ಮನವೆ ಲಿಂಗವಾದ ಬಳಿಕ
ಮನವೆ ಲಿಂಗವಾದ ಬಳಿಕ ನೆನೆವುದಿನ್ನಾರನಯ್ಯಾ
ಭಾವವೇ ಐಕ್ಯವಾದ ಬಳಿಕ ಬಯಸುವುದಿನ್ನಾರನಯ್ಯಾ ಭ್ರಮೆಯಳಿದು ನಿಜವು ಸಾಧ್ಯವಾದ ಬಳಿಕ ಬಯಸುವುದಿನ್ನಾರನಯ್ಯಾ
ಭ್ರಮೆ ಯಳಿದು ನಿಜವು ಸಾದ್ಯವಾದ ಬಳಿಕ ಅರಿವುದಿನ್ನಾರನು ಗುಹೇಶ್ವರಾ !
-ಅಲ್ಲಮಪ್ರಭು
ಮನಸ್ಸು ಬೇರೆ ಲಿಂಗ ಬೇರೆ ಎಂಬ ದ್ವಂದ್ವ ಅಳಿದು ಮನಸ್ಸು ಲಿಂಗಕ್ಕೆ ಅರ್ಪಿತವಾಗಿ ಲಿಂಗವೇ ಆದ ಬಳಿಕ ನೆನೆವ ಕ್ರಿಯೆ ನಡೆಯದು. ನಾನೆಂಬ ಭಾವವಿರುವವರೆಗೆ ಬೇಕು ಬೇಡ ಎಂಬ ಬಯಕೆಗಳಿರುತ್ತವೆ . ನಾನೇ ಶಿವನೆಂಬ ಭಾವ ಗಟ್ಟಿಕೊಂಡಾಗ ಅಲ್ಲಿ ಯಾವ ಬಯಕೆಯೂ ಇರದು. ದೇಹಾದಿಗಳು ನಾನೆಂಬ
ಎಂಬ ಭ್ರಮೆ ಅಳಿದು ಲಿಂಗ ವೇ ತನ್ನ ನಿಜದ ನಿಲವು ಎಂದರಿತಾಗ ಅರಿಯಬೇಕಾದುದೇನೂ ಇರದು. ಲಿಂಗದಲ್ಲಿ ಸಮರಸಗೊಂಡಾಗ ನೆನೆವ ಬಯಸುವ ಮತ್ತು ಲಿಂಗವನ್ನರಿಯುವ ಕ್ರಿಯೆಗಳಾವೂ ಇರಲಾರವು .
ಎಂಬ ಭಾವ ನೆನೆ ನೆನೆಯೆಂದಡೆ ಏನ ನೆನೆವೆನಯ್ಯ? ಎನ್ನ ಕಾಯವೇ ಕೈಲಾಸ ವಾಯಿತ್ತು ಮನವೇ ಲಿಂಗವಾಯಿತ್ತು; ತನುವೆ ಸೆಜ್ಜೆಯಾಯಿತು. ನೆನೆವಡೆ ದೇವನುಂಟೆ? ನೋಡುವಡೆ ಭಕ್ತನುಂಟೆ? ಗುಹೇಶ್ವರಲಿಂಗ ಲೀಯವಾಯಿತ್ತು.
ಅಂಗವೆ ಲಿಂಗ, ಲಿಂಗವೆ ಅಂಗವೆಂದರಿದ ಬಳಿಕ, ನಮ್ಮ ಕೂಡಲ ಚೆನ್ನಸಂಗಮದೇವ ರು ಅಲ್ಲಿ ಹೆರಹಿಂಗದಿರ್ಪ ಕಾಣಿರೋ
ನಿಂದ ನೆಲೆಯ ನೀರಿನಂತೆ ಮರ ಶಿಲೆಗಳಲ್ಲಿ ಸಂದಿಸಿ ನಿಂದ ಪಾವಕನಂತೆ ಕರಂಡದಲ್ಲಿ ಬಂಧಿಸಿ ನಿಂದ ಸುವಾಸನೆಯಂತೆ ಈ ಅಂಗದಲ್ಲಿ ನಿಂದ ನಿಜ ಲಿಂಗಾಂಗ ಸಂಬಂಧ ಈ ಗುಣ ಸಂಗನಬಸವಣ್ಣನಂಗೆ ಸಂಬಂಧವಾಯಿತ್ತು. ಬ್ರಹ್ಮೇಶ್ವರ ಲಿಂಗವು ಅವರಿಗೆ ಒಳಗಾದ.
ಅಂಗದಿಂದೆ ಲಿಂಗ ಸುಖ. ಲಿಂಗದಿಂದ ಅಂಗ ಸುಖ.ಆ ಅಂಗ ಲಿಂಗ ಸಂಘ ಸುಖದಿಂದೆ ಪರಮಸುಖ ದೊರೆ ಕೊಂಬುದು ನೋಡಾ ಆ ಅಂಗಲಿಂಗ ಸಂಗ ಪರಮರಸೈಕ್ಯವನು ಕೂಡಲ ಚೆನ್ನಸಂಗ ನಿಮ್ಮ ಶರಣನಾದ ಮಹಾ ಲಿಂಗೈಕ್ಯ ಬಲ್ಲನಲ್ಲದೆ ಉಳಿದವರೆತ್ತ ಬಲ್ಲರಯ್ಯಾ ?
ಪ್ರಾಣಲಿಂಗದ ಪ್ರಸನ್ನ ಮುಖವನ್ನು ಕರಸ್ಥಲದ ದರ್ಪಣವಾದ ಇಷ್ಟಲಿಂಗದಲ್ಲಿ ಕಾಣಬಹುದು. ಅದರಂತೆ ಅಂತರಂಗ ದ ಅರಿವು ಲಿಂಗ ಭಕ್ತನ ಬಹಿರಂಗದ ಕ್ರಿಯೆಯಲ್ಲಿ ಕಾಣಬರುವುದು. ಒಳಗೆ ಲಿಂಗದ ಅರಿವು ಹೊರಗೆ ಲಿಂಗಕ್ಕೆಂದು ಕಾಯಕ . ಕಾಯಕದ ಮರೆಯಲಿ ಲಿಂಗಾರ್ಥವಿದೆ. ಲಿಂಗವಿದೆ. ಇಷ್ಟ ಪೂಜೆ ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗದ ಸುಜ್ಞಾನ ಪ್ರಕಾಶ ಪ್ರಜ್ವಲಿಸುವಂತೆ ಕಾಯದಲ್ಲಿ ಮಾಡುವ ಕಾಯಕ ಅದೂ ಅಂತರಂಗದಲ್ಲಿ ನಾಟಿ ಶಿವಜ್ಞಾನ ಪ್ರಕಾಶದಲ್ಲಿ ಅರಿವು ಮಾಡುವ ಕಾಯಕ ,ಒಳಗೂ ನಡೆಯುತ್ತದೆ. ಶೂನ್ಯ ಸಂಪಾದನೆಯಲ್ಲಿ ಬರುವ ಒಂದು ಪ್ರಸಂಗ ಅಲ್ಲಮಪ್ರಭುದೇವರು ಅನಿಮಿಷಯ್ಯ ನಿಂದ ಗುರು ಕಾರುಣ್ಯ ಪಡೆಯಬೇಕೆಂದು ಬರುತ್ತಿರುವಾಗ ಗೊಗ್ಗಯ್ಯನೆಂಬ ಮಹಾಶರಣ ತೋಟದಲ್ಲಿ ಕೃಷಿ ಮಾಡುತ್ತಿದ್ದಾನೆ ಲಿಂಗಶರಣನ ಕೃಷಿ ಹೊರಗೆ ನಡೆದಂತೆ ಒಳಗೂ ನಡೆದಿದೆಯೇ ? ಹೊರಗೆ ತೋಟ ಬೆಳೆದರೆ ಒಳಗಣ ತೋಟ ಲಿಂಗ ಸಂಪತ್ತನ್ನು ಬೆಳೆಯುತ್ತಿದೆಯೇ ? ಬಹಿರಂಗ ಕೃಷಿಯಾದಂತೆ ಅಂತರಂಗವೂ ಲಿಂಗಕ್ಕೆ ಕೃಷಿ ಯಾಗುತ್ತಿದೆಯೇ ? ಇದು ಪ್ರಭುವಿನ ಪ್ರಶ್ನೆ ಗೊಗಯ್ಯನಿಗೆ. ತಾನು ಕೃಷಿ ಮಾಡುತ್ತಿರುವ ಲಿಂಗದ ತೋಟವನ್ನು ಬಿಚ್ಚಿ ಆತನಿಗೆ ತೋರಿಸುತ್ತಾನೆ ಅಲ್ಲಮಪ್ರಭು.
ತನುವ ತೋಂಟವ ಮಾಡಿ ಮನವ ಗುದ್ದಲಿಯ ಮಾಡಿ ಅಗಿದು ಕಳೆದನಯ್ಯ ಭ್ರಾಂತಿನ ಬೇರ ಒಡೆದು ಸಂಸಾರದ ಹೆಂಟೆಯ, ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ ಅಖಂಡ ಮಂಡಲವೆಂಬ ಬಾವಿ ,ಪವನವೇ ರಾಟಾಳ, ಸುಷುಮ್ನನಾಳದಿಂದ ಉದಕವ ತಿದ್ದಿ ,ಬಸವ ಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆ ಯೆಂಬ ಬೇಲಿಯನಿಕ್ಕಿ, ಆವಾಗಳು ಈ ತೋಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಮಹೇಶ್ವರಾ !
ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ