ಹಳ್ಳಿಗಳ ಸ್ವಚ್ಛತೆಗೆ ಮನರೇಗಾ ನೆರವು!
ವಿವಿಧೆಡೆ ಇಂಗು ಗುಂಡಿ ನಿರ್ಮಾಣ, ಸ್ಥಳೀಯರಿಗೆ ನೆಮ್ಮದಿ ವಾಹನಗಳ ಸಂಚಾರಕ್ಕೆ ಅನುಕೂಲ
ವರದಿ- ವೀರೇಶ ಸೌದ್ರಿ ಮಸ್ಕಿ
ಮಸ್ಕಿ : ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನರೇಗಾ ಯೋಜನೆಯಡಿ ಇಂಗು ಗುಂಡಿ ನಿರ್ಮಿಸುತ್ತಿರುವುದರಿಂದ ಸ್ಥಳೀಯರಿಗೆ ಅನುಕೂಲವಾಗಿದೆ.
ಮಸ್ಕಿ ತಾಲೂಕು ಪಂಚಾಯತಿ 21 ಗ್ರಾಪಂಗಳನ್ನು ಒಳಗೊಂಡಿದೆ. ಬೇಸಿಗೆ ಹಿನ್ನೆಲೆಯಲ್ಲಿ ಸ್ಥಳೀಯ ಕೂಲಿಕಾರರ ಬೇಡಿಕೆ ಅನುಸಾರ ಇಂಗುಗುಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ವಟಗಲ್ ಗ್ರಾಪಂ ವ್ಯಾಪ್ತಿಯ ಬಸಾಪುರದಲ್ಲಿ ಇತ್ತೀಚೆಗೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅಡವಿಭಾವಿ, ಹಿರೇದಿನ್ನಿ, ಕನ್ನಾಳ ಸೇರಿ ವಿವಿಧೆಡೆ ಪ್ರಗತಿಯಲ್ಲಿವೆ. ಒಟ್ಟು 800-1000 ಇಂಗು ಗುಂಡಿ ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದೆ.
ವೆಚ್ಚದ ವಿವರ : 1.5 ಮೀಟರ್ ಉದ್ದ, 1.5 ಮೀಟರ್ ಅಗಲ, 1.5 ಅಥವಾ 1.7 ಮೀಟರ್ ಆಳದೊಂದಿಗೆ 3 ರಿಂದ 4 ಸಿಮೆಂಟ್ ರಿಂಗ್ ಅಳವಡಿಸಲಾಗುತ್ತಿದೆ. ಮೊದಲು ಮತ್ತು ಎರಡನೇ ರಿಂಗ್ ಅಳವಡಿಸಿದ ನಂತರ 40 ಎಂಎಂ ಕಂಕರ್ ಹಾಕಿ, ಸುತ್ತ ಮರಳು ಸುರಿದು, ನೀರು ಇಂಗುವ ಹಾಗೆ ಪ್ಯಾಕ್ ಮಾಡಿ, ಮೇಲೆ ಟ್ಯಾಪ್ ಅಳವಡಿಸಲಾಗುತ್ತಿದೆ. ಪ್ರತಿ ಇಂಗು ಗುಂಡಿಗೆ 8 ಸಾವಿರ ರೂ. ಸಾಮಗ್ರಿ ವೆಚ್ಚ, 6 ಸಾವಿರ ರೂ. ಕೂಲಿ ವೆಚ್ಚದೊಂದಿಗೆ ಒಟ್ಟು 14 ಸಾವಿರ ರೂ. ವ್ಯಯಿಸಲಾಗುತ್ತಿದೆ. ನರೇಗಾ ಜಾಬ್ ಕಾರ್ಡ್ ಇರುವವರಿಗೆ ಆದ್ಯತೆ ನೀಡಲಾಗುತ್ತಿದೆ. 4-5 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಇಷ್ಟು ದಿನ ಬಟ್ಟೆ, ಮುಸುರೆ, ಬಚ್ಚಲು ನೀರು ನೇರವಾಗಿ ರಸ್ತೆಗೆ ಹರಿಯುತ್ತಿತ್ತು. ಇದರಿಂದ ರಸ್ತೆ ಹಾಳಾಗಿ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದವು. ವಾಹನ, ಪಾದಚಾರಿಗಳ ಸಂಚಾರಕ್ಕೆ ಕಿರಿಕಿರಿಯಾಗಿತ್ತು. ಕೊಳಚೆ ನೀರಿನೊಂದಿಗೆ ಮಳೆ ನೀರು ಸೇರಿ ದುರ್ನಾತ ಹರಡುತ್ತಿತ್ತು. ಮನೆ ಮುಂದೆ ಸದಾ ಗಲೀಜು ಕಾಣುತ್ತಿತ್ತು. ನರೇಗಾದಡಿ ಇಂಗು ಗುಂಡಿ ನಿರ್ಮಿಸಿದ್ದರಿಂದ ಬಚ್ಚಲು ನೀರಿನ ಸಮಸ್ಯೆ ಬಗೆಹರಿದಿದೆ ಎಂದು ಸಂತೆಕಲ್ಲೂರು ಗ್ರಾಪಂ ವ್ಯಾಪ್ತಿಯ ಬೇಡರ ಕಾರ್ಲಕುಂಟಿಯ ದುರ್ಗಮ್ಮ, ವಟಗಲ್ ಗ್ರಾಪಂಯ ಬಸಾಪುರದ ಬಸ್ಸಮ್ಮ, ಅಡವಿಭಾವಿ ಗ್ರಾಪಂಯ ತೀರ್ಥಬಾವಿ ಗ್ರಾಮದ ಯಂಕಮ್ಮ ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ನರೇಗಾದಡಿ ನಿರ್ದಿಷ್ಟ ಅಳತೆ ಅನುಸಾರ ಇಂಗು ಗುಂಡಿ ನಿರ್ಮಿಸಲಾಗುತ್ತಿದೆ. ಇದರಿಂದ ಕೊಳಚೆ ನೀರು ರಸ್ತೆಗೆ ಹರಿಯುವುದು ತಪ್ಪಿದೆ. ವಾಹನಗಳು, ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗಿದೆ. ಸೊಳ್ಳೆಗಳ ಹಾವಳಿಯಿಂದ ಹರಡುವ ಡೆಂಘೆ, ಮಲೇರಿಯಾಕ್ಕೆ ಕಡಿವಾಣ ಹಾಕಲು ಸ್ಥಳೀಯ ಆಡಳಿತಕ್ಕೆ ನೆರವಾಗಲಿದೆ. ಗ್ರಾಮೀಣರು ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.
-ಬಾಬು ರಾಥೋಡ್
ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್ ಮಸ್ಕಿ
——————-
ಮನೆ ಮುಂದೆ ಬಚ್ಚಲು ನೀರು ಹರಿಯುತ್ತಿದ್ದರಿಂದ ತಿರುಗಾಡಲು ತೊಂದರೆಯಾಗುತ್ತಿತ್ತು. ನರೇಗಾದ ಮೂಲಕ ಇಂಗು ಗುಂಡಿ ನಿರ್ಮಿಸಿದ್ದರಿಂದ ಕೊಳಚೆ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ.
| ಬಸ್ಸಮ್ಮ, ಬಸಾಪುರದ ಫಲಾನುಭವಿ