ಗಿಡದ ಮ್ಯಾಗಳ ಮಂಗಣ್ಣ
ಡಾ ಶಶಿಕಾಂತ ಕಾಡ್ಲೂರ್ ಅವರ ಸಾಹಿತ್ಯ ಪಯಣ ಬಹು ದೊಡ್ಡದು. ಅಸ್ಖಲಿತವಾಗಿ ಮಡುಗಟ್ಟಿದ ಮಾನಸಿಕ ಸೂಕ್ಷ್ಮ ತಲ್ಲಣಗಳಿಗೆ ಬಹುರೂಪ ನೀಡಿದ ಇವರ ಸಾಹಿತ್ಯಕ್ಕೆ ಯುವ ಪೀಳಿಗೆ ಮಾರುಹೋಗದೆ ಇರಲು ಸಾಧ್ಯವಿಲ್ಲ. ತೌಲನಿಕ ಕಾವ್ಯ ರಚನೆಯಿಂದ ಹಿಡಿದು ಸಾಂಪ್ರದಾಯಿಕ ಬರಹದವರೆಗೆ ತಮ್ಮ ಸಾಹಿತ್ಯದ ಸೇವೆಯನ್ನು ಸಲ್ಲಿಸಿದ ಶ್ರೀಯುತರು ಬಾಲ ಮನಸಿನ ಸಾಹಿತ್ಯವೃದ್ಧರೆಂದರೆ ಅತಿಶಯೋಕ್ತಿ ಅಲ್ಲ.
ವಾಙ್ಮಿಗಳು, ನೇರ ನಡೆಯಷ್ಟೇ ನುಡಿಯನ್ನಾಡುವ ಪ್ರೌಢ ಸಾಹಿತ್ಯದಲ್ಲಿ ಪಳಗಿದವರು ಬಾಲ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅಪರೂಪವಾದರೂ, ಅಪರೂಪದಲ್ಲಿ ಅನುರೂಪ ಬರಹದಲ್ಲಿ ಲೀನವಾದವರಲ್ಲಿ ಈ ಕವಿಗಳು ವಿಶೇಷವೆನಿಸುತ್ತಾರೆ… ಇದಕ್ಕೆ ಸಾಕ್ಷಿಯಂತೆ ನಮ್ಮೆದುರಿಗೆ ಇವರ “ಗಿಡದ ಮ್ಯಾಗಳ ಮಂಗಣ್ಣ” ಮಕ್ಕಳ ಕವನ ಸಂಕಲನ ನಿಂತಿದೆ…
ಮಕ್ಕಳ ಕಾವ್ಯ ರಚನೆಯಲ್ಲಿ ನಾವು ಇಳಿಯಬೇಕೆಂದರೆ, ಒಂದು ನಾವು ಮಕ್ಕಳಾಗಿರಬೇಕು, ಅಥವಾ ಮಕ್ಕಳ ಮನಸನ್ನು ಅರಿತವರಾಗಿರಬೇಕು. ಈ ನಿಟ್ಟಿನಲ್ಲೂ ಮಕ್ಕಳ ಮನಸಿನ ಕವಿ, ಶ್ರೀ ಶಶಿಕಾಂತ ಕಾಡ್ಲೂರ್ ಅವರು ಮಕ್ಕಳ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
“ಗಿಡದ ಮ್ಯಾಗಳ ಮಂಗಣ್ಣ” ಹೆಸರೇ ಸೂಚಿಸುವಂತೆ, ಬಹುತೇಕ ಮಕ್ಕಳು ವಿಶೇಷವಾಗಿ ಉತ್ತರ ಕರ್ನಾಟಕದ ಹಳ್ಳಿಗಾಡಿನ ಮಂಗನ ಮನಸಿನ ಮಕ್ಕಳು; ಗಿಡದ ಮ್ಯಾಗೆ ಇರುವ ಮಂಗನನ್ನು ನೋಡಿದ್ದೇ ತಡ, ಅನುಕರಣಿಸಿಯೇ ಬಿಡುತ್ತಾರೆ.
“ಯಾಕಲೇ ಮಂಗನಂಗಾಡ್ತಿ?” ಎಂದು ಉದ್ಗರಿಸಿ ಏರು ಧ್ವನಿಯಿಂದ ಬೈದ ಮೇಲೆ, “ಮಂಗನಿಂದ ಮಾನವ” ಎಂದು ಬೈದವರ ಮುಂದೆ ಬಾಲ್ಯದಲ್ಲಿ ಸಾಕ್ಷಿಯಾಗಿ ಗಿಡಮಂಗ್ಳಾಟವಾಡಿ ಸತ್ಯವನ್ನು ತಿಳಿಸಿದ್ದು ನನಗಿನ್ನೂ ನೆನಪಿದೆ… ಅಂತಹ ನೆನಪಲ್ಲಿದ್ದ ಚೇಷ್ಟೆಯ ಮೊಗ್ಗನ್ನು ಅರಳಿಸಿದ ಕೃತಿ; ಒಂದನೇ ಓದಿಗೇ ಇಷ್ಟವಾಗಿಬಿಡುತ್ತದೆ.
ಯಾರು ಬಿಟ್ಟು ಬಿಡದಂತೆ ಪ್ರಶ್ನೆಗಳ ಮಳೆ ಸುರಿಸುತ್ತಾರೋ! ಅವರೇ ನಿಜವಾದ ಸೃಜನಶೀಲ ಮಕ್ಕಳು. ನೋಡುವ ಪ್ರತಿ ನೋಟವನ್ನೂ ಪ್ರಶ್ನಾತೀತವಾಗಿ ದೃಶ್ಯೀಕರಿಸಿಕೊಳ್ಳುವ ಮಕ್ಕಳು ಕೇಳುವ ಅನೇಕ ಪ್ರಶ್ನೆಗಳಿಗೆ ನಾವು ನಿರುತ್ತರರಾಗಿರುವುದು ಹೊಸ ಅನುಭವ ಏನಲ್ಲ. “ಅಜ್ಜ ಎಂದರೆ ಯಾರಪ್ಪ?” ಎಂದು ಕೇಳುವ ಮಗ ಅಜ್ಜನ ರೂಪವನ್ನೇ ಕಣ್ಣೆದುರಿಗೆ ತರುತ್ತಾನೆ. ಒಂದೇ ಹೆಸರಿನಿಂದ ಕರೆಯಿಸಿಕೊಳ್ಳುವ ಅಜ್ಜನಿಗೆ ಒಂದೇ ಉಡುಪಿರಬೇಕಲ್ಲವೆ.. ! ಯಾಕೀ ಭಿನ್ನತೆ ಎಂಬ ಮುಗ್ಧ ಪ್ರಶ್ನೆಯನ್ನು ಕವಿಗಳು ಕೇಳಿ, ಉತ್ತರ ಓದುಗನ ಆಲೋಚನೆಗೆ ಬಿಡುತ್ತಾರೆ.
ಅಂತೆಯೇ “ಚಂದಮಾಮ” ಎಲ್ಲರಿಗೂ ಮಾಮನೇ ಆಗಿರುವುದು ಹೇಗೆ? ಎಂದು ಅಣ್ಣನನ್ನು ಚಿಂತನೆಗೆ ಹಚ್ಚಿ, ಉತ್ತರಕ್ಕಾಗಿ ಕಾಯುವ ಮಗುವಿನ ಪ್ರಶ್ನೆಯ ಕವಿತೆ ವಿಶೇಷವಾಗಿದೆ.
“ಮಕ್ಕಳ ಪ್ರಶ್ನೆ” ಕವಿತೆ, ಗುರುಗಳನ್ನು ಖಂಡಿತ ಬೆಚ್ಚಿ ಬೀಳಿಸುವಂತಿದೆ.
ರಣಭೂಮಿಯಲಿ ಸೂರ್ಯ
ಸಂಭ್ರಮಿಸುತ್ತಿರುವಾಗ…
ಬೇಸಿಗೆಯು ನಮಗೆ ಹಬ್ಬವೇ?
ಬಿಸಿಲಿಗೆ ಮರವೇ
ಸುಡುತಲಿರುವಾಗ
ಅದರಡಿ ನಮಗೆ ತಣ್ನೆಳವೇ?
ಎಂಬ ಸಾಲುಗಳು ಉತ್ತರ ಕರ್ನಾಟಕದ ಸತ್ಯದರ್ಶನ ಮಾಡಿಸುತ್ತವೆ. ಮಕ್ಕಳ ಆಲೋಚನೆಗಳನ್ನೂ ಈ ಕವಿತೆ ಗರಿಗೆದರಿಸುತ್ತದೆ.
ಕಾಳು ಕೊಟ್ಟು ನೀರಿಟ್ಟರೂ ಹತ್ತಿರ ಸುಳಿಯದ ಹಕ್ಕಿಗಳ ಬಗೆಗೆ ಮಕ್ಕಳು ಕುಪಿತರಾಗುತ್ತಾರೆಂಬುದನ್ನು ಕವಿಗಳು ಅರಿತೇ ಬರೆದಿದ್ದಾರೆನಿಸುತ್ತದೆ.
ಮಕ್ಕಳು ಕೇವಲ ಮಾತಾಡುವ ಮನುಷ್ಯರಿಗಷ್ಟೇ ಪ್ರಶ್ನಿಸುವುದಿಲ್ಲ.. ಹೊರತಾಗಿ ಮೂಕ ಪ್ರಾಣಿ, ಪಕ್ಷಿ, ಮರಗಳನ್ನೂ ಪ್ರಶ್ನಿಸಿ ಮಾತನಾಡಿಸಿಬಿಡುತ್ತಾರೆ. ಅಂತಹ ಒಂದು ಕವಿತೆಯ ಸಾಲುಗಳಲ್ಲಿ ಮಕ್ಕಳು ಮರಕ್ಕೆ..
” ನಿನ್ನಡಿಯ ತುಂಬ
ನೆರಳೂ ಇಲ್ಲ
ಹಾಡಲು ಕಲಿಸುವ ಹಕ್ಕಿಗಳಿಲ್ಲ
ಉಣ್ಣಲು ಕರೆಯುವ ಕಾಗೆಯೂ ಇಲ್ಲ
ನೋಡಿ ಕುಣಿಯೋಣವೆಂದರೆ
ಕೋತಿಯೂ ಇಲ್ಲ
ನಾವು ನಿನ್ನಲಿ ಬರುವುದು ಏತಕ್ಕೆ..?”
ಎಂದು ಬೋಳಾದ ಮರದ ಕುರಿತಾಗಿ ಸಂಭಾಷಿಸುತ್ತ; ನಮಗೆ ಬದುಕಿನ ಮೌಲ್ಯವನ್ನೂ, ಮರಕೆ ಹಸಿರಿನ ಮಹತ್ವವನ್ನೂ ತಿಳಿಸುತ್ತಾರೆ. ಹಾಗೆ, ಮಕ್ಕಳಿಗಾಗಿ ಕವಿತೆ ಬರೆಯುತ್ತಲೇ ಹಿರಿಯರ ಮನವನ್ನೂ ತಾಕುವ ಕವಿಗಳು…
“ದುರುಳ ಮಾನವರು
ನನ್ನನ್ನು ಕಡಿವರು
ಹಕ್ಕಿ ಮಕ್ಕಳ
ಕರುಳ ಕೊಯ್ವರು
ಇವರು ಸ್ವಾರ್ಥಕೆ
ಬಿಸಿಲಲಿ ಉರಿಯುವರು….”
ಎಂದು, ನಾವು ಮುಂದಿನ ಪೀಳಿಗೆಗೆ ಏನನ್ನು ವರ್ಗಾಯಿಸುತ್ತಿದ್ದೇವೆ? ಬೋಳು ಪರಿಸರವನ್ನು ಮಾತ್ರ !ಎಂಬುದಾಗಿ ಎಚ್ಚರಿಕೆಯ ಮಾತನ್ನೂ ಸೂಕ್ಷ್ಮವಾಗಿ ತಿಳಿಸುತ್ತಾರೆ.
ಸ್ವಚ್ಛತೆಯ ಅರಿವು ಮೂಡಿಸುವ ಕವಿತೆ “ಪೊರಕೆ ಹಿಡಿದು..”, ಆದರೆ, ಹಸುವಿನಿಂದ ಪಡೆದುಕೊಳ್ಳುವ ಹಾಲು, ಅದರ ಉತ್ಪನ್ನಗಳನ್ನು ಹೇಳುತ್ತ ಬೆರಗನ್ನು ಹೊರಹಾಕಿ, ನಮ್ಮೊಳಗೊಂದಾಗುವ ಮುಗ್ಧ ಹಸುವಿನ ಗುಣವನ್ನು ಸಾಲುಗಳಲ್ಲಿ ಹಿಡಿದ ಕವಿತೆ “ನಮ್ಮ ಹಸು” ಮಕ್ಕಳನ್ನು ಆಕರ್ಷಿಸುವಂತಿದೆ. ಹೀಗೆ “ಇರುವೆ”ಯೊಂದಿಗಿನ ಬಾಲಕನ ಮಾತು ಕವಿತೆ, ವರ್ತಮಾನದಲ್ಲಿ “ಗುಬ್ಬಿಯ ಗತಿ” ಏನಾಗಿದೆ ಎಂಬುದನ್ನು ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದಾರೆ.
ಸೈನಿಕನ ಮಾತು ಕೇಳಿ ಮಗು ತಾನು ದೇಶ ಸೇವೆಗೆ ಹೋಗುವ ಮಾತನ್ನು “ಬಾಲ ಸೈನಿಕ”ದಲ್ಲಿ ತಿಳಿಸುತ್ತಾರೆ. ಮಕ್ಕಳು ಹಿರಿಯರ, ಗೌರವಾನ್ವಿತರ ಮಾತಿಗೆ ಎಷ್ಟು ಬೆಲೆ ಕೊಡುತ್ತವೆ; ಹೇಗೆ ಅವರ ಮಾತುಗಳಿಂದ ಪ್ರಭಾವಿತವಾಗುತ್ತವೆ ಎಂಬುದನ್ನು ಕವಿಗಳು ಈ ಕವಿತೆಯ ಮೂಲಕ ಓದುಗರ ಗಮನಕ್ಕೆ ತರುತ್ತಾರೆ. ಹಾಗೆಯೇ “ಗಾಂಧಿ ತಾತ”ನ ದಿನಚರಿ ತಿಳಿಸುತ್ತ ಅವರ ದೇಶ ಭಕ್ತಿ, ದೇಶಕ್ಕಾಗಿ ಗಾಂಧೀಜಿಯವರು ಮಾಡಿದ ತ್ಯಾಗವನ್ನೂ ನೆನಪಿಸುತ್ತಾರೆ. ಇಂತಹ ಕವಿತೆಗಳು ಮಕ್ಕಳಲ್ಲಿ ದೇಶಭಕ್ತಿ ಬೆಳೆಸುತ್ತವೆ ಮತ್ತು ತಾವೂ ದೇಶಕ್ಕಾಗಿ ಸೇವೆ ಮಾಡಬೇಕೆಂಬ ಭಾವವನ್ನು ಎಳೆಯ ವಯಸ್ಸಲ್ಲೇ ಹುಟ್ಟುಹಾಕುತ್ತದೆ.
ಮುಂದುವರೆದು, “ರೈತನೂ ಒಬ್ಬ ಧೀರ ಸೈನಿಕ”, ಆದರೆ ಸಾಲದ ಗರಗಸ ಈ ಅನ್ನದಾತನ ಕತ್ತು ಕೊಯ್ಯುತ್ತಿದೆ ಎಂದೂ, ಇದಕ್ಕೆ ಕಾರಣ ಸೂಟು, ಬೂಟಿನ ಗುಳ್ಳೆ ನರಿಗಳಾದ ಅಧಿಕಾರಿ ವರ್ಗದವರು ಎಂದು ಪರೋಕ್ಷವಾಗಿಯೇ ಮಕ್ಕಳಿಗೆ ನ್ಯಾಯ ಸಮ್ಮತವಾಗಿ ನಡೆದು, ರೈತನಿಗೆ ಮನ್ನಣೆ ನೀಡಿ.. ನಮ್ಮ ರಾಜ್ಯವನ್ನು “ರೈತನ ರಾಜ್ಯ”ವಾಗಿಸಬೇಕೆಂಬ ಮನೋಧೋರಣೆಯನ್ನು ಮಕ್ಕಳಲ್ಲಿ ಬಿತ್ತುತ್ತಾರೆ.
ಅಮ್ಮಗೊಂದು ಪ್ರಶ್ನೆ, ಗಡಿಯಾರ, ಪ್ರಶ್ನೋತ್ತರ, ಬೆಕ್ಕಣ್ಣ ಕವಿತೆಗಳಲ್ಲಿ.. ಮಕ್ಕಳ ದೀರ್ಘಾಲೋಚನೆ, ಅನುಮಾನ ಬಗೆಹರಿಸಿಕೊಳ್ಳುವ ತವಕವನ್ನು ಬಿಂಬಿಸುತ್ತಾರೆ. ಕೆಲವು ಸಂಭಾಷಣೆಯಿಂದ ಕೂಡಿದರೆ ಕೆಲವನ್ನು ಮಕ್ಕಳು ಪ್ರಶ್ನಿಸುತ್ತಲೇ ಸಾಗಿದಂತೆ ಭಾಸವಾಗುತ್ತವೆ. ಮಕ್ಕಳಲ್ಲಿ ಪ್ರಶ್ನೆಗಳು ಮುಗಿಯುವುದೇ ಇಲ್ಲವೇನೋ ಅನಿಸಿಬಿಡುತ್ತದೆ.
ಹಬ್ಬ, ಊರು, ಮಳೆ, ಗಾಳಿಪಟ, ಪರಿಸರ, ಪ್ರಾಣಿ, ಹಸಿವು, ತಿನಿಸು, ಚಂದಿರ, ವ್ಯಕ್ತಿ ಪರಿಚಯ ಹೀಗೆ ನಾನಾ ವಿಷಯ ವಸ್ತುವಿನ ಮೇಲೆ ಪ್ರಾಸವಾಗಿ, ಮಕ್ಕಳ ತ್ರಾಸನ್ನು ಕಳೆಯುವಂತೆ ಗ್ರಾಮೀಣ ಭಾಷಾ ಪಾದಗಳನ್ನೂ ಬಳಸಿ, ಮಕ್ಕಳ ಅನ್ವೇಷಣೆ ಮತ್ತು ಕುತೂಹಲದ ಮನಸ್ಥಿತಿಯನ್ನು ಯಥಾವತ್ತಾಗಿ ಹಿಡಿದಿಟ್ಟಿದ್ದಾರೆ.
ಉತ್ತಮ ಮಕ್ಕಳ ಸಂಕಲನವನ್ನು ಮಕ್ಕಳ ಸಾಹಿತ್ಯ ಲೋಕಕ್ಕೆ ಅರ್ಪಿಸಿ ಮಕ್ಕಳ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದ ಶ್ರೀ ಶಶಿಕಾಂತ ಕಾಡ್ಲೂರ್ ಅವರಿಂದ ಮುಂದಿನ ದಿನಮಾನಗಳಲ್ಲಿ ಹೆಚ್ಚೆಚ್ಚು ಬರಹಗಳು ಮಕ್ಕಳ ಸಾಹಿತ್ಯಕ್ಕೆ ಸಿಗಲಿ, ಅಷ್ಟೇ ಅಲ್ಲದೆ ಮಕ್ಕಳಿಗೂ, ನಮಗೂ ಮಾರ್ಗದರ್ಶನ ನೀಡಿ; ನಮ್ಮಿಂದಲೂ ಮಕ್ಕಳ ಸಾಹಿತ್ಯವನ್ನು ಹೊರಹೊಮ್ಮಿಸಲಿ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ದೈವಸ್ವರೂಪೀ ಮಕ್ಕಳ ಮುಗ್ಧತೆಗೆ ಅರ್ಪಿಸುತ್ತೇನೆ.
— ವರದೇಂದ್ರ ಕೆ ಮಸ್ಕಿ
9945253030
ಕೃತಿಗಾಗಿ ಸಂಪರ್ಕಿಸಿ
—– ಡಾ.ಕೆ ಶಶಿಕಾಂತ
94485 71565
7975851208