ಪುಸ್ತಕ ಪರಿಚಯ
“ಕರ್ನಾಟಕದ ಯುಗಪುರುಷ ಪಂಡಿತ ತಾರಾನಾಥರು”
ಕೃತಿಕಾರರು :- ಲಕ್ಷ್ಮೀದೇವಿ ಶಾಸ್ತ್ರಿ
” 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪ್ರಕಟಣೆ”ಯಾಗಿದೆ.
ಬೆಲೆ:- 350/-
ತಮ್ಮ ೭೦ ನೇ ಇಳಿವಯಸ್ಸಿನಲ್ಲೂ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರು, ಈ ಗ್ರಂಥ ರಚನೆಗೆ ತೊಡಗಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಯುವಪೀಳಿಗೆಗೆ ಆದರ್ಶನೀಯ, ಅನುಕರಣೀಯ.
ಲಕ್ಷೀದೇವಿ ಶಾಸ್ತ್ರಿಯವರ ಪ್ರಸ್ತಾವನೆಯನ್ನು ಓದಿದರೆ, ಅವರ ಈ ಕಾರ್ಯದ ಹಿಂದಿನ ಪರಿಶ್ರಮ ತಿಳಿಯುತ್ತದೆ. ನಿಜವಾಗಿಯೂ ಓದುತ್ತಾ ಸಾಗಿದಂತೆ ರೋಮಾಂಚನಗೊಳ್ಳುತ್ತೇವೆ. ಒಂದು ಕಾದಂಬರಿಯನ್ನೋ, ಹತ್ತು ಕಥೆಗಳನ್ನೋ, ಮೂವತ್ತು ನಲವತ್ತು ಕವಿತೆಗಳನ್ನೋ ಬರೆಯುವುದು ದೊಡ್ಡದಲ್ಲವೆಂದು ಅರ್ಥವಾಗಿದ್ದೇ ಈ ಪುಸ್ತಕದ ಹಿಂದಿನ ಪರಿಶ್ರಮವನ್ನು ಓದಿದಾಗ.
ಕ್ಷೇತ್ರ ದರ್ಶನ, ನೂರಾರು ಕೃತಿಗಳ, ಪತ್ರಗಳ, ಲೇಖನಗಳ, ಪತ್ರಿಕೆಗಳ ಅಧ್ಯಯನ, ಇಂಗ್ಲಿಷ್, ತೆಲುಗು, ಭಾಷೆಯಲ್ಲಿನ ಮಾಹಿತಿಯನ್ನು ಕನ್ನಡಕ್ಕೆ ಮೂಲ ಮಾಹಿತಿಗೆ ಚ್ಯುತಿ ಬರದಂತೆ ಅನುವಾದಿಸಲು ಪಟ್ಟ ಹೈರಾಣ ಕೃತಿ ಓದುತ್ತಾ ಸಾಗಿದಂತೆ ಕಣ್ಣಿಗೆ ಕಟ್ಟುತ್ತದೆ.
ನಾನು ಸರ್ವಜ್ಞ ಜಯಂತಿ ಆಚರಿಸಿ ಆ ದಿನವೇ ಸರ್ವಜ್ಞನ ಪ್ರೇರಣೆಯೋ ಏನೋ, ಕೃತಿ ಓದಿಗೆ ಕುಳಿತೆ. ಕೃತಿಯನ್ನು ಓದಿ ಮುಗಿಸುವ ಹೊತ್ತಿಗೆ ಲೇಖಕರ ಮತ್ತು ತಾರಾನಾಥರ ಫ್ಯಾನ್ ಆಗಿಬಿಟ್ಟಿದ್ದೇನೆ. ಈ ಕೃತಿಯನ್ನು ನೀವು ಕೈಗೆತ್ತಿಕೊಂಡು ಓದಲು ಕುಳಿತರೆ, ನನ್ನ ಅನುಭವ ನಿಮಗೂ ಆಗುತ್ತದೆ ಎಂಬ ಬಲವಾದ ನಂಬಿಕೆ ನನಗಿದೆ. ಕೃತಿ, ಕೃತಿಯೊಳಗಿನ ಪ್ರತಿಕೃತಿ ಮತ್ತು ಕೃತಿಕಾರರ ನಿರೂಪಣೆ ನಿಮ್ಮನ್ನು ಆ ನಿಟ್ಟಿನಲ್ಲಿ ಹಿಡಿದಿಟ್ಟುಕೊಳ್ಳುತ್ತದೆ.
ತಾರಾನಾಥರ ಬದುಕನ್ನು ಓದಿ ಬರೆದರೆ ಈ ಕೃತಿ ಅಷ್ಟೊಂದು ಮಹತ್ವ ಪಡೆಯುತ್ತಿತ್ತೋ ಇಲ್ವೋ?! ಆದರೆ ತಾರಾನಾಥರ ಸೃಜಿಸಿದ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತ, ವೃತ್ತಿಯನ್ನೂ ಮಾಡಿ, ಅವರ ಒಡನಾಡಿಗಳನ್ನೆಲ್ಲ (ಮಕ್ಕಳು, ಸಂಬಂಧಿಗಳು, ಸ್ನೇಹಿತರ ಮಕ್ಕಳು) ಭೇಟಿ ಆಗಿ, ತಾರಾನಾಥರ ಪಾದಸ್ಪರ್ಶದಿಂದ ಪುನೀತವಾದ ಪ್ರತಿ ಸ್ಥಳಕ್ಕೂ ಭೇಟಿ ನೀಡಿ ಐತಿಹಾಸಿಕ ವಿಷಯಗಳನ್ನು, ಭಾವಚಿತ್ರಗಳನ್ನು ಎಳೆ ಎಳೆಯಾಗಿ ಕಲೆ ಹಾಕಿದ ಅವರ ಪರಿಶ್ರಮದ ಫಲವಾಗಿ ಕೃತಿ ಅಮೋಘವಾಗಿ ಮೂಡಿಬಂದಿದೆ.
ಇಲ್ಲಿ ಕೃತಿಕಾರರು ಕೇವಲ ವಿಷಯ ಸಂಗ್ರಹಿಸಿ ದಾಖಲಿಸಿದ್ದಾರೆ, ಓದುತ್ತಿದ್ದೇವೆ ಎನಿಸುವುದಿಲ್ಲ. ನೇರವಾಗಿ ತಾರಾನಾಥರ ಕುರಿತಾಗಿ ಲೇಖಕಿಯವರೇ ನಮ್ಮೊಂದಿಗೆ ಮಾತಾಡುತ್ತಿದ್ದಾರೆಯೇನೋ ಅನಿಸುವಂತಹ ಭಾವ ಓದುಗನಲ್ಲಿ ಮೂಡುತ್ತದೆ.
ಇನ್ನು ಪಂಡಿತ ತಾರಾನಾಥರ ಕುರಿತಾಗಿ ಎಷ್ಟು ಬರೆದರೂ ಕಡಿಮೆ ಎನ್ನುವ ಲೇಖಕಿಯವರು ತಾರಾನಾಥರ ಬಾಲ್ಯದಿಂದ ಹಿಡಿದು ಅವರ ಸಂಪೂರ್ಣ ಜೀವನದ ಕುರಿತಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಈಗಾಗಲೇ ತಾರಾನಾಥರ ಕುರಿತಾಗಿ ಅನೇಕ ಪುಸ್ತಕಗಳು ಹೊರಬಂದರೂ “ಈ ಕೃತಿ PHD ಪ್ರಬಂಧಕ್ಕಿಂತ ಕಡಿಮೆ ಇಲ್ಲ, PHD ಪ್ರಬಂಧಕ್ಕೆ ಮೀರಿದ ದಾಖಲೆಯ ಪುಸ್ತಕವಾಗುತ್ತದೆ” ಎಂಬ “ಶ್ರೀ ರಾಮಣ್ಣ ಹವಳೆ”ಯವರ ಈ ಕೃತಿಯ ಕುರಿತಾದ ಹೇಳಿಕೆ ಸತ್ಯವೆನಿಸುತ್ತದೆ.
ಅಷ್ಟು ಮಹತ್ವಪೂರ್ಣ ಗ್ರಂಥ ಇದಾಗಿ ಮುಂದೆ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುತ್ತದೆ. ಮತ್ತು ಈ ಕೃತಿಯನ್ನು ಬೆನ್ಹತ್ತೀ ಪ್ರಶಸ್ತಿಗಳೂ ಬರುತ್ತವೆ ಎಂಬ ವಿಶ್ವಾಸ ನನಗಿದೆ.
(ಲೇಖಕಿ-ಲಕ್ಷ್ಮೀದೇವಿ ಶಾಸ್ತ್ರೀ)
******
ಧ್ಯಾನದಿಂದ, ಯೋಗದಿಂದ ಆತ್ಮ ಶಕ್ತಿ ಹೆಚ್ಚಿಸಿಕೊಂಡ ತಾರಾನಾಥರು, ವ್ಯಕ್ತಿಗಳಿಗೆ ಶಾರೀರಿಕ ಚಿಕಿತ್ಸೆಗಿಂತ ಮಾನಸಿಕ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಎಂದು ಅರಿತು, ಆಯುರ್ವೇದದ ಚಿಕಿತ್ಸೆಯ ಸಾಧನಗಳನ್ನೆಲ್ಲ ವೈದ್ಯರಿಗೆ ದಾನ ಮಾಡಿ ಧ್ಯಾನಕ್ಕೆ ಅಣಿಯಾಗಿ ಮಂತ್ರಸಿದ್ಧಿಯಿಂದ ಹೊಟ್ಟೆಯಲ್ಲಿನ ಗಡ್ಡೆಯನ್ನು ಕರಗಿಸಿ ಸಾಧನೆ ಮಾಡಿದ್ದಾರೆಂಬುದನ್ನು ಓದಿದರೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿನ ಅಪಾರ ಶಕ್ತಿ ಬಗೆಗೆ ನಮಗೆ ಹೆಮ್ಮೆ ಎನಿಸುತ್ತದೆ. ಮುಂದೆ ಈ ಮಾನಸಿಕ ಚಿಕಿತ್ಸೆಯನ್ನು ಗಾಂಧೀಜಿಯವರಿಗೂ ತಾರಾನಾಥರು ನೀಡಿದ್ದಾರೆಂಬುದು ಓದುಗರ ಗಮನಕ್ಕೆ ಬರುತ್ತದೆ.
ತಾರಾನಾಥರ ಜನ್ಮ, ತಾಯಿ ಹಾಕಿಕೊಟ್ಟ ಸನ್ನಡತೆ ಮತ್ತು ವಾತ್ಸಲ್ಯದ ಪಾಠ, ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾದದ್ದು, ಹೈದರಾಬಾದಿನಲ್ಲಿ ಚಿಕ್ಕಮ್ಮಳ ಮನೆಯಲ್ಲಿ ನೆಲೆಸಿ, ಶಿಕ್ಷಣ ಪಡೆದು ಶಿಕ್ಷಕರಾಗಿ ಸೇವೆಸಲ್ಲಿಸಿದ್ದು, ವಿದ್ಯಾರ್ಥಿ ಜೀವನದಲ್ಲೇ ದೇಶದ ಭವಿಷ್ಯ ಪ್ರಜೆಯ ಛಾಪನ್ನು ತೋರಿ; ಧರ್ಮದ ಜೊತೆಗೆ ಕನ್ನಡಾಭಿಮಾನವನ್ನು ಮೆರೆದು, ಸ್ವತಂತ್ರ ಮನೋಭಾವದಿಂದ ನಿಜಾಮನನ್ನು ನೇರವಾಗಿ, ನಿಷ್ಠುರವಾಗಿ ಎದುರಿಸಿದ ಮಾಹಿತಿ ಓದುತ್ತಿದ್ದರೆ ಓದುಗ ರೋಮಾಂಚನಗೊಳ್ಳುತ್ತಾನೆ. ಈ ಕಾರಣಕ್ಕೆ ಆಗಿನ ಅತ್ಯಂತ ಹಿಂದುಳಿದ ಪ್ರದೇಶವೆಂದು ಕುಖ್ಯಾತಿಗೆ ಒಳಗಾಗಿದ್ದ ರಾಯಚೂರಿನ ಉಸ್ಮಾನಿಯಾ ಶಾಲೆಗೆ ವರ್ಗವಾಗಿ ಬಂದ ತಾರಾನಾಥರು, ಶಾಲೆಯಲ್ಲೂ ಶಿಸ್ತಿನ, ಸ್ವಾತಂತ್ರ್ಯದ ಪಾಠ ಶುರುಮಾಡುತ್ತಾರೆ. ಬಹಿರಂಗವಾಗಿಯೇ ನಿಜಾಮನಿಗೆ ಅವಮಾನ ಮಾಡಿ ರಾಯಚೂರಿನ ಜನಮಾನಸದಲ್ಲಿ ಹೆಸರು ಮಾಡುತ್ತಾರೆ. ನಿಜಾಮನಿಗೆ ಅವಮಾನ ಮಾಡಿದರ ಫಲವಾಗಿ ಅನೈತಿಕವಾಗಿ ವರ್ಗಾವಣೆಯ ಫಲ ಸ್ವೀಕರಿಸಬೇಕಾಗುತ್ತದೆ. ಈ ಕಾರಣಕ್ಕೆ ತಾರಾನಾಥರು, ಅನ್ಯಾಯದ ವರ್ಗಾವಣೆ ಖಂಡಿಸಿ, ಮತ್ತಷ್ಟು ಕಾರಣಗಳ ಜೊತೆಗೆ ಸರಕಾರಿ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡುತ್ತಾರೆ. ನಂತರ ಹೊಸ ಪರ್ವ ಪ್ರಾರಂಭ, ಸವಾಲುಗಳ ಮಧ್ಯೆ, ಕೆಲವರ ಸಹಾಯದೊಂದಿಗೆ “ಹಮ್ ದರ್ದ್” ಶಾಲೆ ಪ್ರಾರಂಭಿಸುತ್ತಾರೆ. “ಹಮ್ ದರ್ದ್” ಪದದ ಆಯ್ಕೆಯ ಕಾರಣವನ್ನು, ತಾರಾನಾಥರು ಹೇಳಿದಂತೆ, ಬಹಳ ಅರ್ಥಪೂರ್ಣವಾಗಿ ಲೇಖಕಿಯವರು ದಾಖಲಿಸಿದ್ದಾರೆ.
“ಹಮ್ ದರ್ದ್” ಶಾಲೆಯ ಏಳಿಗೆಗಾಗಿ, ಅಧ್ಯಾಪಕರ ಬದುಕಿಗಾಗಿ ಮತ್ತು ಶಾಲೆಯನ್ನು “ಸಮುದಾಯದ ಶಾಲೆಯನ್ನಾಗಿಸಲು” ಹುಟ್ಟಿಕೊಂಡ ಯೋಜನೆ “ಮುಷ್ಠಿ ಫಂಡ್”. ಎಂತಹ ಅದ್ಭುತ ಪರಿಕಲ್ಪನೆ ತಾರಾನಾಥರದು. ಇದರಿಂದಲೇ ದಶಕಗಳ ಕಾಲ ಶಾಲೆ ನೆಡೆದಿದ್ದು ಎಂಬದು ಇಂದಿಗೆ ನಮಗೆ ಆಶ್ಚರ್ಯದ ಸಂಗತಿ. ಶಾಲೆಗಾಗಿ ದೇಣಿಗೆ ಸಂಗ್ರಹ, ತಾವೇ ಸ್ವತಃ ಬೆಣ್ಣೆ ಬಿಸ್ಕತ್, ಮಿಠಾಯಿ ತಯಾರಿಸಿ ಮಾರಾಟದಿಂದ ಬಂದ ಹಣ ಮತ್ತು ವೈದ್ಯಕೀಯ ವೃತ್ತಿಯಿಂದಲೂ ಬಂದ ಹಣವನ್ನೆಲ್ಲ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗಾಗಿ ಉಪಯೋಗಿಸಿದ್ದು ತಿಳಿದರೆ ನಿಜಕ್ಕೂ ಅವರ ಆ ನಿಸ್ವಾರ್ಥ ಸೇವೆ ಕಣ್ಣಿಗೆ ಕಟ್ಟಿಬಿಡುತ್ತದೆ. ಅಷ್ಟೇ ಅಲ್ಲದೆ, ನಿಜಾಮನ ಪರವಾಗಿಯೇ ಪ್ರಾರ್ಥನೆಯನ್ನು ನಿತ್ಯವೂ ಸಲ್ಲಿಸುತ್ತಿದ್ದ ಕಾಲದಲ್ಲಿ
“ಆಶೀರ್ವಾದ ದೇದೋ ಕಾಶಿ ಓ ಕಾಬೇವಾಲೇ”
ಎಂಬ ಭಾವೈಕ್ಯತೆಯ ಗೀತೆಯನ್ನು ತಾವೇ ರಚಿಸಿ ಪ್ರಾರ್ಥನಾ ಗೀತೆಯಾಗಿ ಹಾಡಿಸುವ ಸಂಪ್ರದಾಯ ಬೆಳಿಸಿದ ಕೀರ್ತಿ ತಾರಾನಾಥರದು. ಈ ಗೀತೆ ಮತ್ತು ಅದರ ಭಾವಾರ್ಥವನ್ನು ಅಚ್ಚುಕಟ್ಟಾಗಿ ಲೇಖಕಿಯವರು ನಮ್ಮ ಓದಿಗೆ ನೀಡಿ, ಭಾವೈಕ್ಯತೆಯ ದಾರಿಯಲ್ಲಿ ನಡೆದ ತಾರಾನಾಥರ ಹಾದಿಯನ್ನು ನಮಗೆ ತಿಳಿಸಿ ಅನುಕೂಲಿಸಿದ್ದಾರೆ.
ತಮ್ಮ ಮನೆಯಲ್ಲಿ ಪ್ರತೀ ಗುರುವಾರ ಭಜನೆ ಏರ್ಪಡಿಸಿ ಅಲ್ಲಿ, ಜಾತಿಯ ಕಟ್ಟುಪಾಡನ್ನು ದಾಟಿ ಹರಿಜನರಿಗೂ ಮುಕ್ತ ಅವಕಾಶವನ್ನು ಕೊಡುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಜೊತೆಗೆ “ರಾಯಚೂರು ಶವ ಸಂಸ್ಕಾರ ಸಂಘ” ಸ್ಥಾಪಿಸಿ, ಇನ್ ಫ್ಲೂಯೆಂಜಾ ದಿಂದ ಮರಣ ಹೊಂದಿದ ಅನೇಕರ ಮೃತ ದೇಹಗಳನ್ನು ಜಾತಿ ಪರಿಗಣಿಸದೇ ಸಹಾಯಕ್ಕೆ ಸಂಘವನ್ನು ಅಣಿಗೊಳಿಸುತ್ತಿದ್ದರು. ಈ ಕಾರ್ಯಗಳಿಂದ ತಾರಾನಾಥರು ಮಹಾನ್ ಜಾತ್ಯಾತೀತ, ಮಾನವತಾವಾದಿ ಮನುಜರಾಗಿ ಬಾಳಿದ್ದು ಇಂದಿನ ನಮ್ಮಂತಹ ಯುವಪೀಳಿಗೆಗೆ ಅನುಕರಣೀಯವಾಗಿದೆ ಎಂದು ಲೇಖಕಿಯವರು ಹೆಮ್ಮೆಯಿಂದ ಬರೆದಿದ್ದಾರೆ.
ಬಹುಮುಖ ಪ್ರತಿಭೆಗಳಾದ ತಾರಾನಾಥರು ಸಂಗೀತ, ಸಾಹಿತ್ಯ, ವೈದ್ಯಕೀಯ, ಯೋಗ, ಶಿಕ್ಷಣ, ಸಾಮಾಜಿಕ ಕಾರ್ಯ, ಮನುಕುಲದ ಮೇಲೆ ಕಳಕಳಿಯನ್ನು ಹೊಂದಿದವರಾಗಿದ್ದರು ಎಂಬುದನ್ನು ಈ ಕೃತಿ ಲೋಕಕ್ಕೆ ಸಾರುತ್ತದೆ.
ಸಾಹಿತಿಗಳಾಗಿ, ಸಂಗೀತಗಾರರಾಗಿ, ನಾಟಕಕಾರರಾಗಿ, ನಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ಅನೇಕ ಕಥಾ ಸಂಕಲನಗಳನ್ನು, ನಾಟಕಗಳನ್ನು, ಲೇಖನ ಸಂಗ್ರಹದ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸುವುದರ ಜೊತೆಗೆ ಆಂಗ್ಲ ಭಾಷೆಯಲ್ಲೂ ಕೃತಿಗಳನ್ನು ರಚಿಸಿದ್ದಾರೆ ಎಂಬುದು ವಿಶೇಷವಾಗಿ ಈ ಕೃತಿ ತಿಳಿಸಿಕೊಡುತ್ತದೆ.
ಹಮ್ದರ್ದ್ ಶಾಲೆಯಿಂದ ತುಂಗಭದ್ರಕ್ಕೆ ಬಂದುದು, ಅಲ್ಲಿನ ರೋಗಿಗಳಿಗೆ ಚಿಕಿತ್ಸೆ, “ಪ್ರೇಮಾಯತನ” ಸ್ಥಾಪನೆ, ಅಲ್ಲಿಯ ಶಿಸ್ತು, ಧರ್ಮ ಬೋಧನೆ, ಪಾಲನೆ ಇದೆಲ್ಲ ಮತ್ತೊಂದು ಸಾಧನೆಯೇ ಸರಿ.
ಇಲ್ಲೇ, ಬ್ರಹ್ಮಚರ್ಯವನ್ನು ಕಟುವಾಗಿ ಪಾಲಿಸುತ್ತಿದ್ದ ಶ್ರೀ ತಾರಾನಥರು, ವೈವಾಹಿಕ ಬದುಕಿಗೆ ಮನಸ್ಸು ಮಾಡಿದ್ದು. ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಡಿದ್ದು, ಒಂದು ಕೌತಕವಾದ ಘಟನೆಯಿಂದ. ಬ್ರಹ್ಮಚರ್ಯದ ಬಗೆಗೆ ಬೋಧಿಸುತ್ತಿದ್ದವರು ಏಕಾಏಕಿ ಹೇಗೆ ಮದುವೆಗೆ ಅಣಿಯಾದರು ಎಂದು ಅನೇಕರು ದಿಗ್ಭ್ರಾಂತಿಗೂ ಆಗ ಒಳಗಾಗಿದ್ದರಂತೆ.
ತನ್ನ ಬಳಿ ಕ್ಷಯರೋಗದ ಚಿಕಿತ್ಸೆಗೆಂದು ಬಂದ ಸುಮತೀಬಾಯಿಯವರ ಹೃದಯ ವೈಶಾಲ್ಯ, ಪ್ರಗತಿ ಪರ ಚಿಂತನೆ, ವೈಚಾರಿಕ ಪ್ರಜ್ಞೆಗೆ ಮನಸೋತ ತಾರಾನಾಥರು ಸುಮತಿಬಾಯಿಯೇ ನನಗೆ ತಕ್ಕುಳಾದ ಸಂಗಾತಿ ಎಂದು ನಿರ್ಧರಿಸುತ್ತಾರೆ. ಸುಮತಿಬಾಯಿಯವರೇ ಮೋದಲು ಮದುವೆಯ ಪ್ರಸ್ತಾಪ ಮಾಡಿದ್ದನ್ನು ಕೃತಿ ತಿಳಿಸುತ್ತದೆ. ಅಲ್ಲದೆ ಈ ಸುಮತಿಬಾಯಿ, ತಾರಾನಾಥರ ಸಹೋದರಿ ಲೀಲಾವತಿಬಾಯಿಯ ಹಾಸ್ಟೆಲ್ ರೂಮ್ ಮೇಟ್, ಲೀಲಾವತಿಬಾಯಿಯೇ ಸುಮತಿಬಾಯಿಯವರನ್ನು “ಪ್ರೇಮಾಯತನ”ಕ್ಕೆ ರಜೆಯ ಸಂದರ್ಭದಲ್ಲಿ ಕರೆದುಕೊಂಡು ಬಂದಿರುತ್ತಾರೆಂಬುದು ವಿಶೇಷವಾಗಿದೆ.
ತಾರಾನಾಥ ಮತ್ತು ಸುಮತಿಬಾಯಿಯವರ ಪರಿಣಯವನ್ನು ಲೇಖಕಿ, ಲಕ್ಷ್ಮೀದೇವಿ ಶಾಸ್ತ್ರಿಯವರು ಬಹಳ ಸೊಗಸಾಗಿ ಕಣ್ಣ ಮುಂದೆ ಚಿತ್ರಿಸುತ್ತಾರೆ.
(ಸುಮತೀಬಾಯಿಯವರೂ ಅನೇಕ ಲೇಖನಗಳನ್ನು ಬರೆದಿದ್ದಾರೆ)
ಎಂತಹ ಶತೃಗಳೇ ಆಗಿರಲಿ ಚಿಕಿತ್ಸೆಗೆಂದು ತಾರಾನಾಥರ ಬಳಿ ಬಂದರೆ ಆದರಾತಿಥ್ಯದೊಂದಿಗೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ತಾರಾನಾಥರು “ವೈದ್ಯೋ ನಾರಾಯಣೋ ಹರಿ” ಎಂಬ ಮಾತಿಗೆ ಅನ್ವರ್ಥವಾಗಿ ಸೇವೆಗೈದವರು. ಹಳಿದವರಿಂದಲೇ ಹೊಗಳಿಸಿಕೊಂಡ ನಿಸ್ವಾರ್ಥಿ, ಮೇರುವ್ಯಕ್ತಿ ಪಂಡಿತ ತಾರಾನಾಥರು.
ಸಂಸ್ಕೃತ ವಿದ್ವಾಂಸರಾದ ‘ಆದ್ಯ ಅನಂತಾಚಾರ್ಯರು’ ಆಯುರ್ವೇದ ಪಂಡಿತರಾಗಿ, “ಧನ್ವಂತರಿ” ಎಂಬ ಪತ್ರಿಕೆ ಬರೆಯುವಷ್ಟು ನೈಪುಣ್ಯತೆಯನ್ನು ತಾರಾನಾಥರ ಸ್ನೇಹದಿಂದ ಪಡೆಯುತ್ತಾರೆ. ಮತ್ತೆ, ‘ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು’ ತಾರಾನಾಥರ ಸಂಪರ್ಕಕ್ಕೆ ಬಂದು ತಾರಾನಾಥರ ಬಗೆಗಿದ್ದ ತಮ್ಮ ಋಣಾತ್ಮಕ ಭಾವ, ನಿಲುವನ್ನು ಬದಲಿಸಿಕೊಂಡು ತಾರಾನಾಥರಿಂದ “ಧರ್ಮಸಂಭವ” ಕೃತಿಯನ್ನು ಬರೆಸುತ್ತಾರೆ.
ಅಲ್ಲದೆ ಈ ಪ್ರೇಮಾಯತನದ ಕುಟೀರಕ್ಕೆ ದೇಶ, ವಿದೇಶದ ಅನೇಕರು ಭೇಟಿಕೊಟ್ಟು ತಾರಾನಾಥರಿಂದ ಹಲವು ವಿಚಾರಗಳನ್ನು ತಿಳಿದಿದ್ದಾರೆ. ವಿದೇಶದ ಪತ್ರಿಕೆಗಳಲ್ಲೂ ತಾರಾನಾಥರ ವಿಚಾರಗಳು ಬಿತ್ತರವಾಗುತ್ತಿದ್ದವು ಎಂಬುದು ತಾರಾನಾಥರ ಪ್ರತಿಭೆಗೆ ಸಾಕ್ಷಿ. ಇದು ನಮ್ಮ ಭಾರತಕ್ಕೇ ಹೆಮ್ಮೆಯ ವಿಷಯ.
“ತಾರಾನಾಥರು, ಕರ್ನಾಟಕವಲ್ಲದೆ, ಬೇರೆ ಯಾವದೇ ಪ್ರಾಂತ್ಯದಲ್ಲಾಗಲಿ, ಯಾವದೇ ದೇಶದಲ್ಲಾಗಲೀ ಇದ್ದಿದ್ದರೇ; ಅಂಥ ಪ್ರಾಂತ್ಯವಾಗಲಿ ದೇಶವಾಗಲಿ ಆ ವ್ಯಕ್ತಿಯ ಜನ್ಮಭೂಮಿಯು ತಾನೆಂದು ಹೆಮ್ಮೆ ಪಡುತ್ತಿತ್ತು” ಎಂದು ‘ಡಿ ಕೆ ಭಾರದ್ವಾಜರು’ ಹೇಳುತ್ತಾರೆ. ಅಂದರೆ, ಇಂದಿಗೂ ನಮ್ಮ ನಾಡಿನಲ್ಲಿ ತಾರಾನಾಥ ಎಂಬ ಮಾಣಿಕ್ಯಕ್ಕೆ ಸಿಗಬೇಕಾದ ಗೌರವ ಸಿಕ್ಕಿಲ್ಲವೆಂಬುದು ಈ ಮಾತಿನಿಂದ ತಿಳಿಯುತ್ತದೆ. ಇದು ವಿಷಾದನೀಯವೂ ಹೌದು. ಮತ್ತೆ ಉತ್ತರ ಕರ್ನಾಕಟದಲ್ಲಿದ್ದುದರಿಂದ ಈ ಉದಾಸೀನವೇನೋ ಎಂದು ನನಗೆ ಅನಿಸುತ್ತಿದೆ.
ಇಷ್ಟು ಈ ಕೃತಿಯ ಮೊದಲ ಭಾಗದಲ್ಲಿ ನಾವು ಕಾಣುತ್ತೇವೆ. ತಾರಾನಾಥರ ಹುಟ್ಟಿನಿಂದಾದಿಯಾಗಿ ಅವರ ಎಲ್ಲ ಸಾಧನೆಗಳು, ಅವರು ಒಡನಾಡಿಗಳೊಂದಿಗಿನ ಆತ್ಮೀಯತೆ, ಅವರ ಅಧ್ಯಯನ, ವೃತ್ತಿ, ಪ್ರವೃತ್ತಿ, ಸಂಸಾರ, ಮಕ್ಕಳು, ಅವರು ರಚಿಸಿದ ಕೃತಿಗಳು ಮುಂತಾದ ಅನೇಕ ವಿಚಾರಗಳು ಓದುಗನನ್ನು ಮಂತ್ರಮುಗ್ಧನನ್ನಾಗಿಸುತ್ತವೆ.
ಭಾಗ ೨ ರಲ್ಲಿ ಕೃತಿಕಾರರು,
ಪಂ ತಾರಾನಾಥರ ಮ್ಯೂಸಿಯಂ ಗೆ ಭೇಟಿ ಕೊಟ್ಟು ಸಂಗ್ರಹಿಸಿದ ಪತ್ರದ ಮಾಹಿತಿಗಳನ್ನು ಚಿತ್ರ ಸಮೇತವಾಗಿ ಓದುಗರಿಗೆ ನಿಡಿದ್ದಾರೆ. ಪ್ರತಿಯೊಂದು ಪತ್ರಗಳೂ ತಾರಾನಾಥರ ವ್ಯಕ್ತಿತ್ವ, ಅವರ ಅಪಾರ ಜ್ಞಾನವನ್ನು ಸಾರುವಂತಹವುಗಳಾಗಿವೆ. ಮತ್ತು ಅನೇಕರನ್ನು ಭೇಟಿಗೈದು, ತಾರಾನಾಥರ “ಪ್ರೇಮ ಮಾಸಿಕ” ಪತ್ರಿಕೆಯ ಕುರಿತಾಗಿ, ಅವರ ಹಿಂದಿ ಭಾಷಣದ ಕುರಿತಾಗಿ ಲೇಖಕಿಯವರು ಸಂಶೋಧನೆಯಂತೆ ಮಾಹಿತಿ ಸಂಗ್ರಹಿಸಿ ಭಾವಚಿತ್ರದ ಸಮ್ಮೇತವಾಗಿ ದಾಖಲಿಸಿದ್ದಾರೆ.
ಹಾಗೆ ತಾರಾನಾಥರ ಪ್ರಭಾವ ಅವರ ಶಿಷ್ಯರ ಮೇಲೆ ಎಷ್ಟಿತ್ತೆಂಬುದಕ್ಕೆ ಸಾಕ್ಷಿ ತಾರಾನಾಥರ ಶಿಷ್ಯ ‘ಅನ್ನಯ್ಯ’. ಅವರು ತಾವು ಬರೆದ ಇಂಗ್ಲಿಷ್ ನಾಟಕ “ಬ್ರೈಡ್ ಆಫ್ ಗಾಡ್” ಕೃತಿಯನ್ನು ತಾರಾನಾಥರಿಗೆ ಅರ್ಪಿಸುತ್ತಾರೆ. ಮುಂದುವರೆದು ‘ಅನ್ನಯ್ಯ’ ಅವರು “Master I am come. Accept me, for now I feel. I can offer myself as worthy of your Acceptance” ಎಂದು ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಾರೆ.
ಹಾಗೆ “ಪ್ರೇಮಾಯತನ” ಪ್ರೀತಿಯ ವಾಸಸ್ಥಾನವಾಗಿ ಅನೇಕ ರೋಗಿಗಳನ್ನು ಗುಣಪಡಿಸುವುದರ ಜೊತೆಗೆ ವಿದ್ಯೆಯ ಸೇವಾ ಕಾರ್ಯವನ್ನೂ ಮುಂದುವರೆಸಿರುವುದು ನಿಜಕ್ಕೂ ತಾರಾನಾಥರು ಇನ್ನೂ ಅಲ್ಲಿ ಇದ್ದು ಆಶ್ರಮಕ್ಕೆ ಜೀವಂತಿಕೆ ತುಂಬಿದ್ದಾರೆನಿಸುತ್ತದೆ.
೧೯೭೭ರಲ್ಲಿಯೇ ತಾರಾನಾಥರ ಪ್ರಭಾವ, ಅಂಚೆ ಇಲಾಖೆಯವರು, ತಾರಾನಾಥರ ಭಾವಚಿತ್ರದ ಅಂಚೆ ಹೊರತರುವಷ್ಟು ಇತ್ತು ಎಂಬುದು ನಾವು ಹೆಮ್ಮೆ ಪಡುವ ವಿಷಯ.
ಭಾಗ ೩ ರಲ್ಲಿ
ಪಂಡಿತ ತಾರಾನಾಥರ ಸಂಬಂಧಿಕರಾದ ಮತ್ತು ವಿಶೇಷ ವ್ಯಕ್ತಿತ್ವ ಉಳ್ಳ, ಹೈದರಾಬಾದಿನ ಶ್ಯಾಮಲಾ ಅಜ್ಜಿ, ತಾರಾನಾಥರ ಸಹೋದರಿ “ಭಾಮಾಯಿ”ಯ ಮಗಳು “ಲಲಿತಾರಾವ್”, ತಾರಾನಾಥರ ಮಗ ವಿಶ್ವವಿಖ್ಯಾತ ಸರೋದ ಮಾಂತ್ರಿಕ “ಪಂ ರಾಜೀವ್ ತಾರಾನಾಥ”ರನ್ನು, ಸಣ್ಣ ವೀರಣ್ಣ ಮಾಸ್ತರರ ಏಕೈಕ ಸುಪುತ್ರ, ಬಿ,ಆರ್,ಬಿ ಕಾಲೇಜಿನಲ್ಲಿ ಕ್ಲರ್ಕ್ ಹುದ್ದೆಯಿಂದ ನಿವೃತ್ತರಾಗಿ, ಈಗಲೂ ಡಾ ರಣಬೀರ್ ತಾರಾನಾಥರ ಮಕ್ಕಳ ಒಡನಾಡಿಗಳಾಗಿ, ಕುಟುಂಬದ ಒಬ್ಬ ಸದಸ್ಯರಾಗಿ ಇರುವ ‘ಶ್ರೀ ರಾಮುಲು’ಅವರೊಂದಿಗಿನ ಭೇಟಿ ಮತ್ತು ಸಂಗ್ರಹಿಸಿದ ವಿಷಯಗಳನ್ನು ಕೃತಿಕಾರರು ಯಥಾವತ್ತಾಗಿ ಚಿತ್ರೀಕರಿಸಿದ್ದಾರೆ.
ಮುಂದುವರೆದು ಪ್ರಸ್ತುತ ಹೆಸರಾಂತ ವಕೀಲರಾದ ‘ಡಾ ರಣಬೀರ್ ತಾರಾನಾಥರ’ ಚೊಚ್ಚಲ ಸುಪುತ್ರ ‘ಡಾ ಅನೀಶ ತಾರಾನಾಥ'(ಲಂಡನ್)ರನ್ನು ಮತ್ತು ದ್ವಿತೀಯ ಸುಪುತ್ರರಾದ ‘ಶ್ರೀ ಅವನೀಶ್ ತಾರಾನಾಥ’ರನ್ನು ಸಂದರ್ಶಿಸುತ್ತಾರೆ. Together ಶಬ್ದವನ್ನು ಕಂಠಪಾಠ ಮಾಡುವ ಸಂದರ್ಭದಲ್ಲಿ ತಂದೆ ಯವರು To get her ಎಂದು ಸರಳೀಕರಿಸಿ ಹೇಳಿದ ಪರಿಯನ್ನು ಅವನೀಶ್ ತಾರಾನಾಥರು ನೆನಪಿಸಿಕೊಂಡದ್ದನ್ನು ದಾಖಲಿಸಿದ್ದಾರೆ.
‘ಡಾ ಅನೀಶ್’ ಅವರಿಂದಂತೂ ಬಹಳ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ.
ನಂತರ ‘ಶ್ರೀ ರಣಬೀರ್ ತಾರಾನಾಥ’ನವರು ತಮ್ಮ ಸರಕಾರಿ ಹುದ್ದೆಗೆ ರಾಜನಾಮೆ ನೀಡಿ “ಪ್ರೇಮಾಯತನಕ್ಕೆ” ಬಂದ ಹಿನ್ನೆಲೆ, ಅಲ್ಲಿ ಅವರಿಂದ ರೋಗಿಗಳಿಗೆ ಸಿಕ್ಕ ಶುಶ್ರೂಷೆಯನ್ನು, ‘ಶ್ರೀ ಕಂಪ್ಲಿ ರಾಜಪ್ಪ’ನವರನ್ನು ಸಂದರ್ಶಿಸಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಸುಮತೀಬಾಯಿ’ಯವರ ತಮ್ಮ ‘ಡಾ G ಭಾಸ್ಕರ’ ಅವರೂ ತಾರಾನಾಥರ ಶಿಷ್ಯರಾಗಿ ಆಯುರ್ವೇದ ಕಲಿತುದದರ ಬಗೆಯನ್ನು ‘ಶ್ರೀ ಬಿ ಪ್ರತಾಪ್’ ಅವರಿಂದ ಮತ್ತು ಹಮ್ ದರ್ದ್ ಶಾಲೆಯಲ್ಲಿ ಓದಿದ ‘ಶ್ರೀ ಗುಂಡಪ್ಪ’ನವರ ಅನುಭವ ಓದುಗರಿಗೆ ಖುಷಿ ಕೊಡುತ್ತದೆ.
“All But Love Is Gall” ಎಂಬ ವಾಕ್ಯದ ಅರ್ಥವನ್ನು ಹಮದರ್ದ್ ಶಾಲೆಗೆ ಬಂದ ಕ್ರಿಶ್ಚಿಯನ್ ಮಹಿಳಾ ಮಿನಿಸ್ಟರ್ ಗೆ, ‘ಸಣ್ಣ ವೀರಣ್ಣ ಮಾಸ್ತರ’ರು ಇಂಗ್ಲೀಷಿನಲ್ಲಿ ವಿವರಿಸಿದ್ದನ್ನು ಗುಂಡಪ್ಪನವರು ನೆನಪಿನಿಂದ ತಿಳಿಸಿದ್ದಾರೆ.
‘ಡಾ ಎಸ್.ಆರ್.ಜಾನ್’ ಅವರ ಮಗಳನ್ನು ಸಂಧಿಸಿದ್ದು, ಲೇಖಕಿಯವರು ಹೇಳಿದಂತೆ ಕೌತಕವೇ ಆಗಿದೆ. ಜಾತ್ಯಾತೀತತೆಯನ್ನು ಪಾಲಿಸುತ್ತಿದ್ದ ತಾರಾನಾಥರ ಅಪ್ಪಟ ಶಿಷ್ಯರಾಗಿ ಅದನ್ನು ಪಾಲಿಸುತ್ತ ತಮ್ಮ ಮಗಳಿಗೆ ‘ಪ್ರೇಮಾ’ ಎಂದು ಹೆಸರಿಟ್ಟು ಶ್ರೇಷ್ಠರಾಗುತ್ತಾರೆ. ಇವರ ತಮ್ಮನೂ ತನ್ನ ಮಗನಿಗೆ ‘ತಾರಾನಾಥ’ ಎಂದು ನಾಮಕರಣ ಮಾಡಿ ತಾರಾನಾಥರ ಮೇಲಿನ ಗೌರವ, ವಿಶ್ವಾಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದಾರೆ ಎಂಬುದನ್ನು ಕೃತಿಕಾರರು ಹದವಾಗಿ ಎದೆಗಿಳಿಯುವಂತೆ ಬರೆದಿದ್ದಾರೆ.
ಕೊನೆಯದಾಗಿ ಹಿರಿಯರಾದ ‘ಶ್ರೀ ವಿ ಎಸ್ ಕಾಂತನವರ’ನ್ನು ಸಂಧಿಸಿ ಅವರು ತಾರಾನಾಥರ ಬಗೆಗೆ ಬರೆದ ಪುಸ್ತಕದ ಹಿನ್ನೆಲೆಯ ಪ್ರಸಂಗವನ್ನು ಅವರಿಂದ ತಿಳಿದು ದಾಖಲಿಸಿದ್ದಾರೆ. ಇಳಿ ವಯಸ್ಸಿನಲ್ಲೂ ವಿ ಎಸ್ ಕಾಂತನವರು, ಎಲ್ಲವನ್ನೂ ನೆನಪಿಟ್ಟುಕೊಂಡು ವಿಷಯ ವಿನಿಮಯ ಮಾಡಿಕೊಂಡದ್ದನ್ನು ನೋಡಿದರೆ ತಾರಾನಾಥರ ಪ್ರಭಾವಳಿ ಇನ್ನೂ ಅವರೆದೆಯಲ್ಲಿ ಹರಡಿಕೊಂಡಿದೆ ಎನಿಸುತ್ತದೆ.
ಭಾಗ 4 ರಲ್ಲಿ
ತಾರಾನಾಥರ ವಿದೇಶಿ ಒಡನಾಡಿಗಳಾದಿಯಾಗಿ, ಗುರುಗಳು ಮತ್ತು ತಾರಾನಾಥರ ಅನುಯಾಯಿಗಳನ್ನು ಪರಿಚಯಿಸಿದ್ದಾರೆ. ಕೇವಲ ಪರಿಚಯ ಎಂದರೆ ತಪ್ಪಾದೀತು. ತಾರಾನಾಥರ ಪ್ರಭಾವದಿಂದ ಅವರು ಮಾಡಿದ ಸಾಧನೆಗಳನ್ನು, ಕೈಂಕರ್ಯಗಳು, ಸೇವೆಗಳನ್ನು ದಾಖಲೆ ಸಮೇತ ಅಚ್ಚಾಗಿಸಿದ್ದಾರೆ. ಈ ನಿಟ್ಟಿನಲ್ಲಿ ಕೃತಿಕಾರ್ಯರ ಶ್ರಮ ಬಹುವಾಗಿ ಓದುಗನಿಗೆ ಕಾಡುತ್ತದೆ. ಅದರಲ್ಲೂ 1935 ರ ASIA ಮ್ಯಾಗಝಿನ್ ಅನ್ನು ಅಮೇರಿಕದಿಂದ ತರಿಸಿಕೊಂಡ ಪರಿ ಅಮೋಘವಾಗಿದೆ. 10 ತಿಂಗಳು, ಈ ಒಂದು ಪ್ರತಿಗಾಗಿ ತಡಕಾಡಿದ್ದರ, ಹವಣಿಸಿದ್ದರ, ಮತ್ತೊಬ್ಬರನ್ನು ಅಂಗಲಾಚಿದ್ದರ ಸಾರ್ಥಕವಾಗಿ ಈ ಕೃತಿ; ಇಂದು ತಾರಾನಾಥರ ಕುರಿತಾದ ಅತ್ಯುತ್ತಮವಾದ ಕೃತಿಯಾಗಿ ನಮ್ಮ ಮುಂದೆ ನಿಂತಿದೆ.
ಇಲ್ಲಿ ‘ಅ.ನ ಕೃಷ್ಣರಾಯರ’ ಭಾವನವರೂ, ಇಂಗ್ಲೀಷ್ ಭಾಷೆಯ ಕಾದಂಬರಿಕಾರರೂ ಮತ್ತು ಸಣ್ಣಕತೆಗಳ ಲೋಕದಲ್ಲಿ ಹೆಸರು ಮಾಡಿದವರೂ ಆದ ‘ರಾಜಾರಾವ್ ಮತ್ತು ಕ್ಯಾಮಿಲ್ಲೆ’ ದಂಪತಿಗಳು ತಾರಾನಾಥರ ಪ್ರೇಮಾಯತನಕ್ಕೆ ಆಧ್ಯಾತ್ಮದ ಸವಿ ತಿಳಿಯಲು, ಸವಿಯಲು ಬಂದಿದ್ದು ನಂತರ ಅವರು ಬರೆದ ಪತ್ರದ ದಾಖಲೆ ಇದೆ. ಅವರು ಬರೆದ ಪತ್ರ ಓದಿದರೆ ಮನ ತುಂಬಿ ಬಂದು ತಾರಾನಾಥರ ಕುರಿತಾಗಿ ಭಾವಪರವಶರಾಗುತ್ತೇವೆ.
ಮುಂದುವರೆದಂತೆ ತಾರಾನಾಥರಿಗೆ ಯೋಗ ದೀಕ್ಷೆ ನೀಡಿದ ‘ಉತ್ತಮದಾಸ ಪರಮಹಂಸರ’ ಮತ್ತು ಇವರ ಶಿಷ್ಯರಾದ ‘ಯೋಗೇಶ್ವರಾನಂದರ’ ಪರಿಚಯವಿದೆ.
ಯೋಗದ ಕುರಿತಾಗಿ ತಾರಾನಾಥರು ಬರೆದ “Yoga and Art” ಲೇಖನ ಇಂದಿಗೂ ರಾಯಚೂರಿನ ಪಂಡಿತ ತಾರಾನಾಥರ ಮ್ಯೂಸಿಯಂನಲ್ಲಿದೆ ಎಂದು ಲೇಖಕಿಯವರು ತಿಳಿಸಿದ್ದಾರೆ.
ನಂತರ ತಾರಾನಾಥರ ಒಡನಾಡಿಗಳು ಅನುಯಾಯಿಗಳನೇಕರ ಕುರಿತಾಗಿ ಲೇಖಕಿಯವರು ದಾಖಲಿಸಿದ್ದಾರೆ. ‘ಅನಂತ ದಾಮೋದರ ಹಲಸೀಕರು’, ‘ಆರ್ ಕೆ ವಾಳ್ವೇಕರ’ರು, ‘ಭಾರದ್ವಾಜರು’, ‘ಶ್ರೀರಂಗರು’, ಕನ್ನಡಿಗರ ಅಡಿಯಾಳು ‘ದೇ.ಹ’ ಅವರು ಮುಂತಾದವರು ಹೇಗೆ ತಾರಾನಾಥರ ಪ್ರಭಾವಕ್ಕೆ ಒಳಗಾಗಿ, ಒಡನಾಡಿಗಳಾದರು, ಅನುಯಾಯಿಗಳಾದರು ಎಂಬ ಮಾಹಿತಿಗಳನ್ನು ಲೇಖಕಿಯವರು ಹಂಚಿಕೊಂಡಿದ್ದಾರೆ.
ಇದರಲ್ಲಿ ಮುಖ್ಯವಾಗಿ ನನ್ನ ಗಮನ ಸೆಳೆದದ್ದು
ರಾಯಚೂರು ಭಾಗದ ಮೊದಲ ಕಥಾ ಸಂಕಲನ “ಕತೆಗೊಂಚಲ” ಬರೆದವರು – ದೇ.ಹ, ಅಂದರೆ ‘ಹನುಮಂತರಾವ್ ದೇಸಾಯಿ’ಯವರು ಇದಕ್ಕೆ ಮುನ್ನುಡಿ ಬರೆದವರು ತಾರಾನಾಥರು, “ಕನ್ನಡಕ್ಕೆ ತಕ್ಕ ಪ್ರೋತ್ಸಾಹವು ಅಲ್ಲಿಯ ಕನ್ನಡಿಗರಿಂದಲೇ ಸಿಗುವುದು ಅಪರೂಪ” ಅಂತದ್ದರಲ್ಲಿ; ಒಂದು ಕನ್ನಡ ಕೃತಿಯನ್ನು ಹೊರತರುವುದು ಸುಲಭದ ಮಾತಲ್ಲ, ಸಂತೋಷದ ವಿಷಯ ಎಂದು ಮುಂದುವರೆದು, “ಈ ಕಥಾ ಸಂಕಲನದಲ್ಲಿ ಕಥಾರಚನೆಯ, ಭಾಷೆಯ ಮತ್ತು ಅಚ್ಚಿನ ಕುಂದುಕೊರತೆಗಳಿವೆ, ಆದರೆ ವಾಚಕರು ಮಾತ್ರ, ಪುಸ್ತಕವು ಅಲ್ಲಿ ‘ಈಗೆಚ್ಚರವಾದ ಹುರುಪಿನ ಹಸುಗೂಸು’ ಎಂಬುದನ್ನು ಮರೆಯಬಾರದು. ಇಂಥ ಬರಹವು ಇದೇ ಮೊದಲಾದವು, ಬರೆದವರದು ಇದೇ ಮೊದಲ ಸಾಹಸ, ಮುದ್ರಣದಲ್ಲಿ ಇದೇ ದೊಡ್ಡ ಮುದ್ರಣ. ಆದ್ದರಿಂದ, ಪ್ರೇಮದಿಂದ ಆದರ ತೋರಿಸಬೇಕು” ಎಂಬುದಾಗಿ ತಾರಾನಾಥರು ಮುನ್ನುಡಿಯಲ್ಲಿ ಲೇಖಕರ ಪರವಾಗಿ ಬೆಂಬಲ ನೀಡುತ್ತಾರೆ. ಈ ಕೃತಿ ರಾಯಚೂರಿನ ವಿದ್ಯಾರ್ಥಿ ಸಂಘದ ನೆರವಿನಿಂದ ಲೋಕಾರ್ಪಣೆಯಾಗುತ್ತದೆ. ಈ ವಿದ್ಯಾರ್ಥಿ ಸಂಘವೇ ಈಗ ರಾಯಚೂರಿನ “ಕರ್ನಾಟಕ ಸಂಘ” ಎಂಬುದು ಮತ್ತೊಂದು ವಿಶೇಷ.
ಈ ದಿಗ್ಗಜ ಒಡನಾಡಿಗಳಲ್ಲಿ ‘ಟಿ.ಪಿ ಕೈಲಾಸಂ’ ಅವರು ಕೂಡ ಒಬ್ಬರು. ತಮಗಿಂತ 5 ವರ್ಷ ಕಿರಿಯರಾದ ತಾರಾನಾಥರನ್ನು ಗುರು ಭಾವದಿಂದ “ಮಾಸ್ಟರ್” ಎಂದೇ ಸಂಬೋಧಿಸುತ್ತಿದ್ದರಂತೆ. ಕೈಲಾಸಂ ಅವರ “ಟೊಳ್ಳು-ಗಟ್ಟಿ” ನಾಟಕಕ್ಕೆ ಮುನ್ನುಡಿ ಬರೆದು ತಮ್ಮ “ಪ್ರೇಮ” ಪತ್ರಿಕೆಯಲ್ಲಿ ತಾರಾನಾಥರು ಪ್ರಕಟಿಸಿದ್ದರಂತೆ. “To kailasam, the master of modern kannada drama” ಎಂದು ಬರೆದು ಸೋದರ ಸಾಹಿತಿಗಳ ಟೀಕೆಗೆ ಗುರಿಯಾಗಿದ್ದರಂತೆ. ಕೈಲಾಸಂ ಅವರು ಸುಸ್ತಾದಾಗಲೆಲ್ಲ “ಪ್ರೇಮಾಯತನ”ಕ್ಕೆ ಬರುತ್ತಿದ್ದರು, ಅವರು ಹೊರಟು ನಿಂತಾಗ, ತಾರಾನಾಥರು ಮರಳಿ “ಪ್ರೇಮಾಯತನಕ್ಕೆ” ಬರುವುದು ಯಾವಾಗ ಎಂದು ಕೇಳಿದರೆ; ಕೈಲಾಸಂ ಅವರು “ಪ್ರೇಮಯಾತನ”ವಾದಾಗ ಎಂದರಂತೆ.
ಹೀಗೆ ಕಡಪಾ ರಾಘವೇಂದ್ರರಾಯರು, ಡಾ.ಎಸ್.ರಾಮಕೃಷ್ಣ, One Man Army ರಾ ಗು ಜೋಶಿ, ಪಂ.ಸೂಗುರುವೀರ ಶರ್ಮ, ಪ್ರೋ.ಮೂಲಿಮನಿ ಧೃವನಾರಾಯಣ ಇವರೆಲ್ಲರು ಮತ್ತು ತಾರಾನಾಥರು, ಇವರ ಮಧ್ಯದ ಒಡನಾಟ, ವೈದ್ಯಕೀಯ, ಸಾಹಿತ್ಯಿಕ ಸಂಬಂಧಗಳ ಕುರಿತಾಗಿ ಅನೇಕ ವಿಷಯಗಳು ಈ 4 ನೇ ಭಾಗದಲ್ಲಿ ಓದುಗನನ್ನು ಸೆರೆ ಹಿಡಿಯುತ್ತವೆ.
ಧೃವನಾರಾಯಣರಂತೂ ತಾರಾನಾಥರ ಅನೇಕ ಪ್ರಭಾವಯುತ ಅಂಶಗಳನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದವರು. ಅವರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದೇ ಹೋದಾಗಿನ ಸ್ಥಿತಿಯನ್ನು ಲೇಖಕಿಯವರು ಅತ್ಯಂತ ಖೇದದಿಂದ ಕಂಬನಿಗಳನ್ನೇ ಅಕ್ಷರಗಳಾಗಿಸಿ ಬರೆದಿದ್ದಾರೆ.
ಭಾಗ 5 ರಲ್ಲಿ
ಹಮ್ದರ್ದ್ ಶಾಲೆ ಹುಟ್ಟಿನಿಂದ ಬೆಳೆದು ಬಂದ ಬಗೆ, ಅದರ ಇತಿಹಾಸ, ತಾರಾನಾಥ ಶಿಕ್ಷಣ ಸಂಸ್ಥೆಯ ನಾಮಕರಣ, ತಾರಾನಾಥರ ಕಾಲದಲ್ಲಿ ಕನ್ನಡ, ಆಗಿನ ಶಾಲೆಗಳ ಪರಿಚಯ, ತಾರಾನಾಥರ “ಪ್ರೇಮ” ಪತ್ರಿಕೆ ಮತ್ತು ಆಗಿನ ಸಮಕಾಲೀನ ಪತ್ರಿಕೆಗಳು, ತಾರಾನಾಥರ ಶಿಷ್ಯರಿಂದ ಹುಟ್ಟಿಕೊಂಡ ಕರ್ನಾಟಕ ಸಂಘ, ತಾರಾನಥರು ದೇಶವನ್ನು ಎಷ್ಟು ಪ್ರೇಮಿಸುತ್ತಿದ್ದರು ಎಂಬುದನ್ನು ದಾಖಲಿಸಿದ್ದಾರೆ. ಮತ್ತು
ಗಾಂಧೀಜಿಯವರಿಗೆ ಆತ್ಮ ಚಿಕಿತ್ಸೆ ಮಾಡಿ ಅವರನ್ನು ಗುಣಪಡಿಸಿ ಅವರಿಂದ ಹೊಗಳಿಸಿಕೊಂಡ ಕೀರ್ತಿ ತಾರಾನಾಥರದು. ಮುಂದೆ ತಾರಾನಾಥರು ಬರೆದ “ದೀನ ಬಂಧು ಕಬೀರ” ನಾಟಕದ ವೀಕ್ಷಣೆಗೆ, ಗಾಂಧೀಜಿಯವರನ್ನು ಆಹ್ವಾನಿಸಲಾಗಿ, ಬಾಪೂಜಿಯವರು ನಿರಾಕರಿಸುತ್ತಾರೆ. ಆದರೆ, ಅಷ್ಟಕ್ಕೆ ಬಿಡದ ಪಂಡಿತ ತಾರಾನಾಥರು, ಇದು ಹಿಂದಿ ಭಾಷೆಯಲ್ಲಿದೆ ಮತ್ತು ನಾಟಕದಿಂದ ಸಂಗ್ರಹವಾದ ಹಣವನ್ನು ‘ಖಾದಿ ನಿಧಿಗೆ’ ಕೊಡುವುದಾಗಿ ಹೇಳಿ, ತಮ್ಮ ಖಾದಿ ಪ್ರೇಮ ಸಾರಿ, ಬಾಪೂಜಿಯವರ ಮನಸೂರೆಗೊಳ್ಳುತ್ತಾರೆ. ನಂತರ ಕೇವಲ ಅರ್ಧಗಂಟೆ ನೋಡುವ ಶರತ್ತು ಹಾಕಿ ನಾಟಕ ನೋಡಲು ಕುಳಿತ ಬಾಪು, ನಾಟಕ ವೀಕ್ಷಣೆಯಲ್ಲಿ ತನ್ಮಯರಾಗಿಬಿಡುತ್ತಾರೆ. ತಮ್ಮ ಪ್ರಾರ್ಥನಾ ಸಮಯವನ್ನೂ ಲೆಕ್ಕಿಸದೆ, “ಮಸಾಭಕ್ತಾಗ್ರೇಸರ ಕಬೀರ”ನ ಸಿದ್ಧಾಂತ ಸಾರುವ ನಾಟಕವೂ ಪ್ರಾರ್ಥನೆಗೆ ಸಮ ಎನ್ನುತ್ತಾರಂತೆ. ಇದು ತಾರಾನಾಥರ ವೈಖರಿ. ಸಾಹಿತ್ಯ ಮತ್ತು ಅಭಿನಯ ಎರಡರಲ್ಲೂ ಮೇಧಾವಿಯಾದ ತಾರಾನಾಥರು ಒಂದು ಪರಿಪೂರ್ಣ ಜೀವ ಎಂಬುದರಲ್ಲಿ ಮಾತಿಲ್ಲ. ಮತ್ತು ಈ ನಾಟಕಕ್ಕೆ ಸ್ಫೂರ್ತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಎಂಬುದು ಗಮನಾರ್ಹವಾದುದು.
ಕೊನೆಯದಾಗಿ ಲೇಖಕಿ, ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರು
“ನಾನು, ಹಮ್ ದರ್ದ್ ಮತ್ತು ನಾಲ್ಕು ದಶಕಗಳು”
ಶೀರ್ಷಿಕೆಯಡಿ ಹಮ್ ದರ್ದ್ ಶಾಲೆಯಲ್ಲಿ ತಾವು ಕಳೆದ ನಾಲ್ಕು ದಶಕಗಳು, ಮೇಲೊಂದು ವರ್ಷದ ಪಯಣವನ್ನು ಬರೆದಿದ್ದಾರೆ. ಈ ಲೇಖನ ಈಗಾಗಲೇ ೨೦೨೦ ಹಮ್ ದರ್ದ್ ಶಾಲೆಯ ಶತಮಾನೋತ್ಸವದ ಸ್ಮರಣ ಸಂಚಿಕೆಯಲ್ಲಿ ಪ್ರಕಟಗೊಂಡಿದೆ ಎಂದು ಲೇಖಕಿಯವರು ತಿಳಿಸಿದ್ದಾರೆ.
ಈ ಲೇಖನ ಓದಿದಂತೆಲ್ಲ ಅವರು ನಡೆದು ಬಂದ ದಾರಿ, ಮದುವೆಯ ನಂತರವೂ ಪದವಿಯವರೆಗೆ, ವೃತ್ತಿಪರ ತರಬೇತಿ ಪಡೆಯುವವರೆಗೆ ಶ್ರಮವಹಿಸಿ ಓದಿದ್ದು ಕಣ್ಣ ಮುಂದೆ ಬರುತ್ತದೆ. ಕೆ.ಜಿ ತರಗತಿಗೆ ತಮ್ಮ ಶಿಕ್ಷಕ ವೃತ್ತಿ ಪ್ರಾರಂಭಿಸಿದವರು ಉಪನ್ಯಾಸಕರಾಗಿ ನಿವೃತ್ತಿಯಾಗುತ್ತಾರೆಂದರೆ ಇದು ಅಸಾಮಾನ್ಯವಾದುದು. ಮನೆ, ಮಕ್ಕಳು, ವೃತ್ತಿ ಮತ್ತು ಶಿಕ್ಷಣ ಎಲ್ಲವನ್ನೂ ನಿಭಾಯಿಸುವ ಶಕ್ತಿ ಮಹಿಳೆಗೆ ಮಾತ್ರ ಸಾಧ್ಯ ಎಂಬುದಕ್ಕೆ ಲಕ್ಷ್ಮೀದೇವಿ ಶಾಸ್ತ್ರಿ ಯಾವರು ನಮ್ಮೆದುರಿಗೆ ಇರುವ ಜೀವಂತ ಸಾಕ್ಷಿ. ಅವರಲ್ಲಿನ ಛಲವೇ ಈ ಹೊತ್ತಿಗೆ, ಮಹಾನ್ ಗ್ರಂಥದ ರಚನೆಗೂ ಕಾರಣವಾಗಿದೆ. ಶಾಲೆ, ಕಾಲೇಜು, ವೃತ್ತಿ ಎನ್ನುವುದು ಕೇವಲ ಆರ್ಥಿಕ ಸಬಲತೆಗಾಗಿ ಅಲ್ಲ. ಅಲ್ಲಿಂದ ನಾವು ಹೊರಬಂದರೂ ಅಲ್ಲಿನ ಜನಮಾನಸದಲ್ಲಿ ನಾವು ಉಳಿಯಬೇಕು. ಅಂತೆ ನಾವು ತನು, ಮನ ಸಮರ್ಪಿಸಿ ಕಾರ್ಯಪ್ರವೃತ್ತರಾಗಬೇಕೆಂಬ ಸಂದೇಶ ಲೇಖಕಿಯವರಿಂದ ಓದುಗರಿಗೆ ಸಿಕ್ಕಿದೆ. ತುಂಬು ವಯಸ್ಸಿನ, ಯವ್ವನದ ಮನಸ್ಸಿನ ಲೇಖಕಿ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರಿಗೆ, ಮತ್ತು ತಾಯಿಗೆ ಸಂಪೂರ್ಣ ಬೆಂಬಲ ನೀಡಿ, ಅವರಷ್ಟೇ ಶ್ರಮವಹಿಸಿ, ತಾಯಿಯ ಅಣತಿಯಂತೆ ಎಲ್ಲ ಕ್ಷೇತ್ರಗಳಿಗೂ ಅವರನ್ನು ಕರೆದೊಯ್ದು, ಅನೇಕ ಮಾಹಿತಿಗಳ ಯಶಸ್ವಿ ಸಂಗ್ರಹಣೆಗೆ ಕಾರಣೀಭೂತರಾದ ಶ್ರೀ ವಿಶ್ವನಾಥ ಶಾಸ್ತ್ರಿ ಅವರಿಗೂ ಅಭಿನಂದನೆ ಮತ್ತು ಪ್ರಣಾಮಗಳನ್ನು ಸಲ್ಲಿಸುತ್ತ ನನ್ನ ಬರಹಕ್ಕೆ ಅಲ್ಪ ವಿರಾಮ ನೀಡುತ್ತೇನೆ.
(ನಿಜವಾಗಲೂ ಇಲ್ಲಿ ನಾನು ಬರೆದದ್ದು ಅಲ್ಪವೇ, ಈ ಕೃತಿ ಓದುತ್ತಾ ಹೋದಂತೆ ಬರೆಯುವ ಹುಮ್ಮಸ್ಸು ಜಾಸ್ತಿ ಆಗುತ್ತದೆ, ಇನ್ನೂ ದಾಖಲಿಸಬೇಕಾದುದು ಬಹಳವೇ ಇದೆ ಅನಿಸುತ್ತದೆ. ದೊಡ್ಡ ಬರಹವಾಗುತ್ತದೆ ಎಂದು ಮೊಟಕುಗೊಳಿಸಬೇಕೇ ಹೊರತು, ಮನಃಪೂರ್ವಕವಾಗಿ ಸಂಕ್ಷೇಪಿಸಲು ಸಾಧ್ಯವೇ ಇಲ್ಲ. ಅಷ್ಟೊಂದು ಮಹತ್ವಪೂರ್ಣ ಮಹತ್ತರ ವಿಷಯಗಳ ಸಂಕಲನ ಈ ಕೃತಿ)
– ವರದೇಂದ್ರ ಕೆ ಮಸ್ಕಿ
– 9945253030
ಆಸಾಧಾರಣ ಸಾಧನೆಗಳನ್ನು ಗೈದ ಪಂ ತಾರಾನಾಥರ ಕುರಿತಾಗಿ www.Taranath.com ವೆಬ್ ಸೈಟ್ ನ್ನು ವಿಶ್ವನಾಥ್ ಶಾಸ್ತ್ರಿ ಲಾಂಚ್ ಮಾಡಿದ್ದಾರೆ, ಆಸಕ್ತರು ವೀಕ್ಷಿಸಬಹುದು.
370 ಪುಟಗಳ, ಬಾಕ್ಸ್ ಬೈಡಿಂಗ್ ಹೊಂದಿರುವ ಈ ಪುಸ್ತಕ ಪುಟಗಳು 80 Gsm ಉತ್ತಮ ಕಾಗದ ದಲ್ಲಿ ಪ್ರಿಂಟಾಗಿವೆ.
1. ನಿಜಾಮ್ ಕಾಲದ, ಇಂಗ್ಲಿಷ್, ಹಿಂದಿ, ಕನ್ನಡ ದಲ್ಲಿ 21ಪತ್ರಗಳು ಹಾಗು ಕನ್ನಡ ಅನುವಾದ
2. 1900 ರ ದಶಕದಿಂದ ಹಿಡಿದು ಪಂ ತಾರಾನಾಥರ ಹಾಗೂ ಅಂದಿನ ರಾಜಕೀಯ ಚಟುವಟಿಕೆಗಳ ಫೋಟೋಗಳು,
3. ಮಹಾತ್ಮಾ ಗಾಂಧೀಜಿಯವರು ತಮ್ಮ ಡೈರಿಯಲ್ಲಿ ಪಂ ತಾರಾನಾಥರ ಕುರಿತು ಉಲ್ಲೇಖಸಿರುವ ಮೂಲ ಪ್ರತಿ 1927
4 ಮಹಾತ್ಮಾ ಗಾಂಧಿಜಿ ಯವರು
ತಮ್ಮ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಪಂ ತಾರಾನಾಥರ *ದಿನ ಬಂಧು ಕಬೀರ್* ನಾಟಕ ನೋಡಿದ ಮೇಲೆ ಬರೆದ ವಿಸ್ತ್ರತ ಅಭಿಪ್ರಾಯ. 1927.
ಹೀಗೆ ಹಲವಾರು……. ದಾಖಲೆಗಳು….
ಪುಸ್ತಕಗಳಿಗಾಗಿ ಆಸಕ್ತರು
ವಿಶ್ವನಾಥ್ ಶಾಸ್ತ್ರಿ
81971 95027 ಅವರನ್ನು ಸಂಪರ್ಕಿಸಬಹುದು.