ಬಸವಣ್ಣನಿಂದ
ಎನ್ನಾಕಾರವೇ ನೀನಯ್ಯಾ ಬಸವಣ್ಣ
ನಿನ್ನಾಕಾರವೇ ಕೋಲ ಶಾಂತ.
ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ
ಉದಯವಾದ ಕಾರಣ
ಆ ಬಸವಣ್ಣನ ಶ್ರೀಪಾದಕ್ಕೆ ಅಹೋ ರಾತ್ರಿಯಲ್ಲಿ
ನಮೋ ನಮೋಯೆಂಬೆ
ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗ ಸಂಗ
ಕೋಲ ಶಾಂತಯ್ಯಗಳ ವಚನ
ಕೋಲ ಶಾಂತಯ್ಯ ಕಲ್ಯಾಣದ ಒಬ್ಬ ದೊಡ್ಡ ಸಾಧಕ ಆಧ್ಯಾತ್ಮಿಕ ಪಯಣದಲ್ಲಿ ಸಾಗಿ ಪರಿಪೂರ್ಣತೆಯ ಹಂತ ತಲುಪುವ ಶರಣನಿಗೆ ಮತ್ತೆ ಮತ್ತೆ ನೆನಪಾಗುವುದು ಬಸವಣ್ಣ .ತಾನು ಪಡೆದ ಘನಾಕಾರದ ದೇಹ ಸಾಧನೆಯ ರೂಪ ಇವುಗಳ ಒಡೆಯ ಬಸವಣ್ಣ .ಎನ್ನಾಕಾರವೇ ನೀನಯ್ಯಾ ಬಸವಣ್ಣ -ಅಂದರೆ ಬಸವಣ್ಣ ಎಂಬ ಚಿದ್ಪ್ರಭೆ ಮಹಾಜ್ಞಾನವು ಕೋಲ ಶಾಂತಯ್ಯನ ಆಕಾರವನ್ನೇ ತುಂಬಿಕೊಂಡಿತ್ತು.ತನ್ನ ಸೂಕ್ಷ್ಮ ಸ್ಥೂಲ ಆಕಾರಕ್ಕೆ ಬಸವಣ್ಣ ಸ್ಫೂರ್ತಿ .
ನಿನ್ನಾಕಾರವೇ ಕೋಲ ಶಾಂತ.ಜಂಗಮ ಪ್ರೇಮಿಯಾದ ಬಸವಣ್ಣನು ಶರಣರ ಜೀವಾಳವಾಗಿದ್ದನು ಹೀಗಾಗಿ ಕೋಲ ಶಾಂತಯ್ಯನು ಬಸವಣ್ಣನವರ ಆಕಾರವೇ ಕೋಲ ಶಾಂತ ಎಂದು ಹೇಳಿ ಸಮಗ್ರ ಶರಣರ ಒಟ್ಟು ಭಾವ ಮೌಲ್ಯ ಬಸವಣ್ಣ ಹೀಗಾಗಿ ಬಸವಣ್ಣನಲ್ಲಿ ಕೋಲ ಶಾಂತಯ್ಯನವರ ಅಸ್ತಿತ್ವವೂ ಇದೆ ಎಂದರ್ಥ .
ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ -ಇಲ್ಲಿ ಕರಸ್ಥಲಕ್ಕೆ ಚುಳುಕಾದ ಇಷ್ಟಲಿಂಗವು ಅರಿವಿನ ಕುರುಹು ಚೈತನ್ಯದ ಪ್ರತೀಕ ಮಾತ್ರ ,ಇಂತಹ ಅಭೂತಪೂರ್ವ ಯೋಗ ಸಾಧನ ಕರುಣಿಸಿದ ಬಸವಣ್ಣ ಕರಸ್ಥಲದ ಲಿಂಗವೇ ಎಂದಿದ್ದಾರೆ ಕೋಲ ಶಾಂತಯ್ಯನವರು.ಇಂತಹ ಕಾರಣಿ ಪುರುಷ ಬಸವಣ್ಣನ ಶ್ರೀ ಪಾದಕ್ಕೆ ಅಹೋ ರಾತ್ರಿಯಲ್ಲಿ ನಮೋ ನಮೋಯೆಂಬೆ ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ನಿರಂಗ ಸಂಗ -ನಿರಾಕಾರದ ಸಂಗವ ಬಯಸಿ ಬಸವಣ್ಣನವರು ಕಲ್ಪಿಸಿದ ಸಾಕಾರವು ಜಡವಲ್ಲ ನಿರಂಗ ಸಂಗ .
–ಡಾ.ಶಶಿಕಾಂತ.ಪಟ್ಟಣ -ಪುಣೆ