ಎನ್ನ ಮಾಯದ ಮದವ ಮುರಿಯಯ್ಯಾ 

ಎನ್ನ ಮಾಯದ ಮದವ ಮುರಿಯಯ್ಯಾ 
ಎನ್ನ ಕಾಯದ ಕಳವಳ ಕೆಡಿಸಯ್ಯ ಎನ್ನ ಜೀವದ ಜಂಜಡವ ಬಿಡಿಸಯ್ಯಾ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ 
ಎನ್ನ ಸುತ್ತಿದ ಮಾಯಾ ಪ್ರಪಂಚವ*ಬಿಡಿಸಾ
ನಿಮ್ಮ ಧರ್ಮ

        -ಅಕ್ಕಮಹಾದೇವಿ

ಮಾಯೆಗೆ ಪರಮ ತತ್ವಜ್ಞಾನವಿಲ್ಲ. ಮಾಯೆ ಅಜ್ಞಾನದ ಸಂಕೇತ. ಮಾಯೆಯ ಆಟ ನಡೆಯುವುದು ಸಾಮಾನ್ಯರಲ್ಲಿ ಜ್ಞಾನವಂತರಲ್ಲಿ ಅಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ಈ ಮಾಯೆ ಚೆಲ್ಲಾಟವಾಡುತ್ತದೆ .ಮಾಯೆಯನ್ನು ಜ್ಞಾನದ ಎದುರಿನಲ್ಲಿ ನಿಂತು ಸೋಲಿಸಬೇಕಾಗುತ್ತದೆ. ನನ್ನಿಂದಲೇ ನಾನೇ ಎಂಬ ಗರ್ವವನ್ನು ಬಿಡಬೇಕಾಗುತ್ತದೆ. ಮಾಯೆಯನ್ನು ಗೆಲ್ಲುವುದು ಜ್ಞಾನದಿಂದ ಮಾತ್ರ. ಈ ಮಾಯೆಗೆ ತತ್ವ ಬೋಧೆಯಾಗಲಿ ಜ್ಞಾನವಾಗಲಿ ಧರ್ಮ ನೀತಿಗಳಾಗಲಿ ಸಿದ್ಧಿಸಲಾರವು ಫಲ ನೀಡಲಾರವು. ಮಾಯೆಗೆ ಎಷ್ಟು ಬುದ್ಧಿ ಹೇಳಿದರೂ ಯಾವ ಫಲವಿಲ್ಲ ಎಂಬುವ ನಿಲುವು. ಅಕ್ಕಮಹಾದೇವಿಯ ಈ ಮಾಯೆಯ ವಚನವನ್ನು ನೋಡಲಾಗಿ ..

ಎನ್ನ ಮಾಯದ ಮದವ ಮುರಿಯಯ್ಯಾ

ಭಗವಂತನೇ ಮಾಯೆಯಿಂದುಂಟಾದ ಅಂದರೆ ಮೋಹ ,ಭ್ರಮೆ, ಭ್ರಾಂತಿಯಲ್ಲಿರುವ ನನ್ನ ಅಹಂಕಾರವನ್ನು ನಾಶಗೊಳಿಸು. ಯಾವುದರ ಮೇಲೆಯೂ ಮೋಹಿತರಾಗದಂತೆ ಇರುಸು ತಂದೆ. ಎನ್ನುವ ಅಕ್ಕಳ ಭಾವ ಇಲ್ಲಿ ವ್ಯಕ್ತವಾಗಿದೆ.

ಎನ್ನ ಕಾಯದ ಕಳವಳ ಕೆಡಿಸಯ್ಯ

ನನ್ನ ದೇಹದ ಕಳವಳ ಅಂದರೆ ದೇಹವೇ ನಾನೆಂಬ ಅಜ್ಞಾನವನ್ನು ದೂರ ಮಾಡು. ಅಳಿದು ನಾಶವಾಗುವ ನನ್ನ ದೇಹದ ಮೇಲಿನ ಮೋಹ ಬ್ರಾಂತಿಯ ಅಜ್ಞಾನವನ್ನು ಅಳಿಸಿ ಹಾಕು.

ಎನ್ನ ಜೀವದ ಜಂಜಡವ ಬಿಡಿಸಯ್ಯಾ

ಲೌಕಿಕ ಜಂಜಾಟದಿಂದ ಪಾರು ಮಾಡು. ಈ ಜಂಜಾಟದಿಂದ ನನ್ನನ್ನು ಬಿಡಿಸು ತಂದೆ. ನನ್ನ ಜೀವವು ಶಿವನಾಗುವ ಮಾರ್ಗ ಬಿಟ್ಟು ಜಗದ ಜಂಜಾಟದಲ್ಲಿ ತೊಡಗುವುದನ್ನು ಬಿಡಿಸು ಎನ್ನ ದೇವಾ ಚೆನ್ನಮಲ್ಲಿಕಾರ್ಜುನಯ್ಯಾ ಎಂದು ಅಕ್ಕಮಹಾದೇವಿಯ ಭಾವ .

ಎನ್ನ ಸುತ್ತಿದ ಮಾಯಾ ಪ್ರಪಂಚವ ಬಿಡಿಸಾ
ನಿಮ್ಮ ಧರ್ಮ

ಒಟ್ಟಾರೆ ಸುತ್ತಿಕೊಂಡ ಈ ಲೌಕಿಕ ಬ್ರಮೆಯಿಂದ ಪಾರುಮಾಡು ಎಂಬ ಭಾವ.

ಅಕ್ಕ ಮಾಯೆಯ ಮಹತಿಯನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಾಳೆ. ಅವಳ ದೃಷ್ಟಿಯಲ್ಲಿ ಮಾಯೆಯೆಂದರೆ ಬೇರೇನೂ ಅಲ್ಲ, ಅಲ್ಲಮ ಪ್ರಭು ಹೇಳುವಂತೆ, ಮನದ ಮುಂದಿನ ಆಸೆಯೇ ಮಾಯೆ! ಹೆಣ್ಣು ಗಂಡನ್ನು ಬಯಸುವುದರಿಂದ, ಹೆಣ್ಣಿಗೆ ಗಂಡು ಮಾಯೆ ಗಂಡು ಹೆಣ್ಣನ್ನು ಬಯಸುವುದರಿಂದ, ಗಂಡಿಗೆ ಹೆಣ್ಣುಮಾಯೆ. ಲೋಕದ ಮಾಯೆಗೆ ಶರಣ ಚಾರಿತ್ರ್ಯ ಮರುಳಾಗಿ ತೋರುವುದು ಸಹಜ. ಲೋಕ ಒಂದು ಮಾಯೆ, ಅಂತೆಯೇ, ಅದಕ್ಕೆ ಅಕ್ಕ ಶರಣತ್ವ ಮರುಳಾಗಿ ಅಥವಾ ಹುಚ್ಚಾಗಿ ತೋರುತ್ತದೆ. ಆದರೆ, ಚೆನ್ನಮಲ್ಲಿಕಾರ್ಜುನ ಒಲಿದ ಶರಣನಿಗೆ ಮಾಯೆಯೂ ಇಲ್ಲ, ಮರುಹೂ ಇಲ್ಲ; ಅಭಿಮಾನವೂ ಇಲ್ಲ. ಶರಣ ಮಾಯೆಯನ್ನು ಮೀರಿನಿಂತ, ಗೆದ್ದು ನಿಂತ ನಿರಂಜನ ಸ್ವರೂಪಿ; ಪರಮಾತ್ಮ ಸ್ವರೂಪಿ- ಎಂಬುದನ್ನು ಅಕ್ಕ ಹೇಳುವ ಇಲ್ಲಿನ ಧ್ವನಿ ತುಂಬಾ ಅರ್ಥವತ್ತಾದುದು: ಕಳಕಳಿಸುವಂಥದ್ದು! ಅಕ್ಕ ಮಾಯೆಯ ಸ್ವರೂಪ-ಮಹತಿಗಳನ್ನು ಅಭಿವರ್ಣಿಸುವ ಆತ್ಮ ಪರಿ ತುಂಬಾ ಧ್ವನಿಪೂರ್ಣ ಆಕೆ ಹೇಳುತ್ತಾಳೆ: ‘

ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ಅಕ್ಕನ ಅಭಿಮಾನವಾಗಿ ಕಾಡುತ್ತದೆ; ಸ್ತ್ರೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುತ್ತದೆ. ಲೋಕವೆಂಬ ಮಾಯೆಗೆ ಶರಣ ಚಾರಿತ್ರ್ಯ ಮರುಳಾಗಿ ತೋರುತ್ತದೆ. ಅಕ್ಕನ ಪ್ರಕಾರ, ಹೆಣ್ಣಿಗೆ ಗಂಡು ಮಾಯೆ; ಗಂಡಿಗೆ ಹೆಣ್ಣು ಮಾಯೆ; ಶರಣ ಚಾರಿತ್ರ್ಯ ಕ್ಕೆ ಲೋಕ ಮಾಯೆ ಅಥವಾ ಸಂಸಾರ ಮಾಯೆ! ಇದಕ್ಕೆ ಮೂಲಕಾರಣ- ಮನದ ಮುಂದಿನ ಆಸೆ ಅಥವಾ ಅಥವಾ ಬಯಕೆ. ಈ ಬಯಕೆಯನ್ನು ತೊರೆದವನು ಶರಣ. ಅಂತೆಯೇ, ಅಕ್ಕ ಹೇಳುವಂತೆ ಸಾವಿರ ”ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆಯಿಲ್ಲ ಮರುಹಿಲ್ಲ ಅಭಿಮಾನ ಇಲ್ಲ!” ಮರೆಹು- ಅಭಿಮಾನಗಳು ಮಾಯೆಯೇ! ಇವು ಶರಣನಿಗೆ ಇರಲೇಬಾರದು, ಶರಣೆಗೆ ಹೇಳುವ ಗಂಡಿನ ಆಸೆ, ಶರಣನಿಗೆ ಹೆಣ್ಣಿನ ಆಸೆ- ಇವು ಸಹಜವಲ್ಲ; ಅಸಹಜ!

ಒಟ್ಟಾರೆ, ಪರಮಾತ್ಮನೊಲಿದ ಶರಣನಿಗೆ ಮಾಯೆ, ಮರಹು, ಅಭಿಮಾನ- ಈ ಯಾವುದರ ಬಂಧನವೂ ಇಲ್ಲ ಆತ . ಎಲ್ಲವನ್ನು ಮೀರಿ, ಮೆಟ್ಟಿನಿಂತ ಮಹಾಂತ.


ಶ್ರೀಮತಿ ಸಾವಿತ್ರಿ ಕಮಲಾಪೂರ 
ಮೂಡಲಗಿ

Don`t copy text!