ಅಜ್ಞಾತನೊಬ್ಬನ ಆತ್ಮ ಚರಿತ್ರೆ -ಕರುಣೆ ತಣ್ಣನೆಯ ತೀರ್ಥ

ಪುಸ್ತಕ ಪರಿಚಯ: ಅಜ್ಞಾತನೊಬ್ಬನ ಆತ್ಮ ಚರಿತ್ರೆ
ಲೇಖಕ- ಕೃಷ್ಣಮೂರ್ತಿ ಹನೂರು

ಇತಿಹಾಸವನ್ನು ಪಠ್ಯ ಓದಿ ತಿಳಿದುಕೊಳುವುದಕ್ಕಿಂತ, ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಲೆದಾಡಿ, ಜನಪದ ಸಾಹಿತ್ಯ ಸಂಗ್ರಹಿಸಿದಾಗ ಅದರ ಅನುಭವ ಬೇರೆಯದೇ ಆಗಿರುತ್ತದೆ. ಈ ಪುಸ್ತಕದ ಉದ್ದಕ್ಕೂ ಹಲವಾರು ಜನಪದ ಗೀತೆಗಳು, ದಂತ ಕಥೆಗಳು, ಬಯಲಾಟದ ಪ್ರಸಂಗಗಳು, ಲಾವಣಿಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮಾಜಿಕ ಪದ್ಧತಿಗಳ ಮೆರವಣಿಗೆಯೇ ಇದೆ. ಲೇಖಕರು ತಮ್ಮ ಮೂರು ದಶಕಗಳ ಅನುಭವವನ್ನು ಕ್ರೋಢೀಕರಿಸಿ ಈ ಕೃತಿಯನ್ನಾಗಿಸಿದ್ದಾರೆ. ಇದರಲ್ಲಿನ ದಳವಾಯಿಯ ಕಥೆ ನಿಮಿತ್ತ ಮಾತ್ರವಷ್ಟೇ. ಪುಸ್ತಕ ಒಂದು ಮುಖ್ಯ ಕಥೆ ಹೊಂದಿದ್ದರೆ, ಅದರ ಸಾರಾಂಶವನ್ನು ಕೊಡುವುದು ಸುಲಭ ಸಾಧ್ಯ ಆದರೆ ಕಾವ್ಯಮಯ ಕಥನವನ್ನು, ಅದರ ರಸವತ್ತಾದ ಅನುಭವವನ್ನು ಸಂಕ್ಷಿಪ್ತಗೊಳಿಸಲು ಸಾಧ್ಯವೇ?

ಕಾವೇರಿ ನದಿಯ ಅಂಚಿನಲ್ಲಿ ಕಾವೇರಿಪುರ ಗ್ರಾಮವಿದೆ. ಅಲ್ಲಿ ಗಿಡ ಮರಗಳ ತೋಪಿನಲ್ಲಿ ಒಬ್ಬ ಸಂತನ ಸಮಾಧಿ ಮಂಟಪವಿದ್ದು ಸಮೀಪದಲ್ಲೇ ಒಂದು ವೀರಗಲ್ಲು ಸಹ ಇದೆ. ಅದರಲ್ಲಿ ಒಂದು ಕುದುರೆ ಮತ್ತು ಅದರ ಮುಂಗಾಲಿನಡಿ ಕುಳಿತ ಒಬ್ಬ ಗಡ್ಡಧಾರಿ ವ್ಯಕ್ತಿಯ ಚಿತ್ರವಿದೆ. ಹಾಗೇಯೇ ಅದರಲ್ಲಿನ ಶಾಸನದಲ್ಲಿ ಕುದುರೆ ದೇಸಿಗಯ್ಯನವರು ೧೭೯೯ ರಲ್ಲಿ ಕಾಲವಾದರು ಎಂದು ಬರೆದಿದೆ. ಇದಕ್ಕೆ ಸಂಬಂಧಿಸಿದ ದಫ್ತರೊಂದು ಆ ಗ್ರಾಮದ ಒಬ್ಬರ ಮನೆಯಲ್ಲಿದೆ. ಅದನ್ನು ತೆಗೆದು ಓದಲು ಆರಂಭಿಸಿದಾಗ, ಟಿಪ್ಪು ಸುಲ್ತಾನರ ಸೇನೆಯಲ್ಲಿದ್ದ ಒಬ್ಬ ದಳವಾಯಿಯು ತನ್ನ ಜೀವನ ಚರಿತ್ರೆಯನ್ನು ಮೆಲುಕು ಹಾಕುವುದು ಅನಾವರಣಗೊಳ್ಳುತ್ತಾ ಹೋಗುತ್ತದೆ.

ಟಿಪ್ಪು ಖಾವಂದರಿಗೆ ಹುಲಿಗಳೆಂದರೆ ಮೋಹ. ಜೀವಂತ ಹುಲಿಯನ್ನು ಹಿಡಿದು ತರಲು ತಮ್ಮ ಖಾಸಾ ಭಂಟನಾದ ಈ ದಳವಾಯಿಗೆ ಆಜ್ಞಾಪಿಸುತ್ತಾರೆ. ಕಾಡಿಗೆ ನುಗ್ಗಿ ಹುಲಿಗಳನ್ನು ಜೀವಂತ ಹಿಡಿದು, ಪಂಜರದೊಳಗೆ ಬಂಧಿಸಿ, ಅವುಗಳನ್ನು ಮೆರವಣಿಗೆಯಲ್ಲಿ ಶ್ರೀರಂಗಪಟ್ಟಣಕ್ಕೆ ತರುವ ಈ ದಳವಾಯಿ ಖಾವಂದರ ಭೇಟಿಗೆ ಹೋಗುತ್ತಾನೆ. ಅದು ಖಾವಂದರು ಕುಂಪಣಿಯರೊಡನೆ ಕಾದಾಡುತ್ತಿದ್ದ ಕಾಲ. ತಮ್ಮನ್ನು ಮರಾಠರು, ನಿಜಾಮರು ಯಾರೂ ನಂಬುತ್ತಿಲ್ಲವೆಂದು ಗಹನ ಚಿಂತೆಯಲ್ಲಿ ಮುಳುಗಿ ಹೋಗಿದ್ದ ಖಾವಂದರು ತಮ್ಮ ಭೇಟಿಗೆ ಬಂದ ದಳವಾಯಿಯನ್ನು ನೋಡುತ್ತಾ ಸ್ವಗತದಲ್ಲೇ ಹೇಳಿಕೊಳ್ಳುತ್ತಾರೆ “ರಾಜಕಾರಣದಲ್ಲಿ ನಂಬಿಕೆ ಎನ್ನುವುದು ಹುಟ್ಟಿದ ಮರಿಯನ್ನು ಪ್ರೀತಿಯಿಂದಲೇ ನೆಕ್ಕಿ ಸಾಯಿಸುವ ಬೆಕ್ಕಿನಂತೆ”.

ಈ ದಳವಾಯಿಯ ತಂದೆ ಇದ್ದದ್ದು ಹೈದರ ಅಲಿಯ ಕಾವಲು ಸೇನೆಯಲ್ಲಿ. ಮಗನನ್ನು ಅರಮನೆಯ ಕೆಲಸಕ್ಕೆ ಸೇರಿಸಲು ಅವನ ತಂದೆಗೆ ಇಷ್ಟವಿಲ್ಲ. ಆದರೆ ಭರ್ತಿ ಆಳಾಗಿ ಬೆಳೆದು ನಿಂತು ಹೊಡೆದಾಟ ಇಷ್ಟ ಪಡುವವನಿಗೆ ಕೆಲಸ ಕೊಡುವವರು ಯಾರು? ಹಾಗಾಗಿ ಅವನು ಸಿಪಾಯಿಯಾಗಿ ಸೇರ್ಪಡೆಗೊಂಡು, ಯುದ್ಧಗಳಲ್ಲಿ ಕಾದಾಡಿ, ಸುಲ್ತಾನರಿಗೆ ಹತ್ತಿರವಾಗಿ ದಳವಾಯಿಯಾಗುತ್ತಾನೆ. ಇವನ ಅಪ್ಪ ಇವನಿಗೆ ಒಂದು ಮದುವೆ ಮಾಡಿದರೂ, ಇವನ ಗಮನ ದೊಂಬಿ, ಗಲಭೆ, ಲೂಟಿ ಇದರ ಕಡೆಗೆ.

ರಣೋತ್ಸಾಹದಿಂದ ಯುದ್ಧರಂಗದಲ್ಲಿ ಪಿಶಾಚಿಯಂತೆ ಹೊಡೆದಾಡುತ್ತಿದ ಈ ದಳವಾಯಿಯನ್ನು ಕಂಡರೆ ಸುಲ್ತಾನರಿಗೆ ತಕ್ಕ ಮಟ್ಟಿಗೆ ನಂಬಿಕೆ. ಅದಕ್ಕಾಗಿಯೇ ಅವರು ದಳವಾಯಿ ಎಸಗುತ್ತಿದ್ದ ತಪ್ಪುಗಳನ್ನು ಕಂಡೂ ಕಾಣದಂತೆ ವರ್ತಿಸಿತ್ತಿದ್ದರು. ಒಮ್ಮೆ ಕಂದಾಯ ವಸೂಲಿಗೆ ಹೋದ ಈ ದಳವಾಯಿ ಒಬ್ಬ ಸುಂದರಿಯನ್ನು ಹಾರಿಸಿಕೊಂಡು ಬರುತ್ತಾನೆ. ಆದರೆ ಮದುವೆಯಾಗಲು ಒಪ್ಪದ ಈ ದಳವಾಯಿಯ ಜೊತೆ ಬಾಳಲಿಷ್ಟವಿಲ್ಲದ ಆ ಚೆಲುವೆ ಇವನನ್ನು ಬಿಟ್ಟು ಪರಾರಿಯಾಗುತ್ತಾಳೆ.

ಕೈ ಕೆಳಗಿದ್ದ ಸಿಪಾಯಿಗಳೊಡನೆ ಈ ದಳವಾಯಿ ತಿರುಗುತ್ತಿರುವಾಗ ಆದ ಒಂದು ಸಂಘರ್ಷದಲ್ಲಿ, ತೀವ್ರವಾಗಿ ಗಾಯಗೊಂಡು ಗುಂಡಿಯಲ್ಲಿ ಬೀಳುತ್ತಾನೆ ಮತ್ತು ಅವನ ಸಹಚರರೆಲ್ಲ ಚಲ್ಲಾಪಿಲ್ಲಿ ಯಾಗಿ ಹೋಗುತ್ತಾರೆ. ಅವನು ಅರೆ ಪ್ರಜ್ಞಾವಸ್ಥೆಯಲ್ಲಿ ತನ್ನ ಕುದುರೆಯ ಮೇಲೆ ಒರಗಿಕೊಂಡು ಕಾವೇರಿಪುರ ಗ್ರಾಮ ತಲುಪುತ್ತಾನೆ. ಆ ಗ್ರಾಮದ ಜನ ಇವನನ್ನು ಉಪಚರಿಸುತ್ತಾರೆ. ಅಲ್ಲಿಯೇ ಒಂದು ಮಂಟಪದಲ್ಲಿ ಠಿಕಾಣಿ ಹೂಡಿ, ಸುಧಾರಿಸಿಕೊಳ್ಳಲು ಆರಂಭಿಸುತ್ತಾನೆ. ಗಡ್ಡ ಮೀಸೆ ಬೆಳೆದು ಅವನ ಪೂರ್ವ ಗುರುತು ಯಾರಿಗೂ ಸಿಕ್ಕದಂತಾಗುತ್ತದೆ.

ಸ್ವಲ್ಪ ದಿನಗಳಲ್ಲಿ ಟಿಪ್ಪು ಸುಲ್ತಾನರು ಯುದ್ಧ ಸೋತು, ದೇವರ ಪಾದ ಸೇರಿದ ಸುದ್ದಿ ಬರುತ್ತದೆ. ಅಲ್ಲಿನ ಪರಿಸ್ಥಿತಿ ಹೇಗಿದೆ ಮತ್ತು ತನ್ನ ಹೆಂಡತಿಯ ಗತಿ ಏನಾಗಿದೆ ಎಂದು ತಿಳಿದುಕೊಳ್ಳುವ ಹಂಬಲದಿಂದ ಶ್ರೀರಂಗಪಟ್ಟಣಕ್ಕೆ ತೆರಳುತ್ತಾನೆ ದಳವಾಯಿ. ದರೋಡೆಕೋರರಿಂದ ಲೂಟಿಯಾಗಿದ್ದ ಪಟ್ಟಣ ಸಾವಿನ ಸೂತಕದಂತಿರುತ್ತದೆ. ಅವನೇ ಒಂದು ಕಾಲಕ್ಕೆ ಪಂಜರದಲ್ಲಿ ಹಿಡಿದಿಟ್ಟಿದ್ದ ಹುಲಿಯೊಂದು ತಪ್ಪಿಸಿಕೊಂಡು , ಹುಚ್ಚಿಯಾಗಿ ಅಲೆಯುತ್ತಿದ್ದ ಅವನ ಹೆಂಡತಿಯನ್ನು ಕೊಂದು ಹಾಕಿರುತ್ತದೆ. ಅವಳ ಕಳೇಬರವನ್ನು ಹುಡುಕಿ ತೆಗೆದು ಮಣ್ಣು ಮಾಡುತ್ತಾನೆ ದಳವಾಯಿ. ತಾನು ಲೂಟಿ ಹೊಡೆದು ತುಂಬಿಸಿಟ್ಟಿದ್ದ ಸಂಪತ್ತೆಲ್ಲವೂ ಅವನ ಮನೆಯಿಂದ ಲೂಟಿಯಾಗಿರುತ್ತದೆ. ಅಲ್ಲಿರಲಾಗದೆ ಕಾವೇರಿಪುರಕ್ಕೆ ಮರಳುತ್ತಾನೆ. ಮತ್ತೆ ಮಂಟಪ ಸೇರಿಕೊಳ್ಳುತ್ತಾನೆ.

ಅವನ ಗಾಯ ಉಲ್ಬಣವಾಗುತ್ತ ಹೋಗುತ್ತದೆ. ಊರವರು ಕರುಣೆಯಿಂದ ಏನು ಪದಾರ್ಥ ಕೊಟ್ಟರು ಅವನ ಹೊಟ್ಟೆಗೆ ಸೇರುವುದಿಲ್ಲ. ತನ್ನ ಅಂತ್ಯ ಹತ್ತಿರವಾಗಿರುವುದು ಅವನಿಗೆ ಗೊತ್ತಾಗುತ್ತದೆ. ತನ್ನ ಹೆಸರನ್ನು ಎಲ್ಲೂಉಲ್ಲೇಖಿಸದೆ, ತನ್ನ ಮನಸ್ಸು ನಿರಾಳವಾಗಲೆಂದು ತನ್ನ ಬದುಕಿನ ಕಥೆ (ದಫ್ತರ) ಬರೆಯುತ್ತಾನೆ.

ಪುಸ್ತಕದ ಕೆಲವು ಸಾಲುಗಳು ನಿಮ್ಮ ಆಸ್ವಾದನೆಗೆ:

೧. “ನನ್ನಂಥ ಸಿಪಾಯಿ ಸಿಕ್ಕರೆ ಈ ಜನ ಬಿಡುವರೇ? ಅದು ಕೈಗೆ ಸಿಕ್ಕಿದ ಒಬ್ಬನೇ ಸಿಪಾಯಿ. ಅರಮನೆಯ ಸೈನಿಕರ ಬಗ್ಗೆ ಯಾರಿಗೆ ತಾನೇ ಗೌರವವಿದೆ. ಲೂಟಿಕೋರರು, ಅತ್ಯಾಚಾರಿಗಳು, ಕತ್ತಿ ಹಿಡಿದ ನಿತ್ಯ ಕಟುಕರು ಎಂದೇ ಖ್ಯಾತಿ ಗಳಿಸಿರುವ ನಾವು ಒಂಟಿಯಾಗಿ ಸಿಕ್ಕಿದರೆ ಗುಂಪಿನಲ್ಲಿ ಸಿಕ್ಕಿಕೊಂಡ ಹಾವೇ ಸರಿ.”

೨. “ತಂದೆ ಕಾಣದ ಕೂಸು ಎಂದು ಮಗನನ್ನು ಕಣ್ಣಳತೆಯಲ್ಲೇ ಸಾಕಿದೆ. ಮೈಯ್ಯ ಮೂಳೆ ಸವೆಯಿತು. ದೇಹದೊಳಗಲ ಖಂಡ ತಿಂದು ಹೋಯಿತು. ಕೂಸು ಗುಡಿಸಲ ಅಂಗಳದಲ್ಲಿ ಎದ್ದು ನಡೆದಾಗ ಇಷ್ಟು ಉದ್ದದ ದೇವರನ್ನು ನೋಡಿಯೇ ಇಲ್ಲವೆನಿಸಿತು.”

೩. “ಅರಮನೆಯನ್ನು, ಸಾಮ್ರಾಜ್ಯವನ್ನು ಮರೆಯಬೇಕೆನ್ನಿಸುತ್ತಿದೆ. ಅರಸನಿಗಿಂತಲೂ ಬಡತನ ಅನುಭವಿಸುವ ದರಿದ್ರರು ಇನ್ನಾರುಂಟು. ಅರಮನೆ ಸೃಷ್ಟಿಸುವ ಸಾವುಗಳಿಗೆ ಲೆಕ್ಕವುಂಟೆ.”

೪. “ತೆಂಗು ಬಾಳೆಗೆ ಕೊಂಬೆಯುಂಟೆ
ಬದನೆಯ ಗಿಡಕ್ಕೆ ಚಪ್ಪರವುಂಟೆ
ಕೆಂಡದೊಳಗೆ ತನುವುಂಟೆ
ಪುರುಷನಿಗೆ ಗುಣವುಂಟೆ”

೫. “ರಣಬಯಲಿನಲ್ಲಿ ಎಷ್ಟು ಸೈನಿಕರಿರುತ್ತಿದರೋ ಅಷ್ಟೇ ಸಂಖ್ಯೆಯಲ್ಲಿ ಮೇಲೆ ರಣಹದ್ದು, ಕಾಗೆ, ಡೇಗೆ ಜಮಾಯಿಸಿ ಹಗಲಿನ ರಣಕಹಳೆಗೆ ಒದಗಿಸುತ್ತಿತ್ತು ಪೂರ್ವರಾಗ”

೬. “ಮನೆಯಲ್ಲಿ ಕೂರಲಾಗದ ನನಗೆ ರಣರಂಗದ ಹುಚ್ಚು. ಕಾಳಗದಲ್ಲಿ ಹೋರಾಡಿದ ನಂತರ ಆ ರಕ್ತದೋಕುಳಿಯ ತಂಟೆ ಬಿಟ್ಟು ಮನೆಯಲ್ಲಿ ಮುದುರಿ ಕೂರುವ ಮನಸ್ಸು ಕಾಡುತ್ತಿತ್ತು”

೭. “ಕೇವಲ ವಿದ್ಯೆ ಎನ್ನುವುದು ಗಾಯ. ಪರಿಪೂರ್ಣ ಜ್ಞಾನವೆನ್ನುವುದು ಕಮಲದ ಹೂವು.”

೮. “ಭೂಮಿಯ ಮೇಲೆ ಮನುಷ್ಯ ನಿರ್ಮಿತ ಕ್ರೌರ್ಯವು ಸುರಿಸುವ ರಕ್ತದ ಜೊತೆಗೆ ಅವನದೇ ಇನ್ನೊಂದು ರೂಪದ ಕರುಣೆಯೂ ನಿರಂತರ ತಣ್ಣನೆಯ ತೀರ್ಥದಂತೆ ಪ್ರವಹಿಸುತ್ತಿರುತ್ತದೆ.”

ಲೇಖಕ ಹನೂರು ಕೃಷ್ಣಮೂರ್ತಿಯವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಜನಪದ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಅದು ಈ ಕಾದಂಬರಿಯಲ್ಲಿ ಹದವಾಗಿ ಬೆರೆತು ಹೋಗಿದೆ. ಇದುವರೆಗೆ ಸುಮಾರು ೩೬ ಪುಸ್ತಕಗಳನ್ನು ರಚಿಸಿದ್ದಾರೆ. ಈ ಕಾದಂಬರಿಯು ಕನ್ನಡಿಗ ಓದುಗುರಲ್ಲಿ ಹೊಸ ಉತ್ಸಾಹ ತುಂಬುವುದರೊಂದಿಗೆ, ಅನ್ಯ ಭಾಷೆಗಳಿಗೂ ತರ್ಜುಮೆಗೊಂಡಿದೆ.
ಪುಸ್ತಕ ಪರಿಚಯ- ಆನಂದ ಮರಳದ, ಬೆಂಗಳೂರು.

Don`t copy text!