ಕಾಯಕದ ಮಹತ್ವ ತಿಳಿಸಿದ ಮಹಾ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ.

 

ಕಾಯಕದ ಮಹತ್ವ ತಿಳಿಸಿದ ಮಹಾ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ.


“ ಐನಸ್ಟೀನ ಅವರು – ಹೇಳುವಂತೆ “ಧರ್ಮ ರಹಿತ ವಿಜ್ಞಾನ ಕುಂಟು, ವಿಜ್ಞಾನ ರಹಿತ ಧರ್ಮ ಕುರುಡು”. ಅಂದರೆ ಧರ್ಮದ ನೀತಿ ನಿಯಮಗಳು, ವಿಧಿ ನಿಷೇಧಗಳು ವೈಚಾರಿಕ ಹಿನ್ನೆಲೆಯಿದ್ದಾಗ ಮಾತ್ರ ಆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಅದೇ ರೀತಿ ಬಸವ ಯುಗ ವೈಚಾತರಿಕ ತಳಹದಿಯ, ಸಾತ್ವಿಕ ನೆಲೆಗಟ್ಟಿನ ಮೇಲೆ ನಿರ್ಮಾಣವಾದ ವಿಜ್ಞಾನ ಸಹಿತ ಅಂತರಂಗದ ಅರಿವಿನ ಅಮೃತದ ಫಲವಾದ ಸತ್ಯವನ್ನು ಪ್ರತಿಪಾದಿಸುವ ಜನಪರ ಧರ್ಮವಾಗಿತ್ತು. ಆದ್ದರಿಂದ ವಚನ ಸಾಹಿತ್ಯವು ಸಾರ್ವಕಾಲಿಕ ಸತ್ಯವಾಗಿ ಮೂಡಿಬಂದಿದೆ. “ ಹಸಿವು ಮುಕ್ತ ಸಮಾಜಕ್ಕೆ ಬಸವಾದಿ ಶರಣರು ಕಂಡುಕೊಂಡ ದಿವ್ಯ ಮಂತ್ರ ದಾಸೋಹ ಮತ್ತು ಕಾಯಕತತ್ವ. ಇವು ಇಂದಿಗೂ ಜಗಕೆ ಮಾದರಿಯಾಗಿವೆ.

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ,
ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ
ಆಸೆ ಎಂಬುದು ಭವದ ಬೀಜ
ನಿರಾಸೆಎಂಬುದು ನಿತ್ಯ ಮುಕ್ತಿ
ಉರಿಲಿಂಗಪೆದ್ದಿಗಳರಸರಲ್ಲಿ ಸದರವಲ್ಲ ಕಾಣವ್ವ ||

ಉರಿಲಿಂಗ ಪೆದ್ದಿ ಶರಣರು ನಿತ್ಯ ಕಾಯಕ ವಿಲ್ಲದವರು ಶರಣರಲ್ಲ ಎಂದು ಸಾರಿ ಹೇಳಿದ್ದಾರೆ. ಅಂದರೆ ಶರಣರಿಗೆ ಕಾಯಕವು ವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಆತ್ಮವಿಶ್ವಾಸವನ್ನು ಕೊಡುತ್ತದೆ. ಶರಣರು ಯಾರ ಹಂಗಿನಲ್ಲೂ ಇರುವವರಲ್ಲ. ಅತಿಯಾಸೆಗೂ ಹಾತೊರೆದವರಲ್ಲ. ಭಕ್ತಿಯಿಂದಲೇ ಸತ್ಯ ಶುದ್ಧ ಕಾಯಕದ ಮೂಲಕ ಮುಕ್ತಿ ಮಾರ್ಗ ಕಂಡುಕೊಂಡವರು.

ಇಷ್ಟಲಿಂಗ ಗುರುವಿನ ಹಂಗು,
ಚಿತ್ತ ಕಾಮನ ಹಂಗು,
ಪೂಜೆ-ಪುಣ್ಯಮಹಾದೇವನ ಹಂಗು;
ಎನ್ನ ದಾಸೋಹ ಆರ ಹಂಗೂಇಲ್ಲ.
ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವೆ,
ಕಣ್ಣಿಯ ಮಾಡಬಲ್ಲಡೆ ಬಾ, ಎನ್ನತಂದೆ

ನುಲಿಯ ಚಂದಯ್ಯ ಶರಣರು ನನ್ನ ದಾಸೋಹ ಯಾರ ಹಂಗೂ ಇಲ್ಲ ಎಂದು ನಿರ್ಭಿಡೆಯಿಂದ ಹೇಳಿದ್ದಾರೆ. ಪರಮಾತ್ಮನನ್ನೆ ಕಣ್ಣಿಯ ಮಾಡಬಲ್ಲಡೆ ಬಾಎನ್ನ ತಂದೆ ಎಂದು ಪ್ರೀತಿಯಿಂದ ಕರೆದಿದ್ದಾರೆ. ಅಂದರೆ ಕಾಯಕದಿಂದಲೇ ಮುಕ್ತಿ ಎಂಬುದನ್ನು ಜಗಕ್ಕೆ ಸಾರಿದ್ದಾರೆ.

ಅಮರೇಶ್ವರ ಲಿಂಗವಾಡೂ ಕಾಯಕದೊಳು”ಎಂದು ದೇವರಿಗೂ ಕಾಯಕ ತತ್ವದ ಮಹತ್ವವನ್ನು ತಿಳಿಸಿದ ಶರಣ ದಂಪತಿಗಳು ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯನವರು. ಇಡೀ ಜಗತ್ತಿಗೆ “ಕಾಯಕವೇ ಕೈಲಾಸ”ವೆಂಬ ಅದ್ವಿತೀಯ ತತ್ವವನ್ನು ತಿಳಿಸಿದ ಮೊದಲಿಗರು ಶರಣೆ ಆಯ್ದಕ್ಕಿ ಲಕ್ಕಮ್ಮನವರು.

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ “ಯರಡೋಣಿ”ಎಂಬ ಗ್ರಾಮದಲ್ಲಿ ಬಸವಣ್ಣನವರ ಸಮಕಾಲೀನರಾದ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ದಂಪತಿಗಳು ಯರಡೋಣಿ ಗ್ರಾಮಕ್ಕೆ ಸಮೀಪವಿದ್ದ ಗುಡಗುಂಟಿ ಗ್ರಾಮಲ್ಲಿದ್ದ “ಗುಡುಗುಂಟಿ ಅಮರೇಶ್ವರನ ಸೇವೆಯಲ್ಲಿ ನಿರತರಾಗಿದ್ದರು. ಬಸವಣ್ಣನವರ ದಾಸೋಹ ಮತ್ತು ಕಾಯಕ ಸೇವೆಯನ್ನು ಅರಿತ ಮಾರಯ್ಯ ದಂಪತಿಗಳು ಅವರನ್ನು ಕಾಣುವ ಹಂಬಲದಿಂದ ಕಲ್ಯಾಣಕ್ಕೆ ಬಂದು ಅಲ್ಲಿನ ಮಹಾಮನೆಯಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

‘ಆಯ’ಅಂದರೆ ಕೂಲಿಮಾಡಿ ಬಂದ ಆದಾಯ. ಹಾಗಾಗಿ ಆಯದಿಂದ ಬಂದ ಅಕ್ಕಿಯಿಂದ ದಾಸೋಹ ನಡೆಸುತ್ತಿದ್ದ ದಂಪತಿಗೆ “ಆಯ್ದಕ್ಕಿ”ಎಂಬುದು ಅನ್ವರ್ಥಕ ನಾಮವಾಯಿತು. ಶರಣರೆಲ್ಲರೂ ಅವರನ್ನು ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮ ಎಂದೇ ಗುರುತಿಸುತ್ತಿದ್ದರು. “ಮಾರಯ್ಯಪ್ರಿಯಅಮರೇಶ್ವರಲಿಂಗ”ವಚನಾಂಕಿತದಿಂದ ಬರೆದ 25 ವಚನಗಳು ಇದುವರೆಗೂ ಲಭ್ಯವಾಗಿವೆ. ಮತ್ತು ಆಯ್ದಕ್ಕಿ ಮಾರಯ್ಯನವರ 32 ವಚನಗಳು ಸಂಖ್ಯೆಯಲ್ಲಿ ಕಡಿಮೆ ಎನಿಸಿದರೂ ಕಾಯಕತತ್ವ ಸಿದ್ಧಾಂತಗಳನ್ನು ಮೌಲಿಕವಾಗಿ ಬೆಳಕಿಗೆ ತರುವುದರ ಮೂಲಕ ಅರ್ಥಪೂರ್ಣವಾಗಿವೆ. ಅವುಗಳಲ್ಲಿ ಕಾಯಕತತ್ವ ನಿಷ್ಠೆ, ಸಮಯ ಪ್ರಜ್ಞೆಯಂತಹ ದಿಟ್ಟ ಗುಣಗಳನ್ನು ಕಾಣಬಹುದು. ಕಲ್ಯಾಣಕ್ರಾಂತಿಯ ಆಶಯಗಳನ್ನು ಹೊತ್ತ ನೈಜವಿಚಾರಗಳು ಇಲ್ಲಿವೆ. ಅದಕ್ಕಾಗಿಯೇ ಆಯ್ದಕ್ಕಿ ಮಾರಯ್ಯ ಮತ್ತು ಆಯ್ದಕ್ಕಿ ಲಕ್ಕಮ್ಮನವರನ್ನು “ಕಾಯಕನಿಷ್ಠೆಯ ರಾಯಭಾರಿಗಳು”ಅಂತ ಅವರನ್ನು ಕರೆಯಬಹುದು.

ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತ ಶುದ್ಧದಲ್ಲಿ ಕಾಯಕವಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದದತ್ತ ಲಕ್ಷಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯನ್ನುಳ್ಳಕ್ಕರ.

ಕಾಯಕಕ್ಕೆ ಸತ್ಯ ಶುದ್ಧದ ಕಲ್ಪನೆಯನ್ನು ಕೊಟ್ಟ ಆ ಕಾಯಕದ ಮೂಲಕ ವಡತನವನ್ನು ಓಡಿಸಬಹುದು ಎಂದು ಸಾರಿದವರಲ್ಲಿ ಮೊದಲಿಗರು ಆಯ್ದಕ್ಕಿ ಲಕ್ಕಮ್ಮನವರು.

ಕಾಯಕ ನಿಂದಿತ್ತು ಹೋಗಾ ಎನ್ನಾಳ್ದನೆ
ಭಾವ ಶುದ್ಧವಾಗಿ ಮಹಾ ಶರಣರ
ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚಯಿಸಿ ಮಾಡಬೇಕು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯ ||

ಎಂದು ಪ್ರೀತಿಯಿಂದ ಕರ್ತವ್ಯದ ಸಮಯ ಪ್ರಜ್ಞೆಯ ಜೊತೆಗೆ ಧೃಢ ಸಂಕಲ್ಪದ ಪ್ರಜ್ಞೆಯನ್ನು ತಿಳಿಸಿದವರು ಲಕ್ಕಮ್ಮನವರು.

ಅಂಗಕ್ಕೆ ಬಡತನವಲ್ಲದೆ | ಮನಕ್ಕೆ ಬಡತನವುಂಟೆ?
ಬೆಟ್ಟ ಬಲ್ಲಿತ್ತೆಂದಡೆ |
ಉಳಿಯ ಮೊನೆಯಲ್ಲಿ ಬಡತನವಿದ್ದಡೆ | ಒಡೆಯದೆ?
ಘನ ಶಿವಭಕ್ತರಿಗೆ ಬಡತನವಿಲ್ಲ |
ಸತ್ಯರಿಗೆ ದುಷ್ಕರ್ಮವಿಲ್ಲ ಎನಗೆ ಮಾರಯ್ಯಪ್ರಿಯ |
ಅಮರೇಶ್ವರ ಲಿಂಗ ವುಳ್ಳನ್ನಕ್ಕರ ಆರಹಂಗಿಲ್ಲ | ಮಾರಯ್ಯ

ಪ್ರಸ್ತುತ ಈ ವಚನದಲ್ಲಿ ಲಕ್ಕಮ್ಮನವರು ‘ಕಾಯಕಭಕ್ತಿ’ಯ ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದಾರೆ. ಭಕ್ತಿಯಿಲ್ಲದ ಕಾಯ ಮತ್ತು ಕಾಯಕವಿಲ್ಲದ ಕಾಯ ಅವರಿಗೆ ಅರ್ಥಹೀನ. ಭಕ್ತಿಯಿಂದ ಅಂಗದಿಂದ ನಿಶ್ಚೈಸಿ ಅಂದರೆ ಧೃಢ ಸಂಕಲ್ಪದಿಂದ ಮಾಡುವ ಕಾಯಕದಿಂದ ಮಾತ್ರವೇ ಶಕ್ತಿಪ್ರಾಪ್ತವಾಗುತ್ತದೆ. ಭೌತಿಕ ಅಂಗಕ್ಕೆ ಬಡತನವಿರಬಹುದು. ಆದರೆ ಮನಸ್ಸಿಗೆ ಬಡತನವಿರಬಾರದು. ಬಾಹ್ಯದೇಹದಿಂದ ನಮ್ಮ ಶಕ್ತಿಗೋಚರವಾಗುತ್ತದೆ. ಆದರೆ ಮಾಡುವ, ನೀಡುವ ಮತ್ತು ದಾಸೋಹ ಕೈಂಕರ್ಯ, ಅಂತರಂಗದ ಅರಿವಿನಿಂದ ಗೋಚರವಾಗುವುದನ್ನು ಇಲ್ಲಿ ಲಕ್ಕಮ್ಮನವರು ನಿರೂಪಿಸಿದ್ದಾರೆ.

ಆಯಗಾರರು ಅಂದರೆ ಕಾಯಕ ವರ್ಗದವರ ಒಗ್ಗಟ್ಟನ್ನು ಮತ್ತು ಅವರ ಆತ್ಮಶಕ್ತಿಯನ್ನು ತಿಳಿಸುವ ವಚನವೆಂದು ಅನಿಸುತ್ತದೆ. ಮೇಲ್ವರ್ಗದವರು ಕೆಳ ವರ್ಗದ ಆಯಗಾರರನ್ನು ಶೋಷಣೆ ಮಾಡುತ್ತಾರೆ. ಶೋಷಣೆ ಮಾಡುವವರನ್ನು ಬಲಿಷ್ಠ ಬೆಟ್ಟದ ಉದಾಹರಣೆಯೊಂದಿಗೆ ತಿಳಿಸುತ್ತಾರೆ ಲಕ್ಕಮ್ಮನವರು. ಶೋಷಣೆ ಮಾಡುವವರು ಎಷ್ಟೇ ದೊಡ್ಡದಾದ ಮತ್ತು ಬಲಿಷ್ಠವಾದ ಬೆಟ್ಟದಂತಿದ್ದರೂ ಕೂಡ ಆಯಗಾರರೆಂಬ ಉಳಿಯ ಮೊನೆಯಿಂದ ಅದನ್ನು ಕರಗಿ ಸಿಬಿಡಬಹುದು. ಅಂತೆಯೇ ಬಲಿಷ್ಠವಾದ ದೇಹವಿದ್ದರೂ ಕೂಡ ಮನಸ್ಸಿಲ್ಲದೆ ಮಾಡುವ ಕಾಯಕ ಮತ್ತು ದಾಸೋಹ ವ್ಯರ್ಥವಾಗುವುದು ಎನ್ನುವುದರ ಮೂಲ ಆಶಯ ಈ ವಚನ. ಇದರ ಮೂಲಕ ಶೋಷಿತ ವರ್ಗದವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಪ್ರಯತ್ನ ಮಾಡುತ್ತಾರೆ ಲಕ್ಕಮ್ಮನವರು.

ಕ್ರಿಯಾ ಮಥನವಿಲ್ಲದೆ ಕಾಣ ಬಂದುದೇ ಇಕ್ಷುವಿನೊಳಗಣ ಮಧುರ
ಕ್ರಿಯಾ ಮಥನವಿಲ್ಲದೆ ಕಾಣ ಬಂದುದೇ ತಿಲದೊಳಗಣ ತೈಲ
ಕ್ರಿಯಾ ಮಥನವಿಲ್ಲದೆ ಕಾಣ ಬಂದುದೇ ಕ್ಷೀರದೊಳಗಣ ತುಪ್ಪ
ಕ್ರಿಯಾ ಮಥನವಿಲ್ಲದೆ ಕಾಣ ಬಂದುದೇ ಕಾಷ್ಠದೊಳಗಣ ಅಗ್ನಿ
ನಮ್ಮ ಗುಹೇಶ್ವರ ಲಿಂಗವ ತನ್ನೊಳರಿದೆನೆಂಬ ಮಹಾಂತಂಗೆ
ಸತ್ಕ್ರಿಯಾಚರಣೆಯೇ ಸಾಧನೆ ಕಾಣಿಭೋ ||

ಅಲ್ಲಮ ಪ್ರಭುಗಳು ಈ ವಚನದಲ್ಲಿ ಸಾಧನೆಯ ಪರಿಯನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಯಾವುದೇ ಸಾಧನೆಗೆ ಸತ್ಕ್ರಿಯಾಚರಣೆಯಿಲ್ಲದೆ ಸಿದ್ದಿಸದು ಎಂದಿದ್ದಾರೆ.

ಅದೇ ರೀತಿ ಆರ್ಥಿಕವಾಗಿ ಶರಣರು ಬಡವರಾದರೂ ಅಂತರಂಗದ ಅರಿವನ್ನು ಸಾಧಿಸುವಲ್ಲಿ ಶ್ರೀಮಂತರು. ಚೈತನ್ಯಾತ್ಮಕ ಗುಣವಿರುವ ಶಿವನ ಪ್ರಕಾಶದಂತೆ ಹೊಳೆಯುವ ಶರಣರು ಎಂದಿಗೂ ಬಡವರಲ್ಲ. ಅವರಲ್ಲಿ ಅಂಥ ಪ್ರಕಾಶಿತ ಶ್ರೀಮಂತಿಕೆ ಯಾವಾಗಲೂ ಜೊತೆ ಜೊತೆಯಲ್ಲೇ ಸಾಗುತ್ತದೆ. ಹಾಗಾಗಿ ಶರಣರು ಬಡವರಲ್ಲ. ಇದರ ಜೊತೆಗೆ, ಸತ್ಯ-ಶುದ್ಧ ನಡೆ-ನುಡಿಗಳಿಂದ ಬದುಕನ್ನು ರೂಪಿಸಿಕೊಂಡಿರುವ ಶರಣರು ತಮ್ಮ ತನು-ಮನಗಳಲ್ಲಿ ದುಃಷ್ಕರ್ಮದ ವಾಸನೆಯೂ ಬರದಂತೆ ನೋಡಿಕೊಳ್ಳುತ್ತಾರೆ. ಇಂಥ ಸತ್ಯ-ಶುದ್ಧ ಕಾಯಕ ಮತ್ತು ನಡೆ-ನುಡಿಗಳಿಂದ ಬದುಕನ್ನು ನಡೆಸುತ್ತಿರುವ ಶರಣರಿಗೆ ಯಾರ ಆಶ್ರಯವೂ ಬೇಕಿಲ್ಲ. ಎಲ್ಲವೂ ಅಮರೇಶ್ವರ ಲಿಂಗದಿಂದ ಬಂದಫಲಗಳು ಎನ್ನುವದನ್ನು ಅತ್ಯಂತ ವಿನಯದಿಂದ ಲಕ್ಕಮ್ಮನವರು ಈ ವಚನದಲ್ಲಿ ನಿರೂಪಿಸಿದ್ದಾರೆ.

ಮಾಡುವ ಮಾಟ ಉಳ್ಳನ್ನಕ್ಕರ ಬೇರೊಂದು ಪದವನರಸಲೇಕೆ
ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ
ಕೈಲಾಸವೆಂಬ ಆಸೆಬೇಡ
ಮಾರಯ್ಯಪ್ರಿಯ ಅಮರೇಶ್ವರ ಲಿಂಗವಿದ್ದ ಠಾವೆ ಕೈಲಾಸ.||

ಶರಣರು ಕಾಣದ ಕೈಲಾಸಕ್ಕಾಗಿ ಹಾತೊರೆದವರಲ್ಲ. ಕಾಯಕದಲ್ಲಿಯೇ ಕೈಲಾಸವನ್ನು ಕಂಡವರು.

ಒಟ್ಟಾರೆ, ಈ ವಚನದ ಮೂಲಕ ಸತ್ಯ-ಶುದ್ಧ ಕಾಯಕದ ಮಹತ್ವ ಮತ್ತು ಅದರಿಂದ ದೊರಕುವ ವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಶರಣೆ ಆಯ್ದಕ್ಕಿ ಲಕ್ಕಮ್ಮನವರು ವಿವರಿಸಿದ್ದಾರೆ.

ಕಲ್ಯಾಣದಲ್ಲಿ ಕ್ರಾಂತಿಯಾಗಿ ಶರಣರ ಕಗ್ಗೊಲೆಯಾದಾಗ, ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳು ವಚನಕಟ್ಟುಗಳ ಸಂರಕ್ಷಣೆಮಾಡುತ್ತಾ ಬನವಾಸಿಯನ್ನು ತಲುಪುತ್ತಾರೆ. ತಮ್ಮ ಕೊನೆಯ ದಿನಗಳನ್ನು ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿ ಕಳೆಯುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಬನವಾಸಿ ಯಮಧುಕೇಶ್ವರ ದೇವಸ್ಥಾನದಲ್ಲಿನ ಗಗ್ಗರಿ ಮಂಟಪದಲ್ಲಿ ಆಯ್ದಕ್ಕಿ ಮಾರಯ್ಯನವರ ಶಿಲಾವಿಗ್ರಹವಿದೆ. ಬನವಾಸಿಯ ಮಧುಕೇಶ್ವರ ದೇವಸ್ಥಾನದ ಗಗ್ಗರಿ ಮಂಟಪದ ಅಕ್ಕಪಕ್ಕದಲ್ಲಿ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ದಂಪತಿಗಳ ಸಮಾಧಿಗಳಿರುವುದು ಕಂಡುಬರುತ್ತದೆ.

ಬದುಕಿನ ಮೌಲ್ಯಗಳನ್ನು ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿ ಬದುಕಿದ ಶರಣರು ಎಷ್ಟು ಉದಾತ್ತ ಸಾಮಾಜಿಕ ಚಿಂತನೆ ಹಾಗು ಕಳಕಳಿಯನ್ನು ಹೊಂದಿದ್ದರು ಎನ್ನುವುದನ್ನು ವಚನಗಳ ಮೂಲಕ ಕಲ್ಪಿಸಿಕೊಳ್ಳಬಹುದು. ಅಮೂಲ್ಯವಾದ ತತ್ವಗಳನ್ನು ತಮ್ಮ ವಚನಗಳಲ್ಲಿ ಕ್ರೋಢೀಕರಿಸಿ ಸಮಾಜವನ್ನು ಎಚ್ಚರಿಸಿದವರು ಹನ್ನೆರಡನೇ ಶತಮಾನದ ವಚನಕಾರರು ಮತ್ತು ವಚನಕಾರ್ತಿಯರು. ಇವರ ವಚನಗಳು ಸಾಮಾಜಿಕ ಸಮಸ್ಯೆ, ವೈಚಾರಿಕ ನಿಲುವುಗಳನ್ನು ಎತ್ತಿತೋರುತ್ತವೆ.

ಹೀಗೆ ಶರಣರು ನಮಗಾಗಿ ಬದುಕಿ ತಮ್ಮ ಗುರುತುಗಳಾದ ವಚನಗಳನ್ನು ಬಿಟ್ಟು ಹೋಗಿದ್ದಾರೆ. ನಮಗೆ ವಚನಗಳು ಅರಿವನ್ನು ಹುಟ್ಟಿಸಬೇಕು. ಆಗ ಶರಣರು ಕಂಡ ಕನಸು ನನಸಾಗುತ್ತದೆ ಅವರು ನಮಗಾಗಿ ಮಾಡಿದ ತ್ಯಾಗ ಸಾರ್ಥಕವಾಗುತ್ತದೆ.

ಸವಿತಾ ಮಾಟೂರು ಇಲಕಲ್ಲ

Don`t copy text!