ಸ್ಪರ್ಧೆ
ಸ್ಪರ್ಧೆ =ಹುರುಡು, ಮೇಲಾಟ, ಪೈಪೋಟಿ
ಇಂದಿನ ಕಾಲದಲ್ಲಿ ಪ್ರಪಂಚವೇ ಸ್ಪರ್ಧಾಮಯವಾಗಿದೆ. ಎಲ್ಲರೂ ಒಬ್ಬರನ್ನು ಹಿಂದೆ ಹಾಕಿ ತಾವು ಮುಂದೊಡ ಬೇಕೆಂಬ ತವಕ. ಈ ಸ್ಪರ್ಧೆ ಮಾಡಬೇಕೆಂಬ ಭಾವನೆಯನ್ನು ಮನುಷ್ಯರಲ್ಲಿ ತಂದೆ ತಾಯಿಯರು ನೀವೇ ಮೊದಲು ಬರಬೇಕು ಪ್ರೈಜ್ ತಗೋಬೇಕು ಎಂಬೆಲ್ಲ ಆಸೆಗಳನ್ನು ಬೆಳೆಸಿ ಆರಂಭಿಸುತ್ತಾರೆ. ಇದೇ ಮುಂದೆ ಎಲ್ಲರೊಂದಿಗೆ ಸ್ಪರ್ಧೆ ಮಾಡಲು ಪ್ರೇರಣೆ ನೀಡುತ್ತದೆ.
ಶಾಲಾ ಕಾಲೇಜಿನ ಸ್ಪರ್ಧೆಗಳು ಸಮ ವಯಸ್ಸು, ಸಮ ಬುದ್ದಿವಂತಿಕೆ, ಸಮ ಬಲದವರೊಂದಿಗೆ ನಡೆದರೆ. ಜೀವನ ಸ್ಪರ್ಧೆಯಲ್ಲಿ ಸಣ್ಣವರು ದೊಡ್ಡವರು ಎಲ್ಲ ವಯಸ್ಸು ಎಲ್ಲ ರೀತಿಯ ಜನರೊಂದಿಗೆ ಸ್ಪರ್ಧೆಗೆ ಇಳಿಯ ಬೇಕಾಗುತ್ತದೆ.
ಪೈಪೋಟಿ ಆರೋಗ್ಯಕರವಾಗಿರಬೇಕು. ಓದು, ಕಲೆ, ಬರವಣಿಗೆ, ನಾಟ್ಯ, ನಾಟಕ, ಸಂಗೀತ, ಚಿತ್ರಕಲೆ, ಶಿಲ್ಪಕಲೆ ಇವುಗಳಲ್ಲಿ ಅವರ ಕೃತಿ ಬುದ್ದಿವಂತಿಕೆಯಿಂದ ಗುರುತಿಸುತ್ತಾರೆ. ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸ್ಪರ್ಧೆ ಸೂಕ್ತ, ಆದರೆ ಸ್ಪರ್ಧೆ ಅರೋಗ್ಯಯುತ ಮತ್ತು ಸದುದ್ದೇಶ ಇರಬೇಕು.
ಸ್ಪರ್ಧೆ ಎದುರಾಳಿ ಎಂದು ಭಾವಿಸಿದವರೊಂದಿಗೆ ಮಾಡಿದರೆ ಅಸಮಾಧಾನ ಮತ್ತು ನೋವು. ನಮ್ಮೊಂದಿಗೆ ನಾವು ಸ್ಪರ್ಧೆ ಮಾಡಿಕೊಳ್ಳಬೇಕು ಹೋದ ಬಾರಿ ಇಷ್ಟು ಮಾಡಿದ್ದೆ ಮುಂದಿನ ಬಾರಿ ಇದಕ್ಕೂ ಹೆಚ್ಚು ಸಾಧಿಸಬೇಕೆಂಬ ಗುರಿ ನಮ್ಮದಾಗಿರಬೇಕು.
ನಮ್ಮ ಸ್ಪರ್ಧೆ ಎಂದಿಗೂ ನಮ್ಮ ಸಮಾನ ವಯಸ್ಕರು, ಸಮ ಯೋಗ್ಯತೆ ಇರುವವರೊಂದಿಗೆ ಇರಬೇಕು. ಇಲ್ಲವೇ ನಮ್ಮ ಸ್ವಂತ ಕಳೆದ ಬಾರಿಯ ಕಾರ್ಯ ನಿರ್ವಹಣಾ ಸಾಮರ್ಥ್ಯದೊಂದಿಗೆ ಇರಬೇಕು.
ನಮ್ಮ ಸ್ಥಾನ, ನಮ್ಮ ವಸ್ತು, ನಮ್ಮದೆಂದು ಕೊಂಡದ್ದು ನಮ್ಮದಾಗಿದ್ದಾರೆ ನಮಗೆ ಸಿಕ್ಕೇ ಸಿಗುತ್ತದೆ. ಆದ್ದರಿಂದ ಸ್ಪರ್ಧೆ ಯಲ್ಲಿ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ ಅದೇ ರೀತಿ ಸೋಲು ಗೆಲವು ಸ್ವೀಕರಿಸಬೇಕು. ಕೆಲವೊಂದು ಸಲ ಸ್ಪರ್ಧೆಯಲ್ಲಿ ಸೋಲು ಗೆಲವು ಇರದೇ ಇರಬಹುದು. ಸಮಾಬಲವು ಇರಬಹುದು. ಬೇರೆಯವರನ್ನು ಸೋಲಿಸಿ ಗೆಲ್ಲಬೇಕು ಎಂಬ ನಿಯಮವಿರುವುದಿಲ್ಲ. ಒಬ್ಬರು ನಾಲ್ಕಾರು ಜನರ ಮಧ್ಯ ಒಬ್ಬರು ಉತ್ತಮಮಟ್ಟದಲ್ಲಿ ಇರುತ್ತಾರೆ. ಹಾಗೆಂದು ಒಮ್ಮೆ ಒಬ್ಬರು ಮುಂದೆ ಇನ್ನೊಬ್ಬರು ಹಿಂದೆ ಯಾರೂ ಶ್ರೇಷ್ಠ ಎಂಬ ಭಾವನೆ ಇರಬಾರದು ಅಥವಾ ಬರಬಾರದು.
ಸ್ಪರ್ಧಾ ಮನೋಭಾವನೆ ಎಲ್ಲರಲ್ಲೂ ಇರಬೇಕು. ಗೆಲುವು ಸೋಲನ್ನು ಸಮ ಭಾವನೆಯಿಂದ ನೋಡಬೇಕು.
ಕೆಲವೊಮ್ಮೆ ಜೀವನದ ಸ್ಪರ್ಧೆಯಲ್ಲಿ ನಾವು ಭಾಗವಹಿಸುವದಿಲ್ಲ ಎಂದು ಕೊಂಡಾಗ ಅನಿವಾರ್ಯವಾಗಿ ಸ್ಪರ್ಧಿಸುವ ಸಂದರ್ಭ ಬರಬಹುದು. ನಾವು ಸ್ಪರ್ಧೆಯಲ್ಲಿ ಇಲ್ಲದೇ ಇದ್ದಾಗೂ ಸ್ಪರ್ಧಿಸುತ್ತಿದ್ದೇವೆ ಎಂಬ ಭ್ರಮೆ ಕೆಲವು ಮೂರ್ಖ ಜನರಲ್ಲಿ ಬರಲೂ ಬಹುದು.
ಜೀವನ ಪ್ರತಿ ರಂಗದ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಸಂಪೂರ್ಣ ರೀತಿಯಲ್ಲಿ ತೊಡಗಿಸಿಕೊಳ್ಳುವಿಕೆ ಮುಖ್ಯ ಅದರ ಫಲ ಪರಿಣಾಮ ನಮ್ಮ ಯೋಗ್ಯತೆ ಮತ್ತು ಪ್ರತಿಭೆಗೆ ತಕ್ಕಂತೆ ದೊರೆಯುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸೋಣ, ಆದರೆ ಸ್ಪರ್ಧೆಯ ಫಲಿತಾಂಶವೇ ನಮ್ಮ ಯೋಗ್ಯತೆಯ ಪ್ರಮಾಣ ಪತ್ರವಲ್ಲ.
–ಮಾಧುರಿ, ಬೆಂಗಳೂರು