ಮಸ್ಕಿಯ ಡಾ.ಚನ್ನಬಸವಯ್ಯ ಹಿರೇಮಠ ಅವರಿಗೆ ‘ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟ
e-ಸುದ್ದಿ ಮಸ್ಕಿ
ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ ೨೦೨೧ನೇ ಸಾಲಿಗೆ ೧೦ ಜನ ಸಾಹಿತಿಗಳಿಗೆ ‘ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು ಅದರಲ್ಲಿ ರಾಯಚೂರು ಜಿಲ್ಲೆಯ ಮಸ್ಕಿಯ ಡಾ.ಚನ್ನಬಸವಯ್ಯ ಹಿರೇಮಠ ಅವರಿಗೂ ಪ್ರಶಸ್ತಿ ಲಭಿಸಿದೆ.
ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ೫ ಜನರಿಗೆ, ಸೃಜನೇತರ ಸಾಹಿತ್ಯ ಕ್ಷೇತ್ರದ ೩ ಜನರಿಗೆ, ಸಾಹಿತ್ಯ ಪರಿಚಾರಕರಿಗೆ ಒಬ್ಬರು ಮತ್ತು ಹೊರನಾಡಿನ ಸಾಧಕರು ಒಬ್ಬರಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪುರಸ್ಸೃತರಿಗೆ ೨೫ ಸಾವಿರ ರೂ. ನಗದು, ಫಲಕ, ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಚನ್ನಬಸವಯ್ಯ ಹಿರೇಮಠ ಅವರ ಪರಿಚಯ
ಡಾ.ಚನ್ನಬಸವಯ್ಯ ಹಿರೇಮಠ ಮಸ್ಕಿ ಗ್ರಾಮದ ವೀರಭದ್ರಯ್ಯ ಹಿರೇಮಠ ಮತ್ತು ಗೌರಮ್ಮ ದಂಪತಿಗಳ ಎರಡನೇಯ ಪುತ್ರರು. ೧೯೬೩ ರಲ್ಲಿ ಜನಿಸಿದ ಇವರು ೧೯೮೬ ರಲ್ಲಿ ಎಂ.ಎ ಸ್ನಾತ್ತಕೋತ್ತರ ಡಿಪ್ಲೋಮಾ ಇನ್ ಬಸವೇಶ್ವರ öಸ್ಟಡೀಜ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮಸ್ಥಾನ ಪಡೆದುಕೊಂಡು ೧೯೯೪ ರಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.
ಸದ್ಯ ರಾಯಚೂರಿನ ಬಿ.ಆರ್.ಬಿ. ಕಾಲೇಜಿನಲ್ಲಿ ಪ್ರಚಾರ್ಯರಾಗಿ ಕನ್ನಡ ಪ್ರಾಧ್ಯಪಕರಾಗಿದ್ದಾರೆ.
ಸಂಶೋಧಕರಾಗಿರುವ ಡಾ.ಚನ್ನಬಸವಯ್ಯ ಹಿರೇಮಠ ಅವರು ದಿವಂಗತ ಡಾ.ಎಂ.ಎಂ.ಕಲಬುರ್ಗಿಯವರ ಅಚ್ಚುಮೆಚ್ಚಿನ ಶಿಷ್ಯರಲ್ಲಿ ಒಬ್ಬರಾಗಿದ್ದಾರೆ. ಇವರು ಇದುವರೆಗೆ ೯ ಸಂಶೋಧನ ಕೃತಿಗಳು, ೧೪ ಸಂಪಾದಿತ ಕೃತಿಗಳು, ೨ ಜೀವನ ಚರಿತ್ರೆಗಳನ್ನು ಹಾಗೂ ೮೦ ಸಂಶೋಧನ ಪ್ರಬಂಧಗಳನ್ನು ಬರೆದಿದ್ದಾರೆ.
ಇದುವರೆಗೆ ೧೧ ಬಾರಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಹಲವು ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿವೆ.
ಪ್ರಮುಖ ಕೃತಿಗಳು
ಕುರುಗೋಡು ಸಿಂದರು ಒಂದು ಅಧ್ಯಯನ, ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು, ಬಳಗಾನೂರು ಮರಿಸ್ವಾಮಿಗಳ ಸ್ವರವಚನಗಳು, ಹೈದ್ರಬಾದ ಕರ್ನಾಟಕ ಸಂಗೀತ ಪರಂಪರೆ, ಗಂಗರಾಸಿ, ಕರ್ನಾಟಕ ಗ್ರಾಮ ಚರಿತ್ರೆ, ರಾಯಚೂರು ಜಿಲ್ಲೆಯ ಶರಣರು, ಸತ್ಯದ ಹಾದಿ ಸಂಪುಟ -೧, ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು, ಅನಾವರಣ ಪ್ರಮುಖ ಕೃತಿಗಳಾಗಿವೆ.
ಪ್ರಶಸ್ತಿ ಡಾ.ಎಂ.ಎಂ. ಕಲ್ಬುರ್ಗಿ ಅವರಿಗೆ ಅರ್ಪಣೆ- ಹಿರೇಮಠ
ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿರುವುದು ನನಗೆ ಸಂತಸ ತಂದಿದೆ ಎಂದು ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಚನ್ನಬಸವಯ್ಯ ಹಿರೇಮಠ ತಿಳಿಸಿದ್ದಾರೆ.
ವಿಜಯವಾಣಿ ಗೆ ಪ್ರತಿಕ್ರಿಯೆ ನೀಡಿದ ಅವರು ಸಂಶೋಧನಾ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವವರಿಗೆ ನೀಡಿದ ಈ ಪ್ರಶಸ್ತಿ ಮತ್ತಷ್ಟು ಉತ್ತೇಜನ ನೀಡಿದೆ. ನಾನು ಈ ಪ್ರಶಸ್ತಿಯನ್ನು ನನ್ನ ಗುರುಗಳಾಗಿದ್ದ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.