ಏಪ್ರಿಲ್ 2 ಅಲ್ಲಮ ಜಯಂತಿ
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು.
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು.
ಪ್ರಾಣ ಹೋದರೆ ಕಾಯ ಬಿದ್ದಿತ್ತು,
ಲಿಂಗ ಒಂದೆಸೆಯಾದಡೆ ಮನ ನಾಚಿತ್ತು.
ಗುಹೇಶ್ವರನೆನಲಿಲ್ಲದ ಘನವು.
-ಅಲ್ಲಮಪ್ರಭುದೇವರು
ಸಮಗ್ರ ವಚನ ಸಂಪುಟ: 2 ವಚನದ ಸಂಖ್ಯೆ: 236
ಅಲ್ಲಮ ಪ್ರಭುಗಳು ಕಲ್ಯಾಣ ವಚನಕಾರರಲ್ಲಿ ಅತ್ಯಂತ ಪ್ರಗತಿಪರ ಕಾಲಜ್ಞಾನದ ಅನುಭವಿ ವಚನಕಾರನೆಂದು ಹೇಳಲಾಗುತ್ತಿದೆ. ಬಸವಾದಿ ಶರಣರ ಅಷ್ಟಾವರಣ ಪಂಚಾಚಾರ ಮತ್ತು ಷಟಸ್ಥಲಗಳಿಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ಅರ್ಥೈಸಿದ್ದಾರೆ . ಇಂತಹ ಪ್ರಯತ್ನದಲ್ಲಿ ಈ ಮೇಲಿನ ವಚನವನ್ನು ತಿಳಿದುಕೊಳ್ಳುವ ಅಗತ್ಯತೆ ಇದೆ .
ಪ್ರಾಣಲಿಂಗವೆಂಬ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು.
ಶರಣರು ಜಗತ್ತಿನ ದಾರ್ಶನಿಕ ತಾತ್ವಿಕ ಆಧ್ಯಾತ್ಮಿಕ ಅಧ್ಯಯನಕ್ಕೆ ತಮ್ಮದೇ ಆದ ವಿನೂತನ ಕೊಡುಗೆ ನೀಡಿದ್ದಾರೆ. ಹೊಸ ಸಿದ್ಧಾಂತಗಳನ್ನು ಸಾದರ ಪಡಿಸಿದ್ದಾರೆ .
ಇಷ್ಟ ಲಿಂಗ ಪ್ರಾಣ ಲಿಂಗ, ಭಾವ ಲಿಂಗವೆಂಬ ,ಲಿಂಗ ಪ್ರಜ್ಞೆಯ ವಿವಿಧ ಪ್ರಕಾರಗಳನ್ನು ಅನುಭವಿಸುತ್ತೇವೆ ಓದುತ್ತೇವೆ . ಆಯತ ಸ್ವಾಯತ ಮತ್ತು ಸನ್ನಿಹಿತ ಇವುಗಳನ್ನು ಸ್ಥೂಲ ಶರೀರ ,ಸೂಕ್ಷ್ಮ ಶರೀರ ಮತ್ತು ಕಾರಣ ಶರೀರದಿಂದ ಅನುಭವಿಸಬೇಕು.
ಅಲ್ಲಮಪ್ರಭುಗಳು ಇಂತಹ ಸ್ಥೂಲ ಸೂಕ್ಷ್ಮ ಮತ್ತು ಕಾರಣವನ್ನು ಮೀರಿ ಬೆಳೆದವರು . ತನ್ನ ಅರಿವಿನ ಅನುಸಂಧಾನ ಮಾಡಿಕೊಂಡಾಗ ಈ ಹೊರಗಿನ ಸ್ಥೂಲ ಸೂಕ್ಷ್ಮ ಮತ್ತು ಕಾರಣ ಎಂಬ ಮತ್ತೆ ವಿವಿಧ ಆಯಾಮಗಳನ್ನು ಅಗತ್ಯವೇ ಎಂದು ಪ್ರಶ್ನಿಸುತ್ತಾರೆ .
ಇಷ್ಟಲಿಂಗವಿಡಿದು ಪ್ರಾಣಲಿಂಗ ಹಂತಕ್ಕೆ ಬಂದು ಪ್ರಾಣಲಿಂಗದ ಜಪ ಮಾಡುವ ಸಾಧಕರನ್ನು ಕಂಡು ಪ್ರಾಣಲಿಂಗವೆಂಬ ಬಾಹ್ಯ ಆಡಂಬರದ ಶಬ್ದಕ್ಕೆ ನಾಚಿತ್ತು ಮನ ನಾಚಿತ್ತು. ಇಲ್ಲಿ ಶಬ್ದಗಳ ಪ್ರಾಧಾನ್ಯತೆಯಲ್ಲಿ ಪ್ರಾಣಲಿಂಗದ ಗೌಪ್ಯತೆಯು ಕೂಡ ಶಬ್ದದ ಹಂಗಿಗೆ ಹೊರತಾಗದು. ಅದು ಶಬ್ದದ ಸಂತೆ ಶಬ್ದ ಲಜ್ಜೆ ಎಂಬ ಅನೇಕ ಪಾರಿಭಾಷಿಕ ಪದಗಳಿಂದ ಹೇಳಿದ್ದಾರೆ .ಕಾರಣ ಮನವು ಒಮ್ಮೆ ಅರಿವೆಂಬ ಪೂರ್ಣ ಪ್ರಕಾಶವನ್ನು ಪಡೆದ ಬಳಿಕ ಇಂತಹ ಪದಗಳ ಬಳಕೆ ಸಾಧಕನಿಗೆ ಮತ್ತು ಮನಕ್ಕೆ ನಾಚಿಕೆ ತರುವಂತಹ ವಿಷಯವೆಂದಿದ್ದಾರೆ ಅಲ್ಲಮ ಪ್ರಭುಗಳು .
ಪ್ರಾಣ ಹೋದರೆ ಕಾಯ ಬಿದ್ದಿತ್ತು,
ಲಿಂಗಯೋಗವು ಕಾಯ ಪ್ರಾಣ ಮತ್ತು ಆತ್ಮಗಳ ಸಮ್ಮಿಲನ ,ಇದು ಪೂಜೆ ಅರ್ಚನೆಯಲ್ಲ .ಶರೀರ ಪ್ರಾಣ ಅವುಗಳನ್ನು ನಿಯಂತ್ರಿಸುವ ನಿಗ್ರಹಿಸುವ ಶುದ್ಧೀಕರಿಸುವ ಆತ್ಮ ಮನಸು ಒಂದು ಬಿಂದುವಿನಲ್ಲಿ ಕೂಡಿ ಅನುಸಂಧಾನವಾಗುವ ಶುಭ ಗಳಿಗೆಯೇ ಯೋಗ . ಇಂತಹ ಲಿಂಗಯೋಗದ ಸಾಧಕನ ಪ್ರಾಣ ಹೋದರೆ ಕಾಯ ಬಿದ್ದಿತ್ತು .ಪ್ರಾಣ ಹೋದ ಬಳಿಕ ಕಾಯಕ್ಕೆ ಶರೀರಕ್ಕೆ ಬೆಲೆಯಿಲ್ಲ . ಹಾಗಿದ್ದರೆ ಕಾಯಕ್ಕೂ ಪ್ರಾಣಕ್ಕೂ ಹೇಗೆ ನಂಟಾಗುವದು ಎಂಬ ಪ್ರಶ್ನೆಯನ್ನು ಅಲ್ಲಮರು ಸಾಧಕರ ಮುಂದಿಟ್ಟಿದ್ದಾರೆ . ಪ್ರಾಣಲಿಂಗವೆಂದು ಜಪಿಸುವ ಜನರನ್ನು ಉದ್ದೇಶಿಸಿ ಸಂವಾದಿಸುವ ಈ ವಚನವು ವಾಸ್ತವಿಕ ನೆಲೆಗಟ್ಟಿನಲ್ಲಿ ಲಿಂಗ ತತ್ವವನ್ನು ತಿಳಿಯಲು ಆಮಂತ್ರಿಸುತ್ತಾರೆ .
ಲಿಂಗ ಒಂದೆಸೆಯಾದಡೆ ಮನ ನಾಚಿತ್ತು.
ಕಾಯದಿಂದ ಶರೀರದಿಂದ ಪ್ರಾಣ ಹೋದ ಮೇಲೆ ಲಿಂಗವು ಇನ್ನೊಂದೆಡೆಗೆ ಬೀಳುವುದು ಸಹಜ . ಶರೀರವು ಪ್ರಾಣವನ್ನು ಕಳೆದುಕೊಳ್ಳುತ್ತದೆ ,ಕಳೆದುಕೊಂಡ ಪ್ರಾಣದ ಶರೀರ ಶವವೆನಿಸಿಕೊಳ್ಳುತ್ತದೆ . ಶವದ ಮೇಲಿನ ಲಿಂಗವು ಜಡವಾಗುತ್ತದೆ .ಇಂತಹ ಪ್ರಹಸನಗಳನ್ನು ಕಂಡು ಅರಿವಿನ ಮನವು ನಾಚಿತ್ತು ಎಂದು ವ್ಯಂಗ್ಯವಾಡಿದ್ದಾರೆ ಅಲ್ಲಮರು.
ಅಲ್ಲಮರ ದೂರದ ದೃಷ್ಟಿಕೋನವನ್ನು ಅವರ ವಚನದ ಆಶಯವನ್ನು ಅರಿತುಕೊಳ್ಳುವ ಅಗತ್ಯ ಇಂದು ಹೆಚ್ಚು ಪ್ರಸ್ತುತವೆನಿಸುತ್ತದೆ . ಆಚರಣೆಯ ನೆಪದಲ್ಲಿ ಲಿಂಗವಂತನು ಇಷ್ಟ ಲಿಂಗಯೋಗ ಪ್ರಾಣ ಲಿಂಗ ಮತ್ತು ಭಾವ ಲಿಂಗ ಎಂದು ಜಪಿಸುತ್ತ ಲಿಂಗ ಪೂಜೆ ಆಚರಣೆಗೆ ಜೋತು ಬೀಳುವುದನ್ನು ಖಂಡಿಸಿದ್ದಾರೆ ಅಲ್ಲಮರು.
ಗುಹೇಶ್ವರನೆನಲಿಲ್ಲದ ಘನವು.
ಸಮಷ್ಟಿಯ ಪ್ರಜ್ಞೆ ಬ್ರಹ್ಮಾಂಡದ ಕಾಳಜಿ ಸೃಷ್ಟಿಯ ಅರಿವನ್ನು ಗುಹೇಶ್ವರನೆಂಬ ನಿಜ ಘನವೆಂದು ಅರಿಯಬೇಕಲ್ಲದೆ ,ಕೊಟ್ಟ ಲಿಂಗವನ್ನು ಎದೆಯ ಮೇಲಿಟ್ಟು ಉಪಾಸನೆಗೆ ತೊಡಗುವ ತುಡುಗು ಜನರನ್ನು ತರಾಟೆಗೆ ತೆಗೆದುಕೊಳ್ಳುವ ಕಾರ್ಯವನ್ನು ಅಲ್ಲಮರು ಅರ್ಥಪೂರ್ಣವಾಗಿ ಮಾಡಿದ್ದಾರೆ. ಸಹಜದತ್ತವಾದ ಲಿಂಗ ತತ್ವವನ್ನು ಆಚರಣೆಗಳನ್ನು ಉನ್ಮಾದದಲ್ಲಿ ಭ್ರಮೆ ಭ್ರಾಂತಿಯಲ್ಲಿ ಆಶೆ ಆಮಿಷದಲ್ಲಿ ಮಾಡಿ ತಮಗೆ ತಿಳಿದವ್ಯಾಖ್ಯಾನ ಮಾಡುವ ಅರೆಬರೆ ಜ್ಞಾನಿಗಳು ಕೇವಲ ಶಬ್ದದ ಪದಗಳ ಪಾಂಡಿತ್ಯವನ್ನು ಸೃಷ್ಟಿ ಮಾಡಬಲ್ಲರೇ ಹೊರತು ,ಅರುವಿನ ಅನುಸಂಧಾನವನ್ನು ಹೇಳಲಾರರು . ಆಗ ಇಷ್ಟ ಲಿಂಗ ಪ್ರಾಣಲಿಂಗ ಮತ್ತು ಭಾವಲಿಂಗಗಳು ತಮ್ಮ ನೈಜ ಅರ್ಥವನ್ನು ಆಶಯವನ್ನು ಕಳೆದುಕೊಂಡು ಲಜ್ಜೆಗೆ ನಾಚಿಕೆಗೆ ಸಾಮಗ್ರಿಗಳಾಗುತ್ತವೆ .
ಅದಕ್ಕೆ ನಿರಾಕಾರದ ಶಕ್ತಿ ಅನುಪಮ ಅದುವೇ ನಿಜ ಘನವೆಂದು ದೃಢಪಡಿಸಿದಾಗ ಮಾತ್ರ ಲಿಂಗದ ಅರ್ಥವು ಶ್ರೀಮಂತಗೊಳ್ಳುತ್ತದೆ .ಅಲ್ಲಮರ ವಚನಗಳು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ವಿಶ್ಲೇಷಣೆಗೆ ಕಬ್ಬಿಣದ ಕಡಲೆ ಎಂದೇ ಹೇಳಬಹುದು. ನಾನು ಒಬ್ಬ ಸಾಮಾನ್ಯ ಓದುಗ ಅಭ್ಯಾಸಿಕ ನನಗೆ ತಿಳಿದ ವಿಚಾರವನ್ನು ಇಲ್ಲಿ ಸಾದರ ಪಡಿಸಿದ್ದೇನೆ ಶರಣಾರ್ಥಿ
–ಡಾ.ಶಶಿಕಾಂತ.ಪಟ್ಟಣ ಪುಣೆ