ಜೇಡರ ದಾಸಿಮಯ್ಯ
ಜೇಡರ ದಾಸಿಮಯ್ಯನವರು 11ನೆಯ ಶತಮಾನದ ಉತ್ತರಾರ್ಧ ಹಾಗೂ 12ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಹಿರಿಯ ಶಿವಶರಣರು ಹಾಗೂ ಅದ್ಯ ವಚನಕಾರರು, ಶಂಕರದಾಸಿಮಯ್ಯನವರ ಸಮಕಾಲೀನರು, ಸುರಪುರ ತಾಲ್ಲೂಕಿನ ಮುದನೂರು ಇವರ ಜನ್ಮಸ್ಥಳ, ಇವರಿಗೆ ಮುದನೂರ
ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳೆಂದೂ ಇಬ್ಬರೂ ಒಬ್ಬನೇ ಎಂದೂ ವಾದವಿವಾದಗಳೂ ಇವೆ. ರಾಮನಾಥ ಇವರ ಆರಾಧ್ಯದೈವ, ದಾಸಿಮಯ್ಯನವರ ಪತ್ನಿ ದುಗ್ಗಳೆಯು ಶ್ರೇಷ್ಠ ಶಿವಭಕ್ತಿಯಾಗಿದ್ದು ಇವರಿಬ್ಬರ ದಾಂಪತ್ಯ ಸಾಮರಸ್ಯದಿಂದ ಕೂಡಿತ್ತು. ನೇಯ್ಗೆ ಈತನ ಕಾಯಕ, ಒಮ್ಮೆ ದಾಸಿಮಯ್ಯನವರ ಶ್ರೇಷ್ಠ ಭಕ್ತಿಗೆ ಮೆಚ್ಚಿ ಶಿವ ಜಂಗಮ ರೂಪದಲ್ಲಿ ಬಂದು ನೇಯ್ದ ವಸ್ತವನ್ನು ಕಾಣಿಕೆಯಾಗಿ ಪಡೆದು ತವನಿಧಿಯನ್ನು ಇವನಿಗೆ ಕರುಣಿಸಿದನೆಂದು ಪ್ರತೀತಿ.
ಬಸವಣ್ಣ ಇವನ ಭಕ್ತಿಯನ್ನು ಕುರಿತು ಹೇಳುವಾಗ ‘ಭಕ್ತಿ ಎಂತಹುದಯ್ಯ ದಾಸಿಮಯ್ಯ ಮಾಡಿದಂತಹುದಯ್ಯ ಎಂದು ಹೇಳಿದ್ದಾರೆ. ಅಲ್ಲದೆ ದಾಸಿಮಯ್ಯನ ಆದರ್ಶ ದಾಂಪತ್ಯವನ್ನು ಹೊಗಳಿದ್ದಾರೆ. ದಾಸಿಮಯ್ಯ ತನ್ನ ವಚನಗಳಲ್ಲಿ ತನಗಿಂತ ಹಿಂದೆ ಇದ್ದಿರಬಹುದಾದ ಅಥವಾ ಸಮಕಾಲೀನರಾಗಿದ್ದ ಡೋಹರ ಕಕ್ಕಯ್ಯ ಮಾದರ ಚೆನ್ನಯ್ಯ, ಕುಂಬಾರ ಗುಂಡಯ್ಯ, ಕೆಂಬಾವಿಯ ಭೋಗಣ್ಣ, ಸಮಗಾರ ಹರಳಯ್ಯ ಮೊದಲಾದ ವಚನಕಾರರನ್ನು ಸ್ಮರಿಸಿದ್ದಾನೆ. ಇವನ ವಿಷಯ ಬಸವಣ್ಣನವರ ವಚನಗಳು, ಬಸವಪುರಾಣ, ಶಿವತತ್ವ ಚಿಂತಾಮಣಿ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ ಮೊದಲಾದ ಗ್ರಂಥಗಳಲ್ಲಿ ಸ್ವಲ್ಪ ಮಟ್ಟಿಗೆ ನಿರೂಪಿತವಾಗಿವೆ. ಇವನ ಜೀವನ ಚರಿತ್ರೆಯನ್ನೇ ಪೂರ್ಣವಾಗಿ ಒಳಗೊಂಡು ರಚಿತವಾದ ಗ್ರಂಥಗಳಲ್ಲಿ ದೇವ ಕವಿಯ ದೇವಾಂಗಪುರಾಣ (ಸಂಸ್ಕೃತ), ಇದನ್ನೇ ಕನ್ನಡಕ್ಕೆ ಅನುವಾದಿಸಿದ ಅಯ್ಯಪ್ಪನ ದೇವಾಂಗಪುರಾಣ, ವಿರೂಪಾಕ್ಷದೇಶಿಕನದೇವರ ದಾಸಿಮಯ್ಯನ ಪುರಾಣ ಮುಖ್ಯವಾದವುಗಳು.
ಈತ ಅನೇಕ ಪವಾಡಗಳನ್ನು ಮೆರೆದನೆಂದೂ ಪ್ರತೀತಿ. ಪೊಟ್ಟಲಕೆರೆಯಲ್ಲಿ ಜೈನರನ್ನು ವಾದದಲ್ಲಿ ಸೋಲಿಸಿದ್ದು. ರಾಣಿ ಸುಗ್ಗಲೆಗೆ ಶಿವದೀಕ್ಷೆ ಕೊಟ್ಟದ್ದು, ಘಟಸರ್ಪವನ್ನು ಶಿವಲಿಂಗಮಾಡಿ ಪೊಟ್ಟಲ ಕೆರೆಯಲ್ಲಿ ಪ್ರತಿಷ್ಠಾಪಿಸಿದ್ದು ಈತ ಮೆರೆದನೆನ್ನಲಾದ ಮುಖ್ಯ ದಾಸಿಮಯ್ಯನ 142 ವಚನಗಳು ದೊರಕಿವೆ. ‘ರಾಮನಾಥ’ ಎಂಬುದು ಇವನ ವಚನಗಳ ಅಂಕಿತ. ಇವುಗಳಲ್ಲಿ ಭಕ್ತಿಯ ಮೇಲೆಯನ್ನೂ ತತ್ತ್ವದ ಆಳವನ್ನೂ ಅರಿಯಬಹುದಾಗಿದೆ. ಈ ವಚನಗಳಲ್ಲಿ ಕಂಡುಬರುವ ಆಳವಾದ ಅರ್ಥ ಭಾವ, ಧ್ವನಿ, ಈತ ಒಬ್ಬ ಉತ್ತಮ ವಚನಕಾರನೆಂಬುದಕ್ಕೆ ಸಾಕ್ಷಿಯಾಗಿವೆ. ಪರಮಾತ್ಮನ ಸ್ವರೂಪ, ಪರಮಾತ್ಮ ಜೀವಾತ್ಮರಿಗಿರುವ ಸಮ್ಯಕ್ ಸಂಬಂಧ, ಮೋಕ್ಷಸ್ವರೂಪ, ಸಯೋಗ್ಯ ಗುರುವಿನ ಲಕ್ಷಣ, ಭಕ್ತಾಭಿಮಾನ, ದಾಸ್ಯಭಾವ, ಸದುರ್ವಣಾಭಾವ, ಧರ್ಮ, ನೀತಿ ಮೊದಲಾದ ವಿಷಯಗಳು ಇವನ ವಚನಗಳಲ್ಲಿ ಚೆನ್ನಾಗಿ ಪ್ರತಿಪಾದಿತವಾಗಿದೆ. ತನ್ನ ಅನುಭವಕ್ಕೆ ನಿಲುಕದ ಯಾವುದೇ ಸಂಗತಿಯನ್ನು ಈತ ಹೇಳಹೋಗಿಲ್ಲ. ಯಾವುದೇ ಅನುಭವವು ಸಹೃದಯರಿಗೆ ತಲುಪುವಂತೆ ಉಪಮೆ-ರೂಪಕಾದಿಗಳ ಸಹಾಯಗಳಿಂದ ಹೇಳುವ ರೀತಿ ಸೋಪಜ್ಞತೆಯಿಂದ ಕೂಡಿದೆ. ಭಾಷೆಯಲ್ಲಿ ಸರಳತೆ ಕಂಡುಬಂದರೂ ಭಾವದಲ್ಲಿ ಅರ್ಥ ಶ್ರೀಮಂತಿಕೆ ಎದ್ದು ಕಾಣುತ್ತದೆ.
ಮಾರಿಯ ಪೂಜೆ, ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯ್ತುಂಬ ಕ್ರೂರ ಕರ್ಮಿಗಳನವರ ಶಿವಭಕ್ತರೆನಬಹುದೇ ಈಶನ ಶರಣರು ವೇಶಿಯ ಹೋದಡೆ ಮಿಸಲೋಗರವ ಹೊರಗಿರಿಸಿದ ಹಂದಿ ಮೂಸಿನೋಡಿದಂತೆ, ಸತಿಯರ ಸಂಗವನ್ನು ಅತಿಶಯದ ದಾಸ್ಯವನ್ನು ವೃದ್ಧಿಗೀಶ್ವರನ ಪೂಜೆಯನ್ನು ಅರಿವುಳ್ಳದೆ ಹೆರರ ಕೈಯಿಂದ ಮಾಡಿಸುವರೆ ? ಇಂಥ ಕೆಲವು ವಚನಗಳಲ್ಲಿ ಸಮಾಜ ವಿಮರ್ಶೆ ಕಟುವಾಗಿ ವಿಡಂಬನಾತ್ಮಕವಾಗಿ ನಿರೂಪಿತವಾಗಿದೆ.
ಹಸಿವಿಲ್ಲದ ಬೊಂಬೆಗೆ ತೃಷೆಯಿಲ್ಲದ ನೀರೆರೆದು ಮಸವಿಲ್ಲದ ಮಾತ ಮನದಲ್ಲಿ ಹೇಳಿ ಹೆಸರಿಲ್ಲದೆ ಕರೆದರೆ ಓ ಎಂಬವ ನೀನೋ ;ಎಣ್ಣೆಇದ್ದು ಎಳ್ಳು ನೆನೆಯದ ಭೇದವ, ಕಿಚ್ಚಿದ್ದು ಕಲ್ಲು ಸಿಡಿಯದ ಭೇದವ, ಕಾಮವಿದ್ದು ಕನ್ನೆಯನನುಭವಿಸದ ಭೇದವ, ಪರವಿದ್ದೂ ಪ್ರಾಣನ ಪ್ರಕೃತಿಯರಿಯದ ಭೇದವ – ಈ ಮೊದಲಾದ ಕೆಲವು ವಚನಗಳಲ್ಲಿ ಬೆಡಗಿನ ವಚನಗಳ ಶೈಲಿ ಕಂಡುಬರುತ್ತವೆ. ಎಳ್ಳು ಇಲ್ಲದ ಗಾಣದಲ್ಲಿ ಎಣ್ಣೆಯುಂಟೇ; ಜಳ್ಳ ತೂರಿದಲ್ಲಿ ಬತ್ತವುಂಟೇ; ಹಂದಿ ಶ್ರೀಗಂಧವಪೂಸಿದರೇನು ಗಂಧರಾಜನಾಗಬಲ್ಲುದೇ; ಮಠದೊಳಗಣ ಬೆಕ್ಕು ಇಲಿಯ ಕಂಡುಪುಟ ನೆಗೆದಂತೆ; ಕತ್ತೆ ಬಲ್ಲುದೆ ಕತ್ತುರಿಯ ವಾಸನೆಯ, ಜ್ವರವಿಡಿದ ಬಾಯಿಗೆ ನೊರೆವಾಲು ಒಲಿವುದೇ; ಕಡೆಗೀಲಿಲ್ಲದ ಬಂಡಿ ಹೊಡೆಗೆಡುವುದು ಮಾಂಬುದೇ ಈ ಮೊದಲಾದ ಮಾತುಗಳಲ್ಲಿ ಆಡುನುಡಿಯ ಸೊಬಗನ್ನೂ ಸೊಗಸನ್ನು ಕಾಣಬಹುದು.
ದಾಸಿಮಯ್ಯನ ವಚನಗಳ ಪ್ರಭಾವ ಮುಂದಿನ ಇಡೀ ವಚನ ಸಾಹಿತ್ಯದ ಮೇಲೆ ಆಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ, ಬಸವಣ್ಣನವರು ಇವನಭಾವವನ್ನೂಅನುಭಾವವನ್ನೂ ಅನುಸರಿಸಿದ್ದಾರೆ. ಅಲ್ಲಮಪ್ರಭು, ಅಕ್ಕಮಹಾದೇವಿ, ಸರ್ವಜ್ಞ ಮೊದಲಾದ ವಚನಕಾರರು ಈತನ ಪ್ರಭಾವಕ್ಕೊಳಗಾಗಿದ್ದಾರೆ. ಹೀಗೆ ಒಂದು ಸಾಹಿತ್ಯ ಪ್ರಕಾರದ ಆದ್ಯ ಪ್ರವರ್ತಕನಾಗಿ ಉತ್ತಮ ವಚನಗಳನ್ನು ನೀಡಿ ಶ್ರೇಷ್ಠ ವಚನಾಕಾರನೆಂಬ ಬಿರುದಿಗೆ ದಾಸಿಮಯ್ಯ ಪಾತ್ರನಾಗಿದ್ದಾನೆ.
–ಪ್ರೊಸಾವಿತ್ರಿ ಮಹದೇವಪ್ಪ ಕಮಲಾಪೂರ
ಮೂಡಲಗಿ