ಅಕ್ಕಮಹಾದೇವಿ ವಚನಗಳಲ್ಲಿ ಪ್ರಸಾದ

ಅಕ್ಕಮಹಾದೇವಿ ವಚನಗಳಲ್ಲಿ ಪ್ರಸಾದ

ಕನ್ನಡ ಕಾವ್ಯ ಲೋಕದ ಮಹಿಳಾ ವಚನಕಾರರಲ್ಲಿ ಅಗ್ರಗಣ್ಯ ಹೆಸರೆಂದರೆ ಅಕ್ಕಮಹಾದೇವಿ. ಅದಕ್ಕೂ ಮೊದಲು ಮಹಿಳೆಯರ ಧ್ವನಿ ಇದ್ದಿಲ್ಲವೆಂದಲ್ಲ, ಅವು ಯಾವುವೂ ಅಕ್ಷರ ಸಂಸ್ಕ್ರತಿಗೆ ಸೇರ್ಪಡೆಯಾಗಿರಲಿಲ್ಲ. ಮಹಿಳಾ ಸಂಕಥಕ್ಕೆ ಕಿರೀಟಪ್ರಾಯವಾದ ಅಕ್ಕನ ವಚನಗಳು ಮೇರು ಸಾದೃಶ್ಯವುಳ್ಳಂಥವುಗಳು. ಮಹಿಳಾ ಸ್ವಾತಂತ್ರ್ಯ ಸಮಾನತೆಯ ಆಶಯಕ್ಕೆ ಅನುಗುಣವಾಗಿ ಅಭಿವ್ಯಕ್ತಿ ಸಾಧಿಸಿದ ಅಕ್ಕನ ವಚನಗಳು ಪ್ರತಿಭಟನೆಯ ಗಟ್ಟಿಧ್ವನಿ. ತಾನೊಲ್ಲದ ಬದುಕಿನಿಂದ ಸಿಡಿದು ನಡೆದ ಅವಳದು ವಿಶಿಷ್ಟವಾದ ಅನುಭಾವ ಮತ್ತು ಆದ್ಯಾತ್ಮ ಮಾರ್ಗ.

ಅಕ್ಕನ ವಚನಗಳು ಲೋಕಭಾವ, ಜೀವಭಾವ, ಶಿವಭಾವ. ಈ ಮೂರೂ ನೆಲೆಗಳಲ್ಲಿ ಅಕ್ಕನ ವಚನಗಳು ಚಿಂತನೆಗೈಯುತ್ತವೆ. ಅಕ್ಕನ ವಚನಗಳ ಅಷ್ಟಾವರಣಗಳ ಮನೋಭೂಮಿಕೆ ಪ್ರವೇಶಿಸುವ ಮೊದಲು
ಭಕ್ತಿ ಎಂದರೇನು:
ಜ್ಞಾನದ ವಿಶಾಲವಾದ ಅರಹು ಬರಬೇಕಾದರೆ ಭಕ್ತಿಯೆ ತಾಯಿ ಬೇರು. ಅತ್ಮ ಪರಮಾತ್ಮನನ್ನು ಬೆಸೆಯುವ ಸಾಧನಾವಸ್ಥೆ. ಅಂತರಂಗ ಮತ್ತು ಬಹಿರಂಗದಲ್ಲಿ ಭಕ್ತಿಯನ್ನು ಗ್ರಹಿಸುವ ಧಾರಣತೆ ಅಷ್ಟಾವರಣ ಜ್ಞಾನದ ತುರೀಯಾವಸ್ತೆ ಭಕ್ತಿಯಾಗಿದೆ.

ಮಹಾದೇವಿಯಕ್ಕನ ವಚನಗಳಲ್ಲಿ ಪ್ರಸಾದದ ವಿಸ್ತಾರತೆಯನ್ನು ಶರಣ ಧರ್ಮದ ಮೀಮಾಂಸೆಯ ಮೂಲಕ ಪ್ರವೇಶಿಸುವ ಪ್ರಯತ್ನ ಈ ಲೇಖನದ್ದು.

ಶರಣ ಸಿದ್ದಾಂತದಲ್ಲಿ ಅಷ್ಟಾವರಣಗಳು ಅಂಗವಾದರೆ, ಪಂಚಾಚಾರಗಳು ಪ್ರಾಣ, ಷಟ್ ಸ್ಥಲಗಳು ಆತ್ಮವೆಂದು ಹೇಳುವುದು ರೂಢಿಯಲ್ಲಿದೆ. ಈ ವಿಶೇಷ ಲಕ್ಷಣಗಳು ಭಕ್ತನ ಮಾನಸಿಕ ಅವಸ್ಥೆಗೆ, ಭಕ್ತಿಯ ಸೋಪಾನದ ಶಿಕ್ಷಣವನ್ನು ಕೊಡುತ್ತದೆ. ಜಗದೊಡೆಯನಾದ ಶಿವನು ಭಕ್ತಿಯ ಶಕ್ತಿಯನ್ನು ಸಂಚಯಿಸಲು ಜೀವನಿಗೆ ನಿಯೋಜಿಸಿದ್ದಾನೆ. ಈ ಜೀವಾತ್ಮನಿಗೆ ಕಾಯದಲ್ಲಿ ಗುರುವಾಗಿ, ಜೀವದಲ್ಲಿ ಲಿಂಗವಾಗಿ, ಪ್ರಾಣದಲ್ಲಿ ಜಂಗಮವಾಗಿ, ಗುರು ರೂಪದಿ ಭೋಧನೆಯ ಮಾಡಿ, ಲಿಂಗ ರೂಪದಿ ಪೂಜೆಯ ಕೈಗೊಂಡು, ಜಂಗಮರೂಪದಿ ಪಾದೋದಕ ಪ್ರಸಾದವ ಮಾಡಿ, ತನ್ನ ದೇಹ ಪ್ರಸಾದವೆ ಆತನ ತ್ವಕಿನಲ್ಲಿ ಭಸ್ಮ ಸಂಬಂದವ ಮಾಡಿ ತನ್ನ ನಾಮವೆಂಬ ಪಂಚಾಕ್ಷರಿ ಮಂತ್ರವನ್ನು ಆತನ ವಾಕ್ಯದಲ್ಲಿ ಸಂಬಂದಮಾಡಿ, ಆತನಿಗೆ ರಕ್ಷಣೆಯಾಗಿದ್ದಾನೆ. ಶರಣರ ಅಷ್ಟಾವರಣದ ಪರಿಕಲ್ಪನೆಯನ್ನು ಈ ವಚನದಲ್ಲಿ ಕಾಣಬಹುದು.
ಅಷ್ಟಾವರಣಗಳು ಕೇವಲ ಬಹಿರಂಗದ ಪರಿಕರಗಳಲ್ಲ . ಆಂತರಿಕ ಅರಿವು ಬಹಿರಂಗ ರೂಪದಲಿ ನಿಯೋಜಿತವಾಗಿದೆ. ಅಂತರಂಗದ ಅಷ್ಟಾವರಣಗಳನು ಸಾಧನೆಗೆ ಸಹಾಯವಾಗುವಂತೆ, ಬಹಿರಂಗದಲ್ಲಿ ಅಳವಡಿಸಿಕೊಂಡಿದ್ದಾರೆ.

ಬಹಿರಂಗದ ಅಷ್ಟಾವರಣಗಳು ಎಂಟು.
ಅನುಭಾವಿಗಳು ಆಂತರಿಕವಾಗಿ ಅಷ್ಟಾವರಣಗಳನ್ನು ಮೂರು ವಿಭಾಗ ಮಾಡಿದ್ದಾರೆ.
೧. ಉಪಾಸ್ಯ ವಸ್ತು ತ್ರಯ (ಗುರು-ಲಿಂಗ-ಜಂಗಮ)
೨. ಉಪಾಸನಾ ಸಾಧನಾ ತ್ರಯ (ಬಸ್ಮ-ರುದ್ರಾಕ್ಷಿ-ಮಂತ್ರ)
೩. ಉಪಾಸನಾ ದ್ವಿಫಲ (ಪಾದೋದಕ-ಪ್ರಸಾದ)
ಶರಣ ಧರ್ಮ ಸಿದ್ದಾಂತದ ಪ್ರಕಾರ ಪಾದೋದಕ ಪ್ರಸಾದಗಳು ಉಪಾಸನಾ ಫಲಗಳಾಗಿವೆ.

ಪ್ರಸಾದ:
ಈ ಪ್ರಸಾದ ಪದವು ಅನುಗ್ರಹ ಎಂಬ ಅರ್ಥ ಕೊಡುವ ಪದ. ಪ್ರಸಾದವನ್ನು ಕೃಪೆದೋರಿ ಅನುಗ್ರಹಿಸಲ್ಪಡುವ ವಸ್ತು ಎಂದು ಹೇಳಬಹುದು. ಶರಣ ಧರ್ಮದಲ್ಲಿ ಗುರುವು ಶಿಷ್ಯನ ಮೇಲಿನ ಅನುಗ್ರಹ ಕೃಪೆಯ ಕುರುಹಾಗಿ ಶಿಷ್ಯನಿಗೆ ಕೊಡುವ ವಸ್ತುವನ್ನು ಪ್ರಸಾದವೆಂದು ಕರೆಯುವ ರೂಢಿಯಲ್ಲಿದೆ. ಸಾಮಾನ್ಯವಾಗಿ ಪ್ರಸಾದವು ಆಹಾರ ಪದಾರ್ಥ ಇಲ್ಲವೆ ಹಣ್ಣು ಹಂಪಲಗಳ ರೂಪದಲ್ಲಿರುತ್ತದೆ. ಭಕ್ತನು ಸದ್ಭಕ್ತಿಯಿಂದ ಗುರುವಿಗೆ ಅರ್ಪಿಸಿದ ಆಹಾರವನ್ನು ಸ್ಪರ್ಷ ಮಂತ್ರದಿಂದ ಪವಿತ್ರೀಕರಿಸಿ ಪುನಃ ಅದನು ಭಕ್ತನಿಗೆ ಕೊಡುತ್ತಾನೆ. ಅದುವೇ ಪ್ರಸಾದ ಹೀಗಾಗಿ ಪ್ರಸಾದವನ್ನು
೧. ಅನುಗ್ರಹ
೨. ಅನುಗ್ರಹಿಸಿ ಕೊಟ್ಟ ಪಡಿ ಪದಾರ್ಥ ಎಂದು ಅರ್ಥವಾಗುತ್ತದೆ.

ಪ್ರಸಾದದಲ್ಲಿಯೂ ಗುರು-ಲಿಂಗ-ಜಂಗಮರು ತ್ರಿಕೂಟ ಶಕ್ತಿಯ ದಾರ್ಶನಿಕರು. ಪ್ರಸಾದ ಪರಿಕಲ್ಪನೆಯಲ್ಲಿ
೧. ಶುದ್ದ ಪ್ರಸಾದ
೨. ಸಿದ್ದಪ್ರಸಾದ
೩. ಪ್ರಸಿದ್ದ ಪ್ರಸಾದ
ಗುರುವಿನಲ್ಲಿ ಶುದ್ದ, ಲಿಂಗದಲ್ಲಿ ಸಿದ್ದ ಪ್ರಸಿದ್ದ, ಜಂಗಮದಲ್ಲಿ ಪ್ರಸಿದ್ದ.

ಭಕ್ತನ ಮನಸ್ತಿತಿ ದೇವರಿಗೆ ಅರ್ಪಿತವಾದಾಗ ಅವನಿಗೆ ಆಂತರಿಕ ಶಕ್ತಿ ಲಭಿಸುತ್ತದೆ. ಕಾಯಾ, ಮನ, ವಾಚನದ ಮೂಲಕ ಪ್ರಸಾದಕ್ಕೆ ಶಕ್ತಿ ಬರುವುದು. ನಂಬಿದರೆ ಪ್ರಸಾದ ನಂಬದಿದ್ದರೆ ಅದು ವಿಷವಾಗುವುದು.

ಅಕ್ಕ ಗುರು-ಲಿಂಗ-ಜಂಗಮದಲ್ಲಿ ಆತ್ಮ ಸಂಗಾತನಾದ ಚೆನ್ನಮಲ್ಲಿಕಾರ್ಜುನನ್ನೆ ಕಾಣುತ್ತಾಳೆ. ಅಕ್ಕನೊಳಗಿನ ಹೆಣ್ಣಿನ ರೂಪ‌ ಭೌತಿಕವಾದ ಲೋಕ ಮೀಮಾಂಸೆಯದು. ಪಾರಮಾರ್ಥಿಕ ದಾಂಪತ್ಯ ಕೈಗೂಡಬೇಕು. ಇಲ್ಲದಿದ್ದರೆ ಹಂಗು ಹರಿಯಬೇಕು. ಗುರು-ಲಿಂಗ-ಜಂಗಮದ ಹೊಂದಾಣಿಕೆಯೆ ಬದುಕಿನ ಧರ್ಮವೆಂದು ತತ್ವನಿಷ್ಠವಾಗಿ ಸ್ವೀಕರಿಸಿತ್ತಾಳೆ. ಮತ್ತೆ ಮತ್ತೆ ಅದನ್ನು ಸ್ಪಷ್ಟಪಡಿಸುತ್ತಾಳೆ. “ಎನ್ನ ದೇವ ಚೆನ್ನಮಲ್ಲಿಕಾರ್ಜುನನಿಗಲ್ಲದೆ ಅನ್ಯಕ್ಕೆಳಸುವುದೆ ಎನ್ನ ಮನ”
ಅಕ್ಕನಿಗೆ ಭಕ್ತಿಯ ಸಾಧನೆ ಅಸಾಧಾರಣವಾದದ್ದು. ಪ್ರಸಾದದ ನಿರ್ಮಲತ್ವವನ್ನು ಈ ರೀತಿ ಬಯಸುತ್ತಾಳೆ.
ಲಿಂಗಾಂಗ ಸಂಗ ಸಮರ ಸುಖದಲ್ಲಿ ಮನವೇದ್ಯವಾಯಿತು. ನಿಮ್ಮ ಶರಣರ ಅನುಭಾವ ಸಂಗದಿಂದ ಎನ್ನ ತನು ಮನ ಪ್ರಾಣ ಪದಾರ್ಥವ ಗುರು ಲಿಂಗ ಜಂಗಮಕಿಕ್ಕಿತು. ಶುದ್ದ ಸಿದ್ದ ಪ್ರಸಿದ್ದ ಪ್ರಸಾದಿಯಾದೆನು. ಆ ಮಹಾ ಪ್ರಸಾದ ರೂಪ ರುಚಿ ತೃಪ್ತಿಯ ಇಷ್ಟ, ಪ್ರಾಣ, ಭಾವ ಲಿಂಗದಲ್ಲಿ ಸಾವಧಾನದಿಂದರ್ಪಿಸಿ ಮಹಾಘನ ಪ್ರಸಾದಿಯಾದೆನು.

ಈ ವಚನದ ಸೂಕ್ಷ್ಮ ರೂಪವೆಂದರೆ ಅಕ್ಕನ ವಿಶಿಷ್ಟ ಭಾವ ಸ್ಥಿತಿಯೂ ಹೌದು. ಶುದ್ದ ಸಿದ್ದ ಪ್ರಸಿದ್ದ ಪ್ರಸಾದಗಳು ಅಷ್ಟಾವರಣದ ಮಹತ್ವವನ್ನು ಸೂಕ್ಷ್ಮ ರೂಪದ ಸ್ವತಂತ್ರತೆಯನ್ನು ವ್ಯಕ್ತಪಡಿಸುತ್ತಾಳೆ. ಪ್ರಸಾದದ ಮೂರು ಪದಗಳಲ್ಲಿ ಮೊದಲಿನ “ಪ್ರ” ಪದವು ಪ್ರಸಾದವನ್ನು, “ಸಾ” ಪದವು ಭಕ್ತಿಯನ್ನು “ದ” ಪದವು ಪ್ರಸಾದಪೂರ್ವಕವಾಗಿ ಭಕ್ತಿಯು ಮುಕ್ತ ಪ್ರದವೆಂಬುದನ್ನು ಸೂಚಿಸುತ್ತದೆ. ಲಿಂಗಾಂಗ ಸಂಗದಲ್ಲಿ ಅಕ್ಕನಿಗೆ ಅರ್ಪಣತ್ವ ಪ್ರಸಾದದ ಅರ್ಪಣತ್ವ. ಅಂತರಂಗದಲ್ಲಿ ಪ್ರವಹಿಸುವ “ಓಂ” ಕಾರವೆ ಗುರುವಿಗೆ ಅರ್ಪಿಸಿಕೊಳ್ಳುತ್ತಾನೆ. ಗುರು ಸ್ವರೂಪನಾದ ಶಿವನಿಗೆ ಪ್ರಸಾದದ ಅರ್ಪಣೆ ತನು, ಮನ, ಪ್ರಾಣ ಗುರು-ಲಿಂಗ-ಜಂಗಮಕ್ಕೆ ಅರ್ಪಿತ. ಶುದ್ದ ಮನದಿಂದ ಸಿದ್ದಪಡಿಸಿದ ಆಹಾರವನ್ನು ಇಷ್ಟ ಪ್ರಾಣ ಭಾವಲಿಂಗಕ್ಕೆ ಮಹಾಘನ ಪ್ರಸಾದವನ್ನು ಅರ್ಪಿಸುತ್ತಾಳೆ. ದೇಹದ ಎಲ್ಲಾ ಇಂದ್ರಿಯಗಳನ್ನು ಲಿಂಗಸ್ವರೂಪವಾಗಿ ಮಾಡಿಕೊಂಡು ಏನನ್ನು ಸ್ವೀಕರಿಸಿದರೂ ಅದು ಸಹಜವಾಗಿ ಜ್ಞಾನಾರ್ಪಣೆಯಾಗುತ್ತದೆ.

ಶರಣರು ಪ್ರಕೃತಿಯನ್ನು ಪ್ರಸಾದಮಯವಾಗಿ ಕಂಡವರು. ಈ ಸೃಷ್ಟಿಯ ಪ್ರಸಾದದಲ್ಲಿ ತಾನೇ ಈಶ್ವರನಾಗಿ ಕಾಣುವ ತವಕ. ಆದ್ದರಿಂದ ಶರಣರು ಪ್ರಕೃತಿಯ ಋಣವನ್ನು ಗೌರವಿಸಿದವರು. ಪ್ರಸಾದಮಯವಾಗಿ ಕಂಡ ಈ ಪ್ರಕೃತಿಯನ್ನು ಪೂಜಿಸುತಿದ್ದು, ಪ್ರಸಾದದಲ್ಲಿ ತಾನೇ ಈಶ್ವರನಾಗಿ ಕಾಣುವ ತವಕ ವಚನಕಾರರದು.

ಅಕ್ಕ ಹೇಳುವ ಪರಿ ಹೀಗಿದೆ.

ಕಾಯದ ಪ್ರಸಾದವೆನ್ನ ಜೀವ ಪ್ರಸಾದವೆನ್ನ ಪ್ರಾಣ ಪ್ರಸಾದವೆನ್ನ ಮನ ಪ್ರಸಾದವೆನ್ನ ಧನ. ಪ್ರಸಾದವೆನ್ನ ಭಾವ ಪ್ರಸಾದವೆನ್ನ ಸಯದಾನ ಪ್ರಸಾದವೆನ್ನ ಸಮ ಭೋಗ ಪ್ರಸಾದವೆನ್ನ ಚೆನ್ನಮಲ್ಲಿಕಾರ್ಜುನನಯ್ಯ ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆನು”

ಅಕ್ಕನ ಚಿಂತನೆ ಈ ಕಾಯವನ್ನು ಪ್ರಸಾದಿಸಿದ ಶಿವನಿಗೆ ಅರ್ಪಿಸಬೇಕೆಂಬ ತವಕ. ನಿಶ್ಕಲ್ಮಷ ಮನದ ಮನದ ನೈವೇದ್ಯವನ್ನು ಚೆನ್ನಮಲ್ಲಿಕಾರ್ಜುನನಿಗೆ ಅರ್ಪಿಸಬೇಕೆಂಬ ಆಂತರಿಕ ಧಾವಂತ. ಈ ಮನ ಅನೇಕ ಕಲ್ಮಷಗಳಿಂದ ತುಂಬಿದೆ. ಅದನ್ನು ತಿಳಿಗೊಳಿಸಲು ಶಿವತ್ವವೆಂಬ ಸ್ಪಟಿಕದ ಪ್ರಸಾದ ಬೇಕೆನ್ನುವ ನಿವೇದನೆ ಅಕ್ಕನದು.

ವಚನಕಾರರು ಬಳಸುವ ಪ್ರಸಾದದ ಪಾರಿಭಾಷಿಕ ಪದಗಳು ನಮ್ಮ ನಿತ್ಯ ಜೀವನಕ್ಕೆ ಬಹು ಹತ್ತಿರವಾದವುಗಳು.
೧. ಒಕ್ಕು ಮಿಕ್ಕ ಪ್ರಸಾದ
೨. ಎಂಜಲು ಮೀಸಲು
೩. ಉಂಡು ಉಪವಾಸಿ ಬಳಸಿ ಬ್ರಹ್ಮ ಚಾರಿ
೪. ಭಾಜನ ಭೋಜನ

ಒಕ್ಕುದು ಎಂದರೆ ಗುರು-ಲಿಂಗ-ಜಂಗಮಕ್ಕೆ ಅರ್ಪಿಸಿದ ಪ್ರಸಾದ. ಮಿಕ್ಕುದು ಎಂದರೆ ಅರ್ಪಿತವಾಗಿ ಉಳಿದುದು.
ಮೀಸಲು ಎಂಜಲು:
ಎಂಜಲು ಅಥವಾ ಉಚ್ಚಿಷ್ಠ ಎಂದರೆ ಉಂಡು ಉಳಿದುದು ಎಂಬ ಅರ್ಥ. ನಾಲಿಗೆ ಒಂದು ಮಾತ್ರ ಸೋಂಕಿದ್ದು ಎಂಜಲಲ್ಲ. ಕಣ್ಣು, ಕಿವಿ, ಕೈ, ಕಾಲು, ಮೂಗು, ತ್ವಕ್ಕು ಇವೆಲ್ಲಾ ಮುಟ್ಟಿದುದು ಸಹ ಎಂಜಲೆನಿಸುತ್ತದೆ.
ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ:
ಊಟ ನೋಟ ಕೂಟಗಳನ್ನು ಪ್ರಸನ್ನಗೊಳಿಸುವುದೆ ಪ್ರಸಾದಿಯ ಪ್ರಮುಖ ಕರ್ತವ್ಯ. ‌ಪ್ರಸಾದಿಯು ಲಿಂಗಭೋಗಿಯೂ ಉಪಭೋಗಿಯೂ ಆಗಿದ್ದಾನೆ. ಅದಕ್ಕಾಗಿ ಆತ ಎಂದಿಗೂ ಉಣ್ಣನು. ಆತ ಆರೋಗಿಸುವುದು ಲಿಂಗ ಪ್ರಸಾದ
ಭಾಜನ ಭೋಜನ:
ಭಾಜನವೆಂದರೆ ಪರಿಯಾಣ ಅಥವ ಹರಿಯಾಣ. ಪ್ರಸಾದವನ್ನು ಇರಿಸಲು ಉಪಯೋಗಿಸುವ ಎಡೆ ಬಟ್ಟಲು. ಎಡೆ ಮಾಡಿದ ಪದಾರ್ಥಗಳಲ್ಲಿ ಗಂಧರಸಾದಿ ಷಟ್ ಪ್ರಸಾದಗಳು ಒಂದು ಗೂಡುತ್ತವೆ. ಭೋಜನ ಎಂದರೆ ಆರೋಗಣ ಅಥವಾ ಊಟ. ಆರೋಗಣೆ ಮಾಡುವುದು ಒಂದು ಆರಾಧನೆ. ಇದು ಅಂಗ ಮತ್ತು ಲಿಂಗಗಳೆರಡರ ಆರಾಧನೆ. ಆರೋಗಣೆಯಿಂದ ಪ್ರಕೃತಿ ಭಾವ, ಕ್ಷುದ್ಭಾವಗಳು ಕಳೆದು ಅಪರಿಮಿತ ಪರಿಣಾಮ ಉಂಟಾಗಬೇಕು. ಆರೋಗಣೆಗೆ ಮುನ್ನ ಅನ್ನಕ್ಕೆ ದೈವೀ ಶುಭ್ರತೆ ಕೊಡಬೇಕು. ಉದಕದಿಂದ ಮಂತ್ರೋದಕಗಳಿಂದ ವಿಭೂತಿ ಲೇಪಿತ ಹಸ್ತ ಸ್ಪರ್ಶದ ಪಠಣದಿಂದ ಲಿಂಗಕ್ಕೆ ಅರ್ಪಿಸಿ ನಂತರ ಉಪಯೋಗಿಸುವುದು.

ಪ್ರಸಾದವನ್ನು ಸಿದ್ದ ಪಡಿಸುವಾಗಲೂ ವೈಜ್ಞಾನಿಕ ಸಿದ್ದಿ ಇದೆ. ನಮ್ಮ ಹಿರಿಯರ ಎಚ್ಚರಿಕೆ ಇದೆ. ಮನೆಯ ಒಡತಿ ಅಡುಗೆ ಸಿದ್ದಪಡಿಸುವಾಗ ಅವಳಲ್ಲಿ ಅರ್ಪಣೆ ಭಾವ ವಿರಬೇಕು. ಪ್ರೀತಿಯ ವೈಶಾಲ್ಯತೆ ಇರಬೇಕು. ಹಸನ್ಮುಖಿಯಾಗಿ ಮಾಡಿದ ಪ್ರಸಾದವು ಮನೆಯವರಿಗೆ ಅತಿಥಿಗಳಿಗೆ ಸತ್ಕಾರದ ಜೊತೆಗೆ ಅದು ಅಮೃತವಾಗಿರುತ್ತದೆ. ದುರ್ಬಲ ಕಲ್ಮಶ ಮನದಿಂದ ಪ್ರಸಾದವನ್ನು ಸಿದ್ದಪಡಿಸಿದರೆ ಅದು ವಿಷ ವಾಗುತ್ತದೆ.

ಅಕ್ಕನ ಈ ವಚನ ಗಮನಿಸ ಬೇಕು.
ಇಂದೆನ್ನ ಮನೆಗೆ ಒಡೆಯರು ಬಂದರೆ ತನುವೆಂಬ ಕಳಷದಲ್ಲಿ ಉದಕವ ತುಂಬಿ ಕಂಗಳ ಸೋನೆಯಾದೊಡೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿ ಎಂಬ ಶೈತ್ಯದೊಡನೆ ಸುಗಂಧವ ಪೂಜಿಸುವೆ. ಪರವಶದೊಡನೆ ಹಾಡುವೆ ಭಕ್ತಿಯೊಡನೆ ಎರಗುವೆ.
ಅಕ್ಕನ ಅರ್ಥ ಇಷ್ಟೇ:
ಪ್ರಸಾದವೆಂಬ ರಸಾನುಭವವು ಪವಿತ್ರತೆಯ ಆಗರ. ಸಂತೃಪ್ತಿ ರೂಪದ ಷಡ್ವಿಧ ಪ್ರಸಾದ ಇವು ಭೌತಿಕ ಪ್ರಸಾದಗಳಾಗಿದ್ದರಿಂದ ಚೆನ್ನಮಲ್ಲಿಕಾರ್ಜುನನಿಗೆ ಅರ್ಪಣೆ ಯಾಗುತ್ತದೆ.

ದೇವರ ಪ್ರಸಾದವನ್ನು ಪ್ರಕೃತಿಯಲ್ಲಿ ಕಾಣುತ್ತೇವೆ. ಭೂಮಿ ತಾಯಿಗೂ ಮತ್ತು ಬಸವಣ್ಣ ನಿಗೂ ನಮ್ಮ ಜನಪದರಲ್ಲಿ ಮಹತ್ವದ ಸ್ಥಾನವಿದೆ. ಈ ದೈವ ಋಣವನ್ನು ರೈತ ಭೂಮಿ ತಾಯಿಗೆ ಅರ್ಪಿಸಿದರೆ:
ಸರ್ವಜ್ಞನ ಈ ತ್ರಿಪದಿಯನ್ನು ಗಮನಿಸ ಬೇಕು:
ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ
ಅನ್ನ ಉಂಟಾದರೂ ಉಣಲುಂಟು ಜಗಕೆಲ್ಲ
ಅನ್ನವೆ ಪ್ರಾಣ ಸರ್ವಜ್ಞ.

ಆ ದೇವರು ಕೊಟ್ಟಿರುವ ಪ್ರಸಾದವೆ ಅನ್ನ. ಪ್ರತಿ ಅನ್ನದ ಅಗುಳಿನಲ್ಲಿ ಶಿವ ಕೊಟ್ಟ ಶಕ್ತಿಯ ಚೈತನ್ಯವಿದೆ. ಅದಕ್ಕೆ ಸರ್ವಜ್ಞ ಹೇಳುವಂತೆ ಪ್ರಸಾದ ರೂಪದ ಅನ್ನವೇ ದೇವರೆಂದು. ಅನ್ನ ಕೇವಲ ಹೊಟ್ಟೆ ತುಂಬಿಸಿಕೊಳ್ಳುವದಕ್ಕಲ್ಲ. ಬಾಯಿ ಚಪಲಕ್ಕೆ ಒದಗುವ ವಸ್ತುವಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅನ್ನವೆಂಬುದು ಭೋಗವೂ ಹೌದು. ಯೋಗವೂ ಹೌದು. ದೈವದ ಅಂಶವಾದ ಅನ್ನಮಯವಾದ ಪ್ರಸಾದವನ್ನು ಎಸೆಯಬಾರದು. ಹಸಿದವರಿಗೆ ದಾನ ಮಾಡಬೇಕು. ಎಲ್ಲಾ ದಾನಗಳಲ್ಲಿ ಶ್ರೇಷ್ಠವಾದ ದಾನ ಅನ್ನದಾನ. ಇದನ್ನು ಶರಣರು ಅರಿತಿದ್ದರು. ಪ್ರಸಾದಿ ಭಾವ ದಾಸೋಹ ಭಾವ ಸೋಹಂ ಭಾವದಿಂದ ಅತಿಥಿಗಳಿಗೆ ಉಪಚರಿಸುತ್ತಿದ್ದರು.

ಶರಣರೂ ಸಹಿತ ಆಯುರ್ವೇದ ವಿಜ್ಞಾನ ಅರಿತಿದ್ದರು. ಪ್ರಸಾದಿ ಭಾವಕ್ಕೆ ಕಾರಣವಾದ ಈ ಭೋಗ ಜೀವನಕ್ಕೆ ಕಡಿವಾಣ ಹಾಕಲು ಶಿವ ಪ್ರಸಾದಿ ಜೀವನವನ್ನು ರೂಪಿಸಿ ಕೊಟ್ಟರು. ವ್ಯಕ್ತಿ ಮತ್ತು ಸಮಾಜದ ಉದ್ದಾರಕ್ಕೆ ಸಹಾಯಕವಾದ ಸಮನ್ವಯ ಯೋಗ ಪ್ರಸಾದ ತತ್ವದಲ್ಲಿ ಅಡಗಿದೆ ಎಂದು ವಚನಗಳ ಮೂಲಕ ಎಚ್ಚರಿಸಿದರು. ಈ ಪ್ರಸಾದಿ ಭಾವ ಬೌದ್ಧಿಕ ಜಿಜ್ಞಾಸೆಯ ತಾತ್ವಿಕ ತಳಹದಿಯ ಯಶಸ್ಸೂ ಹೌದು.

ಡಾ. ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾಸಕರು
ರಾಯಚೂರು.

Don`t copy text!