ಮಾತೆಂಬುದು ಜ್ಯೋತಿರ್ಲಿಂಗ
ಮಾತೆಂಬುದು ಜ್ಯೋತಿರ್ಲಿಂಗ
ಸ್ವರವೆಂಬುದು ಪರತತ್ವ
ತಾಳೋಷ್ಟ ಸಂಪುಟವೆಂಬುದು
ನಾದ ಬಿಂದು ಕಳಾತೀತ
ಗುಹೇಶ್ವರ ಶರಣರು ನುಡಿದು
ಸೂತಕಿಗಳಲ್ಲಾ ಕೇಳಾ ಮರುಳೆ.
ಶರಣರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ
ವಚನವೆಂದು ಸ್ಪಷ್ಟೀಕರಣ ನೀಡಿದ್ದನ್ನು ಅವರ
ವಚನಗಳಲ್ಲಿ ಕಾಣಬಹುದು. ಇದರ
ವಚನವೆಂದರೆ ಭಾಷೆ ಒಮ್ಮೆ ಮಾತನಾಡಿದರೆ
ಮುಗಿಯಿತು ಅದರಂತೆ ನಡೆಯಲೇ ಬೇಕು.
ಇದು ಭಾಷೆಯ ನಿಷ್ಠತೆಯನ್ನು ಸೂಚಿಸುವ
ಪದವದು. ಭಾಷೆ ತಂದೆಯಾದರೆ ಮಾತು ತಾಯಿ ಭಾವದ ಪ್ರತೀಕ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಈ ಭಾಷಾ ಸಂವಹನವೇ ವಚನಗಳಾಗಿವೆ. ಅಲ್ಲಮ ಪ್ರಭುವಿನ ಈ ವಚನದ ಮುಲಕ ಸಮರ‍್ಥನೆಯನ್ನು ಕಾಣ ಬಹುದು.
ಮಾತನಾಡುವುದೂ ಒಂದು ಕಲೆ. ಮಾತು ಕಲಾತ್ಮಕತೆಯ ಪ್ರತಿರೂಪ. ನಮ್ಮ ಪ್ರಜ್ಞೆಗೆ ದಕ್ಕುವ ಮಾತಿಗೆ ಅಗಾಧವಾದ ಶಕ್ತಿಯಿದೆ.
ಯೋಗ್ಯವಾದ ಮಾತು ಚಿಕ್ಕವರನ್ನೂ ಉನ್ನತ ಸ್ಥಾನಕ್ಕೇರಿಸುತ್ತದೆ. ಪ್ರಭುವಿನ ಭಾಷಾ ಕೌಶಲ್ಯ
ವನ್ನು ಶಬ್ದ ಮೀಮಾಂಸೆಯ ಮೂಲಕ ಕಾಣಬಹುದು.
ಪ್ರಭುವಿನ ದೃಷ್ಟಿಯಲ್ಲಿ ಭಾಷೆಯೂ ಸಂಗೀತದ ಶಕ್ತಿಯನ್ನು ಪಡೆದು ಕೊಳ್ಳುತ್ತದೆ. ಅದೇ ಮತೆಂಬುದು ಜ್ಯೋತಿರ್ಲಿಂಗ. ಜ್ಯೋತಿಯ
ಪರ‍್ಯಾಯ ಪದ ಬೆಳಕು ಜ್ಞಾನ . ಈ ಸೂಕ್ಷ್ಮ ಶರೀರದಲ್ಲಿ ಲಿಂಗ ಶರೀರ
ಅರಿವಾಗಿ ನಮ್ಮ ಚೈತನ್ಯಾವಸ್ಥೆಯಲ್ಲಿ ಭಾಷೆಗೆ ಹೊಳಪು ನೀಡುತ್ತದೆ. ಜ್ಯೋತಿರ್ಲಿಂಗ ಸ್ವರವೆಂಬುದು ಪರತತ್ವವಾಗಿದೆ. ಸಂಗೀತದ
ಮುಲಕ ವಚನಗಳನ್ನು ಹಾಡಿದ ಶರಣರು ವಚನಗಳ ಭಾಷೆಯ ಮೂಲಕ ಸ್ವರ ಸಾಮರಸ್ಯವನ್ನು ಗಟ್ಟಿಯಾಗಿಸಿದರು.
ಎರಡೆಂಬತ್ತು ಕೋಟಿ ವಚನವ ಹಾಡಿ
ಹಲವ ಹಂಬಲಿಸಿತ್ತೆನ್ನಮನ
ಪ್ರಭು ವಚನ ಸಂಗೀತದ ಭಾಷೆಯನ್ನು ಹಾಡಾ
ಗಿಸುವ ಪರಿಕ್ರಮದಲ್ಲಿ ಗೌರವಿಸುತ್ತಾನೆ. ಕಾವ್ಯಾತ್ಮಕ ಭಾಷೆಯಲ್ಲಿ ಗುಹೇಶ್ವರನನ್ನು ಅಪ್ಪಿಕೊಳ್ಳುವ ಪ್ರಯತ್ನ ವಿದಾಗಿದೆ. ಮದ್ದಳೆಕಾರನಾದ ಅಲ್ಲಮನು ಪರತತ್ವ ಭಾಷಾ ವಿವೇಚನೆಯಲ್ಲಿ ತಾಳ್ವೋಷ್ಟ ಸಂಪುಟವೆಂದು ಸಂಗೀತದ ಗತಿಯಲ್ಲಿ
ಕ್ಠಥಾತ್ಮಕ ವಣ೯ನೆ ನೀಡುವ ಮಾತಿನ ಕಲಾತ್ಮಕತೆಯನ್ನು ಹೆಚ್ಚಿಸುವ ಭಾವ ಪ್ರಕಾರದ ಕಲೆ
ಇದಾಗಿದೆ. ಮಾತು ಮತ್ತು ಭಾಷೆಯ ಸಂಗಮಾವಾದ ಈ ತತ್ವದ ಹಾಡು ಲಯ ಪ್ರಾಧಾನ್ಯತೆಯ ಮೂಲಕ ತನ್ನತನದ ತೀವ್ರ ತೆಯನ್ನು
ಕಟ್ಟಿಕೊಡುತ್ತದೆ. ವಚನಗಳ ಪರಿ ಭಾಷೆಯಲ್ಲಿ ಸಂಗೀತದ ಸ್ವರವಿದೆ. ನಾದವಿದೆ ಲಯವಿದೆ.
ಭಾಷೆಯೆಂಬ ಬೆಳಗಿನ ಕಾವ್ಯದಲ್ಲಿ ಸ್ವರಗಳೇ ಪರತತ್ವಗಳಾಗಿವೆ. ಆತ್ಮಲಿಂಗ ಪ್ರಭೆಯಲ್ಲಿ
ಅನುಭಾವಿಕ ಹಾಡನ್ನಾಗಿಸುವ ಸೃಜನ ಮನಸ್ಥಿಯದು. ಹೀಗಾಗಿ ಅಲ್ಲಮ ತನ್ನ ಭಾಷಾ ವಿನಯವಂತಿಕೆಯಲ್ಲಿ ಶರಣರ
ಸೂಳ್ನುಡಿಗಳು ಸೂತಕಿಗಳಲ್ಲ ಎನ್ನುವ ವಿವೇಚನೆಯು ತನ್ನ ಸಮಕಾಲೀನ ಶರಣರನ್ನು ಹಾಡಿ ಹೊಗಳುವ ಶರಣ ಭಾವವದು.” ಮಾತೆಂಬುದು ಜ್ಯೋತಿರ್ಲಿಂಗ ”
ಕಾವ್ಯದ ಒಡಲಲ್ಲಿ ಭಾಷೆಯ ಪ್ರಣವದ ಅರ್ಥ ಅಡಗಿದೆ..
ನಾದ ಬಿಂದು ಕಳಾತೀತ
ಶಿವ ವ್ಯಾಪಿಯಾಗಿರುವ ಈ ಕಾಯದಲ್ಲಿ ಹುಟ್ಟುವ ಮಾತು ಮತ್ತು ಮನಸ್ಸಿನ ಸಂಯೋಗದ ಸಾರವಾಗಿದೆ.
-ಡಾ.ಸರ್ವಮಂಗಳ ಸಕ್ರಿ
ಕನ್ನಡ ಉಪನ್ಯಾದಕರು
ರಾಯಚೂರು