ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು

ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು

ಆದಿ ಬಸವಣ್ಣ, ಅನಾದಿಲಿಂಗವೆಂದೆಂಬರು,
ಹುಸಿ ಹುಸಿ ಈ ನುಡಿಯ ಕೇಳಲಾಗದು.
ಆದಿ ಲಿಂಗ, ಅನಾದಿ ಬಸವಣ್ಣನು!
ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲಚೆನ್ನಸಂಗಮದೇವಾ,
                                       -ಚೆನ್ನ ಬಸವಣ್ಣ
ಲಿಂಗಾಯತ ಧರ್ಮ ಎನ್ನುವದಕ್ಕಿಂತಲೂ ಅದೊಂದು ಅರಿವಿನ ಆಂದೋಲನ. ಪ್ರಜ್ಞೆಯ ಪ್ರಸಾರ. ಅನುಭಾವದ ಅನುಸಂಧಾನ.
ವಾಸ್ತವಿಕ ನೆಲೆಗಟ್ಟಿನಲ್ಲಿ ವಚನಕಾರರು ಬದುಕಿನ ಎಲ್ಲಾ ಆಯಾಮಗಳನ್ನು ನೋಡಿ ಚಿಂತಿಸಿ ಪರಿಹಾರ ಕಂಡವರು.
ಧರ್ಮದ ಭೀತಿ ಮತ್ತು ಭಯ ತೆಗೆದು ಹಾಕಿ ದಯವೇ ಧರ್ಮದ ಮೂಲ ಎಂದು ಸಾರಿದ ಅಪ್ಪ ಬಸವಣ್ಣ ನೆಲ ಮೂಲ ಸಂಸ್ಕೃತಿ ನಾಯಕ.
ದಲಿತ ಅಸ್ಪ್ರಶ್ಯ ದಮನಿತ ಶೋಷಿತ ಕಾರ್ಮಿಕ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಬಂಡಾಯಗಾರ.  ಬಸವ ಪೂರ್ವ ಯುಗದ ಸಂಪ್ರದಾಯಿಗಳ ಅತೀವ ಆಚರಣೆ ಮತ್ತು ಧಾರ್ಮಿಕ ಕಟ್ಟು ಪಾಡು ಜನರಲ್ಲಿ ಜಿಗುಪ್ಸೆ ಉಂಟು ಮಾಡಿತ್ತು.
ಬಸವಣ್ಣ ಇಷ್ಟ ಲಿಂಗದ ಜನಕ ಎನ್ನುವ ಚೆನ್ನ ಬಸವಣ್ಣ. ಲಿಂಗಾಯತ ಎಂಬ ಹೊಸ ಸಮ ಸಮಾಜ ಕಟ್ಟುವ ಚಳುವಳಿಯ ದಿಟ್ಟ ನಾಯಕ ಬಸವಣ್ಣ. ಬಸವಣ್ಣ ಕೈಕೊಂಡ ಸಮಗ್ರ ಅಭಿವೃದ್ಧಿ ಕ್ರಾಂತಿಗಳ ಒಟ್ಟು ದಾಖಲಾತಿ ಮೇಲಿನ ವಚನದಲ್ಲಿ ಅಡಕವಾಗಿದೆ.

ಆದಿಬಸವಣ್ಣ,ಅನಾದಿಲಿಂಗವೆಂದೆಂಬರು,ಹುಸಿ ಹುಸಿ ಈ ನುಡಿಯ ಕೇಳಲಾಗದು.
ಬಸವಣ್ಣನವರ ಕಾಲ ಘಟ್ಟದಲ್ಲಿಯು ಕೂಡ ಬಸವಣ್ಣನವರಿಗಿಂತಲೂ ಮೊದಲು ಲಿಂಗವಿತ್ತು ಬಸವಣ್ಣ ತದ ನಂತರ ಬಂದವನು ಎಂದು ಹೇಳುವ ಮೂಲಕ ಜನರನ್ನು ತಪ್ಪು ದಾರಿಗೆ ಒಯ್ಯುತ್ತಿದ್ದ ಸಂಪ್ರದಾಯ ಸನಾತನಿಗಳ ಮಾತನ್ನು ಕಟುವಾಗಿ ವಿರೋಧಿಸಿದ ಚೆನ್ನ ಬಸವಣ್ಣ ಆದಿ ಬಸವಣ್ಣ, ಅನಾದಿ ಲಿಂಗವೆಂದೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು ಎಂದು ಹೇಳಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಲಿಂಗ ಸ್ಥಾವರ ಕೆಲವೇ ಕೆಲವರಿಗೆ ಧಾರ್ಮಿಕ ಹಕ್ಕು ಜಾತಿಯಿಂದ ಶ್ರೇಷ್ಟ ಕನಿಷ್ಟ ಭಾವ ಹೊರತುಪಡಿಸಿ ಎಲ್ಲರಿಗೂ ಇಷ್ಟ ಲಿಂಗ ನೀಡಿ ಎಲ್ಲರೂ ತಮ್ಮ ತಮ್ಮ ಅರಿವಿನ ಅನುಸಂಧಾನ ಮಾಡಲು ಅನುವು ಮಾಡಿ ಕೊಟ್ಟ ಶ್ರೇಷ್ಟ ಸಮಾಜವಾದಿ ಚಿಂತಕ ಬಸವಣ್ಣ ಇಷ್ಟ ಲಿಂಗ ಜನಕ. ಅನಾದಿ ಬಸವಣ್ಣ ಆದ್ಯ ಪುರುಷ ಎಂಬ ಅರ್ಥದಲ್ಲಿ ಚೆನ್ನ ಬಸವಣ್ಣ ಹೇಳಿದ್ದಾನೆ.

ಆದಿ ಲಿಂಗ, ಅನಾದಿ ಬಸವಣ್ಣನು! ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,
ಇಷ್ಟ ಲಿಂಗದ ಪರಿಕಲ್ಪನೆ ಬಸವಣ್ಣನವರಿಂದ ಮೂಡಿ ಬಂದ ಕಾರಣ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು.
ಆದಿ ಲಿಂಗ ಅನಾದಿ ಬಸವಣ್ಣ ಎನ್ನುತ್ತ ಬಸವಣ್ಣನವರ ಉದರದಲ್ಲಿ ಹುಟ್ಟಿದೆ ಎಂಬ ಐತಿಹಾಸಿಕ ಸತ್ಯವನ್ನು ಚೆನ್ನ ಬಸವಣ್ಣ ಹೊರ ಹಾಕಿದ್ದಾರೆ.

ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು,

ಜಂಗಮ ಇದು ಚಲನ ಶೀಲತೆ ಜ್ಞಾನ ಸಮಷ್ಟಿ ಸಮಾಜ ಎಂಬ ಅನೇಕ ಪಾರಿಭಾಷಿಕ ಪದಗಳಲ್ಲಿ ಜೀವ ಚೇತನ ಎಣಿಸಿಕೊಳ್ಳುತ್ತದೆ. ಜಂಗಮ ತತ್ವದ ನಿಜದ ನಿಲುವು ಸಾಮಾಜಿಕ ಕಳಕಳಿ ಮತ್ತು ಪ್ರಜ್ಞೆ. ಇಂತಹ ಸುಂದರ ಜಂಗಮ ತತ್ವವು ಬಸವಣ್ಣನವರ ಉದರದಲ್ಲಿ ಹುಟ್ಟಿದೆ ಎಂದು ತಮ್ಮ ಅರಿವಿನ ಮಾತುಗಳನ್ನು ಹೇಳಿದ್ದಾರೆ.

ಪ್ರಸಾದವು ಬಸವಣ್ಣನನುಕರಿಸಲಾಯಿತ್ತು.
ಪ್ರಸಾದವು ಭೌತಿಕ ವಸ್ತು ತಿನ್ನುವ ಪದಾರ್ಥವಲ್ಲ. ಅದು ತನು ಮನ ಘನ ಭಾವ ಶುದ್ಧಗೊಂಡ ಪ್ರಸನ್ನತೆ. ಅಂಗ ಲಿಂಗ ಒಂದಾಗುವ ಸುಂದರ ಸಂಗಮ. ಒಳ ಹೊರಗಿನ ಅಂಗಳದ ಸ್ವಚ್ಛ ಮತ್ತು ಸುಂದರಗೊಳಿಸುವ ಸಂತಸ ನೆಮ್ಮದಿ ಪ್ರಸಾದ ತತ್ವ. ಇಂತಹ ಪ್ರಸಾದವು ಬಸವಣ್ಣನವರ ನಡೆ ನುಡಿ ಸಮನ್ವಯಗೊಳಿಸುವ ರೀತಿಯನ್ನು ಅನುಸರಿಸುತ್ತ ಪ್ರಸಾದ ಪ್ರಸನ್ನತೆಯಿಂದ ಮೌಲಿಕ ಚಿಂತನೆಯಾಗಿ ಮಾರ್ಪಾಡು ಹೊಂದಿತು.
ಹೀಗಾಗಿ ಪ್ರಸಾದ ರೂಪದಲ್ಲಿ ಮನುಷ್ಯ ತಾನು ಭಕ್ತನಾಗಿ ಉತ್ತಮ ರೀತಿಯಲ್ಲಿ ಬದುಕ ಬೇಕು ಎಂದು ಹಾರೈಸುವ ಬಸವಣ್ಣನವರ ಆಶಯವನ್ನು ಚೆನ್ನ ಬಸವಣ್ಣ ತಮ್ಮ ವಚನದಲ್ಲಿ ಹೇಳಿದ್ದಾರೆ.

ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯಾ ಕೂಡಲಚೆನ್ನಸಂಗಮದೇವಾ

ಲಿಂಗ ಜಂಗಮ ಮತ್ತು ಪ್ರಸಾದ ಎಂಬ ತ್ರಿವಿಧ ತತ್ವಗಳಿಗೆ ಬಸವಣ್ಣನವರೇ ಪುರುಷರು.
ಲಿಂಗ ಜಂಗಮ ಪ್ರಸಾದ ಎಂಬ ತತ್ವಗಳಿಗೆ ಹೊಸ ವ್ಯಾಖ್ಯಾನ ಅರ್ಥ ನೀಡಿದ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕ ಕಾರಣಿ ಪುರುಷರು ಎನ್ನುವ ಅರ್ಥದಲ್ಲಿ ಚೆನ್ನ ಬಸವಣ್ಣ ಹೇಳಿದ್ದಾರೆ. ಇದು ವಚನ ಅನುಸಂಧಾನ ಗೊಳಿಸಬಹುದಾದ ಸರಳ ಮಾರ್ಗ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!