ರತಿ ಪ್ರಕೃತಿ
ಹಬ್ಬಗಳ ಹಬ್ಬ ಹೋಳಿಹಬ್ಬ
ಬಣ್ಣದೋಕುಳಿ ರಂಗಿನಾಟ
ಮೂಡಿಸಿವೆ ಚೆಂದದ ಚಿತ್ತಾರ
ಮನೆಗೋಡೆ ಬೀದಿ ಅಂದದಲಿ
ಒಲುಮೆಯ ರಂಗಿನಾಟ ಮನದಲಿ
ಕಾಮನ ಮೆರವಣಿಗೆ
ಬಾರಿಸುತ ಹಲಗೆ
ಶವದ ಅಣುಕು ನೋಟ
ಒಡೆಯುತ ಕಟ್ಟಿದ ಗಡಿಗೆ
ಕಿರುಚಾಟ ಚೀರಾಟ
ಹೋಳಿ ಹಾಡ ಸಂಭ್ರಮ
ಮುಗಿಲ ರಾಚಿದೆ
ಹಚ್ಚಿ ಕಾಮಗೆ ಅಗ್ನಿ.
ಆಗ ಆರುತಿರಲಿಲ್ಲ ಕೆಂಡದುಂಡಿ
ಈಗ ತಾಸೆರಡು ತಾಸು ಇರದು
ಸಿಗದು ಕಟ್ಟಿಗೆ ಕದಿಯಲಲ್ಲ ಕೊಳ್ಳಲು
ಇಲ್ಲ ಕೆಂಡ ಕಡಲೆ ಹುರಿದು ತಿನಲು
ಆಗದು ಹಲ್ಲು ಗಟ್ಟಿ ಜಗಿಯಲು
ಬೆಂಕಿಯ ಶಮನ ಬೋರ್ಗರೆವ
ರತಿಯ ಕಣ್ಣೀರಲಿ ಅಂದು
ಇಂದವಳು ಸೋತು ಸುಣ್ಣ
ರೋಸಿಹಳು ಗಂಡಿನ ಶೋಷಣೆಗೆ
ರತಿ ಪ್ರಕೃತಿ ಪ್ರತಿಭಟಿಸುತಿಹಳು
ಕಣ್ಣೀರ ಸುರಿಸುವದು ನಿಲ್ಲಸಿಹಳು.
–ಶಾರದಾ ಕೌದಿ
ಧಾರವಾಡ