ಶರಣರ ದೃಷ್ಟಿಯಲ್ಲಿ ಪ್ರಕೃತಿ
ಶರಣರ ವಚನಗಳಲ್ಲಿ ಪ್ರಕೃತಿಯು ಕೇವಲ ವಿನೋದ ವಸ್ತುವಲ್ಲ ಅದರಲ್ಲಿ ತತ್ವ ಪ್ರತಿಪಾದನೆಯ ಅತೀತದ ಧ್ವನಿ ಇದೆ.
ವಾಸ್ತವಿಕವಾಗಿ ಪ್ರಕೃತಿಯನ್ನು ಸಂಭಾವಿಸಿ ಜೀವನದ ಸೂಕ್ಷ್ಮ ದರ್ಶನದ ಉಪದೇಶಸಾರವೂ ಇದ್ದು ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ತತ್ವ ಪ್ರತಿಮೆಗಳನ್ನು ಬಳಸಿದ್ದಾರೆ.
ಬೇವು
ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ಆಕಳ ಹಾಲನೆರೆದು ಜೇನುತುಪ್ಪವ ಹೊಯ್ದರೆ ಕಹಿಯಹುದಲ್ಲದೆ ಸಿಹಿಯಾಗಬಲ್ಲುದೆ ? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲಸಂಗಮದೇವ !
ಇಲ್ಲಿಬೇವಿನ ಬೀಜವೆಂದರೆ ಶರಣರಿಗೆ ಕೇಡು ಬಯಸುವವರು ಎಂದರ್ಥ. ಅವರ ಭಕ್ತಿ ಗೌಪ್ಯವಾದುದು .ಆಡಂಬರದ. ತೋರಿಕೆಗಾಗಿ ಅಲ್ಲ ಡಾಂಭಿಕತನ ಭಕ್ತಿ ಅಲ್ಲ ಆಂತರಿಕ ಹಾಗೂ ಶುದ್ಧ ಭಾವದ ಭಕ್ತಿಯನ್ನು ಮೆಚ್ಚಲಾರದವರು .ಇಂತಹ ಭಕ್ತಿಯೆಂಬ ಬೇವಿನಬೀಜಕ್ಕೆ ಡಾಂಭಿಕತೆ ಮೆರೆಸಿ ಬೆಲ್ಲದ ಕಟ್ಟೆ ಕಟ್ಟುವರು .
ಬೇವಿನ ಗಿಡ ಬಿಸಿಲಿನಲ್ಲಿ ಬಳಲಿ ಬಂದವರಿಗೆ ನೆರಳು ನೀಡುವುದೋ ಹಾಗೇ ಶರಣರು ಜೀವನದಲ್ಲಿ ನೊಂದು ಬೆಂದವರಿಗೆ ಕುಗ್ಗಿ ಬಸವಳಿದವರಿಗೆ ಆಶ್ರಯವಾಗಿ ನಿಂತವರು ನಮ್ಮ ಶರಣರು .
ಶಿವಭಕ್ತ ಅಲ್ಲದವರಿಗೆ ಯಾರು ಎಷ್ಟೇ ಹೇಳಿದರೂ ಅರಿವು ಆಗಲಾರದು ಎನ್ನುವ ಭಾವ
ಈ ಮೇಲಿನ ವಚನ ತಿಳಿಸುವುದು.
ಬೇವಿನ ಬೀಜ ಮೊಳಕೆ ವಡೆಯಲು ಬೆಳೆಯಲು ಅದಕ್ಕೆ ಬೆಲ್ಲದ ಕಟ್ಟೆಯನ್ನು ಕಟ್ಟಿ ಆಕಳ ಹಾಲನ್ನು ಹಾಕಿ ಸಿಹಿಯಾದ ಜೇನನ್ನು ಸುರಿದರೂ ಆ ಬೇವಿನ ಗಿಡದ ಎಲೆಗಳು ಸಿಹಿ ಆಗಲಾರವು ಅದರಲ್ಲಿ ಇರುವ ಕಹಿ ಹೋಗದು.
ಹಾಗೆಯೇ ಶರಣರ ನುಡಿಗಳು ಅವರಭಕ್ತಿ. ಅವರ ಮನಸ್ಸು ಆವರ ನೇಮ ಅವರಲ್ಲಿರುವ ಧೃಢವಾದ ಭಕ್ತಿ ಯಾರು ಎಷ್ಟೇ ಶರಣರ ಮನಕ್ಕೆ ವಿರುದ್ಧವಾದ ಕೆಲಸ ಮಾಡಿದರೂ ಅವರ ಮನವನ್ನು ಕೆಡಿಸಲು ಆಗೋದಿಲ್ಲ.
ಅವರು ಮಾಡುವ ಕರ್ಮದ ಫಲವನ್ನು ಯಾರೂ ಅಳಿಸಲಾರರು ಮತ್ತು ಹೋಗಲಾಡಿಸಲಾರರು.
ನಿಜವಾದ ದೈವ ಭಕ್ತ ನಲ್ಲದವನಿಗೆ ತನ್ನ ನಿಜದ ಅರಿವು ಆಗದೇ ಹೋಗುವುದು.ದೈವಭಕ್ತ ನಲ್ಲದವನಿಗೆ ಏನು ಹೇಳಿದರೇನು? ಅವನಿಗೂ ಧರ್ಮಕ್ಕೂ ದೂರ ಯೋಜನ!
ಬೇವಿನ ಹಣ್ಣಿನ ಸಂಬಂಧವಾಗಿ ಬಸವಣ್ಣನವರಿಗೆ ಆಸರ ಬೇಸರವೇ ಆದರೆ ಅದೇ ಬೇವಿನ ತಳಿರು ಹೂವೆಂದರೆ ಅವರಿಗೆ ಬಹಳ ಅಚ್ಚುಮೆಚ್ಚು .ಯುಗಾದಿ ಬಂತೆಂದರೆ ಅವನ್ನು ಸೇವಿಸುತ್ತಿದ್ದು, ಕಹಿಯಾದರೂ ಮೈಗೆ ಹಿತ ಎಂಬುದು ಬಲ್ಲವರ
ಸತ್ಪುರುಷರ ತಿಳುವಳಿಕೆ ಮಾತು. ಅವರ ವಚನ ಕೇಳಲು ಅಪ್ರಿಯವಾದರೂ ಬೇವಿನಂತೆ ಕಹಿಯಾದರೂ ಬಾಳಲು ಹಿತವಾದುದು .
ಅಧರಕ್ಕೆ ಕಹಿ ಉದರಕ್ಕೆ ಸಿಹಿ ಕೂಡಲಸಂಗನ ಶರಣರ ವಚನ ಬೇವ ಸವಿದಂತೆ
ನಾಲಿಗೆಗೆ ಬೇವಿನ ಎಲೆ ಕಹಿಯಾದರೂ ನಮ್ಮ ಹೊಟ್ಟೆಗೆ ಅದು ಸಿಹಿಯೇ. ನಮ್ಮ ಹೊಟ್ಟೆಯಲ್ಲಿ ಇರುವ ಅನೇಕ ರೋಗಗಳನ್ನು ಗುಣಪಡಿಸುವ ಗುಣ ಬೇವಿಗಿದೆ. ಹಾಗೆ ಶರಣರು ಆಡಿದ ಮಾತುಗಳು ನಮ್ಮ ತಿಳುವಳಿಕೆಗೆ ನಮ್ಮ ಅಜ್ಞಾನ ನಮ್ಮ ಬುದ್ದಿಗಾಗಿ ನಮ್ಮ ನಡೆಗಾಗಿ ಎಲ್ಲಕ್ಕಿಂತಲೂ ಹೆಚ್ಚಾಗಿ ನಮ್ಮ ಒಳ್ಳೆಯದ್ದಕ್ಕೆ ಆಡಿದ ಮಾತುಗಳು ಎಂದು ತಿಳಿದುಕೊಂಡು ಅರಿತುಕೊಂಡು ನಡೆದಾಗ ಬದುಕು ಸುಂದರವಾಗುತ್ತದೆ ಶರಣರು ನುಡಿದಂತೆ ನಡೆದವರು ಅವರ ನಡೆಯೇ ಅವರ ನುಡಿಯೇ ವಚನಗಳಾಗಿ ಹೊರಬಂದವು.ಶರಣ ಮಾತು
ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪವಯ್ಯಾ ನುಡಿಯಲು ಬಾರದು ನಡೆಯಲು ಬಾರದು ಲಿಂಗದೇವನೆ ದಿವ್ಯ ವೊ ಅಯ್ಯಾ ಬಡವನ ಕೋಪ ವು ಅವುಡಿಗೆ ಮ್ಭತ್ಯುವಾದಂತೆ
ಕಡೆಗೆ ದಾಂಟದು ಕಾಣಾ ಕೂಡಲಸಂಗಮದೇವ
ಶರಣರ ನುಡಿ ಮಾತು ತಪ್ಪದಂತೆ ನಡೆದುಕೊಂಡು ಬಂದಂತವರು.ಅವರ ಧೃಢವಾದ ಭಕ್ತಿ ತಪ್ಪಿದರೆ ಅದೇ ಲಿಂಗದಲ್ಲಿರುವ ಘೋರವಾದ ಹಾವು ನನ್ನನ್ನು ಕಚ್ಚುವುದು .ಕಚ್ಚಲಿ ಎನ್ನುವ ಆತ್ಮನಿವೇದನೆಯು ಎದ್ದು ಕಾಣುತ್ತದೆ .ಯಾರ ಮೇಲೆ ಕೋಪ ಮಾಡಿಕೊಂಡರೆ ಏನು ಪ್ರಯೋಜನ ವಿಲ್ಲ ಅದು ತನ್ನನ್ನೇ ಸುಟ್ಟುಕೊಳ್ಳುವುದು. ತಾನು ಮಾಡುವ ತಪ್ಪುಗಳನ್ನು ತಾವೇ ತಿದ್ದಿಕೊಳ್ಳಬೇಕು. ಎನ್ನುವ ಸತ್ಯವನ್ನು ಬಸವಣ್ಣನವರು ಬಿಂಬಿಸಿದ್ದಾರೆ.
ಕೆಂಡದ ಮಳೆ ಕರೆವಲ್ಲಿ ಉದಕ ವಾಗಿರಬೇಕು
ಜಲ ಪ್ರಳಯವಾದಲ್ಲಿ ವಾಯುವಿನಂತಿರಬೇಕು ಮಹಾಪ್ರಳಯವಾದಲ್ಲಿ ಆಕಾಶದಂತಿರಬೇಕು
ಜಗತ್ ಪ್ರಳಯವಾದಾಗ ತನ್ನ ತಾ ಬಿಡಬೇಕು
ಗುಹೇಶ್ವರನೆಂಬ ಲಿಂಗ ತಾನಾಗಿರಬೇಕು
ಅಲ್ಲಮಪ್ರಭು
ನಾವು ನೀರಾಗಿದ್ದರೆ ಎಂಥ ಕೆಂಡದ ಮಳೆ ಸುರಿದರೂ ಅದು ತಣ್ಣಗಾಗುವುದು. ಜಲಪ್ರಳಯದರೂ ನಾವು ವಾಯುವಿನಂತಿದ್ದರೆ ಅದರ ಪ್ರಕೋಪ ನಮಗೆ ತಟ್ಟದು.
ಮಹಾ ಪ್ರಳಯವಾದಲ್ಲಿ
ಆಕಾಶದಂತಿದ್ದರೆ ಅದರಿಂದ
ನಮಗಾವ ವಿಪತ್ತೂ ಸಂಬವಿಸದು. ಮುಂದಿನಮಾತುಗಳು ಗಮನಾರ್ಹ , ಜಗತ್ ಪ್ರಳಯವಾದರೆ
ನಮ್ಮನ್ನ ನಾವು ಮರೆತು ದೇವರೇ ಆಗಬೇಕು. ಅಂದರೆ ನಿರ್ಲಿಪ್ತ ಮನೋಭಾವ ರೂಡಿಸಿಕೊಂಡರೆ ಯಾವ ವಿಪತ್ತೂ ನಮ್ಮ ಬದುಕನ್ನು ಅಲ್ಲಾಡಿಸ ಲಾರವು…
ಮಾವಿನಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾನೆಂತು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ
ನಾನೆಂತು ಭಕ್ತನಪ್ಪೆನಯ್ಯ?ವಿಷಪೂರಿತವಾದ ವಿಷಪೂರಿತವಾದ ಏಕ್ಕೆಕಾಯಿ ಮಾವಿನ ಕಾಯಿ ಅಂತೆಯೆ ಕಾಣಿಸಿದರು ಹಸಿದವರಿಗೆ ತಿನ್ನಲು ಬಾರದು.ಆತ್ಮಶುದ್ಧಿ ಅಂತರಂಗದ ವೀಕ್ಷಣೆ ಮಾಡಿಕೊಳ್ಳುವ ಈ ಒಂದು ವಚನವೂ ತಿಳಿಸುತ್ತದೆ.
ಎಣ್ಣೆ ಚಿತ್ತವು ಅತ್ತಿಯ ಹಣ್ಣು ನೋಡಯ್ಯ ವಿಚಾರಿಸಿದರೇನು ಹುರುಳಿಲ್ಲವಯ್ಯ ಪ್ರಪಂಚದಲ್ಲಿ ಕೂಡಲಸಂಗಮದೇವ
ಹೊರಗೆ ಕೆಂಪಾಗಿ ಕಾಣುವ ಅತ್ತಿಯ ಹಣ್ಣಿನ ಒಳಗೆಲ್ಲ ಹೊರಮೈ ತಳುಕಿನ ಹುಳುಕಿನ ಆಡಂಬರದ ಹಣ್ಣು ತಮ್ಮ ಅಂತರಂಗ ಬಹಿರಂಗಗಳನ್ನು ನಿಜವಾಗಿ ಪ್ರತಿಫಲಿಸುವುದು ಎಂದು ಬಸವಣ್ಣನವರು ಹೇಳಿರುವರು.
ಅತ್ತಿಯ ಹಣ್ಣು ನೋಡಲು ಸುಂದರ ಕೆಂಪಗೆ ಇದ್ದರೂ ಅದರ ಒಳಗೆ ಹುಳುಗಳು ಇರುವುದು.
ಶಿವಭಕ್ತನ ಬಾಹ್ಯ ಸೌಂದರ್ಯವನ್ನು ನಾವು ಟೀಕೆ ಮಾಡದೇ ಆತನಲ್ಲಿರುವ ಆಂತರಿಕ ಭಕ್ತಿಯ ಭಾವ ಹೆಚ್ಚು ಸೌಂದರ್ಯ ತುಂಬಿರುವಂಥಹದು.ಎಂದು ತಿಳಿದುಕೊಂಡು ನಡೆದವರು ಶಿವಶರಣರು.
ಮಾಡುವ ಭಕ್ತನ ಕಾಯ ಬಾಳೆಯ ಕಂಬದಂತಿರಬೇಕು ಎನ್ನುವರು. ಬಾಳೆಗೆ ಮರುಹುಟ್ಟು ಇಲ್ಲ ಹಾಗೇ ನಿರಾಡಂಬರ ಭಕ್ತನ ಪಾಲಿಗೆ ಕರ್ಮಫಲ ಸಾಲುಕಟ್ಟಿ ಬರಬಹುದು ಆದರೆ ಅದೆಲ್ಲ ಪರಾರ್ಥ ನಿವೇದಿತ. ಅದರೊಳಗೆ ಅವನ ಸತ್ಯ ಅಷ್ಟೇ ಅಲ್ಲದೆ ಕರ್ಮಫಲ .
ಆರಾರ ಸಂಗವೇನೇನ ಮಾಡದಯ್ಯ ಕೀಡೆ ಕುಂಡಲಿಗನಾಗದೇ ಅಯ್ಯ! ಚಂದನದ ಸನ್ನಿಧಿಯಲ್ಲಿ ಪರಿಮಳ ವಾಗಿ ಬೇವು -ಬೊಬ್ಬಿಲಿ -ತರಿಯ ಗಂಧಂಗಳಾಗವೇ ?ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಿಂದ ಕರ್ಮ ನಿರ್ಮಲವಾಗದಿಹುದೇ!?
ಗಂಧದ ಮರದ ಬಳಿ ಬೆಳೆದ ಬೇವು -ಬೊಬ್ಬಲಿ-ತರಿಯ ಮುಂತಾದ ದುರ್ಗಂಧದ ಮರಗಳೂ ಸುಗಂಧಿಗಳಾಗುವವು. ಸಜ್ಜನರ ಸಹವಾಸಕ್ಕೆ ಬಂದ ದುರ್ಗುಣಿಗಳೂ ತಮ್ಮ ಕುಂದುಕೊರತೆಗಳನ್ನು ಕಳೆದುಕೊಂಡು ಸುಗುಣಿಗಳಾಗುವರು. ಎನ್ನುವ ಭಾವ ಈ ವಚನದಲ್ಲಿ ಕಂಡು ಬರುತ್ತದೆ.ಹೂವಿನಿಂದ ನಾರವೂ ಸ್ವರ್ಗ ಸೇರುವಂತೆ ಶರಣರ ಸಂಗ ಅದು ಹೆಜ್ಜೇನು ಸವಿದಂತೆ ಇರುವುದು .ಯಾವಾಗಲೂ ಒಳ್ಳೆಯ ವರ ಸಂಗ ಬಯಸೋಣ ಇನ್ನೂ ಅನೇಕ ವಚನಗಳ ಮೂಲಕ ಪ್ರಕೃತಿ ಯ. ಬಗ್ಗೆ ಹೇಳಿರುವರು
ಗಿಡ ಮರ ಬಳ್ಳಿ ಪ್ರಾಣಿ ಪಕ್ಷಿಗಳ ಬಗ್ಗೆ ಹೇಳಿ ಅದರಲ್ಲಿ ಇರುವ ಸಾರ ನಮ್ಮ ಜೀವನದಲ್ಲಿ ಹೇಗೆ ಅನ್ವಯವಾಗುವುದು ಎನ್ನುವ ಅರಿವು ಮೂಡಿಸಿದವರು ಶರಣರು..
ಎಲ್ಲಾ ಮನಸ್ಸುಗಳಿಗೆ ಹೊಸ ವರುಷದ ಶುಭಾಶಯಗಳು.
ಹೊಸ ಹೊಸ ಕನಸ್ಸು
ಹೊಸ ಬಾಳಿಗೆ ಹೊತ್ತು ತರಲಿ
ಹೊಸ ಉಲ್ಲಾಸ ಹೊಸ ಚೈತನ್ಯ ಮೂಡಿ ಬರಲಿ
ಬೇವಿನಂತೆ ಕಹಿ ಘಟನೆಗಳು ಮಾಯವಾಗಿ ಬೆಲ್ಲದಂತಾ ಸಿಹಿ ಸಿಹಿ ಮಾತುಗಳು ಹೊರ ಬರಲಿ🙏🤝🏻
–ಪ್ರೊ -ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಡಲಗಿ