ನವ ವಸಂತ
ಯುಗದ ಆದಿಯ ಹಾದಿಗೆ
ಜೀವ ಜಗದ ಚೆಲುವಿಗೆ
ಚೈತ್ರದ ವಸಂತಾಗಮನಕೆ
ಮರಳಿ ಅರಳಿ ಬರುತಿದೆ ಯುಗಾದಿ
ಬರಡಾದ ಪ್ರಕೃತಿಯ ಚೈತನ್ಯ ಪಲ್ಲವಿಸಿ
ಕಹಿ ನೋವುಗಳ ಮೋಡ ಕರಗಿಸಿ
ಬೇವು ಬೆಲ್ಲದ ಸಮಭಾವದ ಮಳೆಸುರಿಸಿ
ಮರಳಿ ಅರಳಿ ಬರುತಿದೆ ಯುಗಾದಿ
ಅಯೋಧ್ಯಾ ಶ್ರೀರಾಮನ ನೆನೆಯುತ
ಬ್ರಹ್ಮನ ವಿಶ್ವ ಸೃಷ್ಟಿ ಅರಿಯುತ
ಹಿಂದು ಹೊಸ ಪಂಚಾಂಗ ಶ್ರವಣಿಸುತ
ಮರಳಿ ಅರಳಿ ಬರುತಿದೆ ಯುಗಾದಿ
ಸ್ನೇಹ ಪ್ರೀತಿ ವಾತ್ಸಲ್ಯದ ತೋರಣ
ಉತ್ಸಾಹ ಉಲ್ಲಾಸ ಸಂಭ್ರಮದ ಹೂರಣ
ನೇಗಿಲು ಕಟ್ಟಿ ಭೂತಾಯಿ ನಮಿಸೋಣ
ಹಸಿರೇ ಉಸಿರಾಗಿ ಜೊತೆಯಾಗಿ ಸಾಗೋಣ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಕರುನಾಡ ಕನ್ನಡಿಗರ ಬಾಳಿಗೆ ಹೊಸ ಹರುಷವ ತರುತಿದೆ
ಶ್ರೀಮತಿ ರೇಖಾ ಪಾಟೀಲ
ರಾಯಚೂರು