ಬಣ್ಣಗಳ ಹಬ್ಬ

 

ಬಣ್ಣಗಳ ಹಬ್ಬ

ಹೋಳಿ ಹುಣ್ಣಿಮೆ ವರ್ಷದ ಕೊನೆಯ ಹಬ್ಬ. ಫಾಲ್ಗುಣ ಮಾಸ ಬಂದಿತೆಂದರೆ ಬಣ್ಣದ ಹಬ್ಬದ ಸಂಭ್ರಮ. ಗಂಡು ಮಕ್ಕಳ ಹಬ್ಬ ಎಂದೇ ಪ್ರಸಿದ್ಧಿ ಬೇರೆ. ಸಾಮೂಹಿಕವಾಗಿ ಬಂಧು ಬಾಂಧವರು ನೆರೆಹೊರೆಯಾರೊಂದಿಗೆ ಕೂಡಿ ಕಾಮ ದಹನ ಮಾಡಿ, ಹೋಳಿಗೆ ಊಟ ಉಂಡು ರಂಗು ರಂಗಿನ ಬಣ್ಣಗಳಿಂದ ನಮ್ಮವರೊಂದಿಗೆ ಆಡಿ ಸಂಭ್ರಮ ಆಚರಿಸುವ ಹೋಳಿ ಹಬ್ಬ. ಕಾಮವನ್ನು ದಹನ ಮಾಡಿ ಹೊಯ್ಕೊಂಡವ್ರ ಬಾಯಿಗೆ ಹೋಳಿಗೆ. ಹೊಸದೊಂದು ಯುಗಾದಿಯ ಸ್ವಾಗತ ಕ್ಕೆ ಮೊದಲು ಓಕುಳಿಯ ಸಂಭ್ರಮ. ಸಾಮಾನ್ಯವಾಗಿ ಹಿಂದುಗಳು ಪ್ರತಿ ಸಂಭ್ರಮ ಆಚರಣೆಯಲ್ಲಿ ಬಣ್ಣ ಆಡುವ ಪದ್ಧತಿ ಇದೆ.

ಧಾರ್ಮಿಕ ಹಿನ್ನೆಲೆ ನೋಡಿದಾಗ ಹಿರಣ್ಯ ಕಶ್ಯಪುವಿನ ತಂಗಿ ಹೋಲಿಕಾಳ ದಹನದ ದಿವಸ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಕಾಮ ದಹನದ ಕಥೆಯನ್ನು ಹೇಳುತ್ತಾರೆ.

ಪುರಾಣದ ಕಥೆಗಳು ಪ್ರಸಿದ್ಧ ಎಲ್ಲರಿಗೂ ಗೊತ್ತಿದ್ದೇ ಇರುತ್ತದೆ. ಕಥೆಗಳ ತತ್ವ ತಿಳಿಯಲೇ ಬೇಕಾದದ್ದು. ಹೋಲಿಕಾ ಕಥೆ ಕೇಳುವಾಗ ಕೆಟ್ಟ ಉದ್ದೇಶದಿಂದ ಮಾಡುವ ಕೆಲಸ ಯಶಸ್ಸು ಪಡೆಯುವುದಿಲ್ಲ, ಭಕ್ತರು ಯಾರೇ ಇರಲಿ ಅವರನ್ನು ಭಗವಂತ ಕಾಪಾಡುತ್ತಾನೆ. ಮನಸ್ಸಿನಲ್ಲಿ ಮಮತೆ ಮತ್ತು ಕರುಣೆ ಇರಬೇಕು. ಬೇರೆಯವರ ಸಲುವಾಗಿ ಹಳ್ಳ ತೋಡಿದರೆ ಅದರಲ್ಲಿ ಬಿದ್ದು ಸಾಯುತ್ತಾರೆ ಎಂಬ ಪಾಠ ಕಲಿಯುತ್ತೇವೆ.

ಮನ್ಮಥನ ಕಥೆಯಲ್ಲಿ ತಪಸ್ವಿಗಳ ತಂಟೆಗೆ ಹೋದರೆ ಬೂದಿಯಾಗುವುದು ಖಚಿತ, ಲೋಕ ಕಲ್ಯಾಣಕ್ಕೆ ಜೀವ ಕೊಟ್ಟರೂ ವೀರ ಸ್ವರ್ಗ. ಕೆಟ್ಟ ಕಾಮನೆಗಳನ್ನು ಸುಟ್ಟ ನಂತರವೇ ಬಣ್ಣಗಳಿಂದ ಕೂಡಿದ ಸುಂದರ ಹಬ್ಬ ಎಂಬ ಸತ್ಯದ ಜೊತೆಗೆ, ನಮ್ಮಲ್ಲಿ ಯಾರದೇ ಬಗ್ಗೆ ಆಕರ್ಷಣೆ ಪ್ರೀತಿ ಹುಟ್ಟಲು ಕಾಮದೇವನ ದೃಷ್ಟಿಯೇ ಕಾರಣ ಎಂದು ತಿಳಿಯುತ್ತೇವೆ.

ಇಂದಿನ ದಿನಗಳಲ್ಲಿ ಬಣ್ಣ ರಾಸಾಯನಿಕ ಬಣ್ಣಗಳ ಬಳಕೆ ಹೆಚ್ಚಿಗೆ ಆಗುತ್ತಿದೆ. ರಾಸಾಯನಿಕ ಪದಾರ್ಥಗಳಿಂದ ಆದ ಬಣ್ಣ ಆಡುವುದು ಪರಿಸರಕ್ಕೆ ಮತ್ತು ನಮಗೂ ಹಾನಿಕಾರಕ ಆದ್ದರಿಂದ ನೈಸರ್ಗಿಕ ಬಣ್ಣಗಳನ್ನು ಬಳಸಿ ಪರಿಸರವನ್ನೂ ಆರೋಗ್ಯವನ್ನೂ ರಕ್ಷಿಸಿಕೊಳ್ಳ ಬೇಕು

ನೈಸರ್ಗಿಕ ಬಣ್ಣಗಳನ್ನು ಒಣಗಿದ ಹೂವಿನ ಎಸಳು ಗಳಿಂದ ಮಾಡುತ್ತಾರೆ . ಕೆಂಪು ಬಣ್ಣ ತಯಾರಿಸಲು ಕೆಂಪು ದಾಸವಾಳ, ಕೆಂಪು ಗುಲಾಬಿ, ಬೀಟ್ ರೂಟ್, ಗಜ್ಜರಿ (ಕ್ಯಾರೆಟ್ ) ಟೊಮೊಟೊಗಳನ್ನು ಒಣಗಿಸಿ ಪುಡಿ ಮಾಡೀ ನೈಸರ್ಗಿಕವಾಗಿ ತಯಾರಿಸ ಬಹುದು.

ಹಳದಿ ಬಣ್ಣವನ್ನೂ ಮಾರಿಗೋಲ್ಡ್, ಚಂಡು ಹೂ, ಸೇವಂತಿಗೆಯ ಎಸಳುಗಳಿಂದ ತಯಾರಿಸಬಹುದು ಅರಿಸಿನವನ್ನೂ, ಅರಿಸಿನದ ಜೊತೆಗೆ ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟನ್ನು ಸೇರಿಸಿ ತಯಾರಿಸಬಹುದು.

ನೀಲಿ ಬಣ್ಣವನ್ನು ನೀಲಿ ಬಟಾಣಿ, ಜಕರಂದ ಮರದಿಂದ, ಶಂಖ ಪುಷ್ಪ ಹೂವಿನ ಎಸಳುಗಳು, ನೀಲಿ ಗೊರಟೆ ಹೂವುಗಳು ಮೊದಲಾದ ನೀಲಿ ಬಣ್ಣದ ಹೂವುಗಳಿಂದ ತಯಾರಿಸಬಹುದು

ಗುಲಾಬಿ ಬಣ್ಣವನ್ನು ಗುಲಾಬಿ ಬಣ್ಣದ ಗುಲಾಬಿ ಹೂವು, ಪಿರಿವಿಂಕಲ್ ಹೂವುಗಳ ಎಸಳುಗಳು, ಈರುಳ್ಳಿ ಸಿಪ್ಪೆಯನ್ನು ಕೂಡ ಬಳಸಲು ಬಹುದು

ಹಸಿರು ಬಣ್ಣವನ್ನು ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು ಕರಿಬೇವು, ಬೇವು ಮೊದಲಾದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಬಳಸಬಹುದು

ಕೇಸರಿ ಬಣ್ಣಕ್ಕೆ ತೇಗ, ಮದರಂಗಿ (henna), ನೆಲ್ಲಿಕಾಯಿ, ಹರಿತಕಿ ಮೊದಲಾದ ಪದಾರ್ಥಗಳಿಂದ ಮನೆಯಲ್ಲಿಯೇ ತರಿಸಬಹುದು.

ಈ ರೀತಿಯ ವೈದ್ಯಕೀಯ ಗುಣಗಳುಳ್ಳ ಪದಾರ್ಥಗಳಿಂದ ಹಿಂದಿನ ಕಾಲದಲ್ಲೂ ಬಣ್ಣವನ್ನು ಆನಂದಿಸುತ್ತಿದ್ದರು. ಇಂದಿಗೂ ಸುರಕ್ಷಿತವಾದ ಬಣ್ಣದ ಹಬ್ಬವನ್ನು ಆಚರಿಸೋಣ.

ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ ಮಹತ್ವ ತಿಳಿದು ಸಂತಸದ ಬಣ್ಣದ ಹಬ್ಬವನ್ನು ಆಚರಿಸಿ, ಜೀವನದಲ್ಲಿ ಪ್ರತಿ ವರ್ಷವು ಹೊಸ ಹೊಸ ಬಣ್ಣಗಳ ಆನಂದವನ್ನು ಅಸ್ವಾದಿಸೋಣ. ನೈಸರ್ಗಿಕ ಬಣ್ಣಗಳಿಂದ ಹೋಳಿ ಹಬ್ಬದ ಆನಂದ ಪಡೆಯೋಣ

ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಮಾಧುರಿ

Don`t copy text!