ಯುಗಾದಿ ಹೊಸತನಕ್ಕೆ ನಾಂದಿ
ಹೊಸತೆಲ್ಲ ಹಳತಾಗುವದು ದಿನ ನಿತ್ಯದ ಅನುಭವ. ಕಾಲದ ಚಲನೆ ನೇರವೂ ಅಲ್ಲ. ಹಿಮ್ಮುಖವೂ ಅಲ್ಲ. ಅದು ಸುತ್ತುತ್ತಲೇ ಇರುವ ಚಕ್ರ. ಹಳತನ್ನು ಸದಾ ಹೊಸತು ಮಾಡಿಕೊಳ್ಳುವದು ನಿಸರ್ಗದ ನಡೆಯಲ್ಲಿ ಮಹತ್ವದ ಸಂದೇಶವಿದೆ. ಅದೇ ಜೀವನದ ಶ್ರದ್ದೆ. ಜೀವನೋತ್ಸಾಹ.
ಅದನ್ನು ಸಾರುತ್ತ ಬಂದಿದೆ ಯುಗದ ಆದಿ ಯುಗಾದಿ
ಯುಗಾದಿ-ಉಗಾದಿ ಹೊಸ ವರ್ಷದ ಮೊದಲ ದಿನ. ಮೊದಲ ಹಬ್ಬ. ಹೊಸ ವರುಷ ಹೊಸ ಹರುಷ ತರುವ ಹಬ್ಬ.
ಯುಗಾದಿ ನಿರ್ದಿಷ್ಟ ದೇವರ ಹಬ್ಬವಲ್ಲ. ಅಪ್ಪಟ ನಿಸರ್ಗದ ಸಾಂಸ್ಕೃತಿಕ ಹಬ್ಬ.
ಯುಗಾದಿಯಲ್ಲಿ ಪಂಚಾಗ ಶ್ರವಣ ಮತ್ತು ಬೇವು ಬೆಲ್ಲ ಹಂಚಿ ಆಸ್ವಾದಿಸುವುದು ವಿಶೇಷ. ಕಾಲವನ್ನು ಕಾಲದ ಪರಿಣಾಮವನ್ನು ಎದುರುಗೊಳ್ಳುವ ಕ್ರಿಯೆ ಕೂತೂಹಲಕರವಾಗಿದೆ. ಪಂಚಾಂಗ ಶ್ರವಣ ಅಖಂಡ ಕಾಲವನ್ನು ಖಂಡವಾಗಿ ಕಂಡುಕೊಳ್ಳವ ಹೊಸ ಪರಿ. ಬೇವು ಬೆಲ್ಲದ ಆಸ್ವಾದವು ಬದುಕಿನ ಸುಖ ದುಃಖಗಳೆರಡನ್ನೂ ಸಮವಾಗಿ ತಣ್ಣನೆಯ ಮನದಿಂದ ಸ್ವೀಕರಿಸಬೇಕಾದ ಮನೋಧರ್ಮದ ಪಾಠವಾಗಿದೆ.
ವರ್ಷದ ಮೊದಲಲ್ಲಿ ಕಷ್ಟಸುಖಗಳ ಬಗೆಗಿನ ಅರಿವನ್ನು ಜಾಗ್ರತವಾಗಿಡುವ ಪ್ರಯತ್ನ ಬಹಳ ಮುಖ್ಯವಾದದ್ದೆ. ಸದಾ ಸುಖವನ್ನು ಹಂಬಲಿಸುವದು ಹಾರೈಸುವದು ಮನುಷ್ಯನ ಜಾಯಮಾನವಾಗಿದೆ. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.
ಕನ್ನಡದಲ್ಲಿ ಮೂಲತಃ ಹೊತ್ತು ಎಂದರೆ ಸೂರ್ಯ, ತಿಂಗಳು ಎಂದರೆ ಚಂದ್ರ. ಬಳಕೆಯಲ್ಲಿ ಅವರೆಡೂ ಕಾಲವನ್ನು ಸೂಚಿಸುವ ಪದಗಳಾಗಿ ಪಲ್ಲಟಗೊಂಡಿವೆ. ಸೂರ್ಯ ಚಂದ್ರ ಕಾಲ ನಿರ್ಮಾಪಕರು. ಸೌರಮಾನದಲ್ಲಿ ಸೂರ್ಯನು ಇಪ್ಪತ್ತೇಳು ನಕ್ಷತ್ರಗಳನ್ನು ದಾಟಿ ಚಲಿಸುವ ಒಂದು ಸುತ್ತು ವರ್ಷ. ಸೂರ್ಯನು ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸುವ ದಿನ. ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ. ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು.
ವಸಂತದಲ್ಲಿ ವರ್ಷಾರಂಭ
ವಸಂತದಲ್ಲಿ ವರ್ಷಾರಂಭ ಎನ್ನುವುದೇ ತುಂಬ ಸಾರ್ಥಕವಾದ
ಔಚಿತ್ಯ ಪೂರ್ಣವಾದ ಪರಿಕಲ್ಪನೆ. ಪುರಾಣ ಕಾವ್ಯ ರೂಪಕದಲ್ಲಿ ವಸಂತ ಮನ್ಮಥನ ಸಹಚಾರಿ ಸಖ. ಕಾಳಿದಾಸನಲ್ಲಿ ವಸಂತ ಜೀವಕಾಮದ ಯೋಧ. ಪರಮಯೋಗಿ ಶಿವನ ಆಶ್ರಮದ ಮುನಿಮನಗಳನ್ನೂ ಹುಚ್ಚೆಬ್ಬಿಸಬಲ್ಲ. ಸ್ವಯಂ ಶಿವನ ಕಣ್ಣು ಅರಳಿಸಬಲ್ಲ ವಸಂತದ ಚಲುವು ಅಂಥದು! ಎಲ್ಲೆಲ್ಲೂ ಚೆಲ್ಲೂವ ಹೂವಿನ ಹೂವಿನ ಚೆಲುವೆ ಚೆಲುವು.
ಯುಗಾದಿಯಂದು ಕೆಲವೊಂದು ಕಡೆ ಕೆಲವೊಂದು ಕ್ರಿಡೆಗಳನ್ನು ಏರ್ಪಡಿಸಿರುತ್ತಾರೆ. ಕೊಂಡದಲ್ಲಿ ಬಣ್ಣದ ನೀರನ್ನು ತುಂಬಿ ಹೊಳಿಯಾಡುವದು ರೂಢಿ. ಹೀಗೆ ಮಾಡುವದರಿಂದ ಯಾವುದೇ ರೀತಿಯ ಚರ್ಮ ರೋಗಗಳು ವಾಸಿಯಾಗಿತ್ತವೆ ಎನ್ನುವ ಪ್ರತೀತಿಯು ಇದೆ. ಬೇರೆ ಬೇರೆ ಕಡೆಗೆ ಎತ್ತುಗಳನ್ನು ಸಿಂಗರಿಸು ಅವುಗಳ ಸ್ಪರ್ಧೆಯನ್ನು ಎರ್ಪಡಿಸುತ್ತಾರೆ.
ಕವಿ ಬೇಂದ್ರೆ ಹೇಳುವಂತೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೇ ಕೇಳಿ ಬರುತಿದೆ.”
–ವೀರೇಶ ಸೌದ್ರಿ, ಮಸ್ಕಿ