ಸ್ವಾಗತ ಕೋರಿದೆ…
ಹೊಂದಳಿರ ಚಿಗುರಿಸಿ ಮಾಮರಕೆ
ಬಂದನದೋ ವಸಂತ ನಳನಳಿಸಿ
ಚಿಗುರಿದೆಲೆಯ ಮರೆಯ ಮೊಗ್ಗುಗಳೆಲ್ಲ
ಅರಳಿ ಬಿರಿದಿವೆ ಹೂ ಘಮಘಮಿಸಿ..
ಮುತ್ತಿವೆ ಮರಿದುಂಬಿಗಳು ಝೇಂಕರಿಸಿ
ಕುಸುಮಗಳ ಮಕರಂದ ಈಂಟಲು
ಸವಿದ ಮತ್ತಿನಲಿ ಮಾಡಲು ಗುಂಯ್ ಗಾನ
ಗಾಳಿಗೆ ತೂಗಿದೆ ಮರ ನೀಡುತ ತಾನ..
ಹೊಂಬಣ್ಣದ ಚಿತ್ತಾರದ ವಸ್ತ್ರವಿದೇನೋ
ದೇವನ ಸೃಷ್ಟಿಯ ವಿಸ್ಮಯವಿದೇನೋ. ಕುಸುಮಿತ ವೃಕ್ಷದ ಬಿಂಕವಿದೇನೋ
ವಸುಂಧರೆಯ ಕುಡಿಯ ಸಿಂಗಾರವಿದೇನೋ…
ಚೈತ್ರದ ಚೆಲುವನು ತನ್ನೊಳಗಿರಿಸಿ
ಕೋಗಿಲೆ ಕೂಜನ ಸುತ್ತಲೂ ಹರಿಸಿ
ಸ್ವಾಗತ ಕೋರಿದೆ ಸೌಗಂಧ ಸುರಿಸಿ
ಯುಗಾದಿ ಪರ್ವಕೆ ಬಾಗುತ ನಮಿಸಿ..!
ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ