನಂತರ ಮಗನ ಶವ ಸಂಸ್ಕಾರಕ್ಕೆ ದೆಹಲಿಗೆ ಪ್ರಯಾಣ ಬೆಳೆಸಿದರು.
ಪದೇ ಪದೆ ಹದಗೆಡುತ್ತಿದ್ದ ಆರೋಗ್ಯದ ಮಧ್ಯೆಯೂ ವಚನ ಸಂಗ್ರಹ ಮತ್ತು ಮುದ್ರಣ ಕಾಯಕ ಜೀವನದುದ್ದಕೂ ಮುಂದುರೆಸಿಕೊಂಡು ಬಂದದ್ದು ಹಳಕಟ್ಟಿಯವರ ಸೇವಾ ಮನೋಭಾವಕ್ಕೆ ಹಿಡಿದ ಸಾಕ್ಷಿಯಾಗಿದೆ. ಜೀವನದ ಕೊನೆಯ ದಿನದ ವರೆಗೂ ಬಾಡಿಗೆ ಮನೆಯಲ್ಲಿಯೇ ವಾಸವಿರಬೇಕಾದ ಅನಿವಾರ್ಯತೆ ಎದುರಿಸಿಯೂ ಸಮಾಜಕ್ಕೆ ಮತ್ತು ಶರಣರಿಗೆ ಅವರು ನೀಡದ ಕೊಡುಗೆ ಇಂದಿಗೂ ದಾರಿದೀಪ.
ಇವರ ಮಡದಿ ಭಾಗೀರಥಿ 1964 ಮೇ 25 ರಂದು ವಿಧಿವಶರಾದರು. ಶವ ಸಂಸ್ಕಾರ ಮಾಡಿ ಮತ್ತೆ ಮುದ್ರಣಾಲಯದ ಪ್ರಕಟಣೆಗೆ ಮುಂದಾದರು.ಮುಂದೆ ಅನಾರೋಗ್ಯ ಕ್ಕೆ ತುತ್ತಾಗಿ ಹಾಸಿಗೆ ಹಿಡಿದಾಗ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನೆರವು ಕಾಳು ಧಾನ್ಯ ನೀಡಿ ಹಳಕಟ್ಟಿ ಅವರ ಮನೆ ನೋಡಿಕೊಳ್ಳುತ್ತಿದ್ದ ಬಬಲೇಶ್ವರದ ಶ್ರೀ ಶಾಂತವೀರ ಸ್ವಾಮಿಗಳು (ಭಕ್ತ ವರ್ಗಕ್ಕೆ ಸೇರಿದ ವಿರಕ್ತ ಮಠದ ಸ್ವಾಮಿಗಳು)ಕೊನೆಗಳಿಗೆಯಲ್ಲಿ ಹಳಕಟ್ಟಿ ಅವರ ಹತ್ತಿರ ಬಂದು ” ರಾವ ಸಾಹೇಬರೇ ಮತ್ತೇನಾದರೂ ಕೆಲಸ ನನ್ನಿಂದಾಗಬೇಕೇ ? ಔಷಧಿ ಗುಳಿಗೆ ಹಣದ ಅಗತ್ಯವಿದೆಯೇ ?ಎಂದು ಕೇಳಿದಾಗ . ಸಂಕೋಚತನದಿಂದ ಡಾ ಫ ಗು ಹಳಕಟ್ಟಿ ಅವರು “ಸ್ವಾಮಿಗಳೇ ಇನ್ನು 12 ವಚನಗಳನ್ನು ಅಚ್ಚು ಹಾಕಿಲ್ಲ ,ನನಗೆ ಎದ್ದು ಅಡ್ಡಾಡಲು ಆಗಲಾಗದು ದಯವಿಟ್ಟು ಅವುಗಳನ್ನು ಪ್ರಿಂಟ್ ಮಾಡಿಸಿದರೆ ಅದೊಂದು ದೊಡ್ಡ ಉಪಕಾರವಾಗುತ್ತದೆ”ಎಂದರು. ಇಂತಹ ವಚನ ಆಸಕ್ತಿ ,ಅಧ್ಯಯನ ,ಕ್ರಿಯಾಶೀಲತೆ ಸಮತೆ ಶಾಂತಿ ಗುಣ ಹೊಂದಿದ ಕನ್ನಡದ ಏಕೈಕ ಸಾಹಿತಿ ಡಾ ಫ ಗು ಹಳಕಟ್ಟಿ ಅವರು.
1964 ಜೂನ್ 27 ರಂದು ಕರ್ನಾಟಕದ ಮ್ಯಾಕ್ಸ ಮುಲ್ಲೆರ್ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರು ತಮ್ಮ ಅನಾರೋಗ್ಯಕ್ಕೆ ತುತ್ತಾಗಿ ಲಿಂಗೈಕ್ಯರಾದರು.
ಬೆರಣಿಕೆಯಷ್ಟು ಜನರು ಅವರ ಶವ ಸಂಸ್ಕಾರದಲ್ಲಿ ಪಾಲ್ಗೊಂಡು ಅದರ ವೆಚ್ಚವನ್ನು ಜನರೇ ಭರಿಸಿದರು . ಜನರಿಂದ ಕೂಡಿಸಿದ ಹಣದಿಂದ ತಮ್ಮ ಶವ ಸಂಸ್ಕಾರವನ್ನು ಮಾಡಿಸಿಕೊಂಡ ಕನ್ನಡದ ಶ್ರೇಷ್ಠ ಸಾಹಿತಿದಾರ್ಶನಿಕ ಚಿಂತಕ ಕನ್ನಡ ಸಾಹಿತ್ಯಕ್ಕೆ ವಚನಗಳನ್ನು ಪರಿಚಯಿಸಿದ ಕನ್ನಡದ ಕಟ್ಟಾಳು ನಮಗೆಲ್ಲಾ ದಾರಿ ದೀಪ.
ಹಳಕಟ್ಟಿಯವರು ಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಇಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ ಸೇರಿದಂತೆ 108 ಶಿಕ್ಷಣ ಸಂಸ್ಥೆಗಳೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದೆ. ಈ ಕಾರಣಕ್ಕಾಗಿ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಎಂ.ಬಿ. ಪಾಟೀಲರು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅವರ ಸಮಗ್ರ ಸಾಹಿತ್ಯವನ್ನು ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ನೇತೃತ್ವದಲ್ಲಿ 15 ಬೃಹತ್ ಸಂಪುಟಗಳಲ್ಲಿ ಹೊರತಂದಿದ್ದಾರೆ.
ಇಂದು ವಿಜಯಪುರದಲ್ಲಿ ಡಾ ಫ ಗು ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಪ್ರಕಟಣೆಗೆ ಮುಂದಾದ ಬಿ ಎಲ್ ಡಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ .
ಡಾ .ಶಶಿಕಾಂತ.ರುದ್ರಪ್ಪ ಪಟ್ಟಣ ಪುಣೆ